Story

ವಿಭವಾಂತರ

ಅವನು ಹೀಗೆ ಮಾತನಾಡುತ್ತಾನೆ ಎಂದುಕೊಂಡಿರಲಿಲ್ಲ ಅವಳು. 
ಅವನ ಬುಲೆಟ್ ಹಿಂದುಗಡೆ ಕುಳಿತ ಅವಳ ಕಂಗಳು ಹುಡುಕುತ್ತಿದ್ದುದ್ದು, ಔಷಧ ಅಂಗಡಿಯನ್ನು. ಮುಂದೆ ಅನತಿ ದೂರದಲಿ, ಔಷಧ ಅಂಗಡಿಯನ್ನು ಕಂಡು ಕೂಗಿದ. ಅವಳಿಗೆ ಹೀಗೆ ಮಾತಾಡಿದ್ದ. ಅವಳೋ ಕ್ಷಣ ಮಬ್ಬು, ಟ್ಯೂಬ್‌ಲೈಟ್. ಆ ಕ್ಷಣದಲ್ಲಿ ಅವಳ ಪ್ರತಿಕ್ರಿಯೇ ಹೌದಾ ಎನ್ನುವ ಗುಣವಾಗಿತ್ತು. ಆದರೆ ಅವನ ಮಾತು. ತನ್ನ ನೆಲದ ಬುಡವನ್ನು ಅಳ್ಳಾಡಿಸುತ್ತಿದೆ ಎಂದುಕೊಂಡಿರಲಿಲ್ಲ ಅವಳಿಗೆ. ಇಲ್ಲಿಂದ ಸುಮಾರು 300ಕಿ.ಮಿ ದೂರದ ಊರು ಅದು. ಅವನ ಜೊತೆ ಹೇಗೆ ಹೋಗುವದು, ಅವನ ಜೊತೆ ಹೇಗೆ ಮಾತಾಡುವದು, ಅವನ ಇನ್ನೊಂದು ಮುಖವನ್ನು ಹೇಗೆ ನೋಡುತ್ತ ಹೋಗುವದು, ಆದರೂ ಹೋಗಲೇಬೇಕು ಇಲ್ಲವಾದರೆ ತನ್ನ ಸೋಲಾಗುತ್ತದೆ. ಸೋಲೆಂದರೆ ನೈತಿಕತೆಯನು ಹೊಸಕಿ ಹಾಕುವದೆ? ನೈತಿಕತೆ ಎಂದರೆ, ಅವನು ಹೇಳುವದಕ್ಕಿಂತ ಪೂರ್ವದಲಿ ತಾವು ಹೊರಟಿರುವ, ಅಥವಾ ತೀರ್ಮಾನಿಸಿ ಹೊರಟಿರುವ ಸಂಗತಿಯೂ ನೈತಿಕತೆಯ ಪರಧಿಯೊಳಗೆ ಬರುತ್ತಿದೆಯೇ ಎಂದು ಯೋಚಿಸಿದಳು. ಹಾಗಾದರೆ ತನ್ನ ಗೆಳತಿಯರು ಕೊಟ್ಟ ಈ ನೈತಿಕತೆಯ ವ್ಯಾಖ್ಯಾನವೇನು ಎಂದು ಯೋಚಿಸಿದಳು.  ಆ ರಕ್ಷಾಕವಚ ನಮ್ಮನ್ನು ಇನ್ನೂ ಪವಿತ್ರವಾಗೇ ಇಡುತ್ತದೆ. ನಾವು ಗೌರಮ್ಮರಾಗೆ ಇರಬಹುದು. ನಮ್ಮ ಆಸೆ ಆಕಾಂಕ್ಷೆಗಳು ಈಡೇರಿದರೂ. ನಿನ್ನ ಶೀಲದ ಬಗ್ಗೆ ಯೋಚನೆ ಬೇಡ,
ಅವನ ಬುಲೆಟ್, ಈ ದೊಡ್ಡದಾದ ನಗರದಿಂದ ಈಗಾಗಲೇ ಹೊರಹೋಗಿ ಆ ಹಸಿರು ಹಾಸಿನ ಅದ್ಭುತ ಹಳ್ಳಿಗಳನ್ನು ದಾಟುತ್ತಿತ್ತು. ಅವಳು ಅವನನ್ನು ಮರೆತು. ಆ ಪ್ರಕೃತಿಯಲಿ ಒಂದಾಗಿದ್ದಳು. ಕಭಿ ಖುಷಿ, ಕಭಿಗಮ್, ಅವಳ ಮನದಲಿ ಮೂಡಿದ ವಿಷಾದದ ಛಾಯೆಯಿಂದ ಹೊರಬರಲು, ಹಸಿರು ಸಹಾಯ ಮಾಡಿತ್ತೇನೋ. ಆದರೆ, ಅವನ ಮಾತಿನ ಈಟಿ? ಅವನ ಮಾತುಗಳು ಸಂವಹನವನು ಕಟ್ಟಿಹಾಕಿದ್ದವು. ಅಗಾಧವಾದ ಆ ಬಯಲಿನಲಿ ಈ ಬುಲೇಟಿನ ಶಬ್ದ ಮತ್ತು ಗಾಢ ಮೌನಗೆಳೆರಡು, ಜಿದ್ದಿಗೆ ಬಿದ್ದಂತೆ ಮಾತಾಡುತ್ತಿದ್ದವು. ಆದರೆ ಈ ಎರಡು ಹೋಮೋ ಸೇಪಿಯನ್ಸ್ ಮಧ್ಯ ಯಾವುದೇ ಸಂಭಾಷಣೆಗಳಿಲ್ಲ. ಮಾತುಕತೆಗಳಿಲ್ಲ, ಅವನಿಗೆ ಏನನ್ನಿಸಿತೋ. ಯಾಕೋ ಮಾತಾಡುತ್ತಿಲ್ಲ ನೀನು ಎಂದ, ಅವಳು ಮಾತಿಗಿಂತಲೂ ಮೌನವೇ ಸುಂದರ ಎಂದಳು, ಕ್ಷಣ ನಕ್ಕು ನಾಳೆಯ ಬಗ್ಗೆ ಕನಸು ಕಾಣುತ್ತೀಯೋ ಎಂದ ಮತ್ತೆ ಕ್ಷಣಹೊತ್ತು ಮೌನ ಆವರಿಸಿತು. ಇಬ್ಬರ ಮಧ್ಯ ಮೂಢ ನೀರರಳುಗಟ್ಟಿದಂತೆ ಕಂಡಿತು, ಅವನು ಮತ್ತೆ ಕೇಳಿದ ನಾಳೆಯ ಬಗ್ಗೆ ಕನಸು ಕಾಣುವೆಯಾ? ಆ ಪ್ರಶ್ನೆಗೆ ಉತ್ತರಿಸಬೇಡವೆಂದರೂ ಅವನ ಪ್ರಶ್ನೆಗೆ ಉತ್ತರಿಸಲೇಬೇಕಾಗಿತ್ತು ಇಲ್ಲ ನಿನ್ನೆಯ ಬಗ್ಗೆ ಭಯಪಡುತ್ತಿದ್ದೇನೆ ಎಂದಳು. 

