Poem

ತರಗೆಲೆ

ಸುತ್ತಲೆ ತರಗೆಲೆ ಸುತ್ತು
ಕಾಲದ ಸೊಗಸಲಿ ಮೈತೆತ್ತು
ಆವರಿಸಿದ ನಿನ್ನಾವರ್ತದ ಧೂಳಿಯ ರಿಂಗಣದಲಿ
ಸತ್ಯದ ಸೊಲ್ಲನು ಮೇಲೆತ್ತು

ಗಾಳಿಯ ಮೇಳದ ನೀಲ ತರಂಗದಿ
ಮಿಥ್ಯಾರೋಪದ ಸುಂಟರು ಸುಂಟಿದೆ
ಅಡಿಗೊರಗಿಸಿದ ಸಿರಿ ಮುಡಿ ಮೇಲಿನ ಗರಿ
ಪುಡಿಯಾಗುವ ಘಳಿಗೆಲಿ ಕೊಸರೆತ್ತು

ಗುಡಿ ಗುಂಡಾರದ ಗಡಿ ಗಾಂಭೀರ್ಯದ
ಹಮ್ಮು ಬಿಮ್ಮುಗಳ ಕೀಲನು ಕಿತ್ತು
ಗದ್ದುಗೆಯಲಿ ಗಹಗಹಿಸುತಲಿರುವ ಘನವಂತರನೆಲ್ಲಾ
ನಿನ್ನಾವೇಷದ ಆತ್ಮದ ಬೆಡಗಲಿ ಸುತ್ತು
ಬರಡಿಗು ದಾಟಲಿ ಜೀವದ ಜೇನು
ಸುತ್ತಲೆ ತರಗೆಲೆ ಸುತ್ತು

ಕರುಳಿನ ದಾಖಲೆ ಕೆಳುವ ಕೆಸರಿದೆ
ಮಮತೆಯ ಹಗ್ಗವು ಕರುಣೆಯ ಬಿದಿರನು
ಮಂಥನ ಮಾಡಲಿ ತಿರು ತಿರುಗಿ
ಸುತ್ತುವ ಹಗುರದ ಘನತೆಯ ಪಾಠವು
ನವನೀತದ ಚೆಲುವನು ಬಣ್ಣಿಸಲಿ

ಏರುವ ಹಾಡನು ಹಾರುವ ಮಾತನು
ಎದೆಯೂಡಿಸು ಗಿಡನೆಟ್ಟಂತೆ
ತರಗೆಲೆ ಲಕ್ಷ್ಯದಿ ತೃಣವೆಂದರು ಸರಿಯೇ
ಸುತ್ತುವ ಪುಣ್ಯವ, ಏರುವ ತತ್ವವ
ಎಂದಿಗೂ ಬಿಡದೇ ಸುತ್ತುತ್ತಿರು

-ಸತ್ಯಮಂಗಲ ಮಹಾದೇವ

ಸತ್ಯಮಂಗಲ ಮಹಾದೇವ

ಸತ್ಯಮಂಗಲ ಮಹಾದೇವ ಅವರು ಮೂಲತಃ ತುಮಕೂರು ಜಿಲ್ಲೆ, ತುಮಕೂರು ತಾಲ್ಲೂಕಿನ ಸತ್ಯಮಂಗಲ ಗ್ರಾಮದಲ್ಲಿ 12-06-1983 ರಲ್ಲಿ ರಾಜಣ್ಣ ಮತ್ತು ಜಯಮ್ಮ ದಂಪತಿಯ ಮಗನಾಗಿ ಜನಿಸಿದರು.  ಕನ್ನಡದ ಸಮಕಾಲೀನ ಯುವ ಬರಹಗಾರರಲ್ಲಿ ಸೂಕ್ಷ್ಮಸಂವೇದಿ ಹಾಗೂ ಜೀವಪರ ಚಿಂತನೆಯ ಕವಿಯಾಗಿ,  ಕಾವ್ಯ, ವಿಮರ್ಶೆ, ವ್ಯಕ್ತಿಚಿತ್ರ, ಸಂಪಾದಕೀಯ, ಸಂಶೋಧನೆಯ ಕ್ಷೇತ್ರದಲ್ಲಿ ಕೆಲಸಮಾಡುತ್ತಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2017 ರಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದರು.  ಕೇಂದ್ರಸಾಹಿತ್ಯ ಅಕಾಡೆಮಿಯು ಆಯೋಜಿಸಿದ್ದ "ರಾಷ್ಟ್ರೀಯ ಯುವ ಬರಹಗಾರರ ಸಮ್ಮೇಳನ" ಕೇರಳ, ಪಂಜಾಬ್, ಮಹಾರಾಷ್ಟ್ರ, ಅಸ್ಸಾಂ ಹೀಗೆ ರಾಷ್ಟ್ರದ ಅನೇಕ ಕಡೆಗಳಲ್ಲಿ ಕಾವ್ಯವಾಚನ ಮಾಡಿ ಕನ್ನಡದ ಹಿರಿಮೆಯನ್ನು ಪಸರಿಸಿದ್ದಾರೆ.

