Article

ವಸಾಹತೋತ್ತರ ಬದುಕಿನ ಬಿಕ್ಕಟ್ಟುಗಳ ಕಥನ          

ಜಾಗತೀಕರಣದ ನಂತರ ಭಾರತ ಅಗಾಧ ಬದಲಾವಣೆಗೆ ಒಳಗಾಗಿದೆ. ಮನುಷ್ಯನಿಗೆ ಅಗತ್ಯವಿರುವ ಎಲ್ಲಾ ಕ್ಷೇತ್ರಗಳು ಸೇವಾ ಮನೋಭಾವವನ್ನು ಕಳೆದುಕೊಂಡು ಉದ್ಯಮವಾಗಿ ಮಾರ್ಪಡುತ್ತಿವೆ. ಭೋಗವೊಂದೆ ಜೀವನ ಮೌಲ್ಯ ಎಂಬ ಭ್ರಮೆಯನ್ನು ಸೃಷ್ಟಿಸುತ್ತಿವೆ. ಈ ಭ್ರಮೆಯಲ್ಲಿ ದೇಹವೊಂದೆ ಮುಖ್ಯವಾಗಿ ಅಂತಃಕರಣದ ಮನುಷ್ಯತ್ವ ಮಾಯವಾಗುತ್ತಿದೆ. ಮನುಷ್ಯ ಸಂಬಂಧಗಳಲ್ಲಿ ದೇಹದ ದಾಹ ಬೆಳೆಯುತ್ತಿದೆ. `ನಿಜ ಮನುಷ್ಯತ್ವ’ ಕಳೆದು ಹೋಗುತ್ತಿದೆ. ಈ ಸ್ಥಿತ್ಯಂತರದಲ್ಲಿ ಪಲ್ಲಟಗೊಳ್ಳುತ್ತಿರುವ ಬದುಕಿನ ವಿನ್ಯಾಸವನ್ನು ಸತೀಶ್ ಚಪ್ಪರಿಕೆಯವರ ವರ್ಜಿನ್ ಮೊಹಿತೊ ಕಥಾ ಸಂಕಲನ ಶೋಧಿಸುತ್ತದೆ. ನೈತಿಕ ಮಾನವೀಯತೆಯ ಎಳೆಗಳನ್ನು ಈ ಸಂಕಲನ ಕಟ್ಟಿಕೊಡುತ್ತದೆ. ಬದುಕು ಎಷ್ಟೇ ದುರ್ಬರ ಸ್ಥಿತಿಗೆ ಒಳಗಾದರೂ ಕರುಣೆಯ ಜಗತ್ತೊಂದು ಕೈ ಹಿಡಿಯುತ್ತದೆಂಬ ನಿಲುವು ಈ ಸಂಕಲನದ ಎಂಟು ಕತೆಗಳಲ್ಲಿದೆ.

ಪತ್ರಿಕೆಗಾಗಿ ಅಂಕಣಗಳನ್ನು ಬರೆದ ಪತ್ರಕರ್ತನ ಮನೋಭಾವ ಕತೆ ಕಟ್ಟುವಾಗ ಕರಗಿ ಹೋಗುವುದು ಮುಖ್ಯ. ಸತೀಶ್ ಚಪ್ಪರಿಕೆಯವರು ಸುದೀರ್ಘ ಕಾಲದ ಮೇಲೆ ಈ ಸಂಕಲನವನ್ನು ತರುತ್ತಿರುವದಕ್ಕೆ ಕರಗುವ ಕಷ್ಟವನ್ನು ಎದುರಿಸಿರಬೇಕು ಅನಿಸುತ್ತದೆ. ಲಂಕೇಶ್ ಅವರು ಈ ತೊಡಕನ್ನು ಬಿಡಿಸಿಕೊಂಡು ತಮ್ಮ ಸೃಜನಶೀಲತೆಯ ಒರತೆಯನ್ನು ಬತ್ತದಂತೆ ನೋಡಿಕೊಂಡಿದ್ದರು. ಈ ರೀತಿಯ ಮನಸ್ಸಿನ ಅನೇಕ ಲೇಖಕರ ದೊಡ್ಡ ಪರಂಪರೆಯೆ ಕನ್ನಡದಲ್ಲಿದೆ. ಚಪ್ಪರಿಕೆಯವರ ಅಂಕಣ ಬರಹಗಳು ಯಾಂತ್ರಿಕ ಪತ್ರಿಕಾ ಬರಹಗಳಾಗಿರದೆ ಸೂಕ್ಷ್ಮ ಸಂವೇದನೆಯ ನಿರೂಪಣೆಗಳೇ ಆಗಿದ್ದವು.

