ಅಂಕೆ ಮೀರುವ ನೆರಳುಗಳು ಕಾಯುವುದು ಬೆಳಕಿಗಾಗೇ

Date: 28-03-2023

Location: ಬೆಂಗಳೂರು


''ಬದುಕು ವಿಚಿತ್ರ. ಚಂದ್ರನ ಸುತ್ತಾ ಕಟ್ಟುವ ಗೂಡು ಮಳೆಯನ್ನು ಸೂಚಿಸುತ್ತಲ್ಲ ಹಾಗೆ ನನಗೆ ಯಾವಾಗಲೂ ಒಂದು ಅನ್ನಿಸುತ್ತೆ. ದೊಡ್ಡದಾದ ಬಯಲು. ಅಲ್ಲೊಂದು ಬಾಗಿಲು. ಬಾಗಿಲೆಂದರೆ ಗೋಡೆಗಳೆ ಇಲ್ಲದ ನಿರಾಧಾರ ಸ್ಥಿತಿಯಲ್ಲಿ ನಿಂತಿದೆ. ಆ ಚೌಕಟ್ಟು ಬರಿಯ ಚೌಕಟ್ಟು ಎಂದೆನ್ನಿಸದ ಸ್ಥಿತಿಯದು,'' ಎನ್ನುತ್ತಾರೆ ಲೇಖಕಿ ಪಿ. ಚಂದ್ರಿಕಾ. ಅವರು ತಮ್ಮ ‘ಅಂಕೆ ಮೀರುವ ನೆರಳುಗಳು ಕಾಯುವುದು ಬೆಳಕಿಗಾಗೇ’ ಎನ್ನುವ ವಿಚಾರವನ್ನು ಕಟ್ಟಿಕೊಟ್ಟಿದ್ದಾರೆ.

`ಹೀಗೇಕಾಯಿತು? ಎನ್ನುವುದು ಪ್ರಶ್ನೆಯೇ ಅಥವಾ ಒಳಗಿನ ನೋವೇ? ಅಥವಾ ಯಾವುದರ ಹುಡುಕಾಟವೇ? ತೇಜೂ, ವಿಚಿತ್ರ ಸ್ಥಿತಿಯಲ್ಲಿ ನನ್ನ ನಾನು ಪರೀಕ್ಷೆಗೆ ಒಡ್ಡಿಕೊಂಡು ಬಿಟ್ಟಿದ್ದೆ. ಆ ಹೊತ್ತಲ್ಲೇ ಒಳ್ಳೆಯ ಹುಡುಗಿಗೆ ಬರಬಾರದ ಆಕಾಂಕ್ಷೆಯೊಂದು ನನ್ನೆದೆಯಲ್ಲಿ ಮೂಡಿಬಿಟ್ಟಿತ್ತು. ನಿನಗೂ ತಿಳಿಯದ ನನ್ನ ಬಾಳ ಪುಟವೊಂದಿದೆ. ಅದನ್ನು ಇಷ್ಟು ದಿನ ಹೇಳಿದರೆ ಹೇಗೋ ಎನ್ನುವ ಭಯವಿತ್ತು. ಯಾರೋ ನನ್ನ ಬಗ್ಗೆ ಏನೋ ಅಂದುಕೊಳ್ಳುತ್ತಾರೆ ಅಂತ ಅಲ್ಲ. ನನ್ನೊಳಗೆ ಏನಾಗಿದೆ ಎಂದು ನನಗೇ ಖಚಿತ ಪಡಿಸಿಕೊಂಡು ಬಿಟ್ಟರೆ ಅಂಕೆಗಳನ್ನು ದಾಟಿ ಬಿಡುವ ಧೈರ್ಯ ಬರುತ್ತದಲ್ಲಾ! ಅದನ್ನು ಹೇಗೆ ಫೇಸ್ ಮಾಡೋದು? ಇಷ್ಟು ದಿನ ಇದು ಬರಿಯ ಒಳಗಿನ ನೋವು ಎಂದುಕೊಂಡಿದ್ದೆ. ಇಲ್ಲ ಇದೂ ಕೂಡಾ ನನ್ನ ಕಲ್ಪನೆಗೆ ಇಂಬುಕೊಡುವ ಇನ್ನೊಂದೇ ಸಂಗತಿ ಅಂತ ಈಗ ಅರ್ಥ ಆಗುತ್ತಿದೆ.

ಖಾಲಿ ಕ್ಯಾನ್ವಸ್ ತನ್ನೆದೆಯ ಮೇಲೆ ಬರೆಯಬಹುದುದಾದ ಚಿತ್ರವೊಂದಕ್ಕೆ ಕಾಯುವಂತೆ ಕಾಯುತ್ತಿದ್ದೆ. ಆ ಕಾಯುವಿಕೆಗೆ ಇಂಥಾದ್ದೆ ನಿರ್ದಿಷ್ಟ ಕಾರಣ ಇದೆ ಎಂದೂ ಅಲ್ಲ. ಮನಸ್ಸು ಬೇಡುವ ಯಾವುದರ ಹಿಂದೋ ಹೋಗಬೇಕೆಂದುಕೊಂಡೆನಲ್ಲಾ ಆನಿರೀಕ್ಷೆಯ ಫಲವೇ ಇರಬೇಕು. ಅಮ್ಮ, `ನನಗೆ ಬೇಡ’ ಎಂದು ಹಠ ಮಾಡುತ್ತಿದ್ದರೂ ಮಾತ್ರೆಯನ್ನು ನುಂಗಿಸಿಬಿಡುತ್ತಿದ್ದಳು. ನಾನವಳಿಗೆ ಹೇಳಲು ತುಂಬಾ ಪ್ರಯತ್ನ ಪಟ್ಟೆ, `ನನಗೆ ಏನೂ ಆಗಿಲ್ಲ’ವೆಂದು. ಮಾತ್ರೆಗಳಿಂದಾದ ನಿದ್ರಾಸ್ಥಿತಿ ಸಹಜವಾಗಿಲ್ಲದ್ದರಿಂದ ಅದು ಒಳಗೇ ಹಿಂಸೆಯನ್ನು ಹುಟ್ಟುಹಾಕುತ್ತಿತ್ತು. ಬಿಡುಗಡೆ ಆಗಬೇಕಾದ್ದು ಬಂಧವೆಂಬಂತೆ ಭಾಸವಾಗುತ್ತಿತ್ತು. ಎದೆ ಸೆಟೆದ ಮರವನ್ನು ಬಗ್ಗಿಸುವ ಶತಪ್ರಯತ್ನದಂತಿತ್ತು. ಅಮ್ಮ ನನ್ನ ಯಾವ ಮಾತನ್ನು ನಂಬಲಿಲ್ಲ. ಅವಳು ನಂಬುವ ಅಗತ್ಯ ಏನಿತ್ತು ಅಲ್ಲವಾ ತೇಜೂ? ಅವಳ ಮನಸ್ಸಿನಲ್ಲಿ ನನಗೆ ಏನೋ ಆಗಿದೆ, ಸಾಮಾನ್ಯ ಹುಡುಗಿಯ ಹಾಗೆ ನಾನಿಲ್ಲ ಎನ್ನುವ ತಳಮಳ ಆವರಿಸಿತ್ತಲ್ಲ! ಅದು ತಾನೆ ಅವಳಿಂದ ಅದನ್ನೆಲ್ಲಾ ಮಾಡಿಸಿದ್ದು. ನಾನೂ ಒಬ್ಬ ತಾಯಿಯಾದ ಮೇಲೆ ಇದೆಲ್ಲಾ ಅರ್ಥವಾಗುತ್ತಿರುವುದು. ಆದರೆ ನನಗಾಗ ತುಂಬಾ ತೊಡಕಾಗಿದ್ದು ನಾನು ಬಯಸದೇ ಇದ್ದಾಗಲೂ ಕಣ್ಣನ್ನು ಭಾರ ಮಾಡುತ್ತಲೆ ಇತ್ತಲ್ಲ ಆ ನಿದ್ದೆ.

