Story

ವಿಮೋಚನೆ

ಕತೆಗಾರ ಪ್ರಶಾಂತ್. ವೈ . ಡಿ ಅವರು ಬೆಂಗಳೂರಿನ ಅರೆಹಳ್ಳಿಯ ಇಟ್ಟಮಡುವಿನವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ. ಪ್ರಸ್ತುತ ಅವರು ಬರೆದಿರುವ ‘ವಿಮೋಚನೆ’ ಕತೆ ನಿಮ್ಮ ಓದಿಗಾಗಿ...

ಅದು ನಗರದ ಪ್ರತಿಷ್ಠಿತ ಮಲ್ಟಿ ಸ್ಪೇಸಿಯಾಲಿಟಿ ಆಸ್ಪತ್ರೆ ಗಳಲ್ಲಿ ಒಂದು. ಒಂದು ರೀತಿ ಹೇಳಬೇಕೆಂದರೆ ಶ್ರೀಮಂತರ ಆಸ್ಪತ್ರೆ. ಜಗತ್ತಿನೆಲ್ಲೆಡೆ ಕೋವಿಡ್ ನ ರುದ್ರ ನರ್ತನ ನಡೆದಿತ್ತು. ಭಾರತದಲ್ಲಿ 2 ನೇ ಅಲೆ ಶುರುವಾಗಿ ಗರಿಷ್ಟ ಮಟ್ಟವನ್ನು ಮುಟ್ಟಿತ್ತು. ದಿನಕ್ಕೆ 5 ರಿಂದ 10 ಲಕ್ಷ ಕೇಸ್ ಗಳು ಬರುತ್ತಿದ್ದವು, ಸಾವಿರಾರು ಜನ ಸಾಯುತ್ತಲಿದ್ದರು. ಬೆಂಗಳೂರು ಸಹ, ಮಹಾಮಾರಿಗೆ ಅತಿ ಹೆಚ್ಚು ನಲುಗಿದ ದೇಶದ ನಗರಗಳಲ್ಲೊಂದಾಗಿತ್ತು. ಆ ಆಸ್ಪತ್ರೆಯಲ್ಲೂ ಕೋವಿಡ್ ರೋಗಿಗಳು ತುಂಬಿದ್ದರು. ಎಷ್ಟು ದುಡ್ಡು ಕೊಟ್ಟರೂ ಬೆಡ್, ICU ಸಿಗದ ದಯನೀಯ ಸ್ಥಿತಿ. ಎತ್ತ ನೋಡಿದರೂ ರೋಗಿಗಳೂ ಇಲ್ಲವೇ PPE ಧರಿಸಿದ ಡಾಕ್ಟರ್ಗಳು, ನರ್ಸ್ ಗಳು, ಪರಿಚಾರಕರು.

ಕುಸುಮ ಅಲ್ಲಿ ಕೆಲಸ ಮಾಡುತ್ತಿದ್ದ ಅಸಿಸ್ಟೆಂಟ್ ನರ್ಸ್. ಅವಳು BSc ಮುಗಿಸಿ, ಡಿಪ್ಲೋಮ ಇನ್ ನರ್ಸ್ ಕೇರಿಂಗ್ ಅಸಿಸ್ಟೆಂಟ್ ಮಾಡಿಕೊಂಡು ಇಲ್ಲಿ ಸುಮಾರು ೨೦ ವರ್ಷದಿಂದ ಕೆಲಸ ಮಾಡುತ್ತಿದ್ದಳು. ಅವಳ ಗಂಡನೂ ಆಡಳಿತ ವಿಭಾಗದಲ್ಲಿ ಕೆಲಸ ಮಾಡಿತ್ತಿದ್ದನು. ಅವಳಿಗೆ ಒಬ್ಬ ಮಗ ೨೬ ವರ್ಷದವನು, ರಾಜ ಅಂತ. ಅವನಿಗೆ ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸುವ ಸಲುವಾಗಿ ಇವನಾದ ಮೇಲೆ ಮತ್ತೆ ಮಕ್ಕಳನ್ನು ಮಾಡಿಕೊಳ್ಳದಂತೆ ಇಬ್ಬರೂ ನಿರ್ಧರಿಸಿದ್ದರು . ಅದರಂತೆ ಅವನು BSc ರೇಡಿಯಾಲಜಿ ಮಾಡಿ ಇದೇ ಆಸ್ಪತ್ರೆಯಲ್ಲಿ CT ಸ್ಕ್ಯಾನ್ ವಿಭಾಗದಲ್ಲಿ ರೇಡಿಯೊಲೊಜಿಸ್ಟ್ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದನು. ಮೂರು ಜನ ಅಪಾಯವಿದ್ದರೂ ಜನರ ಸೇವೆಯಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದರು. ಮಾನವೀಯತೆಗೆ, ಸಂಬಂಧಗಳಿಗೆ ದೊಡ್ಡ ಪೆಟ್ಟು ಕೊಟ್ಟಿತ್ತು ಈ ಮಹಾ ಮಾರಿ . ತಮ್ಮವರನ್ನೇ ನೋಡಲು, ಮುಟ್ಟಲು, ಕಡೆಗೆ ಅಂತಿಮ ಸಂಸ್ಕಾರಕ್ಕೂ ಬಾರದೇಇರುವಷ್ಟು ಕ್ರೂರಿಗಳನ್ನಾಗಿ ಮಾಡಿತ್ತು. ಎಷ್ಟೋ ಜನ ಡಾಕ್ಟರ್ಗಳು, ನರ್ಸ್ ಗಳು ಭಯದಿಂದ ಕೆಲಸಕ್ಕೆ ಬರೋದನ್ನೇ ಬಿಟ್ಟಿದ್ದರು. ಹೀಗಾಗಿ ಇದ್ದವರೇ ಎಲ್ಲವನ್ನೂ ಸರಿದೂಗಿಸಬೇಕಿತ್ತು. ಅಂಥವರಲ್ಲಿ ಈ ಮೂವರು.

ಅವತ್ತೊಂದು ದಿನ ಅತೀ ಖಾಸಗೀ ಕೋಣೆಯೊಂದಕ್ಕೆ ಒಬ್ಬ ದೊಡ್ಡ ಉದ್ಯಮಿ ದಾಖಲಾದರು. ಕುಸುಮ ಅವರ ಆಕ್ಸಿಜನ್ ಲೆವೆಲ್, ಜ್ವರ ಮತ್ತಿತರ ನಿಗದಿ ಪಡಿಸಿದ ಪರೀಕ್ಷೆಗಳನ್ನು ಮಾಡಲು ಬರುತ್ತಾಳೆ. ಅವರನ್ನು ನೋಡಿದ ತಕ್ಷಣ ಒಂದು ಘಳಿಗೆ ನೆಲ ಕುಸಿದಂತೆ ಅನುಭವ. ಹಾಗೆ ಸಾವರಿಸಿಕೊಂಡು ಎಲ್ಲ ಪರೀಕ್ಷೆಗಳನ್ನು ಮಾಡುತ್ತಾಳೆ. "ನರ್ಸ್, ಏನಿದೆ ರೀಡಿಂಗ್ಸ್" ಅಂತ ಅವರು ಕೇಳುತ್ತಾರೆ. "ತೊಂದರೆ ಏನಿಲ್ಲ ಈ ಮಾತ್ರೆಗಳನ್ನು ತೆಗೆದುಕೊಳ್ಳಿ " ಎಂದು ಡಾಕ್ಟರ್ ಬರೆದ ಮಾತ್ರೆಗಳನ್ನು ಕೊಡ್ತಾಳೆ. "ಉಸಿರಾಟಕ್ಕೆ ತೊಂದರೆ ಎನಿಸಿದರೆ ತಕ್ಷಣವೇ ತಿಳಿಸಿ " ಎಂದು ಹೇಳಿ ಹೊರಡುತ್ತಾಳೆ. ಕೂಡಲೇ ಅಲ್ಲೇ ಇದ್ದ ನರ್ಸ್ ರೂಮ್ ಗೆ ಹೋಗಿ ಅಷ್ಟು ಹೊತ್ತು ತಡೆಹಿಡಿದಿದ್ದ ದುಃಖವನ್ನು ಅತ್ತು ಹೊರಹಾಕುತ್ತಾಳೆ. ಅಲ್ಲಿದ್ದವರು ಏನಾಯಿತು ಅಂತ ಕೇಳ್ತಾರೆ "ನಿಮ್ಮ ಕಡೆಯವರ? ಪಾಪ, ಹುಷಾರಾಗಿ ಬರ್ತಾರೆ ಬಿಡು " ಎಂದು ಸಮಾಧಾನ ಮಾಡಿ ಹೊರಡುತ್ತಾರೆ.

ಆ ದಿನ ಸಾಯಂಕಾಲ ಮತ್ತೆ ಪರೀಕ್ಷೆಗೆ ಬಂದಾಗ ಅವರು ತಮ್ಮ ಕುಟುಂಬದವರ ಹತ್ತಿರ ವಿಡಿಯೋ ಕರೆ ಮಾಡಿ ಮಾತನಾಡುತ್ತಿರುತ್ತಾರೆ . ಕುಸುಮ ಬಂದೊಡನೆ " ಸಾರೀ ನನ್ನ ಫ್ಯಾಮಿಲಿ. they are bit worried " ಎಂದು ಕರೆಯನ್ನು ಮುಗಿಸುತ್ತಾರೆ. " ನನ್ನ ಕಂಪನಿ, ಎಲ್ಲ ಫಾರ್ಮಾಲಿಟಿಸ್ ಅಂದ್ರೆ ಅಡ್ಮಿಶನ್, ದುಡ್ಡು ಎಲ್ಲ ವ್ಯವಸ್ಥೆ ಮಾಡಿದ್ದಾರೆ ತಾನೇ ?" ಎಂದು ಕೇಳಿದಾಗ "ಹೌದು ಸರ್ " ಎಂದು ಉತ್ತರಿಸುತ್ತಾಳೆ. ಪರೀಕ್ಷೆ ಮಾಡಿದಾಗ ಬೆಳಿಗ್ಗೆ ಇದ್ದಂತೆ ಇರುತ್ತೆ ಏನು ವ್ಯತ್ಯಾಸ ವಿರುವುದಿಲ್ಲ. oxygen saturation ೯೨% ಗೆ ಇಳಿದಿರುತ್ತೆ. ಅವಳಿಗೆ ಸ್ವಲ್ಪ ಗಾಬರಿ ಆಗುತ್ತೆ. ಡಾಕ್ಟರ್ ರೌಂಡ್ಸ್ ಗೆ ಬರುತ್ತಾರೆ. ಅವರಿಗೆ ಎಲ್ಲಾ ವಿವರಿಸುತ್ತಾಳೆ. ಅವರು “ಆಕ್ಸಿಜನ್ ಹಾಕಿ; ಊಟ ಮಾಡುವಾಗ ಫೋನ್ ಮಾಡುವಾಗ ತಗೀಬಹುದು “ ಎಂದು ಹೇಳಿ ಇನ್ನೂ ಕೆಲವು ಮಾತ್ರೆ ಬರೆದು ಕುಸುಮಳಿಗೆ ಹೇಳಿ ಹೋಗುತ್ತಾರೆ. ಇವಳಿಗೆ ಅವರು ಹೇಳಿದಂತೆಲ್ಲ ಕಣ್ಣಿಂದ ನೀರು ಹರಿಯುತ್ತಿರುತ್ತದೆ ಧ್ವನಿ ನಡುಗುತ್ತಿರುತ್ತದೆ. PPE ಇದ್ದುದಕ್ಕೆ ಯಾರಿಗೂ ತಿಳಿಯುತ್ತಿರಲಿಲ್ಲ.

ಮರುದಿನ ಬಂದಾಗ ಕೆಮ್ಮು ಶುರುವಾಗಿರುತ್ತೆ. ಸ್ವಲ್ಪ ಆಯಾಸಗೊಂಡವರಂತೆ ಇರ್ತಾರೆ. "ಫೋನ್ ಕೊಡಿ ಮಾತಾಡ್ಬೇಕು" ಅನ್ನುತ್ತಾರೆ. ಫೋನ್ ಕೊಡುತ್ತ " ನಿಮ್ಮ ಮನೆಯವರು.. ?" ಅನ್ನುತ್ತಾ ಮಾತು ನಿಲ್ಲಿಸುತ್ತಾಳೆ. "ಹಾಂ .. ಹೆಂಡತಿ ಹೆಸರು ಮಮತಾ, ಇಬ್ಬರು ಮಕ್ಕಳು.ಆಸ್ಟ್ರೇಲಿಯಾ ದಲ್ಲಿದ್ದಾರೆ. ನಂದೇ ಕಂಪನಿ ಇದೆ ಇಲ್ಲಿ. ಮಕ್ಕಳು ಅಲ್ಲಿ ಓದುತ್ತಿದ್ದಾರೆ ಅದಿಕ್ಕೆ ಹೆಂಡತಿ ಅಲ್ಲೇ ಇರ್ತಾಳೆ. ನಾನು ಅವಾಗಾವಾಗ ಹೋಗಿ ಬರುತ್ತಿರುತ್ತೇನೆ. ಈಗ ಹೀಗಾಯಿತು. ಅವರು ಅಷ್ಟು ದೂರ ನಾನು ಅವರನ್ನ ಮತ್ತೆ ನೋಡ್ತೀನೋ ಇಲ್ವೋ?" ಎಂದು ಸಪ್ಪಗಾಗುತ್ತಾರೆ. "ಅಯ್ಯೋ ಹಾಗೇಕೆ ಅಂತೀರಾ ಸರ್ ಹುಷಾರಾಗಿ ಹೋಗ್ತೀರಾ. ಚಿಂತೆ ಮಾಡಬೇಡಿ" ಎಂದು ಕುಸುಮ ಹೇಳುತ್ತಾಳೆ. " ತಂದೆ,ತಾಯಿ, ಅಣ್ಣ, ತಮ್ಮ ಯಾರೂ ಇಲ್ಲಿ ಇಲ್ವಾ?" ಎಂದು ಅವರ ಬಗ್ಗೆ ತಿಳಿದುಕೊಳ್ಳಲು ಕೇಳುತ್ತಾಳೆ. "ತಂದೆ ನಾವು ಚಿಕ್ಕೋರಿದ್ದಾಗ ತೀರಿಹೋದ್ರು. ಅಮ್ಮ ೧೦ ವರ್ಷದ ಹಿಂದೆ ತೀರಿ ಹೋದ್ರು. ಅಣ್ಣ ,ಅವನ ಫ್ಯಾಮಿಲಿ Netherland ನಲ್ಲಿ ಸೆಟ್ಲ್ ಆಗಿದ್ದಾರೆ. ಇನ್ನ ಮಿಕ್ಕ ರಿಲೇಟಿವ್ಸ್ ಇದ್ದಾರೆ but ಹೆಸರಿಗಷ್ಟೇ. ಈಗಂತೂ ಗೊತ್ತಲ್ಲ ಮಕ್ಕಳೇ ನೋಡೋಕ್ ಬರಲ್ಲ ಈ ಕೋವಿಡ್ ಬಂದ್ರೆ " ಅಂತ ಒಂದು ನೋವಿನ ನಗು ಬೀರುತ್ತಾರೆ. ಕುಸುಮಾಗೆ ಹೊಟ್ಟೆ ಕಿವಿಚಿದ ಹಾಗೆ ಸಂಕಟವಾಗುತ್ತೆ. " ದಿನ ನ್ಯೂಸ್ ನೋಡ್ತಿದ್ರೆ ಅಯ್ಯೋ ಅನ್ಸುತ್ತೆ. ನಾನು ಹೀಗೆ ಅನಾಥ ಹೆಣವಾಗಿಬಿಡ್ತೀನ ಅಂತ" ಅವರ ಮಾತಿಗೆ ಕುಸುಮಾಗೆ ಬರಸಿಡಿಲು ಬಡಿದಹಾಗೆ ಆಗುತ್ತೆ."ಸಾರ್ .. ಬೇಡ ಸರ್ ಅದೆಲ್ಲ ನೋಡಬೇಡಿ ನಿಮಗೆ ಗುಣ ವಾಗುತ್ತೆ" ಅವಳು ಅಳು ತಡೆಯಲಾಗದೆ ಅಳುವ ಧ್ವನಿಯಲ್ಲಿ ಹೇಳುತ್ತಾಳೆ. " ಸಾರೀ ಸಾರೀ ಯಾಕೆ ನರ್ಸ್ ಅಷ್ಟು ಎಮೋಷನಲ್? " ಎಂದು ಕೇಳಿದಾಗ " ಸಾರೀ ಸರ್ ದಿನವೂ ನೋಡ್ತೀವಲ್ಲ.. ಈ ಥರ ಮಾತು ಕೇಳಿದ್ರೆ ನೋವಾಗುತ್ತೆ ಸರ್" ಎಂದು ಸಂಭಾಳಿಸುತ್ತಾಳೆ. ಮತ್ತೆ ಡಾಕ್ಟರ್ಸ್ ಬರುತ್ತಾರೆ. ಈ ಸಾರಿ ಸೀನಿಯರ್ಸ್ ಎಲ್ಲ ಬಂದಿರ್ತಾರೆ. ಆಕ್ಸಿಜನ್ ಲೆವೆಲ್ಸ್, ಜ್ವರ ರೀಡಿಂಗ್ಸ್ ನೋಡಿ "ಗುಡ್, ಕೀರ್ತಿ ರಾಜ್ it has improved , next ೨ ,೩ ದಿನದಲ್ಲಿ ನೀವು ಡಿಸ್ಚಾರ್ಜ್ ಆಗಬಹುದು ಅನ್ಸುತ್ತೆ. But you are still on observation. so, no office calls please ." ಅಂತ ಹೇಳ್ತಾರೆ. ಅಲ್ಲೇ ಇದ್ದ ಕುಸುಮಾಗೆ ಜೀವ ಬಂದ್ಹಾಗೆ ಆಗುತ್ತೆ. "ಕೆಮ್ಮಿಗೆ antibiotic ಬರೆದಿದ್ದೇನೆ ಅದನ್ನ ತೊಗೊಳ್ಳಿ. ಟೇಕ್ ಕೇರ್ " ಅಂತ ಹೇಳ್ತಾರೆ. "ಥ್ಯಾಂಕ್ಸ್ ಡಾಕ್ಟರ್. ಪ್ರತಿ ದಿನ ನನ್ನ ಹೆಲ್ತ್ ಅಪ್ಡೇಟ್ ಆಫೀಸ್ ಗೆ ಹೋಗ್ತಾ ಇದೆ ತಾನೇ ಡಾಕ್ಟರ್ ? " ಅಂತ ರಾಜ್ ಕೇಳ್ತಾರೆ "ಯಸ್ ofcource ." ಎಂದು ಹೇಳಿ ಡಾಕ್ಟರ್ಸ್ ಹೊರಡುತ್ತಾರೆ. ಕುಸುಮ ಖುಷಿಯಿಂದ " ನೋಡಿದ್ರ ಸರ್ ನೀವು ಆರಾಮ ಆಗ್ತೀರಿ" ಎನ್ನುತ್ತಾ, ಇನ್ನೊಂದು ಪೇಷಂಟ್ ನೋಡಲು ಹೊರಡುತ್ತಾಳೆ. ಕೀರ್ತಿ ರಾಜ್ ಫೋನ್ ಮಾಡಿ ತಮ್ಮ ಫ್ಯಾಮಿಲಿ ಗೆ ತಿಳಿಸುತ್ತಾರೆ. ಹಾಗೆ ಮಾತಾಡುವಾಗ "ಇಲ್ಲಿ ಒಬ್ಬ ನರ್ಸ್ ಇದ್ದಾರೆ. ತುಂಬಾ ಕೇರ್ ತೊಗೊತಾರೆ. ನೀವೇನು ವರಿ ಮಾಡಬೇಡಿ " ಅಂತ ಹೇಳಿರ್ತಾರೆ.

