About the Author

“ರಘುಶಂಖ” ಕಾವ್ಯನಾಮದಿಂದ ಪರಿಚಿತರಾಗಿರುವ ಡಾ. ರಘುನಾಥ  ಖರಾಬೆಯವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದವರು. ಶ್ರೀಮತಿ ಗುರಮ್ಮ ಶ್ರೀ ಶಂಕರೆಪ್ಪನವರ ಮಗನಾಗಿ 01-01-1970ರಲ್ಲಿ ಜನಿಸಿದರು. ಎಂ.ಎ; ಎಂ.ಪಿಎಲ್;  ಪಿಎಚ್.ಡಿ. ಪದವಿಧರರು. 1996ರಲ್ಲಿ ಗುಲಬರ್ಗಾ ಶ್ರೀ ಶರಣಬಸವೇಶ್ವರ ವಾಣಿಜ್ಯ ಕಾಲೇಜು; ಎಸ್.ಎಸ್. ಖೂಬಾ ಬಸವೇಶ್ವರ ಪದವಿ ಕಾಲೇಜು ಬಸವಕಲ್ಯಾಣದಲ್ಲಿ ಕನ್ನಡ ಉಪನ್ಯಾಸಕರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸದ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗರ್ಮಾತಾಂಡಾದಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ. ಶರಣಬಸವಪ್ಪ ಅವರ ಜೀವನ ಸಾಧನೆ (ಎಂ.ಪಿಎಲ್.), ವಚನಕಾರರ ವೃತ್ತಿ ಮೌಲ್ಯಗಳು ಒಂದು ಅಧ್ಯಯನ (ಪಿಎಚ್.ಡಿ) ಶ್ರೀಯುತರ ಸಂಶೋಧನೆಯ ಎರಡು ಅಂಗಗಳಾಗಿವೆ. ಎರಡು ಮುಖ (ಕಾವ್ಯ), ಹೃದಯದಾಳದ ನೋವುಗಳು (ಕಾವ್ಯ), ವಚನ ಸಾಹಿತ್ಯದ ಹೊಸ ಪರಿಕಲ್ಪನೆ, ಕರ್ನಾಟಕೇತರ ಶರಣ ಶರಣೆಯರು, ‘ಶ್ರೀಗಂಧ’ ಪ್ರಭುರಾವ ಕಂಬಳಿವಾಲೆ, ವಚನಕಾರರ ವೃತ್ತಿ ಮೌಲ್ಯಗಳು-ಒಂದು ಅಧ್ಯಯನ, ವಚನ ಸಂವಾದ, ಭೂಮಿಕೆ, ಮಹಾದಾಸೋಹ ಪಥಿಕ, ಅಟ್ಟಳೆನಾಡಿನ ಅಣಿ ಮುತ್ತುಗಳು, ವರ್ತಮಾನದೊಡಲು, ನಡೆ ನುಡಿ ಸಿದ್ಧಾಂತವಾದಲ್ಲಿ, ಅರ್ಚನೆ ಪೂಜೆ ನೇಮವಲ್ಲ, ಹೊನ್ನದೀವಿಗೆ ಇತ್ಯಾದಿ ಕೃತಿಗಳನ್ನು ಇವರು ರಚಿಸಿದ್ದಾರೆ. ಷಣ್ಮುಖ ಶಿವಯೋಗಿಯ ವಚನಗಳು, ಕಾಯಕಜೀವಿ ಶಿವಶರಣ ನುಲಿಯ ಚಂದಯ್ಯ, ಕಲ್ಯಾಣ ಕಲಾ ಪ್ರತಿಭೆ, ಚಿತ್ರ ಪಲ್ಲವಿ, ಚೇತನ ಶಿಲ್ಪಿ (ದೇಶಾಂಶ ಹುಡಗಿ ಅಭಿನಂದನ ಗ್ರಂಥ), ಸ್ನೇಹಜೀವಿ, ಬಾಳಬುತ್ತಿ, ಕಂಬಳಿಬಾಬಾ, ಹೊನ್ನುಡಿ, ಗಡಿನಾಡಿನ ಸಿರಿಗನ್ನಡ, ವಸುಂಧರೆ, ಸ್ಪರ್ಶ ಸಂಜೀವಿನಿ, ಪ್ರಣೀತ, ಭಕ್ತಸಂಪ್ರೀತ, ಶರಣ ಸೌರಭ, ವಜ್ರಬಿಂಬ, ತವನಿಧಿ, ಶರಣದೀಪ್ತಿ, ಸಿದ್ರಾಮಪ್ಪ ಮುಕರಂಬೆ ಅವರ ತತ್ತ್ವಪದಗಳು ಸೇರಿದಂತೆ 22 ಸಂಪಾದಿತ ಕೃತಿಗಳನ್ನು ಹೊರತಂದು ಪ್ರಕಟಿಸಿದ್ದಾರೆ. ಚೇತನ ತರಂಗ ಮಾಸಿಕ ಹಾಗೂ ರಚನಾ ದ್ವೈಮಾಸಿಕ, ದ್ವೈಭಾಷಿಕ ಪತ್ರಿಕೆಯ ಸಂಪಾದಕರಾಗಿದ್ದಾರೆ. ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು  ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಲಬುರ್ಗಿ ಆಕಾಶವಾಣಿಯಿಂದ ಡಾ. ರಘುನಾಥ  ಖರಾಬೆಯವರ ಭಾಷಣ, ರೂಪಕ, ಚಿಂತನ, ಕವನಗಳು ಪ್ರಸಾರಗೊಂಡಿದ್ದು, ಅನೇಕ ವಿಚಾರ ಸಂಕಿರಣಗಳಲ್ಲಿ, ಸಭೆ ಸಮ್ಮೇಳನದಲ್ಲಿ ಭಾಗವಹಿಸಿ ಉಪನ್ಯಾಸಗಳನ್ನು ಮಂಡಿಸಿದ್ದಾರೆ. 100ಕ್ಕೂ ಹೆಚ್ಚು ಲೇಖನಗಳು ನಾಡಿನ ಖ್ಯಾತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ದಕ್ಷಿಣ ಭಾರತ ಪ್ರಾದೇಶಿಕ ಭಾಷಾ ಸಂಸ್ಥಾನ, ಮೈಸೂರು ಇವರು ಕನ್ನಡೇತರ ವಿದ್ಯಾರ್ಥಿಗಳ ಕಲಿಕೆಯ ಪ್ರೌಢ ಹಂತದ ಕನ್ನಡ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ ಕೆಲಸ ಮಡಿರುತ್ತಾರೆ. ಕರ್ನಾಟಕ ಸರ್ಕಾರದ ಒಂದನೆಯ ತರಗತಿ ಕನ್ನಡ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇವರಿಂದ ಒಂದು ಲಕ್ಷ ರೂಪಾಯಿಗಳ ಫೆಲೋಶಿಪ್ ಅಡಿಯಲ್ಲಿ “ಬೀದರ ಪ್ರದೇಶದ ಸ್ವಾತಂತ್ರ್ಯ ಸಂಗ್ರಾಮ” (1820ರಿಂದ 1948ರ ಅವಧಿಯ ಕರ್ನಾಟಕ, ತೆಲಂಗಾಣ ಹಾಗೂ ಮರಾಠವಾಡ ಪ್ರದೇಶವನ್ನು ಅನುಲಕ್ಷಿಸಿ) ಕುರಿತು 2015-16ನೇ ಸಾಲಿನಲ್ಲಿ ಸಂಶೋಧನೆ ಗೈದಿದ್ದಾರೆ.