ಎಲ್ಲರಂತೆ ನಾನು ದಿನ ಬೆಳಗ್ಗೆ ಎದ್ದು ಲಕ್ಕಿ ಬರ್ಡ್ ಎನ್ನುವ ಸಾಂಬಾರು ಕಾಗೆಯನ್ನು ನೋಡಬೇಕು ಅದು ನನ್ನ ಅದೃಷ್ಟವನ್ನು ಬದಲಿಸುತ್ತದೆ ಎಂದು ನಂಬಿಬಿಟ್ಟಿದ್ದೆ. ಬೆಳಗೆದ್ದು ಅದನ್ನು ನೋಡಲಿಕ್ಕೆ ಹೊರಗೆ ಓಡಿ ಬರುತ್ತಿದ್ದೆ. ಕಣ್ಣಲ್ಲಿ ಕಣ್ಣಿಟ್ಟು ಮರ ಗಿಡಗಳನ್ನು ತೀಕ್ಷ್ಣವಾಗಿ ಗಮನಿಸುತ್ತಿದ್ದೆ. ಅವೋ ಒಂದು ಮರೆಯಿಂದ ಇನ್ನೊಂದು ಮರೆಯನ್ನು ಹುಡುಕಿಕೊಳ್ಳುವಂತೆ ಗಿಡದಿಂದ ಗಿಡಕ್ಕೆ, ಮರದಿಂದ ಮರಕ್ಕೆ ಹಾರುತ್ತಿದ್ದವು. ಹಾರುತ್ತಾ ಹಾರುತ್ತಾ ಛೂಂ ಮಂತ್ರ ಹಾಕಿ ನನ್ನ ಅದೃಷ್ಟ ಬದಲಿಸುವಂತೆ ತಿಳಿ ಕಂದು ಬಣ್ಣದ ರೆಕ್ಕೆಯನ್ನು ಹಾಸುತ್ತಿದ್ದರೆ ಅತ್ಯಂತ ಸುಂದರ ಎನ್ನಿಸುತ್ತಿದ್ದವು. ಏನು ಮಾಡುವುದು ನನ್ನ ನಂಬಿಕೆ ಅದೃಷ್ಟವಲ್ಲ ನಿದ್ದೆಯ ಕಡೆಗೆ ಎಳೆದಿತ್ತು. ನಿದ್ದೆ ಮಾಡುತ್ತಾ, ಮಾಡುತ್ತಾ ಲಕ್ಕಿ ಬರ್ಡ್ ಅನ್ನು ಮರೆತೇಬಿಟ್ಟೆ. ಮಂಪರು ಬರಿಯ ಕಣ್ಣಿಗೆ ಮಾತ್ರವಲ್ಲ, ಕೈಗಳಿಗೆ- ಕಡೆಗೆ ಮನಸ್ಸಿಗೆ ಕೂಡಾ ಇತ್ತು. ನನ್ನೊಳಗಿನ ತಹತಹ ನಿಷ್ಕ್ರೀಯವಾಗುತ್ತಾ ಬೇರೆಡೆಗೆ ಚಲಿಸಿಬಿಟ್ಟಿತ್ತು. ಕಾಣದ ದುಃಖವೊಂದು ಒಡಲೊಳಗಿನಿಂದ ಸುಳಿ ಎದ್ದಂತೆ ಎದ್ದು ತೇಲುತ್ತೀಯಾ? ಇಲ್ಲ ಮುಳುಗುತ್ತೀಯಾ? ಎಂದು ಕೇಳುತ್ತಿದ್ದರೆ ನನ್ನೊಳಗೆ ನಾನೇ ಇಲ್ಲವಾಗಿಸಿಕೊಳ್ಳಬೇಕು ಎನ್ನುವ ಪ್ರಬಲವಾದ ಇಚ್ಚೆ ಹುಟ್ಟಿಬಿಟ್ಟಿತ್ತು.

ಸಂಭವಿಸಬಹುದಾದ ಸಂಗತಿಯೊಂದು ತಳವಿರದ ದೋಣಿಯಂತಾಗಿ ಇದ್ದಲ್ಲೇ ಇದ್ದುದನ್ನು ತುಂಬಿಕೊಳ್ಳುವುದೊಂದೇ ದಾರಿ ಎನ್ನುವಂತೆ ನಿದ್ದೆ ನನ್ನ ಆವರಿಸಿತ್ತಲ್ಲ! ನಾನಾದರೂ ಏನು ಮಾಡುವಂತಿದ್ದೆ? ಎಷ್ಟನ್ನು ಮೊಗೆದು ಹೊರಹಾಕಬಲ್ಲವಳಾಗಿದ್ದೆ. ನಾನು ಮೊಗೆದಷ್ಟೂ ಹೊರಗಿನಿಂದ ಒಳಗಿಗೆ ತಂದು ಹಾಕುತ್ತಿದ್ದವಲ್ಲ ಆ ಮಾತ್ರೆಗಳು,

ಅವುಗಳನ್ನು ನಾನು ಹೇಗೆ ತಡೆಯಬಲ್ಲವಳಾಗಿದ್ದೆ? ನನಗೆ ಗೊತ್ತು ಜಗತ್ತು ಹೇಳುವ ಹಾಗೆ ನನಗೆ ಏನೂ ಆಗಿಲ್ಲ. ಆಗಿಲ್ಲದಿದ್ದನ್ನು ಜಗತ್ತು ಆಗಿದೆ ಎಂದು ನನ್ನ ಮೇಲೆ ಹೇರಿತ್ತು. ಮನಸ್ಸು ದೇಹದ ಜೊತೆ ಹೊಂದಾಣಿಕೆಯಾಗದೇ ಹೋಗಿತ್ತು. ಆಗಲೆ ಸಿಕ್ಕ ಸೀರೆಯೋ ಹಗ್ಗವೋ ನನ್ನ ಕುತ್ತಿಗೆಗೆ ಹಾಕಿಕೊಂಡು ಜೀರಿಕೊಂಡುಬಿಡಬೇಕು ಅನ್ನಿಸತೊಡಗಿದ್ದು.