ಅವರ `ಮತ್ತೊಂದು ಮೌನ ಕಣಿವೆ’  `ದೇವಕಾರು’, `ಮುಸ್ಸಾಫಿರ್’ ಅಂಕಣ ಬರಹಗಳ ಸಂಕಲನಗಳು ಕತೆಗಾರಿಕೆಯ ನೆಯ್ಗೆಯನ್ನೇ ಹೊಂದಿದ್ದನ್ನು ಗಮನಿಸಬಹುದು. ಈ ಬರಹಗಳಲ್ಲಿ ಚಪ್ಪರಿಕೆಯವರ ಕತೆಗಾರನ ಒಳಮನಸ್ಸು ಮಿಡಿಯುವದನ್ನು ಕಾಣಬಹುದು. ಯಾರು ವ್ಯವಸ್ಥೆಯ ವಿರುದ್ದ ಚೀರಾಡದೆ ತಮ್ಮ ಕಾರ್ಯಗಳ ಮೂಲಕ ಆಂದೋಲನ ಮಾಡಿದ್ದಾರೋ ಅವರ ಕಡೆ ಅವರ ಒಲವಿದೆ. ಅವರಿಗೆ ಸಾತ್ವಿಕ ಆಕ್ರೋಶಕ್ಕಿಂತ ಪರ್ಯಾಯವನ್ನು ಕತೃತ್ವವಾಗಿ ಸಮಾಜದಲ್ಲಿ ಬಿತ್ತುವ ಅರಿವಿನ ಸರಳತೆ ಮುಖ್ಯ. ವ್ಯವಸ್ಥೆಯ ದಾರುಣತೆಯನ್ನು ಹೇಳುತ್ತಲೇ ಅದನ್ನು ಸರಿ ಮಾಡುವ ವಿಧಾನವನ್ನು ಶೋಧಿಸುವುದು ಅವರ ಬರಹಗಳ ವಿಶೇಷತೆ. ತಮ್ಮ ಕಾರ್ಯಗಳ ಮೂಲಕ ಎಲ್ಲೋ ಹರಿಯುವ ಜ್ಞಾನದ ಝರಿಗಳನ್ನು ದೊಡ್ಡ ಪ್ರವಾಹವಾಗಿಸುವ ಇಚ್ಚಾಶಕ್ತಿಯು ಆ ಬರಹಗಳಿಗಿದೆ. ಸೂರ್ಯನ ಪ್ರಖರತೆಗಿಂತ ಬೆಳದಿಂಗಳ ನೋಟ, ಹನಿಯುವ ಮಳೆಯ ಸಾವಧಾನವೆ ಅವರಿಗೆ ಇಷ್ಟ. ಅವರ ಅಂಕಣ ಬರಹಗಳಲ್ಲಿ ಈ ಅರಿವಿನ ಹಾದಿಗಳಿರುವದನ್ನು ಈ ಕತೆಗಳ ಓದಿಗೆ ಪೂರಕವಾಗಿ ಗಮನಿಸಬೇಕು. ಅವರ ಪ್ರತಿ ಕತೆಯಲ್ಲಿ ದಿಕ್ಕೆಟ್ಟ ಬದುಕಿಗೆ ಸೋಲದೆ ಪರ್ಯಾಯ ದಾರಿಗಳನ್ನು ಹುಡಿಕಿಕೊಂಡು ಘನತೆಯಿಂದ ಬದುಕನ್ನು ಕಟ್ಟಿಕೊಳ್ಳುವ ಪಾತ್ರಗಳನ್ನು ಕಾಣುತ್ತೇವೆ. ಕಾರಣ, ಅವರೊಳಗಿರುವ ಕಥನಗಾರಿಕೆಯನ್ನು ಪ್ರತಿ ಕ್ಷಣವೂ  ಜಾಗೃತವಾಗಿಟ್ಟಿರುವುದು.

