Poem

ತಾಯಿ ತುತ್ತು

ತಾಯಿ ತುತ್ತು

ನನ್ನಮ್ಮನಿಗೆ ಮಾತ್ರ ಗೊತ್ತು
ನನ್ನ ಹೊಟ್ಟೆಯ ಅಳತೆ ಎಷ್ಟೆಂದು !
ಹಸಿವಿದ್ದೂ ನಾ ...

"ಹೊಟ್ಟೆ ತುಂಬಿತು ಸಾಕು"
ಎಂದರೂ ಇನ್ನಷ್ಟು ಮತ್ತಷ್ಟು
ಬಡಿಸಿ ಉಣಿಸುವಳು.

ಅಥವಾ ಹಾಗೆ ಒತ್ತಾಯಿಸಲೆಂದೇ...
ನನ್ನೀ ಹೊಟ್ಟೆ ತುಂಬಿದ ನಾಟಕ.

ಅಮ್ಮನದು ಅಡುಗೆಯನೂ
ಕಲೆಯಾಗಿಸುವ ಕೈಯಿ
ಉಣ್ಣಲು ಇರಬೇಕಿತ್ತು
ನನಗಿನ್ನೊಂದು ಬಾಯಿ.

ಅಮ್ಮ ರೊಟ್ಟಿಯ ತಟ್ಟಿ
ಬಿಸಿ ಬಿಸಿ ಬಡಿಸುತಿರೆ
ಹಂಚಿನೆದುರಲೇ ಕುಳಿತು
ಉಣ್ಣುವ ನನಗೆ ಸ್ವರ್ಗ.

ನನ್ನೂಟ ಮುಗಿಯುವವರೆಗೂ
ಬಡಿಸುತ್ತಾ ಎದುರಲೇ ಕುಳಿತು
ಕಣ್ತುಂಬಿಕೊಳ್ಳುವುದು
ಅವಳಿಗೂ ಅದೇನೋ ಹಿಗ್ಗು.

ಆದರೂ...
ಉಣ್ಣುವಾಗ, ಮೊದಲಿನಂತೆ
ಕತೆ ಹೇಳೆಂದರೆ...
ಈಗೆಲ್ಲಾ ಗದರುವಳು.

ಅಮ್ಮ...
ಅನ್ನಕ್ಕೆ ಕೈಮುಗಿದು
ಉಣ್ಣಲು ಕಲಿಸಿದವಳು.
ಅನ್ನವ ವ್ಯರ್ಥ
ಮಾಡುವುದ ಎಂದಿಗೂ
ಸಹಿಸದವಳು.

ಎಷ್ಟೆಲ್ಲಾ ಪಕ್ವಾನ್ನಗಳ
ಹೊರಗೆಷ್ಟೇ ಉಂಡರೂ
ಅಮ್ಮನ ಕೈರುಚಿಗೆ
ಎಂದಿಗೂ ಸಮನಿಲ್ಲ.

ಮನೆಯಿಂದ ದೂರವಿಡುವ
ದುಡಿಮೆಯ ಸಮಯದಲ್ಲಿ
ಅಮ್ಮನ ಅಡಿಗೆಯ
ನೆನಪು ಕಾಡದ ದಿನವಿಲ್ಲ.

ಏಕೆಂದರೆ ಅದು ಕೇವಲ
ಹಸಿವ ನೀಗುವ ಅನ್ನವಲ್ಲ
ಅದರೊಳಗಿದೆ ಅವಳ
ವಾತ್ಸಲ್ಯ , ಪ್ರೇಮಗಳ ಹೂರಣ

ಕಾರಣ ಅದೇ
ನನ್ನ ಬದುಕ ತ್ರಾಣ
ಅಮ್ಮ...

ನಾ ಕಂಡ ಸಾಕ್ಷಾತ್ ಅನ್ನಪೂರ್ಣ.

- ಪ್ರಮೋದ ಸಾಗರ

ವಿಡಿಯೋ
ವಿಡಿಯೋ

ಪ್ರಮೋದ ಸಾಗರ

ಲೇಖಕ ಪ್ರಮೋದ ಸಾಗರ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಕನ್ನಡ ಎಂಎ ಪದವೀಧರರು,  ಸಂಗೀತ ನಿರ್ದೇಶಕರು. ಸಾಹಿತ್ಯ, ಚಿತ್ರಕಲೆ, ಫೋಟೋಗ್ರಫಿ, ನಾಟಕ ಇತ್ಯಾದಿ ಇವರ ಹವ್ಯಾಸಗಳು. ʻಸಂಸಾರ ಗೀತೆ ಮತ್ತು ಇತರ ಕವಿತೆಗಳು  ಎಂಬುದು ಇವರ ಕವನ ಸಂಕಲನ. 

ಪ್ರಶಸ್ತಿ ಪುರಸ್ಕಾರಗಳು : ಸಂಗೀತ ವಲಯದಲ್ಲಿಯ ಸಾಧನೆಗಾಗಿ ʻಏಶಿಯಾ ಬುಕ್‌ ಆಫ್  ರೆಕಾರ್ಡ್ʼ ದಾಖಲೆಯಲ್ಲಿ 6 ಬಾರಿ ಹೆಸರು ಸೇರ್ಪಡೆ. ಕನ್ನಡ ಸಾಹಿತ್ಯ ಪರಿಷತ್ತಿನ ʻಕನ್ನಡ ಸೇವಾ ರತ್ನ ಪ್ರಶಸ್ತಿʼ ನಾದಪ್ರವೀಣ, ಕನ್ನಡ ಕಣ್ಮಣಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ. 


 

More About Author