Article

ಜೀವನ್ಮುಖಿ ಧೋರಣೆಯ ಚೌಕಟ್ಟು ‘ಕರಕೀಯ ಕುಡಿ’

ಕತೆ ಎಂದರೆ ಕೇವಲ ಕಲ್ಪನೆಯ ಕೂಸಲ್ಲ. ಅದು ಅನುಭವದ ಕೂಸು. ಭಾವಜೀವಿಯೊಬ್ಬ ತನ್ನ ಸುತ್ತಲ ಜಗದ ಕಣ್ಣಿಗೆ ಸಾಮಾನ್ಯನಾಗಿ ಕಂಡರೂ ಅವನೊಳಗೆ ರಮಿಸುವ, ಭ್ರಮಿಸುವ, ಕುಟುಕುವ ಇನ್ನೊಂದು ತಪ್ತ ಮನ ಜಗದ ನೋವಿಗೆ ನಲಿವಿಗೆ ಹೊಸ ರೀತಿಯಲ್ಲಿ ಸ್ಪಂದಿಸುತ್ತಾ, ಆ ಜಗದ ಪಾತ್ರಗಳ ಕುರಿತು ತನಗನ್ನಿಸಿದ್ದನ್ನು ತೋಚಿದ್ದನ್ನು ಒಂದಿಷ್ಟು ಭಿನ್ನ ನೆಲೆಯಲ್ಲಿ ಕಟ್ಟಿಕೊಡುತ್ತಾ ಹೋಗುತ್ತಾನೆ. 
ಹಾಗೇ ಆನಂದ ಋಗ್ವೇದಿ ಅವರ ಇತ್ತೀಚಿನ ಕಥೆಗಾರರಲ್ಲಿ ತಮ್ಮ ಜೀವನಾನುಭವಗಳಲ್ಲಿ ಕಂಡ ಸಂಘರ್ಷ ಹಾಗೂ ಸೂಕ್ಷ್ಮ ಸಂವೇದನೆಯ ಮೂಲಕ ಲೋಕದ ವ್ಯಾಪಾರಗಳಲ್ಲಿ ಕಂಡುಕೊಂಡ ಹಲವು ಚಿತ್ರಗಳನ್ನು ವಸ್ತುನಿಷ್ಟವಾಗಿ ಕಟ್ಟಿಕೊಡುತ್ತಾರೆ. ಅದಕ್ಕೆ ಕಾರಣಗಳೂ ಇವೆ. ವಸ್ತುನಿಷ್ಠ ಸಾಹಿತ್ಯ ಯಾವತ್ತಿಗೂ ವ್ಯಕ್ತಿಯನ್ನ ಕೇಂದ್ರವಾಗಿಟ್ಟುಕೊಳ್ಳದೇ, ವಸ್ತುವನ್ನು ಸಮಗ್ರವಾಗಿ ಸಾಮಾಜಿಕ ಸ್ವರೂಪದ ಹಿನ್ನೆಲೆಯಲ್ಲಿ ಪರಿಭಾವಿಸುತ್ತದೆ. ಹಾಗಾಗಿ ಇಲ್ಲಿಯ ಕಥೆಗಳಲ್ಲಿ ಮುಖ್ಯ ಕಥಾನಾಯಕ ಅಥವಾ ನಾಯಕಿಯರ ಕೊರತೆ ಕಾಣುತ್ತದೆ. ಹಲವು ಪಾತ್ರಗಳು ಇಲ್ಲಿ ಮನುಷ್ಯ ಪ್ರೀತಿ, ದ್ವೇಷ, ಅಸೂಯೆ, ಅನ್ಯಾಯ, ಅವಕಾಶವಾದಿತನಕ್ಕೆ ಸಾಕ್ಷಿಗಳಾಗಿ ಓದುಗನಿಗೆ ಮುಖಾಮುಖಿಯಾಗುತ್ತವೆ.ಬಹುತೇಕ ಎಲ್ಲ ಕಥೆಗಳು ಸ್ತ್ರೀ ಪುರುಷ ಸಂಬಂಧಗಳ ಅಡಿಯಲ್ಲಿಯೇ ಓದುಗನಿಗೆ ಮುಖಾಮುಖಿಯಾಗುತ್ತವೆ. 
“ತೊರೆಯ ತೇವ” ಬದುಕಿಗೆ ರೂಪಕವಾಗಿದೆ. ಬದುಕು ಕೂಡಾ ತೊರೆಯಂತೆ. ಮೇಲ್ಮೈ ಬತ್ತಿದರೂ ಒಳಮುಖದಲ್ಲಿ ಜಿನುಗುವ ತೇವದಿಂದ ಸದಾ ಜೀವಂತ. ಈ ಸಂಕಲನದ ಉದ್ದಕ್ಕೂ ನಾವು ಕಾಣುವುದು ಭಿನ್ನ ವಿಭಿನ್ನ ಪಾತ್ರಗಳಲ್ಲಿಯ ಬದುಕನ್ನು ಜೀವಂತವಾಗಿಸಿಕೊಳ್ಳುವ ಕುರಿತು ಇರುವ ತುಡಿತ. ಅವೆಲ್ಲವೂ ಕೃತ್ರಿಮ ಬಣ್ಣನೆಯ ಕಲ್ಪನಾ ಲೋಕದ ಪಾತ್ರಗಳಾಗದೇ ನಮ್ಮ ನಿಮ್ಮೆಲ್ಲರ ನಡುವಿನ ಪಾತ್ರಗಳನ್ನಾಗಿಸಿದ್ದಾರೆ ಋಗ್ವೇದಿಯವರು. 