 ನನಗೆ ಅರ್ಥವಾಗಲಿಲ್ಲ. ಅದು ನಿನಗೆ ಅರ್ಥವಾಗದ ಪ್ರಪಂಚವೇ. ಎಂದರೆ. ನನ್ನ ತಾತ ಆತನ ಏಕತಾರಿ, ಆತನ ಮಗ ಆದರ್ಶ ಶಿಕ್ಷನಾದ ನನ್ನ ಅಪ್ಪ ಎಂದಳವಳು. ಅವನಿಗೆ ಬೋರ್ ಎನ್ನಿಸಿತು. ನಿನ್ನ ಏಕತಾರಿ ದ್ವಿದಾರಿ ಬಿಡು. ನಾಳೆಯ ಬಗ್ಗೆ ಯೋಚಿಸು ಎಂದ, ಅವನ ಜೊತೆ ಮಾತಾಡುವದೇ ತಪ್ಪು ಎಂದು. ಬರೀ ಹಸಿರಿನೊಳಗಡೆ ಕಂಗಳನು ನೆಟ್ಟಳು. ಅದೊಂದು ಸುಂದರ ಹಸಿರು ಹಾಸು. ಆ ಬೆಟ್ಟದ ಹಸಿರು ಹಾಸು ಅವಳ ಕಂಗಳ ಮುಖಾಂತರ ಮನಸೇರಿ. ಘನವಾಯಿತೋ ದ್ರವವಾಯಿತೋ ಅನಿಲಾಯಿತೋ ಅವಳ ಮನದಲಿ ಸ್ಥಾಯಿಯಾಯಿತೋ, ಇದು ಅವಳಿಗೆ ಅದು ಸತ್ ಚಿತ್, ಆನಂದದ ಪರಮೊಚ್ಚ ಗಳಿಗೆ. ಆ ಗಳಿಗೆಯಲಿ ಯಾವ ಪರಿವೆಯೂ ಬೇಕಾಗಿರಲಿಲ್ಲ. ಅವಳು ಆ ಪರಿಸರ ಏಕತಾರಿಯಾದ ಅವಳ ತಾತ, ಸೂಲಗಿತ್ತಿಯಾಗಿದ್ದ ಅವರ ಅಜ್ಜಿ, ಆ ಏಕತಾರಿಯಿಂದಲೇ ತನ್ನಪ್ಪನನ್ನು ಬದುಕಿಸಿದ್ದು ಮತ್ತು ಆತನಿಗೆ ಒಂದು ನೌಕರಿಸಿಗುವಂತೆ ಮಾಡಿದ್ದು. ಅವರ ಅಜ್ಜಿಯಂತೂ ಈ ಭೂಮಂಡಲಕೆ ಎಷ್ಟು ಜೀವಗಳು ಬರಲು ಸಹಾಯ ಮಾಡಿದವಳು, ಛೆ ನಾನು ನಿಯೋ ಮಾಡರ್ನ ಮಾರಲಿಟಿ ಭಾಗವಾಗಿ ಹೋದನೇ ಎಂದು ನೊಂದುಕೊಂಡಳು ಆಕೆ. ಅವನ ಗಾಡಿ ರಭಸದಿಂದ ಓಡುತ್ತಿತ್ತು. ಅವನಿಗೆ ಗುರಿ ಮುಟ್ಟುವ ತವಕ, ಅವನಿಗೆ ಅರ್ಜಂಟಾಗಿ ಎಲ್ಲವನು ತನ್ನದಾಗಿಸಿಕೊಳ್ಳುವ ತವಕ. ಅವಳಿಗೆ ತನ್ನ ಬಗ್ಗೆ ತನಗೆ ಭಯಾನಕ ಸಿಟ್ಟು ಬಂತು. ಜೀವ ಸ್ಪಷ್ಟಿಸುವ ಜೀವ ತೆಗೆಯುವ ಪ್ರಕ್ರಿಯೆಯ ಒಂದು ಜನಾಂಗದ ಮಧ್ಯದ ಗೆರೆಯಲಿ ತಾನು ನಿಂತಿದ್ದೇನೆ ಎಂದುಕೊಂಡು ಆ ಬೈಕಿನಿಂದ ಜೋರಾಗಿ ಜಿಗಿದು ಆ ರೋಡಿನ ಪಕ್ಕದಲ್ಲಿರುವ ಹುಲ್ಲು ಹಾಸಿನ ಮೇಲೆ ಬಿದ್ದಳು. ಅವನಿಗೆ ಏನು ಮಾಡಬೇಕು ತಿಳಿಯಲಿಲ್ಲ ಏಕೆ ಜಿಗಿದಳೋ? ಏಕೆ ಬಿದ್ದಳೋ? ತನ್ನ ರಭಸದ ಗಾಡಿಯ ಓಟದಿಂದ ಇಂಥಹ ಅನಾಹುತ ಆಯಿತೋ? ಎಂದು ಪಕ್ಕದಲಿ ಗಾಡಿ ನಿಲ್ಲಿಸಿ ಅವಳು ಬಿದ್ದ ಜಾಗಕ್ಕೆ, ಓಡಿ ಹೋದ, ಆದರೆ ಆ ಹುಲ್ಲಿನ ಹಾಸಿಗೆೆಗೆ ದೇಹ ಬಡಿದು ಗಾಯಗಳಾಗಿರಲಿಲ್ಲ, ಅವಳು ಸುರಕ್ಷಿತವಾಗಿದ್ದಳು. ಅವನು ಅವಳಿಗೆ ನೀರು ಕುಡಿಸಿದ ತಲೆ ಸವರಿದ, ನಾನು ನೀನು ಸತ್ತೇ ಎಂದು ಗಾಭರಿಯಾಗಿದ್ದೆ ಎಂದು ಹೇಳಿದ.