`ಅಮ್ಮಾ ನಾನು ಸಾಯಬೇಕು, ಹ್ಯಾಂಗ್ ಮಾಡಿಕೊಂಡಾಡರೂ ಸರಿಯೆ...’ ಎಂದು ಹೇಳಿ ಅವಳ ಮಡಿಲಲ್ಲಿ ಮುಖ ಹುದುಗಿಸಿ ಅಳ ಬೇಕು ಅನ್ನಿಸುತ್ತಿತ್ತು. ನಾನು ನಿಜವಾಗಿ ಮಗುವಾಗಿದ್ದೆ. ಕೆಲಸದ ಒತ್ತಡ ಅಮ್ಮ ನನಗೆ ಸಿಗುತ್ತಿರಲಿಲ್ಲ. ಸುಳಿಯೆದ್ದ ದುಃಖಕ್ಕೆ ಸಮಾಧಾನ ಹೇಳಲಾಗದೆ ನಾನು ಈ ಜಗತ್ತಿಗೆ ಕುರುಡಾಗಬೇಕು ಎಂದು ಬೇಲಿ ಸಾಲಿನ ಕಡ್ಡಿಕಳ್ಳಿಯನ್ನು ಮುರಿದು ಅದರ ಹಾಲನ್ನು ಕಣ್ಣಿಗೆ ಬಿಟ್ಟುಕೊಂಡಿದ್ದೆ. ಕಣ್ಣು ಊತ ಬಂದು ಮತ್ತಷ್ಟು ಭಾರವಾಗಿತ್ತು. ಅತಿಯಾದ ನಿದ್ದೆಗೆ ಹಾಗಾಗಿದೆ ಎಂದು ಎಲ್ಲರೂ ಭಾವಿಸಿದ್ದರು. ನಿಜ ಯಾವಾಗಲೂ ಹಾಗೆ ನೀರ ಎದೆ ಮೇಲೆ ಏಳುವ ಅಲೆಗೂ ನೀರಿಗೂ ಸಂಬಂಧ ಇರುವುದಿಲ್ಲ. ಅದು ಬರಿಯ ಗಾಳಿಯ ಆಟ. ಈ ಆಟ ಯಾವಾಗಲೂ ಒಂದೇ ಬಗೆಯಲ್ಲ. ಹೀಗೆ ಅಂದುಕೊಳ್ಳುವುದಕ್ಕೂ ಆಗಿರುವುದಕ್ಕೂ ನಡುವಣ ವ್ಯತ್ಯಾಸವನ್ನು ಹೇಳುವುದರಿಂದ ಏನನ್ನು ಸಾಧಿಸಬಹುದು? ನಿದ್ದೆ ನನ್ನ ತೀಕ್ಷ್ಣಗೊಳಿಸಲಿ ಎಂದುಕೊಂಡೆ. ಇಲ್ಲ ಅದು ನನ್ನ ನಿಧಾನವಾಗಿ ನಿಷ್ಕ್ರಿಯತೆಯತ್ತ ಕೊಂಡೊಯ್ಯತೊಡಗಿತು.

ಈಗ ನೆನೆಸಿಕೊಂಡರೆ ನನ್ನ ಹುಚ್ಚುತನಕ್ಕೆ ನಗಬೇಕು ಅನ್ನಿಸುತ್ತೆ ತೇಜೂ, ಆದರೆ ಅವತ್ತು ನಾನೆಷ್ಟು ಗಂಭೀರವಾಗಿದ್ದೆ! ಸ್ವಲ್ಪ ಕಾಲ ಕಳೆಯುವುದರೊಳಗೆ ನನಗೆ ಗೊತ್ತಿಲ್ಲದೆ ತಿಂಗಳಾಗುವುದಕ್ಕೆ ಕಾಯುತ್ತಿದ್ದೆ. ನನಗೆ ಬೇರೆ ಯಾವುದರ ನಿರೀಕ್ಷೆ ಇರಲಿಕ್ಕೆ ಸಾಧ್ಯವಿತ್ತು? ಡಾಕ್ಟರ್ ಅನ್ನು ನೋಡಲು ಹೋಗಬೇಕೆಂದು ಮನಸ್ಸು ತವಕಿಸುತ್ತಿತ್ತು. ಆಕಸ್ಮಿಕವಾಗಿ ತಾಕುತ್ತಿದ್ದ ಅವರು ನನ್ನೊಳಗೆ ಏನನ್ನು ಹುಟ್ಟು ಹಾಕುತ್ತಿದ್ದರು? ಗಂಡಸಿನ ಮೊದಲ ಸ್ಪರ್ಷ ಸಿಕ್ಕಿದ್ದು ಅಲ್ಲೇನಾ? ಯಾರು ಈ ಡಾಕ್ಟರ್? ನನ್ನನ್ನು ಈ ಸ್ಥಿತಿಗೆ ನೂಕಿದವರೇ? ಅಥವಾ ನನ್ನೊಳಗನ್ನು ಮೊಗೆದು ತನ್ನದನ್ನಾಗಿ ಮಾಡಿಕೊಳ್ಳುತ್ತಿರುವವರೆ? ಅಥವಾ ನನ್ನನ್ನು ಅರ್ಥ ಮಾಡಿಕೊಳ್ಳಲು ಜಗತ್ತಿನಲ್ಲಿರುವ ಏಕೈಕ ವ್ಯಕ್ತಿಯೆ? ಒಂದು ದಿನ ನಾನು ಅವರನ್ನು ಕೇಳಿದ್ದೆ `ನಿಮಗೆ ನಾನು ಅರ್ಥ ಆಗುತ್ತಿದ್ದೇನೆಯೇ?’. ಡಾಕ್ಟರ್ ಮುಖದಲ್ಲಿ ಖಂಡಿತಾ ಈ ಪಯಣದಲ್ಲಿ ಮಿಂಚೊಂದು ಸುಳಿದು, `ನಾನು ನಿನ್ನ ಪ್ರೀತಿಸುತ್ತೇನೆ ಡಿಯರ್’ ಎಂದು ನನ್ನ ಕೆನ್ನೆ ತಟ್ಟಿ ಹೇಳುತ್ತಾರೆ ಎಂದುಕೊಂಡಿದ್ದೆ. ನನಗಿಂತ ಮೂವತ್ತು ವರ್ಷಕ್ಕಾದರೂ ದೊಡ್ಡವರಿರಬೇಕು ಅವರು. `ಅಂದರೆ?’ ಎಂದರು. ನಾನು ನಿಟ್ಟುಸಿರಿಟ್ಟೆ, `ಅಂದರೆ ರೆಕ್ಕೆ ಬಲಿತ ಹಕ್ಕಿ ಗಾಳಿಯ ಜೊತೆ ಸಾಮರಸ್ಯ ಸಾಧಿಸಿ, ತನ್ನ ಅಸ್ತಿತ್ವ ಎನ್ನುವಂತೆ ಹಾರುತ್ತಲ್ಲಾ ಹಾಗೆ’ ಎಂದೆ. ನನ್ನೆಡೆಗೆ ಬಗ್ಗಿದ ಅವರು `ನಿನ್ನ ನೋಡಿದ್ರೆ ನನಗೆ ಜಲಸ್ ಆಗುತ್ತೆ. ಇಂಥಾ ಮಾತುಗಳೆಲ್ಲಾ ಎಲ್ಲಿ ಕಲಿತೆ? ಅದೂ ಇಷ್ಟು ಚಿಕ್ಕ ವಯಸ್ಸಿಗೆ’ ಅಂತ ಸತ್ಯ ಹೇಳಿದ್ದರು. ಆ ಕ್ಷಣ ಅಷ್ಟೇ ಅವರಿಗೆ ಮೈ ಮರೆವು. `ಜೀವನದಲ್ಲಿ ಬರಿಯ ಖುಷಿಯೇ ಇರುವುದಿಲ್ಲ, ದುಃಖವೂ ಇರುತ್ತದೆ. ಎಲ್ಲವನ್ನೂ ಸಮವಾಗಿ ತೆಗೆದುಕೊಳ್ಳಬೇಕು’ ಎಂದಿದ್ದರು. ನನಗೆ ಈಗ ದುಃಖವಾಯಿತು. ಇವರನ್ನು ನಾನು ಯಾಕೆ ಪ್ರೀತಿಸಿದೆ? ಅರೆ! ಏನೆಂದುಕೊಂಡೆ? ಇದ್ಯಾವ ಹುಚ್ಚು ಯೋಚನೆ? ಎಂದಾದರೂ ಅವರನ್ನು ಪ್ರೀತಿಸುವ ಕಲ್ಪನೆ ಕಂಡಿದ್ದೆನೇ? ನಾನು ಎಲ್ಲಿ ಯಾವಾಗ ಇವರನ್ನು ಪ್ರೀತಿಸಿದೆ?! ತಪ್ಪು ತಪ್ಪು ಪ್ರೀತಿ ಪ್ರೇಮ ಅಂತೆಲ್ಲಾ ಸಭ್ಯ ಹುಡುಗಿಯ ಲಕ್ಷಣ ಅಲ್ಲ ಎಂದು ನನಗೆ ನಾನೇ ಅಂದುಕೊಂಡೆ. ಹೊರಗೆ ಅಸಮ್ಮತಿ ವ್ಯಕ್ತಪಡಿದರೂ ಸಮ್ಮತವಾದ ನನ್ನೊಳಗು ಏನಂದರೂ ಒಪ್ಪದೆ ಹೋಗಿತ್ತು. ನನಗೆ ಅವರೆಡೆಗೆ ಇದ್ದದ್ದು ಲವ್‌ವಾ? ಕ್ರಷ್ಷಾ? ಇನ್ಯಾಚುಯೇಷನ್ನಾ? ನನ್ನೊಳಗೆ ಇಷ್ಟೆಲ್ಲಾ ನಡೆಯುತ್ತಿದ್ದರೂ ಎದುರಿದ್ದ ಡಾಕ್ಟರ್ ಕಣ್ಣಲ್ಲಿ ಮೊದಲ ದಿನದ ನಿರ್ಲಿಪ್ತತೆಯೇ ಮತ್ತೂ ಕಂಡಿದ್ದು. ಮನಸನ್ನು ಅಧ್ಯಯನ ಮಾಡುವವರಿಗೆ ಅದೊಂದು ವಸ್ತುವಲ್ಲ - ಹೃದಯವೊಂದರ ಮಿಡಿತ, ಜೀವವೊಂದರ ತುಡಿತ... ಅದು ನಿಮ್ಮೊಳಗಿಗೂ ಅಂಟಿಕೊಳ್ಳಬಹುದೆಂದು ಅರ್ಥವಾಗದಿದ್ದರೆ ಹೇಗೆ? ಎನ್ನಿಸಿಬಿಟ್ಟಿತ್ತು. ಆಗ ಮೊದಲ ದಿನದ ಹಾಗೆ ಅವರ ಬಗ್ಗೆ ಕನಿಕರ ಮೂಡಲಿಲ್ಲ, ಕೋಪ ಬಂತು. ನಂತರ ಅರ್ಥ ಆಗಿದ್ದು ದೂರದಿಂದ ತೇಲಿ ಬಂದ ಪರಿಮಳವೊಂದು ಮನಸ್ಸಿನಲ್ಲಿ ಹೂವಿನ ಆಕಾರವನ್ನು ಕಲ್ಪಿಸಿಕೊಡುತ್ತದಲ್ಲಾ. ಆಗ ನಾನು ಹೂವಿನ ತುಣುಕೊಂದನ್ನು ಮಾತ್ರ ಕಲ್ಪಿಸಿಕೊಳ್ಳುತ್ತೇನೋ ಇಲ್ಲ ಹೂವೇ ತಾನಾದ ಇಡೀ ಮರವನ್ನೇ ಕಲ್ಪಿಸಿಕೊಳ್ಳುತ್ತೇನೋ ಎನ್ನುವುದು ನನ್ನ ಕಲ್ಪನಾ ಸಾಮರ್ಥ್ಯ.

