Poem

ವರುಷಕೊಮ್ಮೆ ಹೊಸತು ಹುರುಪು

ಬರಿದಿನಗಳ ಎಣಿಕೆಯಲ್ಲ ಹೊಸವರ್ಷದ ಸಂಭ್ರಮ
ಭೂಮಂಡಲ ಬದಲಾಯಿತು ನವಪಲ್ಲವ ಭೂರಮ ॥ಪ॥

ಹಳೆಯದನ್ನು ಬಿಚ್ಚಿಎಸೆದು ಹೊಸಪತ್ತಲು ಉಟ್ಟಿದೆ
ಹಳೆಬೇರಿಗೆ ಬಲವಿಟ್ಟವು ಹಳೆಎಲೆಗಳು ಒಟ್ಟಿದೆ
ಪಕ್ಕೆಲುವಿವು ಹರಿಕೊಂಬೆಯು ತೆರೆದು
ಮುಚ್ಚುತ್ತಿವೆ ಎಳೆದಳಿರಿವು ಪೊರೆದು

ಒಗರುಂಡವು ಕೋಗಿಲೆಗಳು ಮಾಮರದಲಿ ಕುಳಿತು
ಹೊಸಗಾನವು ಹೊಸವರ್ಷದ ಪಂಚಮದನಿ ಮೊಳೆತು
ಮಾವಿನಫಲ ಗಿಣಿಗಡುಕನ ರುಚಿಯು
ಬಾಂದಳವನು ತೊಳೆದಿಟ್ಟನು ಶುಚಿಯು

ಮಾವುಬೇವು ಗೆಳೆತನದಲಿ ಸಮರಸವಿದೆ ಬದುಕು
ಹೊಸಮಳೆಗಳು ಪೆಳೆಮಳೆಗಳು ಮೃಗಸಂತತಿ ಉಕ್ಕು
ವರುಷಕೊಮ್ಮೆ ಹೊಸತುಹುರುಪು ಧರತಿ
ಪೊರೆಕಳಚಿತು ಹರೆವುಕ್ಕಿತು ಪ್ರಕೃತಿ

ಯುಗಯುಗಕು ಮರುಭರ್ತಿಯು ಒಳಚೇತನ ಹಿಗ್ಗಿ
ಶಾವಿಗೆಯೆಳೆ ಹಾಲುತುಪ್ಪ ಬೆಲ್ಲಬೆರೆತು ಹುಗ್ಗಿ
ನುಗ್ಗೆಕಾಯಿ ಸಾರಿಗಿಳಿದ ಸ್ವಾದ
ಚಿಗುರೆಲೆಗಳು ಅಡಿಕೆ ಸುಣ್ಣ ಮೋದ

ನೇಗಿಲಿಳಿಸಿ ಹೊಸಹೂಟಿಯು ರೈತನೆತ್ತು ಪೂಜೆ
ಹೊಂಗೆಯಮರ ಜೇನ್ಮಳೆಗಿಳೆ ಮಧುಬಟ್ಟಲ ಹೂಜಿ
ಚಿತ್ತಾರದ ನವಚೈತ್ರವು ಹಸಿರು
ಭರವಸೆಗಳು ಬದುಕಿಗೊಂದು ಉಸಿರು

ರಣಗಡಲಲಿ ಬಿಸಿತಾಪಕೆ ತಂಪಿಳಿಸಿದೆ ಕಾರು
ಒಣಭೂಮಿಗೆ ಹಸುರುಕ್ಕಲು ಮುಗುಳಿಕ್ಕಿವೆ ಚಿಗುರು
ಬಾಯ್ದೆರೆದಿರೊ ಕೆರೆಕಟ್ಟೆಯು ತೆರೆದು
ಹುಡಿಮಣ್ಣಿಗೆ ರಾಡಿನೀರು ಹರಿದು

- ಜೀವರಾಜ ಹ ಛತ್ರದ

ಜೀವರಾಜ ಹ ಛತ್ರದ

ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು.  ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 

ಕೃತಿಗಳು: ಖುಷಿ ತರಲಿ ಕೃಷಿ, ಅಕ್ಕಡಿ ಕಾಳು( ವೈಚಾರಿಕ ಲೇಖನಗಳು), ಯಾಲಕ್ಕಿ ಹಾಲಕ್ಕಿ, ರಮ್ಯಗಾನ, ಅನುವಿನು, ದಾಂಪತ್ಯ ಗೀತೆಗಳು, ಜೀವಣ್ಣನ ಆಧುನಿಕ ತ್ರಿಪದಿಗಳು, ಅಸಲಿ ಮಳೆ, ಹನಿ ಹನಿ ಕಾವ್ಯಧಾರೆ, ಮಂಜೂರ್ಶಿ, ಸೂರು ಗುಡ್ಡ, ಉದಯ ರಶ್ಮಿ (ಕವನ ಸಂಕಲನಗಳು)

More About Author