ನಾನು ಸತ್ತರೆ ನಿನ್ನ ಮೇಲೆ ಕೇಸು ಆಗುತ್ತದೆ ಎಂದು ಭಯವಾಯಿತೋ ಅಂದಳು ? ಅವನು ಅಯ್ಯೋ ಶಿವನೆ ? ನನ್ನ ಬಂಧಿಸುವವರು ಯಾರು ? ಎಂದ. ಅವಳ ಸಾವಿನ ನಂತರವೂ ಪಾರಾಗಬಹುದಾದ ಆತ್ಮವಿಶಾಸ ಅವನಲ್ಲಿತ್ತು. ಅವಳು ಸತ್ಯದ ಅದಮ್ಯ ನಗಾರಿ ಬಾರಿಸಿದ್ದಳು. ಅವನು ಇದರಿಂದ ಹೊರಬಂದು ಮತ್ತೆ ಸಾವರಿಸಿಕೊಂಡು. ನಿನಗೆ ಬುದ್ಧಿ ಇದೆಯಾ? ಯಾಕೆ ಜಿಗಿದೆ ಬೈಕಿನಿಂದ? ಒಂದು ವೇಳೆ, ಹುಲ್ಲು ಹಾಸು ಇಲ್ಲದಿದ್ದರೆ, ನೀನು ಕೈಲಾಸಕ್ಕೆ ಹೋಗುತ್ತಿದ್ದೆ ಎಂದ. ಅವಳು ಏನು ಆಗಿಲ್ಲವೆಂಬಂತೆ, ಆ ಹಚ್ಚ ಹಸಿರು ನೋಡುತ್ತ ನಿಂತಳು. ಬಯಲು ಒಂದು ದೇವ್ರು ಐತಿ, 
ಅದು ಬಿಟ್ಟು ಏನಾದೋ ಏನಾದೋ, ಏನಾದೋ 
ಬಯಲು ಒಂದು ಬೃಹ್ಮ ಐತಿ ಅದು ಬಿಟ್ಟು ಏನಾದೋ, ಏನಾದೋ, ಏನಾದೋ 
ಎಂದು ಜೋರಾಗಿ ಕೂಗಿದಳು. ಅವಳ ಕೂಗು ಆ ಒಂಬತ್ತು ಪರ್ವತಗಳ ಹಂಚನ್ನು ತಲುಪಿ ಮತ್ತೆ ಪ್ರತಿಧ್ವನಿಸ ಹತ್ತಿತ್ತು. 
ಅವನು ಅವಳನ್ನು ಆಸೆಗಣ್ಣಿನಿಂದ ನೋಡುತ್ತ ಕುಳಿತ. ಒಂದು ಕ್ಷಣದ ನಂತರ ಅವಳೋ ಮತ್ತೆ ಕೂಗಿದಳು. ಅಹಂ ಬ್ರಹ್ಮಾಸ್ಮಿ ಎಂದು. ಆಕೆ ಆ ಪರ್ವತ ನದಿ ತಪ್ಪಲಿನಲಿ ಒಂದಾಗಿದ್ದಳು, ಇವನಿಗೆ ಇವಳನು ತನ್ನ ಪರಪಂಚಕ್ಕೆ ತರುವದು ಹೇಗೆ ಎಂದು ಚಿಂತೆಯಾಯಿತು. ಅವನು ಹೇಳಿದ ಬೆಟ್ಟ ಗುಡ್ಡ ನದಿಯ ನೋಡಿ ನೀನು ಇಷ್ಟು ಪುಳಕಗೊಳ್ಳುವಿಯಾದರೆ, ನಾಳೆಯಿಂದ ಆ ಸ್ವರ್ಗದಲಿ ಎಂಟು ದಿನಗಳ ಕಾಲ ಇರುತ್ತೇವೆ, ಆ ಬಗ್ಗೆ ಯೋಚಿಸಿದ್ದೆಯಾ? ಎಂದು. ಅಷ್ಟರಲ್ಲೆ ಅವಳಿಗೆ ಕಾಡಿ ಜೀ ಎಂದು ಬೇಡಿ  ಹೋಗೋಣ ನಡೆ ಎಂದು ಅವಳನ್ನು ಕುಳ್ಳಿರಿಸಿಕೊಂಡು ಹೊರಟ. ಅವಳಿಗೆ ಈಗ ಹೋಗುವ ದಿಕ್ಕೆ ಬೇಡವಾಗಿತ್ತು. ಯಾವುದಾದರೂ ಮಾಯಾವಿ ಟ್ರಕ್ಕು ಇಬ್ಬರನು ಕೊಂದು ಬಿಡಬಾರದೆ ಎಂದು ಯೋಚಿಸಿದಳು, ಯಾವುದಾದರೂ ರಣಸಿಡಲು ಬಡಿಯಬಾರದೆ ಎಂದು ಅಂದುಕೊಂಡಳು, ಕ್ಷಣದಲ್ಲೆ ಎದುರಿಗೆ ದೊಡ್ಡದಾದ ಸೇತುವೆ ಕಾಣಿಸಿತು, ಅದೊಂದು ಅದಮ್ಯ ಸಮುದ್ರದಂತಹ ನದಿ. ಸುಮಾರು ಹತ್ತು ಕಿ.ಮಿ. ವರೆಗಿನ ಸೇತುವೆ ಅದು. ಅವಳು ನದಿ ನೋಡಿ ಮತ್ತೆ ಪುಳಕಕೊಂಡಳು. ಅದಕ್ಕೆ ತುಂಗಾ ಹೊಳಿ ಎನ್ನುತ್ತಾರೆ ಎಂದು ದನ ಕಾಯುವ ಆ ಹುಡುಗ ಹೇಳಿದ. ಅವನ ಕೈಯ್ಯಲ್ಲಿ ಆಗೇ ಜನಿಸಿದ ಕಂದಮ್ಮ ಕರು ಇತ್ತು. ಆ ಹೊಳಿಯ ದಡದಲಿ ಮೀನುಗಾರರ ಸಂಕುಲವೆ ವಾಸಿಸಿತ್ತು. ಆ ಹೊಳೆಯ ದಂಡೆಯ ಮೇಲೆ ಕೊಂಚ ಕಾಲ ತಂಗೋಣ ಎಂದು ಅವನನ್ನು ಕರೆದುಕೊಂಡು ಹೋದಳು. ಅವಳಿಗೆ ಅವನ ಬಿಟ್ಟು ಕ್ಷಣಾರ್ಧದಲ್ಲಿ ಒಂದು ಸುಂದರ ಪ್ರಪಂಚ ಸೃಷ್ಟಿಸಿಕೊಳ್ಳಬೇಕಾಗಿತ್ತು. ಅದಕ್ಕಾಗಿ ಕ್ಷಣ ಕ್ಷಣಕ್ಕೂ ಪರ್ಯಾಯ ಜಗತ್ತಿನಲಿ ಲೀನವಾಗ ಹತ್ತಿದಳು, ನದಿಯನು ತದೇಕ ಚಿತ್ತದಿಂದ ನೋಡಿದಳು, ಈ ನದಿಯದು ತಿಳಿಯಾದ ಸುಂದರ ಭಾಷೆ ಎನ್ನಿಸಿತು. ಸಿಟ್ಟು ಬಂದಾಗ ಗುಡುಗುತ್ತದೆ. ಬೆಳ್ದಿಂಗಳಿಗೆ ಉಕ್ಕೇರುತ್ತದೆ ಮುಂಜಾನೆಯ ಗೋಪಾಲಕರ ಕೊಳಲಿಗೆ ತಣ್ಣನೆಯ ಆಲಾಪ ಹಾಡುತ್ತದೆ ಸಂಜೆ, ಸೂರ್ಯನ ಸಾವಿಗೆ ಶ್ರದ್ಧಾಂಜಲಿಯಲಿ ಭೈರವಿ ರಾಗ ಹಾಡುತ್ತದೆ, ಈ ನದಿಯು ತನ್ನ ವಿಭವಾಂತರದ ಕತೆ ಹೇಳುತ್ತದೆ ಎನ್ನಿಸಿತು, ಜಗದ ಎಲ್ಲಾ ಸ್ನೇಹಿತರಿಗಿಂತ, ಸಂಬಂಧಿಗಳಿಗಿಂತ ಅಣ್ಣ ತಮ್ಮಂದಿರಿಗಿಂತ ಈ ತುಂಗಾ ಹೊಳಿ ಶ್ರೇಷ್ಟ ಎನ್ನಿಸಿತು ಆ ಕ್ಷಣ. ಆ ಹೊಳೆಯ ಮೇಲೆ ತನ್ನ ತಾತ ಕೇಶಪ್ಪಯ್ಯ ಅಪ್ಪ ಶಿವಯ್ಯಾ ಅಜ್ಜಿ ಸೂಲಗಿತ್ತಿ ಯಮುನಮ್ಮ ಇಲ್ಲೆ ಓಡಾಡುತ್ತಿದ್ದಾರೆ ಎಂದೆನಿಸಿತು, ಒಂದು ಮೂಲವೊಂದು ಟ್ರಣ ಟ್ರಣ ಎಂದು ಜಿಗಿದು ಮಾಯಾವಾಯಿತು. ಆ ಕಡೆ ನವಿಲುಗಳ ಕೂಗು ಕೇಳಿಸಹತ್ತಿತ್ತು. 
