Story

ಸ್ವಾತಂತ್ರ‍್ಯ (ಸ್ವಾತಂತ್ರದ ಭಾಸದಿಂದ ಸ್ವತಂತ್ರರಾಗಿ)

ಶ್ರೇಯಾ ಕುಲಕರ್ಣಿ ಅವರು ಮೂಲತಃ ಉತ್ತರ ಕರ್ನಾಟಕದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದು, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವೀಧರಳಾಗಿ ಐಟಿ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಬರವಣಿಗೆ ಅವರ ಹವ್ಯಾಸ ಕ್ಷೇತ್ರವಾಗಿದ್ದು, ಪ್ರಸ್ತುತ ಅವರು ಬರೆದಿರುವ ‘ಸ್ವಾತಂತ್ರ‍್ಯ’ ಕತೆ ನಿಮ್ಮ ಓದಿಗಾಗಿ...

ಸಾಮಾನ್ಯವಾಗಿ ಜಗತ್ತಿನಲ್ಲಿ 'ಸ್ವಾತಂತ್ರ್ಯ' ಒಂದು ದೇಶಕ್ಕೆ, ರಾಜ್ಯಕ್ಕೆ, ಕುಟುಂಬಕ್ಕೆ ಬಹಳವಾದರೆ ಕೆಲ ಜನರಿಂದ ಬಿಡುಗಡೆಗೆ ಸೀಮಿತವಾದ ಪರಿಕಲ್ಪನೆ ಅಲ್ಲವೆ? 'ಅಯ್ಯೋ, ನಾವು ಸ್ವತಂತ್ರರಾಗಬೇಕಪ್ಪ!' ಎಂದ ಮರುಕ್ಷಣವೇ ನಮಗೆ ಸ್ವಾಭಾವಿಕವಾಗಿ ಸಿಗುವ ಪ್ರತಿಕ್ರಿಯೆ 'ಅಯ್ಯೋ, ಯಾರ ಶೋಷಣೆಯಿಂದ? ಯಾರಿಂದ? ಯಾರದು' ಅಂತಲ್ಲವೇ? ಇದು ಸಮ್ಮತಿಸ ಬೇಕಾದ ಪ್ರತಿಕ್ರಿಯೆಯೇ ಸರಿ. ಏಕೆಂದರೆ, ಅನೇಕ ದಶಕಗಳ ಕಾಲ ಆಂಗ್ಲರ ಪಾರತಂತ್ರ್ಯದಲ್ಲಿದ್ದು ಜಯ ಸಾಧಿಸಿದ ನಾಡು ನಮ್ಮದು. ಹೀಗಿದ್ದಲ್ಲಿ ಸ್ವಾತಂತ್ರ್ಯದ ಮಾತು ಬಂದಾಗ ಅದನ್ನು ಸ್ವಾತಂತ್ರ್ಯ ಚಳುವಳಿ ಅಥವಾ ಪಾರತಂತ್ರ್ಯದ ಹೋರಾಟಕ್ಕೆ ತಂದು ನಿಲ್ಲುಸುವುದು ಸಹಜ. ಆದರೆ ನನ್ನ ಕಥೆಯು ವಿಭಿನ್ನ ಏನೋ ಹೇಳ ಹೊರಟಿದೆ, ಈ ಕಥೆಯು, ನೀನು ಮೊದಲು ನಿನ್ನಿಂದ ಸ್ವಾತಂತ್ರ್ಯವನ್ನು ಪಡೇ ಎನ್ನುವ ಅತ್ಯಾವಶ್ಯಕ ಸತ್ಯವನ್ನು, ಅನೀವಾರ್ಯತೆಯನ್ನು ತಿಳಿಸ ಬಯಸಿದೆ! ನಮ್ಮಲ್ಲಿಯೇ ಒಂದಾಗಿ, ನಮ್ಮ ತನು ಮನ ಬುದ್ಧಿಗಳಲ್ಲಿ ಹಾಸುಹೊಕ್ಕಾಗಿ ಹೋಗಿರುವ, ಸದಾ ನಮ್ಮ ಮೈ, ಮನಸ್ಸು ವಿಚಾರಧಾರೆಗಳಲ್ಲಿ ಎದ್ದು ತಾಂಡವವಾಡುತಿರುವ ಆರು ಮಂದಿ ವೈರಿಗಳಿಂದ ಸ್ವಾತಂತ್ರ್ಯ! ಆ ಷಡ್ರಿಪುಗಳೇ ಕಾಮ, ಕ್ರೋಧ, ಲೋಭ, ಮೋಹ, ಮದ ಮಾತ್ಸರ್ಯ. ಷಡ್ರಿಪುಗಳಷ್ಟೇಯಲ್ಲದೆ ನಮ್ಮ ದೇಹ ಮನಸ್ಸುಗಳನ್ನೇ ಮನೆಮಾಡಿಕೊಂಡಿರುವ ಎಲ್ಲ ದುರ್ಗುಣಗಳು ವೈರಿಗಳೇ! 'ನೀನು ನಿನ್ನಿಂದ ಸ್ವತಂತ್ರನಾಗು' ಎಂದಾಕ್ಷಣ 'ಆಯೋ ಇದೇನಿದು ವಿಚಿತ್ರ, ನನಗೇನಾಗಿದೆ? ನನಗ್ಯಾವ ಬಂಧನವಿದೆ?' ಎಂದೆಲ್ಲ ಪ್ರಶ್ನಿಸುವುದು ಸಹಜ ಆದರೆ ಈ ಕಥೆ ಹೇಳ ಯತ್ನಿಸುವುದು ಇಷ್ಟೇ, ನಿಮಲ್ಲಿ ನೀವು ಒಮ್ಮೆ ಇಣುಕಿ ನೋಡಿ, ಅಲ್ಲಿ ಪಾರತಂತ್ರ್ಯದ ಸೆರೆಮನೆಯೇ ಇದೆ! ಖೈದಿಯಾದ ನಿಮ್ಮ ಸ್ಥಿತಿ ಅತಿ ದುರ್ಬಲವಾಗಿದೆ, ವ್ಯಾಕುಲತೆಯಿಂದ ಕೂಡಿದೆ!! ಯಾವುದು ಸೆರೆಮನೆ? ಕಾಮಕ್ರೋಧಾದಿಗಳೇ ಸೆರೆಮನೆ, ಯಾರು ಖೈದಿ? ಅತಿ ಸೂಕ್ಷ್ಮವಾದ, ಸ್ವಚಂದವಾದ ನಮ್ಮಅಂತರಂಗ, ನಮ್ಮಒಳ ಜೀವವೇ ಖೈದಿ.

