Article

ಉತ್ತರ ಕರ್ನಾಟಕದ ಗ್ರಾಮೀಣ ಊಟದ ರುಚಿಯನ್ನು ಕಟ್ಟಿಕೊಡುವ ರೊಟ್ಟಿ ಮುಟಗಿ

ರೊಟ್ಟಿ ಮುಟಗಿ ಎಂಬ ಉತ್ತರ ಕರ್ನಾಟಕದ ಗ್ರಾಮೀಣ ಊಟದ ಮತ್ತು ದೈನಂದಿನ ಜೀವನದ ಅವಿಭಾಜ್ಯ ರಸವಿಷಯವನ್ನು ಟಿ.ಎಸ್.ಗೊರವರ ಅವರು ಸಾಹಿತ್ಯದ ರುಚಿಯಲ್ಲಿ ಬೆರೆಸಿ, ಪುಸ್ತಕದ ತಾ(ಪ್ಲೇ)ಟಿನಲ್ಲಿ ಉಣಬಡಿಸಿದ್ದಾರೆ. ಬಹುತೇಕ ಉತ್ತರ ಕರ್ನಾಟಕದ ಜನಜೀವನದ ಕತೆಗಳೂ ಸಹ ಒಂದು ಗ್ರಾಂಥಿಕ ಭಾಷೆಯಲ್ಲಿ ಬರೆಯಲ್ಪಟ್ಟಿರುತ್ತವೆ. ಆದರೆ ಗೊರವರ ಅವರು ಇಲ್ಲಿ ಇಂತಹ ಯಾವುದೇ 'ಬಿಡೆ'ಗಳಿಗೆ ಬೀಳದಯೇ ನಿಸ್ಸಂಕೋಚವಾಗಿ ಗ್ರಾಮೀಣ ಭಾಷೆಯನ್ನು ಖಡಕ್ ಆಗಿಯೇ ಬಳಸಿದ್ದಾರೆ.

ಅದರಲ್ಲೂ ಈ ಕಿರು ಹೊತ್ತಿಗೆಯಲ್ಲಿ ಹಿರಿಯರಾದ ಮುದುಕಿಯರು ಆಡುವ ಭಾಷೆಯನ್ನೂ ಸಹ ಅವರಷ್ಟೇ ಪಕ್ವವಾಗಿ ಬಳಸಿಕೊಂಡಿದ್ದಾರೆ. ಇಲ್ಲಿನ ಹಳ್ಳಿಗಳಲ್ಲಿ ನಡೆಯುವ ಸಾಮಾನ್ಯವಾದ ಒಂದು ಕಥೆಯನ್ನು, ಯಾವುದೇ ಜಾತಿ-ಧರ್ಮಗಳ ಗೊಡವೆಗಳಿಗೆ ಹೋಗದೆ, ಗೌಡರವ-ಬಡವರ ಆರ್ಥಿಕ ತುಳಿವ ತುಳಿಸಿಕೊಳ್ಳುವಂತಹ ಯಾವ ಎಡಬಲ ಕಥೆಗೆ ಸೇರಿಸದೆಯೇ ನೇರವಾಗಿ ಸರಳವಾಗಿ ಚಿತ್ರಿಸಿದ್ದಾರೆ.

"ಸತ್ತ ಹಾವನ್ನೇ ಜೀವಂತವಿದೆ ಎಂದು ಭ್ರಮಿಸಿ ಮತ್ತೆ ಮತ್ತೆ ಬಡಿದಂತಲ್ಲ ಸೃಜನಶೀಲ ಕ್ರೀಯೆ. ಅವನು ಮತ್ತೊಂದು ಬಗೆಯ ಸಾಹಸದ ಹಾದಿ ಕಂಡುಕೊಳ್ಳಲು ಉತ್ಸುಕನಾಗಲೇಬೇಕು. " ಎಂದು ಹೇಳುವ ಗೊರವರ ಅವರು, ಇಲ್ಲಿ ದ್ಯಾಮನೆಂಬ ಹಳ್ಳಿಗನ ಜೀವ-ಜೀವನವನ್ನು ರೊಟ್ಟಿ ಮುಟಗಿಯಷ್ಟೇ ಜನಸಾಮಾನ್ಯರ ಸ್ತರದಲ್ಲಿ , ಇನ್ನಾವುದೇ ರೀತಿಯ ಹಳ್ಳಿಯ ಹಪಾಹಪಿಯನ್ನು ಸೇರಿಸದೆಯೇ ಸೀದಾ ಸಾದಾ ರೀತಿಯಲ್ಲಿ ಸಾದರಪಡಿದ್ದಾರೆ. ಇಲ್ಲಿ ಈ ಕಥೆಯು ಬರೀ ದ್ಯಾಮನೆಂಬ ಹಳ್ಳಿ ಹುಂಬನ ಧ್ಯಾನವಾಗದೇ, ಹಳ್ಳಿಯಲ್ಲಿ ಹುಟ್ಟಿ ಬೆಳೆದ ನಮ್ಮಂತಹವರ ಬಾಲ್ಯವನ್ನೂ ಪ್ರತಿನಿಧಿಸುತ್ತದೆ.