ಅವಳಿಗೆ ಈ ಸ್ವರ್ಗ ಸುಖಕ್ಕಿಂತ ಇನ್ನೊಂದು ಸ್ವರ್ಗ ಉಂಟೆ ಎಂದೆನಿಸಿತು. ಅವನು ಹೇಳುವ ಆ 8 ದಿನದ ಸ್ವರ್ಗಕ್ಕೆ ಬೆಂಕಿ ಹಚ್ಚಬೇಕು. ಇದರಲ್ಲೇ ಲೀನವಾಗಬೇಕು ಎಂದು ಆ ತುಂಗಾ ಹೊಳಿಯ ದಂಡೆಗೆ ಹೋಗಿ ಭೊಗಸೆಯಲಿ ನೀರು ತುಂಬಿಕೊಂಡು ಮನಸೋ ಇಚ್ಚೆ ಕುಡಿದಳು. ಬಿಸಿಯಾದ ಕಂಗಳ ಶ್ವಾಸಕ್ಕೆ ತಾಗಿ ತಣ್ಣಗೆ ಮನಸ್ಸಂತೂ ಸಾವಧಾನ ಚಿತ್ತಕ್ಕೆ ಬಂದಿತ್ತು. ಎಷ್ಟು ಸುಂದರ ಸಮುದ್ರದ ಹಾಸು ಅದು ಅಲ್ಲಲ್ಲಿ ನಡು ಮುರಿದು ನಿಂತ ತೆಂಗಿನ ಗಿಡಗಳು, ಅನತಿ ದೂರದಲಿ ಗುಡಿಸಲುಗಳು, ಹೊಳೆಯ ನಟ್ಟ ನಡುವೆ ಮೀನುಗಾರರ ಮೀನು ಹಿಡಿಯುವ ಪರಿ, ಆಗಲೇ ಸಂಜೆ ನಾಲ್ಕಾಗಿರಬಹುದು, ಒಬ್ಬ ಮಧ್ಯ ವಯಸ್ಕ ಬಂದು ಹೊಳೆಯ ಆಚೆ ತುಂಗಾ ಹುಣಚೇಡಿಗೆ ಹೋಗಬೇಕೆ. ನಾನು ಬಿಡುತ್ತೇನೆ ಬನ್ನಿ ಎಂದ, ಇವನೇ ತಕ್ಷಣ ಬಾಯ್ದೆರದು ಹೇಳಿದ. ತಡೆದ ಮನಸು ತಡೆದ ಮಳೆಯಂತೆ ಸ್ಪೋಟಿಸಿತ್ತು. ಇಲ್ಲ ನಾವು ಆ ಕಡೆ ಹೋಗುವವರೇ ಅಲ್ಲ ನಮ್ಮ ದಾರಿ ಇಲ್ಲಿಂದ ಗೋಕರ್ಣದ ಬೀಚುಗಳತ್ತ ನೇರವಾಗಿ ಅಲ್ಲೊಂದು ಸ್ವರ್ಗವಿದೆ ಆ ಸ್ವರ್ಗಕ್ಕೆ ಎಂದು ನಕ್ಕ.  ಆದರೆ ಅವಳು ಈ ಹೊಳಿಯಲಿ ಒಂದಾಗಿದ್ದಳು ಅವಳಿಗೆ ಅಕ್ಕ ಆ ಕದಳಿಯಲಿ ಒಂದಾದಂತೆ ಒಂದಾಗುವ ಮನಸ್ಸಾಯಿತು. ಆನಂದ ಮತ್ತು ದುಃಖದ ಉತ್ಕಟತೆಯಲಿ ತಾತ ಹಾಡುತ್ತಿದ್ದ ಆ ಹಾಡು ನೆನಪಾಗಿ ಅವಳು ಹಾಡ ಹತ್ತಿದಳು, ಅಂಬಿಗರು ಕುಳಿದು ಕುಪ್ಪಳಿಸಿದರು.