ಆ ದಿನ ಕುಸುಮಾಗೆ ಹೆಚ್ಚುವರಿ ದಿನ ಮತ್ತು ರಾತ್ರಿ ಸರದಿ ಕೆಲಸ ಮಾಡಿದ್ದರಿಂದ ಮನೆಗೆ ಹೋಗಲು ಅನುಮತಿ ಸಿಗುತ್ತೆ. ಕೀರ್ತಿ ರಾಜ್ ಅವರ ಅರೋಗ್ಯ ಸುಧಾರಿಸಿದ ಸಮಾಧಾನ ಬೇರೆ ಇರುತ್ತೆ. ಹೀಗಾಗಿ ಅವಳು ಮನೆಗೆ ಹೋಗ್ತಾಳೆ ಗಂಡನ ಜೊತೆ. ಮಗ, ರಾಜ್ ದು ಆ ದಿನ ರಾತ್ರಿ ಸರದಿ ಇರುತ್ತೆ. ಅವನನ್ನು ಮಾತಾಡಿಸಿ ಹೊರಡುತ್ತಾರೆ.

ಬೆಳಿಗ್ಗೆ ಬಂದಾಗ ಕುಸುಮಾಗೆ ಆಘಾತ ಕಾದಿರುತ್ತೆ. ರಾತ್ರಿ ಕೀರ್ತಿ ರಾಜ್ ಉಸಿರಾಟದಲ್ಲಿ ಏರು ಪೇರು ಆಗಿ, CT ಸ್ಕ್ಯಾನ್ ಮಾಡಿಸಿ, ತುಂಬಾ ಚಿಂತಾಜನಕ ವಾಗಿದ್ದರಿಂದ ICU ಗೆ ವರ್ಗಾಯಿಸಿರುತ್ತಾರೆ. ಕುಸುಮ ಅಲ್ಲಿದ್ದ ರಾತ್ರಿ ಪಾಳಿಯ ನರ್ಸ್ ಇಂದ ವಿಷಯ ತಿಳಿದು CT ಸ್ಕ್ಯಾನ್ ಲ್ಯಾಬ್ ಗೆ ಓಡುತ್ತಾಳೆ. " ರಾಜು.. ರಾಜು ನಿನ್ನೆ ರಾತ್ರಿ ಒಬ್ಬ ಪೇಷಂಟ್ ಬಂದಿದ್ರಲ್ಲ ಅವರ ಸ್ಥಿತಿ ಹೇಗಿದೆ ಏನೂ ಗಾಬರಿ ಆಗೋವಂತದ್ದು ಇಲ್ಲ ಅಲ್ವ "ಎಂದು ಮಗನನ್ನು ಕೇಳುತ್ತಾಳೆ . " ಅಮ್ಮ , ಅಮ್ಮ ಯಾಕಮ್ಮ ಇಷ್ಟು ಗಾಬರಿ? ಎಷ್ಟೋ ಪೇಷಂಟ್ CT ಆಗಿತ್ತು ನಿನ್ನೆ ರಾತ್ರಿ, ಯಾರ್ದು ಕೇಳ್ತಾ ಇದ್ದೀಯ" ಅಂತಾನೆ. "ಕೀರ್ತಿ.. ಕೀರ್ತಿ ರಾಜ್" ಅಂತಾಳೆ. ರಾಜು ರಿಪೋರ್ಟ್ಸ ತನ್ನ ಸಿಸ್ಟಮ್ ನಲ್ಲಿ ನೋಡುತ್ತಾನೆ. "ಇಲ್ಲಮ್ಮ lungs ಬಹಳ ಡ್ಯಾಮೇಜ್ ಆಗಿದೆ. ಉಸಿರಾಟ ತೊಂದರೆ ಇದೆ. ಯಾಕಮ್ಮ ಇವರು ನಿನಗೆ ಗೊತ್ತಾ? " ಅಂತ ಕೇಳ್ತಾನೆ. ಅವನಿಗೆ ಉತ್ತರವನ್ನೂ ಕೊಡದೆ ICU ಕಡೆಗೆ ಓಡ್ತಾಳೆ. ಮನಸ್ಸು ರೋಧಿಸುತ್ತಿರುತ್ತದೆ. ICU ಒಳಗೆ ಪರ್ಮಿಷನ್ ತೊಗೊಂಡು ಹೋಗ್ತಾಳೆ. ಕೀರ್ತಿ ರಾಜ್ ಸುತ್ತ ಡಾಕ್ಟರ್ಸ್ ನಿಂತಿರುತ್ತಾರೆ. ಆಕ್ಸಿಜನ್ ಹಾಕಿರುತ್ತಾರೆ ventilator ಇಟ್ಟಿರುತ್ತಾರೆ. ಇಂಜೆಕ್ಷನ್ಸ್ ಕೊಡ್ತಾ ಇರ್ತಾರೆ. "observe every minute every second. its high profile case. Also update his office and family immediately." ಅಂತ ಹೇಳಿ ಹೋರಡುತ್ತಿರುತ್ತಾರೆ.

ಕುಸುಮ ಅವರ ಬಳಿ ಬಂದು " ಸರ್ ನಾನು ಇವರ ಬಳಿ ಇದ್ದು ಗಮನಿಸುತ್ತೇನೆ. ಪ್ಲೀಸ್ ಅವಕಾಶ ಮಾಡಿಕೊಡಿ" ಎಂದು ಕೇಳುತ್ತಾಳೆ. "ನಿಮ್ಮ ಸಂಬಂಧಿಕರ?" ಎಂದು ಕೇಳಿದಾಗ "ಹೌದು, ನನಗೆ ಇಲ್ಲಿಯೇ ಡ್ಯೂಟಿ ಗೆ ಹಾಕಿ ನಾನು ಇದರ ಜೊತೆ ಹೇಳಿದ ಕೆಲಸ ಮಾಡುತ್ತೇನೆ " ಎನ್ನುತ್ತಾಳೆ. " ಬೇಡ ಜಸ್ಟ್ ಮಾನಿಟರ್ ಹಿಮ್ . ಸ್ವಲ್ಪ ಹೆಚ್ಚು ಕಮ್ಮಿ ಆದರೂ ಹೆಡ್ ನರ್ಸ್ ಅಥವಾ ಡ್ಯೂಟಿ ಡಾಕ್ಟರ್ ಗೆ ಹೇಳಿ. ಅಸಿಸ್ಟೆಂಟ್ ನರ್ಸ್ ಗಳನ್ನ ICU ನಲ್ಲಿ ಬಿಡಲ್ಲ ಆದ್ರೆ ರಿಸೋರ್ಸ್ shortage ಇದೆ ಅದಿಕ್ಕೆ ಓಕೆ " ಎಂದು ಹೇಳಿ ಹೋಗುತ್ತಾರೆ.

ಕುಸುಮ ಅವರ ಪಕ್ಕದಲ್ಲೇ ಕುಳಿತು ಗಮನಿಸುತ್ತಿರುತ್ತಾಳೆ. ದೇವರಲ್ಲಿ ಪರಿ ಪರಿ ಯಾಗಿ ಅವಳ ಹೃದಯ ಬೇಡಿಕೊಳ್ಳುತ್ತಿರುತ್ತದೆ. ನಡುಗುತ್ತ ಅವನ ಅಂಗೈ ಹಿಡಿಯುತ್ತಾಳೆ ಮೆಲ್ಲನೆ. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಕೀರ್ತಿ ರಾಜ್ ಕಣ್ಣು ಬಿಡುತ್ತಾರೆ. ಅವಳನ್ನು ನೋಡಿ ಗುರುತು ಹಿಡಿಯುತ್ತಾರೆ. ಬಲಗೈ ಯಿಂದ ಸನ್ನೆ ಮಾಡಿ ನಾನು ಹೋಗುತ್ತೇನೆ ಎಂಬಂತೆ ತೋರಿಸುತ್ತಾರೆ. ಕುಸುಮ ಇಲ್ಲ, ಇಲ್ಲ ಎಂಬಂತೆ ತಲೆ ಆಡಿಸುತ್ತಾಳೆ. ಅವರ ಕಣ್ಣಿಂದ ಹನಿ ಹನಿಯಾಗಿ ನೀರು ಬರುತ್ತಿರುತ್ತದೆ. ಕುಸುಮ ತನ್ನ ಕೈಯಿಂದ ಒರೆಸುತ್ತಾಳೆ. ಅವರು ಫೋನ್ ಎಂಬಂತೆ ಸನ್ನೆ ಮಾಡುತ್ತಾರೆ. ಕುಸುಮ ತಾನು ಮಾಡಿ ತಿಳಿಸುವುದಾಗಿ ಹೇಳುತ್ತಾಳೆ. ಕೈ ಮುಗಿಯಲು ಹೋಗುತ್ತಾರೆ ಕುಸುಮ ತಡೆಯುತ್ತಾಳೆ. ಅವಳು ಅಳುತ್ತಿರುವುದು PPE ಇಂದ ಕೀರ್ತಿ ರಾಜ್ ಅವರಿಗೆ ಕಾಣುತ್ತೆ. ಯಾಕೆ ಎಂದು ಸನ್ನೆ ಮಾಡುತ್ತಾರೆ. ಕುಸುಮ ತಲೆ ಬಗ್ಗಿಸಿ ಮತ್ತಷ್ಟು ಬಿಕ್ಕಳಿಸುತ್ತಾಳೆ. ಕೈ ಇಂದ ಸನ್ನೆ ಮಾಡುತ್ತಾ ನೀನು ಯಾರು ನನಗೆ ಎಂದು ಕೇಳುತ್ತಾರೆ ಯಾಕೆ ಅಳುತ್ತಿದ್ದೀಯ ಎಂದು ಮತ್ತೆ ಸನ್ನೆ ಮಾಡುತ್ತಾರೆ. ಕುಸುಮ ತನ್ನ ಜೇಬಿನಲ್ಲಿದ್ದ ಎರಡು ಫೋಟೋಗಳನ್ನ ಕೀರ್ತಿ ರಾಜ್ ಮುಂದೆ ಹಿಡಿಯುತ್ತಾಳೆ. ಅದನ್ನು ನೋಡುತ್ತಾ ಅವರ ಮುಖದಲ್ಲಿ ಒಂದು ಸಣ್ಣ ಕಿರು ನಗೆ ಮೂಡುತ್ತೆ... ೨೫ ವರ್ಷಗಳ ಹಿಂದಿನ ದಿನಗಳು ಅವರ ಕಣ್ಣ ಮುಂದೆ ಒಂದೊಂದಾಗಿ ತೆರೆದುಕೊಳ್ಳುತ್ತವೆ ......

" ಅಮ್ಮ ಕಾಲೇಜ್ ಗೆ ಲೇಟ್ ಆಯಿತು ತಿಂಡಿ ಕೊಡಮ್ಮ" ರಾಜು ರೂಮಿಂದ ಹೊರಗೆ, ಕೂಗುತ್ತಾ ಬರುತ್ತಾನೆ. ಶಾರದಮ್ಮನಿಗೆ ಇಬ್ಬರು ಗಂಡು ಮಕ್ಕಳು. ದೊಡ್ಡವನು ಕಿರಣ ಬಿ.ಇ ಮುಗಿಸಿ IT ಲಿ ಕೆಲಸ ಮಾಡುತ್ತಿದ್ದಾನೆ ಮದುವೆಗೆ ಹೆಣ್ಣು ಹುಡುಕುತ್ತಿದ್ದಾರೆ. ಇನ್ನು ರಾಜು ಮೆಕ್ಯಾನಿಕಲ್ ಬಿ.ಇ ಮಾಡುತ್ತಿದ್ದಾನೆ ೬ ನೇ ಸೆಮಿಸ್ಟರ್ ಮುಗಿಸಿ ಇನ್ನೇನು ೧ ವರ್ಷದಲ್ಲಿ ಇಂಜಿನಿಯರಿಂಗ್ ಪದವೀಧರ ನಾಗ್ತಾನೇ. ಶಾರದಮ್ಮನ ಪತಿ ತೀರಿ ಒಂದೂವರೆ ವರ್ಷವಾಗಿದೆ. ಶಾರದಮ್ಮ ಸ್ಕೂಲ್ ನಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾರೆ ಮುಂದಿನ ೨ ವರ್ಷದಲ್ಲಿ ರಿಟೈರ್ ಆಗುತ್ತಾರೆ. ತೊಂದರೆ ಗಳಿಲ್ಲದ ಸಂಸಾರ ದುಃಖ ಎಂದರೆ ಶಾರದಮ್ಮ ನವರ ಪತಿಯ ಹಠಾತ್ ನಿಧನ. ಈಗ ಆ ದುಃಖವೂ ಸಮಯ ಕಳೆದಂತೆ ಮಾದು ಹೋಗಿದೆ, ಕಿರಣನ ಮದುವೆಯ ಯೋಚನೆ ಎಲ್ಲರಲ್ಲೂ ಹುಮ್ಮಸ್ಸು ಮೂಡಿಸಿದೆ.

ರಾಜು ಸುರ ಸುಂದರಾಂಗ ಹಾಗೆಯೇ ಜಾಣ ಕೂಡ. ಎತ್ತರದ ಮೈಕಟ್ಟು, ಹೊಳೆವ ಕಣ್ಣುಗಳು, ಹಾಲಿನಲ್ಲಿ ಕೇಸರಿ ಕಲಿಸಿದರೆ ಬರುವ ಗುಲಾಬಿ ಮೈ ಬಣ್ಣ, ರೇಷ್ಮೆಯಂತಹ ತಲೆ ಕೂದಲು, ನಕ್ಕರಂತೂ ಮನ್ಮಥ. ಶಾರದಮ್ಮನಿಗಂತೂ ದಿನವೂ ದೃಷ್ಟಿ ತೆಗೆದೂ ತೆಗೆದೂ ಸಾಕಾಗ್ತಿತ್ತು. ಮದುವೆಗಾಗಿ ಸಂಬಂಧಗಳಂತೂ ಆಗಲೇ ನಾ ಮುಂದು ತಾ ಮುಂದು ಎಂದು ಬರುತ್ತಿದ್ದವು. ಅವರಿಗೆ ಕಾರಣ ಹೇಳಿ ಸಾಗ ಹಾಕುವುದರಲ್ಲಿ ಸಾಕು ಬೇಕಾಗಿ ಹೋಗ್ತಿತ್ತು ಅವರಿಗೆ.