ಆಗ ತುಂಬಿಕೊಂಡಿದ್ದು ಅಳು. ಸುಮ್ಮನೆ ಹಗಲೂ ರಾತ್ರಿ ಅತ್ತೆ. ಅಂತ್ಯವೂ ಅಂತ್ಯವನ್ನೇ ಕಾಣದಲ್ಲವೇ? `ನೀನೊಬ್ಬ ಈಡಿಯಟ್’ ಎಂದು ನನ್ನ ನಾನೇ ಬೈದುಕೊಂಡೆ. ಮನದ ಕರೆಯನ್ನು ಕೇಳಲಾಗದವರನ್ನು ನಾನೇಕೆ ನೆಚ್ಚಿಕೊಳ್ಳಬೇಕು. ನೆಚ್ಚಿಕೊಳ್ಳುವುದೆಂದರೆ ಅದೊಂದು ಲಾಜಿಕ್ಕೇ ಇಲ್ಲದ ವಿಶ್ವಾಸ. ಸ್ಪರ್ಷಿಸದೆ ಹೋಗುವುದು ಜಗತ್ತಿನ ಯಾವುದಕ್ಕು ಸಾಧ್ಯವಿಲ್ಲ. ಬೇಕಾಗಿ ನಮ್ಮನ್ನು ಸ್ಪರ್ಶಿಸದೆ ಹೋದರೆ ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಸುಮ್ಮನುಳಿಯಬೇಕು. ಹಟಮಾರಿತನ ಎಷ್ಟಿತ್ತೆಂದರೆ ಯಾರಿಗೂ ಕಾಣದೆ ಅತ್ತೆ. ಮುಗ್ಧ ಜಗತ್ತೊಂದು ಯಾವ ಮಾರ್ಪಾಡಿಗೂ ಒಳಗಾಗದೆ ಬೀಜರೂಪದಲ್ಲೆ ಉಳಿದು ಬಿಡುತ್ತಲ್ಲ ಹಾಗೆ. ನನ್ನನ್ನು ನಾನು ಜಗತ್ತಿನ ಕಣ್ಣಿಗೆ ಬೀಳದಂತೆ ಅಡಗಿಸಿಡುತ್ತಲೇ ಹೋದೆ... ಒಂದೇ ಸಮನೆ. ವಿಚಿತ್ರವಾಗಿ ಮೊದಲ ಪ್ರೀತಿ ಮುರಿದು ಬಿದ್ದ ನೋವನ್ನು ಅನುಭವಿಸಿದೆ. ಕಣ್ಣ ತಟದಲ್ಲಿ ತೀರದ ದುಃಖವೊಂದು ಠಳಾಯಿಸುತ್ತಲಿದೆ ಎನ್ನುವ ಅರಿವಿದ್ದಾಗಲೂ ಗೊತ್ತಿಲ್ಲದಂತೆ ನಟಿಸಿದ್ದು ನೆನಪಿದೆ ತೇಜೂ, ಅಸಂಬದ್ಧವಾದರೂ ಅದಕ್ಕೆ ನನ್ನನ್ನು ನಾನು ಒಡ್ಡಿಕೊಂಡುಬಿಟ್ಟಿದ್ದೆ.

