Article

ಕಾಲವಲ್ಲಿರಲಿಲ್ಲ ದೇಶವಲ್ಲಿರಲಿಲ್ಲ

ತಮ್ಮ ಜೀವನದ ಕೊನೆಯ ಹತ್ತು ವರ್ಷಗಳಲ್ಲಿ ಬರೆದಿರುವ ರಷ್ಯಾದ ಟಾಲ್ಸ್ಟಾಯ್ ಅವರ ವಿಚಾರಧಾರೆಗಳು ಕಾಲ ಖಂಡಗಳ ಮೇರೆ ದಾಟಿ ಈ ಪ್ರಸ್ತುತ ಜನಜೀವನದಲ್ಲಿ ಹಾಸುಹೊಕ್ಕಾಗಿವೆ. ಮನುಷ್ಯನೆಂಬ ಬೀಜವು ಮಾನವನಾಗುವ 'ಬೀಜಮಂತ್ರ'ವನ್ನು ತಮ್ಮ ಚಿರಂತನ ಚಿಂತನಧಾರೆಯ ಮೂಲಕ ಪೊರೆದು ಪೋಷಿಸಿದ್ದಾರೆ. ಮನುಷ್ಯನ ಸಹಜ ಸ್ವಭಾವವನ್ನು ಮತ್ತು ನಕಾರಾತ್ಮಕ ದೃಷ್ಟಿಕೋನವನ್ನು ಯಾವ ಅವಹೇಳನ ಅಥವಾ ನಿಂದನೆ ಇಲ್ಲದೇ ತಮ್ಮ ವಿಭಿನ್ನವಾದ ದರ್ಶನದಿಂದ ಆಧುನಿಕ ಆಧ್ಯಾತ್ಮಕ್ಕೂ ಆಧಾರವನ್ನು ಒದಗಿಸಿದ್ದಾರೆ. ತಮ್ಮ ಮಾನವೀಯ ಮೌಲ್ಯಗಳನ್ನು ದೈನಂದಿನ ಬದುಕಿನುದ್ದಕ್ಕೂ ಬಾಳಿ ಬದುಕಿದ ಮಹಾನುಭಾವ ಲಿಯೋ ಟಾಲ್ ಸ್ಟಾಯ್ ಅವರು. ಅಂತೆಯೇ ಅದಾವ ಮೌಲ್ಯಗಳನ್ನು ಅವರು ಪ್ರತಿಪಾದಿಸಿದ್ದರೋ, ಅವು ಗಾಂಧಿಯವರನ್ನೂ ಪ್ರಭಾವಿಸಿ ಮಹಾತ್ಮನನ್ನಾಗಿಸಿದವು. ತಮ್ಮ ಸಾಹಿತ್ಯ, ಮಿಲಿಟರಿ ಸೇವೆ, ಶೈಕ್ಷಣಿಕ ಪ್ರಯೋಗ, ರೈತರ ಚಳವಳಿ, ಭೂಸುಧಾರಣೆ, ಆಧ್ಯಾತ್ಮ, ಕ್ರಾಂತಿ ಇತರೆ ಕ್ಷೇತ್ರಗಳಲ್ಲಿ ಅವರು ಗಣನೀಯ ಬದಲಾವಣೆ ಮಾಡಿದರು.

ವಿವಿಧ ವಿಷಯಗಳ ಬಗ್ಗೆ ಅವರು ಇಲ್ಲಿ ಚರ್ಚಿಸಿದ್ದಾರೆ...

"ಶಿಕ್ಷಣ ಎಂಬುದು ಬದುಕು ನಮ್ಮ ಮುಂದಿಡುವ ಪ್ರಶ್ನೆಗಳಿಗೆ ನಾವು ಮಾರುತ್ತರ ನೀಡುವ ಒಂದು ಕೌಶಲ್ಯವಾಗಿದೆ".