ನಿಜ ಅರ್ಥದಲ್ಲಿ ನಮ್ಮಿಂದ ನಾವು ಸ್ವತಂತ್ರರಾಗುವುದೆಂದರೇನು? ನಮ್ಮಲಿಯೇ ಇರುವ ನಮ್ಮ ದುರ್ಗುಣಗಳ, ಅವಗುಣಗಳ ನಿಗ್ರಹ, ಶತ್ರುಗಳ ಸಂಹಾರ ಹಾಗು ಸದ್ಗುಣಗಳ, ಸದ್ಭಾವಗಳ ಜಾಗೃತಿ. ಆದರೆ ಒಂದನ್ನು ಮಾತ್ರ ನಾವು ಗಟ್ಟಿಯಾಗಿ ಮನಸ್ಸಿಗೆ ತಂದುಕೊಳ್ಳಬೇಕು, ಅದೇನೆಂದರೆ, ಬಾಹ್ಯವಾದ ಸ್ವಾತಂತ್ರ್ಯದ ಚೆಳುವಳಿಗಳನ್ನು ಒಂದೊಮ್ಮೆ ಗೆಲ್ಲಬಹುದು ಆದರೆ ಆಂತರಿಕ ಸ್ವಾತಂತ್ರವನ್ನು ಸಿದ್ಧಿಸಿಕೊಳ್ಳುವುದು ಅಸಾಧ್ಯವೇ ಸರಿ. ಆದರೆ ಇದನ್ನು ಎಲ್ಲ ಸಾಮಾನ್ಯರು ಅಸಾಮಾನ್ಯ ಚಿಂತನೆಯಿಂದ ಸುಲಭವಾಗಿ ಸಾಧಿಸಬಹುದೆಂದು ಆಂತರ್ಯದ ಸ್ವಾತಂತ್ರ್ಯವನ್ನು ಸಿದ್ಧಿಸಿಕೊಂಡ ಮಹಾತ್ಮರು ಮಾರ್ಗದರ್ಶಿಸುತ್ತಾರೆ.

ಹೀಗಿರುವಲ್ಲಿ ಕಾಮಕ್ರೋಧಾದಿಗಳಲ್ಲಿ ಒಂದಾದ ಮಾತ್ಸರ್ಯದಿಂದ ಸ್ವಾತಂತ್ರ್ಯವನ್ನು ಪಡೆಯುವ ಪ್ರಯತ್ನ ನಡೆಸಿದೆ ಈ ಕಥೆ! ಮಾತ್ಸರ್ಯವೆಂಬ ಈ ರಿಪುವಿನ ಪರಿಣಾಮ, ಅಪಾಯ ಹಾಗು ಬಿಡುಗಡೆಯ ಚರ್ಚೆ!

