Article

ಬಿತ್ತಿದರೆ ಬಿತ್ತುವುದು ಮುಕ್ಕು ಚಿಕ್ಕಿಯ ಕಾಳು....

ಬೆಂಗಳೂರಿನ ಯಾವುದೊ ಮೂಲೆಯಲ್ಲಿ ಕೂತು ಕಾದಂಬರಿ ಓದುತ್ತಿದ್ದರೆ ನಾನು ಇಜಾಪುರದ ಯಾವುದೊ ಹಳ್ಳಿಯ ಆ ತಿರುವಿನಂಚಿನ ಆರಂಕಣ ಮನೆಯ ತಲಬಾಗಿಲ ದಾಟಿ ಪಡಸಾಲಿಯಿಂದ ನಡುಮನಿಗೆ ಹೊಕ್ಕು ಅಲ್ಲಿಂದ ದೇವ್ರ ಮನಿ ಎದುರುಗಿನ ಅಡಿಗಿ ಮನ್ಯಾಗ ಕುಂತು ಓದಕತ್ತಿನಿ ಅನ್ನುವಂಗ ಭಾವ ಆವರಿಸಿಬಿಡ್ತದ. 

ಬಾಣೆಂತನ...

ಆ ಅಡಿಗಿ ಮನಿ ಅಲ್ಲಿ ಹಾಕಿದ ಹೊರಸ ಇರುವಿ ಏರಬಾರ್ದು ಅಂತ ಹೊರಸಿನ ಕಾಲಿಗಿ ನೀರ ತುಂಬಿದ ಸಣ್ಣ ಗಂಗಾಳ. ಕುಳ್ಳ ಮ್ಯಾಲ ತಟಕ ಚಿಮ್ಣಿ ಎಣ್ಣಿ ಸುರ್ದು ಒಲಿ ಪುಟು ಮಾಡಿ ಹಡ್ದಕ್ಕಿಗಿ ಚಜ್ಜಕ ಮಾಡಿಕೊಡುದು‌.ಚಂಜಿ ಮುಂದ ಮಾಡ ಆದ್ರ ಮ್ಯಾಳಗಿ ಮ್ಯಾಲಿನ ಕಿಂಡಿ ಮುಚ್ಚಿ ಕುಂಬಿ ಇಳ್ದಿ ಕೆಳ್ಗ ಬರುದ್ರಾಗ ಗಗ್ಗರಗಟ್ಟಿಗೆ ಸಣ್ಣಗೆ ಮಳಿ ಹಿಡಸಲ ಬರಕತ್ತಿರ್ತದ. ಇವೆಲ್ಲಾ ನಾ ಸಣ್ಣಾಂವಿದ್ದಾಗ ಅನುಭವಕ್ಕ ಬಂದಿದ್ದು. ಹೊಳ್ಳಿ ಈ ಮೌನೇಶನ ಕಥಿ ಓದಕತ್ತಾಗ ಹೊಳ್ಳ ಮಳ್ಳ ಮನ್ಸ ಅವ್ವನ ಕಡೆ ಹೋಗ್ತದ.

ಒಂದೆ...ಗುಕ್ಕಿಗೆ ಎಲ್ಲಾ ಓದಿಬಿಡಬೇಕು ಅನ್ನುವಂಗ ಕತೆ ನಮ್ಮನ್ನ ಆವರಿಸುವುದರಲ್ಲಿ ಎರಡು ಮಾತಿಲ್ಲ. ಪಾತ್ರಗಳು ಎದೆಯಲ್ಲಿ ಮಾತನಾಡುತ್ತವೆ. ನಮ್ಮನ್ನೆಲ್ಲಾ ಈ ಕತೆ ಆಳಕ್ಕೆ ಕರೆದೊಯ್ಯುತ್ತದೆ. ಉತ್ತರ ಕರ್ನಾಟಕದ ಸಂಪ್ರದಾಯ, ಪರಸ್ಪರ ಸಹಬಾಳ್ವೆ , ಬಡತನ, ಅಲ್ಲಿಯ ಜನರ ಬದುಕು ಎಲ್ಲವೂ ಕನ್ನಡಿ ಹಿಡಿದು ತೋರಿಸಿದಂತಿದೆ. ಓದುವಾಗ ಈಗ,  ಇಸದ್ದೆ, ಇಲ್ಲೆ ವಾಸ್ತವ ಅಲ್ಲಲ್ಲ ಅತಿ ವಾಸ್ತವದಲ್ಲಿ ನಡೆದುಹೊಯ್ತು ಎನ್ನುವಂಗ ಅನಿಸಿಬಿಡುತ್ತದೆ.

