Poem

ವರ್ಷೆ

ನಡಿತಾಳ ನಡೆತಾಳ ತಡೆ
ತಡೆದು ನಡಿತಾಳ......
ಉಬ್ಬಿಸಿ ಎದೆಯ ತಗ್ಗಿಸಿ
ತಲೆಯ

ಕಡುಗಪ್ಪು ಕೂದಲು ನಾಗರ
ಹೆಡೆಯಲಿ ಸಾವಿರ ಹಾದರ
ಪಿಳಿಪಿಳಿಯ ಕಣ್ಣು
ಹರೆಯದ ಹೆಣ್ಣು

ಮುಂದಕ ಬಾಗಿ
ಹಿಂದಕ ತಾಗಿ
ಚೆಲುವಿನಲಿ ನೂರು
ಚಿತ್ತಾರ ಹಾಕಿ

ಸರಸರ ನಡೆತಾಳ
ಸರಕ್ಕನ ತಿರುಗ್ತಾಳ
ಹರೆಯದ ಗಂಡುಗಳ
ಗುಂಡಿಗೆ ಒಡಿತಾಳ

ತಿವಿತಾಳ ಕಣ್ಣಲ್ಲಿ
ಮಿಂಚಿನ ಬಾಣ
ಫಳಫಳ ಹೊಳಿತಾಳ
ಕಣ್ಣು ಕಣ್ಣಿಗೆ ನೂರು ವರ್ಣ!

ಬಂದೆ ಎನ್ತಾಳ
ಬರದೆ ಹೋಗ್ತಾಳ
ಗುಡುಗುಡು ಗುಡುಗಿ
ನಕ್ಕು ಮಾಯವಾಗ್ತಾಳ

ಬರದೆ ಇಲ್ಲದವಳು ದಿಢೀರನ
ಬರ್ತಾಳ
ಹೊತ್ತಿಲ್ಲ ಗಿತ್ತಿಲ್ಲ ಮೇಲಿಂದ
ದುಮುಕ್ತಾಳ

ನೆನೆಸ್ತಾಳ ಹರಿತಾಳ
ಮಾಯಾಂಗಿ ವರ್ಷೆ

ಥೈಥೈ..ಥೈಥೈ...ಥೈಥೈ
ತಾಂಡವ ಆಡ್ತಾಳ;
ಅಶ್ವಿನಿಯ ಸೊಗಸು
ರೋಹಿಣಿಯ ಮನಸು
ಕುಂಭದ್ರೊಣದ ಬಿರುಸು

ಮನಸಿನ ಚಿತ್ತ
ಆರಿದ್ರಾ ಚಿತ್ರ
ಉತ್ತರೆಯ ಮನವು
ಭೂಮಿಯ ಭರಣಿ

ಹೋದಳು ಹಾಗೆ
ಬರ್ಲಿಲ್ಲ ಎನ್ವಾಗ
ತಿರುಗಿ ನೋಡ್ತಾಳ
ಆಸೆಯ ಹುಟ್ಟಿಸ್ತಾಳ

ಮುಳುಗಿದವರು ಎಷ್ಟೋ
ಬದುಕಿದವರು ಎಷ್ಟೋ
ಮಾಯ..ಯಮ..ಮಾಯಾಂಗಿನಿ!

ಈಕೆಯೇ ಜೀವ
ಈಕೆಯೇ ದಾಹ
ಒಡಲಾಳುವವಳು
ಒಡಲ್ಹರಿಯುವವಳು

ವರ್ಷ ವರ್ಷದವಳು
ಧರೆಯ ಮಗಳು!

- ಕೊಟ್ರೇಶ್ ಅರಸೀಕೆರೆ

ಕೊಟ್ರೇಶ್ ಅರಸೀಕೆರೆ

ಕವಿ ಕೊಟ್ರೇಶ್ ಅರಸೀಕೆರೆ ಅವರು 1975ರಲ್ಲಿ ಅರಸೀಕೆರೆಯಲ್ಲಿ ಜನಿಸಿದರು. ತಂದೆ ನೀಲಕಂಠ ಸ್ವಾಮಿ, ತಾಯಿ ಸುಗುಣಾಂಬ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ವನ್ನು ಅರಸೀಕೆರೆಯಲ್ಲಿಯೇ ಪೂರೈಸಿದರು. ಅರಸೀಕೆರೆಯಲ್ಲಿ ಸಣ್ಣದೊಂದು ಬೆಣ್ಣೆ ದೋಸೆ ಕ್ಯಾಂಟೀನ್ ನಡೆಸುತ್ತಿದ್ದಾರೆ. ಸಾಹಿತ್ಯ, ರಂಗಭೂಮಿಯಲ್ಲಿಯೂ ಆಸಕ್ತರು. ‘ಭವಸಾರ’ ಅವರ ಚೊಚ್ಚಲ ಕವನ ಸಂಕಲನ.

More About Author