ದೊಡ್ಡ ಮನೆತನದ ನಿರಂಜನರಾಯರು ಬ್ರಹ್ಮಚಾರಿ ಆದರೆ ಮನೆಗೆ ಹೆಣ್ಣು ದಿಕ್ಕಿಲ್ಲದಂತಾಗಬಾರದೆಂದು ತಮ್ಮ ನೀಲಕಂಠನಿಗೆ ಸುಬ್ಬುಲಕ್ಷ್ಮಿಯನ್ನು ತಂದು ವಿವಾಹ ಮಾಡುತ್ತಾರೆ. ಶೀರ್ಘ ಮುಂಗೋಪಿ ನೀಲಕಂಠನ ಬಿರುಸು ವರ್ತನೆಗಳನ್ನು ಕಂಡು ಕುಗ್ಗಿ ಹೋದ ಸುಬ್ಬುಲಕ್ಷ್ಮೀಯ ಸಂಸಾರ ಸುಖಮಯವಾಗಿರದೇ ಮೌನವಾಗಿ ಜೀವನ ನಡೆಸುತ್ತಿರುವಾಗಲೇ ಅನಾರೋಗ್ಯದಿಂದ ಬಳಲುವ ನಿರಂಜನರಾಯರ ಆರೈಕೆ ಮಾಡುತ್ತಾಳೆ. ಇದು ಅವರಿಬ್ಬರಲ್ಲಿ ಬಾಂಧವ್ಯ ಬೆಸೆಯುತ್ತದೆ. ಇದರಿಂದ ಇತ್ತ ನೀಲಕಂಠ ಒಳಗೊಳಗೆ ಕ್ಷುದ್ರನಾಗುತ್ತಾ , ನಿರಂಜನರಾಯರನ್ನು ದೂಷಿಸುತ್ತಾ ಹೋಗುವುದಲ್ಲದೇ ಸೂಲಗಿತ್ತಿ ಲಕ್ಷ್ಮೀಯ ಸ್ನೇಹದಲ್ಲಿ ಮನೆಯನ್ನೆ ತ್ಯಜಿಸಿದಂತೆ ಬದುಕತೊಡಗುತ್ತಾನೆ. ನೀಲಕಂಠನ ಭತ್ರ್ಯನೆಯಿಂದ ಹಿಂಸೆಗೊಳಗಾದ ನಿರಂಜನರಾಯರು ಮಗುವನ್ನೆತ್ತಿಕೊಂಡು ಮನೆ ಬಿಟ್ಟು ಹೊರಟು ಹೋಗುತ್ತಾರೆ. ಏನೂ ತೋಚದ ಸುಬ್ಬಲಕ್ಷ್ಮೀಗೆ ನೀಲಕಂಠನೊಂದಿಗೆ ಬದುಕಬೇಕಾಗುತ್ತದೆ. 

ಈ ಸನ್ನಿವೇಷ ಓದುಗರಲ್ಲಿ ವಿಚಿತ್ರ ತಳಮಳ ಮೂಡಿಸಬಹುದು. ಆದರೆ ಕಥೆಗಾರರ ಕಥಾ ಸೂಕ್ಷ್ಮತೆ ಇರುವುದು ಪಾತ್ರಗಳ ನಿರ್ವಹಿಸುವುದರಲ್ಲಿ ಹಾಗೂ ಬದುಕು ಎಂಬುದು ಎಷ್ಟು ವಿಚಿತ್ರ. ಮತ್ತು ವ್ಯಾಖ್ಯಾನಿಸಲಾಗದ್ದು ಎಂಬುದರ ಕಡೆಗೆ ಓದುಗನನ್ನು ಕೊಂಡೊಯ್ಯುವುದು. 
ತಮ್ಮನಿಗೆ ಹೆಣ್ಣು ನೋಡಲು ಬಂದಾಗ ನಿರಂಜನರನ್ನ ಕಣ್ತುಂಬ ನೋಡಿದ ಸುಬ್ಬುಲಕ್ಷ್ಮೀಯಲ್ಲಿ ಅವರದೇ ಚಿತ್ರ ಕೊನೆತನಕವೂ ಇದ್ದಿತೆಂಬುದು ಸ್ಪಷ್ಟ. ಲೋಕದ ಕಣ್ಣಿಗೆ ಹಚ್ಚಿದ ಪಟ್ಟಿಗಿಂತ ಒಳಮನದಲ್ಲಿ ಮೂಡಿದ ಬಿಂಬದ ಪ್ರತಿಫಲನ ಮುಖ್ಯ. ಕಥೆಗಾರರು ಕಥೆಯ ಅಂತ್ಯ ದರ್ಶಿಸುವ ಸತ್ಯಕ್ಕೆ ಇದನ್ನು ಪೂರಕ ಹಿನ್ನಲೆಯಾಗಿ ದುಡಿಸಿಕೊಂಡಿರುವುದು ಗಮನಾರ್ಹ. . ಪ್ರೀತಿ ಪ್ರೇಮ ಕಾಮಗಳು ಪ್ರಾಣಿ ಜಗತ್ತನ್ನು ರಮ್ಯವಾಗಿಸಿದಷ್ಟೇ ಅಲ್ಲ ಸಹ್ಯವಾಸುತ್ತವೆ ಕೂಡಾ. ಅದೇ ಹಸಿವು, ತೇವ, ಆರಿಯೂ ಆರದ ಜಿನುಗು. 