ಕದಳಿ ಎಂಬ ಅಡವಿಯೋಳಗೆ ಮನೆ ಮಾಡಿದಳು ಅವಳು
ಅಡವಿ ಎಂಬ ಕದಳಿಯೊಳಗೆ ಮನೆ ಮಾಡಿದಳು ಅವಳು
 ಯಾವುದು ಅಡವಿ ಯಾವುದು ಕದಳಿ ಬಿಟ್ಟಂತ ಮಾತ್ಮರಿಗೆ 
ಜೀವದ ಮುಕತಿ ಇದರಲ್ಲಿ ಇದೆ ತಿಳಿದಂತ, ಮಹಾಂತರಿಗೆ, 
ಅವಳ ಹಾಡಿಗೆ ಆ ಅಂಬಿಗ ಸಮೋಹವೆಲ್ಲ ಕುಳಿದು ಕುಪ್ಪಳಿಸಿತು. ಕ್ಷಣ ಆ ತುಂಗಾ ಹೊಳಿಯು ಅವಳ ಹಾಡನ್ನು ಪುನರಪಿಯಾಗಿ ಹಾಡಿ ಹಾಡಿ ನಲಿದಾಡಿತು. ಆ ಅಂಬಿಗ ಸಮೂಹವೇ ಇವರಿಗೆ ಪರಿಚಯವದವರಂತೆ. ವರ್ತಿಸತೊಡಗಿದರು.. ರಾಮಯ್ಯನೆಂಬ ಅಂಬಿಗ ಇವರನ್ನು ತನ್ನ ಮನೆಗೆ ಚಹಾ ಕುಡಿಯಲು ಆಹ್ವಾನಿಸಿದ. ಅವಳೋ ಕರೆದವರ ಮನೆಗೆ ಹೊರಡುವವಳೇ ಆದರೆ ಅವನು ಗುರಿ ಮುಟ್ಟುವವರೆಗೂ ನಿಲ್ಲದ ಗುರಿಕಾರ. ಆಗಲೇ ಹೇಳಿದ, ನೋ ವುಯ್ ಆರ್ ಲೇಟ್ ಆಲ್ ರೆಡಿ ಎಂದ. ಲೇಟ್ ಆಗಲು ಏನಿದೆ. ಈ ಗುಡಿಸಲಲಿ ಚಹಾ ಕುಡಿದು ಹೋಗೋಣ. ಆ ಮುದುಕ ಪ್ರೀತಿಯಿಂದ ಕರೆಯುತ್ತಿದ್ದಾನೆ ಎಂದು ಆ ಮುದುಕನ ಹಿಂದೆ ನಡೆದೇ ಬಿಟ್ಟಳು. ಅವನು ಮುಖ ಸಪ್ಪೆ ಮಾಡಿಕೊಂಡು ಅವಳನ್ನು ಹಿಂಬಾಲಿಸಿದ, ರಾಮಯ್ಯನ ಮನೆಯ ತುಂಬಾ ಮೀನಿನ ವಾಸನೆ ಚಹಾದ ಜೊತೆ ಮೀನನ್ನು ಹುರಿದುಕೊಟ್ಟ. ರಾಮಯ್ಯ ತನ್ನ ಶ್ರಮದ ಫಲದಿಂದ ಅಗತ್ಯಕ್ಕಿಂತ ಹೆಚ್ಚು ವಯಸ್ಸಾದವನಂತೆ ಕಂಡ, ಇವರ ಅಪ್ಪನ ವಯಸ್ಸಿನವನಿರಬಹುದು. ಆದರೆ ಅಜ್ಜನಂತೆ ಕಾಣುತ್ತಿದ್ದ. ರಾಮಯ್ಯ ಅವನ ಹೆಂಡತಿ ಸರೋಜಮ್ಮ ಹಾಗೂ ಇಬ್ಬರು ಗಂಡು ಮಕ್ಕಳಿರುವ ಸಂಸಾರವದು. ರಾಮಯ್ಯನ ಹೆಂಡತಿ ಸರೋಜಮ್ಮ ಆ ಊರಿನಲಿ ಸೂಲಗಿತ್ತಿ ಇದಕ್ಕೆ ಏನು ಕೊಡುತ್ತಾರೆ? ಕೊಡುತ್ತಾರೆ 200-300 ರೂಪಾಯಿಗಳು ಗಂಡಾದರೆ ಸಾವಿರವರೆಗೂ ಕೊಡುತ್ತಾರೆ ಹೆಣ್ಣಾದರೆ 200-300 ರೂ.ಗಳು ಮಾತ್ರ ಎಂದು ಹೇಳಿ ಎದ್ದು ನೀರು ತರಲು ಹೋದಳು. 
ಅವನಿಗೆ ಆಗಲೇ ಸಿಟ್ಟು ಬಂದಿತ್ತು ವಿಜ್ಞಾನವಿದೆ, ಪ್ರಸೂತಿ ಶಾಸ್ತೃವಿದೆ. ಅದನ್ನು ಬಿಟ್ಟು ಇವರು ಮಾಡುವದು ನನಗೇಕೋ ಸರಿ ಕಾಣಿಸದು ಎಂದು ಬಿರಬಿರನೆ ಹೊರ ನಡೆದ ಇಲ್ಲಿ ಗರ್ಭ ತೆಗೆಯುವರು ಇದ್ದಾರಂತೆ ನಾಟಿ ಔಷಧಿಯ ಮುಖಾಂತರ ಎಂದಳು. ಇದನ್ನು ಅವನು ಕತ್ತೆತ್ತಿ ಕೇಳಿಸಿಕೊಂಡ, ಶಿವ...ಶಿವ... ಅದನ್ನು ಮಾಡುವರು ಉಳಿಯುವರೇ ಇದು ಶಿಶು ಹತ್ಯೆ ಮಹಾಪಾಪ, ಎಂದು ಸರೋಜಮ್ಮ ಹೇಳಿದಳು, ಅವಳಿಗೆ ಕೇಳಿದ ಪ್ರಶ್ನೆ ಅವಳನು ಜಂಕಿಸಬೇಕೆಂದು ಅಲ್ಲ ನೋಯಿಸಬೇಕೆಂದು ಅಲ್ಲ ಅವನಿಗೆ ಅರ್ಥೈಸಬೇಕಾಗಿರುವದರಿಂದ ಈ ಪ್ರಶ್ನೆ ಕೇಳಿದ್ದಳು, ಅವನ ತಾಳ್ಮೆಯ ಕಟ್ಟೆ ಒಡೆದಿತ್ತು ನೀನು ಏನು ಮಾತಾಡುತ್ತಿರುವೆ ಇವರ ಜೊತೆ ಎಂದ ಜೋರಾಗಿ. ಅವಳು ಅವನ ಮಾತಿಗೆ ಪ್ರತಿರೋಧ ಒಡ್ಡದೆ. ಅವರ ಜೊತೆ ನೇರವಾಗಿ ಮಾತಾಡಿದಳು. ನಾನು ಈ ಒಂದು ದಿನ ನಿಮ್ಮ ಮನೆಯಲಿ ತಂಗಬಹುದೇ? ಎಂದಾಗ ಅವನ ಅಸಹನೆ ಮುಗಿಲು ಮುಟ್ಟಿ ಛೆ... ಎಂದು ಶಥಪಥ ಹಾರ ತೊಡಗಿದ. ರಾಮಯ್ಯನೆ ಉತ್ತರಿಸಿದ ಈ ವಾಸನೆ ಛಳಿ ನೀವು ತಡೆದುಕೊಳ್ಳುವುದಾದರೆ ಇರಬಹುದು ಎಂದ. ಅವಳಿಗೆ ಇದಾವ ವಾಸನೆ. ಬಿಕ್ಷೆ ಎತ್ತುವವರ ಮನೆಯಲ್ಲಿ ಹುಟ್ಟಿದವಳು ತಾನು ಅಂತವಳಿಗೆ ಇದಾವ ಅಂಥಹ ವಾಸನೆ ಎನ್ನಿಸಿತು. ಆದರೆ ಅವನ ಸಿಟ್ಟು ನೆತ್ತಿಗೇರಿತ್ತು ನೀನು ನನಗೆ ಕಾಡಿಸಲೆಂದೆ. ಈ ರೀತಿ ನಾಟಕ ಮಾಡುತ್ತೀಯಾ ನಿನ್ನೆಯಿಂದ ನಾನು ನೋಡುತ್ತಿದ್ದೇನೆ. ತಪ್ಪಿಸಿಕೊಳ್ಳುವುದರಲ್ಲೆ ಕಾಲಹರಣ ಮಾಡುತ್ತಿದ್ದೀಯ. ನೀನು ಬೇಕಾದರೆ ಇಲ್ಲೇ ಇರು. ಒಂದು ಲಾಡ್ಜು ನೋಡಿ ಅಲ್ಲಿ ಮಲಗಿ ಮುಂಜಾನೆ ಬರುತ್ತೇನೆ. ಇನ್ನೊಂದು ತಿಳಿದಿಕೋ? ದಿನಕ್ಕೆ 3000 ರೂ.