ಆಗೊಂದು ಹುಚ್ಚು ಆರಂಭವಾಯಿತು ನೋಡು ನಾನು ಬರೆದ ಚಿತ್ರಗಳಲ್ಲಿ ಜಗತ್ತಿನ ಹುಡುಕಾಟ ಮಾಡಲು ಮುಂದಾದೆ. ನಾನು ಬರೆದದ್ದನ್ನು ಬರೆಯಲು ಕಾರಣವಾದದ್ದರ ಪಕ್ಕ ಇಡುತ್ತಿದ್ದೆ. ಅಲ್ಲಿಲ್ಲದ್ದನ್ನು ಕಂಡುಬಿಟ್ಟರೆ ಇದು ಎಲ್ಲಿತ್ತು ಹೇಗೆ ಪ್ರಕಟವಾಯಿತು. ರೇಖೆಗಳೇ ಅಲ್ಲದೆ ಒಂದು ಸಣ್ಣ ಚುಕ್ಕಿಯೂ ಅಲ್ಲಿ ಸೇರಿದ್ದು ಹೇಗೆ? ಎಲ್ಲವೂ ಸರಿ ಇದೆ ಅನ್ನಿಸಿದರೆ ಪಕ್ಕಕ್ಕೆ ತೆಗೆದಿಟ್ಟ್ಟು ಮರೆಯುತ್ತಿದ್ದೆ. ಸರಿಯಿಲ್ಲ ಅನ್ನಿಸಿದರೆ ಮತ್ತೆ ಮತ್ತೆ ತಿದ್ದುತ್ತಿದ್ದೆ. ಚಿತ್ರಗಳೆಲ್ಲವೂ ಇರುವ ಸಂಗತಿಗಳ ಗಡಿಗಳ ಸಮೀಪಕ್ಕೆ ಬಂದು ನಿಲ್ಲುತ್ತಿದ್ದವು. ಆದರೆ ಇರುವ ವಾಸ್ತವ ಮಾತ್ರ ಖಂಡಿತಾ ಆಗುತ್ತಿರಲಿಲ್ಲ. ಕಡೆಗೂ ನನ್ನನ್ನು ಕಾಡುವ ಚಿತ್ರ ನಾನೇ ಹೊರತು ಬೇರೆಯಲ್ಲ ಅನ್ನಿಸಿ ಅದನ್ನೂ ಬರೆದೆ. ನನ್ನ ನೋಡಿಕೊಳ್ಳಲು ಕನ್ನಡಿ ತಂದೆ. ಹಾಗೆ ಪಕ್ಕದಲ್ಲಿ ಎದುರಿನಲ್ಲಿ ಇಟ್ಟು ಇಟ್ಟೂ ಚಿತ್ರಗಳ ನಿರುಕಿಸುತ್ತಾ ನಾನೇ ಚಿತ್ರವಾಗುವ ಅತಿಯಾದ ಲೀಲೆ ನನ್ನೊಳಾಡುತ್ತಿತ್ತು.

ಇನ್ನು ಹಗಲು ರಾತ್ರಿಗಳಿಗೆ ಅತೀತಳಾಗಿ, ನಿದ್ದೆಯೊಂದೆ ನನ್ನ ಪಾಲಿನ ಸತ್ಯವೆನಿಸಿತ್ತು. ಕಣ್ಣು ಮುಚ್ಚುವುದಕ್ಕೇ ಅದ್ಭುತ ಕನಸೊಂದು ಕಾಯುತ್ತಿದೆ ಆ ಕನಸು ನನ್ನದಾಗಲಿ ಎಂದುಕೊಂಡೆ. ಎಲ್ಲವನ್ನೂ ಮರೆಸುವ ನಿದ್ದೆ ಕನಸುಗಳ ಮೆರೆಸಿತ್ತು. ಹಾಗೇ ಹಾಗೇ ವರ್ಷಗಟ್ಟಲೆ ಕಳೆದೆ- ಅದರಲ್ಲೇ ನನ್ನೊಳಗೆ ಹುಟ್ಟಬೇಕಿರುವ ಅದನ್ನು ಕಾಣುತ್ತಾ. ನನ್ನನ್ನೆ ನಾನು ಹುಟ್ಟಿಸಿಕೊಳ್ಳುವತ್ತ ಸಾಗುತ್ತಾ...

ಒಂದು ಕಾಲನ್ನು ನೆಲಕ್ಕಿಟ್ಟು ಇನ್ನೊಂದು ಕ್ಷಣಕ್ಕೆ ಆಕಾಶಕ್ಕೆ ಹಾರಬೇಕೆನ್ನುವ ನನ್ನ ಹಂಬಲಕ್ಕೆ ಕನಸುಗಳು ಮಾತ್ರ ಮಿಡಿದಿದ್ದವು. ಅವು ಒಮ್ಮೆ ಶುರುವಾದರೆ ದಿನಗಟ್ಟಲೆ ಹಾರಾಡುತ್ತಲೆ ಇರುತ್ತಿದ್ದೆ- ನಿದ್ದೆ ತಿಳಿದೆದ್ದ ಮೇಲೂ ಹಾರುತ್ತಲೆ ಇದ್ದೇನೆನೋ ಎನ್ನುವ ಭ್ರಮೆಯಲ್ಲಿ. ಗತಕಾಲದಲ್ಲಿ ಮನವನ್ನಿರಿಸಿ ಎಲ್ಲ ಚಿತ್ರಗಳೂ ಛಿದ್ರವಾಗುವ ಹಾಗೆ -ಕಣ್ಣ ಪಾಪೆಯಲ್ಲಿ ಛಿದ್ರ ಚಿತ್ರಗಳು ಮತ್ತಷ್ಟು ಚೆಲ್ಲಾಪಿಲ್ಲಿಯಾಗಿ ಹರಡಿತ್ತಲ್ಲವೆ? ಆಗಲೇ ಇನ್ನೂ ನಿದ್ದೆ ಬೇಕು ಅನ್ನಿಸಿಬಿಟ್ಟಿದ್ದು.

ಆ ಹಿಂಸೆಯ ಬಗ್ಗೆ ಏನು ಹೇಳಲಿ? ನಾನಲ್ಲದ ನಾನು ನನ್ನೆದುರೇ ಹಾದು ಹೋಗುವ ಅನುಭವ ಇರುತ್ತದಲ್ಲ ಅದನ್ನು. ಇದಕ್ಕಾಗೆ ನನ್ನ ನಾನು ದ್ವೇಷಿಸಿಕೊಂಡೆ. ಅನುಭವ ಕೊಡುವ ದೇಹದ ಆಚೆಗೆ ಜಿಗಿಯಬೇಕೆಂದುಕೊಂಡೆ. ಅದು ಕಷ್ಟ ಎಂದು ಮೊದಲು ಅನ್ನಿಸುತ್ತಿತ್ತು. ಆಮೇಲೆ ಅದೇ ಅಭ್ಯಾಸವಾಗಿ ಒಂದರಿಂದ ಇನ್ನೊಂದಕ್ಕೆ ಜಿಗಿಯುವುದು ಆಟವಾಗಿಬಿಟ್ಟಿತು. ಅತ್ಯಂತ ಕಷ್ಟಕ್ಕೆ ಕಾರಣರಾದ ಡಾಕ್ಟರ್‌ರನ್ನೂ ದ್ವೇಷಿಸದ ಸ್ಥಿತಿ ತಲುಪಿದೆ. ನನಗೆ ದ್ವೇಷ ಮಾಡಿ ಮಾಡಿ ದ್ವೇಷದ ಮೇಲೆ ಜಿಗುಪ್ಸೆ ಆಗಿತ್ತು. ಹೀಗೆ ನನ್ನ ಮನಸ್ಸನ್ನು ಬೇಕೆಂದಾಗ ಬಿಚ್ಚಿ, ಬೇಡದಿದ್ದಾಗ ಸುತ್ತಿಡುವುದೂ ಸಾಧ್ಯವಾಗಿಬಿಟ್ಟಿತ್ತು.