ಈ ಕಾಲ ಸಾಮಾಜಿಕ ಬದಲಾವಣೆಗಳ ಕಾಲ. ಏರಿಳಿತಗಳ ಕಾಲ. ಸಂಪ್ರದಾಯ ಚೌಕಟ್ಟು ಮತ್ತು ಆಧುನಿಕ ಚಹರೆಗಳು ಇವೆರಡರ ನಡುವಿನ ಸಂಘರ್ಷದಲ್ಲಿ ಭಾರತೀಯ ಪರಂಪರೆ ವಕ್ರೀಭವನಗೊಂಡು ಹೊಸ ನಿಲುವು, ಪ್ರಾಚೀನ ಸೈದ್ಧಾಂತಿಕ ಲಂಘನಗಳು, ಅವುಗಳ ನಿರಾಕರಿಸುವ ಮತ್ತು ಸಮರ್ಥಿಸುವ ವೈರುಧ್ಯಗಳ ಹುಟ್ಟಿಸಿಕೊಂಡ ಕಾಲ. ಹಾಗಾಗಿ ಒಂದೇ ಕಥೆಯಲ್ಲಿ ಎರಡು ಭಿನ್ನ ನಿಲುವುಗಳು, ಹೇಳಿಕೆಗಳನ್ನು ಹೊಂದಿದ ಕಥೆ‚ ತೇರು‛ ಕಥೆಯ ಮುಖ್ಯ ಪಾತ್ರ ಹನುಮಂತನ ತಂದೆ ರಾಮಚಂದ್ರ ಕುಲಕರ್ಣಿ ಮದುವೆಯಾಗಿ ಮಗು ಹುಟ್ಟುತ್ತಲೇ ತನ್ನ ನೌಕರಿಯನ್ನು ಕಳೆದುಕೊಳ್ಳುತ್ತಾರೆ. ಇದನ್ನೆ ನೆವವಾಗಿ ಇಟ್ಟುಕೊಂಡು, ತನ್ನ ತಾಯಿಯ ದುರ್ಬೋಧನೆಗೆ ಒಳಗಾಗಿ ಹೆಂಡತಿ ಮಗುವನ್ನು ತೌರಿಗೆ ಅಟ್ಟುತ್ತಾರೆ. “ಇನ್ನು ಶಾನುಭೋಗಿಕೆ ಪಡೆದು ಮೂರು ವರ್ಷ ಆಗಿಲ್ಲ,ಮದ್ವೆ ಆಗಿ ಮಗಾ ಹುಟ್ಟೋದ್ರೊಳಗೆ ಈ ಪರಂಪರಾಗತ ಪಿತ್ರಾರ್ಜಿತ ಕೆಲಸ ಹೋಗೋದಂದ್ರೆ ಏನು, ಎಲ್ಲ ಸೊಸಿ ಕಾಲ್ಗುಣ, ಹುಟ್ಟಿದ ಮಗುನ ನಕ್ಷತ್ರ ದೋಷ‛ ಎನ್ನುವ ಕುಲಕರ್ಣಿಯ ತಾಯಿ ಅದೇ ಪುರಾತನ ಮೌಢ್ಯದ ಹಾಸಿಗೆಯನ್ನು ಎಳೆದು ಮಗನ ಬದುಕಿಗೆ ಹೊದಿಸಿದಂತಿದೆ. ತಂದೆಯಿಂದ ಪರಿತ್ಯಕ್ತಳಾದ ತಾಯಿಯ ಜೊತೆ ಬೆಳೆದ ಹನುಮಂತ ಸ್ವಭಾವತಃ ಸುಶೀಲ. ಆದರೆ ಆತನ ಸ್ನೇಹಿತರು ಮಾತ್ರ ವಿಭಿನ್ನಭಿರುಚಿಯುಳ್ಳವರು.
 ಊರ ಜಾತ್ರೆ ನೆವದಲ್ಲಿ ನಡುವಯಸ್ಸಿನಲ್ಲಿ ಹಳೆಯ ಸಹಪಾಠಿ ಚಂದ್ರಕಲಾಳನ್ನು ಮತ್ತೆ ಕಂಡು ಅವಳ ಮಾಸದ ಸೌಂದರ್ಯಕ್ಕೆ ಮರುಳಾಗಿ ಜೊಲ್ಲು ಸುರಿಸುವ ಹನುಮಂತನ ಸ್ನೇಹಿತ ಬಸವರಾಜ ಹೇಳುವ ‚ಕಾಲ ಬದ್ಲಾಗೇತಿ. ಆಕಿನೂ ಕಾರ್ಪೋರೆಟ್ ಆಗಿ ಕೋಆಪರೇಟ್ ಮಾಡಿದ್ರಾತು" ಎಂಬ ಮಾತು ಆಧುನಿಕ ಭ್ರಷ್ಟ ಮನಸ್ಥಿತಿಗೆ ಸಾಕ್ಷಿಯಾಗುತ್ತದೆ. 
