ಅವಳ ಧ್ಯಾನಕ್ಕೆ ಒಳಿತೇ ಗುರಿ

Date: 19-02-2022

Location: ಬೆಂಗಳೂರು


‘ಯಾಕೋ ಗೊತ್ತಿಲ್ಲ ಮುತ್ಯಾ ನನ್ನಲ್ಲಿ ಅವಳನ್ನು ಕಾಣಲು ಬಯಸುತ್ತಿದ್ದ ಹಾಗೇ ನಾನೂ ಅವಳಲ್ಲಿ ನನ್ನನ್ನು ಕಂಡುಕೊಳ್ಳಲು ಪ್ರಯ್ಯತ್ನಿಸುತ್ತಿದ್ದೆ. ಹಾಗಾಗೇ ಕೃಷ್ಣಪ್ಪ ಮುತ್ಯಾ ಸಾಯುವುದಕ್ಕೂ ಮುಂಚೆ ಅವಳಿಗೆ ದೀಪ ಹಚ್ಚುವುದರಲ್ಲಿ ಶ್ರದ್ಧೆ ಇತ್ತಾ? ಎಂದರೆ ನನಗೆ ಈಗಲೂ ಇರಲಿಲ್ಲ ಎಂತಲೇ ಅನ್ನಿಸುತ್ತದೆ’ ಎನ್ನುತ್ತಾರೆ ಲೇಖಕಿ ಪಿ. ಚಂದ್ರಿಕಾ. ಅವರ ‘ತೇಲುವ ಪಾದಗಳು’ ಅಂಕಣದಲ್ಲಿ ತಮ್ಮ ಬಾಲ್ಯದ ಕೌತುಕದ ಭಾಗವಾಗಿದ್ದ ಮುತ್ಯಾ ಮತ್ತು ಆಕೆಯ ಆಧ್ಯಾತ್ಮಿಕ ಬದುಕಿನ ಕುರಿತು ಬರೆದಿದ್ದಾರೆ. 

‘ದೇವರು ಮತ್ತು ಧ್ಯಾನ ಎರಡರ ನಡುವೆ ವ್ಯತ್ಯಾಸವೇನು?’ ಎಂದು ನನ್ನನ್ನು ಯಾರಾದರೂ ಕೇಳಿದರೆ ಉತ್ತರ ನನಗೆ ಕಷ್ಟವೇ. ನನ್ನ ಬಾಲ್ಯದಲ್ಲೇ ದೇವರ ಬಗೆಗಿನ ಕಲ್ಪನೆ ಬದಲಾಗಿಬಿಟ್ಟಿತ್ತು. ಅದಕ್ಕೆ ಕಾರಣ ನನ್ನ ಮುತ್ಯಾ. ಅವಳನ್ನು ನಾನು ಕಂಡದ್ದು ಹಣ್ಣು ಹಣ್ಣು ಮುದುಕಿಯಾದಾಗಲೇ. ಅವಳಿಗೂ ನನಗೂ ಏನಿಲ್ಲವೆಂದರೂ ಎಂಬತ್ತೆರಡು ಎಂಬತ್ತು ಮೂರು ವರ್ಷಗಳ ಅಂತರ. ವಯಸ್ಸಾಗ್ತಾ ಆಗ್ತಾ ಅರಳೋ ಮರಳೋ ಅನ್ನುವುದು ಸಾಮಾನ್ಯ. ಆದ್ರೆ ಮುತ್ಯಾಳ ಬುದ್ಧಿಗೆ ಯಾವತ್ತೂ ಮಂಕು ಬಡಿಯಲಿಲ್ಲ. ಅವಳು ಸಾಯುವಾಗ ನನಗೆ ಹದಿನೆಂಟು ಇದ್ದಿರಬೇಕು. ನೂರು ದಾಟಿದ ಮೇಲಂತೂ ಅವಳ ಮಾತುಗಳು ಹರಳುಗಟ್ಟಿ ವಜ್ರದ ಹಾಗೆ ಅನ್ನಿಸುತ್ತಿತ್ತು. ಹುಟ್ಟು-ಸಾವುಗಳು ಅವಳನ್ನು ಕಂಗೆಡಿಸುತ್ತಿರಲಿಲ್ಲ. ಮಣ್ಣಿಗಿಟ್ಟ ಮಕ್ಕಳು, ಕಣ್ಣೆದುರಿನ ಮಕ್ಕಳು, ಅಕ್ಕಪಕ್ಕದವು, ಜಾತಿಯಲ್ಲಿ ಬೇರೆಯವು-ಯಾವ ವ್ಯತ್ಯಾಸಗಳು ಅವಳನ್ನು ಕಾಡಿದ್ದನ್ನು ನಾನು ಕಾಣಲಿಲ್ಲ. ನಾನೂ ಎಲ್ಲರಂತೆ ಒಂದು ಮಗು ಆದರೂ ಅವಳಿಗೆ ನನ್ನಲ್ಲಿ ಅವಳನ್ನು ಕಾಣುವ ತವಕವಿತ್ತು (ಹಾಗೆಂದು ಅವಳೇ ಎಷ್ಟೋ ಬಾರಿ ಹೇಳಿದ್ದಳು). ಅವಳಲ್ಲಿ ನನಗೆ ಕೌತುಕವಿತ್ತು. 

