Poem

ಯೋಧರು ದೇಶದ ಹೆಮ್ಮೆ

ಭರತಗುಡಿ ಕಾಯ್ವಗಡಿ ಜೀವಹಿಡಿ ಅಂಗೈಲಿ
ಗರ್ಭಗುಡಿ ಬಿಟ್ಟುನಡಿ ರಕ್ಷೆಕೊಡಿ ಗಡಿಯಲ್ಲಿ ॥ಪ॥

ಇರುವೆ ನುಸುಳದಂತೆ ವಳಗೆ ಪಹರೆ ಕಾವಲು
ಬಿಟ್ಟು ಎವೆಯ ಮುಚ್ಚದಂತೆ ತೆರೆದ ಕಂಗಳು
ಇವರು ಒಪ್ಪಿದಾಗ ಗಾಳಿ ಒಳಗೆ ಬೀಸಿತು
ಅವರ ಸೀಮೆ ಮೇಘಮಾಲೆ ಕೇಳಿ ಸುರಿಯಿತು ೧

ಹದ್ದಿಗಿಂತ ತೀಕ್ಷ್ಣ ದೃಷ್ಟಿ ವೈರಿ ಹುಡುಕುತ
ಗುದ್ದಿನೊಳಗೆ ಕುಳಿತುಕೊಂಡು ಜಾಡನರಸುತ
ಕೊರೆವ ಚಳಿಯು ಸುರಿವ ಹಿಮವು ಸೀತಗಾಳಿಯು
ಮೇಘಸ್ಫೋಟ ವರುಣಘಾತ ಸುಡುವ ನಾಳೆಯು ೨

ಮಣ್ಣುನೀರು ಸಿಕ್ಕಊಟ ಕೋಳಿ ನಿದ್ದೆಯು
ಮದ್ದುಗುಂಡು ಶಸ್ತ್ರ ಅಸ್ತ್ರ ಭಾರ ಮಟ್ಟೆಯು
ಕ್ರೂರಪ್ರಾಣಿ ಹರಿವಹಾವು ಹಸಿದ ಹೊಟ್ಟೆಯು
ಗುಡ್ಡ ಕುಸಿದು ಒಡ್ಡು ವಡೆದು ಕಷ್ಟ ಕಟ್ಟೆಯು ೩

ನೂರುಕೋಟಿ ಜನರನಿದ್ದೆ ಇವರ ಎಚ್ಚರ
ಹಸೆಯವಳಗೆ ನುಸುಳುವವರ ಹತ್ಯೆ ತತ್ತರ
ವೈರಿನೆಲಕೆ ನುಗ್ಗಿ ಬಡಿವ ಬಲದಿ ಭೀಮನು
ಹಿಮದವಳಗು ಜೀವಹಿಡಿವ ಗಟ್ಟಿ ಹನುಮನು ೪

ಹಡೆಯುವವರೆ ಒಂದು ಮಗುವ ದೇಶ ಬಯಸಿದೆ
ಚತುರಬಲವು ವಿದುರನೀತಿ ಭೀಷ್ಮನಡೆಯಿದೆ
ಗಾಳಿನೀರು ಭೂಮಿಯಲ್ಲಿ ಸೈನ್ಯ ನುಗ್ಗಲಿ
ಹಡೆದತಾಯಿ ಪಡೆದ ನೆಲಕೆ ಖುಷಿಯು ವಗ್ಗಲಿ ೫

- ಜೀವರಾಜ ಹ ಛತ್ರದ ಭಾನುವಾರದ ಕವಿತೆ

ಜೀವರಾಜ ಹ ಛತ್ರದ

ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು.  ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 

ಕೃತಿಗಳು: ಖುಷಿ ತರಲಿ ಕೃಷಿ, ಅಕ್ಕಡಿ ಕಾಳು( ವೈಚಾರಿಕ ಲೇಖನಗಳು), ಯಾಲಕ್ಕಿ ಹಾಲಕ್ಕಿ, ರಮ್ಯಗಾನ, ಅನುವಿನು, ದಾಂಪತ್ಯ ಗೀತೆಗಳು, ಜೀವಣ್ಣನ ಆಧುನಿಕ ತ್ರಿಪದಿಗಳು, ಅಸಲಿ ಮಳೆ, ಹನಿ ಹನಿ ಕಾವ್ಯಧಾರೆ, ಮಂಜೂರ್ಶಿ, ಸೂರು ಗುಡ್ಡ, ಉದಯ ರಶ್ಮಿ (ಕವನ ಸಂಕಲನಗಳು)

More About Author