ಬಿತ್ತಿದರೆ ಬಿತ್ತುವುದು ಮುಕ್ಕು ಚಿಕ್ಕಿಯ ಕಾಳು

ಮುತ್ತುರತುನವ ಬಿತ್ತಿ ಮಾಡದಿರು ಹೊಲ ಹಾಳು

ಜೀವನವು ಚಾಚಿ ಮುಗಿಲಂಗಳಕೆ ಹಚ್ಚಿ

ದೇವನುಡಿ ನುಡಿವಂತೆ ಮಾಡು ಮೆಚ್ಚಿ

ಹೀಗೆ ಬೇಂದ್ರೆ ಸಾಲುಗಳಲಿ ಹೆಕ್ಕಿ ತೆಗೆದ ಶಿರ್ಷಿಕೆ ಅತಿ ಅರ್ಥಪೂರ್ಣವಾದಂತದ್ದು.!

ಕಾದಂಬರಿ ಮುಖ್ಯ ಕಥಾನಾಯಕ ಮೌನೇಶ ಹುಟ್ಟಾ ಸೀಳುದುಟಿಯ ಮನುಷ್ಯ. ಅದರಿಂದಾಗುವ ತೊಂದರೆ , ಅವಮಾವ ಎಲ್ಲವ ಸಹಿಸಿ ತನ್ನ ಭಾವನೆಗಳನ್ನೆಲ್ಲಾ ಚಿತ್ರಗಳಲ್ಲಿ ಅದ್ದಿ ತೆಗೆದ ಹಾಗೆ ಪೇಪರ್ ಮೇಲೆ ಮೂಡಿಸುವ ಚಾಣಕ್ಷಹೊಂದಿರುವವ.! ಚಿಕ್ಕವನಿರುವಾಗ ಆಪರೇಷನ್ ವಿಷಯವಾಗಿ ಮಾತನಾಡುವಾಗ ಕೇಳಿಸಿಕೊಂಡ ಮೌನೇಶ  " ಅವ್ವಾ ನನಗ ಹಾ ಆಕೈತಿ, ನಾ ವಲ್ಲ್ಯಾ, ಬಲೂದಿಲ್ಲ ಬಲೂದಿಲ್ಲ" ಎಂದು ರಚ್ಚೆ ಹಿಡಿಯುವ ಸಂಗತಿ ಎಂಥವರೆದೆಯಲ್ಲೂ ಅಂತಃಕರಣ ಬಡೆದೆಬ್ಬಿಸುವಂಥವು.

ಕಲಕೇರಿ - ಬಿಜಾಪುರ  - ಧಾರವಾಡ - ಮುಂಬೈ ಹೀಗೆ ಅವನ ಬದುಕು ದೊಡ್ಡ ದೊಡ್ಡ ಶಹರಗಳಲಿ ಬೆಳೆಯುತ್ತಲೆ ಹೋಗುವಾಗ ತಾನು ಬೆಳೆದು ಬಂದ ದಾರಿ ಯಾವುದು ಮರೆಯಲಿಲ್ಲ. ಸಂಭ್ರಮಗಳಿಗೆ ಮತ್ತದೆ ಆಡಿ ಬೆಳೆದ ಊರಿನ ಕಡೆಯೆ ಹೆಜ್ಜೆ ಹಾಕುತಿದ್ದ. ಮದುವೆಯ ನಂತರದ ಮೌನವನ್ನು ಚಿತ್ರಕ್ಕಿಳಿಸಿದ. ಬಂದ ಕಣ್ಣೀರಿನ ಬುಗ್ಗೆಯನ್ನು ಗಂಟಲುಬ್ಬುವ ಹಾಗೆ ನುಂಗಿದ. ಎಷ್ಟಿಷ್ಟೊ ಅವಮಾನಗಳನ್ನು ಒಡಲಲ್ಲಿ ಹಾಕಿಕೊಂಡು ತಾಳಿದ. ಸಣ್ಣ ಸಣ್ಣ ಸಂತೋಷಗಳನ್ನು ಅತಿ ಆಪ್ತರಾದ ಗುರುಗಳಿಗೆ ಮೊದಲು ತಿಳಿಸಿ ಸಂತಸವಾಗಿರುತ್ತಿದ್ದ. ಅವನ ಬದುಕೆ ನಿಜಕ್ಕೂ ಸಾವಿರ ಸಲ ಸೋತು ಕೊನೆಗೆ ಗೆದ್ದವರಲ್ಲಿ ಒಬ್ಬನಾಗಿ ಎತ್ತರದಲ್ಲಿ ನಿಂತಂತಾಗಿತ್ತು. 

