Poem

ವ್ಯವಸ್ಥೆ- ಗಜಲ್

ಶಾಂತಿಯ ತೋಟದಲಿ ಕೋಪ ತಾಪ ಹುಟ್ಟಬಾರದು
ಹಾಡಿ ಎಚ್ಚರಿಸೋ ಕೋಗಿಲೆಯ ಕತ್ತು ಕೊಯ್ಯಬಾರದು

ಬೀದಿ ಬೀದಿಗಳಲಿ ಬೆಂಕಿ ಹರಡಿದೆ ಎಂದರೆ ಏನರ್ಥ
ಕಿಡಿಯನು ಹೊತ್ತಿಸಿ ಅದಕೆ ಪೆಟ್ರೋಲ್ ಸುರಿಬಾರದು

ಸರ್ವಜನ ಹಿತ ಕಾಪಾಡುವ ಕರ್ತವ್ಯ ಮರೆಬಾರದು
ಪಕ್ಷಪಾತಿ ಎಂಬ ಹೆಸರು ಗಳಿಸಲು ಹೋಗಬಾರದು

ಚದುರಂಗದಾಟದ ಚತುರ ಆಟಗಾರನೆ ಇರಬಹುದು
ಸಾವನೆತ್ತರಿನ ಆಟವಾಡಿ ಅಧಿಕಾರ ಉಳಿಸಬಾರದು

ಮನಸುಗಳು ಬೆಸೆಯುವ ಕೆಲಸ ನಡೆಯಬೇಕೆ ವಿನಾ
ಒಡೆದಾಳುವ ನೀತಿಗಳಿಗೆ ಮುನ್ನುಡಿ ಬರೆಯಬಾರದು

ಒಡೆಯನ ಅಣತಿಯಂತೆ ಶಿರಬಾಗಿ ನಡೆಯಬೇಕು ನಿಜ
ತಪ್ಪು ದಾರಿಯಲಿ ಸಾಗುವವನಿಗೆ ಸಾಥ ನೀಡಬಾರದು

ಅತಿ ದೊಡ್ಡ ಇತಿಹಾಸವಿರುವಅಲದ ಮರ ಬದುಕಿಸು
ಕೊಡಲಿ ಏಟುಗಳು ಕೊಟ್ಟು ನೆರಳು ಕಸಿಯಬಾರದು

ಬೇಲಿಯೇ ಎದ್ದು ಹೊಲ ಮೇಯುತ್ತಿದ್ದರೆ ಹೇಗೆ ಸಾರ್
ಕಾವ್ಯ ಕಹಳೆಯಾಗುವಷ್ಟು ವ್ಯವಸ್ಥೆ ಕೆಡಲು ಬಿಡಬಾರದು

- ಅಶ್ಫಾಕ್ ಪೀರಜಾದೆ.

ಅಶ್ಫಾಕ್ ಪೀರಜಾದೆ

ಕವಿ ಅಶ್ಫಾಕ್ ಪೀರಜಾದೆ ಅವರು ಮೂಲತಃ ಬೆಳಗಾವಿ ಜಿಲ್ಲೆಯವರು. ಸದ್ಯ, ಧಾರವಾಡದಲ್ಲಿ ನೆಲೆಸಿದ್ದು, ವೃತ್ತಿಯಿಂದ, ಪಶು ಸಂಗೋಪನಾ ಇಲಾಖೆಯಲ್ಲಿ ಹಿರಿಯ ಪಶು ವೈದ್ಯಕೀಯ ಪರೀಕ್ಷಕರು. 

ಕೃತಿಗಳು: ಪ್ರೇಮವೆಂದರೆ, ಜನ್ನತ್ ಮತ್ತು ಇತರ ಕಥೆಗಳು (ಕಥಾಸಂಕಲನಗಳು), ಮನೋಲೋಕ, ಒಂದು ಜೋಡಿ ಕಣ್ಣು, ನನ್ನೊಳಗಿನ ಕವಿತೆ (ಕವನ ಸಂಕಲನಗಳು)  

More About Author