ಈ ಅಂಶಗಳ ನೆಲೆಯಲ್ಲಿ ಅವರ ಕಥೆಗಳನ್ನು ನೋಡಬೇಕು. ಈ ಸಂಕಲನದಲ್ಲಿರುವ ಏಳು ಕಥೆಗಳು ವ್ಯವಸ್ಥೆಯ ನಿಷ್ಕರಣೆಯನ್ನು ಧ್ವನಿಸುತ್ತವೆ. ಅದನ್ನು ತುಂಬಿಕೊಳ್ಳುವ ಬದುಕಿನ ವಿಧಾನವನ್ನು ಶೋಧಿಸುತ್ತವೆ. ’ಬೊಂಬಾಯಿ ಪೆಟ್ಟಿಗ’ ಕತೆಯ ಸದಾನಂದ ಸುದ್ದಿಮನೆಯ ಕೊಳಕನ್ನು ಮನಗಾಣಿಸುತ್ತಲೇ ಅದರಿಂದ ಬಿಡುಗಡೆಯಾಗುವ ದಾರಿಯನ್ನು ಹುಡುಕುತ್ತಾನೆ. ಅವನು ಸ್ವಯಂ ವ್ಯಸನಿಯಾಗದೆ ಕೃಷಿಯೆಡೆಗೆ ಮರಳುವುದು ಮುಖ್ಯವಾದ ನಿಲುವು.

’ಹೈಡ್ ಪಾರ್ಕ್’ ವಂದನಾ ಸಹಜ ಪ್ರೀತಿ, ಕಾಮಕ್ಕೆ ಹಾತೊರೆಯುವವಳು. ಪ್ರೀತಿ ಕಾಮವನ್ನು ಬೆರಿಸಿ ಬದುಕನ್ನು ಅನುಭವಿಸುವ ಮನಸ್ಸಿನವಳು. ಅರವಿಂದನಿಂದ ಅದು ಸಾಧ್ಯವಿಲ್ಲದಾಗ ವಿಚ್ಚೇದನಗೊಂಡು ತನ್ನ ಕಲ್ಪನೆಯಲ್ಲಿಯೆ ಬದುಕುವ ನಿರ್ಧಾರಕ್ಕೆ ಬರುತ್ತಾಳೆ. ಮಗನಲ್ಲಿಯೆ ತನ್ನೆಲ್ಲಾ ಆಕಾಂಕ್ಷೆಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಅವನ ಸ್ವಾತಂತ್ರಕ್ಕೆ ಯಾವ ಅಡ್ಡಿಯನ್ನು ಮಾಡದೆ ನಿರ್ಮಲ ಪ್ರೀತಿಯನ್ನು ಆರಾಧಿಸುತ್ತಾಳೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ದೈಹಿಕ ಸಂಬಂಧಗಳಿಗೆ ಅರ್ಥವೆ ಇಲ್ಲ. ಪ್ರೀತಿ ಕಾಮಕ್ಕೆ ದೇಹವೊಂದು ಸಾಧನವೆಂಬ ನಂಬಿಕೆಯನ್ನು ಒಪ್ಪಿಕೊಂಡು ಅದರಲ್ಲಿಯೆ ಸಹಜತೆಯನ್ನು ಹುಡುಕುವುದು ಕತೆಯ ಜೀವಾಳವಾಗಿದೆ. ಮನುಷ್ಯನಿಗೆ ಬೇಕಿರುವುದು ತಾಯಿಯಂತ ಪ್ರೀತಿ ಬೆರೆತ ಕಾಮ. ಈ ಕಾಲ ಘಟ್ಟದಲ್ಲಿ ಭೋಗವೆ ಕಾಮ ಎಂಬ ಸ್ಥಿತಿಗೆ ಬಂದಾಗಿದೆ. ಈ ಸ್ಥಿತಿಯನ್ನು ಕತೆ ಒಡೆಯುತ್ತದೆ. ಬದುಕಿನ ನಿಜ ಸೌಂದರ್ಯವನ್ನು ಕತೆ ದರ್ಶಿಸುತ್ತದೆ.