ಇವರ 'ಯಾರ ಹಂಗಿಲ್ಲ ಬೀಸುವ ಗಾಳಿಗೆ' ಕಾವ್ಯ ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನವೂ ಸೇರಿದಂತೆ ವರ್ಧಮಾನ ಯುವ ಪುರಸ್ಕಾರ ಶಾ ಬಾಲೂರಾವ್ ಯುವ ಪುರಸ್ಕಾರ . ಜಿ.ಎಸ್.ಶಿವರುದ್ರಪ್ಪ ಕಾವ್ಯ ಪುರಸ್ಕಾರ, ಮುಳ್ಳೂರು ನಾಗರಾಜ್ ಕಾವ್ಯ ಪ್ರಶಸ್ತಿ, ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ, ಮೂಡ್ನಾಕೂಡು ಚಿನ್ನಸ್ವಾಮಿ ದತ್ತಿ, ಸೇರಿದಂತೆ ರಾಜ್ಯಮಟ್ಟದ ಒಟ್ಟು 7 ಪ್ರಶಸ್ತಿಗಳು ಒಂದೇ ಕಾವ್ಯ ಕೃತಿಗೆ ಪಡೆದುಕೊಂಡ ಹಿರಿಮೆ ಇವರದು ವಿಶ್ವವಿಖ್ಯಾತ ಮೈಸೂರು ದಸರಾ- 2016 ಹಾಗೂ 2022 ರ ಯುವ ಕವಿಗೋಷ್ಟಿ ಯಲ್ಲಿ ಕವಿಯಾಗಿ ಭಾಗವಹಿಸಿ ಕವನ ವಾಚನ ಮಾಡಿರುತ್ತಾರೆ

 2019 ರಲ್ಲಿ ಲೋಕಾರ್ಪಣೆಯಾದ ಇವರ ನಾಲ್ಕನೇ ಕವನ ಸಂಕಲನ ಪಂಚವರ್ಣದ ಹಂಸ ಕೃತಿಗೆ 2019 ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅಮ್ಮ ಪ್ರಶಸ್ತಿ ಮತ್ತು ಸಂವಹನ ಸಾಹಿತ್ಯ ಪ್ರಶಸ್ತಿ ಸೇರಿ ಒಟ್ಟು 3 ರಾಜ್ಯಮಟ್ಟದ ಪ್ರಶಸ್ತಿಗಳು ಈ ಕಾವ್ಯಕೃತಿಗೆ ಸಂದಿರುವುದು ಸಾಹಿತ್ಯ ಕೀರ್ತಿಯ ಮುಕುಟಕ್ಕೆ ಮತ್ತೊಂದು ಗರಿ

ಇವರ ಸಾರಸ್ವತ ಸೇವೆಗೆ 2022 ನೇ ಸಾಲಿನ ತುಮಕೂರು ಸಾಹಿತ್ಯ ಪರಿಷತ್ತು ಕೊಡಮಾಡುವ ಜಿಲ್ಲಾ ರಾಜ್ಯೋತ್ಸವ ದತ್ತಿ "ಸಾಹಿತ್ಯ ಶ್ರೀ" ಪ್ರಶಸ್ತಿ ಸಂದಿರುವುದು ಇವರ ಕಾವ್ಯಕ್ಕೆ ಸಂದ ಗೌರವವಾಗಿದೆ.ಇವರ ಕವಿತೆಗಳು ತೆಲುಗು, ತಮಿಳು , ಹಿಂದಿ ಮತ್ತು ಇಂಗ್ಲೀಷ್ ಭಾಷೆಗೆ ಅನುವಾದಗೊಂಡಿವೆ