ಕೈಗಳು, ಮನಸ್ಸು ಎಲ್ಲ ನಿಷ್ಕ್ರೀಯವಾದಾಗ ಎಚ್ಚರವೂ ಎಂಥಾ ಧ್ಯಾನಸ್ಥಿತಿ ತಂದುಕೊಡಲು ಸಾಧ್ಯ? ಬಹುಶಃ ಇದೊಂದೇ ಎನ್ನಿಸುತ್ತೆ ನನ್ನ ಒಳಗನ್ನು ಅತ್ಯಂತ ಯಾತನಾಮಯಗೊಳಿಸಿದ್ದು. ಇಡೀ ಜಗತ್ತು ನನ್ನ ಎಗತಾಳೆ ಮಾಡಿ ನಗುತ್ತಿದ್ದರೆ ನಾನು ಮೈ ಮನಸ್ಸುಗಳ ಏಕತ್ರ ಮಾಡಿಕೊಳ್ಳುವತ್ತ ನೋಡುತ್ತಿದ್ದೆ. ಎಲ್ಲಕ್ಕೂ ಸಾಕ್ಷಿ ಹುಡುಕುತ್ತಿದ್ದ ನಾನೇ ಈಗ ಸಾಕ್ಷಿಯಾಗಿಬಿಟ್ಟಿದ್ದೆ.

ಅಮ್ಮಾ ನಾನು ಸಾಯಬೇಕು ಅನ್ನಿಸುತ್ತಿದೆ ಎಂದು ನನಗೆ ನಾನೇ ಕನವರಿಸಿಕೊಂಡಾಗ ನನ್ನ ವಯಸ್ಸು ಎಷ್ಟು ಪುಟ್ಟದಿತ್ತು? ನನಗೆ ಸಾವಿನ ಕಲ್ಪನೆಯೂ ಇರಲಿಲ್ಲ. ನನ್ನ ವiನಸ್ಸೊಂದು ಗಂಡಾಂತರವನ್ನು ಬರಮಾಡಿಕೊಳ್ಳಲು ಎಳಸುತ್ತಿತ್ತು. ಜಗತ್ತಿನ ಯಾವುದೋ `ನಿನ್ನ ಗಮ್ಯ ಇದಲ್ಲ’ ಎನ್ನುವಾಗ, ಸಾವಿನ ಕಲ್ಪನೆಯೂ ಇಲ್ಲದ ನಾನು ಎಲ್ಲದರಿಂದ ಪಾರಾಗಿಬಿಡುವ ಪ್ರಯತ್ನಕ್ಕೆ ಬಿದ್ದಿದ್ದೆ. ಬಲೆಯೊಡ್ಡಿ ಪಕ್ಷಿಯನ್ನು ಹಿಡಿಯ ಹೋದವನು ತಾನೇ ಹಕ್ಕಿಯಾಗಿ ಬಲೆಯಿಂದ ಬಿಡಿಸುವ ಕೈಗಳಿಗೆ ಕಾಯುವ ಹಾಗೆ, ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದ ಅದು ಬೆಳೆಯುತ್ತಲೇ ಹೋಯಿತು. ಮಾತ್ರೆ ಡಬ್ಬಿಯನ್ನು ಹುಡುಕಿದ್ದೆ... ಒಂದೊಂದೇ ಮಾತ್ರೆಗಳನ್ನು ನುಂಗುತ್ತಾ... ನುಂಗುತ್ತಾ... ಒಂದು ಬಯಲು ಇನ್ನೊಂದು ಬಯಲನ್ನು ಸಂಧಿಸುವ ಹುಚ್ಚಿಗೆ ಬಿದ್ದಂತೆ, ನನ್ನ ನಿದ್ದೆ ಜಗದ ನಿದ್ದೆಯನ್ನು ಸರಿಗಟ್ಟಿ ಶಾಶ್ವತವಾದ ಆ ಸುಖ ನನಗೆ ಸಿಗುತ್ತದೆ ಎಂದು ಭ್ರಮಿಸುತ್ತಾ ನಿದ್ದೆಗೆ ಜಾರಿಬಿಟ್ಟಿದ್ದೆ.

ತೇಜೂ ನಿನಗೆ ನೆನಪಿದೆಯಾ ಚಿಟ್ಟೆಗಳ ಹಿಂದೆ ಓಡುವವರು ಸದಾ ಸುಖಿಗಳು ಎಂದು ಅವುಗಳ ಹಿಂದೆ ಓಡುತ್ತಲೇ ಇದ್ದೆವಲ್ಲ! ಆಗ ಅದು ನಮಗೊಂದು ಆಟ. ನಂತರ ಗೊತ್ತಾಗಿದ್ದು ಚಿಟ್ಟೆಗಳು ಸುಖಿ ಯಾಕೆಂದರೆ ಅವು ಅವುಗಳಿಗಾಗಿ ಮಾತ್ರ ಓಡುತ್ತವೆ. ಹಾಗೆ ನಿದ್ದೆ ಎಂದು ಅರ್ಥ ಆಗುವುದರೊಳಗೆ ನಾನು ವಾಪಾಸು ಬರಲಿಕ್ಕಾಗದಷ್ಟು ನಿದ್ದೆಯ ಹಿಂದೆ ಹೀಗೆ ಬಿದ್ದುಬಿಟ್ಟಿದ್ದೆ. ಇದು ನನ್ನೊಳಗೆ ಎಂಥಾ ದೊಡ್ಡ ಮಾರ್ಪಾಡನ್ನು ತಂದುಬಿಟ್ಟಿತ್ತು ಗೊತ್ತಾ? ನಾನು ನಂಬುವ ಯಾವುದೂ ಈ ಜಗತ್ತಿನಲ್ಲಿ ಇಲ್ಲ ಎನ್ನುವ ಸ್ಥಿತಿ ತಲುಪಿಬಿಟ್ಟಿದ್ದೆ. ಚಂದ್ರಾ ಆ ಒಂದು ಮಾತನ್ನು ಹೇಳಲಿಲ್ಲ ಅಂದಿದ್ರೆ ಯಾವ ವ್ಯತ್ಯಾಸವೂ ನನಗೆ ಭಾಸವೇ ಆಗುತ್ತಿರಲಿಲ್ಲ.

