Poem

ತನ್ನತನದ ಹೊದಿಕೆ ಹೊತ್ತ ಮನ

ನನ್ನ ಮನಸ್ಸಿನ ತುಂಬೆಲ್ಲಾ
ನಾನು ಕೂಡಿಟ್ಟ ನನ್ನದೇ ಆದ ಗುರುತುಗಳು
ಮನದ ಗೋಡೆಗಳಲ್ಲಿ ನನ್ನ ವಿಚಾರಗಳದೇ ಕೆತ್ತನೆ
ನನ್ನದೇ ಭಾವನೆ, ನನ್ನದೇ ಗೆಲುವು, ನನ್ನದೇ ಸೋಲು
ಅಲ್ಲಿರುವುದು ನಾನೊಬ್ಬನೇ
ನನ್ನನ್ನು ಹೊರತು ಮತ್ತೊಬ್ಬರ ಪ್ರವೇಶವಿಲ್ಲ
ಅಕ್ರಮವಾಗಿ ನುಸುಳಿದರೆ ಕೈಗೆ ಬೇಡಿ ತೊಡಿಸಿ ಬಂಧಿಸಬಲ್ಲೆ

ನಾನೆಂದಿಗೂ ನಾನೇ,
ನನ್ನತನವು ನನ್ನಿಂದ ಹೋಗದು
ಅದನ್ನು ಕದಿಯಲೂ ಆಗದು
ನನ್ನತನದಲ್ಲಿಯೇ ನನ್ನ ಬದುಕು
ಪರರ ಕೆಟ್ಟ ಮಾತುಗಳು
ಇಲ್ಲಿ ಸುಳಿಯುವುದಿಲ್ಲ
ಸುಳಿಯದಂತೆ ಮನಸ್ಸಿಗೆ ಹೊಸ ಹೊಳಪಿರುವ
ಬಿಳುಪಿನ ಬಟ್ಟೆಗಳ ತೊಡಿಸಿರುವೆ
ಅವುಗಳನ್ನೂ ಯಾರೂ ಕದಿಯಲಾಗದು
ಕತ್ತಲೆಯಲ್ಲಿ ಬಿದ್ದು ಹೊರಳಾಡಿದ ಮನವು ಬದಲಾಗಿದೆ
ಹೌದು, ನಾನು ಬದಲಾಗಿದ್ದೇನೆ
ನನ್ನ ಶುಭ್ರ ಮನಸ್ಸಿನೊಂದಿಗೆ

ದುಃಖ- ಸುಖಗಳೆಂಬ ವಿಭಿನ್ನತೆಯನ್ನು
ಒಂದೇ ಎಂಬಂತೆ ಸ್ವೀಕರಿಸಿರುವೆ
ಪ್ರಶಂಸೆ- ಟೀಕೆಗಳಲ್ಲೂ ವ್ಯತ್ಯಾಸ ಕಾಣದಾದೆ
ನೋವಿಗೂ ಒಂದೇ ಉತ್ತರ ನಲಿವಿಗೆ ಅದೇ ಉತ್ತರ
ಬಂದದ್ದೆಲ್ಲವೂ ನನ್ನಲ್ಲಿ ಬದಲಾವಣೆ ತರದು
ಸಮಾನತೆಯ ಸಾರುವಂತೆ
ನನಗೆ ನಾನೇ ಪ್ರತಿಸ್ಪರ್ಧಿ,
ನನಗೆ ನಾನೇ ತಾಯಿ
ಗುರುವೂ ನಾನೇ

ನನ್ನದೇ ಪುಟ್ಟ ಪ್ರಪಂಚ
ತಪ್ಪಿದರೆ ತಿದ್ದುವುದೂ ನಾನೇ
ನನ್ನ ಮನವು ನನ್ನ ಮಾತುಗಳನ್ನು ಮಾತ್ರ
ಕೇಳುವಂತಾಗಿ ಹೋಗಿದೆ
ಅದಕ್ಕೆ ಅವರಂದರು- ಅಹಂಕಾರವಂತೆ
ನನ್ನ ಮನವ ನಿಮ್ಮ ಕೈಗೊಂಬೆ
ಮಾಡಿಕೊಳ್ಳಲು ಈ ಪ್ರಯತ್ನವೇ?
ಆಗಲಿ, ನನ್ನದೆನ್ನುವುದೇ ಕ್ಷಣಿಕ
ತನ್ನಿರಿ ಸಲಾಕೆಗಳ

ಒಮ್ಮೆ ಹೊಡೆಯುವಿರಂತೆ
ಬದಲಿಸಲು ಸಾಧ್ಯವೇ?
ಬಂಡೆಗಲ್ಲನ್ನು ಒಡೆಯುವುದು ಅಷ್ಟು ಸುಲಭವಲ್ಲ
ಎಂಬುದು ನಿಮಗೂ ಅರ್ಥವಾಗಲಿ
ನನ್ನ ಬದುಕು ಏನಿದ್ದರೂ ನನಗಾಗಿ,
ನನ್ನತನದ ಉಳಿವಿಗಾಗಿ

- ವಿದ್ವಾನ್ ಮಂಜುನಾಥ ಎನ್ ಪುತ್ತೂರು.

ವಿದ್ವಾನ್ ಮಂಜುನಾಥ್ ಎನ್

ವಿದ್ವಾನ್ ಮಂಜುನಾಥ್ ಎನ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಮಂಜುನಾಥ್ ಅವರು ಸಾಹಿತ್ಯದ ಜೊತೆಗೆ ಭರತನಾಟ್ಯ, ಸುಗಮ ಸಂಗೀತ, ಯಕ್ಷಗಾನ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ವೃತ್ತಿಪರ ಭರತನಾಟ್ಯ ಕಲಾವಿದರಾಗಿ ಕಲ್ಬುರ್ಗಿಯಲ್ಲಿ ನೆಲೆಸಿದ್ದಾರೆ.

More About Author