ಈ ಸಂಕಲನದಲ್ಲಿ ವಿಭಿನ್ನವಾದ ಕತೆ ’ದಾಸ.’ ನಿರೂಪಕ ದಾಸ ಎಂಬ ನಾಯಿ ಕತೆಯನ್ನು ಹೇಳುತ್ತಲೇ ತನ್ನ ವೈಯಕ್ತಿಕ ಬದುಕಿನ್ನು ತೆರೆದಿಡುತ್ತಾ ಹೋಗುತ್ತಾನೆ. ಈ ಕತೆಯ ಭಾಷೆ ಕುಂದಾಪುರ ಪ್ರಾದೇಶಿಕ ಬನಿಯನ್ನು ಹೊಂದಿದೆ. ಆ ಭಾಗದ ರಾಜಕಾರಣ, ವ್ಯವಹಾರ, ಪ್ರತಿಷ್ಠೆ, ಅಧಿಕಾರ, ಉದ್ಯಮ, ರೌಡಿಸಂ, ಸಂಬಂಧಗಳ ವಾಸ್ತವವನ್ನು ಕತೆ ಬಿಚ್ಚಿಡುತ್ತದೆ. ಒಂದಡೆ ನಾಯಿಯ ಜೊತೆ ಉತ್ಕಟ ಮಾನವೀಯ ಸಂಬಂಧ, ಇನ್ನೊಂದೆಡೆ ಮನುಷ್ಯತ್ವವನ್ನೇ ಹೊಸಕಿ ಹಾಕುವ ದಾಹ ನಿರೂಪಕನ ಮೂಲಕ ಅನಾವರಣಗೊಳ್ಳುವುದು ಕತೆಯ ವಿಶೇಷ. ನಿರೂಪಕನ ನಾಯಿಯೊಂದಿಗಿನ ಸಂಬಂಧ, ಅದರ ಸಾವು ಕರುಳು ಕರಗುವಂತೆ ಚಿತ್ರಣಗೊಂಡಿದೆ.

’ಗರ್ಭ’ ಕತೆ ತೀವ್ರವಾದ ಮನುಷ್ಯ ಸಂಬಂಧಗಳ ಭಾವನೆಗಳನ್ನು ಹಿಡಿದಿಡುವ ಪ್ರಯತ್ನ ಮಾಡುತ್ತದೆ. ನಿರೂಪಕ ತನ್ನ ತಾಯಿಗಾದ ಕ್ಯಾನ್ಸರ್ ವಿಷಯ ಕೇಳಿ ಕುಸಿದು ಹೋದರೂ ಅದನ್ನು ಎದುರಿಸುವ ಆತ್ಮಸ್ಥೈರ್ಯವನ್ನು  ಅದೇ ವಾತವರಣದಿಂದ ಪಡೆಯಲು ಸನ್ನದ್ದನಾಗುತ್ತಾನೆ. ಇದು ಎಲ್ಲಿಯೂ ಕೃತಕವೆನಿಸದೆ ಸಹಜ ಆತಂಕವನ್ನು ಬಿಂಬಿಸುತ್ತದೆ. ತಾಯಿಯ ಗರ್ಭದಿಂದ ಬಂದವ ಅದಕ್ಕಾದ ಗಾಯವನ್ನು ಕಾಣುವ ವ್ಯಾಕುಲತೆ ಕತೆಯಲ್ಲಿ ಸಜೀವವಾಗಿ ಬಂದಿದೆ. ಇದೆಲ್ಲಾ ಆಧುನಿಕ ಜೀವನದ ಒತ್ತಡದ ಪರಿಣಾಮವನ್ನು ಕತೆ ಧ್ವನಿಸುತ್ತದೆ.