" ಬಾರೋ ರೆಡಿ ಇದೆ. ತಿಂಡಿ, ಊಟ, ಇಷ್ಟಕ್ಕೆ ಅಮ್ಮ ನೆನಪಾಗೋದು ನಿಂಗೆ ಒಂದು ದಿನಾನಾದ್ರೂ ಏನಾದ್ರು ಹೆಲ್ಪ್ ಮಾಡ್ಲಾ ಅಂತ ಬರ್ತೀಯ? ನಂಗೂ ಸ್ಕೂಲ್ ಗೆ ಲೇಟ್ ಆಗುತ್ತೆ ಬೇಗ ಬಾ. ಕಿರಣ ಟೇಬಲ್ ಮೇಲೆ ತಿಂಡಿ ಹಾಗೆ ಲಂಚ್ ರೆಡಿ ಮಾಡಿ ಇಟ್ಟಿದ್ದೇನೆ"

ರಾಜು ಟೇಬಲ್ ಬಳಿ ಬರುತ್ತಾ " ಏನಮ್ಮ ನೀನು ದಿನ ಬೈತಿಯ. ಅಷ್ಟು ಜನ ಹೆಣ್ಣು ಕೊಡೋಕೆ ಬರ್ತಾರೆ ಮದುವೆ ಮಾಡಬಾರದ? ನಿಂಗೆ ಹೆಲ್ಪ್ ಮಾಡ್ತಾಳೆ" ಅಂತ ಕಾಲು ಎಳೀತಾನೆ. " ಹೌದಪ್ಪ ಅವಳಿಗೊಂದು ಬಾಕಿ ಇತ್ತು ನೋಡು ಕೂಡಿಸಿ ಮಾಡೋದಿಕ್ಕೆ. ತೆಪ್ಪಗೆ ಮಾಡಿದ್ದು ತಿಂದು ಹೊರಡು " ಅಂತಾರೆ ಶಾರದಮ್ಮ. ಅಲ್ಲಿಗೆ ಬಂದ ಕಿರಣ " ಥ್ಯಾಂಕ್ಸ್ ಅಮ್ಮ. ಲೋ ಬೇಕಿತ್ತಾ ಇದು ಅಂತ ರಾಜುನ ನೋಡಿ ನಗುತ್ತಾನೆ"

ಶಾರದಮ್ಮನವರ ಕುಟುಂಬ ಹೊಸಪೇಟೆಯಿಂದ ಬೆಂಗಳೂರಿಗೆ ಬಂದು ಈಗಾಗಲೇ ೧೦ ವರ್ಷ ಕಳೆದಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾರದಮ್ಮ ಹಾಗೂ ಅವರ ಪತಿ ಬೆಂಗಳೂರಿಗೆ ವರ್ಗಾವಣೆ ತೆಗೆದುಕೊಂಡು ಬಂದಿರುತ್ತಾರೆ. ಕಿರಣ BMS ಕಾಲೇಜು ನಲ್ಲಿ ಇಂಜಿನೀರಿಂಗ್ ಮುಗಿಸಿ ಈಗ ಐಬಿಎಂ ನಲ್ಲಿ ಕೆಲಸ ಮಾಡುತ್ತಿರುತ್ತಾನೆ. ಈಗಾಗಲೇ Netherland ಪ್ರಾಜೆಕ್ಟ್ ಗೆ ಅವನು ಅಲ್ಲಿಗೆ ಹೋಗಬೇಕೆಂದು ಗುರುತಿಸಲಾಗಿದೆ. ಅವನು ಬಹಳ ವರ್ಷಗಳು ಅಲ್ಲೇ ಇರಬೇಕಾಗುತ್ತೆ ಎಂದು ಕಂಪನಿಯಲ್ಲಿ ಹೇಳಿಯಾಗಿದೆ. ಹೀಗಾಗಿ ಮದುವೆ ಮಾಡಿ ಕಳಿಸಬೇಕೆಂಬುದು ಶಾರದಮ್ಮನವರ ಹಠ. ಕಿರಣ ಇದಕ್ಕಾಗಿ ಸ್ವಲ್ಪ ಕಾಲಾವಕಾಶವನ್ನೂ ಕೇಳಿರುತ್ತಾನೆ.

ಇನ್ನು ಕೀರ್ತಿ ರಾಜ್ ಉರ್ಫ್ ರಾಜು ೭ ನೇ ಸೆಮಿಸ್ಟರ್ ಮೆಕ್ಯಾನಿಕಲ್ ಇಂಜಿನಿಯರಿಂಗ್ R V ಕಾಲೇಜಿನಲ್ಲಿ ಮಾಡುತ್ತಿರುತ್ತಾನೆ. ಅವನು ಕಾಲೇಜ್ ಗೆ ಬಂದನೆಂದರೆ ಹುಡುಗರಿಗೆ ಹಬ್ಬದಂತೆ ಅಷ್ಟು ಫ್ರೆಂಡ್ಲಿ ಅವನು. ಇನ್ನು ಹುಡುಗೀರು ಕೇಳಬೇಕೆ? ಅವನು ಕಾಲೇಜ್ ಗೆ ಬಂದಿಲ್ಲ ಅಂದ್ರೆ ಎಲ್ಲಕಡೆ ಒಂದು ರೀತಿ ನೀರವ ಮೌನ ಆವರಿಸಿ ಬಿಟ್ಟಿರುತ್ತೆ ಅಂತಹ ಹುಡುಗ ಅವನು. ಆಟಕ್ಕೂ ಸೈ ಪಾಠಕ್ಕೂ ಸೈ. ಅವನು ಒಂದು ಸಾರಿ ನೋಡಿದನೆಂದರೆ ಹುಡುಗೀರಿಗೆ ಲಾಟರಿ ಹೊಡೆದ ಅನುಭವ. ಹೀಗಂತ ಅವನು ಯಾವಾತ್ತೂ ಅದರ ದುರ್ಲಾಭವನ್ನು ಪಡೆಯುತ್ತಿರಲಿಲ್ಲ. ಚೇಷ್ಟೆಗಳನ್ನು ಮಾಡುತ್ತಿದ್ದನಾಗಲಿ ಅಸಭ್ಯನಂತಿರಲಿಲ್ಲ. ಹೀಗಾಗೇ ಅವನು ಎಲ್ಲರಿಗೂ ಇಷ್ಟವಾಗಿದ್ದ. ಆದರೆ ವಯಸ್ಸು ಕೇಳುವುದೇ ? ಗಾಳಿ ಬೀಸಿದರೆ, ಕಿಡಿ ಬೆಂಕಿಯಾಗಿ ಉರಿವುದಕ್ಕೆ ಅರೆ ಕ್ಷಣ ಸಾಕು. ಇದೆ ಶಾರದಮ್ಮನಿಗೆ ದೊಡ್ಡ ತಲೆನೋವಾಗಿತ್ತು. ಎಷ್ಟೋ ಸಾರಿ ಅವನೇ ಹುಡುಗೀರು ಬರೆದ ಲವ್ ಲೆಟರ್ಸ್ ಶಾರದಮ್ಮನಿಗೆ ತೋರಿಸಿದ್ದ.

"ಅಮ್ಮ ನಾನು ಹೋಗಿ ಬರ್ತೀನಿ" ಅಂತ ರಾಜು ಮನೆಯಿಂದ ಹೊರಡುತ್ತಾನೆ. "ನಾನೂ ಹೊರಡ್ತೀನಿ ಅಮ್ಮಇವತ್ತು ರಾತ್ರಿ ಲೇಟ್ ಆಗುತ್ತೆ ಫ್ರೆಂಡ್ ದು ಪಾರ್ಟಿ ಇದೆ. ಊಟಕ್ಕೆ ಕಾಯಬೇಡ " ಅಂತ ಕಿರಣನೂ ಹೊರಡುತ್ತಾನೆ. "ಹುಷಾರು" ಅಂತ ಶಾರದಮ್ಮ ಕೂಗಿ ಹೇಳ್ತಾರೆ. ಶಾರದಮ್ಮ ಅಷ್ಟರಲ್ಲೇ ತಾವೂ ರೆಡಿ ಆಗಿ ರತ್ನಮ್ಮ ಎಲ್ಲಿದ್ದೀಯ ಅಂತ ಕೆಲಸದವಳನ್ನು ಕೂಗುತ್ತಾರೆ. " ಇಲ್ಲೇ, ಬಟ್ಟೆನ ಮಷೀನ್ ಗೆ ಹಾಕ್ತಾ ಇದ್ದೀನಿ " ಅಂತ ರತ್ನಮ್ಮ ಹೇಳ್ತಾಳೆ. ರತ್ನಮ್ಮ, ಶಾರದಮ್ಮನ ಮನೆಯಲ್ಲಿ ಸುಮಾರು 7 ವರ್ಷದಿಂದ ಕೆಲಸ ಮಾಡುತ್ತ ಇರ್ತಾಳೆ. ಹೀಗಾಗಿ ಅವಳು ಮನೆಯವಳ ಥರಾನೇ ಆಗಿಬಿಟ್ಟಿರ್ತಾಳೆ. ಕಿರಣ , ರಾಜು ಗೆ ಇನ್ನೊಬ್ಬ ಅಮ್ಮನಂತೆ ಆಗಿಬಿಟ್ಟಿರ್ತಾಳೆ. ಅವ್ಳ ಕಷ್ಟಗಳ ಸಮಯದಲ್ಲಿ ಶಾರದಮ್ಮ ಬಹಳ ಸಹಾಯ ಮಾಡಿರ್ತಾರೆ. ರತ್ನಮ್ಮಗೆ ಇಬ್ಬರು ಹೆಣ್ಣು ಮಕ್ಕಳು. ಗಂಡ ಆಟೋ ಓಡಿಸುತಿದ್ದವನು ಈಗ ಹೃದಯದ ತೊಂದರೆ ಇಂದ ಮನೆಯಲ್ಲೇ ಇರ್ತಾನೆ. ಅವನ ಆಪರೇಷನ್ ಗೆ ಶಾರದಮ್ಮನ ಪತಿ ನೇ ದುಡ್ಡು ಕೊಟ್ಟಿರ್ತಾರೆ. ಹೀಗಾಗಿ ರತ್ನಮ್ಮಗೆ ಎಲ್ಲಿಲ್ಲದ ವಿಶ್ವಾಸ ಈ ಕುಟುಂಬದ ಮೇಲೆ. ಶಾರದಮ್ಮನ ಪತಿ ತೀರಿದಾಗಲಂತೂ ಅವಳು,ಶಾರದಮ್ಮ ಮತ್ತು ಮಕ್ಕಳನ್ನು ಯಾವ ಒಡಹುಟ್ಟಿದವರೂ ನೋಡಿಕೊಳ್ಳುವುದಿಲ್ಲ ಹಾಗೆ ಕಾಳಜಿ ಮಾಡಿ ಅವರಿಗೆ ಸಮಾಧಾನ ಮಾಡಿರುತ್ತಾಳೆ. ದೊಡ್ಡ ಮಗಳಿಗೆ ಆಗ್ಲೇ ಮದುವೆ ಮಾಡಿ ಆಗಿತ್ತು. ಚಿಕ್ಕವಳು ಕುಸುಮ ಅಂತ ಈಗ BSc 3 ನೇ ವರ್ಷದಲ್ಲಿ ಓದುತ್ತಿರುತ್ತಾಳೆ . ಅವಳಿಗೆ ಓದುವುದು ತುಂಬಾ ಇಷ್ಟ ಹಾಗೆ ಅಮ್ಮನಿಗೆ ಸಹಾಯವನ್ನೂ ಮಾಡುತ್ತಿರುತ್ತಾಳೆ. ಆದರೆ ರತ್ನಮ್ಮನಿಗೆ ಅವಳು ಮನೆಗೆಲಸದವಳಾಗಬಾರದು ಎಂದು ತನ್ನ ಜೊತೆ ಯಾರ ಮನೆಗೂ ಕರೆದುಕೊಂಡು ಹೋಗುತ್ತಿರುತ್ತಿರಲಿಲ್ಲ. ಅನಾನುಕೂಲವಾದರೆ, ಹೆಚ್ಚೆಂದರೆ ಶಾರದಮ್ಮನ ಮನೆಗಷ್ಟೇ ಕಳಿಸುತ್ತಿದ್ದಳು ಅದೂ ಬಹಳ ವಿರಳ. ಕಳೆದ ೪, ೫ ವರ್ಷದಿಂದ ಎಲ್ಲಿಗೂ ಕರೆದುಕೊಂಡು ಬರುತ್ತಿರಲಿಲ್ಲ. ಶಾರದಮ್ಮ ಆಗಾಗ ಕೇಳುತ್ತಲೇ ಇರುತ್ತಿದ್ದರು " ಹೇಗಾಗಿದ್ದಾಳೆ ನಿನ್ನ ಕುಸುಮ ದೊಡ್ಡವಳಾಗಿರಬೇಕಲ್ಲ ನೋಡೇ ಇಲ್ಲ ನೋಡು ಕರೆದುಕೊಂಡು ಬಾ ನೋಡ್ತೀನಿ ". "ಅಯ್ಯೋ ಹುಡ್ಗೀರ್ನ ಕೇಳ್ತೀರಾ ಅಮ್ಮ, ಕಣ್ ತೆಗೆಯೋದ್ರಲ್ಲೇ ಮರದೆತ್ತರಕ್ಕೆ ಬೆಳೀತಾರೆ, ಹೆಣ್ ಹೆತ್ತೋರ ಭಯ ಯಾಕ್ ಕೇಳ್ತೀರಾ. ಕಾಲೇಜು ಬಿಟ್ಟು ಎಲ್ಲೂ ಬರೋಲ್ಲ ಅಂತಾಳೆ" ಅಂತ ರತ್ನಮ್ಮ ಹೇಳ್ತಿರ್ತಾಳೆ. "ಆಯಿತು ಬಿಡು ಚೆನ್ನಾಗಿ ಓದ್ಲಿ" ಅಂತ ಶಾರದಮ್ಮನೂ ಸುಮ್ನೆ ಆಗ್ತಾಯಿರ್ತಾರೆ.

"ಏನಮ್ಮ ಕರೆದ್ರಾ " ಅಂತ ರತ್ನಮ್ಮ ಹಾಲ್ ಗೆ ಬರ್ತಾಳೆ . "ಅಲ್ಲೇ ಟೇಬಲ್ ಮೇಲೆ ಊಟ ತಿಂಡಿ ಇಟ್ಟಿದ್ದೇನೆ. ತಿಂಡಿ ತಿಂದು ಎಲ್ಲಾ ಕೆಲಸ ಮುಗಿಸಿ ಊಟ ಮಾಡಿ ನಿಮ್ಮ ಮನೆಗೂ ತೆಗೆದುಕೊಂಡು

ಹೋಗು. ನಾನು ಸ್ಕೂಲ್ ಗೆ ಹೊರಡ್ತೀನಿ" ಬೀಗ ಸರಿಯಾಗಿ ಹಾಕ್ಕೊಂಡು ಹೋಗು. ಸರೀನಾ " ಅಂತ ಶಾರದಮ್ಮ ಹೇಳುತ್ತಾ ತಮ್ಮ ಬ್ಯಾಗ್ ತೆಗೆದುಕೊಂಡು ಹೊರಗೆ ನಡಿಯುತ್ತಾರೆ. 'ಸರಿ ಅಮ್ಮೋರೆ ರಾತ್ರಿ ಅಡುಗೆಗೆ ಏನಾದ್ರು ತರಕಾರಿ ಹೆಚ್ಚಿ ಇಡಬೇಕಾ " ಎಂದಾಗ "ಬೇಡ ರತ್ನಮ್ಮ ಕಿರಣಗೆ ಊಟ ಬೇಡವಂತೆ ಇನ್ನ ರಾಜು ದು ಹೇಳೋಕ್ಕೆ ಬರೋಲ್ಲ ಅವನು ಬಂದಮೇಲೆ ನಾನು ಕೇಳಿ ಮಾಡ್ತೇನೆ' ಎಂದು ಹೊರಡುತ್ತಾರೆ.