ಸ್ವರಮ್ಯಪುರ ಎಂಬ ಸುಂದರ ನಗರಿಯಲ್ಲಿ ಸ್ವಧೀರನೆಂಬ ರಾಜನಿದ್ದನು. ಸ್ವಧೀರನು ತನ್ನ ಅರಮನೆಯಲ್ಲಿ ತನ್ನ ವಿಶೇಷ ರಾಜ ಭೋಜನದ ಸೇವೆಗಾಗಿ ಸ್ವಪ್ರೀತಿ ಹಾಗು ಸ್ವನೀತಿ ಎಂಬ ಇಬ್ಬರು ಸೌಂದರ್ಯವತಿಯರಾದ ಲೋಕವಿಖ್ಯಾತ ಪಾಕಶಾಲಿಗಳನ್ನು ನೇಮಕ ಮಾಡಿಕೊಂಡಿದ್ದನು. ಸ್ವಪ್ರೀತಿ ಹಾಗು ಸ್ವನೀತಿ ಕೇವಲ ಪ್ರತಿಷ್ಠಿತ ಪಾಕ ಮಾತೆಯರಲ್ಲ, ಲೋಕವಿಲಕ್ಷಣ ಪಾಕ ಪ್ರವೀಣೆಯರೂ ಹಾಗು ಪಾಕ ವಿಜ್ಞಾನಿಗಳೂ ಆಗಿದ್ದರು. ಇವರು ಸಿದ್ಧಪಡಿಸುತ್ತಿದ್ದ ಮೃಷ್ಠಾನ್ನಗಳು, ಆ ಮೃಷ್ಠಾನ್ನಗಳ ಪರಮಶ್ರೇಷ್ಠ ಸ್ವಾದಗಳನ್ನು ಸವಿದವರ ಮೈ ಮನಸ್ಸುಗಳಲ್ಲಿ ಉಂಟಾಗುವ ಸ್ವಾದಾನಂದ, ಪುಷ್ಠಿಕರಣ ಅನುಪಮಾ, ಅಪ್ರತಿಮ, ಅದ್ವಿತೀಯ, ಅಸೀಮ! ಪ್ರತಿಯೊಂದು ಪಾಕದಲ್ಲೂ ಲೋಕಾತೀತವಾದ ಉತ್ಕೃಷ್ಟ ಮಟ್ಟದ ಸವಿಯನ್ನು ಉಣಬಡಿಸುತ್ತಿದ್ದರು. ಇವರ ಪಾಕದ ಕೈ ಚಳಕಕ್ಕೆ ಸಾಟಿಯೇಯಿಲ್ಲದಂತೆ ಅತ್ಯುನ್ನತ ಸ್ವಾದಗಳ ಪರಾಕಾಷ್ಠೆಯನ್ನು ಹೊಂದಿದ ವ್ಯಂಜನಗಳನ್ನು ಬಡಿಸಿ ಸ್ವಾದ ರಸಿಕರಿಗೆ ತಮ್ಮ ಸವಿರುಚಿಗಳ ಮೂಲಕ ಪರಮಾನಂದದವನ್ನು ಉಣಿಸುತ್ತಿದ್ದರು. ಇವರಿಬ್ಬರಿಗೆ ಸ್ವಾದಿಷ್ಟ ಪಾಕದ ದೈವದತ್ತ ಜ್ಞಾನ, ವಿಜ್ಞಾನ, ಕಲೆ, ಕೌಶಲ್ಯ ಎಲ್ಲವು ಸಹಜವಾಗಿಯೇ ಒದಗಿಬಂದಿತ್ತು. ಇವರು 'ಸ್ವಾದ ಶಿರೋಮಣಿಗಳು' ಎಂದೇ ವಿಶ್ವದಾದ್ಯಂತ ಖ್ಯಾತಿಯನ್ನು ಹೊಂದಿದ್ದರು. ಅರಮನೆಯಲ್ಲಿ ಇಬ್ಬರು ಅನ್ಯೋನ್ಯವಾಗಿ ಸಮಯಕಳೆಯುತ್ತಿದ್ದರು. ಇವರು ಬಹುಕಾಲದಿಂದ ನಿಯಮವೊಂದನ್ನು ಅನುಸರಿಸಿಕೊಂಡು ಬಂದಿದ್ದರು, ಇಬ್ಬರು ಪಾಕ ಪಾರಂಗತರೇಯಾಗಿದ್ದರಿಂದ ರಾಜನಿಗೆ ಭಕ್ಷ್ಯಗಳನ್ನು ಅರ್ಪಿಸುವ ಮುನ್ನ ಒಬ್ಬರಿಗೊಬ್ಬರು ಭಕ್ಷ್ಯಗಳ ಸ್ವಾದವನ್ನು ಸವಿದು ಪ್ರಶಂಸಿಸುತ್ತಿದ್ದರು, ಸ್ವಾದದ ಪರಿಪಕ್ವತೆಯಲ್ಲಿ ಅಸ್ಕಸ್ಮಾತ್ತ್ ಕಿಂಚಿತ್ತ್ ಕುಂದು ಕೊರತೆಗಳೇನಾದರುಯಿದಲ್ಲಿ ಸರಿಪಡಿಸಬಹುದೆನ್ನುವ ವ್ಯವಸ್ಥೆ! ತಮ್ಮತಮ್ಮಲ್ಲಿಯೇ ಏರ್ಪಡಿಸಿಕೊಂಡಿದ್ದ, ತಾವು ತಯಾರಿಸಿದ ವ್ಯಂಜನಗಳಲ್ಲಿ ಸ್ವಾದ ದೋಷಗಳ ಈ ತನಿಖೆಯ ವ್ಯವಸ್ಥೆ ಪ್ರತಿ ಬಾರಿಯೂ ಈ ಪಾಕ ಪಾರಂಗತೆಯರಿಗೆ ವ್ಯರ್ಥವಾಗಿಯೇ ಹೋಗುತಿತ್ತು!! ಎಂದಿಗೂ, ಯಾವ ಕಾಲಕ್ಕೂ ರಾಜಭೋಜನದ ಸ್ವಾದದಲ್ಲಿ ತೃಣಮಾತ್ರದಷ್ಟೂ ಏರುಪೇರು ಆದದ್ದೇಯಿಲ್ಲ, ಹೀಗಾಗಿ ಸ್ವಧೀರನು ತನ್ನ ಶೌರ್ಯ, ಪರಾಕ್ರಮಗಳಿಗಷ್ಟೇಯಲ್ಲದೆ ತನ್ನ ಅಮೋಘ ಪಾಕ ವಿದ್ವಾಂಸರೆಯರಿಂದಲೂ ಹೆಸರುವಾಸಿಯಾಗಿದ್ದನು. ಹೀಗಿದ್ದಲ್ಲಿ ರಾಜನು ತನ್ನ ಪಾಕಪ್ರವೀಣೆಯರ ಖ್ಯಾತಿಯನ್ನು ಮನಸ್ಸಿನಲ್ಲಿಟುಕ್ಕೊಂಡು ಉಲ್ಲಾಸದಿಂದ ಪಾಕ ಸ್ಪರ್ಧೆಯೊಂದನ್ನು ಏರ್ಪಡಿಸಿದನು. ರಾಜನು ಇದನ್ನು ಸ್ಪರ್ಧಾತ್ಮಕ ನಿಟ್ಟಿನಲ್ಲಿ, ಈ ಇಬ್ಬರ ಪಾಕನುರಿತ ತರುಣಿಯರ ಪಾಕ ಪಾಂಡಿತ್ಯವನ್ನು ಜಗತ್ತಿಗೆ ತೋರುವ, ಶ್ಲಾಘಿಸುವ ಸದವಕಾಶ ಹಾಗು ಪ್ರಜೆಗಳಿಗೆ ಮನೋರಂಜನೆ ಎಂಬ ಮನೋಭಾವನೆಯಿಂದ ಆಯೋಜಿಸಿದ್ದನು. ಸುದಿನ, ಶುಭಮುಹೂರ್ತದಂದು ಸ್ಪರ್ಧೆಯು ಆರಂಭವಾಯಿತು, ಪ್ರಜೆಗಳು ಭಾರಿ ಹರುಷ, ಉತ್ಸುಕತೆಯಿಂದ ಅರಮನೆಯ ಸಭಾಂಗಣದಲ್ಲಿ ನೆರೆದಿದ್ದರು. ರಾಜನು ಸ್ಪರ್ಧೆಯನ್ನು ಉದ್ಘಾಟಿಸಿ ತನ್ನ ಆಸ್ಥಾನದ ಅಂದದ ಸ್ತ್ರೀಬಾಣಸಿಗರಿಗೆ ಸ್ಪರ್ಧೆಯ ಮಾಹಿತಿ ಹಾಗು ನಿಯಮಗಳನ್ನು ಹೀಗೆಂದು ಸ್ಪಷ್ಟೀಕರಿಸಿದನು. "ಮೊದಲಿಗೆ ಒಂದು ಷರತ್ತು, ನೀವು, ನಾನು ನೀಡಿದ ಪದಾರ್ಥಗಳಲ್ಲೇ, ನಿಗದಿ ಪಡಿಸಿದ ಸಮಯದಲ್ಲೇ ಪಾಕವನ್ನು ತಯಾರಿಸಬೇಕು. ಇದು ಕೇವಲ ಪಾಕ ಸ್ಪರ್ಧೆಯಲ್ಲ, ಆದರೆ ನಿಮ್ಮೊಳಗೆ ಸಹಜವಾಗಿಯೇ ಇರುವಂತಹ ಔಷಧಿ ಗಿಡಮೂಲಿಕೆಗಳ ಜ್ಞಾನ, ವಿಜ್ಞಾನ, ರಾಸಾಯನಿಕ ತತ್ವ, ರಸ, ಸ್ವಾದ, ಗಂಧ, ಪ್ರಮಾಣಗಳ ಪಾಂಡಿತ್ಯ ಪ್ರದರ್ಶನ. ನಾ ಕಂಡಂತೆ, ನಿಮಗೆ ತಿಳಿಯದೆಹೋದ, ಭಕ್ಷ್ಯಕ್ಕೆ ಯೋಗ್ಯ, ಗಿಡಮೂಲಿಕೆಗಳ್ಯಾವುವೂ ಇಲ್ಲ. ಹೀಗಿದ್ದಲ್ಲಿ ನಾನು ಋಷಿಗಳ ದ್ವಾರ, ಯಾವುದೇ ಮನುಷ್ಯನಿಗೆ ಅವಿನಾಶಿ ಆರೋಗ್ಯ, ಸೌಂದರ್ಯ ಹಾಗು ಬಲ ನೀಡುವ ಗಿಡ, ಎಲೆ, ಬೇರು, ಮಸಾಲೆ, ರಸಗಳು ಇತ್ಯಾದಿ ಪದಾರ್ಥಗಳನ್ನು ತರಿಸಿರುವೆ. ನೀವು ಇವೆಲ್ಲವನ್ನೂ ಬಳಸಿಯೇ ಸ್ವಾದಭರಿತ ಭೋಜನ ಬಡಿಸಬೇಕು". ಇಷ್ಟು ಹೇಳಿ ರಾಜನು ಸ್ಪರ್ಧೆಯ ಮುಖ್ಯವಾದ ಸಂಗತಿಯೊಂದನ್ನು ಸೂಚಿಸಿದನು. " ನಾನು ತರಿಸಿದ ಪದಾರ್ಥಗಳು ಅತ್ಯಂತ ಶ್ರೇಷ್ಠವಾದ ಸಂಜೀವಿನಿ ಮೌಲ್ಯವುಳ್ಳವುಗಳಾದ್ದರಿಂದ ಇದು ಎಷ್ಟು ಪ್ರೇರಕವೋ, ಇದನ್ನು ಪಾಂಡಿತ್ಯದಿಂದ, ಸೂಕ್ಶ್ಮವಾಗಿ ಪ್ರಮಾಣಕ್ಕನುಗುಣವಾಗಿ ಸಂಸ್ಕರಿಸದೆ ಹೋದರೆ ಅಷ್ಟೇ ಮಾರಕ. ಪದಾರ್ಥಗಳ ಬಳಕೆಯಲ್ಲಿ ಕಿಂಚಿತ್ತೂ ಏರುಪೇರಾದರೂ ನಿಮ್ಮ ಭಕ್ಷ್ಯವು ವಿಷಮಯವಾಗಬಹುದು ಅರ್ಥಾರ್ಥ್ ನಿಮ್ಮ ಭಕ್ಷ್ಯವು ನೀಲಿ ಬಣ್ಣವಾದರೆ ಕರಾಳ ವಿಷವೆಂದು ತಿಳಿರಿ. ಅದು ಒಮ್ಮೆ ವಿಷವಾದಲ್ಲಿ ತಿರುಗಿ ಸಹಜ ಸ್ಥಿತಿಗೆ ಮರಳದು. ತಪ್ಪಿಯೇನಾದರೂ ಉದರಸ್ಥವಾದರೆ ತತ್ತ್ಕಾಲ ಮರಣ" ಎಂದು ಎಚ್ಚರಿಸುತ್ತಾ, "ಯಾರು ಸ್ಪರ್ಧೆಯಲ್ಲಿ ತಮ್ಮ ಸ್ವಾದಿಷ್ಟಕರವಾದ ಭಕ್ಷ್ಯದಿಂದ ನನ್ನ ಮನವನ್ನು ಗೆಲ್ಲುತ್ತಾರೋ ಅವರಿಗೆ ಸ್ವರಮ್ಯಪುರದ 'ಪಾಕವಿಜ್ಞಾನಿ' ಎಂಬ ಬಿರುದನ್ನು ನೀಡಿ ಗೌರವಿಸಲಾಗುವುದು" ಎಂದು ಘೋಷಿಸಿದನು. ಸ್ಪರ್ಧೆ ಪ್ರಾರಂಭವಾಯಿತು, ಇಬ್ಬರು, ರಾಜನು ಅರಮನೆಯಲ್ಲಿ ಈ ಚೆಂದುಳ್ಳಿ ಪಾಕತಜ್ಞೆಯರಿಗಾಗಿ ವೆಶೇಷವಾಗಿ ನಿರ್ಮಿಸಿದ್ದ ತಮ್ಮತಮ್ಮ ನಿಜಿ ಪಾಕಶಾಲೆಗಳತ್ತ ಉತ್ಸಾಹದಿಂದ ನಡೆದರು. ಸೂಚಿಸಿದ ಸಮಯದಲ್ಲಿ ವ್ಯಂಜನವನ್ನು ಸಿದ್ಧಪಡಿಸಬೇಕೆಂದು ತಮ್ಮ ತನು ಮನ ಚಿತ್ತವನ್ನು ಪಾಕದಲ್ಲಿ ಏಕಾಗೃತೀಕರಿಸಿದರು. ಈ ಇಬ್ಬರು ಭಾರಿ ಮನೋಹರ ಪಾಕ ಶಿರೋಮಣಿಗಳಾಗಿದ್ದರೂ, ಸ್ವನೀತಿ ಅತ್ಯಂತ ಸಜ್ಜನ, ಸರಳ ವಿನಯ, ಪ್ರೋತ್ಸಾಹಕ ಪಾಕಶಾಲಿಯಾಗಿದ್ದಳು. ಸದಾ ರಾಜನ ಪೌಷ್ಠಿಕ, ಸ್ವಾದಿಷ್ಟ ಭೋಜನಕ್ಕೆ ತನ್ನ ಜೀವನವನ್ನೇ ಸಮರ್ಪಿಸಿ, ರಾಜನ, ರಾಜ್ಯದ, ತನ್ನ ಸಹಪಾಕಶಾಲಿಯಾದ ಸ್ವಪ್ರೀತಿಯ ಒಳಿತನ್ನೇ ಬಯಸುವವಳು. ಪಾಕದಿಂದ ಉಳಿದ ಸಮಯದಲ್ಲಿ ಅರಮನೆಯ ಪಾಕದ ಇಲಾಖೆಗೆ ಪಾಕದ ಪಾಠಗಳನ್ನು, ಕೌಶಲಗಳನ್ನು, ಮಾರ್ಗದರ್ಶನವನ್ನು ನೀಡುತ್ತಿದ್ದಳು. ಆದರೆ ಸ್ವಪ್ರೀತಿಯಲ್ಲಿ, ಸ್ವನೀತಿಯ ಎಲ್ಲ ಗುಣಗಳಿದ್ದರೂ ಮಾತ್ಸರ್ಯವೆಂಬ ಒಂದು ವಿಷಮಯ ದುರ್ಗುಣ ಅವಳಲ್ಲಿ ರಕ್ತಗತವಾಗಿತ್ತು. ಸ್ವನೀತಿಗೆ ಆಗಾಗ ಪ್ರಶಂಸೆ ದೊರೆತಾಗಲೆಲ್ಲ ಸ್ವಪ್ರೀತಿ ಮನದಲ್ಲೇ ಮರುಗಿ ಒಳವೊಳಗೆ ಅತೀವ ದುಃಖಶೋಕತಪ್ತಳಾಗುತ್ತಿದ್ದಳು! ಗುಪ್ತವಾಗಿ ತನ್ನ ಮನದಲ್ಲಿ ಸ್ವನೀತಿಯ ಪ್ರತಿ, ಅರಮನೆಗಿಂತಲೂ ದೊಡ್ಡದಾದ ತಾನೇ ಬಂಧಿಯಾದ ಈರ್ಷ್ಯೆಯೆಂಬ ಸೆರೆಮನೆಯನ್ನೇ ಕಟ್ಟಿಕೊಂಡಿದ್ದಳು. ಸ್ವಪ್ರೀತಿ, ತನ್ನ ಮನಸ್ಸಿನ ಸ್ಥಿತಿ ಈರ್ಷ್ಯಾತ್ಮಕವಾಗಿದೆ, ದುಸ್ಥಿತಿಯಲ್ಲಿದೆ, ಅದನ್ನು ಸರಿಪಡಿಸಬೇಕಲ್ಲವೇಯೆಂದು ಒಮ್ಮೆಯೂ ಚಿಂತಿಸದೆ ಅದನ್ನು ಧೃಢೀಕರಿಸಿಕೊಂಡು ಹೋದಳೇ ಹೊರತು ಎಂದಿಗೂ ಅದನ್ನು ಒಡೆದು ನಶಿಸುವ ಉಪಾಯ ಮಾಡಲೇಯಿಲ್ಲ. ಅವಳ ಮಾತ್ಸರ್ಯದ ಭಾವವೇ ಅವಳನ್ನು ಅಧಃಪತನಕ್ಕೆ ಕರೆದೊಯುತ್ತದೆಯೆಂದು ಅವಳಿಗೆ ಹೇಗೆ ಇಂದಿಗೂ ಅರಿವಾಗಲೇಯಿಲ್ಲ ಎಂಬುದು ಆಶ್ಚರ್ಯ!. ಸ್ಪರ್ಧೆ ರಂಗೇರಿತು, ಅರ್ಧ ಸಮಯ ಮುಗಿದಿತ್ತು. ಇಬ್ಬರು ತಮ್ಮ ಸ್ವಂತ ಪಾಕಶಾಲೆಗಳಲ್ಲಿ ಏಕ ಚಿತ್ತದಿಂತ, ಮನವಿಟ್ಟು, ಷಡ್ರಸಗಳು ಹೇಗೆ ಒಂದಾಗಿ ಕೊನೆಗೆ ಭಕ್ಷದಲ್ಲಿ ಐಕ್ಯವನ್ನು ಹೊಂದುತ್ತದೆಯೋ ಹಗೆಯೇ ಇವರ ಮನವು ಪಾಕದಲ್ಲೋ, ಪಾಕದಲ್ಲಿ ಇವರ ಮನವೊ, ಇವರ ಮನಃ ಪಾಕ ಐಕ್ಯವೋ ಎಂಬಂತೆ, ಅಸಾಮಾನ್ಯ ಘಾಢತೆಯಿಂದ, ಭಾರಿ ಭರದಲ್ಲಿ ಪಾಕವನ್ನು ಸಜ್ಜು ಮಾಡುತ್ತಿದ್ದರು. ಮಾಡಮಾಡುತ್ತಿದ್ದಂತೆಯೇ ಸ್ವಪ್ರೀತಿಗೆ ತನ್ನ ಪಾಕ ಕೈ ತಪ್ಪಿದಂತಾಯಿತು. ಅವಳು ನೋಡ

