Poem

ತಂತು

ಮಡಚಿಟ್ಟ ಕೌದಿಯನ್ನು
ಮೆತ್ತಗೆ ಹಾಸುವಾಗ
ಮತ್ತೆ ನೆನಪಾಗುತ್ತೆ...

ಅಮ್ಮ ಅಂದಿದ್ದು
ನಿನ್ನ ಆಧುನಿಕ ಪರಿಕರಗಳ
ನಡುವೆ ಈ ಕೌದಿ ಕಳೆದೊಂದು
ಪಳೆಯುಳಿಕೆಯಲ್ಲಿ..

ರಂಗು ರಂಗದ ಮಾಸಿ ಹೋದ
ಇಷ್ಟಿಷ್ಟೇ ಚಿಂದಿಗಳ ಜೋಡಿಸಿಟ್ಟ ನೇಯ್ಗೆ
ದೊಡ್ಡಮ್ಮ ಚಿಕ್ಕಮ್ಮ ಅತ್ತೆ ಅಕ್ಕ
ಉಟ್ಟ ಬಟ್ಟೆಯ ದಿಟ್ಟ ಮಿಡಿತಗಳೆ
ದುಮ್ಮಾನ ಸುಮ್ಮಾನಗಳ ಸರ್ವಸಾಕ್ಷಿ
ಭಾವಗರ್ಭದ ಅನಿರ್ವಚನೀಯ
ಸಹಾನುಭೂತಿ ಅಂತಃಕರಣಗಳ ತಂತುಗಳೆ
ಇಲ್ಲಿ ಒಬ್ಬರದೇ ಸಾಮ್ರಾಜ್ಯ ದೌರ್ಜನ್ಯವಿಲ್ಲ
ಮಡಿಚಿಟ್ಟ ಸೀರೆಯ ಉಟ್ಟ
ಮನೋರಂಗದ ಭಿತ್ತಿಯಲ್ಲಿ
ಒತ್ತಿಕೊಂಡ ಸಂಸ್ಕಾರ ಸಂಸ್ಕರುಣೆಯ ಮಡಚುಗಳು
ಬೆಳ್ಳಕ್ಕಿ ಸಾಲಿನಂತೆ
ಬಾಳ್ವೆಗೈದ ಮೃದು ಮಧುರ ಲೋಕದ ವಿನ್ಯಾಸಗಳು
ಖಾಸ-ಕಾಸ ಖಯಾಲಿಯಲೆ
ನೇಯ್ದ ಈ ಬಣ್ಣದ ಕೌದಿ
ಮೆತ್ತಗೆ ಹಾಸುವಾಗಲೆಲ್ಲಾ
ಅಮೂರ್ತರೂಪಗಳ ಮನವರಿಕೆಗಳು

-ರಜಿಯಾ ಡಿ.ಬಿ

ಡಿ. ಬಿ. ರಜಿಯಾ

ಡಿ. ಬಿ. ರಜಿಯಾ  ಮೂಲತಃ ಬಳ್ಳಾರಿ ಜಿಲ್ಲೆಯ ಹಿರೇಕಾಳಿನವರು. 1954 ಜನವರಿ 26ರಂದು ಜನನ. ತಂದೆ ಹೆಚ್. ಇಬ್ರಾಹಿಂ,  ತಾಯಿ ಸಕೀನಾ ಬೇಗಂ. ‘ಛಾಯೆ, ಕಳೆದು ಹೋಗುತ್ತೇವೆ, ಋತು’ ಎಂಬ ಹನಿಗವನಗಳನ್ನು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆಯಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ.

‘ವಾಸ್ತವದ ಕನವರಿಕೆ’ ಅವರ ಕಥಾ ಸಂಕಲನವಾಗಿದೆ. ಅವರಿಗೆ ಡಾ. ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿ ಬಹುಮಾನ, ಕರಾವಳಿ ಲೇಖಕಿಯರು ವಾಚಕಿಯರ ಸಂಘದ ಕೃಷ್ಣಬಾಯಿ ದತ್ತಿ ಬಹುಮಾನ, ಅಮ್ಮ ಪ್ರಶಸ್ತಿ, ಮಾತೃಶ್ರೀ ರತ್ನಮ್ಮ ಹೆಗಡೆ ಬಹುಮಾನ , ಹರಿಹರಶ್ರೀ ಪ್ರಶಸ್ತಿ, ಲಂಕೇಶ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

More About Author