"ಬದುಕಿನ ಅರ್ಥ ತಿಳಿಯದೇ ನಾವು ಬದುಕು ಮುಂದುವರೆಸುತ್ತಿದ್ದೇವೆ. ಯಾವಾಗ, ಏಕೆ ಮತ್ತು ಹೇಗೆ ಎಂಬ ಗುಟ್ಟನ್ನು ಎಂದೂ ಬಿಟ್ಟುಕೊಡದ ಈ ಬದುಕು ಹುಟ್ಟಿಸುವಷ್ಟು ದಿಗಿಲನ್ನು ಸಾವೂ ಹುಟ್ಟಿಸಲಾರದು‌".

"ಬದುಕನ್ನು ರೂಪಿಸಿಕೊಳ್ಳಲು ಅಗತ್ಯವಿರುವ ಚೈತನ್ಯವನ್ನು ನೀಡುವುದೇ ಕಲೆ".

"ನಿಮಗೇನಾದರೂ ಕಷ್ಟಗಳು ಒದಗಿಬಂದರೆ, ಅದಕ್ಕೆ ನಿಮ್ಮೊಳಗಿನಿಂದಲೇ ಸಮಾಧಾನವನ್ನು ಕಂಡುಕೊಳ್ಳಿ. ಅದನ್ನು ಬಿಟ್ಟು, ಪರಿಹಾರವನ್ನು ಹುಡುಕಿಕೊಂಡು ಪುಸ್ತಕಗಳ ಮೊರೆ ಹೋಗುವುದಾಗಲಿ, ಜನರನ್ನು ಹಿಂಬಾಲಿಸುವುದಾಗಲಿ, ದೇವಾಲಯಗಳಿಗೆ ಅಲೆಯುವುದನ್ನಾಗಲಿ ಮಾಡಬೇಡಿ. ನಿಮ್ಮೊಳಗಿರುವ ದೇವರು ಮಾತ್ರ ನಿಮಗೆ ಸಹಾಯ ಮಾಡುತ್ತಾನಷ್ಟೆ".

"ನಾವು ನಮ್ಮ ಅಂತಃಸಾಕ್ಷಿಗೆ ತಕ್ಕಂತೆ ಬದುಕದೆ ಅರ್ಥಹೀನ ನಿಯಮಗಳು, ಅಭ್ಯಾಸಗಳು ಮತ್ತು ಇತರರ ಅಭಿಪ್ರಾಯ ಸಂಪ್ರದಾಯಗಳಿಗೆ ತಕ್ಕಂತೆ ಬದುಕಿದೆವು ಎನ್ನುವುದು ನಾಚಿಕೆಗೇಡಿನ ಸಂಗತಿ".

"ಸತ್ಯವನ್ನು ಗೆಲ್ಲಿಸುವುದಕ್ಕಿಂತ ಮತ್ತು ಸುಳ್ಳನ್ನು ಸೋಲಿಸುವುದಕ್ಕಿಂತ ಉತ್ತಮ ಸಂಗತಿ ಇನ್ನೊಂದಿಲ್ಲ".

"ಮನುಷ್ಯ ತನ್ನಷ್ಟಕ್ಕೆ ತಾನು ಪ್ರಾಮಾಣಿಕನಾಗಿದ್ದರೆ ತೃಪ್ತಿ ಸಾಧ್ಯವಿಲ್ಲ. ಬದಲಿಗೆ, ಅವನು ಇತರರೊಂದಿಗೆ ಒಂದಾಗಬೇಕು ಮತ್ತು ಜೀವನವಿಡೀ ಈ ತತ್ವವನ್ನು ನಡೆಸಬೇಕು. ಇದು ಮಾತ್ರ ಆಧ್ಯಾತ್ಮಿಕ ವಿಕಸನವನ್ನು ತರುತ್ತದೆ".

"ಕೆಲಸವಿಲ್ಲದ ಜೀವನ ಒಂದು ಶಾಪ. ತಿನ್ನುವುದು ಹೇಗೆ ಮುಖ್ಯವೋ ಹಾಗೆಯೇ ಕೆಲಸವೂ ಮುಖ್ಯ".

"ನಾನು ಇದನ್ನು ಮಾಡುತ್ತೇನೆ" ಎಂದುಕೊಳ್ಳುವುದು ದಿವ್ಯವಾದ ವರಗಳನ್ನೂ ಭಗವಂತನ ಆಶೀರ್ವಾದವನ್ನೂ ಹೊತ್ತು ತರುತ್ತದೆ".

"ಕೆಡುಕೆಂಬುದು ಒಂದು ಹಾಳು ಹೊಲಕ್ಕೆ ಸಮ. ಈ ಹೊಲವನ್ನು ಒಳ್ಳೆಯತನವೆಂಬ ನೇಗಿಲಿನಿಂದ ಉಳುಮೆ ಮಾಡಬೇಕು. ಸಕಾರಾತ್ಮಕತೆಯೆಂಬ ಅಗ್ನಿಗೆ ಸಿಲುಕಿ ಅಲ್ಲಿರುವ ಪೊದೆಗಳು, ಕಳೆಗಿಡಗಳೆಲ್ಲ ಸುಟ್ಟುಹೋಗಬೇಕು. ಕೊನೆಗೆ ಸಾತ್ತ್ವಿಕತೆಯ ಬಲದಿಂದ ಉದ್ಧಾರದ ದೀಪ ಬೆಳಗಬೇಕು. ಕೆಡುಕಿನ ಒಂದು ಲೋಕ ನಿಮ್ಮೊಳಗೇ ಇದೆ. ಜೊತೆಗೆ ನಿಮ್ಮ ನಡೆನುಡಿಗಳೂ ದೋಷಯುಕ್ತವಾಗಿವೆ. ಇವುಗಳಿಗೆ ಹೋಲಿಸಿದರೆ ನಿಮಗೆ ಬರುವ ಸಂಕಷ್ಟ ಮತ್ತು ದುರದೃಷ್ಟಗಳು ಏನೇನೂ ಅಲ್ಲ.

ದುರದೃಷ್ಟಕ್ಕಿಂತ ಅದರ ಬಗ್ಗೆ ಇರುವ ಹೆದರಿಕೆಯೇ ತುಂಬಾ ಕೆಟ್ಟದ್ದು".

"ಬದುಕೆಂದರೇನೆಂದು ಸರಿಯಾಗಿ ಅರ್ಥ ಮಾಡಿಕೊಳ್ಳದವರು ಸಾವನ್ನು ಖಂಡಿತವಾಗಿಯೂ ಅರಿಯಲಾರರು. ಸಾವಿನೆಡೆಗೆ ಹೋಗುತ್ತಿರುವ ಮನುಷ್ಯನಲ್ಲಿರುವ ಆಂತರ್ಯದ ಬೆಳಕು ಸುತ್ತಮುತ್ತಲಿನದರ ಮೇಲೆಲ್ಲ ಹೊಳೆಯುತ್ತದೆ; ಬಳಿಕ ಒಂದು ಶಬ್ದವನ್ನು ಹೊರಡಿಸುತ್ತದೆ; ಮರುಕ್ಷಣದಲ್ಲಿ ಕಣ್ಣಿಗೆ ಕಾಣದಂತಾಗುತ್ತದೆ. ಬದುಕಿರುವಾಗ ಮನುಷ್ಯನು ಈ ಬೆಳಕಿನಿಂದಲೇ ಚಿಂತನೆಗಳು, ಸುಳ್ಳುಗಳು, ತಾಪತ್ರಯಗಳು ಮತ್ತು ಕೇಡಿನಿಂದ ತುಂಬಿರುವ ತನ್ನ ಜೀವನವನ್ನು ನಡೆಸಿರುತ್ತಾನೆ". ಹೀಗೆ ಕಾಲಾತೀತ ಸತ್ಯದರ್ಶನವನ್ನು ತಮ್ಮ ಆಧ್ಯಾತ್ಮಿಕ ಅನುಭಾವದ ಮೂಲಕ ಸಾಹಿತ್ಯದ ಪರಿಧಿಯಲ್ಲಿ ಪರಿಣಾಮಕಾರಿಯಾಗಿ ಟಾಲ್ ಸ್ಟಾಯ್ ಅವರು ಕೃತಿಗಿಳಿಸಿದ್ದಾರೆ.

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾಗರಾಜ ಷಣ್ಮುಖಪ್ಪ ರಂಗನ್ನವರ