ಶಾರದಮ್ಮ ಮನೆಯ ಗೇಟ್ ತೆಗೆದು ಹೊರನಡೆಯುವಷ್ಟರಲ್ಲಿ ಎದುರಿಗೆ ಕುಸುಮ ಬರುತ್ತಾಳೆ. "ಅಮ್ಮೋರೆ , ಅಮ್ಮ ಇಲ್ಲೇ ಇದ್ದಾರಾ?" ಅಂತ ಕೇಳ್ತಾಳೆ. ಶಾರದಮ್ಮ ಒಂದು ರೀತಿಯ ವಿಸ್ಮಯ ದಿಂದ ಅವಳನ್ನು ನೋಡುತ್ತಾರೆ. " ಯಾರೇ ನೀನು ಕುಸುಮ ನ? ಅಯ್ಯೋ ಏನ್ ಚಂದ ಆಗ್ಬಿಟ್ಟೀಯೇ? ಎಂದು ಅವಳ ಗಲ್ಲ ಹಿಡಿದು ಕೇಳ್ತಾರೆ. ನಸುಗಪ್ಪು ಬಣ್ಣದಲ್ಲಿ ಕುಸುಮ ಮಿಂಚುತ್ತಿರುತ್ತಾಳೆ. ದುಂಡು ಮುಖ ತೀಡಿದಂತಿದ್ದ ಹುಬ್ಬು, ಹೊಳೆವ ಬಟ್ಟಲ ಕಣ್ಣುಗಳು, ಎಣ್ಣೆ ಹಚ್ಚಿ ನಡುಬೈತಲೆ ತೆಗೆದು ಬಾಚಿ ಜಡೆಹಾಕಿದ; ಸೊಂಟ ದಾಟಿದ ಕೂದಲು,ಮಾಟವಾದ ಮೂಗು,ಕಂದು ನೇರಳೆ ಮಿಶ್ರಿತ ಬಣ್ಣದ; ಮುಟ್ಟಿದರೆ ಒಡೆದು ಹೋಗುವ ರಸತುಂಬಿದ ನೇರಳೆ ಹಣ್ಣಂತಿದ್ದ ತುಟಿಗಳು, ಹದವಾದ ಕೆನ್ನೆಗಳು, ಮೈಗೆ ಬಿಗಿಯಾಗಿ ಅಂಟಿಕೊಂಡ ಚೂಡಿದಾರದ ಟಾಪ್ ಹಾಗೂ ಪ್ಯಾಂಟ್ನಲ್ಲಿ ನೋಡುಗರ ಕಣ್ ಸೆಳೆಯುವ ನವ ಯೌವ್ವನದ ಅಂಕು ಡೊಂಕುಗಳು, ಮೈಮಾಟಕ್ಕೆ ಹೋಲುವ ಎತ್ತರ. ಎಲ್ಲವನ್ನೂ ಗಮನಿಸ್ತಾ ಶಾರದಮ್ಮ ಹಾಗೆ ನಿಂತುಬಿಡ್ತಾರೆ. " ಹೌದು ಅಮ್ಮೋರೆ " ಎಂದು ಕುಸುಮ ಅಂದಾಗ "ರತ್ನಮ್ಮ ನಿನ್ ಮಗಳು ಬಂದಿದಾಳೆ ನೋಡೇ" ಎಂದು ಒಳಗೆ ಕರೆದುಕೊಂಡು ಬರ್ತಾರೆ. ರತ್ನಮ್ಮ ಒಳಗಡೆಯಿಂದ ಬಂದು " ಏನೇ ಕಾಲೇಜು ಇಲ್ವಾ, ಯಾಕೆ ಬಂದೆ ಇಲ್ಲಿಗೆ ?" ಅಂತ ಕೇಳ್ತಾರೆ. " ಅಮ್ಮ ಅದು ಬಸ್ ಪಾಸ್ ಗೆ ಹಣ ಬೇಕಿತ್ತು ಅದಿಕ್ಕೆ ಬಂದೆ. ಇವತ್ತು ಕಾಲೇಜಿನಿಂದ ಬರೋವಾಗ ಮಾಡಿಸ್ಕೊಂಡು ಬರ್ತೇನೆ" ಅಂತ ಹೇಳ್ತಾಳೆ. " ಅಯ್ಯೋ ತಡಿ ಕೊಡ್ತೇನೆ ಬೆಳಿಗ್ಗೆ ಕೇಳಬೇಕು ತಾನೇ ಇಷ್ಟು ದೂರ ಯಾಕೆ ಬರೋದು? ಈಗ ಮತ್ತೆ ಅಷ್ಟು ದೂರ ಹೋಗ್ಬೇಕು" ಅಂತ ರತ್ನಮ್ಮ ಹೇಳ್ತಾರೆ. “ಇಲ್ಲ ಅಮ್ಮ ಇಲ್ಲಿಂದ ಬಸ್ ಇದೆ ಅದಿಕ್ಕೆ ಹೋಗ್ತೇನೆ” ಅಂತ ಅವಳು ಹೇಳ್ತಾಳೆ. " ಏನೇ ರತ್ನಮ್ಮ ನಿನ್ ಮಗಳು ಎಷ್ಟು ಚಂದ ಆಗ್ಬಿಟ್ಟಿದ್ದಾಳೆ? ಹುಷಾರಾಗಿ ನೋಡ್ಕೋ ಅವ್ರಿವರಿಗೆ ಕಟ್ಟಿಬಿಟ್ಟೀಯೇ ಒಳ್ಳೆ ಸಂಬಂಧ ನೋಡಿ ಕೊಡು. ಗಿಣಿನ ಒಯ್ದು ಹದ್ದಿಗೆ ಕೊಡಬೇಡ. ನಂದೇ ದೃಷ್ಟಿ ತಾಕುವಂತಿದ್ದಾಳೆ ಸಂಜೆಗೆ ದೃಷ್ಟಿ ತೇಗಿ" ಅಂತಾರೆ ಶಾರದಮ್ಮ. ಕುಸುಮ ನಾಚುತ್ತ ನೆಲ ನೋಡುತ್ತಾಳೆ . " ಅದೇ ಅಮ್ಮೋರೆ ಇವ್ಳು ಹಿಂಗೆ ಬೆಳೆದಿರೋದೇ ನಂಗೆ ಭಯ . ಕಾಲೇಜು ಇಂದ ಮನೆಗೆ ಬರೋವರೆಗೆ ಜೀವದಲ್ಲಿ ಜೀವ ಇರೋಲ್ಲ. ಇನ್ನು ನಮ್ ಮಂದಿನೋ ಮದುವೆ ಮಾಡು ಮಾಡು ಅಂತ ಹಿಂದೆ ಬಿದ್ದಿದ್ದಾರೆ ಯಾವುದ್ಯಾವುದೋ ಸಂಬಂಧ ತರ್ತಾರೆ. ದಿನ ಇದೇ ಜಗಳ ಮನೇಲಿ. ಇವ್ಳು ನೋಡಿದ್ರೆ ಓದುತ್ತೇನೆ ಕೆಲಸ ಮಾಡ್ತೀನಿ ಅಂತಾಳೆ. ಆದ್ರೆ ಇವರಪ್ಪ BSc ಮುಗಿಯೋಣ ಮದುವೆ ಅಂತ ಇದ್ದಾರೆ. ಮಡಿಲಲ್ಲಿ ಕೆಂಡ ಇಟ್ಕೊಂಡು ಓಡಾಡ್ತಿದ್ದೀನಿ. ಇವಳು ಏನೇನು ಕನಸು ಇಟ್ಕೊಂಡಾಳೋ ಏನೋ ಕಾಲೇಜಿಗೆ ಬೇರೆ ಹೋಗ್ತಾಳೆ. ನಮ್ಮ ಜಾತಿಯಲ್ಲಿ ಇಷ್ಟು ಓದಿದೋರೇ ಇಲ್ಲ. ಏನೋ ವ್ಯವಸಾಯನೋ, ಮೇಸ್ತ್ರಿನೋ ಆಗಿದ್ರೆ ಅದೇ ಹೆಚ್ಚು. ನಂಗೂ ಇವಳು ಒಬ್ಬ ಓದಿದೋನ ಕೈಹಿಡಿದು ಸುಖವಾಗಿರಲಿ ಅಂತ ಆಸೆ ಅಂಥೋನು ಸಿಗಬೇಕು ಅಷ್ಟೇ. ದ್ಯಾವ್ರು ಇವಳಿಗೆ ಯಾಕೆ ಇಷ್ಟು ಅಂದ ಕೊಟ್ಟನೋ ಏನೋ ಅಂತ ಅನ್ಸುತ್ತೆ ಇವಳ ಮುಂದೆ ಯಾರು ಬಂದ್ರೂ ಹೆತ್ತ ಕರುಳು ಒಪ್ಕೋತಾಇಲ್ಲಮ್ಮಾ " ಅಂತ ರತ್ನಮ್ಮ ಹೇಳುತ್ತಾ ಹಣವನ್ನ ಕುಸುಮಾಗೆ ಕೊಡ್ತಾಳೆ. " ಇರ್ಲಿ ಬಿಡು ರತ್ನಮ್ಮ ದೇವರು ಎಲ್ಲೊ ಒಂದು ಜೋಡಿ ಮಾಡಿರ್ತಾನೆ" ಅಂತ ಶಾರದಮ್ಮ ಹೇಳ್ತ ಅವಳ ತಲೆ ಮೇಲೆ ಕೈ ಇಟ್ಟು ಹೊರಡುತ್ತಾರೆ . "ಹುಷಾರು ಕುಸುಮಿ " ಅಂತ ರತ್ನಮ್ಮ ಒಳಗೆ ನಡೀತಾರೆ ಕುಸುಮ ಗೇಟ್ ಬಾಗಿಲು ಹಾಕಿ ಬಸ್ ಸ್ಟಾಪ್ ನೆಡೆಗೆ ಹೋಗುತ್ತಾಳೆ.

ಕುಸುಮ ಬಸ್ಸ್ಟಾಪ್ ಗೆ ಬರುತ್ತಾಳೆ. ಅಲ್ಲೇ ರಾಜು ಅವನ ಗೆಳೆಯರೂ ಬಸ್ ಗಾಗಿ ಕಾಯ್ತಾ ಇರ್ತಾರೆ. " ಲೋ ನೋಡೋ ಅಲ್ಲಿ ಸ್ವಲ್ಪ ಕಪ್ಪಗಿದ್ರೂ ಏನು ಚಂದ" ಅಂತ ರಾಜು ನ ಫ್ರೆಂಡ್ಸ್ ಹೇಳ್ತಾರೆ. ರಾಜು ಕುಸುಮ ನ ಕಡೆ ನೋಡ್ತಾನೆ. ಅವನಲ್ಲೂ ಒಂದು ಮಿಂಚು ಹರಿದ ಹಾಗೆ ಆಗುತ್ತೆ. " ಅಬ್ಬಾ ಹೌದ್ರಲೋ.. ಶ್ಯಾಮಲೆ. ಅವಳ ಬ್ಯೂಟಿ ನೇ ಅವಳಿಗೆ ಶೃಂಗಾರ" ಅಂತಾನೆ ರಾಜು. " ಆಯಿತು ಬಿಡ್ರಲೋ ಇವನ ಕಣ್ಣು ಬಿದ್ಮೇಲೆ ಇನ್ನು ನಮ್ಮನ್ಯಾರು ನೋಡ್ತಾರೆ .. ಶ್ಯಾಮಲೆ ಮೇಲೆ ಶ್ಯಾಮನ ಕಣ್ಣು

ಬಿತ್ತು ಮುಗೀತು ಅಷ್ಟೇ" ಅಂತ ನಗ್ತಾರೆ. ಅಷ್ಟರಲ್ಲೇ ಕುಸುಮನ ಕಣ್ಣುಗಳು ರಾಜು ನ ನೋಡುತ್ತವೆ. ಅವಳಿಗೆ ತಿಳಿಯದಂತೆ ಅಲ್ಲೇ ನಾಟಿಹೋಗುತ್ತವೆ. " ಲೋ ನೋಡೋ ಹೇಗೆ ನೋಡ್ತಾ ಇದಾಳೆ" ಅಂತ ಫ್ರೆಂಡ್ಸ್ ನಗ್ತಾರೆ. ಅವರು ನಗೋದು ನೋಡಿ ಕುಸುಮಾಗೆ ಏನು ಮಾಡ್ತಾ ಇದ್ದೀನಿ ಅಂತ ಅನಿಸಿ ಬೇರೆ ಕಡೆ ತಿರುಗುತ್ತಾಳೆ. ಆದರೆ ಮನಸ್ಸು ಅವನನ್ನೇ ನೋಡಬೇಕು ಅಂತ ಹಠ ಮಾಡುತ್ತಾ ಇರುತ್ತೆ. ಅಷ್ಟರಲ್ಲೇ ಕೆಂಗೇರಿ ಕಡೆ ಹೋಗೋ ಬಸ್ ಬರುತ್ತೆ. ಬಹಳ ಜನಸಂದಣಿ ಇರುತ್ತೆ. ರಾಜು ಮತ್ತು ಅವನ ಗೆಳೆಯರು ಹತ್ತಿಬಿಡ್ತಾರೆ ಕುಸುಮ ಹೇಗೋ ಮಾಡಿ ಬಸ್ ಏರಿ ಒಳಗೆ ಬರ್ತಾಳೆ. ಅವಳು ಮುಂದಿನ ಬಾಗಿಲಿನಿಂದ ಏರುತ್ತಾಳೆ ಹುಡುಗರು ಇನ್ನೊಂದು ಬಾಗಿಲಿನಿಂದ ಏರುತ್ತಾರೆ. ಅವಳ ಕಣ್ಣುಗಳು ಅವನನ್ನೇ ಹುಡುಕುತ್ತ ಇರುತ್ತವೆ. ತುಂಬಾ ರಶ್ ಇದ್ದುದರಿಂದ ಅವನೆಲ್ಲಿದ್ದಾನೆ ಅಂತ ಹುಡುಕೋದು ಕಷ್ಟವಿರುತ್ತೆ. ಅವಳು ಹಾಗೇ ಕೊಸರಿ ಕೊಂಡು ಒಳಗಡೆ ಬರ್ತಾಳೆ. ಬಸ್ ಹೊಯ್ದಾಟಕ್ಕೆ ಅವಳಿಗೆ, ಆಸರೆಗೆ ಸೀಟಿನ ಕಂಬಿಯೊ ಅಥವಾ ಮೇಲೆ ಅಳವಡಿಸಿದ ಕೈಆಸರೆ ಗಳೂ ಸಿಗದೇ ಹೋಗಿರುತ್ತೆ ಅಷ್ಟು ರಶ್, ಬಸ್ ತುಂಬಾ ಜನ. ೯೦ ಪ್ರತಿಶತ ಕಾಲೇಜು ಹುಡುಗ, ಹುಡುಗೀಯರೇ ತುಂಬಿರ್ತಾರೆ. ಬಸ್ ಹೊಯ್ದಾಡುತಿದ್ದಂತೆ ಅವಳು ಮುಂದಿನವರ ಮೇಲೆ ಬೀಳುವುದನ್ನು ತಪ್ಪಿಸಲು ತನ್ನಡೆಗೆ ಬೆನ್ನು ಮಾಡಿ ನಿಂತಿದ್ದ ಯುವಕನ ಬೆನ್ನಿಗೆ ತನ್ನ ಕೈ ಇಟ್ಟು ಸಾವರಿಸಿಕೊಳ್ಳುತ್ತಿರುತ್ತಾಳೆ. ಅಷ್ಟರಲ್ಲೇ ಅವಳಿಗೆ ಪಿಸುಧ್ವನಿಯಲ್ಲಿ "ಲೋ ನೋಡೋ ಅವಳೇ, ನಿನ್ನ ಹಿಡ್ಕೊಂಡಿದ್ದಾಳೆ" ಅಂತ ಅನ್ನೋದು ಕೇಳುತ್ತೆ. ಅವನು ತಿರುಗಿ ನೋಡೋ ಕ್ಷಣದಲ್ಲಿ ಇವಳು ನೋಡುತ್ತಾಳೆ. ಅವನು ರಾಜು ನೇ ಇರ್ತಾನೆ. ಅವಳಿಗೆ ಏನೋ ಬಾನಲ್ಲಿ ಹಾರಾಡಿದ ಅನುಭವ. ಇಷ್ಟರ ವರೆಗೆ ಕೇವಲ ಆಸರೆ ಗಾಗಿ ಹಿಡೀತಿದ್ದ ಅವಳ ಕೈ ಅವನ ಅಂಗಿಯನ್ನು ಬಿಗಿಯಾಗಿ ಹಿಡಿದಿರುತ್ತಾಳೆ. ಅವನ ಹಾಗು ಅವಳ ನಡುವೆ ಅಂತರ ಕಡಿಮೆ ಯಾಗಿರುತ್ತೆ. ಆ ಬಸ್ ನ ಹೊಯ್ದಾಟದಲ್ಲಿ ಅವಳ ದೇಹ ಅವನ ಸ್ಪರ್ಶ ವನ್ನು ಆನಂದಿಸುತ್ತಿರುತ್ತೆ. ರಾಜು ನ ಫ್ರೆಂಡ್ಸ್ ಕಣ್ಣು ಮಿಟುಕಿಸುತ್ತಾರೆ ಆಗ ರಾಜು " ಲೋ ಹೋಗಲಿ ಬಿಡ್ರೋಲೋ ಪಾಪ ರಶ್ ಇದೆ" ಅಂತ ಹೇಳ್ತಾನೆ ಮೆಲ್ಲನೆ. "ಹೌದು ಹೌದು ಪಾಪ " ಅಂತ ಅವರು ರೇಗಿಸ್ತಾರೆ. ಅಷ್ಟರಲ್ಲೇ ಕಂಡಕ್ಟರ್ "ಬನಶಂಕರಿ ಇಳ್ಕೊಳ್ರಿ " ಅಂತಾನೆ ಕುಸುಮ ಮುಂದಿನ ಬಾಗಿಲಿನಿಂದ ಇಳೀತಾಳೆ. ಇಳಿದು ಒಮ್ಮೆ ಕಿಟಕಿಯ ಮೂಲಕ ರಾಜುನ ಹುಡುಕುತ್ತಾಳೆ ರಾಜು ನೂ ಆಕಡೆ ನೇ ನೋಡ್ತಿರ್ತಾನೆ ಮತ್ತೆ ಕಣ್ಣುಗಳು ಕೂಡುತ್ತವೆ. ಹಾಗೆ ನಾಚುತ್ತ ತಲೆ ಬಗ್ಗಿಸಿ ನಡೆಯುತ್ತಾಳೆ. ಆ ಕಡೆ ಬಸ್ ಕೂಡ ಚಲಿಸುತ್ತದೆ.

ಕುಸುಮ ಬನಶಂಕರಿ ಬಸ್ ಸ್ಟಾಂಡ್ ನೆಡೆಗೆ ನಡೆಯುತ್ತಾಳೆ ಅಲ್ಲಿ ಅವಳು ತನ್ನ ಪಾಸ್ ಮಾಡಿಸಿಕೊಂಡು ಕಾಲೇಜ್ ಗೆ ಹೋಗುವುದೆಂದು ಅವಳು ನಿರ್ಧರಿಸಿರುತ್ತಾಳೆ. ಅವಳು ಅತ್ತ ನಡೆಯುವಾಗ ತಿರು ತಿರುಗಿ ಬಸ್ ಹೋದಕಡೆಗೆ ನೋಡುತ್ತಾ ನಡೆಯುತ್ತಾಳೆ. ಏಕೋ ಅವಳಿಗೆ ರಾಜು ನ ಮುಖ ಮರೆಯಲು ಆಗುತ್ತಾ ಇರುತ್ತಿರಲಿಲ್ಲ. ಬಸ್ ನಿಂದ ಇಳಿದಿದ್ದರೂ ಮನಸ್ಸು ಇನ್ನೂ ಹೊಯ್ದಾಡುತ್ತಲೇ ಇತ್ತು. ಅವನ ಸ್ಪರ್ಶ ನೆನಪಾಗುತ್ತಲೇ ಇತ್ತು. ಏಕೋ, ಏನೋ ಕಳೆದುಕೊಂಡಂತೆ ಭಾಸವಾಗುತ್ತಿತ್ತು. ತಿಳಿಯದಲೇ ಕಣ್ಣುಗಳೂ ನೀರಾಡಿದ್ದವು ಹೃದಯ ರೋಧಿಸುತ್ತಿತ್ತು. ಏನೋ ಚಡಪಡಿಕೆ ಅವಳಿಗೆ. ಯಾವತ್ತೂ ಈ ರೀತಿ ಆಗಿರಲಿಲ್ಲ. ಎಷ್ಟೋ ಹುಡುಗರು ಅವಳ ಹಿಂದೆ ಬಂದಿದ್ದರು . ಇವಳೂ ಎಷ್ಟೋ ಹುಡುಗರನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದಳು. ಆದರೆ ಈ ಅನುಭವ ಅವಳಿಗೆ ಮೊದಲು. ತನಗೆ ಬಹು ಇಷ್ಟವಾದ ವಸ್ತುವನ್ನು ತನ್ನಿಂದ ಯಾರೋ ಕಸಿದುಕೊಂಡಂತೆ ಅವಳಿಗೆ ಭಾಸವಾಗುತ್ತಿತ್ತು. ಮೌನವಾಗಿ ನಡೆದು ಕೌಂಟರ್ ಬಳಿ ಬಂದಳು. ಅವಳ ಸರದಿ ಬಂದಾಗ ಹಾಗೆ ನಿಂತು ಬಿಟ್ಟಿದ್ದಳು. " ಬೇಗ ದುಡ್ಡು ಕೊಡಮ್ಮ ಇನ್ನು ಎಷ್ಟು ಜನ ಇದಾರೆ ನೋಡು ಹಿಂದೆ " ಎಂದು ಆ ಮನುಷ್ಯ ಅಂದಾಗ್ಲೇ ಅವಳಿಗೆ ಎಚ್ಚರ. ಪಾಸ್ ತೆಗೆದುಕೊಂಡು ಏನಾಗಿದೆ ತನಗೆ ಎಂಬ ಚಿಂತೆಯಲ್ಲೇ ಕಾಲೇಜು ಕಡೆಗೆ ನಡೆದಳು.