’ಮೂರು ಮುಖಗಳು’ ಕತೆ ಕಾರ್ಪರೋಟ್ ಜಗತ್ತಿನ ಕ್ರೌರ್ಯವನ್ನು ಅನಾವರಣಗೊಳಿಸುತ್ತದೆ. ಮೂವರು ಸ್ನೇಹಿತರು ತಮ್ಮ ತಮ್ಮ ಕತೆಯನ್ನು ಹೇಳಿಕೊಳ್ಳುವ ತಂತ್ರ ಕತೆಯಲ್ಲಿದೆ. ಲೈಂಗಿಕತೆಯ ವಾಚ್ಯವನ್ನು ಅನ್ಯಾಯದ ನೆಲೆಯಲ್ಲಿ ಕತೆ ಶೋಧಿಸುತ್ತದೆ. ಲೈಂಗಿಕತೆ ಗಂಡು ಹೆಣ್ಣು ಸಬಂಧಗಳನ್ನು ಮೀರಿ ಬೆಳೆಯುತ್ತದೆ. ಪುರುಷ, ಸ್ತ್ರೀ ಭೇದವಿಲ್ಲದೆ ಇದರ ಶೋಷಣೆ ವಿರಾಟ್ ರೂಪ ಪಡೆಯುತ್ತದೆ. ಅದಕ್ಕೆ ಕಾರ್ಪೋರೇಟ್ ಜಗತ್ತು ಪೂರಕವಾಗಿದೆ. ಮೂವರು ಲೈಂಗಿಕ ಶೋಷಣೆಗೆ ಒಳಗಾದವರು. ಇಲ್ಲಿ ದೇಹವನ್ನು ಯಂತ್ರದಂತೆ ಕಾಣುವ ಮನೋಭೂಮಿಕೆಯಿದೆ. ಇದನ್ನು ಮೀರಿದ ಸ್ನೇಹಮಯ ಜೀವನ ಮನು, ವಿಶು, ಗ್ರೇಸಿಯಲ್ಲಿ ಕಾಣುತ್ತೇವೆ. ಬದುಕಿಗೆ ಬೇಕಿರುವುದು ಪರಸ್ಪರ ಸಾಂತ್ವಾನ ಬೆರೆತ ಸ್ನೇಹ. ಇಂದಿನ ಬದುಕಿನ ಜಂಜಡದಲ್ಲಿ ಈ ಸಂಬಂಧಗಳು ಕಳೆದು ಹೋಗುತ್ತಿವೆ ಎಂಬ ವಿಷಾದ ಕತೆಯಲ್ಲಿ ಕಾಣುತ್ತೇವೆ.