ಗಳ ಬಾಡಿಗೆ ಆ ರೆಸಾರ್ಟಿಗಾಗಿ ಕಟ್ಟುತಿದ್ದೇವೆ. ಆಗಲೇ ಒಂದು ದಿನ ವ್ಯಯಿಸಿದ್ದೇವೆ. ಆ ರೆಸಾರ್ಟಿನವರು ಬಿಡದೆ ಕಾಲ್ ಮಾಡುತ್ತಿದ್ದಾರೆ ನೋಡು ನೀನು ತಿಳಿಯಬೇಕು ನಾನು ಉಳಿಯಬೇಕು ಎಂದು ಬುಲೇಟ್ ಹತ್ತಿ ಹೊರಟು ಹೋದ... ಅವಳೀಗ ಸಾವಿರಾರು ವರ್ಷಗಳ ಸ್ವಾತಂತ್ರ ಒಮ್ಮೆಲೇ ಸಿಕ್ಕಂತಾಯಿತು. ಆ ಜಗದಲಿ ಅಪಸವ್ಯವೊಂದು ತೊಲಗಿದಂತಾಯಿತು. ನದಿ ಭರಗುಟ್ಟುವ ಶಬ್ಧ ಕಿವಿಗೆ ಕೇಳುತ್ತಿತ್ತು. ನದಿಯ ಪಾತ್ರ ಎಂಥಹ ಜನರನು ಸಾಕುತ್ತದೆ? ದುಡಿದು ತಿನ್ನುವ ಜನ, ಪ್ರಾಣಿ, ಪಶು, ಪಕ್ಷಿ ಸಂಕುಲ, ಸರಿಸೃಪಗಳು, ರೈತಾಪಿ ಜನ. ಎಲ್ಲರೂ ಸಮಾವಿಷ್ಠಗೊಂಡ ಪ್ರದೇಶ ಇದೇ ಇರಬಹುದೇ ಎನ್ನಿಸಿತು. ತಾನು ಸಂತ್ರಸ್ಥೆಯಾಗಿ ನದಿಯ ದಂಡೆಗೆ ಬಂದಿದ್ದು ತಿಳಿಯಿತು ಅವಳಿಗೆ. 
ತಾನು ತನ್ನ ತಾತನ ಹಾಡು ಕಲಿತೆ. ಏಕತಾರಿ ಕಲಿತೆ, ಸಂಸ್ಕೃತಿ ಕಲಿತೆ, ಅಜ್ಜಿಯ ಸೂಲಗಿತ್ತಿ ಕೆಲಸವನ್ನು ಕಣ್ಣಾರೆ ನೋಡಿದೆ. ಈಗ ಎಂಥಹ ವಿಚಿತ್ರ ಸಂಸ್ಕೃತಿಯ ಜೊತೆ ಮುಖಾಮುಖಿಯಾಗುತ್ತಿದ್ದೇನೆ ಎನ್ನಿಸಿತು ಅವಳಿಗೆ, ನಿಜವಾಗಿಯೂ ಇಂಥಹ ಲೋಕವನ್ನು ನಾವೇ ನಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸುತ್ತಿದ್ದೇವೆ ಎನ್ನಿಸಿತು. 

ಭಾಗ-2
ಅಂದು ರಾತ್ರಿ ಸರೋಜಮ್ಮ ಅಂದರೆ ರಾಮಯ್ಯನ ಹೆಂಡತಿ. ಬಿಸಿ ಬಿಸಿ ಕೆಂಪು ಅನ್ನ ಮತ್ತು ಮೀನು ಸಾರು ಮಾಡಿದ್ದರು. ಎಂಥಹ ಅದ್ಭುತ ಘಮ ಘಮ ಊಟವದು. ಅವರೇ ಕೇಳಿದರು ಆ ಹುಡುಗ ಏನಾಗಬೇಕು? 
ಆ ಹುಡುಗ ನನಗೆ ಏನಾಗಬೇಕು ಎಂದು ಗೊತ್ತಿಲ್ಲ. ಅವನು ಏನಾಗಬಹುದಾದವನು ಎಂದರೂ ನನ್ನಲ್ಲಿ ಉತ್ತರವಿಲ್ಲ. ಒಂದೇ ಕಾಲೇಜಿನಲಿ ಡಾಕ್ಟರ್ ಓದುವವರು, ನಾನು ಮೊದಲನೇ ರ‍್ಯಾಂಕ್ ಅವನು ಎರಡನೇ ರ‍್ಯಾಂಕ್, ಪಾಪ ಅವರಿಗೆ ಯಾವ ಗುಮಾನಿಗಳಿರಲಿಲ್ಲ ರಾಮಯ್ಯನೇ ಹೇಳಿದ ಹುಶಾರಮ್ಮ ಈ ಹುಡುಗರ ಜೊತೆ ಹುಶಾರಾಗಿರಬೇಕು ಎಂದ. ಹೌದು ನೀವು ಹೇಳುವದು ಸತ್ಯ ಆದರೆ ಇವನು ಅಂಥಹ ವಿಲನ್ ಅಲ್ಲ ಎಂದಳು. ಮನೆಯ ಮೂಲೆಯಲಿ ಏಕತಾರಿ ಇತ್ತು ಆಕೆಗೆ ಅದರ ಮೇಲೆ ಮನಸ್ಸಾಗಿದ್ದರೂ ತೆಗೆದುಕೊಳ್ಳಲು ಸಂಕೋಚ. ಅದು ತೆಗೆದುಕೊಳ್ಳಬಹುದೆ ? ಎಂದು ಮೆಲ್ಲನೆ ಉಸುರಿದಳು. ರಾಮಯ್ಯನೆ ಅಯ್ಯೊ ತೆಗೆದು ಕೊಳ್ಳಿ ಹುಣ್ಣಿಮೆ ಭಜನೆಗೆಂದು ಅದನ್ನು ಉಪಯೋಗಿಸುತ್ತೇವೆ, ಎಂದು ತಾವೇ ಮೂಲೆಗೆ ಹೋಗಿ ಅದನ್ನು ಸರಿಯಾಗಿ ಶ್ರುತಿ ಅದುಮಿ ಅವಳ ಕೈಗೆ ಕೊಟ್ಟ. 
ಅವಳೋ ಇದರಲಿ ಪಳಗಿದ ಹುಲಿ. ತಂತಿಗಳ ಮೀಟುತ್ತು ತಂತಿಗಳ ಹುರಿದಿರುವತ್ತ ತನ್ನ ಧ್ವನಿಗೆ ಆ ಏಕತಾರಿಯನು ಸರಿಪಡಿಸಿಕೊಂಡಳು. 
