ಮಿರ್ಜಾ ಗಾಲಿಬ್ (ಕಥನ ಮತ್ತು ಕಾವ್ಯ)

Author : ಎನ್. ಜಗದೀಶ್ ಕೊಪ್ಪ

Pages 136

₹ 150.00




Year of Publication: 2023
Published by: ಅಮೂಲ್ಯ ಪುಸ್ತಕ
Address: #83/1, 15ನೇ ಮುಖ್ಯರಸ್ತೆ, ವಿಜಯನಗರ ಕ್ಲಬ್ ಎದುರು ರಸ್ತೆ, ವಿಜಯನಗರ, ಬೆಂಗಳೂರು 560040
Phone: 9448676770

Synopsys

'ಮಿರ್ಜಾ ಗಾಲಿಬ್' ಡಾ.ಎನ್. ಜಗದೀಶ ಕೊಪ್ಪ ಅವರು ಬರೆದಿರುವ ಕಥನ ಮತ್ತು ಕಾವ್ಯ. ಗಾಲಿಬ್‌ನ ಕಾವ್ಯದಲ್ಲಿ ಏನುಂಟು ಏನಿಲ್ಲ? ಸೂಫಿ ಸಂತರ ದಾರ್ಶನಿಕ ಒಳನೋಟವಿದೆ. ತುಂಟ ಪ್ರೇಮಿಯ ಕುಹಕ ನೋಟವಿದೆ. ಪ್ರಾಮಾಣಿಕವಾಗಿ ಪ್ರೀತಿಸಿದ ಪ್ರೇಮಿಯೊಬ್ಬನ ಆರ್ತನಾದವಿದೆ. ಭಗ್ನಪ್ರೇಮಿಯ ಒಡೆದುಹೋದ ಹೃದಯ ಚೂರುಗಳ ಮಿಡಿತದ ಶಬ್ದವಿದೆ. ಕುಡುಕನೊಬ್ಬನ ರೋಮಾಂಚನವಿದೆ. ಸಮಾಜವನ್ನು ಗೇಲಿಮಾಡುವ ವಿದೂಷಕನೊಬ್ಬನ ಹಾಸ್ಯಪ್ರಜ್ಞೆ ಇದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಗಾಲಿಬ್‌ನ ಕಾವ್ಯದ ಆಳದಲ್ಲಿ ಅಪ್ಪಟ ಮನುಷ್ಯನೊಬ್ಬನ ತಾಜಾತನದ ತುಡಿತಗಳಿವೆ. ಈ ಕಾರಣಕ್ಕಾಗಿ ಗಾಲಿಬ್ ಇಂದಿಗೂ ಭಾರತದ ಎಲ್ಲಾ ಭಾಷೆಗಳ ಕಾವ್ಯ ಪ್ರೇಮಿಗಳ ಪ್ರೀತಿಯ ಕವಿಯಾಗಿದ್ದಾನೆ. ಆತನ ಕುರಿತು ಕಥನಕಾವ್ಯ ಈ ಕೃತಿ. 

About the Author

ಎನ್. ಜಗದೀಶ್ ಕೊಪ್ಪ

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ 1956 ರಲ್ಲಿ ರೈತ ಕುಟುಂಬದಲ್ಲಿ ಜನನ. ಬೆಂಗಳೂರು ವಿ.ವಿ.ಪುರಂ ಕಾಲೇಜಿನಿಂದ ಬಿ.ಎ. ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾನಿಯದಿಂದ ‘ ಜಾಗತೀಕರಣ ಮತ್ತು ಗ್ರಾಮ ಭಾರತ’ ಪೌಢಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು. 1981 ರಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು 2018 ರವರೆಗೆ ಹುಬ್ಬಳ್ಳಿ ನಗರದಲ್ಲಿ ಉದಯಟಿ.ವಿ.ಸಂಸ್ಥೆಯ ಉತ್ತರ ಕರ್ನಾಟಕ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಇದೀಗ ಮೈಸೂರು ನಗರದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. 1995 ರಲ್ಲಿ ಸುಮ್ಮಾನದ ಪದ್ಯಗಳು ಕೃತಿಯ ಮೂಲಕ ...