’ಕಾಣದ ಕೈಗಳ ಆಟ’ ವಿಭಿನ್ನವಾದ ಕತೆ. ಮನುಷ್ಯತ್ವದ ಅತ್ಯುನ್ನತಿಯನ್ನು ಶೋಧಿಸುವ ಕತೆ. ಹಣದ ಬೆನ್ನತ್ತಿದ ಮನುಷ್ಯನಿಗೆ ಉಪಯೋಗವಾದಿ ನೆಲೆಯಲ್ಲಿ ಸಂಬಂಧಗಳನ್ನು ನೋಡುತ್ತಿದ್ದಾನೆ. ಅಪಾರ ಆಸ್ತಿ ಹೊಂದಿದ ಕಿಣಿ ಹೃದಯ ಕಾಯಿಲೆಯಿಂದ ಆಸ್ಪತ್ರೆ ಸೇರುತ್ತಾನೆ. ಆಗ ಅಳಿಯ ವರದೇಶನ ಅಮಾನುಷತೆ ಕಾಣುತ್ತದೆ. ಮಾವನಿಗೆ ಚಿಕಿತ್ಸೆ ಕೊಡುವುದು ಸುಮ್ಮನೆ ಹಣ ಹಾಳು ಎಂಬುದನ್ನು ಯೋಚಿಸುತ್ತಾನೆ. ಮಡದಿ ಶ್ಯಾಮಲಾ ಇದನ್ನು ಪ್ರತಿಭಟಿಸಿ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡುತ್ತಾಳೆ. ತನ್ನ ಬದುಕಿನಲ್ಲಿ ಕಿಣಿ ಅಕ್ರಮ, ಹಾದರ, ದುಂಡಾವರ್ತನೆಯಿಂದಲೇ ಆಸ್ತಿ ಮಾಡಿರುತ್ತಾನೆ. ತಾನೆ ಅತ್ಯಚಾರ ಮಾಡಿ ಕೊಲೆಮಾಡಿದ ಮಗಳಿಂದಲೆ  ಶಸ್ತ್ರ ಚಿಕಿತ್ಸೆಯಾಗುತ್ತದೆ. ಕತೆ ತಿರುವು ಪಡೆದುಕೊಳ್ಳುವುದೆ ಸಾದಿಯಾಳನ್ನು ಕಿಣಿಗಳು ನೋಡಿದಾಗ. ತಾವೆ ಕೊಲೆ ಮಾಡಿದವಳ ಮಗಳೆ ಸಾದಿಯಾ ಅಂತ ಗೊತ್ತಾಗುತ್ತದೆ. ಆಕೆಯೆ ಆತನ ಜೀವ ಉಳಿಸುತ್ತಾಳೆ. ಈ ಕತೆ ಅಂತಃಕರಣವನ್ನು ಕರಿಗಿಸಿಬಿಡುತ್ತದೆ. ಸಾದಿಯ ಮಾಡುವ ಶಸ್ತ್ರ ಚಿಕಿತ್ಸೆ ಇಡೀ ಸಮಾಜಕ್ಕೆ ಬೇಕಾಗಿರುವುದು. ಕೋಮು ದಳ್ಳುರಿಯಲ್ಲಿ ಬೆಂದು ಹೋಗುತ್ತಿರುವ ಸಮಾಜಕ್ಕೆ ಈ ಸಾದಿಯಾಳ ಮನುಷ್ಯತ್ವದ ಸ್ಪರ್ಷ ಬೇಕಾಗಿದೆ.

