About the Author

ಕುಂ.ವೀ. ಎಂದೇ ಜನಪ್ರಿಯರಾಗಿರುವ ಕಾದಂಬರಿಕಾರ, ಕತೆಗಾರ ಕುಂ. ವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನವರು. 1953ರ ಅಕ್ಟೋಬರ್ 1ರಂದು ಜನಿಸಿದರು. ‘ಬೇಲಿ ಮತ್ತು ಹೊಲ’ ಕಿರುಕಾದಂಬರಿಯ ಮೂಲಕ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ. ವೀರಭದ್ರಪ್ಪ, ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಮತ್ತು ನುಡಿಗಟ್ಟುಗಳಿಂದ. ಅವರ ಕತೆಗಳಲ್ಲಿ ಕಾದಂಬರಿಗಳಲ್ಲಿ ಕಾಣಿಸಿಕೊಂಡ ಭಾಷೆ ಅವರಿಗೆ ಸಾಹಿತ್ಯದಲ್ಲೊಂದು ಪ್ರತ್ಯೇಕ ಸ್ಥಾನ ಕಲ್ಪಿಸಿಕೊಟ್ಟಿತು. ’ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ’, ’ಕತ್ತಲಿಗೆ ತ್ರಿಶೂಲ ಹಿಡಿದ ಕತೆ’ಗಳ ಮೂಲಕ ಸಣ್ಣ ಕತೆಯ ದಿಕ್ಕನ್ನು ಬದಲಾಯಿಸಿದರು.

ಶಿವರಾಜ್ ಕುಮಾರ್ ಅಭಿನಯದ ’ಮನ ಮೆಚ್ಚಿದ ಹುಡುಗಿ’ ಅವರ ಕಾದಂಬರಿ ’ಬೇಟೆ’ ಆಧರಿಸಿದ ಚಿತ್ರ. ಅವರ ’ಬೇಲಿಯ ಹೂಗಳು’ ಕಾದಂಬರಿಯನ್ನು ಆಧರಿಸಿ ಬಂದದ್ದು ’ದೊರೆ’ ಸಿನಿಮಾ. ‘ಕೊಟ್ರೇಶಿ ಕನಸು’, ‘ಕೆಂಡದ ಮಳೆ’ ಅವರ ಕತೆಯಾರಿತ ಮತ್ತೆರಡು ಪ್ರಮುಖ ಚಿತ್ರಗಳು.  ಅವರ ಮತ್ತೊಂದು ಮಹತ್ವದ ಕೃತಿಯಾದ ‘ಕೂರ್ಮಾವತಾರ’ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿದೆ.

ಆಂಧ್ರದ ಹಿರೇಹಳ್ಳದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಿದ ಅವರು ಸೃಜನಶೀಲ ಸಾಹಿತ್ಯದಿಂದ ಸೃಜನೇತರ ಸಾಹಿತ್ಯದತ್ತಲೂ ಹೊರಳಿಕೊಂಡ ಕುಂ.ವೀ. ಚಾಪ್ಲಿನ್ ಕುರಿತು ಮಹತ್ವದ ಕೃತಿಯೊಂದನ್ನು ಬರೆದರು. ಶಾಮಣ್ಣ, ಯಾಪಿಲ್ಲು ಮತ್ತು ಅರಮನೆ ಕಾದಂಬರಿಗಳನ್ನು ಬರೆದರು. ಅರಮನೆ ಕೃತಿಗೆ 2007ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.

 ‘ಕಪ್ಪು’, ‘ಬೇಲಿ ಮತ್ತು ಹೊಲ’, ‘ಆಸ್ತಿ, ‘ಕೊಟ್ರ ಹೈಸ್ಕೂಲಿಗೆ ಸೇರಿದ್ದು’, ‘ಯಾಪಿಲ್ಲು’, ‘ಶ್ಯಾಮಣ್ಣ’, ‘ಕೆಂಡದ ಮಳೆ’, ‘ಬೇಟೆ’, ‘ಪಕ್ಷಿಗಳು’, ‘ಪ್ರತಿಧ್ವನಿ’, ‘ದ್ವಾವಲಾಪುರ’, ‘ಹನುಮ’, ‘ಅರಮನೆ’, ‘ಸೋಲೋ’, ‘ಬೇಲಿಯ ಹೂಗಳು’, ‘ಅರೊಹಣ’ ಕಾದಂಬರಿಗಳು.

 ‘ಚಾಪ್ಲಿನ್’, ‘ರಾಹುಲ ಸಾಂಕೃತ್ಯಾಯನ’, ‘ಗಾಂದೀ ಕ್ಲಾಸ್’ ವ್ಯಕ್ತಿ ಚಿತ್ರಣಗಳು.  ತೆಲುಗು ಕಥೆಗಳು ಅನುವಾದಿತ ಕೃತಿ.  ‘ಜಮೀನ್ದಾರಿ ವ್ಯವಸ್ಥೆ ಮತ್ತು ತೆಲುಗು ಸಾಹಿತ್ಯ’ ಅವರ ವಿಮರ್ಶಾತ್ಮಕ ಕೃತಿ.  ‘ಕಥೆಗಳು: 1989’ ಅವರ ಸಂಪಾದನೆಯಲ್ಲಿ ಮೂಡಿ ಬಂತು.

ಕುಂ. ವೀರಭದ್ರಪ್ಪನವರಿಗೆ ಕೆಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೇ ಅಲ್ಲದೆ ರಾಜ್ಯಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ್ ಪ್ರಶಸ್ತಿ, ಲಂಕೇಶ್ ಪ್ರಶಸ್ತಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನೀಡಿದರೆ ಕನ್ನಡ  ಸಾಹಿತ್ಯ  ಪರಿಷತ್ತು  ನೃಪತುಂಗ ಪ್ರಶಸ್ತಿಯೊಂದಿಗೆ ಗೌರವಿಸಿದೆ.

 

ಕುಂ. ವೀರಭದ್ರಪ್ಪ

(01 Oct 1953)

BY THE AUTHOR