ನೋಡನೋಡುತ್ತಿದ್ದಂತೆಯೇ ಭಕ್ಷ್ಯ ನೀಲಿಯಾಯಿತು. ಭಕ್ಷ್ಯ ಈಗ ವಿಷವೆಂದು ಖಚಿತವಾಯಿತು. ಇಲ್ಲಿಗೆ ಕೊನೆಯಾಯಿತು. ಆಕೆಯ ಕೈ ಮೀರಿತು. ಅವಳು ಕೈ ಬಿಟ್ಟಳು. ಆದರೆ ಪಾಕಪಂಡಿತೆಯಾದ ಸ್ವಪ್ರೀತಿಯು, ಮುಂದೇನು? ಇಲ್ಲಿಗೆ ಮುಗಿಯಿತೇ? ಸರಿಪಡಿಸುವ ವಿಧಾನವ್ಯಾವುದಾದರೂ ಉಂಟೆ? ಎಂದು ತನ್ನ ಪಾಂಡಿತ್ಯವನ್ನು ಸಮಯಕ್ಕೆ ಸರಿಯಾಗಿ ಬೆಳಕಿಗೆತರುವ ಬದಲು, ಅವಳ ದೇಹವೆಂಬ ರಾಸಾಯನದಲ್ಲಿ ಸ್ವಾಭಾವಿಕವಾಗಿ ಅಗಡಿ ಕುಳಿತಿದ್ದ ಮಾತ್ಸರ್ಯವೆಂಬ ರಸವು ಈ ಕ್ಷಣ ಅವಳ ಮೈ ಮನದಲ್ಲಿ ಅತ್ಯಂತ ವಿಕೃತ ರೂಪ ತಾಳಿ, ಅತಿ ಕರಾಳವಾಗಿ ಹೊರಹೊಮ್ಮಿತು. ಒಮ್ಮಿಂದೊಮ್ಮೆಲೇ ಮಾತ್ಸರ್ಯ ಭಾವದ ಪ್ರಾಕಟ್ಯದಿಂದ ಅವಳಲ್ಲಿ ಹೀಗೆಂದು ಪ್ರೇರಣೆಯಾಯಿತು, "ಈ ಸ್ಪರ್ಧೆಯನ್ನು ನಾನು ಸೋತೆ, ತೊಂದರೆಯಿಲ್ಲ, ಆದರೆ ಸ್ವನೀತಿ ಗೆಲ್ಲಬಾರದು. ಸ್ವನೀತಿ ಗೆದ್ದರೆ ಅವಳಿಗೆ ರಾಜನ ಪ್ರಶಂಸೆ, ಬಿರುದು, ರಾಜಮರ್ಯಾದೆ, ಪ್ರಜೆಗಳ ಜಯಘೋಷ ಇತ್ಯಾದಿ ಎಲ್ಲವೂ ದೊರೆಯುತ್ತದೆ. ಸ್ವನೀತಿಯ ಈ ಕೀರುತಿಯನ್ನು, ಸನ್ಮಾನವನ್ನು, ಪ್ರಚಾರವನ್ನು ನಾನು ಎಂದಿಗೂ ಸಹಿಸಲಾರೆ, ರಾಜನು ನನನ್ನು ಬಿಟ್ಟು ಅವಳನ್ನು ಪ್ರಶಂಸಿಸುತ್ತಾ ನಿಂತರೆ ಈ ಒಲೆಯ ಅಗ್ನಿಗಿಂತಲೂ ಹೆಚ್ಚು ಜಾಜ್ವಲ್ಯವಾಗಿ ನನ್ನ ಉದರದಲ್ಲಿ ಬೆಂಕಿ ಹತ್ತಿ ಉರಿಯುತ್ತದೆ" ಅಂತೆಲ್ಲ ನೊಂದು ತನ್ನಲ್ಲೇ ಹಬ್ಬಿದ, ತಾನೇ ದಿನದಿಂದ ದಿನ ಪ್ರಬಲವಾಗಿ ಹಬ್ಬಿಸಿಕೊಂಡು ಬಂದ ಈರ್ಷ್ಯಾಗ್ನಿಯಲ್ಲಿ ಅವಳ ಮನಸ್ಸು ಬೆಂದು ಭಸ್ಮವಾಯಿತು. ಈ ಮಾತ್ಸರ್ಯಾಗ್ನಿಯೇ ಇಷ್ಟು, ವೈಭವ ಇತ್ಯಾದಿ ನನಗೆ ಉಪಲಬ್ಧವಾಗದಿದ್ದರೂ ಸರಿ, ಮತ್ತೊಬ್ಬರಿಗೆ ಆಗಬಾರದು! ಎಂದು. ಈರ್ಷ್ಯಾತ್ಮಕ ಸ್ವಪ್ರೀತಿಯು ತನ್ನೊಳಗೆ ಪ್ರಖರವಾಗಿ ಉರಿಯುತ್ತಿದ್ದ ಮಾತ್ಸರ್ಯಾಗ್ನಿಯನ್ನು ಶಾಂತ ಮಾಡಲು ವಿಕೃತ ಸಂಚೊಂದನ್ನು ಹೂಡಿದಳು, ಭಯಾನಕ ಈರ್ಷ್ಯಾಭಾವದಿಂದ ಪ್ರೇರಿತಳಾದ ಅವಳು ದುಷ್ಕೃತ್ಯವೊಂದನ್ನು ಎಸಗಲು ನಾಚಿಕೆ ತೊರೆದು ಸಿದ್ಧಳಾದಳು! ತನ್ನ ಅಸಾಧಾರಣ ಕೈ ಚಳಕದಿಂದ ಭಕ್ಷ್ಯದ ಬಣ್ಣವನ್ನು ಬದಲಿಸಿದಳು. ಪಾಕಶಾಸ್ತ್ರದ ಸಕಲ ರಹಸ್ಯಗಳು, ವಿಸ್ಮಯಗಳು, ವೈಶೇಷಿಕ ಕುಶಲತೆಗಳು ಈ ಪ್ರಚಂಡ ಪಾಕಪಂಡಿತೆಯರ ಕೈವಶವಾಗಿದ್ದವು!

