About the Author

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ 1956 ರಲ್ಲಿ ರೈತ ಕುಟುಂಬದಲ್ಲಿ ಜನನ. ಬೆಂಗಳೂರು ವಿ.ವಿ.ಪುರಂ ಕಾಲೇಜಿನಿಂದ ಬಿ.ಎ. ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾನಿಯದಿಂದ ‘ ಜಾಗತೀಕರಣ ಮತ್ತು ಗ್ರಾಮ ಭಾರತ’ ಪೌಢಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು.

1981 ರಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು 2018 ರವರೆಗೆ ಹುಬ್ಬಳ್ಳಿ ನಗರದಲ್ಲಿ ಉದಯಟಿ.ವಿ.ಸಂಸ್ಥೆಯ ಉತ್ತರ ಕರ್ನಾಟಕ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಇದೀಗ ಮೈಸೂರು ನಗರದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ.

1995 ರಲ್ಲಿ ಸುಮ್ಮಾನದ ಪದ್ಯಗಳು ಕೃತಿಯ ಮೂಲಕ ಬರೆವಣಿಗೆ ಆರಂಭಿಸಿದ ನಂತರ ವಿಜ್ಞಾನ, ಇತಿಹಾಸ, ಸಾಹಿತ್ಯ, ಜೀವನ ಚರಿತ್ರೆ, ಅಭಿವೃದ್ಧಿ ಮತ್ತು ಪರಿಸರ, ಭಾರತೀಯ ಸಂಗೀತ ದ ಹಿಂದೂಸ್ಥಾನಿ ಮತ್ತು ಕರ್ನಾಟಕ ಸಂಗೀತದ ಕಲಾವಿದರ ಜೀವನ ಚರಿತ್ರೆ ಹಾಗೂ ಅನುವಾದ ಸೇರಿದಂತೆ ವೈವಿಧ್ಯಮಯ ವಿಷಯಗಳಲ್ಲಿ ಒಟ್ಟು ನಲವತ್ತು ಕೃತಿಗಳನ್ನು ರಚಿಸಿದ್ದಾರೆ. 2017 ರಿಂದ ಕರ್ನಾಟಕದ ಆರು ವಿಶ್ವ ವಿದ್ಯಾನಿಲಯಗಳಲ್ಲಿ ಇವರ ಕೃತಿಗಳು ಹಾಗೂ ಕೃತಿಗಳ ಕೆಲವು ಅಧ್ಯಾಯಗಳು ಪದವಿ ತರಗತಿಗಳಿಗೆ ಪಠ್ಯಗಳಾಗಿ ಬೋಧಿಸಲ್ಪಡುತ್ತಿವೆ.

2013 ರಲ್ಲಿ ಭಾರತದ ನಕ್ಸಲ್ ಇತಿಹಾಸ ಕುರಿತ ‘ಎಂದೂ ಮುಗಿಯದ ಯುದ್ಧ’ ಕೃತಿಗೆ ಮತ್ತು 2015 ರಲ್ಲಿ ಜಿಮ್ ಕಾರ್ಬೆಟ್ ಜೀವನ ಚರಿತ್ರೆ ‘ಬಿಳಿಸಾಹೇಬನ ಭಾರತ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭ್ಯವಾಗಿವೆ.

2013 ರಲ್ಲಿ ಮರುಭೂಮಿಯ ಹೂ ಅನುವಾದ ಕೃತಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅತ್ಯುತ್ತಮ ಅನುವಾದ ಪ್ರಶಸ್ತಿ ಲಭ್ಯವಾಗಿದೆ. ಗಾಂಧಿಗಿರಿಯ ಫಸಲುಗಳು ಕೃತಿಗೆ ಬೆಂಗಳೂರು ಗಾಂಧಿಭವನದ ಪ್ರಶಸ್ತಿ, ಮಹಾತ್ಮನ ಪುತ್ರ ಕೃತಿಗೆ ಮಂಡ್ಯ ಗಾಂಧಿ ಭವನದ ಪ್ರಶಸ್ತಿ ಹಾಗೂ ಬೆಂಗಳೂರು ನಾಗರತ್ನಮ್ಮ ಕೃತಿಗೆ ಮಂಡ್ಯ ಕರ್ನಾಟಕ ಸಂಘದ ಕೆ.ಸಿಂಗಾರಿಗೌಡ ಪ್ರಶಸ್ತಿ ಲಭ್ಯವಾಗಿದೆ. ಜೊತೆಗೆ ಜೀವನದಿಗಳ ಸಾವಿನ ಕಥನ ಕೃತಿಗೆ ಗುಲ್ಬರ್ಗಾ ದ ಶಂಕರ್‌ರಾವ್ ಪ್ರಶಸ್ತಿ, ಸೂಪಿ ಕಾವ್ಯ ಮತ್ತು ಕಥನ ಎಂಬ ಲೇಖನಕ್ಕಾಗಿ ಬೆಂಗಳೂರು ನವಕರ್ನಾಟಕ ಪ್ರಕಾಶನದಿಂದ ಸಿ.ವಿ.ರಾಜಗೋಪಾಲ್ ಸ್ಮಾರಕ ಪ್ರಶಸ್ತಿ ದೊರೆತಿದೆ.

ಪತ್ರಿಕೋದ್ಯಮದ ಸೇವೆಗಾಗಿ 2015 ರಲ್ಲಿ ಕರ್ನಾಟಕ ಸರ್ಕಾರದಿಂದ ಪರಿಸರ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಮತ್ತು 2017 ರಲ್ಲಿ ಮೈಸೂರು ಕುವೆಂಪು ಟ್ರಸ್ಟ್ ನಿಂದ ಹೆಚ್,ಕೆ. ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ 2018 ರಲ್ಲಿ ಬೆಳಗಾವಿಯ ಬಸವರಾಜ ಕಟ್ಟಿಮನಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನಿಂದ ಬಸವರಾಜ ಕಟ್ಟಿಮನಿ ಪತ್ರಿಕೋದ್ಯಮ ಪ್ರಶಸ್ತಿ ಮತ್ತು ಬೆಂಗಳೂರಿನ ತೇಜಸ್ವಿ ಪ್ರತಿಷ್ಠಾನದಿಂದ ತೇಜಸ್ವಿ ಪ್ರಶಸ್ತಿ ಹಾಗೂ ಬಿ.ಎಂ.ಶ್ರೀ ಪ್ರತಿಷ್ಠಾನದ ಪ್ರಶಸ್ತಿ ಸಹ ಲಭ್ಯವಾಗಿವೆ.

 

ಎನ್. ಜಗದೀಶ್ ಕೊಪ್ಪ

Awards

BY THE AUTHOR