Poem

ತಡರಾತ್ರಿಯ ಕಣ್ಣು..

ಉರಿವ ದೀಪಕ್ಕೊಂದು
ಸೂಜಿ ಚುಚ್ಚಿ
ಕೆಡವಿದೆ ಕತ್ತಲೊಳಗೆ!

ಕಣ್ಣೊಳಗಿನ ಬೆಳಕೂ
ನಿನ್ನ ಅಮಲಿಗೆ ರಜೆ ನೀಡಿ
ಹೋಗಿದೆ..

ಕತ್ತಲಿಗಾಗಿ ಕಾದಂತೆ
ಹಾಯ್ದು ಬಿಟ್ಟೆ
ಮೈಮನ ತುಂಬಿ..

ಅಂಗೈಯಲ್ಲಿ ಅಡರಿ ಕೂತ
ಸುಖದಲ್ಲಿ ನಿನ್ನ ಮುಖ
ಕಾಣುವುದೇ ಮರೆತೆ

ಮೋಡಿಗಾರ್ತಿ; ಕತ್ತಲೆಯ
ಒಡತಿಯೆಂಬಂತೆ
ಹರಡಿಕೊಂಡು ಬಂದಿದ್ದೆ..

ಮೈತುಂಬಾ ಮುತ್ತುಗಳು
ದೇಹದ ಕೆಳಗೆ ಸುಖದ
ಉನ್ಮಾದದ ನರಳಾಟ..

ನೀ ಯಾರು? ಯಾವೂರ ರಾಣಿ?
ಹುಡುಕುತ್ತಿದ್ದೇನೆ;
ಊರ ಒಣಿಯಲಿ..

ನೀ ಎದ್ದು ಹೋದ
ಹೆಜ್ಜೆ ಗುರುತುಗಳು
ಅಲ್ಲಿ ಸಾವಿರ ಮೂಡಿವೆ..

ಅವುಗಳಲ್ಲಿ ಯಾವುದು
ನಿನ್ನದು ಮತ್ತು ನಿನ್ನ
ಉನ್ಮಾನದ್ದು..

ಒಂದೊಂದು ಹೆಜ್ಜೆಗೂ
ಗೊತ್ತುಂಟು
ಕತ್ತಲೆಯ ನಂಟು

ಹುಡುಕಿದಂತೆ ನಟಿಸಿ
ಬೇಕು-ಬೇಕಾಗಿಯೇ
ಸೋಲುತ್ತೇನೆ

ಮತ್ತೊಂದು ನಾಳೆ
ಇನ್ನೊಂದು ನಿಶೆಗೆ
ಬಾಲಕನಂತೆ ಕಾಯುತ್ತೇನೆ!

- ಸದಾಶಿವ್ ಸೊರಟೂರು

ಸದಾಶಿವ್ ಸೊರಟೂರು

ಸದಾಶಿವ ಸೊರಟೂರು ಇವರು ಮೂಲತಃ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸೊರಟೂರಿನವರು. ಸದ್ಯ ಹೊನ್ನಾಳಿ ನಗರದಲ್ಲಿ ವಾಸ. ಪ್ರೌಢಶಾಲಾ ಶಿಕ್ಷಕರಾಗಿರುವ ಇವರು ಹರಿಹರ ತಾಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಇಲ್ಲಿ ಕರ್ತವ್ಯದಲ್ಲಿದ್ದಾರೆ. 

ಸುಮಾರು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಇವರು ಪರಿಸರ ಪ್ರಜ್ಞೆ, ಸಾಮಾಜಿಕ ಕಾಳಜಿ ಮತ್ತು ಮನುಷ್ಯ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುವ ವಿಷಯಗಳ ಕಡೆ ಲೇಖನಿ ಓಡಿಸಿದ್ದಾರೆ.‌ ಬರೆದ ಯಾವುದೊ‌ ಒಂದು ಸಾಲು ಓದುವ ಯಾರದೊ ಎದೆಯೊಳಗೆ ‌ಅರಿವಿನ ಒಂದಾದರೂ ಕಿಡಿ ಹೊತ್ತಿಸಲಿ ಎಂದು ಕಾದಿದ್ದಾರೆ.‌