ತಮ್ಮ ಪಾಕಗಳಿಂದ ಮನಸ್ಸುಗಳನ್ನೇ ವಶೀಕರಿಸುವ ಇಂತಹ ಪಾಕ ಚತುರೆಯರಿಗೆ ಪಾಕದ ಬಣ್ಣ, ಸ್ವಾದ ಬದಲಿಸುವ ಇತ್ಯಾದಿ ಪಾಕ ಸೂತ್ರಗಳೆಲ್ಲವೂ ಮಕ್ಕಳಾಟವೇ ಸರಿ! ಆದರೆ ಭಗವದ್ ಕೃಪೆಯಿಂದ ಇಡಿಯ ಪಾಕತತ್ವದ ಅನುಗ್ರಹಕ್ಕೆ ಪಾತ್ರಳಾಗಿದ್ದ ಸ್ವಪ್ರೀತಿ ಅದನ್ನು ಉಪಯೋಗಿಸಿದ್ದಾದರೂ ಯಾವುದಕ್ಕಾಗಿ ನೋಡಿ! ಕೀಳು ಮಾತ್ಸರ್ಯಕ್ಕಾಗಿ! ಸ್ವಪ್ರೀತಿ ವ್ಯರ್ಥವೆಂದು ತಿಳಿದರೂ ತನ್ನ ಕುತಂತ್ರವನ್ನು ಸಾಧಿಸಲು ತನ್ನ ಗರ್ಭಿತವಾದ ಕೈ ಚಳಕದಿಂದ ಭಕ್ಷ್ಯದ ಬಣ್ಣ ಬದಲಿಸಿದಳು. ಆದರೆ ಭಕ್ಷ್ಯ ವಿಷವಾಗಿಯೇ ಉಳಿಯಿತು. ಸಮಯ ಮುಗಿಯಿತು, ರಾಜನ ಮುಂದೆ ಭಕ್ಷ್ಯವನ್ನು ಪ್ರದರ್ಶಿಸುವ ಸಮಯ ಬಂದಿತು. ಇದನ್ನರಿತ ಈ ಆಕರ್ಷಣೀಯ ಪಾಕ ನಿಪುಣೆಯರು ಭರದಿಂದ ರಾಜ, ಪ್ರಜೆಗಳಿಂದ ಕೂಡಿದ್ದ ಸಭಾಂಗಣದತ್ತ ಸಾಗಿದರು. ಒಂದೆಡೆ, ಸುಂದರಾಂಗಿ, ಕೋಮಲಾಂಗಿಯಾದ ಸ್ವಪ್ರೀತಿಯು, ಮನದಲ್ಲಿ ತೀವ್ರ ಈರ್ಷ್ಯಾಗ್ನಿಯನ್ನು ಹೊತ್ತು, ತನ್ನ ಮೃದುವಾದ ಕೈಗಳಿಂದ, ಒಂದು ಕೈಯಲ್ಲಿ ವಿಷ ಅರ್ಥರ್ಥ ಬಂಗಾರದ ಪಾತ್ರದಲ್ಲಿ ತನ್ನ ಕೈ ತಪ್ಪಿದ ನೀಲಿ ಭಕ್ಷ್ಯವನ್ನು ಹಿಡಿದು, ಮತ್ತೊಂದು ಕೈಯಲ್ಲಿ ತನ್ನ ವಸ್ತ್ರವನ್ನು ಹಿಸುಕುತ್ತ, ಅಸಹಾಯಕತೆಯಿಂದ ಸೋತು, ಹೊಟ್ಟೆಕಿಚ್ಚಿನಿಂದ ನೊಂದು ಬೆಂದು ತತ್ತರಿಸಿ ಆವೇಶದಿಂದ ಸರಸರನೆ ಸಾಗುತ್ತಿದ್ದಳು. ಇನ್ನೊಂಡೆದೆ ಲಾವಣ್ಯಮಯಿ, ಕರುಣಾಮಯಿಯಾದ, ಸ್ವನೀತಿಯು ಪ್ರಶಾಂತವಾಗಿ, ಪ್ರಸನ್ನವಾಗಿ ತನ್ನ ಎರೆಡೂ ಕೈಗಳಿಂದ ಬಂಗಾರದ ಪಾತ್ರದಲ್ಲಿ ಭಕ್ಷ್ಯವನ್ನು ಹಿಡಿದು ತುಂಬು ಹುರುಪಿನಿಂದ ಸರಸರನೆ ಸಾಗುತ್ತಿದ್ದಳು. ಆದರೆ ಸ್ವಪ್ರೀತಿಯು ಒಮ್ಮಿಂದೊಮ್ಮೆಲೆ ಸ್ವನೀತಿಯ ಮೃದುವಾದ ತೋಳುಗಳನ್ನು ಬಿರುಸಾಗಿ ಎಳೆದು ಅವಳ ನಲ್ಮೆಯ, ಮನಮೋಹಕವಾದ ದೇಹವನ್ನು ತನ್ನೆಡೆಗೆ ತಿರುಗಿಸಿದಳು. ಅವಳನ್ನು ತಡೆದು ಹೀಗೆಂದು ನುಡಿದಳು "ಸ್ವನೀತಿ ನೀನು ಮರೆತು ಬಿಟ್ಟೆಯಾ ನಮ್ಮ ನಿಯಮ? ನಾವು ರಾಜನಿಗಾಗಿ ಏನೇ ಅರ್ಪಿಸಿದರು ಮೊದಲು ನಾವು ಸ್ವಾದಿಸಬೇಕು ಎಂಬುದು?" ಇದಕ್ಕೆ ಪ್ರತಿಯಾಗಿ ಶಾಂತಸ್ವರೂಪಿಣಿ, ಮೃದುಭಾಷಿಣಿಯಾದ ಸ್ವನೀತಿ, "ಇಲ್ಲ ಸ್ವಪ್ರೀತಿ ನಾನು ಮರೆತಿಲ್ಲ, ಆದರೆ ಇದು ಸ್ಪರ್ಧೆಯಲ್ಲವೆ?" ಎಂದು ಹರ್ಷ ಚಿತ್ತದಿಂದ ನುಡಿದಳು. ಇದಕುತ್ತರವಾಗಿ ಸ್ವಪ್ರೀತಿ, "ಅಯ್ಯೋ ಈ ಸ್ಪರ್ಧೆ, ಹೋರಾಟ ಇವೆಲ್ಲ ಕೇವಲ ರಾಜನಿಗಾಗಿ, ಪ್ರಜೆಗಳಿಗಾಗಿ ಅವರೆಲ್ಲರ ಮನೋರಂಜನೆಗಾಗಿ. ಆದರೆ ನಾವು ಪ್ರಾಣ ಸ್ನೇಹಿತರಲ್ಲವೇ? ಜೊತೆಗಾರರಲ್ಲವೇ? ಎಂದಿಗೂ ರಾಜಭೋಜನವನ್ನು ಪರಸ್ಪರ ಸವಿಯದೇ ಬಿಟ್ಟವರೇ ಅಲ್ಲಾ, ಹೀಗಿರುವಾಗ ಇದ್ಯಾವುದೋ ಸ್ಪರ್ಧೆಯ ನಿಮಿತ್ತ ನಮ್ಮ ಬಹುಕಾಲದ ಅನಿಮಿತ್ತ ನಿಯಮವನ್ನು ಏಕೆ ಮುರಿಯಬೇಕು? " ಎಂದು ಸ್ವಪ್ರೀತಿ ಸಖ್ಯತ್ವದ ನಟನೆಯನ್ನು ಮಾಡಿದಳು. ಸ್ವನೀತಿಯು, ಸ್ವಪ್ರೀತಿಯು ಎಂದಿನಂತೆಯೇ ಪ್ರದರ್ಶಿಸಿದ ಬರಿಯ ತೋರಿಕೆಯ ಸ್ನೇಹ, ಪ್ರೀತಿಯನ್ನು ನಂಬಿ ಸ್ವಾದಿಸಿದಳು! ಸ್ವಪ್ರೀತಿಯು ತನ್ನ ಬಹುಕಾಲದ ನಿಸ್ವಾರ್ಥ, ನಿಷ್ಕಲ್ಮಶ, ನಿರ್ಮಲ ಹೃದಯವುಳ್ಳ ಜೊತೆಗಾರ್ತಿಯನ್ನು ತಿಳಿದುತಿಳಿದೂ ಭಯಂಕರ ವಿಷವನ್ನು ಕೈಯ್ಯಾರೆ ಉಣಿಸಿದಳು. ತತ್ಕ್ಷಣ ಸ್ವನೀತಿ ಸಾವನ್ನಪ್ಪಿದಳು. ಸ್ವಪ್ರೀತಿ ಅಸು ನೀಗಿದ ಅವಳ ದೇಹವನ್ನು ಆಕೆಯ ಸ್ವಂತ ಪಾಕಶಾಲೆಯಲ್ಲಿ ಬಿಸಾಡಿ, ಇಬ್ಬರ ಭಕ್ಷ್ಯ ಪಾತ್ರಗಳನ್ನು ಬದಲಿಸಿದಳು. ಸ್ವನೀತಿ ಸ್ವಾದಿಷ್ಟಕರವಾಗಿ ತಯಾರಿಸಿದ ಭಕ್ಷ್ಯವನ್ನು ತನ್ನ ಎರೆಡೂ ಕೈಯಲ್ಲಿ ಹಿಡಿದು ಠೀವಿಯಿಂದ ನಡೆದು ಬಂದು ರಾಜನ ಮುಂದೆ ಪ್ರಸ್ತುತಪಡಿಸಿದಳು. ರಾಜನು ತನ್ನ ಸಿಂಹಾಸನದೆದುರಿದ್ದ ರತ್ನದ ಮಣಿಯ ಮೇಲೆ ಇರಿಸಿದ ಬಂಗಾರದ ಪಾತ್ರದಲ್ಲಿದ್ದ ಭಕ್ಷ್ಯವನ್ನು ಕೊಂಚ ತಲೆತಗ್ಗಿಸಿ ಸೂಕ್ಷ್ಮವಾಗಿ ಗಮನಿಸಿದನು, ಸಂತಸಗೊಂಡು ಮುಗುಳ್ನಕ್ಕು, ತಲೆ ಎತ್ತಿ ಸ್ವಪ್ರೀತೀಯ ಆಗಮನದ ಕಾತುರತೆಯಲಿದ್ದನು. ಹೊತ್ತಾದರೂ ಸ್ವನೀತಿ ಬಾರದಿದ್ದಾಗ ಸ್ವಪ್ರೀತಿಯನ್ನು ರಾಜನು ಪ್ರಶ್ನಿಸಿದನು, "ಪಾಕಮಾತೆ ಸ್ವಪ್ರೀತಿ, ನಿನ್ನ ಸಹಸ್ಪರ್ಧಿ, ಆತ್ಮೀಯ ಸ್ನೇಹಿತೆ ಪಾಕಮಾತೆ ಸ್ವನೀತಿ ಎಲ್ಲಿ? ಯಾಕೆ ಹೊತ್ತಾದರೂ ಅವಳು ಪಾಕಶಾಲೆಯಿಂದ ಹೊರ ಬರಲಿಲ್ಲ?, ಇದಕ್ಕೆ ಪ್ರತಿಯಾಗಿ ಅವಳು, ಮಾತ್ಸರ್ಯವಶಾತ್ ಒಂದು ಅಮಾನುಷ ನಾಟಕವೊಂದನ್ನೇ ಸೃಷ್ಟಿಸಿಬಿಟ್ಟಳು, ಸ್ವಪ್ರೀತಿಯು, "ರಾಜನ್! ಹಾಗೆನ್ನಬೇಡಿ, ನನಗೆ ವ್ಯಾಕುಲತೆ ಉಂಟಾಗುತ್ತಿದೆ, ಅವಳು ಪಾಕ ಮಾಡುವಾಗ ಭಕ್ಷ್ಯದ ಬಣ್ಣವೇನಾದರೂ....ನೀಲಿ ....ವಿಷ....ಅವಳು ತಪ್ಪಿಯೇನಾದರೂ ....ಸ್ವಾದ ಪರೀಕ್ಷಿಸಿ...." ಎಂದೆಲ್ಲ ತೊದಲಿ "ಆಯೋ ವಿಧಿಯೇ!..." ಎಂದಳು. ಅವಳ ಈ ಈರ್ಷ್ಯಾತ್ಮಕ ಅಮಾನವೀಯ ನಟನೆಗೆ 'ಪಾಕ ಶಿರೋಮಣಿ' ಅಲ್ಲದೆ 'ಹೊಟ್ಟೆಕಿಚ್ಚಿನ ಶಿರೋಮಣಿ' ಎಂಬ ಬಿರುದು ನೀಡಬೇಕಿತ್ತೋ ಏನೋ! ಇದ ಕೇಳಿದ ರಾಜನು ತಕ್ಷಣ ಸ್ವನೀತಿಯನ್ನು ವಿಚಾರಿಸಲು ಸೇವಕಿಯರನ್ನು ಅವಳ ನಿಜಿ ಪಾಕಶಾಲೆಗೆ ಕಳುಹಿಸಿದನು. ಸೇವಕಿಯರು ಅವಳ ಮೃತ ದೇಹವನ್ನು ಹಾಗು ತನ್ನ ಸಹಜ ಬಣ್ಣಕ್ಕೆ ತಿರುಗಿದ ಸ್ವಪ್ರೀತಿಯ ವಿಷದ ಭಕ್ಷ್ಯವನ್ನು ತಂದರು, ನೀಲಿಬಣ್ಣವನ್ನು ನೋಡಿದ ರಾಜನು "ಆಯೋ ವಿಧಿಯೇ ಎಂದನು!....". ಸ್ವಪ್ರೀತಿಯು ಮುಂದೆ ನಡೆದ ಎಲ್ಲ ಮಾನಸಮ್ಮಾನಗಳನ್ನು ಆನಂದಿಸಿ, ತಾನು ಪಾಕ ಸ್ಪರ್ಧೆಯನ್ನು ಗೆದ್ದೇ! ಊರಿಗೆಲ್ಲ ನಾನೊಬ್ಬಳೇ ಪಾಕವಿಜ್ಞಾನಿ! ಇನ್ನು

