Article

ಬೆಳಕಿನ ಬೇಲಿಯ ನ್ಯಾನೋ ಕತೆ

ತಂತ್ರಜ್ಞಾನದ ವಿದ್ಯಾಭ್ಯಾಸ ವೃತ್ತಿಪರರಾದ ಹಾಸನದ ಶರತ್ ಎಚ್. ಕೆ. ಅವರು ತಮ್ಮ ಸಾಹಿತ್ಯ ಜೀವನದ ಪ್ರೀತಿಯನ್ನು ಪುಟ್ಟ ಪುಟ್ಟ ಕಥೆಗಳಲ್ಲಿ ಪ್ರಕಟಿಸಿದ್ದಾರೆ. ಈ ಕಥೆಗಳು ಸಣ್ಣ ಕತೆಗಳು, ಅತಿ ಸಣ್ಣ ಕತೆಗಳು, ಪೋಸ್ಟ್ ಕಾರ್ಡ್ ಕಥೆಗಳು ಅಥವಾ ಮಿಂಚು(ಫ್ಲ್ಯಾಶ್‌‌‌) ಕತೆಗಳನ್ನು ಮೀರಿ ತಮ್ಮ ಗಾತ್ರವನ್ನು ಕಿರಿದುಗೊಳಿಸಿವೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಈ ಕಥೆಗಳ ಪದಗಳು ಕಡಿಮೆಯಾದರೂ ಅವುಗಳ ಅರ್ಥ ಅಪಾರ ವಿಸ್ತಾರಗೊಂಡಿದೆ.

ಮೂಲತಃ ’ನ್ಯಾನೋ’ ತಂತ್ರಜ್ಞಾನದಂತೆ ’ಗಾತ್ರದಲ್ಲಿ ಕಿರಿದು- ಸಾಮರ್ಥ್ಯದಲಿ ಹಿರಿದು’ ಎಂಬ ಪರಿಕಲ್ಪನೆಯನ್ನು ಈ ಕತೆಗಳು ಹೊತ್ತು ತಂದಿವೆ. ಇವನ್ನು ಪೌರಾಣಿಕ ಪರಿಭಾಷೆಯಲ್ಲಿ ’ವಾಮನ ಕಥೆಗಳು’ ಎಂದು ಕರೆಯಬಹುದೇನೋ.

ಪ್ರಸ್ತುತ ’ನ್ಯಾನೋ’ ಕಥೆಗಳ ಒಂದೆರಡು ’ಫ್ಲ್ಯಾಶ್‌‌‌’(ಮಿಂಚು) ನೋಟಗಳು ಇಂತಿವೆ...

ಪುಸ್ತಕ : ಎಲ್ಲೋ ಒಮ್ಮೊಮ್ಮೆ ಪದಗಳಲ್ಲಿ ಹಿಡಿದಿಡಲ್ಪಟ್ಟ ಕನಸುಗಳನ್ನು ಮಾರಬೇಕೆನಿಸುತ್ತದೆ.... ಕೊಳ್ಳುವವರಾರು ?

ಶಾಪ : ಬೇಯುತ್ತಲೇ ಜೊತೆಯಾದ ಇಟ್ಟಿಗೆಗಳು ಗೋಡೆಯಾಗಿ ಎದ್ದು ನಿಂತ ಮೇಲೆ ಸಿಮೆಂಟಿಗೆ ಹಿಡಿಶಾಪ ಹಾಕುತ್ತಿವೆ.

ಜೀವಂತಿಕೆ : ನಿನ್ನ ಗುರಿ ಏನೆಂದು ಕೇಳಿದರು. ಏನೂ ಇಲ್ಲವೆಂದೆ. ಗೊಂದಲದಲ್ಲಿದ್ದೀಯ ಅಂದರು. ಜೀವಂತವಾಗಿದ್ದೇನೆ ಅಂದೆ.

ಚಿಂತೆ : ನಾಳೆಯ ನೋವಿಗೆ ಇಂದೇ ಮುಲಾಮು ತಿಕ್ಕಿಕೊಂಡ ಮನಸ್ಸು ಈ ಕ್ಷಣದಿಂದಲೇ ರೋಗಗ್ರಸ್ತವಾಗಿದೆ.

ಸಿರಿವಂತಿಕೆ : ಎಲ್ಲ ಇರುವವನನ್ನೂ ಕಾಡುವ ಅನಾಥ ಪ್ರಜ್ಞೆಗೆ ಉಳ್ಳವನು ಇಟ್ಟ ಹೆಸರು.

ಕಲಾಕೃತಿ :ಬಣ್ಣದ ಬೆರಗು ಖಾಲಿ ಪುಟದ ನೋವು ಮರೆಮಾಚಿದೆ.

ಅನಾಥ :ಪ್ರತಿ ದಿನ ಗಾಡಿ ಎಳೆಯುತ್ತಿದ್ದ ಎತ್ತಿನ ಮೂಗುದಾರ ಬಿಚ್ಚಿ ಅವನು ಬೀದಿಗೆ ಅಟ್ಟಿದ. ಎತ್ತು ಸ್ವಾತಂತ್ರ್ಯದ ಅಂಗಳದಲ್ಲಿ ಅನಾಥವಾಯಿತು.

ನೆನಪು :ನೀನು ದೂರ ಸರಿ... ಅವಳೆಂದಳು. ಅವನು ಸರಿ ಎಂದು ಸರಿದ... ಅವಳ ನೆನಪುಗಳ ತೀರಕ್ಕೆ.

ಆಸೆ :ಸಾಯಲು ಬಂದವರು ಸಾಲಾಗಿ ನಿಂತಿದ್ದರು. ಸಾಲಿನಲಿ ಕಡೆಯ ಸ್ಥಾನಕ್ಕೆ ಪೈಪೋಟಿ ಜಾರಿಯಲ್ಲಿತ್ತು.

ಆಲಸ್ಯ :ತಿಳಿಯದ ವಿಷಯಗಳನ್ನು ಒಡಲಿಗೆ ತುಂಬಿಕೊಳ್ಳುವ ಉಮೇದಿನೊಂದಿಗೆ ತಂದಿಟ್ಟುಕೊಂಡ ಪುಸ್ತಕಗಳು ನನ್ನ ಸೋಮಾರಿತನ ಕಂಡು ದೂಳು ಹಿಡಿಯುತ್ತಿವೆ.

ಅನೈತಿಕ:ಪಕ್ಕದ ಮನೆಯ ಪರಿಮಳ... ಅವನೊಂದಿಗೆ ತೊಟ್ಟಿಕ್ಕುತ್ತಿರುವ ತಳಮಳ.

ಪಲ್ಲಟ :ಎ ಬಿ ಸಿ ಡಿ ಕಲಿತ ಮಗು ರಕ್ತದ ಗುಂಪು ಗುರುತಿಸುತ್ತಿದೆ.

ಹೀಗೆ ಈ ಕತೆಗಳು ಅಪ್ಪಟ "ನ್ಯಾನೋ" ಟೆಕ್ನಾಲಜಿಯಂತೆ, ಒಂದು ಪೆನ್ನಿನಿಂದ ಇನ್ನೊಂದು ಪೆನ್ನಿನ ಮೇಲೆ ಓದಿ ಬರೆದಿಡಬಹುದಾದಷ್ಟು ಚಿಕ್ಕ-ಚೊಕ್ಕವಾಗಿವೆ.

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಾಗರಾಜ ಷಣ್ಮುಖಪ್ಪ ರಂಗನ್ನವರ