ಈ ಎರಡೂ ದ್ವಂದ್ವಗಳ ಕಾಲಘಟ್ಟದಲ್ಲಿ ನಾವಿರುವುದನ್ನು ಕಥೆ ಮನಗಾಣಿಸುತ್ತದೆ. ಅತ್ತ ಕಾಲ್ಗುಣ ದೋಷ, ನಕ್ಷತ್ರ ದೋಷಗಳನ್ನು ನಿರಾಕರಿಸುತ್ತಾ, ಪಾರಂಪರಿಕತೆಯನ್ನು ಒಪ್ಪದ ಇತ್ತ ಪಾಶ್ಚಾತ್ಯ ಬದುಕಿಗೂ ಒಗ್ಗದ ನಾವುಗಳು ನಿಂತಿರುವುದೆಲ್ಲಿ? ಎಂಬುದನ್ನು ಕಥೆಗಾರರಿಗೆ ಹೇಳಲಿತ್ತೇ?‚ ಕಾಲ ಬದಲಾದ್ರೂ ಹೆಣ್ಣ ಮನಸ್ಥಿತಿ ಬದಲಾಗಂಗಿಲ್ರಪ್ಪಾ. ಹೆಣ್ಣು ಒಲಿಯಾದು ಅಂದ್ರೆ ಆಕಿ ದೇಹ ಮನಸ್ಸು ಎರಡೂ ಜೊತೆಗೂಡೇ ಬರ್ಬೇಕು, ಅದೂ ಆತ್ಮಪೂರ್ವಕ. ಇಲ್ದಿದ್ರ ಅದು ಬರೀ ದೇಹದ ಹಾದರಾನಾ" ಎನ್ನುವ ಹನುಮಂತನ ಮಾತಿಗೂ "ಯೇ, ನಿನ್ನ ಫಿಲಾಸಪಿ ಎಲ್ಲಾ ಬ್ಯಾಡಾ ತಮ್ಮಾ. ಆಕಿ ಮನ್ಸ ಕಟ್ಗಂಡು ನಾವೇನು ಮಾಡಣ? ನಮ್ಗ ಆಕಿ ಜಬರದಸ್ತ್ ದೇಹ ಸಾಕ. ಏನಪಾ ಚಿದಂಬ್ರ ಏನಂತೀ?" ಎನ್ನುವ ಗೆಳೆಯ ಬಸವರಾಜನ ಮಾತಿಗೂ 
ಇರುವ ಭಿನ್ನತೆಯಲ್ಲಿ ಎರಡು ವ್ಯಕ್ತಿತ್ವಗಳನ್ನು ತಂದು ನಿಲ್ಲಿಸುತ್ತಾರೆ. 
ವಿದ್ಯಾವಂತನಾಗಿ ಹತ್ತಾರು ಜ್ಞಾನ ಸಂಪಾದಿಸಿಕೊಂಡ ಬಸವರಾಜ ಚಂದ್ರಕಲಾಳನ್ನು ನೋಡಿದ ತಕ್ಷಣ ಅವಳಿಗೆ ಆಕರ್ಷಿತನಾಗಿ ಹಲಬುವುದು ನಿಕೃಷ್ಟ ವ್ಯಕ್ತಿತ್ವಕ್ಕೆ ಸಾಕ್ಷಿ. ಆದರೆ ಅವಳನ್ನು ನಿಜವಾಗಿ ಆರಾಧಿಸುತ್ತಿದ್ದ ಹನುಮಂತ ಆಕೆ ತನ್ನವಳಾಗದೇ ಬೇರೆ ವಿವಾಹವಾಗಿ ಹೋದರೂ ಆಕೆ ಬಗ್ಗೆ ಗೌರವ ಕಾಳಜಿ, ಅಭಿಮಾನ ಇಟ್ಟುಕೊಂಡು. ಶ್ರೇಷ್ಟನಾಗುತ್ತಾನೆ. 
‚ಭೂಪೋತ್ತಮನಂ‛ ಕಥೆ ಆಧುನಿಕ ಸಂತಾನ ವಿಧಾನದ ಕುರಿತಾಗಿ ವಿಶ್ಲೇಷಿಸಿಸುತ್ತಾ, ಉಚ್ಛ ಭೌದ್ಧಿಕ ನಿಲುವುಳ್ಳ ಪಾರ್ಥಸಾರಥಿಯಂತಹ ಪಾತ್ರಗಳನ್ನು ಸೃಷ್ಟಿಸಿದ್ದಕ್ಕಾಗಿ ಓದುಗರ ಮನಸ್ಸಿನಲ್ಲಿ ಕಥೆಗಾರ ಮೆಚ್ಚುಗೆ ಪಾತ್ರನಾಗಬಹುದು. ಪತ್ನಿ ಪವಿತ್ರ ಮೂರು ಬಾರಿ ಗರ್ಭಧರಿಸಿಯೂ ಅದು ಫಲಕೊಡದೇ ಇದ್ದಾಗ, ಪಾರ್ಥಸಾರಥಿ ಆಧುಕಿನ ಸಂತಾನ ವಿಧಾನದ ಮೊರೆಹೋಗುತ್ತಾನೆ. ಆದರೆ ತನ್ನ ಅಸ್ತಮಾ ರೋಗ, ಕುರೂಪದ ಕಾರಣ ಸಶಕ್ತ ಮಗುವನ್ನು ಹೊಂದಲು ನಿರ್ಧರಿಸಿ ಗೆಳೆಯ ವೇಲಾಯುಧನ್ ವೀರ್ಯವನ್ನು ಪಡೆದು ಮಗುವನ್ನು ಹೊಂದುವುದು. ಆದರೂ ಮಗುವನ್ನು ತಂದೆಯಂತೆ ಅತೀ ಆಪ್ತತೆಯಿಂದ ಬೆಳೆಸುವುದು, ಹೀಗೆ ಎಲ್ಲವೂ ಸುಖಾಂತವಿದ್ದು, ಇನ್ನಿತರ ಯಾವುದೇ ಗೊಂದಲ ಅಥವಾ ಅನ್ಯಾಯಗಳ ಕಡೆಗೆ ಗಮನ ಹರಿಸುವುದಿಲ್ಲ. ಆದರೂ ಕಥೆ ಸಂಪ್ರದಾಯಸ್ಥ ಮುಖಗಳನ್ನು ಒಮ್ಮೆ ಮುಟ್ಟಿ ಬರುತ್ತದೆ., ಸಹಜ ಆದರ್ಶವಾದಿತ್ವವನ್ನು ಪ್ರತಿಪಾದಿಸುವ ಕಥೆಯಂತಿದೆ. 
