'ನೆನಪಿನಂಗಳದಲ್ಲಿ' ನಿಮ್ಮ ನೆನಪಿನ ಕಣಜ ದೊಡ್ಡದಿದೆ..


"ಹಳ್ಳಿಯ ಹಿಂದಿನ ಬದುಕನ್ನು ನೆನೆಸಿಕೊಂಡಾಗ ಕುವೆಂಪು ಅವರ ಕಿಂದರಿ ಜೋಗಿ ಕವಿತೆಯ 'ಅಯ್ಯೋ ಹೋಯಿತೆ ಆ ನಾಕ, ಅಯ್ಯೋ ಬಂದಿತೆ ಈ ಲೋಕ' ಎಂಬ ಸಾಲು ನನ್ನನ್ನು ಕಾಡುತ್ತದೆ. ಕಷ್ಟ ಕೋಟಲೆಗಳ ನಡುವೆಯೂ ಆ ಬದುಕಿನಲ್ಲಿ ನೆಮ್ಮದಿ ಇತ್ತು, ಸಾಮರಸ್ಯ ಇತ್ತು. ನಿಮ್ಮ ದಾದೂ ಮತ್ತು ಬೂಬಮ್ಮರ ಸಂಗತಿ ಮಾಯವಾಗುತ್ತಿರುವ ಕೋಮು ಸೌಹಾರ್ದವನ್ನು ನೆನಪಿಸುತ್ತದೆ," ಎನ್ನುತ್ತಾರೆ ಪ್ರೊ. ಹೆಚ್. ಎಸ್. ಈಶ್ವರ. ಅವರು ಅಬ್ಬೂರು ಪ್ರಕಾಶ್ ಅವರ ‘ಕಣ್ಣ ಕನ್ನಡಿಯಲ್ಲಿ’ ಕೃತಿ ಕುರಿತು ಬರೆದ ವಿಮರ್ಶೆ.

'ನೆನಪಿನಂಗಳದಲ್ಲಿ' ನಿಮ್ಮ ನೆನಪಿನ ಕಣಜ ದೊಡ್ಡದಿದೆ. ನಾನು ಈ ಮೊದಲೇ ಹೇಳಿದಂತೆ ಭಾಷೆ ಸರಳವಾಗಿದೆ, ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ನೆನಪಿನ ವಿಚಾರಗಳು, ವಸ್ತುಗಳು ಆಸಕ್ತಿ ಹುಟ್ಟಿಸುತ್ತವೆ. ನಿಮ್ಮ ಈ ಬರವಣಿಗೆಗಳ ಸಂಗ್ರಹದಲ್ಲಿ ನಾನು ಪ್ರಮುಖವಾಗಿ ಮೂರು ಉದ್ದೇಶಗಳನ್ನು ಗ್ರಹಿಸುತ್ತೇನೆ.

ಮೊದಲಿಗೆ ನಿಮ್ಮ ಕುಟುಂಬದ ಹಿನ್ನೆಲೆ, ಅದರ ಪ್ರಮುಖ ಪಾತ್ರಗಳನ್ನು ಪರಿಚಯಿಸುವುದು; ಎರಡನೆಯದು, ನಿಮ್ಮ ಊರು, ಪರಿಸರ, ಸಾಮಾಜಿಕ ಸಂಬಂಧಗಳು, ರೀತಿನೀತಿಗಳನ್ನು ದಾಖಲಿಸುವುದು; ಮತ್ತು ಮೂರನೆಯದು, ಆಧುನೀಕರಣದ ಸೋಗಿನಲ್ಲಿ ಜನಜೀವನದಲ್ಲಿ ಕಾಣಬರುವ ಬದಲಾವಣೆಗಳನ್ನು ಗುರುತಿಸುವುದು. ನೀವು ಈ ಮೂರೂ ಉದ್ದೇಶಗಳನ್ನು ಸಮರ್ಪಕವಾಗಿ ನಿಭಾಯಿಸಿದ್ದೀರಿ ಎನ್ನುವುದು ನನ್ನ ಅನ್ನಿಸಿಕೆ.