ಬದುಕು ವಿಚಿತ್ರ. ಚಂದ್ರನ ಸುತ್ತಾ ಕಟ್ಟುವ ಗೂಡು ಮಳೆಯನ್ನು ಸೂಚಿಸುತ್ತಲ್ಲ ಹಾಗೆ ನನಗೆ ಯಾವಾಗಲೂ ಒಂದು ಅನ್ನಿಸುತ್ತೆ. ದೊಡ್ಡದಾದ ಬಯಲು. ಅಲ್ಲೊಂದು ಬಾಗಿಲು. ಬಾಗಿಲೆಂದರೆ ಗೋಡೆಗಳೆ ಇಲ್ಲದ ನಿರಾಧಾರ ಸ್ಥಿತಿಯಲ್ಲಿ ನಿಂತಿದೆ. ಆ ಚೌಕಟ್ಟು ಬರಿಯ ಚೌಕಟ್ಟು ಎಂದೆನ್ನಿಸದ ಸ್ಥಿತಿಯದು. ಅದನ್ನು ತೆಗೆಯುವೆ. ನನಗೆ ಗೊತ್ತಿದೆ ನನ್ನೊಳಗನ್ನು ಕಂಪಿಸುವ ಯಾವುದೋ ಆಚೆಗಿದೆ. ಅದಕ್ಕೆ ಹೋಗಲಿಕ್ಕೆ ಈ ಬಾಗಿಲೇ ಆಧಾರ. ಇನ್ನೂ ಸ್ಪಷ್ಟ ಗೊತ್ತು ಆಚೆಯೂ ಬಯಲೇ ಇದೆ. ಈ ಬಯಲಿನಿಂದ ಆ ಕಡೆಗೆ ಬಾಗಿಲ ಮೂಲಕ ಹೋಗುತ್ತೇನೆ. ನಾನಿರುವ ಈ ಬಯಲಿಗೂ ಆಚೆ ಬದಿಯ ಬಯಲಿಗೂ ಏನು ವ್ಯತ್ಯಾಸವಿದೆ? ಇದ್ಯಾವ ಅನುಭವ? ಏನೋ ಆಗುವಿಕೆಯ ಸೂಚನೆಯಾ ಆ ಬಾಗಿಲು? ಅದು ಬರಿಯ ದಾಟುವ ಅನುಭವ ಮಾತ್ರವಾ ಅಥವಾ... ಈಗ ಹೇಳು ಈ ಬಯಲಿಂದ ಆ ಬಯಲಿಗೆ ಹೋದ ಅನುಭವವನ್ನು ಏನೆಂದು ಹೇಳಲಿ? ಎಂದಿದ್ದೆ ಚಂದ್ರನ ಎದೆಗೊರಗಿ. ನನ್ನ ಕೂದಲಲ್ಲಿ ಕೈ ಆಡಿಸುತ್ತಾ ಅತ್ಯಂತ ಕರುಣೆಯಿಂದ ಹೇಳಿದ್ದ `ಅದು ನಾನು’ ಎಂದು. ಅವತ್ತು ಅವನ ಎದೆ ನನಗೆ ಎಷ್ಟು ಆಪ್ಯಾಯಮಾನ ಎನ್ನಿಸಿತ್ತು ಎಂದರೆ ಭರಿಸಲಾಗದ್ದು ಬರಿಯ ದುಃಖವಲ್ಲ ಸುಖವೂ ಕೂಡಾ. ಮತ್ತೊಮ್ಮೆ ಅಷ್ಟು ಇಂಟಿಮೇಟ್ ಆದ ಕ್ಷಣ ಬೇಕು ಅಂತ ತುಂಬಾ ಹಂಬಲಿಸಿದೆ. ಆದ್ರೆ ಅದು ಸಾಧ್ಯವೇ ಆಗಲಿಲ್ಲ. ಕ್ಷಣಗಳೇ ಹಾಗೆ ಜಾರಿ ಹೋದ ಮೇಲೆ ಹಿಡಿಯುವುದು ವ್ಯರ್ಥ ಪ್ರಯತ್ನ. ಮತ್ತೆ ಅದು ಸಿಗುತ್ತಾ? ಗೊತ್ತಿಲ್ಲ ಸಿಕ್ಕರೆ ಅದೃಷ್ಟ.

ಕಣ್ಣನ್ನು ಮೆಲ್ಲಗೆ ತೆಗೆದಾಗ ಎಲ್ಲವೂ ಬಿಳಿಯೇ. ನನ್ನ ಕಣ್ಣೇನಾದರೂ ಆಯಿತೇ ಎಂದುಕೊಳ್ಳುವಾಗ ಎದುರು ಕೆಂಪಗಿನ ಕಿತ್ತಲೆ ಹಣ್ಣನ್ನು ಬಿಡಿಸುತ್ತಿದ್ದ ಅಮ್ಮ ಕಂಡಳು. `ಅಮ್ಮಾ ಕೆಂಪು ನನಗೆ ಕಾಣುತ್ತಿದೆ ಎಂದರೆ ನಾನು ಬಿಳಿಯ ಮಧ್ಯೆ ಇದ್ದೀನಿ ಅಂತ ಅಲ್ಲವೆ?’ ಎಂದೆ. ಅಮ್ಮ ನೋವಲ್ಲೂ ಪೇಲವವಾಗಿ ನಗುತ್ತಾ ನನ್ನ ಹತ್ತಿರಕ್ಕೆ ಸರಿದು `ನಿನ್ನ ತಲೆ, ಇದು ಆಸ್ಪತ್ರೆ ಎಲ್ಲವೂ ಬಿಳಿಯೇ’ ಎಂದು ಹಣ್ಣನ್ನು ಬಿಡಿಸಿ ನನ್ನ ಬಾಯಿಗಿಟ್ಟಳು. ಅಷ್ಟು ನೀರಸತೆ ಮಧ್ಯಯೂ ನಕ್ಕಿದ್ದೆ. ಅಮ್ಮನ ಮೂಗುನತ್ತು ಇದ್ದಕ್ಕಿದ್ದಂತೆ ಹೊಳೆದಿತ್ತು. ಹೊಳೆದಿತ್ತು ಅಂದರೆ ಹೊಳೆಯುವುದಲ್ಲ. ಅತ್ತೂ ಅತ್ತು ಕೆಂಪಗಾಗಿದ್ದ ಅವಳ ಮೂಗಿನ ತುದಿ ಮೂಗುಬೊಟ್ಟಿನ ಬಿಳಿಯ ಹರಳಿನ ಜೊತೆ ಪೈಪೋಟಿಗೆ ಇಳಿದಿತ್ತು.

ನನ್ನ ನೋಡುತ್ತಿದ್ದ ಡಾಕ್ಟರ್ `ಸ್ಟಮಕ್ ವಾಷ್ ಮಾಡಿಯಾಗಿದೆ ಇನ್ನೇನು ಯೋಚನೆ ಇಲ್ಲ. ಆದರೆ ನಿಮ್ಮ ಸೈಕ್ರಿಯಾಟಿಸ್ಟ್ನ ಒಮ್ಮೆ ಕೇಳಿ ಕೆಲವೊಮ್ಮೆ ಆ ಮಾತ್ರೆಗಳು ಹೀಗೇ ಆಕ್ಟ್ ಮಾಡುತ್ವೆ. ಪಾಪ ಸಣ್ಣ ಹುಡುಗಿ ಇಷ್ಟು ಸಫರ್ ಆಗುವ ಅಗತ್ಯ ಇರಲಿಲ್ಲ. ಇವಳಿಗೆ ತನಗೇನಾಗುತ್ತಿದೆ ಅಂತಲೇ ಗೊತ್ತಿಲ್ಲ. ಬೈಯ್ಯುವುದು ಬೇಡ’ ಎನ್ನುತ್ತಿದ್ದರೆ ನನ್ನ ಬಗ್ಗೆ ನನಗೇ ಕನಿಕರ ಉಕ್ಕಿ ಬಂದಿತ್ತು.