ಜಾತಿ ವ್ಯವಸ್ಥೆಯಲ್ಲಿ ಮೇಲ್ವರ್ಗದ ದಬ್ಬಾಳಿಕೆಯನ್ನು ವೈಭವಿಕರಿಸಿರುವುದನ್ನೆ ಕೇಳಿ, ನೋಡಿ, ಹತ್ತಾರು ಕಥೆ, ಕಾದಂಬರಿ, ಸಿನೇಮಾಗಳಿಗೆ ಇದನ್ನೆ ಚರ್ವಿತ ಚರ್ವಣದಂತೆ ಜಗಿದು ಹೊಸೆದು ಮಾಡುತ್ತಿದ್ದರೂ, ಅದನ್ನು ನಿರ್ಮೂಲನೆ ಮಾಡಲಾಗುತ್ತಿಲ್ಲ. ಆದರೆ ಈ ವ್ಯವಸ್ಥೆಯಲ್ಲಿಯೇ ವೈಯಕ್ತಿಕ ನೆಲೆಯಲ್ಲಿ, ಮೇಲ್ಜಾತಿಯ ಜನರೂ ಹೇಗೆ ಬಸವಳಿಯುತ್ತಾರೆ, ಅವಕಾಶ ವಂಚಿತರಾಗುತ್ತಾರೆ ಎಂಬುದ ಕಟ್ಟಿಕೊಟ್ಟಿದ್ದಾರೆ “ಸನ್ನಿವೇಶ” ಕಥೆಯಲ್ಲಿ. ಕಾಲೇಜು ದಿನಗಳಲ್ಲಿಯೇ ಜಾತಿ ವ್ಯವಸ್ಥೆ ಸಾಮಾಜಿಕ ಅನಿಷ್ಟಗಳ ವಿರುದ್ಧ ತನ್ನದೇ ಆದ ಪ್ರಗತಿಪರ ನಿಲುವು ಹೊಂದಿದ ವಿದ್ಯಾವಂತಳಾದ ಬ್ರಾಹ್ಮಣ ಕನ್ಯೆ ಡಾ.ಸುವರ್ಣ ಕೆಳಜಾತಿಯ ಪ್ರೋ. ರಂಗನಾಥರನ್ನು ವಿವಾಹವಾಗಿ ಆ ಮೂಲಕ ಸಮಾಜ ಹೇರಿದ ಅಸಮಾನತೆಯನ್ನು ವಿರೋಧಿಸಬಯಸುತ್ತಾಳೆ. ಆದರೆ ರಂಗನಾಥರಿಗೆ ಸರಕಾರಿ ನೌಕರಿ ದೊರೆತರೆ, ಪ್ರತಿಭಾವಂತಳಾಗಿಯೂ ಡಾ. ಸುವರ್ಣ ಗುತ್ತಿಗೆ ಉಪನ್ಯಾಸಕರಾಗಿ ಇರಬೇಕಾಗುತ್ತದೆ. ಆ ಮೂಲಕ ಅಸಮಾನತೆಯ ಇನ್ನೊಂದು ಮಗ್ಗಲನ್ನು ಸ್ಪರ್ಶಿಸುತ್ತಾರೆ. ಹಾಗೇ ಅವಕಾಶವಾದಿ ಜನರು ತಮಗೆ ಬೇಕಾದಂತೆ ಜನರನ್ನು ಬಳಸಿಕೊಂಡು ಕೃತಘ್ನರಾಗಿರುವ ದೊಡ್ಡ ಜನರ ಸಣ್ಣ ಮನಸ್ಸಿನ್ನು, ಯುವ ಪ್ರಾಯದ ರಮಾಕಾಂತ ಧೀಕ್ಷಿತನ ಅಸಹಾಯಕತೆಯನ್ನು, ಬದುಕಿಗಾಗಿ ನಡೆಸಬೇಕಾದ ಹೋರಾಟ, ಆಗಾಗ ಎದುರಿಸಬೇಕಾದ ಮುಖಹಿಡಿತನ ಇವೆಲ್ಲವನ್ನೂ ಸಹಜ ಚಿತ್ರಣದಂತೆ ಕಟ್ಟಿಕೊಟ್ಟಿದ್ದು ಓದುಗನ ಮನಸ್ಸಿಗೆ ತಟ್ಟುತ್ತದೆ. 