’ವರ್ಜಿನ್ ಮಹಿತೊ’ ಕತೆ ವಿಶೇಷವಾದುದು. ಮುಖವಾಡದ ಹುಸಿ ನೈತಿಕತೆಯನ್ನು ಅನಾವರಣ ಮಾಡುತ್ತದೆ. ಹೆಣ್ಣಿನ ಸ್ವಾತಂತ್ರ ಮತ್ತು ಸಹಜ ಪ್ರೀತಿಯನ್ನು ಮನಗಾಣಿಸುತ್ತದೆ. ಹಣವಂತ ಸುಶಿಕ್ಷಿತ ಎರಡು ಕುಟುಂಬಗಳ ನಡುವೆ ಏರ‍್ಪಡುವ ಮದುವೆ ಸಂಬಂಧದ ಒಳಗಿನ ಪುರುಷಂಕಾರವನ್ನು ನಿರಸನ ಮಾಡುವ ಕಡೆ ಕತೆಯ ತುಡಿತವಿದೆ. ಮಾಯ ಕಾರ್ತಿಕನನ್ನು ಎಲ್ಲಾ ವಿಧದಲ್ಲೂ ಇಷ್ಟ ಪಡುತ್ತಾಳೆ. ಅವನು ವಿದ್ಯಾವಂತ, ಶ್ರೀಮಂತ, ಬೇಕಾದಷ್ಟು ಹಣ ಗಳಿಸುತ್ತಿದ್ದಾನೆ. ಅವನು ಆಕೆಯ ಕನ್ಯಾ ಪರಿಶುದ್ದತೆಯ ಬಗ್ಗೆ ಕೇಳುವ ಪ್ರಶ್ನೆ ಮಾಯಳನ್ನು ಕಂಗೆಡಿಸುತ್ತದೆ. ಭಾರತೀಯ ಪರಂಪರೆಯ ಸುಸಂಸ್ಕೃತ ಸ್ಥಿತಿ ಮದುವೆಯಾಗುವ ಹೆಣ್ಣು ಕನ್ವತ್ವದಿಂದ ಇರಬೇಕು. ಆದರೆ ವಾಸ್ತವವಾಗಿ ಇದು ಸರಿನಾ ಎಂದು ಮಯ ವಿವರಿಸುವುದರ ಮೂಲಕ ಕಾರ್ತಿಕನ ನೈತಿಕ ಮುಖವಾಡವನ್ನು ಕಳಚುತ್ತಾಳೆ. ಆಕೆಯನ್ನು ಹೋಟಲ್ಲಿಗೆ ತಲುಪಿಸಲು ಬಂದ ಟ್ಯಾಕ್ಸಿ ಡ್ರೈವರ್‍ ಜೀವನ ಶೈಲಿ ಆಕೆಯ ಮನಸ್ಸಲ್ಲಿ ನಿಲ್ಲುವುದು ಕತೆಯ ಜೀವಾಳವಾಗಿದೆ.

ಕತೆ ಕಟ್ಟುವಲ್ಲಿ ಚಪ್ಪರಿಕೆಯವರು ತಮ್ಮದೆ ದಾರಿಯನ್ನು ಕಂಡುಕೊಂಡವರು. ವಿಭಿನ್ನ ಭಾಷಾ ಪ್ರಯೋಗವು ಕತೆಗಳನ್ನು ಭಾವನೆಯೊಂದಿಗೆ ಸಂಯೋಗಗೊಳಿಸುತ್ತವೆ. ಬಹಳ ಸೂಕ್ಷ್ಮವಾಗಿ ಮನುಷ್ಯ ಸಂಬಂಧಗಳನ್ನು ಹಿಡಿದಿಡುತ್ತವೆ. ಮನುಷ್ಯನಲ್ಲಾಗುತ್ತಿರುವ ಬದಲಾವಣೆಗಳು ಮನುಷ್ಯತ್ವವನ್ನು ಮೀರಿ ಚಲಿಸಲು ಸಾದ್ಯವಿಲ್ಲ ಎಂಬ  ಸತ್ಯದ ಸಹಜವಾದ ಜೀವನ ಪ್ರೀತಿಯ ಹುಡುಕಾಟವನ್ನು ಈ ಏಳು ಕತೆಗಳಲ್ಲಿ ಕಾಣುತ್ತೇವೆ. ಹೀಗಾಗಿ ಈ ಕಥೆಗಳು ಕಥನ ಪರಂಪರೆಯಲ್ಲಿ ಬೇರೂರಿ ನಿಲ್ಲುತ್ತವೆ.

 

 

ರಾಜಶೇಖರ್‌ ಹಳೆಮನೆ