ಇತ್ತ ರಾಜು ಗೂ ಯಾಕೋ ಅವಳ ನೋಟ ಬಾರಿ ಬಾರಿ ಅವನ ಕಣ್ಣೆದುರು ಬರುತ್ತಿತ್ತು. ಅವನಿಗೂ ಈ ರೀತಿ ಆಗಿದ್ದುಇದೆ ಮೊದಲು. ಅವಳ ಚೆಲುವು ಮುಗ್ಧ ನೋಟ ಅವನ ತಲೆ ಕೆಡಿಸಿದ್ದವು. ಅದೇ ಗುಂಗಿನಲ್ಲಿ ಅವನು ತನ್ನ ತರಗತಿ ಕಡೆಗೆ ನಡೆದನು. ನಾಳೆ ಮತ್ತೆ ಅವಳು ಬಸ್ ಸ್ಟಾಪ್ ನಲ್ಲಿ ಸಿಗಬಹುದು ಎಂಬ ಯೋಚನೆ ಯೊಂದಿಗೆ ಸಮಾಧಾನ ಮಾಡಿಕೊಂಡನು.

ಸಂಜೆ 4 ಆಗಲಿಕ್ಕೆ ಬಂದಿತ್ತು, ಕುಸುಮ ಮನೆಗೆ ಹೊರಡಬೇಕು. ಅವಳಿಗೆ ಗೊತ್ತಿಲ್ಲದೇ ಅವಳ ಕಾಲುಗಳು ಅವಳನ್ನು ಬನಶಂಕರಿ ಬಸ್ಸ್ಟ್ಯಾಂಡ್ ನೆಡೆಗೆ ಏಳಿಯುತ್ತಿದ್ದವು. " ಏ ಕುಸುಮ ಏನೆ ಆ ಕಡೆಗೆ

ಹೋಗುತ್ತಿದ್ದೀ ನಮ ಜೊತೆ ಬರೋಲ್ವಾ" ಅವಳ ಮನೆ ಹತ್ತಿರವಿರುವ ಗೆಳತಿಯರು ಕೇಳಲು ಅವಳು ಮಾತಾಡದೆ ಆ ಕಡೆಗೆ ನಡೆದಳು. " ಇವತ್ತು ಏನಾಗಿದೆ ಇವಳಿಗೆ" ಎನ್ನುತ್ತಾ ಅವರು ತಮ್ಮ ಹಾದಿ ನಡೆಯುತ್ತಾರೆ. ಈ ಕಡೆ "ಲೋ ರಾಜು ಹೊಸ ಪಿಕ್ಚರ್ ಬಂದಿದೆ ಹೋಗೋಣವೆ " ಗೆಳೆಯರು ರಾಜೂನ್ನ ಕೇಳಿದಾಗ " ಬೇಡ ಕಣ್ರೋ ಏನೋ ಒಂಥರಾ ಇದೆ ಮನೆಗೆ ಹೋಗ್ತೀನಿ ನೀವು ಹೋಗಿ ಬನ್ನಿ" ಅಂತ ಬಸ್ ಸ್ಟಾಪ್ ಗೆ ಹೊರಡುತ್ತಾನೆ. " ಏನೋ ಒಂದ್ ಥರ.. ಏನೋ ಒಂದ್ ಥರ ... " ಹಾಡು ಹೇಳುತ್ತಾ ರಾಜುನ ರೇಗಿಸ್ತಾರೆ ಆದರೆ ಅವನು ಏನು ಹೇಳದೆ ಹೊರಡುತ್ತಾನೆ. ಗೆಳೆಯರು ಮುಖ ಮುಖ ನೋಡಿಕೊಂಡು ನಗುತ್ತ ಹೊರಡುತ್ತಾರೆ.

ಬನಶಂಕರಿ ಬಸ್ ಸ್ಟಾಪ್ ನಲ್ಲಿ ಬಂದ ಕುಸುಮ ಗೆ ತಾನೇನು ಮಾಡುತ್ತಿದ್ದೇನೆ? ಸರಿಯೇ ? ಎಂಬ ಪ್ರಶ್ನೆ ಗಳು ತಲೆಯಲ್ಲಿ ಬರುತ್ತವೆ. ಕೆಲವೇ ನಿಮಿಷಗಳಲ್ಲಿ ತನ್ನ ಸರ್ವಸ್ವವೂ ಅವನೇ ಎಂಬ ಭಾವನೆ, ತನ್ನನು ಕಷ್ಟದಿಂದ ಸಾಕಿ ಸಲುಹಿದ ಅಮ್ಮನ ನೆನಪನ್ನೂ ಮರೆ ಮಾಚಿತೆ ಎಂಬ ಯೋಚನೆ ಬಂದು ಛೆ !! ತಾನೆಷ್ಟು ಸ್ವಾರ್ಥಿ ಎಂದು ಕೊಳ್ಳುತ್ತಾಳೆ. ಆ ಪಾಪ ಪ್ರಜ್ಞೆ ತಾಳದೆ .. ತನ್ನ ಮನೆಯ ಕಡೆಗೆ ಹೋಗುವ ಬಸ್ ಹಿಡಿದು ಹೊರಡುತ್ತಾಳೆ. ಬಸ್ ನಲ್ಲಿ ಕುಳಿತು ನಿರಾಳ ವಾಗಿದ್ದರೂ; ಏಕೆ ಹೀಗಾಯ್ತು? ಅಷ್ಟು ಹತ್ತಿರ ಅವನು ಹೇಗಾದ? ಅವನು ಯಾರು ಅಂತಾನೂ ಗೊತ್ತಿಲ್ಲ ಆದರೆ ಏನೋ ನಂಬಿಕೆ ಏನೋ ಸೆಳೆತ ಸದಾ ಅವನ ಬಳಿಯಲ್ಲೇ ಅವನ ಜೊತೆಯಲ್ಲೇ ಇರುವ ಆಸೆ, ಅವನನ್ನು ಕಾಣುವ ತವಕ!!.. ಪ್ರಶ್ನೆಗಳು, ನೋವು ಅವಳ ಎದೆಯನ್ನು ಕೊರೆಯುತ್ತಿದ್ದವು.

ಒಬ್ಬರು ಇನ್ನೊಬ್ಬರ ಗುಂಗಿನಲ್ಲಿ ತಮ್ಮ ತಮ್ಮ ಮನೆ ಸೇರುತ್ತಾರೆ. ಅವರ ನಡುವಳಿಕೆ ಅಂದೇಕೋ ಬದಲಾಗಿದ್ದನ್ನು ಕಂಡ ಅವರ ಮನೆಯವರು ವಿಚಾರಿಸಿದರೂ ಏನೂ ಹೇಳದೆ ಮೌನಕ್ಕೆ ಶರಣಾಗುತ್ತಾರೆ.

ಹಾಗೆ ದಿನಗಳು ಕಳೆಯುತ್ತವೆ. ರಾಜು ಕುಸುಮಾಳನ್ನು ಆಗಲೇ ಮರೆತಿರುತ್ತಾನೆ ಆದರೆ ಕುಸುಮಾಗೆ ಅವನನ್ನು ಮರೆಯಲು ಕಷ್ಟಪಡುತ್ತಿರುತ್ತಾಳೆ. ಆ ದಿನ ರಜಾ ದಿನವಾಗಿರುತ್ತೆ. ಬೆಳಿಗ್ಗೆ ೧೦ ಘಂಟೆಯ ಸಮಯ.

ರತ್ನಮ್ಮ: "ಕುಸುಮಿ ಲೇ ಕುಸುಮಿ ಯಾಕೋ ಬೆನ್ನು ನೋವಾಗ್ತಿದೆ ಕಣೆ ಸ್ವಲ್ಪ ಶಾರದಮ್ಮೋರ ಮನೆಗೆ ಹೋಗಿ ಬೆಳಿಗ್ಗಿನ ಕೆಲಸ ಮಾಡಿ ಬರ್ತೀಯ? ಪಾತ್ರೆ ತೊಳೆದು ಬಟ್ಟೆ ಮಷೀನ್ ಗೆ ಹಾಕಿ ಬಾ ನಾನು ಅಷ್ಟರಲ್ಲೇ ಬರ್ತೀನಿ"

ಕುಸುಮ: " ಏ ಹೋಗಮ್ಮ ನಂಗೆ ಪ್ರಾಜೆಕ್ಟ್ ರಿಪೋರ್ಟ್ ಎಲ್ಲ ರೆಡಿ ಮಾಡಬೇಕು ನಾಳೆ ಕೊಡಬೇಕು "

ರತ್ನಮ್ಮ :" ನಂಗೆ ತುಂಬಾ ನೋವಾಗ್ತಿದೆ ಕಣೆ, ಶಾರದಮ್ಮಗೂ ಮಾಡಿಕೊಳ್ಳೋಕೆ ಆಗೋಲ್ಲ ಮನೇಲಿ ಗಂಡು ಮಕ್ಕಳು ಹೋಗಿ ಬೇಗ ಬಂದ್ಬಿಡು " ಅಂತಾಳೆ

ಕುಸುಮ ಒಲ್ಲದ ಮನಸ್ಸಿನಿಂದ ಹೊರಡುತ್ತಾಳೆ. ಅವಳನ್ನು ನೋಡಿ "ಯಾಕೆ ಅಮ್ಮ ಬರ್ಲಿಲ್ವಾ?" ಅಂತ ಶಾರದಮ್ಮ ಕೇಳ್ತಾರೆ. "ಇಲ್ಲ ಅಮ್ಮಗೆ ಸ್ವಲ್ಪ ಬೆನ್ನು ನೋವಂತೆ ಅದಿಕ್ಕೆ ನನ್ನ ಹೋಗು ಅಂದ್ರು " ಅಂತಾಳೆ ಕುಸುಮ. "ಅಯ್ಯೋ ಮಾತ್ರೆ ತೊಗೊಂಡ್ಲಾ? ಆಯಿತು ಬಿಡು ನಂಗೂ ರಜೆ ಇವತ್ತು ಇಬ್ರೂ ಸೇರಿ ಮಾಡ್ಕೊಳ್ಳೋಣ ಬಾ. ಪಾಪ ನಿಂಗೂ ಓದೋದು ಇರುತ್ತೆ ಬೇಗ ಮುಗಿಸಿ ಹೋಗುವಿಯಂತೆ. ಮೊದಲು ತಿಂಡಿ ತಿಂದ್ಬಿಡು" ಶಾರದಮ್ಮ ತಿಂಡಿ ಕಾಕಿ ಕೊಡ್ತಾರೆ . ತಿಂಡಿ ತಿಂದು ಪ್ಲೇಟ್ ತೆಗೆದುಕೊಂಡು ಪಾತ್ರೆ ತೊಳೆಯಲು ಸಿಂಕ್ ಕಡೆಗೆ ಹೋಗ್ತಾಳೆ. ಎದಿರು ಯಾರೋ ಬಂದಂತೆ ಆಗುತ್ತೆ. ಅವಳು ದಾರಿ ಬಿಟ್ಟು ಪಕ್ಕಕ್ಕೆ ಸರೀತಾಳೆ ಆದರೆ ಎದುರಿಗಿದ್ದವರು ಹೋಗೋದೆಯಿಲ್ಲ.ಅವಳು ಮುಖ ಎತ್ತಿ ನೋಡುತ್ತಾಳೆ. ಮೈಯಲ್ಲಿ ಒಮ್ಮೆಲೇ ಕರೆಂಟ್ ಹೊಡೆದ ಹಾಗೆ ಆಗುತ್ತೆ. ತುಟಿ ಮೇಲೆ ತುಂಟ ನಗೆ ಹೊತ್ತು ರಾಜು ನಿಂತಿರ್ತಾನೆ. ಅವಳಿಗೆ ಏನು ಮಾಡಬೇಕೋ ಗೊತ್ತಾಗದೆ ಒದ್ದಾಡುತ್ತಾಳೆ. ಅಷ್ಟರಲ್ಲೇ ಶಾರದಮ್ಮ ಕೂಗಿದ ದನಿ ಕೇಳಿ, ಬದುಕಿದೆ ಎಂದು ಸರ ಸರನೆ ಹೋಗುತ್ತಾಳೆ. ಹೋಗುವಾಗ ಅವಳ ಮುಖ ಕೆಂಪೇರಿ,ತುಟಿ ಅದುರುತ್ತಿ ರುತ್ತವೆ , ಹಾಕಿ ಕೊಂಡ ಟಾಪ್ ಬಿಗಿಯಾದಂತೆನಿಸಿ ಉಸಿರು ಕಟ್ಟುವಂತೆ ಆಗಿ ರುತ್ತದೆ

ಇವಳು ಪಾತ್ರೆ ತಿಕ್ಕುತ್ತಿದ್ದಳು ಶಾರದಮ್ಮ ಅವುಗಳನ್ನು ತೊಳೆದು ಹಾಕುತ್ತ ಮಾತನಾಡುತ್ತಿದ್ದರು. ಕುಸುಮಾಗೆ ಆ ಕಡೆ ಲಕ್ಷ್ಯನೇ ಇರಲಿಲ್ಲ ಸುಮ್ಮನೆ ಹಾಂ ಹ್ಞೂ ಅನ್ನುತ್ತಿದ್ದಳು. ಅವಳ ಧ್ಯಾನವೆಲ್ಲ ರಾಜು ನ ಬಗ್ಗೆ. "ಕುಸುಮ ಇದು ಆಯಿತು ನೀನು ಬಟ್ಟೆ ಮಷೀನ್ ಗೆ ಹಾಕಿ ಹೋಗು ನಾನು ಸ್ನಾನಕ್ಕೆ ಹೋಗುತ್ತೇನೆ " ಎಂದು ಅವರು ಬಾತ್ರೂಮ್ ಗೆ ನಡೆದರೂ. "ಕಿರಣ ಏಳೋ ೧೧ ಆಯಿತು. ರಾತ್ರಿಯೆಲ್ಲ ತಿರುಗೋದು ಬೆಳಿಗ್ಗೆ ಮಲಗೋದು ಏನಪಾ ಇದು " ಅನ್ನುತ್ತಾ ನಡೆದರು. ಕುಸುಮಳಿಗೆ ಈಗ ಇರೋದು ಅವಳು ಹಾಗು ರಾಜು ಮಾತ್ರ ಎನ್ನುವುದು ಅರಿವಾಯಿತು ಹೆದರಿಕೆ ಇದ್ದರೂ ಒಳಗೆ ಖುಷಿ ಇತ್ತು. ಎಲ್ಲ ಬಟ್ಟೆ ಯನ್ನು ಒಟ್ಟು ಮಾಡಿ ಮಷೀನ್ ಇಟ್ಟ ಯುಟಿಲಿಟಿ ಗೆ ಬಂದಳು. ಅಂಗೈ ಬೆವರಲು ಶುರು ಆಯಿತು ಬಾಗಿಲಿಗೆ ಅಡ್ಡವಾಗಿ ರಾಜು ನಿಂತಿದ್ದ. ಇವಳು ಅವನನ್ನು ನೋಡಿದಳು ಕಣ್ಣಲ್ಲೇ ಬಟ್ಟೆ ಹಾಕಬೇಕೆಂದು ಸನ್ನೆ ಮಾಡಿದಳು. ರಾಜು ಸ್ವಲ್ಪವೇ ದಾರಿ ಬಿಟ್ಟು ನಿಂತನು. ಅವಳು ಹೋದರೆ ಅವಳ ಮೈ ಅವನ ಮೈ ಸವರಿಕೊಂಡು ಹೋಗಬೇಕು ಹಾಗೆ. ಅವಳು ಒಂದು ಹೆಜ್ಜೆ ಮುಂದೆ ಇಟ್ಟುಮತ್ತೆ ಹಾಗೇ ಹೆದರಿ ನಿಂತಳು. ರಾಜು ಪಾಪ ಎನಿಸಿ ದಾರಿ ಬಿಟ್ಟನು ಅಲ್ಲೇ ಹಾಗೆ ನಿಂತನು. ಅವಳು ಬಟ್ಟೆ ಹಾಕಿ ಮಷೀನ್ ಆನ್ ಮಾಡಿ ಹೊರಟಳು. ರಾಜು ಇದ್ದಕ್ಕಿಂದ್ದಂತೆ ಅವಳ ಕೈ ಹಿಡಿದು ತನ್ನೆಡೆಗೆ ಸೆಳೆದನು. ಉಸಿರು ತಾಕುವಷ್ಟು ಹತ್ತಿರವಿದ್ದರು. ಕುಸುಮ ಕೈಬಿಡಿಸಿಕೊಳ್ಳಲೂ ಹೋಗಲಿಲ್ಲ. ಇನ್ನೇನು ತುಟಿಗಳು ಸಂಧಿಸಬೇಕು ಅಷ್ಟರಲ್ಲೇ ಬಾತ್ ರೂಮ್ ಬಾಗಿಲು ತೆಗೆದ ಶಬ್ಧವಾಯಿತು. ಕುಸುಮ ಹೆದರಿ ಕೈ ಕೊಸರಿಕೊಂಡು "ಬರ್ತೀನಿ ಅಮ್ಮೋರೆ " ಅಂತ ಓಡಿದಳು. "ಹುಷಾರೇ!!" ಅಂತ ಶಾರದಮ್ಮಹೇಳಿದರು. ಕುಸುಮಳ ಮೈಯೆಲ್ಲಾ ಒದ್ದೆಯಾಗಿತ್ತು ಆ ಸ್ಪರ್ಶ ಅವಳನ್ನು ತಲ್ಲಣಗೊಳಿಸಿತ್ತು. ನಾಚಿ ನೀರಾಗಿ ಹೋಗಿದ್ದಳು. ತುಟಿಮೇಲೆ ಸಣ್ಣ ನಗುವೊಂದು ಮೂಡಿತ್ತು.