 " ಬೇಂದ್ರೆ ಮತ್ತು ಮಧುರಚೆನ್ನರ ಕಾವ್ಯಗಳಲ್ಲಿ ಅನುಭಾವ " ಎಂಬ ಪ್ರೌಢ ಪ್ರಬಂಧಕ್ಕೆ ಪ್ರತಿಷ್ಟಿತ ರೇವಾ ವಿಶ್ವವಿದ್ಯಾಲಯವು ಪಿಎಚ್.ಡಿ.ಪದವಿ ನೀಡಿದೆ

ಇವರ ಕಾವ್ಯವು  ಬೆಂಗಳೂರು ನಗರ ವಿಶ್ವವಿದ್ಯಾಲಯದ  ಐಚ್ಛಿಕ ಕನ್ನಡ , ಗುಲ್ಬರ್ಗ ವಿಶ್ವವಿದ್ಯಾಲಯದ ಬಿ.ಬಿ.ಎ , ತುಮಕೂರು ವಿಶ್ವವಿದ್ಯಾಲಯದ  ಬಿ.ಎಸ್ಸಿ ವಿದ್ಯಾರ್ಥಿಗಳಿಗೆ  ಪಠ್ಯವಾಗಿದೆ NEP ಪಠ್ಯಕ್ರಮದಲ್ಲಿ ಸೇರಿದ ಕಾವ್ಯವಾಗಿದೆ.

ಪ್ರಸ್ತುತ ಇವರು  ಬೆಂಗಳೂರಿನ ಗಾಂಧೀ ಶಾಂತಿಪ್ರತಿಷ್ಠಾನದ ಕಾರ್ಯದರ್ಶಿಗಳಾಗಿ  ಹಾಗೂ ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜು  ಬೆಂಗಳೂರಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 ಕೃತಿಗಳು : 

ಕವನಸಂಕಲನಗಳು 

ಭಾವತೀರದ ಹಾದಿಯಲ್ಲಿ
ಹೆಜ್ಜೆ ಮೂಡಿದ ಮೇಲೆ 
ಯಾರ ಹಂಗಿಲ್ಲ ಬೀಸುವ ಗಾಳಿಗೆ 
ಪಂಚವರ್ಣದ ಹಂಸ

 ವಿಮರ್ಶಾ ಕೃತಿಗಳು 
ಗಾಳಿ ಗಂಧ 
ರೆಕ್ಕೆಗಳೊಡೆದಾವೋ ಮುಗಿಲಿಗೆ

ಸಂಪಾದಿತ ಕೃತಿಗಳು 
ಕಣ್ಣ ಕಾಡುಗೆ ಬೆಳಕು 
ಕಿರಿಯರು ಕಂಡ ಗಾಂಧಿ 
ದಲಿತ ಸಾಹಿತ್ಯ ಸಂಪುಟವಿಮರ್ಶೆ 
ಎಚ್ಚ್ ಎಸ್ಕೆ ಕನ್ನಡ ಪ್ರಜ್ಞೆ

 ಸಂಶೋಧನೆ 

ಕಂಗಳ ಬೆಳಗು(ಬೇಂದ್ರೆ ಮತ್ತು ಮಧುರಚೆನ್ನರ ಕಾವ್ಯಗಳಲ್ಲಿ ಅನುಭಾವ)

 ವ್ಯಕ್ತಿಚಿತ್ರ

 ಶಿಕ್ಷಣ ತಜ್ಞ ಪ್ರೊ.ಕೆ.ಈ.ರಾಧಾಕೃಷ್ಣ ಸೇರಿದಂತೆ ಈ ವರೆಗೆ ಇವರ 12 ಕೃತಿಗಳನ್ನ ರಚಿಸಿದ್ದಾರೆ. 

More About Author