ಕಣ್ಣುಗಳಲ್ಲಿ ಅದೇ ನಿರ್ಲಿಪ್ತತೆ ಇಟ್ಟುಕೊಂಡ ಸೈಕ್ರಿಯಾಟಿಸ್ಟ್, `ಏನನ್ನಿಸುತ್ತೋ ಅದನ್ನು ಹೇಳಿಬಿಡಬೇಕು ಶ್ಯಾಮಲಾ. ಹೊರಗೆ ಬಂದುಬಿಟ್ಟರೆ ಆಗ ಸಮಸ್ಯೆ ಆಗಲ್ಲ. ಒಳಗೇ ಇಟ್ಟುಕೊಂಡರೆ ಹೀಗೆಲ್ಲಾ ಆಗುತ್ತೆ. ಇದು ನಿನ್ನ ಸಮಸ್ಯೆಯಲ್ಲ ಅಡಾಲಸೆಂಟ್ ಏಜ್‌ನದ್ದು. ದಾಟಿಕೊಂಡು ಬಿಟ್ಟರೆ ಎಲ್ಲವೂ ಸರಿಯಾಗುತ್ತೆ’ ಎಂದಿದ್ದರು. ಯಾರಿಗೆ ಹೇಳಲಿ ಒಳಗಿನ ಸಣ್ಣ ಅಲುಗಾಟವನ್ನು? ಅದೇ ಸುಳಿಯಾಗುತ್ತಾ, ಆ ಸುಳಿಯಲ್ಲಿ ನನ್ನನ್ನು ಎಳೆದುಕೊಂಡ ಪರಿಯನ್ನು. ಮತ್ತೆ ಈಜೆಂದು ಸುಳಿಯಿಂದ ಎತ್ತಿ ಬಿಟ್ಟ ಲೀಲೆಯನ್ನು?? ಕಂಡ ಎಲ್ಲವೂ ಕಡೆಗೆ ನೀರೂ ಕೂಡಾ ನಾನು ಸುತ್ತಿಕೊಳ್ಳಬೇಕಿರುವ ಕುಣಿಕೆಯಾಗಿ ಕಂಡಿದ್ದನ್ನು... ಯಾವುದನ್ನು ಹೇಳಲಿ??? ಕಕ್ಕಾಬಿಕ್ಕಿಯಾಗಿದ್ದ ನನಗೆ ಈಗ ಗೀಚುವುದನ್ನು ಬಿಟ್ಟರೆ ಬೇರೆ ದಾರಿಯಾದರೂ ಏನು? ಆಲ್ಬಂ ತೆಗೆದು ನನ್ನ ಚಿಕ್ಕಂದಿನ ಫೋಟೋಗಳಿಂದ ಹಿಡಿದು ಈವತ್ತಿನ ಎಲ್ಲಾ ಫೋಟೋಗಳ ಮೇಲೂ ನನ್ನನ್ನು ನಾನು ಇಲ್ಲವಾಗಿಸುವಂತೆ ನನ್ನ ಕುರುಹೂ ಕಾಣದಂತೆ ಪೆನ್ನು ಪೆನ್ಸಿಲ್ಲು ಸ್ಕೆಚ್ ಪೆನ್, ಕ್ರೆಯಾನ್ಸ್ ಹೀಗೆ ಸಿಕ್ಕ ಸಿಕ್ಕದ್ದರಲ್ಲಿ ಗೀಚುತ್ತಾ ಬಂದೆ. ನಾನು ಕಾಣುತ್ತಿಲ್ಲ ಎನ್ನುವಾಗ ಸಮಾಧಾನವೊಂದು ನನ್ನ ಆವರಿಸಿಬಿಟ್ಟಿತ್ತು. ಸಾವಿನ ಬಗ್ಗೆ ಯೋಚಿಸಬಾರದ, ಯೋಚನೆಯೂ ಬರಬಾರದ ಹೊತ್ತಲ್ಲಿ, ಸಮಸ್ತ ಪ್ರಕೃತಿ ತಳಮಳಿಸುವಂತೆ ಬದುಕನ್ನು ನಿರಾಕರಿಸುವಂತೆ ಸಾಯಬೇಕು ಅಂದುಕೊಂಡನಲ್ಲಾ! ಇದನ್ನೆಲ್ಲಾ ಏನೆಂದು ಹೇಳಲಿ? ಇವೆಲ್ಲಾ ಎಲ್ಲಿದ್ದವು. ನಾನೇ ಇದು ಹುಟ್ಟಲಿಕ್ಕೆ ಕಾರಣವೇ? ಆ ಮಾತ್ರೆಗಳು ಲೀಪಿಂಗ್ ಬೋರ್ಡ್ ಆಗದೆ ಇದ್ದರೂ ಸ್ಲೀಪಿಂಗ್ ಬೋರ್ಡ್ ಆಯಿತಲ್ಲಾ, ಅದಕ್ಕಿಂತಲೂ ಹೆಚ್ಚಾಗಿ ಸಾವಿನೆದೆಗೆ ನನ್ನ ತಲೆಯಾನಿಸಿಬಿಟ್ಟಿತ್ತಲ್ಲ’ ಎಂದು ನಿಟ್ಟುಸಿರಿಟ್ಟ ಶ್ಯಾಮುವಿನ ಒಳಗೆ ಇನ್ನೂ ನಾನು ಅರಿಯದ ಎಷ್ಟು ಜಗತ್ತುಗಳಿವೆ?

`ಮಹತ್ತು ಬೇಕೆನ್ನುವವರು ಸಮುದ್ರದ ಆಳಕ್ಕೆ ಇಳಿಯುತ್ತಾರೆ. ಆಸೆ ಪಡದವರು ದಂಡೆಗೆ ಕುಳಿತು ತೆರೆಗೆ ಮರುಳಾಗುತ್ತಾರೆ. ವಿವೇಕವೊಂದು ಮೂಡುವಾಗ ಎಷ್ಟೆಲ್ಲಾ ನಡೆದಿದೆ! ಆದರೆ ಅದು ಬೆಂಕಿಯ ಕಿಡಿಯಾಗಿ ಸುಟ್ಟು ಹೋಗದೆ ಬೆಳಕಿನ ಹಂಬಲಕ್ಕೆ ಬಿದ್ದು ದೀಪವಾಗುವುದು ದೊಡ್ಡದು. ಆಗಲೇ ನಾನು ಬರೆದ ಸೀರೀಸ್ `ಸಾವಿಗೆ ಸಮೀಪ’

ಇವೆಲ್ಲಾ ನನ್ನನ್ನು ಯಾಕೆ ಹುಡುಕಿ ಬಂದವು? ಆ ಅನುಭವಗಳಿಗೆ ನಾನೇ ಬೇಕಾಗಿದ್ದೆನಾ? ಗೊತ್ತು ಅಂಕೆಗೂ ಸಿಗದೆ ಬೆಳೆಯ ಬಯಸುವ ನೆರಳುಗಳು ಕಾಯುವುದು ಬೆಳಕಿಗಾಗೆ. ಬೆಳಕಿಲ್ಲದೆ ನೆರಳಿಗೆ ಅಸ್ತಿತ್ವ ಇಲ್ಲ. ನಾನು ಇಲ್ಲಿ ಹೀಗೆ ಇದ್ದೇನೆ ಎನ್ನುವುದೇ ಬಹುದೊಡ್ದ ಸಂಗತಿ ಎಂದು ಗೊತ್ತಾಗುವಾಗ ಜಗತ್ತಿನ ಸಮಸ್ತವೂ ನನ್ನ ತಾಕಲು ಕಾಯುತ್ತಿವೆ, ಈಗಲೂ ಸಹಾ ತೇಜೂ’ ಆರ್ದ್ರಗೊಳ್ಳುವ ಶ್ಯಾಮುವಿನ ಧ್ವನಿ ಕಸಿವಿಸಿ ದಾಟಿದ ಸಂಯಮವನ್ನು ಹೊತ್ತು ಗಂಭೀರವಾಗಿತ್ತು.

ಈ ಅಂಕಣದ ಹಿಂದಿನ ಬರೆಹಗಳು:
ಕೊಳದ ಮೇಲೆ ಬಿದ್ದ ಬೆಳಕು ಕೊಳವನೆಂದೂ ಕಲಕದು
ತೆರೆದುಹೋದ ಅರಿಯದ ಸಮ್ಮೋಹಕ ಲೋಕ
ತತ್ತಿಯೊಡೆದ ಪುಟ್ಟ ಕೀಟದ ಕಣ್ಣಲ್ಲಿ ಫಲಿಸಿದ ಬೆಳಕು
ಪದದೂಳಿಗೆ ಮುತ್ತಿಟ್ಟವನ ಜೀವದ ಗುರುತು ಎದೆ ಮೇಲೆ
ನೆತ್ತರಲೂ ರತ್ನವಾಗುವ ಗುಣ

ಅಘಟಿತ ಘಟನೆಗಳು
ಪ್ರಪಂಚ ಒಂದು ಸುಂದರ ಕನಸು

 

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...