ಶಿವಲೋಕದಿಂದ ಒಬ್ಬ ಸಾಧು ಬಂದಾನಮ್ಮ
ಹರ ಲೋಕದಿಂದ ಒಬ್ಬ ಯೋಗಿ ಬಂದಾನಮ್ಮ 
ಶಿವನಾಮ ಶಬ್ದ ಕೇಳಿ ಅಲ್ಲಿ ನಿಂತಾನವ್ವ 
ಊರಾ ಹೊರಗೆ ಒಂದು ಮಠವ ಕಟ್ಟಿಸ್ಯಾನವ್ವ 
ಒಂಬತ್ ಬಾಗಿಲ್ ಹಿಡಿಸ್ಯಾನವ್ವ  ಒಂಬತ್ ಬಾಗಿಲದಾಗ ತಾನೆ ನಿಂತಾನವ್ವ
ಎಂದು ಹಾಡು ಹೇಳ ಹತ್ತಿದಳು ಅವಳ ಕಂಚಿನ ಅಸ್ಟಲಿತ ಕಂಠದ ನಾದ ಆ ನದಿಯ ಬಯಲಿನಲ್ಲಿ ಹಾಗೆಯೇ ಧೂಪದಂತೆ ಹರಡಿ ಮೀನುಗಾರರನ್ನೆಲ್ಲ ಆಕರ್ಷಿಸಿತು. ಅಲ್ಲಿ ಮೀನುಗಾರರೆಲ್ಲ ಸೇರಿದರು. ನದಿಯ ಶ್ವಾಸ ಉಚ್ಛಾಸದ ಧ್ವನಿ. ಅವಳಿಗೆ ಹಿಮ್ಮೇಳವಾಗಿ ಹಾಡುತ್ತಿತ್ತು. ಅವರೆಲ್ಲ ಡಾಕ್ಟರಮ್ಮ ಆಗಿ ಪಾರಮಾರ್ಥದ ಹಾಡು ಹಾಡ್ತೀಯಲ್ಲಮ್ಮ ಎಂದು ಖುಷಿಪಟ್ಟರು. ತಾತಾ ಅಜ್ಜಿ ಅಪ್ಪ ಕಲಿಸಿದ ಪಾಠವಿದು. ಅವಳು ಅಂದುಕೊಂಡಳು ತಾನು ಡಾಕ್ಟರ್ ಆಗಿ ಅಲ್ಲಿ ಕಲಿಯಿತ್ತಿರುವದು ಈ 5 ವರ್ಷಗಳಿಂದಿರಬಹುದು. ಆದರೆ, ಬದುಕು ಇಂಥಹದನ್ನು ಕಲಿಸಿದ್ದು ಬಹಳ ಇದೆ. ನಾನು ಓದುವದರಲಿ ಜಾಣೆ ಆದ್ದರಿಂದ ಹಿರಿಯರ ಆಶೀರ್ವಾದದಿಂದ ಈ ಮೆಡಿಸಿನ್‌ಗೆ ಬಂದೆ, ಎಂದಾಗ ಅವರೆಲ್ಲ ಮತ್ತೆ ಹಾಡು ಹಾಡಿಸಿದರು. ಕುಣಿದರು ಕುಪ್ಪಳಿಸಿದರು. 

ಭಾಗ-3
ನಿದ್ರೆ ಎಂಬುವದು ಮರೀಚಿಕೆಯಾಗಿತು. ತಾನು ಇಲ್ಲಿಯವರೆಗೂ ಮಾಡಿದ್ದು ನಾಟಕವೇ ಅಥವಾ ಅವನಿಂದ ತಪ್ಪಿಸಿಕೊಳ್ಳಲು ಮಾಡಿದ ತಂತ್ರವೇ ತುಂಗಾ ಹೊಳೆಯ ಉಸಕು ಬಯಲಿನ ವರಸಿನ. ಮೇಲೆ ಈ ಹೊಳೆಯ ಸುಂದರ ನಿನಾದ ಅವಳಿಗೆ ನಿದ್ರೆ ಭಂಗ ಮಾಡುತ್ತಿತ್ತು 
ರಾಮಯ್ಯ ಸರೋಜಮ್ಮ ನನಗೆ ಏಕೆ ಇಷ್ಟವಾದರು ಅವನಿಗೆ ಏಕೆ ಇಷ್ಟವಾಗಲಿಲ್ಲ. ತನ್ನ ತಾತನ ಏಕತಾರಿ ನಾದದ ಗುಂಗುಗಳು ಇವರ ಗುಡಿಸಿಲಿನಲ್ಲೆ ಇವೆ ಎಂದು ಕೊಂಡಳು. ತಮ್ಮ ಪೂರ್ವಜರದು ಸೃಷ್ಟಿಸುವ ವಿದ್ಯೆ ಇವನದು. ನಾಶ ಮಾಡುವ ವಿದ್ಯೆ . ಎಂದಾಗಲೇ ಪಾಪ ಅವನ ಬಗ್ಗೆ ಇಷ್ಟು ಕಠೋರತೆ ಸರಿಯೇ ಎಂದೆನಿಸಿತು. 
ಬುಲೆಟ್ ಹತ್ತಿ ತಾನು ಔಷಧ ಅಂಗಡಿ ಹುಡುಕುತ್ತಿರುವಾಗಲೇ ಹೇಳಿದ, ರಕ್ಷಾ ಕವಚ ಬೇಡ, ಅದರಿಂದ ಸುಖದ ಉತ್ಕಟತೆ ಹತ್ತಲು ಸಾಧ್ಯವಿಲ್ಲ ಒಂದು ವೇಳೆ ನೀನು ಗರ್ಭ ಧರಿಸಿದರೆ ಕಿತ್ತು ಹಾಕುವದು ನನಗೆ ಬಿಟ್ಟು ಬಿಡು ಇಂಥಹ ಅಬಾರ್ಶನ್‌ಗಳಿಂದಲೇ ತನ್ನ ತಂದೆ ತಾತ ಪ್ರಸಿದ್ಧಿಯಾಗಿದ್ದರು. ಅವರ ಜೀವಿತಾವಧಿಯಲ್ಲಿ ಇಬ್ಬರು ಪ್ರಸಿದ್ಧ ವೈದ್ಯರಾಗಿದ್ದರು. ಅಪ್ಪ 500 ಹೆಣ್ಣು ಬ್ರೂಣಗಳನು ತಾತ 300 ಬ್ರೂಣಗಳನು ತೆಗೆದ ಇತಿಹಾಸವಿದೆ. ಎಂದು ಜೋರಾಗಿ ನಕ್ಕಾಗ, ಅವಳು ನಗಲಿಲ್ಲ ಕೇಳು ಇಲ್ಲಿ ನನ್ನ  ಜೀವನದಲಿ ನೆಡೆಯುವ ಬ್ರೂಣ ಹತ್ಯೆ ಪ್ರಯೋಗ ನನ್ನಿಂದಲೇ ಆಗಲಿ ಎಂದಾಗಲೇ ಅವಳಿಗೆ ಜೈವಿಕ ಉಗಮದ ಬಗ್ಗೆ ಚಿಂತೆ ಹತ್ತಿದ್ದು,  
ಅಂದ ಹಾಗೆ ತಾನು ಹೊರಟಿರುವದು ಯಾರ ಜೊತೆ, ಮದುವೆಯಾಗುವವನ ಜೊತೆಗೆನಾ? ಹೆವನ್ ಡೇ ಎಂದು ಹೆಸರಿಟ್ಟು ಹರಿಸಿ ಇದೊಂದು ನಾಗರಿಕ ರೆಗ್ಯೂಲರ್ ರೂಪ ಮಾಡಿದ ನಮ್ಮ ಮಿತ್ರರು ಸೃಷ್ಟಿಸಿದ ಈ ಕುರೂಪ ಸಂಸ್ಕೃತಿಯ ಕರಾಳ ಬಾವಿಗೆನಾ? ಎಷ್ಟೊದು ನೆನಪಾದವು. ಒಪ್ಪಿತ ಲೈಂಗಿಕತೆ, ಮಲಗುವದು ಬ್ರೂ.ಣ.... ತೆಗೆಯುವದು ಇಲ್ಲಿ ಎಲ್ಲಾ ಪೊಸ್ಟಮಾಡರ್ನಿಸಮ್ ನ ಸಹ್ಯ ಭಾಗ. ಎಷ್ಟೆಷ್ಟು ಯೋಚನೆಗಳು?    ಚಿಂತಿ ಯಾಕ ಮಾಡುತಿದ್ದಿ ಮರುಳೆ 
ನಿನ್ನಲ್ಲಿ ಜ್ಞಾನ ಉಂಟು ಮಗಳೆ
 ಎಂದು ಹಾಡುವದು. ಕೇಳಿಸಿತು. 