ಕಥೆ ಇವರ ಇಷ್ಟದ ಪ್ರಕಾರವಾದರೂ ಕವಿತೆ ಅವರಿಗೆ ಆಪ್ತ. ಲೇಖನಗಳನ್ನು ಸಮಾಜದ ಅರಿವಿಗಾಗಿ ಬಳಸುತ್ತಾರೆ. 'ಆ ಹಾದಿ' ಎಂಬ ಪುಸ್ತಕ ಒಂದು ರಸ್ತೆಯ ಬಗ್ಗೆ ಬರೆದ ಕಥಾನಕ.‌ ನೀಲಿ ಚಿಟ್ಟೆ ಮಕ್ಕಳಿಗಾಗಿ ಬರೆದ ಕಥಾಸಂಕಲನ.‌ ಲೈಫ್ ನಲ್ಲಿ ಏನಿದೆ ಸರ್?, ಷರತ್ತುಗಳು ಅನ್ವಯಿಸುತ್ತವೆ, ಕನಸುಗಳಿವೆ ಕೊಳ್ಳುವವರಿಲ್ಲ ಇವು ಇವರ ಲೇಖನಗಳ ಸಂಗ್ರಹವಿರುವ ಪುಸ್ತಕಗಳು. ದೇವರೆ ಅವಳು ಸಿಗದಿರಲಿ ಇದು ಪ್ರೇಮಪತ್ರಗಳ ಹೊತ್ತಿಗೆ. ಅರ್ಧ ಬಿಸಿಲು ಅರ್ಧ ಮಳೆ ಇದು ಇವರ ಮೊದಲ ಕಥಾಸಂಕಲನ. ಬಸ್ಸಿನಲ್ಲಿ ಬರೆದ 'ಕಂಡಕ್ಟರ್ ಕವಿತೆಗಳು' ಎಂಬುದು ಇತ್ತೀಚಿಗೆ ಬಂದ ಇವರ ಹೊಸ ಪುಸ್ತಕ.‌  

'ಗಾಯಗೊಂಡ ಸಾಲುಗಳು' ಇದು ಎರಡನೇ ಕವನ ಸಂಕಲನ. ಇದಕ್ಕೆ ಹಸ್ತಪ್ರತಿಗೆ ಕೊಡಮಾಡುವ 'ಕವಿ ಗವಿಸಿದ್ಧ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ 2023 ನೇ ಸಾಲಿಗೆ ಇವರಿಗೆ ಲಭಿಸಿದೆ. ಇವರ ಪ್ರಥಮ ಕವನ ಸಂಕಲನ 'ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ' ಇದು 2021 ನೇ ಸಾಲಿನ ಹರಿಹರಶ್ರೀ ಪುರಸ್ಕಾರಕ್ಕೆ ಪಾತ್ರವಾಗಿದೆ. ಇವರ ಭಂಟಿ ಎಂಬ ಕಥೆಯೊಂದು ಮಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗೆ ಪಠ್ಯವಾಗಿದೆ. 

ಅನೇಕ ಕಥಾಸ್ಪರ್ಧೆಗಳಲ್ಲಿ, ಕವನ ಸ್ಪರ್ಧೆಗಳಲ್ಲಿ ಬಹುಮಾನ ಬಂದಿದೆ. ಉತ್ತಮ ಶಿಕ್ಷಕ ಎಂಬ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ. ಅನೇಕ ಪತ್ರಿಕೆಗಳಲ್ಲಿ ಅಂಕಣ ಬರೆದಿದ್ದಾರೆ. ಸಧ್ಯ 'ಅವಧಿ' ಅನ್ನುವ ಆನ್ಲೈನ್ ಸಾಹಿತ್ಯ ಪತ್ರಿಕೆಯಲ್ಲಿ ಕತೆಕಿಟಕಿ ಎಂಬ ಅಂಕಣದಲ್ಲಿ ವಾರಕ್ಕೊಂದು ಕಥೆ ಬರೆಯುತ್ತಿದ್ದಾರೆ. ಇವರ 'ಭಂಟಿ' ಎಂಬ ಕಥೆಯೊಂದು ಮಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗೆ ಪಠ್ಯವಾಗಿದೆ.

More About Author