Poem

ತೀರ್ಪುಇನ್ನೂಹೊರಬಿದ್ದಿಲ್ಲ!

ಅವರು ಬರುವುದರೊಳಗೆ
ಇವರು ಹೋಗಿಯಾಗಿತ್ತು
ಕಾದವರಿಗೂ ಕಾಯಿಸಿದವರಿಗೂ
ಏನು ಮಾತಿತ್ತೋ ಏನೋ!

ಅಲ್ಯಾರೊ ಇಳಿದರು
ಇಲ್ಯಾರೊ ಹತ್ತಿದರು
ಹತ್ತಿಳಿದವರ ನಡುವೆ
ಯಾವ ಒಪ್ಪಂದವಿತ್ತೋ ಗೊತ್ತಿಲ್ಲ!

ಅವನೋಡಿ ಬಂದು ತಲೆ ನೇವರಿಸಿದಾಗ ಇವಳು ಕೊನೆಯದಾಗಿ ಕಣ್ತೆರೆದು ಮುಚ್ಚಿದಳು
ನೇವರಿಕೆ ಕನವರಿಕೆಗಳ ಆಳದಲ್ಲಿ
ಎಂತಹ ನಂಟಿನ ಗಂಟಿತ್ತೋ ತಿಳಿಯಲಿಲ್ಲ!

ಈ ಹಾಳು ಅಲೆಗಳು
ಮತ್ತೆ ಮತ್ತೆ ಗೋಳಾಡಿಸುತ್ತಿವೆ
ದಂಡೆಗೆ ಮನಸಿದೆಯೋ ಇಲ್ಲವೋ...
ಹಾಯಿದೋಣಿಯಲಿ ಹೊರಟವರಿಗೆ
ತೀರದ ಕೈಗಳು ಬೀಸುತ್ತಿವೆ
ಪರಿಚಯದ ಹುಟ್ಟು ಬೇಕೋ ಬೇಡವೋ...

ಯಾರೋ ಬರೆದ ಕವಿತೆಗೆ
ಯಾರ್ಯಾರದೋ ವಿಶ್ಲೇಷಣೆ
ಭಾವಕ್ಕೂ ಬಳಲಿಕೆಗೂ ಸಂಬಂಧ
ಕಲ್ಪನೆಯೋ ವಾಸ್ತವವೋ ನಿಷ್ಕರ್ಷೆಯಾಗಿಲ್ಲ!
ನಾಂದಿ - ಮಂಗಳದ ನಡುವೆ
ಮಡಚಿಟ್ಟ ಮಹಾಕಾವ್ಯದ ಪುಟಗಳು
ನಿಷೇಧವೋ ವಿಷಾದವೋ
ಮುನ್ನುಡಿ-ಬೆನ್ನುಡಿಗಳಲ್ಲೂ ಮಾಹಿತಿಯಿಲ್ಲ!

ದೂರದಿ ಕುಡಿದ ಮತ್ತಿನ ಹಾಡಿಗೆ
ಬರಡೆದೆಯ ಹಕ್ಕಿ ರೆಕ್ಕೆ ಬಡಿದೆದ್ದರೆ
ಅಪರಾಧವೋ ಅನುರಾಗವೋ
ತೀರ್ಪು ಇನ್ನೂ ಹೊರಬಿದ್ದಿಲ್ಲ!

ಪಡಸಾಲೆಯಲ್ಲಿ ನಿಟ್ಟುಸಿರು
ಅಡುಗೆಮನೆಯಲ್ಲಿ ಕಣ್ಣೀರು
ಮಲಗುವಕೋಣೆಯಲಿ ಮುಕ್ತಿ
ಸಿಕ್ಕುವುದೋ ಸಿಕ್ಕಾಗುವುದೋ...
ನಾಳೆಯ ಬೆಳಗಿಗೆ ತಂಗಳನ್ನ
ಹಸಿದೊಡಲ ಕನಸುಗಳ
ಅರಳಿಸುವುದೋ ಅಳಿಸುವುದೋ
ಕಾಲವಿನ್ನೂ ಮಿಂಚಿಲ್ಲ...!

✍️ಡಾ. ರತ್ನಾಕರ ಸಿ ಕುನುಗೋಡು

ವಿಡಿಯೋ
ವಿಡಿಯೋ

ರತ್ನಾಕರ ಸಿ. ಕುನುಗೋಡು

ಡಾ.ರತ್ನಾಕರ ಸಿ. ಕುನುಗೋಡು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಎರೆಕೊಪ್ಪದವರು. ತಾಯಿ-ನಿಂಗಮ್ಮ, ತಂದೆ- ಚನ್ನಬಸಪ್ಪ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಸ್ತುತ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸ.ಪ್ರ.ದ.ಕಾಲೇಜು, ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲಿನಿಂದಲೂ ಸಾಹಿತ್ಯ, ರಂಗಭೂಮಿ, ಸಂಘಟನೆ, ಸಾಮಾಜಿಕ ಪರಿವರ್ತನೆಗಳತ್ತ ಒಲವು ಮೂಡಿಸಿಕೊಂಡು ಕ್ರಿಯಾಶೀಲರಾಗಿರುವ ಅವರು ಕವಿತೆಗಳು ಮತ್ತು ಸಂಶೋಧನಾ ಲೇಖನಗಳ ಬರಹದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ಪಿಹೆಚ್ ಡಿ ಗಾಗಿ ಬೇರು ಬಿಳಲು ಎಂಬ ಸಂಶೋಧನಾ ಮಹಾಪ್ರಬಂಧವನ್ನು ರಚಿಸಿ ಪ್ರಕಟಿಸಿದ್ದಾರೆ.

More About Author