ರಾಜು ಹಾಗೆ ಗೋಡೆಗೆ ಒರಗಿ ನಗುತಿದ್ದನು. ಅಷ್ಟರಲ್ಲಿ ಅಲ್ಲಿಗೆ ಬಂದ ಶಾರದಮ್ಮ " ಏ ಏನೋ ಇಲ್ಲೇನು ಮಾಡ್ತಾ ಇದ್ದೀಯ ? ಹುಚ್ಚನ ಹಾಗೆ ಯಾಕೆ ನಗ್ತಾ ಇದ್ದೀಯ" "ಏನಿಲ್ಲಮ್ಮಾ ಮಷೀನ್ ಆನ್ ಆಗಿತ್ತು ಅದಿಕ್ಕೆ ನೋಡೋಕೆ ಬಂದೆ ಏನೋ ಜೋಕ್ ನೆನಪಾಯಿತು ನಕ್ಕೆ" ಅಂತಾನೆ " ಏ , ಕುಸುಮ ನ್ನ ನೋಡಿದೆಯಾ? " " ಕುಸುಮಾನ ಯಾರಮ್ಮ ಅದು ? ಅಂತ ನಾಟಕ ಮಾಡ್ತಾನೆ ಮತ್ತು ಅವಳ ಹೆಸರು ಕುಸುಮ ಅನ್ನೋದು ಗೊತ್ತಾಗಿದ್ದಕೆ ಖುಷಿ ಪಡ್ತಾನೆ. "ಯಾರಿಲ್ಲ, ಯಾರಿಲ್ಲ ಹೊರಡು ಸ್ನಾನ ಮಾಡು ಹೋಗು "ಅಂತ ಶಾರದಮ್ಮ ನಿಟ್ಟುಸಿರುಬಿಡ್ತಾರೆ.

ಮನೆಗೆ ಬಂದ ಕುಸುಮ ಇನ್ನೂ ಬೆವರುತ್ತಿದ್ದಳು ಕೈ ನಡುಗುತ್ತಿದ್ದವು. ಹೋಗಿ ಕೋಣೆಯಲ್ಲಿ ಕಣ್ಣು ಮುಚ್ಚಿ ಕೂತಳು. ರಾಜು ಬರಸೆಳೆದ ಚಿತ್ರ ಅವಳ ಕಣ್ಮುಂದೆ ಬರುತ್ತಾ ಇತ್ತು. ಮತ್ತೆ ಅವೇ ಪ್ರಶ್ನೆ, ಏಕೆ ಹೀಗೆ? ತಾನೇಕೆ ಬಿಡಿಸಿಕೊಳ್ಳಲಿಲ್ಲ? ತನು,ಮನ ಎಲ್ಲವನ್ನೂ ಅವನಿಗೆ ಕೊಡಬೇಕೆಂಬ ಬಯಕೆ ಬಂದದ್ದಾದರೂ ಹೇಗೆ? ಈ ಜೀವ ಅವನಿಗಾಗೇ, ಅವನ ಆರಾಧನೆಗಾಗೆ ಎಂಬ ಭಾವನೆ ತನಗೇಕೆ? ಬೇಡವೆಂದರೂ ಅವನಿಗಾಗಿ ತುಡಿಯುವ ಮನಸೇಕೆ? ಹಾಗೆಯೇ; ಅವನೇ ತನ್ನ ಸರ್ವಸ್ವ, ಅವನಿಗಾಗೇ ತಾನು ಬಾಳಬೇಕು, ಅವನ ಜೊತೆಗೇ ಜೀವನ ಮಾಡಬೇಕೆಂಬ ಉತ್ತರಗಳು. ತಕ್ಷಣವೇ, ಅದು ಸಾಧ್ಯವೇ? ಅವರ ಮನೆಯಲ್ಲಿ ಒಪ್ಪುವರೇ? ತಮ್ಮ ಜೀವನಕ್ಕೆ ಆಸರೆಯಾಗಿ, ನೆರಳಂತೆ ಕಾಯ್ದ ಆ ಮನೆಯಲ್ಲಿ ಬಿರುಗಾಳಿ ಎಬ್ಬಿಸುವುದು ಸರಿಯೇ ? ಅವರಿಗೆ ದ್ರೋಹ ಮಾಡಿದಂತಲ್ಲವೇ ? ಹತ್ತು ಹಲವು ವಿಚಾರಗಳು ಅವಳನ್ನು ಶೂಲದಂತೆ ಇರಿಯುತ್ತಿದ್ದವು. ಕಣ್ಣಲ್ಲಿ ನೀರು ಹರಿಯುತ್ತಿತ್ತು..ಹೇಳದೇ ಅಂಕುರಿಸಿದ ನಿರ್ಮಲ ಪ್ರೇಮ, ಆ ಮನೆಯವರ ಆಶ್ರಯದ ಋಣ ಎರಡರ ನಡುವೆ ಇಕ್ಕಟ್ಟಿಗೆ ಸಿಕ್ಕು ನೀರಿಂದ ಹೊರಬಿದ್ದ ಮೀನಿನಂತೆ ಒದ್ದಾಡುತ್ತಿದ್ದಳು. ಕಡೆಗೆ ಒಂದು ನಿರ್ಧಾರಕ್ಕೆ ಬಂದವಳಂತೆ ಕಣ್ಣು ಒರೆಸಿಕೊಂಡು ಹೊರಗೆ ನಡೆದಳು.

ಈ ಘಟನೆ ಆದಮೇಲೆ ಮತ್ತೆ ಕುಸುಮಳಿಗೆ ಶಾರದಮ್ಮನ ಮನೆಗೆ ಹೋಗುವ ಅವಕಾಶ ಬರಲಿಲ್ಲ. ಕುಸುಮಳಿಗೋ ರಾಜುನ ನೆನಪು ಕಾಡದೆ ಇರಲಿಲ್ಲ ಆದರೆ ಅವಳು ತೆಗೆದುಕೊಂಡು ಆ ನಿರ್ಧಾರ ಅವಳಿಗೆ ಬಲವನ್ನು ಕೊಟ್ಟಿತ್ತು. ಆ ಕಡೆ ರಾಜು ಗೆ ಇಂತಹ ಘಟನೆಗಳು ಹೊಸತೇನಾಗಿರಲಿಲ್ಲ ಹೀಗಾಗಿ ಅವನು ತನ್ನ ಪಾಡಿಗೆ ತಾನು ಯಥಾರೀತಿ ಇದ್ದುಬಿಟ್ಟಿದ್ದನು. ಅಷ್ಟರಲ್ಲೇ ಸೆಮೀಸ್ಟರ್ ಪರೀಕ್ಷೆ ಗಳು ಬಂದವು ಹೀಗಾಗಿ ಇಬ್ಬರೂ ತಮ್ಮ ಓದಿನಲ್ಲಿ ಮಗ್ನರಾದರು.

ರಾಜುನ ೬ ನೇ ಸೆಮಿಸ್ಟರ್ ಹಾಗೂ ಕುಸುಮಳ BSc ಕಡೆಯ ಸೆಮಿಸ್ಟರ್ ಪರೀಕ್ಷೆಗಳು ಪ್ರಾರಂಭವಾದವು. ಸುಮಾರು ೧ ತಿಂಗಳು ಪ್ರಾಯೋಗಿಕ ಹಾಗು ವಿಷಯಗಳ ಪರೀಕ್ಷೆಗಳು ನಡೆದವು. ಕುಸುಮ ಎಲ್ಲವನ್ನೂ ಚೆನ್ನಾಗಿ ಮಾಡಿದಳು ಇನ್ನು ರಾಜು ನ ಕೇಳಬೇಕೆ ಅವನು ಟಾಪ್ಪರ್ ಬೇರೆ. ಆ ದಿನ ಪರೀಕ್ಷೆಗಳು ಮುಗಿದು ಒಂದು ವಾರ ಕಳೆದಿತ್ತು ಸಾಯಂಕಾಲದ ೪ ಘಂಟೆ ಆಗುತಿತ್ತು. "ಕುಸುಮಿ ಸ್ವಲ್ಪ ಶಾರದಮ್ಮೋರ ಮನೆಗೆ ಹೋಗಿ ಒಂದಿಷ್ಟು ಚಪಾತಿ ಹಾಗು ಪಲ್ಯ ಮಾಡಿಕೊಟ್ಟು ಬರುತ್ತೀಯ ? ರಾಜು ಫ್ರೆಂಡ್ಸ್ ಜೊತೆಗೆ ಟ್ರಿಪ್ಪ್ ಹೋಗ್ತಾ ಇದ್ದನಂತೆ. ಶಾರದಮ್ಮ ಬೆಳಿಗ್ಗೆ ಹೇಳಿದ್ರು ನಂಗೆ ಆ ಸರಸಮ್ಮನ ಮನೆಗೆ ಹೋಗಬೇಕಾಗಿದೆ ಈಗ. ಹೋಗ್ತೀಯ? ಮಾಡಿಕೊಟ್ಟು ಬೇಗ ಬಂದ್ಬಿಡು. ಅಲ್ಲೇ ಟೇಬಲ್ ಮೇಲೆ ಕೀ ಇಟ್ಟಿದ್ದೇನೆ . ಬರೋವಾಗ ಜೋಪಾನವಾಗಿ ಕೀ ಹಾಕ್ಕೊಂಡು ಬಾ. ಮನೇಲಿ ಯಾರೂ ಇರ್ಲಿಕ್ಕಿಲ್ಲ. ಶಾರದಮ್ಮ ೬:೩೦ ಅಷ್ಟೊತ್ತಿಗೆ ಬರಬಹುದು. ಕಿರಣ ಆಫೀಸ್ ನಲ್ಲಿ ಇರ್ತಾನೆ ರಾಜು ಫ್ರೆಂಡ್ಸ್ ಜೊತೆ ಶಾಪಿಂಗ್ ಹೋಗಿರ್ತಾನೆ ಅವನೂ ೬ ಘಂಟೆಗೆ ಬರ್ತಾನೆ ಅಂತ ಹೇಳಿದ್ರು" ರತ್ನಮ್ಮ ಕುಸುಮಳಿಗೆ ಹೇಳುತ್ತಾರೆ. ಕುಸುಮ ಹೋಗೋಲ್ಲ ಅಂತ ಹೇಳೋಕೆ ಹೋಗ್ತಾಳೆ ಆದ್ರೆ ಹೃದಯ ಆಗಲೇ "ಹ್ಮ್" ಎಂದಿತ್ತು.

ಕುಸುಮ ರಾಜುನ ಮನೆಗೆ ಹೋಗಿ ತನ್ನ ಕೆಲಸದಲ್ಲಿ ತೊಡಗಿಕೊಂಡಳು. ಸ್ವಲ್ಪ ಶಬ್ದವಾದರೂ ಸಾಕು ಅವಳ ಎಡೆ ಬಡಿತ ಹೆಚ್ಚುತ್ತಾ ಇತ್ತು. ಅವನು ಬರಬಾರದೆಂದು ಮನಸು ಹೇಳುತ್ತಿದ್ದರೂ ಅವನು ಬೇಗ ಬರಬಾರದೇ ಎಂದು ಹೃದಯ ಹಂಬಲಿಸುತ್ತಿತ್ತು. ಚಪಾತಿ, ಪಲ್ಯ ಮಾಡಿ ಬಾಕ್ಸ್ ಗೆ ಹಾಕಿ ಸ್ವಲ್ಪ ಬೇಸರದಿಂದೇ ಕೈತೊಳೆದು ಮನೆಗೆ ಹೋಗಲು ಹೊರಗೆ ಬಂದಳು ಅಷ್ಟರಲ್ಲಿ ಬಾಗಿಲ ಕೀ ತೆಗೆದ ಶಬ್ದವಾಗುತ್ತದೆ ಬಾಗಿಲು ತಗೆಯುತ್ತಿದ್ದಂತೆ ರಾಜು ನಿಂತಿದ್ದನು. ಕೈಯಲ್ಲಿದ್ದ ಬ್ಯಾಗ್ಗಳನ್ನು ಅಲ್ಲೇ ಸೋಫಾದ ಮೇಲಿಟ್ಟು ಬಾಗಿಲು ಹಾಕುತ್ತಾನೆ. "ಹಾಯ್ ಕುಸುಮ ಹೇಗಿದ್ದೀಯಾ" ಅಂತ ಅವಳ ಬಳಿ ಬರುತ್ತಾನೆ. ಕುಸುಮಾಗೆ ಒಳಗೆ ದಿಗಿಲು ಸಂಭ್ರಮ ಎರಡೂ ಒಟ್ಟಿಗೆ. " ಚಪಾತಿ ಪಲ್ಯ ಮಾಡಿ ಬಾಕ್ಸ್ ಗೆ ಹಾಕಿದ್ದೇನೆ ನಾನು ಹೊರಡುತ್ತೇನೆ" ಎಂದು ಮುಂದೆ ನಡೆಯುತ್ತಾಳೆ. ಅಷ್ಟರಲ್ಲಿ ರಾಜು ಅಡ್ಡ ಬರುತ್ತಾನೆ. " ಯಾಕೆ ಹೆದರುತ್ತೀಯ? ನಾನು ಅಷ್ಟು ಕೀಳಲ್ಲ ಅವತ್ತೇನೋ ಸುಮ್ಮನೆ ಚೇಷ್ಟೆ ಮಾಡಿದೆ ಅಷ್ಟೇ. ಕೂಡು ಬಾ" ಅಂತ ಅವಳ ಕೈ ಹಿಡಿದು ಸೋಫಾದ ಮೇಲೆ ಕೂರಿಸ್ತಾನೆ. ಎದುರಿನ ಸೊಫಾದ ಮೇಲೆ ತಾನೂ ಕೂಡುತ್ತಾನೆ. " ೬ ಘಂಟೆ ಆಗ್ಲಿಕ್ಕೆ ಬಂತು ಅಮ್ಮೋರು ಬರ್ತಾರೆ. ಇದು ಸರಿ ಅಲ್ಲ ನಾನು ಹೋಗ್ತೇನೆ" ಅಂತಾಳೆ. " ಸರಿ ಒಂದು ಪ್ರಶ್ನೆ ಕೇಳ್ತೀನಿ. ನಿಂಗೆ ನಾನು ಇಷ್ಟಾನ ?" ಕುಸುಮಳಿಗೆ ತಡೆಯಲಾಗಲಿಲ್ಲ ಒಮ್ಮೆಲೇ ಅವನ ಮುಂದೆ ನೆಲದ ಮೇಲೆ ಕೂತು ಅವನ ತೊಡೆ ಮೇಲೆ ತಲೆ ಇಟ್ಟು ಅಳಲು ಪ್ರಾರಂಭಿ ಸುತ್ತಾಳೆ. ರಾಜುಗೆ ಸ್ವಲ್ಪ ದಿಗಿಲಾಗುತ್ತದೆ. " ನಂಗೆ ಗೊತ್ತಿಲ್ಲ ನಿಮ್ಮನ್ನ ನೋಡಿದ ಸೆಕೆಂಡ್ ನಿಂದ ನಿಮ್ಮನ್ನ ಬಿಟ್ಟಿರಬಾರ್ದು ಅನ್ನಿಸ್ಲಿಕ್ಕೆ ಶುರು ಆಗಿದೆ. ನಿಮ್ ಜೊತೆಗೆ ನನ್ನ ಜೀವನ ಕಳೀಬೇಕು ಅನ್ಸಿದೆ. ಅಷ್ಟು ಇಷ್ಟ ಆಗಿಬಿಟ್ಟರಿ ನೀವು. ಯಾಕೆ ಅಂತ ಗೊತ್ತಿಲ್ಲ. ಹುಚ್ಚು ಪ್ರೇಮ, ಅದು ಆರಾಧನೆ ಅಂತಾರಲ್ಲ ಹಾಗೆ ಅದಿಕ್ಕೆ ಅವತ್ತು ನೀವು ಏನು ಮಾಡಿದ್ರೂ ಸುಮ್ಮನಿದ್ದೆ. ದೇವರೇ ಬಂದು ನೀನು ಬೇಕೆಂದರೆ ನಮ್ಮನ್ನ ನಾವು ಒಪ್ಪಿಸಿಕೊಳ್ತೀವಲ್ಲ ಹಾಗೆ.” ಅಂತಾಳೆ . "ಮತ್ತೆ ಏಕೆ ಹೆದರಿಕೆ? ನಂಗೂ ನೀನಂದ್ರೆ ಇಷ್ಟ. ನಿನ್ನನ್ನ ಬಿಡಲ್ಲ ಆಯ್ತಾ " ರಾಜು ಹೇಳ್ತಾನೆ. ಒಮ್ಮೆಲೇ ಕುಸುಮ ಕಣ್ಣೊರೆಸಿಕೊಂಡು ಮೇಲೆ ಏಳ್ತಾಳೆ " ಇಲ್ಲ, ನಾನು ಈ ಮನೆಗೆ, ನನ್ನ ತಾಯಿಗೆ ದ್ರೋಹ ಮಾಡಲ್ಲ ನೀವೂ ಮಾಡಬಾರದು. ಸಮಾಜ ಇದನ್ನ ಒಪ್ಪುವುದಿಲ್ಲ. ಒಂದುವೇಳೆ ನಿಮ್ಮ ತಾಯಿ ಒಪ್ಪಿದರೂ ನಾನು ಒಪ್ಪೋಲ್ಲ. ಯಾಕಂದ್ರೆ ಅದು ಅವರು ನಮ್ಮ ಮೇಲಿಟ್ಟ ನಂಬಿಕೆಗೆ, ವಾತ್ಸಲ್ಯ ಕ್ಕೆ ದ್ರೋಹ ಮಾಡಿದಂತೆ ಆಗುತ್ತೆ. ನಿಜವಾದ ಪ್ರೀತಿ ಮನಸುಗಳ ನಡುವೆ ಸೇತುವೆ ಆಗಬೇಕು. ಕಂದಕ ತೊಡಬಾರದು. ನಿಮ್ಮನು ಇಷ್ಟ ಪಡುತ್ತೇನೆ . ಇಷ್ಟ ಪಡುತ್ತಲೇ ಇರುತ್ತೇನೆ ಆರಾಧಿಸುತ್ತಲೇ ಇರುತ್ತೇನೆ. ನಂಗೆ ಅಷ್ಟೇ ಸಾಕು. ನಿಜ, ನೀವಿಲ್ದಿದ್ರೆ ನಿಮ್ಮನ್ನ ನೋಡದಿದ್ದರೆ ಸಂಕಟ ವಾಗುತ್ತೆ, ಕರುಳು ಕಿತ್ತು ಬಂದ್ಹಾಗೆ ಆಗುತ್ತೆ. ಒಂದೊಂದು ನಿಮಿಷ ಕಳೆಯೋಕ್ಕೂ ಒದ್ದಾಡಬೇಕು. ಜೋರಾಗಿ ಅಳು ಬರುತ್ತೆ. ನಿಮ್ಮನ್ನ ತಬ್ಕೊಂಡು ಅಳಬೇಕು ಅನ್ಸುತ್ತೆ. ಆದರೆ ಬೇಡ ಈ ಕಷ್ಟ ಎಲ್ಲಾ ಅನುಭವಿಸುತ್ತೇನೆ. ನಂಬಿಕೆಗೆ ಮೋಸ ಮಾಡಿದ್ಲು ಅನ್ನೋ ಕಳಂಕ ಮಾತ್ರ ಬೇಡ " ಎಂದು ಅಲ್ಲಿಂದ ಹೊರಡುತ್ತಾಳೆ. ರಾಜುನ ಕಣ್ಣುಗಳೂ ನೀರಾಡುತ್ತೆ."ಎಂತಹ ಹುಡುಗಿ, ಎಷ್ಟು ನಿರ್ಮಲ, ಇವಳಿಗಾಗಿ ಏನು ಮಾಡಿದರೂ ಕಡಿಮೆ. ಛೆ !! ಅವಳನ್ನು ಕಾಮದ ಭಾವನೆಯಿಂದ ಮುಟ್ಟುವುದೂ ದೊಡ್ಡ ಅಪರಾಧ. ಅಷ್ಟು ಪವಿತ್ರವಾದ ಮನಸ್ಸು, ಅವಳು ಎಂದೂ ಸುಖವಾಗಿರಲಿ, ನೆಮ್ಮದಿಯಾಗಿರಲಿ " ರಾಜು ನ