ಬೆಳಕು ಹರಿದಿದೆ.
ಅವನು ಬಂದಿದ್ದಾನೆ,
ರಾಮಯ್ಯನೆ ಅಮ್ಮ ನಿನ್ನ ಗಂಡ ಬಂದಿದ್ದಾನೆ, ಅವನನ್ನು ಕರಿ ಚಹಾ ಕೊಡೋಣ. ಎಂದಾಗ ಈ ಎಂಟು ದಿನದಲಿ ವ್ಯಾಲಿಡಿಟಿ ಕಳೆದುಕೊಳ್ಳುವ ಗಂಡನ ಬಗ್ಗೆ ನಗು ಬಂತು, ಅವನು ಅವಸರದಲಿ ಹದಿನೆಂಟು ಕುದುರೆಯ ರಥವನ್ನು ಏರಿದಂತೆ ಇದ್ದ, ಬೇಗ ಬಾ, ಆಗಲೇ ಒಂದು ದಿನ ಮುಗಿದು ಹೋಯ್ತು ಎಂದ
ತುಂಹೊಳಿ ಅವಳ ಬಂಧುವಾಗಿತ್ತು. ಅವಳಿಗೆ ಏನೋ ಉಪದೇಶ ಮಾಡಿತ್ತು. ನಿನ್ನೆ ಮೊದಲ ಪಾಠ ಮುಗದಿತ್ತು.  ನೀನು ಹೊರಡು ನನಗಿನ್ನೂ ಇಲ್ಲಿ ಕೆಲಸಗಳಿವೆ. ಈಗ ಪಾಠ ಆರಂಭವಾಗಿದೆ ಇನ್ನೂ ಅನೇಕ ಅಧ್ಯಾಯಗಳಿವೆ. ಅದನು ಮುಗಿಸಲು ಕನಿಷ್ಟ ಎಂಟು ದಿನವಾದರೂ ಬೇಕು ಎಂದಳು. ಅವನಿಗೆ ತಡೆದು ಕೊಳ್ಳುವ ಶಕ್ತಿ ಮೀರಿ ಹೋಗಿತ್ತು ಎಡಗಾಲಿನಿಂದ ಉಸುಕನ್ನು ಚಿಮ್ಮಿ ನೀರಿಗೆ ಎಸೆದು ಛೇ ಎಲ್ಲಾ ವೇಸ್ಟು ಎಂದು ಬುಲೆಟ್ ಹತ್ತಿ ನಡೆದ.
ಸರೋಜಮ್ಮನವರಿಗೆ ಯಾರೋ ಬಾಣಂತನ ಮಾಡಲಿಕ್ಕೆ ಕರೆಯಲು ಬಂದಿದ್ದರು ರಾಮಯ್ಯ ತುಂಗಾ ಹೊಳಿಯಲಿ ತನ್ನ ಬೋಟು ಬಿಟ್ಟಿದ್ದ. ನಿನ್ನೆ ಹಾಡಿದ ಹಾಡು ಹೊಸ ರಿದಮ್‌ಗೆ ಒಳಪಟ್ಟಿತ್ತು. 

*

(ಕಲಾಕೃತಿಗಳು: ಬಿ.ಕೆ. ಬಡಿಗೇರ, ಬೀದರ)

ಮಹಾಂತೇಶ ನವಲಕಲ್

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನವಲಕಲ್ಲಿನ ಮಹಾಂತೇಶ ನವಲಕಲ್ ಅವರು ಕೃಷಿ ಪದವೀಧರರು. ’ನೀರಿನ ನೆರಳು’ ಇವರ ಮೊದಲ ಕಥಾಸಂಕಲನ. ’ನಾನು ಚಂದ್ರಗುಪ್ತನೆಂಬ ಮೌರ್ಯ’ ನಾಟಕವು ಹಲವು ಯಶಸ್ವಿ ಪ್ರದರ್ಶನ ಕಾಣುವುದರ ಜೊತೆಗೆ ಪುಸ್ತಕವಾಗಿಯೂ ಪ್ರಕಟವಾಗಿ ಮೆಚ್ಚುಗೆ ಗಳಿಸಿದೆ. ಪುಂಚಾವರಂ ಕುರಿತಾದ ನಾಟಕ ವಿವಾದಕ್ಕೆ ಎಡೆ ಮಾಡಿತ್ತು. ಬೆಸಗರಹಳ್ಳಿ ರಾಮಣ್ಣ ಕಥಾಪುರಸ್ಕಾರ, ದೆಹಲಿ ಕರ್ನಾಟಕ ಸಂಘದ ನೃಪತುಂಗ ಪುರಸ್ಕಾರ, ಪಾಪು ಮರಸ್ಕಾರ, ಸಂಕ್ರಮಣ ಕಥಾ ಪುರಸ್ಕಾರ, ಅಮ್ಮ ಪುರಸ್ಕಾರ, ಉರಿಲಿಂಗ ಪೆದ್ದಿ ಪುರಸ್ಕಾರ, ರಾಜ್ಯೋತ್ಸವ ಪುರಸ್ಕಾರ, ಎರಡು ಬಾರಿ ಇವರ ಕತೆಗಳಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ರಾಜಪುರೋಹಿತ ದತ್ತಿನಿಧಿಯ ಚಿನ್ನದ ಪದಕ ಪುರಸ್ಕಾರ ಪಡೆದಿರುವ ಮಹಾಂತೇಶ ಅವರು ಸದ್ಯ ಕಲಬುರಗಿಯಲ್ಲಿ ವಾಸಿಸುತ್ತಿದ್ದಾರೆ.

More About Author