‚ಪುನರುಜ್ಜೀವನ‛ ಕೂಡಾ ಅಸಮಾನತೆ ಮತ್ತು ಅವಕಾಶವಾದಿತನವನ್ನು ಇನ್ನೊಂದು ರೀತಿಯಲ್ಲಿ ಓದುಗ ವಿವೇಚನೆಗೆ ಹಚ್ಚುತ್ತದೆ. ಸಾಮಾಜಿಕ ಬದಲಾವಣೆ ಉದ್ಧಾರ ಇತ್ಯಾದಿಗಳ ತಮ್ಮ ಸರಕಾಗಿಸಿಕೊಂಡು ಮೆರೆಯುವ ಅವನ್ನೆಲ್ಲಾ ತಮ್ಮ ಲಾಭಕ್ಕೆ ಬಳಸಿಕೊಳ್ಳುವವರ ವಿರುದ್ಧ ತಣ್ಣನೆಯ ಪ್ರತಿಭಟನೆಯಂತಿದೆ ಕಥೆ. ಆದರೂ ಇವೆರಡು ಕಥೆಗಳು ಅಂತರ್ಜಾತಿಯ ವಿವಾಹವನ್ನು ಬೇರೊಂದು ರೀತಿಯಲ್ಲಿ ವಿಶ್ಲೇಷಿಸುತ್ತಾ, ಆ ಹಿನ್ನೆಲೆಯಲ್ಲಿ ಉಂಟಾಗಬಹುದಾದ ವೈಪರಿತ್ಯಗಳನ್ನು 
ಚರ್ಚಿಸಿವೆ. 
ಇಂದಿನ ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ಬರೆದಂತಹ ಈ ಕಥೆಗಳು ಸಾಮಾಜಿಕ ವ್ಯವಸ್ಥೆಯ ನೆಲೆಗಟ್ಟನ್ನು  ಪ್ರಸ್ನಿಸುತ್ತವೆ. ಅದರ ವೈಫಲ್ಯವನ್ನು ವಿಶ್ಲೇಷಿಸುತ್ತವೆ. ಓದುಗನನ್ನು ಇನ್ನೂ ನಾವೆಲ್ಲಿದ್ದೇವೆ ಎಂಬ ಪ್ರಜ್ಷೆಗೆ ಒಳಪಡಿಸುತ್ತವೆ ಅಂತಹ ಒಂದು ಕಥೆಯಲ್ಲ ಎರಡು ಕಥೆಗಳು ಗಮನಸೆಳೆಯುತ್ತವೆ. ಅದು ಕರಕೀಯ ಕುಡಿ ಹಾಗೂ ಪುನರುಜ್ಜೀವನ ಕಥೆಗಳು. 
“ಕರಕೀಯ ಕುಡಿ” ಕಥೆ ದೇವದಾಸಿಯೊಬ್ಬಳ ಬದುಕಿನ ಸುತ್ತ ಹೆಣೆದುಕೊಂಡಿದೆ. ಆದರೆ ಇಲ್ಲಿ ಆಕೆ ಬಳಲುವುದು ಕೊನೆ ಕಾಣುವುದು ತನಗೆ ಮುತ್ತು ಕಟ್ಟಿದ ಜನರಿಂದಲ್ಲ. ಬದಲಿಗೆ ತನ್ನನ್ನು ನ್ಯಾಯ ಸಮ್ಮತವಾಗಿ ವಿವಾಹವಾದ ಸಂಬಂಧಿಯಿಂದ. ದೇವದಾಸಿ ಹೊನ್ನಮ್ಮ ತೊನ್ನಿಗೆ ಬಲಿಯಾಗಿ ತೊನ್ನಮ್ಮನಾಗುತ್ತಲೇ, ಆ ಜಗತ್ತು ಆಕೆಯನ್ನು ನಿರಾಕರಿಸುತ್ತದೆ. ಇಲ್ಲಿ ಜಗತ್ತಿನ ಜಾಯಮಾನದ ಅರಿವಾಗುತ್ತದೆ. ಆದರೆ ಆಕೆಯನ್ನು ಉದ್ದರಿಸುವ ನಾಟಕವಾಡಿ ಬಂದ ಸಂಬಂಧಿ ಆಕೆಯ ಇಡೀ ಬದುಕನ್ನು ನಾಶಮಾಡುತ್ತಾನೆ. ಕೊನೆಗೆ ತನ್ನ ಮಕ್ಕಳಿಗೂ ಬೇಡವಾದ ಬದುಕನ್ನು ಬಾಳುತ್ತಾ, ಕುಡಿತಕ್ಕೆ ವಶವಾಗುವ ಹೊನ್ನಮ್ಮ ಕೊನೆಕಾಣುವುದು ಕೂಡಾ ದುಷ್ಟ ಸಂಬಂಧಿಯ ಕುತಂತ್ರಕ್ಕೆ. ಒಟ್ಟಾರೆ ಕಥೆಯ ಸಂಭವನೀಯ ಸಾಧ್ಯತೆಯನ್ನೇ ಭಿನ್ನವಾಗಿ ನಿರೂಪಿಸಿ, ದೇವದಾಸಿ ಬದುಕಿಗಿಂತ ವೈವಾಹಿಕ ಕುತಂತ್ರಗಳ ಕಡೆ, ಅಲ್ಲಿಯ ವಿಪರೀತ ಸಾಧ್ಯತೆಗಳ ಕಡೆ ಓಳನೋಟವೊಂದು ತೆರೆದುಕೊಳ್ಳುತ್ತದೆ. ಇಂದಿನ ಸಂಬಂಧಗಳಲ್ಲಿಯ ಕ್ರೌರ್ಯ ಹಾಗೂ ಸ್ವಾರ್ಥ, ಸಂಬಂಧಗಳ ಹೆಸರಲ್ಲಿ ನಡೆಯುವ ದರೋಡೆ ಕೇವಲ ದೈಹಿಕ ಮಾತ್ರವಾಗಿಲ್ಲದೇ ಮಾನಸಿಕವಾಗಿಯೂ ಆದಾಗ ಅದು ಕೊಡುವ ನೋವು ವರ್ಣಿಸಲು ಆಗದು. 