ಮನದಲ್ಲಿ ಅವಳಮೇಲೆ ಎಲ್ಲಿಲ್ಲದ ಗೌರವ, ಪೂಜನೀಯ ಭಾವ ಮೂಡುತ್ತದೆ ಅವನಿಗೆ ತಿಳಿಯದೆ ಅವನು ಕೈಮುಗಿದಿರುತ್ತಾನೆ.

೨ ತಿಂಗಳು ಕಳೆದಿರುತ್ತವೆ. ಫಲಿತಾಂಶಗಳು ಬಂದಿರುತ್ತವೆ. ಕುಸುಮ ಉತ್ತಮ ಅಂಕಗಳಿಂದ ತೇರ್ಗಡೆ ಹೊಂದಿರುತ್ತಾಳೆ ಹಾಗೆಯೇ ರಾಜು ಕೂಡ ಮತ್ತೆ ಕಾಲೇಜು ಟಾಪರ್ ಆಗಿರ್ತಾನೆ. ರತ್ನಮ್ಮ ತನ್ನ ಕೆಲಸ ಮುಗಿಸಿ ಶಾರದಮ್ಮನನ್ನ ಕರೀತಾಳೆ "ಅಮ್ಮೋರೆ, ನಾಳೆ ನಾಡಿದ್ದು ನಾನು ಕೆಲಸಕ್ಕೆ ಬರಲ್ಲ. ಕುಸುಮಾಗೆ ಗಂಡು ನೋಡಿದ್ವಿ, ಒಳ್ಳೆ ಹುಡುಗ. ಅದ್ಯಾವ್ದೋ ದೊಡ್ಡ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಾನೆ. ನಾಡಿದ್ದು ನಿಶ್ಚಿತಾರ್ಥ ಇಟ್ಟ್ಕೊಂಡಿದೀವಿ ಅದಿಕ್ಕೆ ". "ಒಹ್ !! ಹೌದೇನೇ. ಕುಸುಮನ್ನ ಕೇಳಿದೀರಿ ತಾನೇ. ಅವಳು ಕೆಲಸ ಮಾಡಬೇಕು ಅಂದ್ಕೊಂಡಿದ್ದಳಲ್ಲ" ಅಂತಾರೆ ಶಾರದಮ್ಮ. "ಹೌದು ಅಮ್ಮೋರೆ ಅವಳು ಒಪ್ಪಿದ್ದಾಳೆ. ಆಮೇಲೆ ಹುಡುಗನೂ ಅವಳು ಕೆಲಸ ಮಾಡಿದರೆ ತನಗೂ ಅನುಕೂಲ ಅಂದಿದ್ದಾನೆ" ರತ್ನಮ್ಮ ಹೇಳ್ತಾಳೆ. "ಸರಿ ಬಿಡು ಒಳ್ಳೆದಾಯ್ತು. ಲಗ್ನ ಯಾವಾಗ ? " ಶಾರದಮ್ಮ ಕೇಳಿದಾಗ " ಬೇಗನೆ ಮಾಡ್ತೀವಿ ಅಮ್ಮೋರೆ ಮುಂದಿನ ತಿಂಗಳು ಮುಹೂರ್ತ ಇದೆಯಂತೆ " ಎಂದು ರತ್ನಮ್ಮ ಹೇಳಿದಾಗ, ಶಾರದಮ್ಮ "ಸರಿ ಒಳ್ಳೇದು. ಅವಳಿಗೆ ನಮ್ಮ್ ಕಡೆಯಿಂದ ಎರಡು ಬಂಗಾರದ ಬಳೆ ಮಾಡಿಸಿಕೊಡ್ತೇನೆ. ಅವಳ ಸೈಜ್ ಗೆ ಒಂದು ಬಳೆ ತೆಗೆದುಕೊಂಡು ಬಾ. ಮತ್ತೆ ಇದ್ಯಾಕೆ ಅದ್ಯಾಕೆ ಅನ್ನಬೇಡ. ಮಿಕ್ಕ ಖರ್ಚಿಗೆ ಅನುಕೂಲವಾಗುತ್ತೆ ಮತ್ತೆ ಏನಾದರೂ ಬೇಕಿದ್ದರೆ ಸಂಕೋಚ ಮಾಡ್ಕೋಬೇಡ" ಅಂತ ಹೇಳ್ತಾರೆ. ರತ್ನಮ್ಮನ ಕಣ್ಣಲ್ಲಿ ನೀರು ಜಿನುಗುತ್ತೆ. " ಅಯ್ಯೋ ಹುಚ್ಚಿ ಯಾಕೆ ಏನು ಭಯ ಪಡ್ಬೇಡ ಎಲ್ಲ ಸರಿ ಹೋಗುತ್ತೆ? ಅಂತ ಶಾರದಮ್ಮ ಧೈರ್ಯ ತುಂಬಿ ಕಳಿಸ್ತಾರೆ. ಇದೆಲ್ಲವನ್ನೂ ರಾಜು ಕೇಳಿಸಿಕೊಳ್ತಾನೆ. ಅವನಿಗೆ ಏನೋ ಎದೆ ಭಾರವಾದಂತಹ ಅನುಭವ. ಆದರೆ ಕುಸುಮಾಳ ಮಾತುಗಳು ನೆನಪಿಗೆ ಬರುತ್ತವೆ . ಬೇಸರದಿಂದ ಹೊರಗೆ ನಡೆಯುತ್ತಾನೆ.

ಒಂದು ತಿಂಗಳಾಗುತ್ತ ಬಂದಿರುತ್ತೆ. ಕಿರಣ ಆಫೀಸ್ ಗೆ ಹೋಗಿರುತ್ತಾನೆ. ರಾಜು ನ ೭ ನೇ ಸೆಮಿಸ್ಟರ್ ಪ್ರಾರಂಭ ವಾಗಿರುತ್ತವೆ. ಹೆಚ್ಚು ಪ್ರಾಜೆಕ್ಟ್ ಕೆಲಸ ಇದ್ದುದರಿಂದ ಅವನು ಮನೆಯಲ್ಲಿ ಇ ದ್ದನು. ಶಾರದಮ್ಮ "ರಾಜು ಬಾಗಿಲು ಹಾಕ್ಕೋ ಬಾರೋ ನಾನು ಸ್ವಲ್ಪ ಬಜಾರ್ ಕಡೆ ಹೋಗಿ ಬರ್ತೀನಿ. ಕುಸುಮನ ಬಳೆ ಮತ್ತೆ ಅವರಿಗೆ ಬಟ್ಟೆಗಳನ್ನ ತರಬೇಕು. ನಾಳೆ ಅವಳ ಮದುವೆ. ಇವತ್ತು, ನಾಳೆ ಸ್ಕೂಲ್ ಗೆ ರಜೆ ಹಾಕಿದ್ದೇನೆ. ನೀನು ಬರ್ತೀಯ ಬಜಾರ್ ಗೆ " ಅಂತ ಕೇಳ್ತಾಳೆ " ಇಲ್ಲಮ್ಮ ಸ್ವಲ್ಪ ಕೆಲಸ ಇದೆ. ನೀನು ಎಲ್ಲ ತೊಗೊಂಡು ಮತ್ತೆ ಬಸ್ಸಿಗೆ ಬರೋಕ್ಕೆ ಹೋಗಬೇಡ ಆಟೋ ದಲ್ಲಿ ಬಾ " ಅಂತ ಹೇಳಿ ಅವರನ್ನ ಕಳಿಸಿ ಬಾಗಿಲು ಹಾಕ್ಕೋತಾನೆ.

ಸ್ವಲ್ಪ ಸಮಯಕ್ಕೆ ಬಾಗಿಲು ಬಡಿದ ಶಬ್ದ ವಾಗುತ್ತೆ. ರಾಜು ಬಾಗಿಲು ತಗೀತಾನೆ ಅಲ್ಲಿ ಕುಸುಮ ನಿಂತಿರ್ತಾಳೆ. ಒಳಗೆ ಬಂದು " ಎಲ್ಲಿ ಕಾಲೇಜ್ ಗೆ ಹೋಗಿ ಬಿಡ್ತೀರೋ ಅಂದ್ಕೊಂಡಿದ್ದೆ. ಅಮ್ಮೋರ್ನ ಈಗ ಹೊರಗೆ ಹೋಗಿದ್ದು ನೋಡಿದೆ ನೀವು ಮನೇಲಿ ಇದ್ದದ್ದು ಗೊತ್ತಾಯ್ತು. ನಿಮ್ಮ ಜೊತೆ ಮಾತಾಡಬೇಕು. ಬೆಳಿಗ್ಗೆ ಇಂದ ನಿಮ್ಮ ಮನೆ ಎದುರಿನ ಬಸ್ ಸ್ಟಾಪ್ ನಲ್ಲಿ ಕಾಯ್ತಾ ಇದ್ದೆ" ಅಂತ ಅವಸರ ಅವಸರ ವಾಗಿ ಹೇಳ್ತಾಳೆ. "ಇಲ್ಲ ನಂಗೆ ಪ್ರಾಜೆಕ್ಟ್ ವರ್ಕ್ ಇತ್ತು ಅದಿಕ್ಕೆ ಮನೇಲಿ ಇದ್ದೇನೆ. ಹೇಳು ಏನು ವಿಷಯ. ನಾಳೆ ನಿನ್ನ ಮದುವೆಯಂತೆ ನೀನೇನು ಮಾಡ್ತಾ ಇದ್ದೀಯ ಇಲ್ಲಿ" ರಾಜು ಕೇಳ್ತಾನೆ. " ಇಲ್ಲ ಫ್ರೆಂಡ್ಸ್ ಗೆ ಇನ್ವಿಟೇಶನ್ ಕೊಟ್ಟು ಬರ್ತೀನಿ ಅಂತ ಸುಳ್ಳು ಹೇಳಿ ಬಂದಿದ್ದೀನಿ" ಕುಸುಮ ಹೇಳ್ತಾಳೆ. ತಾನು ತಂದಿದ್ದ ಬ್ಯಾಗ್ ಅನ್ನು ಅಲ್ಲೇ ಸೋಫಾದ ಮೇಲೆ ಇಟ್ಟು ಬಾಗಿಲು ಹಾಕ್ತಾಳೆ. ಅವನ ಕೈ ಹಿಡಿದು ಅವನ ರೂಮ್ ಗೆ ಕರೆದು ಕೊಂಡು ಹೋಗ್ತಾಳೆ. ರಾಜು ಗೆ ಏನು ಅಂತ ಗೊತ್ತಾಗದೆ ನಿಂತಿರ್ತಾನೆ. ಇಂದು ಅವಳ ಮುಖದಲ್ಲಿ ಯಾವುದೇ ಭಯ ಆತಂಕ ಕಾಣುತ್ತಿರಲಿಲ್ಲ. " ನಾನು ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಇದು ನಿಮಗೆ ತಪ್ಪು ಅನ್ನಿಸಬಹುದು. ನಿಮಗೆ ಬೇಡ ಅನ್ನಿಸಿದರೆ ಹೇಳಿ ಹೊರಟು ಹೋಗುತ್ತೇನೆ. ನಿಮ್ಮಿಂದ ನನಗೆ ಸಂತಾನ ಬೇಕು. ಇದು ದೇಹದ ದಾಹವಲ್ಲ. ನಿಮ್ಮಲ್ಲಿರುವ ನನ್ನ ಆರಾಧನಾ ಭಾವನೆ. ನಿಮ್ಮಿಂದ ಸಂತಾನವಾದರೆ ನನಗೆ ನಿಮ್ಮಜೊತೆಯಿದ್ದಷ್ಟೇ ಸಂತೋಷವಿರುತ್ತದೆ. ಆಗದಿದ್ದರೆ ನಿಮಗೆ ನನ್ನನ್ನು ಒಪ್ಪಿಸಿಕೊಂಡಿದ್ದರ ತೃಪ್ತಿ ಇರುತ್ತೆ. ನಾನು ಮದುವೆಯಾಗುವರೂ ಒಳ್ಳೆಯವರು ಆದರೆ ಅವರು ನಂಗೆ ಗಂಡ ಮಾತ್ರ, ನೀವು ದೇವರು. ಹೀಗೇಕೆ?, ಕಾರಣ ನನಗೂ ತಿಳಿಯದು. ದೇವರ ಪಾದಮುಟ್ಟಿದ ಹೂವು ಇನ್ನೂ ಪವಿತ್ರವಾಗುವ ಹಾಗೆ ನಾನೂ ನನ್ನ ಗಂಡನಿಗೆ ಪವಿತ್ರವಾಗಿ ಅರ್ಪಿಸಿಕೊಳ್ತೇನೆ. ನನಗೆ ಯಾವುದೇ ಪಾಪ ಪ್ರಜ್ಞೆ ಇಲ್ಲ. ಇದು ನಿಮ್ಮ ಋಣವೆಂದು

ತಿಳಿಯುತ್ತೇನೆ . ಇದಕ್ಕೆ ನೀವು ಒಪ್ಪಿದರೆ ಮಾತ್ರ " ಅಂತ ಹೇಳ್ತಾಳೆ. ರಾಜು ಗೆ ನಡುಕ ಶುರುವಾಗುತ್ತೆ. " ನಾನು ದೇವರು ಗೀವರು ಅಲ್ಲ. ಇದೆಲ್ಲ ಏಕೆ? ನಿನಗೆ ಬೇಕಿದ್ದರೆ ನಾನು ನಿನ್ನ ಜೊತೆ ಇರ್ತೇನೆ. ಮದುವೆ ಮಾಡಿಕೊಳ್ಳೋಣ . ಯಾರು ಅಡ್ಡ ಬಂದರೂ ನಾನು ನಿನ್ನ ಬಿಡೋಲ್ಲ" ಅಂತಾನೆ. "ನಂಗೆ ಮನೆಯವರಿಗೆ ಮಾಡುವ ವಿಶ್ವಾಸ ದ್ರೋಹದ ಮುಂದೆ ಇದೇ ಸರಿ ಅನ್ನಿಸುತ್ತಾ ಇದೆ. ನೀವೂ ನನ್ನನ್ನು ಇಷ್ಟು ಪ್ರೀತಿಸುತ್ತಿರುವದೇ ನನ್ನ ಭಾಗ್ಯ. ಆ ಪ್ರೀತಿ ಸತ್ಯವಾಗಿದ್ದರೆ ನನ್ನ ಮಾತು ನಡೆಸಿಕೊಡಿ. ಇನ್ನುಮುಂದೆ ನಾನೆಂದಿಗೂ ನಿಮ್ಮ ಕಣ್ಣ್ ಮುಂದೆ ಬರುವುದಿಲ್ಲ ಹಾಗೆ ಇಲ್ಲಿ ನಡೆದಿದ್ದು ಯಾರಿಗೂ ತಿಳಿಯುವುದಿಲ್ಲ. ಅಂತಹ ಸಂಧರ್ಭ ಬಂದರೆ ನನ್ನ ಪ್ರಾಣ ಕೊಡುತ್ತೇನೆ ಹೊರತು ಈ ಗುಟ್ಟನ್ನು ಬಿಟ್ಟು ಕೊಡುವುದಿಲ್ಲ" ಎಂದು ಹೇಳುತ್ತಾಳೆ. ಅವನು ಮೌನ ವಾಗುತ್ತಾನೆ. ಅವನನ್ನು ಕೈ ಹಿಡಿದು ಅಲ್ಲಿನ ಮಂಚದ ಮೇಲೆ ಕೂಡಿಸುತ್ತಾಳೆ. ಅವಳಲ್ಲಿ ಯಾವುದೇ ಉನ್ಮಾದ, ಉದ್ರೇಕಗಳು ಇರಲಿಲ್ಲ. ಕಾಮದ ವಾಸನೆಯೂ ಇರಲಿಲ್ಲ. ಗಂಭೀರ ಭಾವ ಅವಳ ಮುಖದಲ್ಲಿ ಮೂಡಿರುತ್ತದೆ. ಅವಳು ವಿವಸ್ತ್ರಳಾಗುತ್ತಾಳೆ.ತನ್ನನ್ನು ಅವನಿಗೆ ಒಪ್ಪಿಸಿಕೊಳ್ತಾಳೆ. ಅವಳನ್ನು ನೋಡಿದ ರಾಜು ಗೆ ಅವಳ ದೇಹದ ಸುಖ ಮರೆತು ಅವಳಿಗೆ ಸಂತಾನ ದೊರಕಲಿ ಎಂಬ ಯೋಚನೆಯಿಂದ ಒಂದಾಗುತ್ತಾನೆ. ಎರಡು ದೇಹಗಳ ನಡುವೆ ಸಂತಾನ ಯಜ್ಞ ನಡೆದು ಹೋಗಿರುತ್ತೆ.