ಕಥೆ...ಓದಿಸಿಕೊಂಡು ಹೋಗುವಾಗ ಭಾವುಕರನ್ನಾಗಿ ಮಾಡಿಬಿಡುವುದರಲ್ಲಿ ಗುಮಾನಿಯೆ ಇಲ್ಲ. ಟಿಪಾಯಿ ಮೇಲಿನ ಕಾಫಿ ಆರಿ ಹೊರಗಿನ ಸಣ್ಣ ಮಳೆ ನಿಂತರೂ ಪುಸ್ತಕದೊಳಗಿನ ಪಾತ್ರಧಾರಿಗಳು ಮೌನ ಮುರಿದು ಎದೆಯೊಳಗೆ ಮಾತನಾಡುತ್ತಲೆ ಇರುತ್ತವೆ‌. ಕಾದಂಬರಿಯ ಕೊನೆ ಕೊನೆಗೆ ಅವ್ವನ ಆರೋಗ್ಯದ ಏರುಪೇರಿಂದಾಗಿ ಮೌನೇಶ ಗರ ಬಡೆದಂಥಾಗುತ್ತಾನೆ‌. ಅವ್ವನ ಆರೈಕೆಯಲ್ಲಿಯೆ ಕಾಲ ಕಳೆಯುವಾಗ ಕಾಳವ್ವಮ್ಮ ಆ ದೃಶ್ಯ ನೋಡಿ - "ಅಪ್ಪ್ಯಾ, ನೀ ಕೂಸಿದ್ದಾಗ ನಿಮ್ಮವ್ವ ನಿನಗ ಹಾಲು ಕುಡ್ಸೂವಾಗ ಹಿಂಗ ನಿನ್ನ ಬಾಯಾಗಿನ ಹಾಲೆಲ್ಲ ಹೊರಗ ಬರ್ತಿದ್ವೋ ನನ್ನಪ್ಪಾ.ಆಗ ನಿಮ್ಮವ್ವನೂ ಹಿಂಗ ಕಣ್ಣೀರ್ ಹಾಕ್ಕೋತ ನಿನ್ನ ಹರದ ತುಟಿ ಕೂಡ್ಸಿ ಮತ್ತ ಮತ್ತ ಕುಡ್ಸಾಕ ನೋಡ್ತಿದ್ಳು. ತುಟಿ ಮ್ಯಾಲಿಟ್ಟ ಬಳ್ಳು ತುಸು ಸಡಲಬಿಟ್ರ ಸಾಕು ನಿನ್ನ ಬಾಯಾನ ಹಾಲೆಲ್ಲಾ ಹೊರಗ್ ಬರ್ತಿದ್ವು. ನಿನ್ನ ವಸಡಿ ಘಟ್ಟ್ಯಾದ ಮ್ಯಾಲೇನ ನೋಡು ನಿಮ್ಮವ್ವ ಸಮಾಧಾನವಾಗಿ ,ಅಕಿ ಕಣ್ಣೀರು ನಿಂತಿದ್ದು. ನಿನ್ನ ಸಮಂದ ಭಾಳ ತಪಾ ತಗದಾಳಪ್ಪ ನಿಮ್ಮವ್ವ. ನಿನ್ನ ಇಷ್ಟು ದೊಡ್ಡೋನ್ ಮಾಡಿ ತಾ ಹೆಂಗ ಕೂಸಾಗ್ಯಾಳ ನೋಡೀಗ.."ಎಂದಳು ಸೋತ ಧ್ವನಿಯಲ್ಲಿ.! ಇಂಥಹ ಭಾವನಾತ್ಮಕ ಸಾಲುಗಳು ಯಾರ ಎದೆಯಲ್ಲಿ ಜಾಗೆ ಮಾಡಿಕೊಳ್ಳುವುದಿಲ್ಲ ಹೇಳಿ ?  ಕಲ್ಲು ಹೃದಯದಂಥ ಕಟುಕನೆದೆಯಲ್ಲೂ ಅಂತಃಕರಣಕ್ಕೆ ತಾಕುವಂತೆ ಬರೆದ ಉತ್ತರ ಕರ್ನಾಟಕ ಭಾಷಾ ಶೈಲಿಯ ಸಾಲುಗಳು ಎಲ್ಲಾ ಓದುಗರನ್ನು ಗಮನಸೆಳೆದಿವೆ. 

ನಾವೇ...ಮರೆತು ಹೋದ ಪದಗಳು ಸಾಲುಗಳ ಮಧ್ಯೆ ಬಂದಾಗಲೆಲ್ಲಾ ಛೇ ಇ ಪದಾನ ತರಕ್ ಹಾರಿದ್ದೆ ಮತ್ತ ನೆಪ್ಪಾತ್ನೋಡು ಬಾಳ್ ದಿನಕ್ ಅಂತ ಓದುವಾಗಲೆಲ್ಲಾ ತುಂಬಾ ಸಲ ಅಂದುಕೊಳ್ಳುವುದಂತು ನೂರಕ್ಕೆ ನೂರು ಖಚಿತ.!ಒಟ್ಟಾರೆಯಾಗಿ ಹೇಳಬೇಕೆಂದರೆ ಕನ್ನಡ ಸಾಹಿತ್ಯದಲ್ಲಿ ಒಂದು ಅದ್ಭುತ ಪ್ರಯೋಗ. ಜಯಲಕ್ಷ್ಮಿ ಪಾಟೀಲರದು. 

ಪುಸ್ತಕದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮೌನೇಶ ಕನಸುಗಾರ