ಪುನರುಜ್ಜೀವನವೂ ಕೂಡಾ ಇಂತಹುದೇ ಸ್ವಾರ್ಥ ಸಾಧನೆಯ ವ್ಯಕ್ತಿತ್ವವನ್ನು ಶಂಕರ ದಳಪತಿ ಎಂಬ ಪುರುಷ ಪಾತ್ರದ ಮೂಲಕ ತೆರೆದಿಡುತ್ತದೆ. ‘ಅನುಸಂಧಾನ‛, ಕಾರ್ಣೀಕ‛, `ಹಾರಿ ಹೋದ ಧೂಮಕೇತುವಿನ ಬಾಲ ಹಿಡಿದು‛ ಇವೆಲ್ಲ ಮಹಿಳಾ ಲೋಕದ ಜೀವ ಹಿಂಸೆಯನ್ನು ಬೇರೆ ಬೇರೆ ರೀತಿಯಲ್ಲಿ ಚರ್ಚಿಸುತ್ತವೆ. ಹಾಗೇ ಬದುಕಿನ ಒಳಮುಖಗಳ ವಿಮರ್ಶೆಗೆ ಓದುಗನ ಒಡ್ಡುತ್ತವೆ. ಅನುಸಂಧಾನದಲ್ಲಿ ನವದಂಪತಿಗಳ ನಡುವಿನ ಸಮಸ್ಯೆಯನ್ನೆ ಎತ್ತಿ, ಅಲ್ಲೂ ಗಂಭೀರ ಆಗಬಹುದಾದ ದಾಂಪತ್ಯದ ಗೋಜಲುಗಳನ್ನು ತೋರಿಸಿ, ಕಥೆಯನ್ನು ಸುಖಾಂತಗೊಳಿಸಲಾಗಿದೆ. ಕಾರ್ಣಿಕದಲ್ಲಿ ತೊನ್ನು ರೋಗ ಉಂಟುಮಾಡಿದ ಅನಾಹುತ, ಮತ್ತು ಸಂಬಂಧಗಳ ಮೌಲಿಕತೆಯನ್ನೆ ಕೇಂದ್ರವಾಗಿರಿಸಿಕೊಂಡಿದ್ದಾರೆ. ಹಾರಿ ಹೋದ ಧೂಮಕೇತುವಿನ ಬಾಲ ಹಿಡಿದು ಅಪ್ರಾಪ್ತ ಹುಡುಗಿಯೊಬ್ಬಳ ಮೇಲೆ ಸುಶಿಕ್ಷಿತ ಜಗತ್ತು ನಡೆಸುವ ಲೈಂಗಿಕ ಕ್ರೌರ್ಯ, ಹಾಗೂ ಮುಗ್ಧ ಪ್ರೇಮದ ಚಿತ್ರಣವಿದೆ. 


ಇದೆಲ್ಲಕ್ಕೆ ಕೊಂಚ ಭಿನ್ನ ಎನ್ನುವಂತಹ‚ ಸುಲಗ್ನಾ.. ‘ಸಾವಧಾನ ಮತ್ತು‚ ಜಾತ್ರೆ‛ ಕಥೆಗಳು ಪಾಪದ ಪುರುಷರ ಔದಾರ್ಯವನ್ನು ಸದ್ಗುಣಗಳನ್ನು ಓದುಗನ ಮುಂದಿಟ್ಟು, ಪುರುಷರೆಲ್ಲ ದುಷ್ಟರಲ್ಲ ಎಂಬ ಸದಾಶಯವನ್ನು ನಮ್ಮ ಸಂಸ್ಕೃತಿಯ ನೆಲೆಯಲ್ಲಿ ಚಿತ್ರಿಸಲಾಗಿದೆ. ‚ಸುಲಗ್ನಾ ಸಾವಧಾನ‛ದ ಸುಹಾಸಿನಿ, ‘ಜಾತ್ರೆ’ಯ ಕಮಲಿ ಇವೆರಡು ಪಾತ್ರಗಳು ನಮ್ಮ ಸುತ್ತಲೂ ಇರಬಹುದಾದ  ಇನ್ನೊಂದು ಮೂಖದ ಸ್ತ್ರೀ ಪಾತ್ರಗಳಿಗೆ ದೃಷ್ಟಾಂತವಾಗಿ ನಿಲ್ಲುತ್ತವೆ. 