ಕುಟುಂಬಕ್ಕೆ ಸಂಬಂಧಿಸಿದ ಲೇಖನಗಳು- ಹಿರೀಕರು, ತಂದೆ ಅಣ್ಣಯ್ಯ, ತಾಯಿ ವೆಂಕಟಮ್ಮ, ಅಣ್ಣ ರಾಜು, ಅಕ್ಕ ಜಯಮ್ಮ- ಎಲ್ಲವೂ ಆತ್ಮೀಯವಾಗಿ ಹೊರಹೊಮ್ಮಿವೆ. ಒಬ್ಬೊಬ್ಬರದೂ ಅನನ್ಯ ವ್ಯಕ್ತಿತ್ವ, ಅವರು ಎದರಿಸುವ ಸವಾಲುಗಳು, ಅವರ ಸಾಧನೆಗಳು ಅವರ ಸಂದರ್ಭಗಳಲ್ಲಿ ಮಾದರಿ ವ್ಯಕ್ತಿಗಳನ್ನಾಗಿಸಿವೆ. ನಿಮ್ಮ ತಂದೆ ತಾಯಿಯರ ಸರಳ ಬದುಕು, ಕಾಯಕವೇ ಕೈಲಾಸದ ಆದರ್ಶಗಳು ಗ್ರಾಮೀಣ ಬದುಕಿನ ಅವಿಭಾಜ್ಯ ಲಕ್ಷಣಗಳೇ ಆಗಿದ್ದು, ಅವರು ಅ ಬಗೆಯ ಬದುಕಿನ ಪ್ರತಿನಿಧಿಗಳಾಗಿ ಬೆಳಗುತ್ತಾರೆ. ನಿಮ್ಮ ಅಣ್ಣ ರಾಜು ಅವರ ಬದುಕಿನ ಸಾಧನೆಗಳನ್ನು ಹೇಳುತ್ತಲೇ, ಅವರು ಅನುಭವಿಸಿದ ಆಲ್ಬಮರ್ ಕಾಯಿಲೆಯ ತೀವ್ರತೆ ಮತ್ತು ಪರಿಣಾಮಗಳನ್ನು ವಿವರಿಸಿದ್ದೀರಿ. 'ಗಟ್ಟಿಗಿತ್ತಿ' ಪದಕ್ಕೆ ನಿಜವಾಗಿಯೂ ಅನ್ವರ್ಥವಾದದ್ದು ನಿಮ್ಮ ಅಕ್ಕ ಜಯಮ್ಮನ ಬದುಕು. ಸಂಪ್ರದಾಯ ಚೌಕಟ್ಟಿನಲ್ಲಿ ಬೆಳೆದ ಹೆಣ್ಣು ಮಗಳು, ಸರಳ ಮದುವೆ ಮತ್ತು ವಿಧವಾ ವಿವಾಹಗಳಂತಹ ಪ್ರೋಗ್ರೆಸ್ಸಿವ್ ಎನ್ನಬಹುದಾದ ಸಂದರ್ಭಗಳಿಗೆ ಸ್ಪಂದಿಸುವ, ಹೊಂದಿಕೊಳ್ಳುವ ರೀತಿ ನಿಜವಾಗಿಯೂ ಶ್ಲಾಘನೀಯ.

ಇನ್ನು ನಿಮ್ಮ ಊರು, ಪರಿಸರ ಕುರಿತ ಲೇಖನಗಳು ಅಟ್ಟೂರಿನ ವೈಶಿಷ್ಟ್ಯಗಳನ್ನು ಚಿತ್ರಿಸುತ್ತವೆ. ಅಟ್ಟೂರು ಅಣೆಕಟ್ಟು (ಶತಾಯುಷಿ ಸುಂದರಿ), ಅಟ್ಟೂರು ಬೆಟ್ಟ, ಹಿಪ್ಪೆ ಮರಗಳು, ದೇವಸ್ಥಾನಗಳು, ಹೋಟೆಲುಗಳು- ಹೀಗೆ ಹತ್ತು ಹಲವಾರು ಸ್ಥಳಗಳ ವಿವರಣೆಗಳು ಅಟ್ಟೂರಿನ ಭೌತಿಕ ಪರಿಸರವನ್ನು ಕಟ್ಟಿಕೊಡುತ್ತವೆ. ಆಚರಣೆಗಳು, ಹಬ್ಬ ಹರಿದಿನಗಳು, ಉತ್ಸವಗಳ ಬಗೆಗೂ ಸಾಕಷ್ಟು ಮಾಹಿತಿಗಳನ್ನು ಇಲ್ಲಿನ ಲೇಖನಗಳಲ್ಲಿ ಒದಗಿಸಿದ್ದೀರಿ. ಉದಾಹರಣೆಗೆ, ಮಾರ್ಲಮ್ಮಿ ಹಬ್ಬದ ತಿಂಡಿ ತಿನಿಸುಗಳು, ಸಂಭ್ರಮಗಳು ಕೂಡು ಕುಟುಂಬ ವ್ಯವಸ್ಥೆಯ ಸಹಜೀವನದ ಸಂತಸ, ಸೌಲಭ್ಯಗಳನ್ನು ನೆನಪಿಸುತ್ತವೆ.