ಕಥೆಯಲ್ಲಿ ದಿನವೂ ಮಧ್ಯಾಹ್ನ ಬರುವ ಬರ್ಪು ಮಾರುವವರು, ಒಂದು ಬರ್ಪಿಗೆ ನಾಲ್ಜಾಣೆ ಇಲ್ಲಾ ಒಡೆದ ಪ್ಲಾಸ್ಟಿಕ್ ಕೊಡ, ಕಬ್ಬಿಣ ಕೊಟ್ಟು ಕೊಳ್ಳುವ ವ್ಯಾಪಾರದ ಮೂಲಕವೇ ಪ್ರತಿಯೊಬ್ಬ ಹಳ್ಳಿಗ ವ್ಯವಹಾರಿಕ ಪ್ರಪಂಚಕ್ಕೆ ಕಾಲಿಡುತ್ತಾನೆ. ಅಲ್ಲದೇ ನಮ್ಮ ತಾಯಂದಿರೆಲ್ಲಾ ರೊಟ್ಟಿ ಮಾಡುವುದು ಮುಗಿದಾಗ ಕೊನೆಗೊಂದು ದಪ್ಪ ರೊಟ್ಟಿ ಮಾಡಿ, ತಮ್ಮ ಪಾಕಕೌಶಲ್ಯದಿಂದ ಅದನ್ನು ಮುಟಗಿ ಮಾಡಿ ತಿನಿಸುತ್ತಿದ್ದ ಸಂಗತಿಯು ಸಾರ್ವತ್ರಿಕ ಗ್ರಾಮೀಣ ಬಾಲ್ಯದ ಅಲ್ಲಗಳೆಯಲಾಗದ ನೋಟವಾಗಿದೆ.

ದನ ಮೇಯಿಸಲು ಹೋಗುವುದು, ಅಲ್ಲಿ ಬೋರಂಗಿ, ಪಾತರಗಿತ್ತಿಗಳಂತಹ ಕೀಟಗಳನು ಹಿಡಿದು ಕೀಟಲೇ ಮಾಡುವುದು; ಏಡಿ, ಜೇನು ಮೀನು ವ ಮೊಲ ಮುಂತಾದವುಗಳನ್ನು ಹಿಡಿದು ಮಾಂಸಾಹಾರಿಗಳಾಗುವುದೇ ಇರಬಹುದು, ಆ ಬಾಲ್ಯದ ಜೀವನದ ಜೀವಂತಿಕೆ ಕತೆಯಲ್ಲಿ ಸಚೇತನಗೊಂಡಿದೆ. ಮುದುಕಿಯರು ಹುಡುಗರಿಗೆ ಮತ್ತು ಅದಕ್ಕೆ ಪ್ರತಿಯಾಗಿ ಹುಡುಗರೂ ಮುದುಕಿಯರಿಗೆ 'ಆಸ್ಯಾಡು'ವುದನ್ನೂ ಇಂದಿಗೂ ಚಿರಂತನ ವಾಸ್ತವವಾಗಿ ಮೂಡಿಬಂದಿದೆ ಕತೆಯಲ್ಲಿ.

ಗೊರವರ ಅವರ ಬಹುಪಾಲು ಕತೆಗಳು ಗತಿಸಿಹೋದ ನಮ್ಮ ಬಾಲ್ಯದ ಜೀವನದ ಸಾರ್ವತ್ರಿಕ ಜೀವನಚರಿತೆಯಾಗಿವೆ. ಇಂತಹ ತಮ್ಮ ಕತೆಗಳ ಮೂಲಕವೇ ಅವರು ತಮ್ಮದೇ ಆದ ಓದುಗರ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಹಳ್ಳಿಗೆ ಬರುವ ಬಸ್ಸಿಗಾಗಿ ಕಾಯುವ ಜನರಂತೆ ಆ ಓದುಗರ ನಿರೀಕ್ಷೆಯಂತೆಯೆ ತಮ್ಮ ಕಥಾಬಸ್ಸಿನಲ್ಲಿ ಕೊಂಡೊಯ್ಯುತ್ತಾರೆ. ಬರ್ಗರ್ ಫಿಜ್ಜಾಗಳ ಈ ಕಾಲದಲ್ಲೂ ರೊಟ್ಟಿ ಮುಟಗಿಯು ಓದುಗರ ಮನೆ-ಮನಕ್ಕೂ ಲಗ್ಗೆ ಇಡುತ್ತದೆ. ಗೊರವರ ಅವರು ಎಂದಿಗೂ ಜನಸಾಮಾನ್ಯರ ಬದುಕು ಬವಣೆಯನ್ನು ಹೀಗೆ ಬರಹದಲ್ಲಿ ವ್ಯಕ್ತಪಡಿಸುತ್ತಲೇ ಇರಲಿ ಮತ್ತು ಅವರ ನಿರೀಕ್ಷೆಗಳೂ ಸಾಕಾರಗೊಳ್ಳಲಿ ಎಂದು ಹಾರೈಸೋಣ.

ನಾಗರಾಜ ಷಣ್ಮುಖಪ್ಪ ರಂಗನ್ನವರ