Poem

ಸೂಜು ಮಲ್ಲಿಗೆ ನನ್ನವ್ವ

ಗಿಡದ ತುಂಬ ಹೂವುಗಳು
ಬಂಗಾರಕ್ಕೆ ಸಮ
ಜೀವನ ಪರಿಮಳ
ತುಂಬಿದ ಓಯಾಸಿಸ್ಸುಗಳು


ಎಲೆಕೂಸು ಮೊಗ್ಗುಗಳು
ಅರಳಿದರೆ ನಗು ಮುಖದಲ್ಲಿ
ಎಲೆಗಳೇ ಕಾಣಲ್ಲ
ಗಿಡದ ತುಂಬೆಲ್ಲ
ಮೊಗ್ಗುಗಳು ಹೂವುಗಳು


ತಪಸ್ಸಿನಂತೆ ಮೊಗ್ಗೆ
ಹರಿದು ಮಾಲೆ ಕಟ್ಟಿ
ಕೊಟ್ಟ ಅವ್ವಳಿಗೆ
ತಲೆಯಲ್ಲಿ ಮುಡಿಯದಿದ್ದರೆ
ಕೋಪ ರಾಕ್ಷಸನಿಗೆ ಸಾಟಿ


ಮುಡಿಯುವ ಭಾಗ್ಯ
ಎಲ್ಲರಿಗೂ ಸಿಗದು
ಅಪ್ಪನನ್ನು ನೆನೆಸಿ ಅತ್ತಾಗ
ತುಟಿ ಪಿಟಕ್ಕೆನ್ನದೇ
ನನ್ನ ತಲೆಯಲ್ಲಿ ಹೂವಿನ
ಮಾಲೆ ರಾರಾಜಿಸುತ್ತದೆ


ಸಂಪ್ರದಾಯಗಳನ್ನು
ತೂರಿ ಆಚೆಗೆ ನೀನು
ಮುಡಿ ನಿನಗಿಷ್ಟ ಅಲ್ವೇ?
ಆಸೆ ಬೆಟ್ಟದಷ್ಟಿದ್ದರೂ
ಬದಿಗೊತ್ತಿ ನೀನೇ
ಮುಡಿ ಸುಮ್ಮನಾಗುವಳು
ಅವ್ವ ಭಾವುಕದ ಮಡಿಲಲ್ಲಿ


ಹೂವು ಎಂದರೆ ಪ್ರಾಣ; ನನಗೂ
ಆಧುನಿಕ ವ್ಯವಸ್ಥೆಗೆ ತಕ್ಕಂತೆ
ಬಟ್ಟೆಯ ನಿಯಮಕ್ಕೆ
ಹೂವು ಮುಡಿದರೆ ಚೆನ್ನ

ನನ್ನ ಅವ್ವ ಕಟ್ಟಿದ
ಮಾಲೆಯ ಭಾವಕ್ಕೆ
ಅವೆಲ್ಲ ನಗಣ್ಯ

ಹೆಸರಿಗೆ ತಕ್ಕಂತೆ
ಮಾಲಾಳನ್ನು ಹೂಮಾಲೆಯಲಿ
ಮುಳುಗಿಸಿದರೆನೇ
ಅವ್ವಳಿಗೆ ಆನಂದ!


ಆಕೆಯ ಜೀವದ
ಭಾವಕ್ಕೆ ಸ್ಪಂದಿಸದ
ಹೊರತು ಯಾವ
ಶ್ರೇಷ್ಠತೆಯಿದೆ ಈ ಜಗದಲ್ಲಿ?

ಮಾಲಾ ಮ. ಅಕ್ಕಿಶೆಟ್ಟಿ

ಕವಯತ್ರಿ ಮಾಲಾ ಮ. ಅಕ್ಕಿಶೆಟ್ಟಿ ಮೂಲತಃ ಬೆಳಗಾವಿಯವರು. ವೃತ್ತಿಯಿಂದ ಉಪನ್ಯಾಸಕಿ. ಅವರ ಹಲವಾರು ಕವಿತೆ, ಕತೆ, ಲೇಖನ, ಮಕ್ಕಳ ಕತೆ, ಲಲಿತ ಪ್ರಬಂಧಗ ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ.

More About Author