ಹಳ್ಳಿಯ ಹಿಂದಿನ ಬದುಕನ್ನು ನೆನೆಸಿಕೊಂಡಾಗ ಕುವೆಂಪು ಅವರ ಕಿಂದರಿ ಜೋಗಿ ಕವಿತೆಯ 'ಅಯ್ಯೋ ಹೋಯಿತೆ ಆ ನಾಕ, ಅಯ್ಯೋ ಬಂದಿತೆ ಈ ಲೋಕ' ಎಂಬ ಸಾಲು ನನ್ನನ್ನು ಕಾಡುತ್ತದೆ. ಕಷ್ಟ ಕೋಟಲೆಗಳ ನಡುವೆಯೂ ಆ ಬದುಕಿನಲ್ಲಿ ನೆಮ್ಮದಿ ಇತ್ತು, ಸಾಮರಸ್ಯ ಇತ್ತು. ನಿಮ್ಮ ದಾದೂ ಮತ್ತು ಬೂಬಮ್ಮರ ಸಂಗತಿ ಮಾಯವಾಗುತ್ತಿರುವ ಕೋಮು ಸೌಹಾರ್ದವನ್ನು ನೆನಪಿಸುತ್ತದೆ. ನನ್ನ ಬಾಲ್ಯದ ದಿನಗಳಲ್ಲಿ ನಮ್ಮ ಹಳ್ಳಿಗಳ ಅವಿಭಾಜ್ಯ ಅಂಗವೇ ಆಗಿದ್ದ ಮುಸ್ಲಿಂ ಕಸಬುದಾರರು, ಪಾತ್ರೆಗಳಿಗೆ ಕಲಾಯಿ ಹಾಕುತ್ತಿದ್ದ ಕಲಾಯಿ ಸಾಬರು, ಹಾಸಿಗೆ ತಯಾರಿಸುತ್ತಿದ್ದ ಥಡಿ ಸಾಬರು, ಮೀನು ಹೊತ್ತು ತರುತ್ತಿದ್ದ ಕರಿಮೀನು ಸಾಬರು ಮುಂತಾಗಿ.

ಹೀಗೆ ಹತ್ತು ಹಲವಾರು ಸಂಗತಿಗಳನ್ನು ನೆನಪಿಸುವ ನಿಮ್ಮ ಈ ಬರಹಗಳು ನನಗೆ ಇಷ್ಟವಾದುವು.

- ಪ್ರೊ. ಹೆಚ್.ಎಸ್. ಈಶ್ವರ

MORE FEATURES

'ಅಕ್ಕ'ನನ್ನು ಕುರಿತ ವಿಭಿನ್ನ ದೃಷ್ಟಿಕೋನದ ಕೃತಿ ‘ರೂಹಿಲ್ಲದ ಚೆಲುವ’

02-05-2024 ಬೆಂಗಳೂರು

ಈ ಕಾದಂಬರಿ ಅಕ್ಕಮಹಾದೇವಿಯ ಕಥನಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಶರಣ ಧರ್ಮದ ಸಾಮಾಜಿಕ, ತಾತ್ವಿಕ, ವೈಚಾರಿಕ ಚಿಂತನೆಗಳನ್ನು...

ನಾವೇನನ್ನೊ ಕಳೆದುಕೊಂಡರೆ ಅದಕ್ಕಿಂತ ಮಹತ್ವದ್ದನ್ನು ಪಡೆದುಕೊಳುತ್ತೇವೆ

02-05-2024 ಬೆಂಗಳೂರು

‘ನನಗೀ ಪುಸ್ತಕದಲ್ಲಿ ಅರ್ಥವಾದ್ದದಾದರು ಏನು. ಪುನಃ ಪುಸ್ತಕದ ಹೆಸರು ಓದಿದೆ. " ನಿರ್ಗಮನ ". ಹೂ...! ...

ನಮ್ಮೊಳಗನ್ನು ಎಚ್ಚರಿಸುವ ಕೃತಿ ‘ದೇವನೂರ ಮಹಾದೇವ ಜೊತೆ ಮಾತುಕತೆ’

02-05-2024 ಬೆಂಗಳೂರು

'ಒಬ್ಬ ಜವಾಬ್ದಾರಿಯುತ ನಾಗರಿಕ, ಪ್ರಜ್ಞಾವಂತ ಬರಹಗಾರ- ತನ್ನ ಸಮಾಜದ ದುರಿತಗಳ ತುರ್ತಿಗೆ ಅನುಗಾಲವೂ ಹೇಗೆ ಸಂವೇದಿಸು...