ರಾಜು ಪಕ್ಕದ್ದಲ್ಲಿ ನಿದ್ರಿಸುತ್ತಿರುತ್ತಾನೆ. ಕುಸುಮ ಮೇಲೆದ್ದು ಬಟ್ಟೆಗಳನ್ನು ಸರಿ ಮಾಡಿಕೊಂಡು ಒಮ್ಮೆ ಅವನ ಪಾದಗಳನ್ನು ಮುಟ್ಟಿ ಬಾಗಿಲಕಡೆ ನಡೆಯುತ್ತಾಳೆ. ತಾನು ಮನೆಯಿಂದ ತಂದ ಬೀಗದಿಂದ ಬಾಗಿಲನ್ನು ಲಾಕ್ ಮಾಡಿ ಮನೆಯ ಕಡೆಗೆ ನಡೆಯುತ್ತಾಳೆ.

ಮನೆಯ ಬೆಲ್ ರಿಂಗ್ ಶಬ್ದಕ್ಕೆ ರಾಜು ಗೆ ಎಚ್ಚರ ವಾಗುತ್ತೆ. ಅಲ್ಲಿ ಕುಸುಮ ಇಲ್ಲದಿರುವುದು ಅರಿವಿಗೆ ಬರುತ್ತೆ. ಬಟ್ಟೆ ಸರಿ ಮಾಡಿಕೊಂಡು ಬಾಗಿಲಕಡೆ ಓಡುತ್ತಾನೆ. ಬಾಗಿಲು ತೆಗೆದಾಗ ಶಾರದಮ್ಮ ಇರ್ತಾರೆ. "ಏನೋ ಮಲಗಿದ್ದ್ಯಾ?" ಅಂತ ಕೇಳ್ತಾರೆ ಹೌದು ಎಂದು ತಲೆ ಆಡಿಸುತ್ತಾ ನಡೆದಿದ್ದನ್ನು ನೆನೆಯುತ್ತ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಳ್ಳುತ್ತಾನೆ. ಕುಸುಮ ತಾನು ನುಡಿದಂತೆ ರಾಜುನ ಮತ್ತೆ ಭೇಟಿ ಮಾಡಲೇ ಇಲ್ಲ. ಆದರೆ ತನ್ನ ಹಾಗು ರಾಜುನ ಮಿಲನದ ಪ್ರತೀಕ ಸ್ಪಷ್ಟವಾಗುವವರೆಗೂ ತನ್ನ ಗಂಡನ ಜೊತೆಗಿನ ದೈಹಿಕ ಸಂಬಂಧವನ್ನು ಎಚ್ಚರಿಕೆಯಿಂದ ನಿರ್ವಹಿಸಿದ್ದಳು.

೨೬ ವರ್ಷಗಳನಂತರ ಕುಸುಮಾ ರಾಜು ನ ಮುಂದೆ ಇದ್ದಳು. ಆ ಕಿರು ನಗೆಯೊಂದಿಗೆ ಕಣ್ಣಲ್ಲಿ ಹನಿ ಹನಿಯಾಗಿ ಬರುತ್ತಿರುವ ನೀರು. ರಾಜು ಮತ್ತೆ ಕುಸುಮಾಳನ್ನು ಆ ಫೋಟೋ ಗಳನ್ನ ನೋಡುತ್ತಾನೆ.

ಮಗನ ಫೋಟೋ ನೋಡಿ ಇವನಿಂದ ತನಗೆ ಕೊಳ್ಳಿ ಇಡಿಸುವಂತೆ ಸನ್ನೆ ಮಾಡುತ್ತಾನೆ. ಮತ್ತೆ ಕುಸುಮ ಇಲ್ಲವೆಂಬಂತೆ ತಲೆಯಾಡಿಸಿ ಸುಮ್ಮನಿರಿ ಎಂಬಂತೆ ತನ್ನ ಬಾಯಿ ಮೇಲೆ ಕೈ ಇತ್ತು ತೋರಿಸುತ್ತಲೇ. ಒಮ್ಮೆಲೇ ರಾಜು ನ ಹೃದಯದ ಗತಿ ಯಲ್ಲಿ, ರಕ್ತದೊತ್ತಡದಲ್ಲಿ ಏರು ಪೇರಾಗುವುದನ್ನು ಅಲ್ಲಿನ ಯಂತ್ರಗಳು ತೋರಿಸುತ್ತ ಶಬ್ದ ಮಾಡಲು ಪ್ರಾರಂಭಿಸುತ್ತವೆ. ಕೂಡಲೇ ಕುಸುಮ ಡಾಕ್ಟರ್ ನ ಕರೆಯುತ್ತಾಳೆ. ಅವರು ಬಂದು ಅವಸರದಲ್ಲಿ ಮತ್ತೊಂದು ಇಂಜೆಕ್ಷನ್ ಕೊಡ್ತಾರೆ. ಸೀನಿಯರ್ಸ್ ಕೂಡ ಅಲ್ಲಿಗೆ ಬರ್ತಾರೆ ಪರೀಕ್ಷೆ ಮಾಡ್ತಾರೆ. ರಾಜು ದೃಷ್ಟಿ ಮಾತ್ರ ಕುಸುಮನ ಕಡೆಗೆ ಇರುತ್ತೆ . ಅವನು ಸಂಪೂರ್ಣ ಪ್ರಜ್ಞೆ ಕಳೆದುಕೊಳ್ಳುವ ಸ್ಥಿತಿಗೆ ಹೋಗಿರುತ್ತಾನೆ. ಅರ್ಧ ತೆರೆದ ಕಣ್ಣುಗಳಿಂದ ಅವಳನ್ನು ನೋಡುತ್ತಿರುತ್ತಾನೆ. ಅವನ ಮುಖದಲ್ಲಿ ಕಿರು ನಗೆ ಹಾಗೆ ಇರುತ್ತೆ. ಅಷ್ಟರಲ್ಲಿ ಅವನ್ ಕಣ್ಣಿಂದ ಕಡೆಯ ಹನಿ ಹರಿದು ಅವನ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ. ಡಾಕ್ಟರ್ ಅವನ ಕಣ್ಣಿಗಳನ್ನು ಮುಚ್ಚಿ "inform his office and ಫ್ಯಾಮಿಲಿ" ಅಂತ ಹೇಳಿ ಹೊರಡುತ್ತಾರೆ.

ಕುಸುಮ ನಿಸ್ತೇಜವಾಗಿರುತ್ತಾಳೆ. ಕಡೆಯ ಬಾರಿ ತನ್ನ ದೇವರನ್ನು ನೋಡಿ ಹೊರಗೆ ನಡೆಯುತ್ತಾಳೆ. ಅಲ್ಲಿಯವರು ದೇಹವನ್ನ ಸಂಪೂರ್ಣ ವಾಗಿ ಕವರ್ ಮಾಡಲು ಕಳುಹಿಸುತ್ತಾರೆ.

ಅವಳು ರಾಜು ಇದ್ದ ರೂಮ್ ಗೆ ಬಂದು ಮೊಬೈಲ್ ತೆಗೆದುಕೊಂಡು ಅವನ ಹೆಂಡತಿ ಗೆ ಫೋನ್ ಮಾಡುತ್ತಾಳೆ. ಹೆಂಡತಿ ಅಳುತ್ತ ಇರುತ್ತಾಳೆ. " ನೀವೇನಾ ಆ ನರ್ಸ್ ? ರಾಜ್ ಹೇಳುತ್ತಿದ್ರೂ ತುಂಬಾ ಚೆನ್ನಾಗಿ ನೋಡಿಕೊಳ್ತಾ ಇದ್ರಿ ಅಂತ. ನಮಗೆ ಅಲ್ಲಿಗೆ ಬರಲು ಆಗಲ್ಲ ಫ್ಲೈಟ್ಸ್ ಎಲ್ಲ ಸ್ಟಾಪ್ ಮಾಡಿದ್ದಾರೆ. ಹೇಗಾದರೂ ಮಾಡಿ ಅವರ ಸಂಸ್ಕಾರ ಮಾಡುತ್ತೀರಾ ಪ್ಲೀಸ್ ಎಷ್ಟು ದುಡ್ಡು ಬೇಕೋ

ಅಷ್ಟು ಕೊಡ್ತೀವಿ. ಅವರನ್ನ ಅನಾಥ ಶವ ಆಗ್ಲಿಕ್ಕೆ ಬಿಡಬೇಡಿ " ಎಂದು ಕೈ ಮುಗೀತಾಳೆ. " ಇಲ್ಲ ಮೇಡಂ ಅವರ ಋಣ ನಮ್ಮ ಕುಟುಂಬದ ಮೇಲೆ ಬಹಳ ಇದೆ. ನಿಮಗೆ ಅದು ಗೊತ್ತಿಲ್ಲ. ನಾನು ಎಲ್ಲ ನಿಮ್ಮ ಶಾಸ್ತ್ರದಂತೆ ಮಾಡಿಸುತ್ತೇನೆ. ಮಾಡುವಾಗ ನಿಮಗೆ ವಿಡಿಯೋ ಕಾಲ್ ಮಾಡುತ್ತೇನೆ. ದುಡ್ಡು ಎಲ್ಲ ಏನು ಬೇಡ" ಭಾರವಾದ ಗಂಟಲಿನಿಂದ ಗದ್ಗದಿತಳಾಗಿ ಹೇಳುತ್ತಾಳೆ. ಫೋನ್ ಕರೆಯನ್ನು ನಿಲ್ಲಿಸಿ ಅಲ್ಲೇ ಕುಸಿದು ಮನಸಾರೆ ಅತ್ತುಬಿಡುತ್ತಾಳೆ. ತನ್ನ ದೇವರಿಗೆ ಅಂತಿಮ ಅಶ್ರು ತರ್ಪಣ ಕೊಡುತ್ತಾಳೆ.

ಅವಳು ನೇರವಾಗಿ ಶವಗಳ ಹಸ್ತಾಂತರ ವಿಭಾಗಕ್ಕೆ ಹೋಗಿ ರಾಜ್ ಪಾರ್ಥಿವಶರೀರವನ್ನು ತಾನೇ ತೆಗೆದುಕೊಂಡು ಹೋಗುವುದಾಗಿ ಅದಿಕ್ಕೆ ಬೇಕಾದ ಕಡೆ ಸಹಿ ಮಾಡಿ ಆಂಬುಲೆನ್ಸ್ ನವರಿಗೆ ಹೇಳಿ ಮಗ ರಾಜ್ ಬಳಿ ತೆರಳುತ್ತಾಳೆ. ರಾಜ್ ಕಂಡೊಡನೆ ಅವನನ್ನು ತಬ್ಬಿ ಅಳುತ್ತಾಳೆ. "ಯಾಕಮ್ಮ ಏನಾಯಿತು ? ಅವರಿಗೇನಾದ್ರು ಆಯ್ತಾ ? ಹೇಳಮ್ಮ" ಅಂತಾನೆ . ಕುಸುಮ ಸಾವರಿಸಿಕೊಂಡು " ಅವರು ಹೋದ್ರು ಮಗು " ಅಂತಾಳೆ. ನಂಗೆ ಒಂದು ಉಪಕಾರ ಮಾಡುತ್ತೀಯಾ? ನೀನು ಅವರಿಗೆ ಕೊಳ್ಳಿ ಇಟ್ಟು ಅಂತಿಮ ಸಂಸ್ಕಾರ ಮಾಡುತ್ತೀಯಾ? ಎಂದು ಕೇಳುತ್ತಾಳೆ. "ಅಮ್ಮ ಏನು ಹೇಳ್ತ ಇದ್ದೀಯ ? ಅವರ್ಯಾರು ನಾನ್ಯಾಕೆ ಮಾಡಬೇಕು" ಅಂತ ಕೇಳ್ತಾನೆ. "ಮಗು ನಾವು ವೈದ್ಯಕೀಯ ಸೇವೆಯಲ್ಲಿ ಇರೋರು ಅಂತ ಮರೆತು ಬಿಟ್ಟೆಯ. ಆದರೂ ನಿನಗೆ ಉತ್ತರ ಬೇಕೆಂದರೆ, ನಮ್ಮ ಮೇಲೆ ಅವರದು ದೊಡ್ಡ ಋಣ ವಿದೇ ಅಷ್ಟೇ ಹೇಳಬಲ್ಲೆ. ಒತ್ತಾಯವಿಲ್ಲ." ಎನ್ನುತ್ತಾಳೆ . " ಸರಿ ಅಮ್ಮ, ಆದರೆ ಅಪ್ಪ ?" " ಅಪ್ಪಗೆ ನಾನು ಹೇಳುತ್ತೇನೆ" ಎಂದು ಹೇಳುತ್ತಾಳೆ. ಅವನು, ಅವಳ ಜೊತೆ ಆಂಬುಲೆನ್ಸ್ ಇರುವಲ್ಲಿಗೆ ಹೊರಡುತ್ತಾನೆ.

ಆಸ್ಪತ್ರೆಯಿಂದ ಸ್ಮಶಾನದ ದಾರಿಯಲ್ಲಿ, ಕುಸುಮಳ ತಲೆಯಲ್ಲಿ ಚಿಂತನ ಮಂಥನ ಗಳು. "ತಾನು ಅವನಿಗೆ ತನ್ನನ್ನು ಒಪ್ಪಿಸಿಕೊಂಡು ಬಿಟ್ಟು ನಡೆದಾಗ ಇಲ್ಲದ ದುಃಖ ಈಗೇಕೆ? ೨೬ ವರ್ಷಗಳು ದೂರವಿದ್ದರೂ ತನ್ನ ಹೃದಯದಲ್ಲಿ ಇಟ್ಟು, ಅವನ ಪ್ರತೀಕವಾಗಿದ್ದ ಮಗನಲ್ಲಿ ಅವನನ್ನು ಕಂಡು ತೃಪ್ತಿಯಿಂದ ಆರಾಧಿಸುತ್ತಿದ್ದ ತನಗೆ ಅವನ ಸಾವೇಕೆ ದುಃಖವನ್ನು ತರುತ್ತಿದೆ? ಅವನು ಈಗಲೂ ತನ್ನ ಜೊತೆಯೇ ಇದ್ದಾನೆ ತಾನಿರುವವರೆಗೂ ಇರುತ್ತಾನೆ. ಹೌದು , ಹೌದು!!!. " ಒತ್ತರಿಸಿ ಬರುತ್ತಿದ್ದ ಕಣ್ಣೀರು ಒಮ್ಮೆಲೇ ನಿಂತು ಹೋಯಿತು. ಗಾಂಭೀರ್ಯ ಮನೆ ಮಾಡಿತು.

ರಾಜು ನ ಶವವನ್ನು ಕಟ್ಟಿಗೆಯಿಂದ ಮುಚ್ಚುತ್ತಾರೆ ನಂತರ ರಾಜ್ ಚಿತೆಗೆ ಅಗ್ನಿ ಸ್ಪರ್ಶ ಮಾಡುತ್ತಾನೆ. ಇದೆಲ್ಲವನ್ನೂ ಕುಸುಮ ವಿಡಿಯೋ ಕಾಲ್ ಮೂಲಕ ಅವನ ಹೆಂಡತಿ ಗೆ ತೋರಿಸುತ್ತಾಳೆ. ಕೈಮುಗಿದು ಕರೆಯನ್ನು ಅಂತ್ಯಗೊಳಿಸುತ್ತಾಳೆ.

ಕುಸುಮಳಿಗೆ ಎಂದೂ ಇರದ ಸಮಾಧಾನ, ಜೀವ ಹಗುರಾದ ಅನುಭವ. ಮನಸ್ಸು ನಿರಾಳ. ರಾಜು ಹೊರಗೆ ಬರುತ್ತಾ ಗಾಳಿಗಾಗಿ ತನ್ನಕುತ್ತಿಗೆಯ ಭಾಗದ PPE ಮುಖ ಕವಚವನ್ನು ಹಿಂದೆ ಸರಿಸುತ್ತಾನೆ. ಕುಸುಮ ಮಗನನ್ನು ಒಮ್ಮೆ ನೋಡುತ್ತಾಳೆ. ರಾಜು ನ ಪಡಿಯಚ್ಚು. ಬಣ್ಣ ಮಾತ್ರ ಸ್ವಲ್ಪ ಕಪ್ಪು. ಅವನ ಕೈಯನ್ನು ಇನ್ನಷ್ಟು ಗಟ್ಟಿಯಾಗಿ ಹಿಡಿದು ಆಂಬುಲೆನ್ಸ್ ಕಡೆಗೆ ನಡೆಯುತ್ತಾಳೆ.

ನಿಷ್ಕಾಮ ಪ್ರೇಮದ ಆರಾಧನೆ
ತಾನು, ತನ್ನದರ ವಿಮೋಚನೆ !!!!

 

ಪ್ರಶಾಂತ್. ವೈ . ಡಿ

ಕತೆಗಾರ ಪ್ರಶಾಂತ್. ವೈ .ಡಿ ಅವರು ಬೆಂಗಳೂರಿನ ಅರೆಹಳ್ಳಿಯ ಇಟ್ಟಮಡುವಿನವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ. 

More About Author