ಸಾಮಾಜಿಕ ಅನಿಷ್ಟಗಳ ಕಡೆಗೆ ತೆರೆದ ಕಣ್ಣಿನ ಸೂಕ್ಷ್ಮ ನಿರೀಕ್ಷಣೆಯ ಮೂಲಕ ಎಚ್ಚರಿಕೆ ನೀಡುವ ಕೆಲಸವನ್ನು ಇಲ್ಲಿಯ ಅನೇಕ ಕಥೆಗಳು ಮಾಡುತ್ತವೆ. ಕಥೆಗೆ ವಸ್ತುವೊಂದನ್ನು ಗೃಹಿಸಿದಾಗ ಅದನ್ನು ಅಕ್ಷರಗಳಲ್ಲಿ ಇಡಿಯಾಗಿ ಹಿಡಿದಿಡುವುದು ಕಥೆಗಾರರನ ಸ್ವಂತಿಕೆ. ತೀರಾ ವಿವರಣೆಯ ರೂಪ ಪಡೆದ ಕಥೆ ಓದುಗನಲ್ಲಿ ಅಸಹಜ ಬೇಸರಿಕೆಯನ್ನು ಹುಟ್ಟಿಸಬಹುದು. ಸಂಭಾಷಣೆ, ಹಾಗೂ ವಿವರಣೆಗಳ ಸಾಮರಸ್ಯ ಕಥೆಯ ಗಟ್ಟಿ ಮೈಕಟ್ಟು. ಕಥಾ ಆಶಯ ಮತ್ತು ಆಕೃತಿಗಳನ್ನು ಗಮನಿಸಿ ಹೇಳುವುದಾರೆ, ಕಥಾ ಆಶಯಗಳು ಬಹು ಮೌಲಿಕವಾಗಿದ್ದು, ಆಕೃತಿಯಲ್ಲಿ ಒಂದೇ ಓಘ, ನಿರೂಪಣಾ ವಿಧಾನ ಕೊಂಚ ಬೇಸರ ಮೂಡಿಸಬಹುದು. ಹಾಗಾಗೇ ಆಧುನಿಕತೆಯ ಚಕ್ರಕ್ಕೆ ಸಿಲುಕಿ, ಬದುಕಿನ ದಾರಿಯಲ್ಲಿ ಹೊಸತನ ತಂದುಕೊಳ್ಳುವ ಪ್ರಯತ್ನಗಳು ಒಂದಾದರೆ, ಅದೇ ಮೂಲ ಆಳಕ್ಕೆ ಬೇರೂರಿ ಬೆಳೆದ ಆಲದ ಮರದ ನೆರಳಿನಲ್ಲಿಯೇ ಅದರ ಬೀಳಲುಗಳಿಗೆ ಜೋತು ಬೀಳುವ ಪ್ರಯತ್ನಗಳು ಇನ್ನೊಂದೆಡೆ. ಕಾರಣ ಸಾಹಿತಿ ಇವೆರಡನ್ನೂ ಮೀರಿ ನಿಲ್ಲಬೇಕು. 
ಇನ್ನು ಸಾಮಾಜಿನ ಶಾಸ್ತ್ರವೂ, ಸಾಹಿತ್ಯವೂ ಬದುಕಿನ ಅಧ್ಯಯನದ ಮೂಲಕವೇ ಹುಟ್ಟಿಕೊಂಡಿರುವುದರಿಂದ, ಬದುಕು ನಿತ್ಯ ಚಲನಶೀಲವಾಗಿರುವುದರಿಂದ, ಸಾಂಸ್ಕøತಿಕ ನೆಲೆಯಲ್ಲಿ, ವೈಯಕ್ತಿಕ ಹಿನ್ನೆಲೆಯಲ್ಲಿ ಕಂಡುಕೊಳ್ಳುವ ಮತ್ತು ನಿರ್ಧರಿಸುವ ಸಂಗತಿಗಳು ಆಯಾ ಪರಿಸರಕ್ಕೆ ಹಾಗೂ ವ್ಯಕ್ತಿಗೆ ಸಂಬಂಧಿಸಿದ್ದು, ಸಾಮಾಜ ಶಾಸ್ತ್ರವೇ ಆಗಲೀ ಸಾಹಿತ್ಯವೇ ಆಗಲಿ ಅದು ನಂತರದ ಸೃಷ್ಟಿಯಷ್ಟೇ. ಹಾಗಾಗಿ ಕಥಾ ಸಂಕಲನದ ಮೊದಲ ಕಥೆಯ ಮೊದಲ ಸಾಲು ಇಡೀ ಸಂಕಲನದ ಸಾರದಂತೆ ಕಂಡು ಬರುತ್ತದೆ. ಅದೇ‚ ನೀವು ಏನೇ ಹೇಳಿ ಪ್ರೊಫೆಸರ್, ಬದುಕನ್ನು ನಮ್ಮ ಯಾವ ಸೋಶಿಯಾಲಾಜಿಕಲ್ ಥಿಯರಿ, ಸೃಜನಶೀಲ ಸಾಹಿತ್ಯದಿಂದಲೂ ಪೂರ್ಣವಾಗಿ ವ್ಯಾಖ್ಯಾನಿಸಲಾಗಿಲ್ಲ ‛ವ್ಯಾಖ್ಯಾನಿಸಬಾರದು.. ವ್ಯಾಖ್ಯಾನಿಸಲು ಸಾಧ್ಯವೂ ಆಗದು, ಎಂಬ ಕಥೆಗಾರರ ಮಾತನ್ನು ಮತ್ತೊಮ್ಮೆ ಉಲ್ಲೇಖಿಸಲೇಬೇಕು.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾಗರೇಖಾ ಗಾಂವಕರ