ಇವರ ಸೇವೆ  ಆಧರಿಸಿ ವಿಶ್ವಭಾರತಿ ಸಮಾಜ ಸೇವಾ ಪ್ರಶಸ್ತಿ, ತಾಲೂಕಾ-ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ಸುವರ್ಣ ಕನ್ನಡಿಗ ಪ್ರಶಸ್ತಿ, ಉತ್ತಮ ಓದುಗ ಪ್ರಶಸ್ತಿ, ಶರಣ ಚೇತನ ಪ್ರಶಸ್ತಿ, ಸಾಹಿತ್ಯ ರತ್ನ ಪ್ರಶಸ್ತಿ, ರಮಣಶ್ರೀ ಪ್ರಶಸ್ತಿ, ಸಾಹಿತ್ಯ ಚೂಡಾಮಣಿ ರತ್ನ, ಕರ್ನಾಟಕ ಭೂಷಣ ಪ್ರಶಸ್ತಿ, ಡಾ. ರಾಧಾಕೃಷ್ಣನ್ ರತ್ನಪ್ರಶಸ್ತಿ ಅಲ್ಲದೇ ವಿವಿಧ ಸಂಘ ಸಂಸ್ಥೆ-ಮಠ ಮಂದಿರಗಳು ಇವರಿಗೆ ಗೌರವಿಸಿ ಸನ್ಮಾನಿಸಿವೆ.

ರಘುಶಂಖ ಭಾತಂಬ್ರಾ

(01 Jan 1970)

BY THE AUTHOR