ಮುಂದೆ ರಾಜ, ತಪ್ಪಿಯೂ ಅವಳಿಗೆ ಪ್ರಶಂಸೆಗಳನ್ನು ನೀಡುವುದೂ ಇರುವುದಿಲ್ಲ ನಾನು ಈರ್ಷ್ಯಾಗ್ನಿಯಲ್ಲಿ ಬೆಂದು ಬಳಲುವುದೂ ಇರುವುದಿಲ್ಲ! ಅಬ್ಭಾ ನಿಶ್ಚಿಂತೆ! ಶಾಂತಿ!....ಎಂದು ನಿಟ್ಟುಸಿರೆಳೆದಳು!.

ಈ ಹೃದಯಂಗಮವಾದ ಕಥೆಯಿಂದ ನಾವು ತಿಳಿಯಬೇಕಾದದ್ದೇನೆಂದರೆ ಅವರವರ ಹೆಸರಿನಂತೆಯೇ, ಸ್ವ-ಪ್ರೀತಿ ತನನ್ನೇ ಪ್ರೀತಿಸುತ್ತ, ಸಕಲರೂ ತನ್ನನ್ನೇ ಪ್ರೀತಿಸಲಿ, ಹೊಗಳಲಿ, ಇಲ್ಲವಾದಲ್ಲಿ ಈರ್ಷ್ಯೆಯೆಂಬ ಕಿಚ್ಚಿನಿಂದ ನರಳುತ್ತಾ ಎಂಥಹ ಕೀಲೆಣ್ಣೆ ಹಚ್ಚಲಿಕ್ಕೂ ಸಿದ್ಧಳು. ಅದೇ ಸ್ವ-ನೀತಿ ತನ್ನಲ್ಲಿಯೇ ಸಂಸ್ಕಾರಿತಗೊಂಡಿರುವ ಸದ್ ನೀತಿಗಳಾದ ಪ್ರೀತಿ, ಸ್ನೇಹ, ವಿಶ್ವಾಸವನ್ನು ಮೆರೆದು ಅಮರಳಾದಳು!....ನನಗೆ ಕೀರ್ತಿ ಸಲ್ಲದಿದ್ದರು ಮತ್ತೊಬ್ಬರಿಗೆ ಸಲ್ಲಬಾರದು ಎಂಬ ಭಾವವೇ ಮಾತ್ಸರ್ಯ! ಇಂತಹ ಮತ್ಸರದ ಆರಾಧನೆಯನ್ನು ಮಾಡಿದ ಸ್ವಪ್ರೀತಿಯು ತನ್ನ ಮನವೆಂಬ ಕುಂಡದಲ್ಲಿ ಈರ್ಷ್ಯೆಯನ್ನು ಪ್ರಜ್ವಲಿಸಿ ನಿರ್ಮಾತ್ಸರ್ಯಳಾದ ಸ್ವನೀತಿಯನ್ನು ಆಹುತಿ ಪಡೆದಳು. ಯಥಾರ್ಥವಾಗಿ ಹೇಳಬೇಕೆಂದರೆ ಸಾವು ಎಲ್ಲರಿಗು ನಿಶ್ಚಿತ, ಇಂದೆಯೋ, ನಾಳೆಯೋ. ಹೀಗಾಗಿ ವಿಧಿ ಲಿಖಿತವಾದ ಸ್ವನೀತಿಯ ಸಾವು ಅಂದೇ ಬರೆದಿತ್ತು, ಅವಳು ಮೃತಪಟ್ಟಳು. ಇಲ್ಲಿ ನಾವು ತಿಳಿಯಬೇಕಾದುದೇನೆಂದರೆ ಸ್ವಪ್ರೀತಿಯು ಸ್ವನೀತಿಯನ್ನು ಕೊಲ್ಲಲಿಲ್ಲ ಪಾಕಶಾಲೆಯ ಅಗ್ನಿಗಿಂತಲೂ ಹೆಚ್ಚು ತೀಕ್ಷ್ಣವಾದ ಸ್ವಪ್ರೀತಿಯೊಳಗಿನ ಮಾತ್ಸರ್ಯದ ಬೆಂಕಿ ಅವಳನ್ನೇ ಕೊಂದಿತು. ಏಕೆಂದರೆ ಇಲ್ಲಿ ಸ್ವಪ್ರೀತಿ ಸ್ವನೀತಿಯೊಬ್ಬಳನ್ನು ಕೊಂದರೆ ಏನಾಯಿತು? ಸ್ವಪ್ರೀತಿಯೊಳಗಿರುವ ಈರ್ಷ್ಯೆ ಸ್ವನೀತಿಯ ಪ್ರತಿ ಮಾತ್ರವಲ್ಲ ಅವಳಂತೆ ಅಥವಾ ಅವಳಿಗಿಂತ ಉನ್ನತರಾದವರಲ್ಲೆಲ್ಲ ಹುಟ್ಟುತ್ತಿರುತ್ತದೆ, ಹೆಚ್ಚುತಿರುತ್ತದೆ, ಪಸರಿಸುತ್ತಿರುತ್ತದೆ. ಅವಳಾದರೂ ಎಷ್ಟು ಮಂದಿಯನ್ನು ಕೊಂದಾಳು? ಸ್ವಪ್ರೀತಿ ತನ್ನೊಳಗೊಂದಾದ ಈರ್ಶ್ಯ್ಯನ್ನು ಕೊಲ್ಲದ ವಿನಃ ಬೇರ್ಯಾರನ್ನು ಕೊಂದರು ಫಲವಿಲ್ಲ. ಏಕೆಂದರೆ ಮುಂದಿನ ದಿನಗಳಲ್ಲಿ ರಾಜನು ಮತ್ತೊಬ್ಬ ಪಾಕ ಪ್ರವೇಣಿಯನ್ನು ಕರೆಸಿದರೆ ಅಥವಾ ರೋಗ ಇತ್ಯಾದಿಗಳಿಂದ ಅವಳ ದೇಹವೇ ದುರ್ಬಲವಾದರೆ ಅವಳು ಪ್ರತಿನಿತ್ಯ ಇನ್ನೊಬರಿಗೆ ದೊರಕುವ ಪ್ರಶಂಸೆಯನ್ನು ಕೇಳಿಕೇಳಿ ಪ್ರತಿ ಕ್ಷಣ ಸಾಯಬೇಕಾಗುತ್ತದೆ. ಸ್ವಪ್ರೀತಿಯು ಸ್ವನೀತಿಯನ್ನು ಕೊಲಲಿಲ್ಲ ಸ್ವಪ್ರೀತಿ ತನ್ನೊಳಗೊಂದಾದ ಮಾತ್ಸರ್ಯವೆಂಬ ದುರ್ಗುಣಕ್ಕೆ ಮಡಿದ ದಾಸತ್ತ್ವವೇ ಸ್ವನೀತಿಯನ್ನು ಕೊಂದಿತು. ಮಾತ್ಸರ್ಯದಿಂದ ಸ್ವತಂತ್ರರಾಗಿ!