READ MORE

Excerpt / E-Books

'ಈಗ ಮಧ್ಯರಾತ್ರಿಯ ಒಂದು ಗಂಟೆಯ ಸಮಯ. ನಿರ್ಮಲವಾದ ನೀಲಾಕಾಶದಲ್ಲಿ ಪೂರ್ಣಚಂದಿರ ಬೆಳಗುತ್ತಿದ್ದಾನೆ. ದಿಲ್ಲಿ ನಗರದ ಸುಂದರ ಪ್ರಾರ್ಥನಾ ಮಂದಿರವಾದ ಜುಮ್ಮಾ ಮಸೀದಿ ಗೋಪುರದ (ಮಿನಾರ್) ಹಿಂಬದಿಯಲ್ಲಿ ಚಂದಿರನನ್ನು ನೋಡುವುದೇ ಒಂದು ಸೊಗಸು. ಈ ಮನೆಯ ಬಾಲ್ಕನಿಯಿಂದ ಕಾಣುವ ಬೆಳದಿಂಗಳಲ್ಲಿ ಹರಿಯುತ್ತಿರುವ ಯುಮುನಾ ನದಿ, ಈ ನಡುರಾತ್ರಿಯಲ್ಲೂ ಪುಟ್ಟ ದೀಪ ಬೆಳಗಿಸಿಕೊಂಡು ಸಂಚರಿಸುತ್ತಿರುವ ದೋಣಿಗಳು, ಇವೆಲ್ಲವೂ ದಿಲ್ಲಿ ನಗರವನ್ನು ಪ್ರೀತಿಸುವಂತೆ ನನ್ನನ್ನು ಪ್ರೇರೇಪಿಸುತ್ತಿವೆ’. ಈ ಮಾತುಗಳನ್ನು ದಿಲ್ಲಿ ನಗರದ ಬ್ರಿಟಿಷ್ ರೆಸಿಡೆಂಟ್ ಆಗಿದ್ದ ಸರ್ ಥಾಮಸ್ ಮೆಟ್‌ಕಾಫ್‌ನ ಪುತ್ರಿ ಎಮಿಲಿ ಬೆಯ್‌ಲಿ ಎಂಬಾಕೆ ತನ್ನ ದಿನಚರಿಯನ್ನು ದಾಖಲಿಸಿದ್ದಾಳೆ. ಇತಿಹಾಸ ಪೂರ್ವದಿಂದಲೂ ವೈಭವವನ್ನು ತನ್ನ ಒಡಲಲ್ಲಿಟ್ಟುಕೊಂಡು ಪೋಷಿಸುತ್ತಾ ಬಂದಿರುವ ದಿಲ್ಲಿ ನಗರ ಅನೇಕ ಸಾಮ್ರಾಜ್ಯಗಳ, ಸಾಮ್ರಾಟರ ಏಳುಬೀಳುಗಳನ್ನು ಕಂಡಿದೆ. ಈ ನೆಲದಲ್ಲಿ ಹರಿದ ನೀರಿನಷ್ಟೇ ಪ್ರಮಾಣದಲ್ಲಿ ನೆತ್ತರೂ ಸಹ ಹರಿದಿದೆ. ಇಲ್ಲಿನ ಒಂದೊಂದು ಅವಶೇಷವು, ಶತಮಾನ ಕಳೆದರೂ ನಮಗೆ ಮುಗಿಯದಷ್ಟು ಕಥೆ ಹೇಳಬಲ್ಲವು. ಇಂತಹ ಐತಿಹಾಸಿಕ ಹಿನ್ನೆಲೆಯುಳ್ಳ ದಿಲ್ಲಿ ನಗರಕ್ಕೆ ನಿಜವಾದ ಸೊಬಗನ್ನು ತಂದಿತ್ತವನು ಅಕ್ಬರನ ಮಗ ಶಹಜಹಾನ್. ತನ್ನ ರಾಜಧಾನಿಯನ್ನು ಆಗ್ರಾದಿಂದ ದಿಲ್ಲಿಗೆ ವರ್ಗಾಯಿಸಿ, ಕೆಂಪುಕೋಟೆಯನ್ನು ನಿರ್ಮಿಸಿ ಹಾಲಿನಷ್ಟು ಬಿಳುಪಾದ ಅಮೃತಶಿಲೆಯಲ್ಲಿ ಅನೇಕ ಸುಂದರ ವಾಸ್ತುಶಿಲ್ಪದ ಕಟ್ಟಡ, ಅರಮನೆ ಇತ್ಯಾದಿ ಖಾಸಗಿ ಗೃಹಗಳನ್ನು ನಿರ್ಮಿಸಿದನು. ಸುಂದರವಾದ ವಿಶಾಲವಾದ ರಸ್ತೆಗಳು, ಉದ್ಯಾನವನಗಳು, ಚೌಕಗಳು ಅವನ ಅವಧಿಯಲ್ಲಿ ನಿರ್ಮಾಣಗೊಂಡವು. ಹಳೆಯ ದಿಲ್ಲಿಯ ಉತ್ತರ ಭಾಗದ ಕಾಶ್ಮೀರಿಗೇಟ್, ಪಶ್ಚಿಮ ಭಾಗದ ಲಾಹೋರ್‌ಗೇಟ್, ಅಜ್ಮೀರ್ ಗೇಟ್, ಕಾಬೂಲ್ ಗೇಟ್, ದಕ್ಷಿಣ ಭಾಗದ ತುರ್ಕುಮನ್ ಗೇಟ್, ದಿಲ್ಲಿಗೇಟ್ ಹಾಗೂ ಚಾಂದಿನಿ ಚೌಕ್, ಫಯಾಜ್ ಬಜಾರ್ ಇವೆಲ್ಲವೂ ಕೆಂಪುಕೋಟೆಯ ನಿರ್ಮಾಣದೊಂದಿಗೆ ಅಸ್ತಿತ್ವಕ್ಕೆ ಬಂದು, ಇಂದಿಗೂ ತಮ್ಮ ಹೆಸರನ್ನು ಅಜರಾಮರವಾಗಿ ಉಳಿಸಿಕೊಂಡಿವೆ. ಮೊಗಲ್ ದೊರೆಗಳಲ್ಲಿ ಅಕ್ಬರ್‌ನಿಂದ ಪ್ರಾರಂಭವಾದ ಸಾಂಸ್ಕೃತಿಕ ಅಭಿರುಚಿಗಳು ಶಹಜಹಾನ್ ಹಾಗೂ ಅವನ ಪುತ್ರ ದಾರಾಶಿಕೊನಿಂದ ಹಿಡಿದು ಗಾಲಿಬ್‌ನ ಬಾಲ್ಯದಲ್ಲಿ ರಾಜ್ಯವಾಳಿದ ಎರಡನೆ ಅಕ್ಬರ್‌ಶಾ ದೊರೆ ಮತ್ತು ಕೊನೆಯ ಮೊಗಲ್ ದೊರೆ ಬಹದ್ದೂರ್ ಶಾನವರೆಗೂ ಹರಿದು ಬಂದಿರುವುದು ವಿಶೇಷ. ಕೊನೆಯ ಬಹದ್ದೂರ್ ಶಾ ಶ್ರೇಷ್ಠ ಅಭಿರುಚಿ ಹಾಗೂ ಅವಗುಣಗಳ ಸಂಗಮದಂತಿದ್ದ. ಈತ ಮೂಲತಃ ಒಳ್ಳೆಯ ಕವಿ, ಕಲಾವಿದ ಹಾಗೂ ಸಂಗೀತಗಾರನಾಗಿದ್ದ. ಕುದುರೆ ಸವಾರಿಯಲ್ಲಿ ಗಟ್ಟಿಗನಾಗಿದ್ದ ಬಹದ್ದೂರ್ ಶಾ, ಹಿಂದೂಸ್ತಾನಿ ಸಂಗೀತದ ಪ್ರಕಾರಗಳಾದ ಖಯಾಲ್ ಮತ್ತು ಟುಮುರಿಗಳನ್ನು ರಚನೆ ಮಾಡಿದ್ದನು. ಅರೇಬಿಕ್ ಹಾಗೂ ಪರ್ಶಿನ್ ಭಾಷೆಯ ಸಾಹಿತ್ಯದಲ್ಲಿ ಪಂಡಿತನಾಗಿದ್ದ ಈತ ಸೌದಿ ಎಂಬಾತನ `ಗುಲಿಸ್ಥಾನ್’ ಕೃತಿಯ ಮೇಲೆ ವಿಮರ್ಶೆಯನ್ನೂ ಸಹ ಬರೆದಿದ್ದನು. ಸಂಜೆಯ ವೇಳೆ ಕೆಂಪುಕೋಟೆಗೆ ಹೊಂದಿಕೊಂಡಂತಿದ್ದ ಯಮುನಾ ನದಿ ತೀರದಲ್ಲಿ ಗಾಳಿಪಟ ಹಾರಿಸುವುದು, ಉದ್ಯಾನವನದಲ್ಲಿ ಕುಳಿತು ಬುಲ್ ಬುಲ್ ತರಂಗವಾದ್ಯ ನುಡಿಸುವುದು ಈತನ ಮೆಚ್ಚಿನ ಹವ್ಯಾಸಗಳಾಗಿದ್ದವು.

Related Books