'ನಿರ್ಮತ್ಸರಾಣಾಂ ಸತಾಂ'

ಇದೆ ಪರಮ ಸುಖ!

ಬಾಹ್ಯವಾದ ದೇಹ, ಜನರ, ಪರಿಸ್ಥಿತಿಗಳ ಪ್ರತಿಕೂಲತೆಗಳ ಸ್ವಾತಂತ್ರವೇ ಸ್ವಾತಂತ್ರದ ಭಾಸ!

ಕಾಮಕ್ರೋಧಾದಿ ಇತರ ವೈರಿಗಳ ಆಂತರಿಕ ಸ್ವಾತಂತ್ರವೇ ಸ್ವಾತಂತ್ರ್ಯ ಭಾಸದಿಂದ ಮುಕ್ತಿ - ವಾಸ್ತವ ಪಾರತಂತ್ರ್ಯದ ಬಿಡುಗಡೆ!

ಶ್ರೇಯಾ ಕುಲಕರ್ಣಿ

ಶ್ರೇಯಾ ಕುಲಕರ್ಣಿ ಅವರು ಮೂಲತಃ ಉತ್ತರ ಕರ್ನಾಟಕದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವೀಧರಳಾಗಿ ಐಟಿ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಬರವಣಿಗೆ ಅವರ ಹವ್ಯಾಸವಾಗಿದೆ.

More About Author