ನಮ್ಮ ಜಗತ್ತು ಶುರುವಾಗುತ್ತಿದ್ದುದೆ ರಾತ್ರಿ ಊಟದ ನಂತರ. ಹಗ್ಗದ ಮಂಚದಮೇಲೆ ಮಲಗಿ, ಬೆಳದಿಂಗಳಲ್ಲಿ ಚಂದ್ರನನ್ನು ನೋಡಿದರೆ ಚಂದ್ರನಿಲ್ಲದ ಅಥವಾ ಕ್ಷೀಣವಾಗುವ ರಾತ್ರಿಗಳಲ್ಲಿ ನಕ್ಷತ್ರಗಳನ್ನು ಎಣಿಸುತ್ತಿದ್ದೆವು. ಆಗೆಲ್ಲಾ ನಾನು ಚಿಕ್ಕವಳೊ ಅವಳೊ ಗೊತ್ತೇ ಆಗುತ್ತಿರಲಿಲ್ಲ. ಹಾಗಂತ ಅವಳು ತುಂಬಾ ಗಂಭೀರವಾಗಿದ್ದನ್ನು ನಾನು ನೋಡಲಿಲ್ಲ. ಬದುಕಿನ ದಾರುಣತೆಯನ್ನು ಕಂಡೂ ತಿಳಿಯಾಗುವ ಹಗುರವಾಗುವ ಎಂಥದ್ದೋ ಗುಣ ಅವಳಲ್ಲಿ ಇತ್ತು. 

ಕಥೆಗಳಲ್ಲಿ ಬರುವಂತೆ ನಕ್ಷತ್ರಗಳ ಲೋಕದಲ್ಲಿ ನಾನೂ ವಿಹರಿಸುವ ಆಸೆಯಿತ್ತು. ಮುತ್ಯಾಗೆ ನಾನದನ್ನು ಹೇಳಿದರೆ ಅವಳು ನಕ್ಕು ‘ಅಲ್ಲಿಗೆ ಹೋಗಲಿಕ್ಕೆ ಪ್ರಯತ್ನ ಬೇಕು’ ಎನ್ನುತ್ತಿದ್ದಳು. ನಾನು ಕೇಳಿದ್ದೆ, ‘ಮುತ್ಯಾ ನಾವೆಲ್ಲಾ ಅಲ್ಲಿಂದಲೇ ಬಂದವರಲ್ಲವೇ?’. ಮುತ್ಯಾ ತನ್ನ ದೃಷ್ಟಿಯನ್ನು ಆಕಾಶದಲ್ಲಿ ನೆಟ್ಟು, ಎಲ್ಲಿಂದ ಬಂದವರೋ? ಎಲ್ಲಿಗೆ ಹೋಗುವವರೋ? ಗೊತ್ತಿಲ್ಲದವರು ನಾವು. ನಮ್ಮನ್ನು ಕಳಿಸಿದವರ್ಯಾರು? ಉದ್ದೇಶವೇನು? ಎಲ್ಲಾ ಇಲ್ಲಿ ಕೂತು ಲೆಕ್ಕ ಹಾಕಬೇಕು. ನನಗೆ ತೋಚಿದ ಹಾಗೆ ನಾನು, ನಿನಗೆ ತೋಚಿದ ಹಾಗೆ ನೀನು. ಕಲ್ಪಿಸಿಕೊಳ್ಳುವುದು ಮಾತ್ರ ನಮ್ಮ ನಮ್ಮ ಶಕ್ತಿಯಿದ್ದಷ್ಟು. ನಮ್ಮ ದೊಡ್ಡವರು ನಂಬೆಂದು ಹೇಳಿದರೆ ನಂಬುತ್ತೇವೆ ಇಲ್ಲದಿದ್ದರೆ ಇಲ್ಲ. ಸತ್ಯ ಸುಳ್ಳುಗಳೆಲ್ಲವೂ ನಂಬುಕೆಯ ಮೇಲಷ್ಟೇ ನಿಂತಿದೆ’ ಎಂದಿದ್ದಳು. ನನಗೆ ಅವಳ ಮಾತು ಗೊತ್ತಾಗಲಿಲ್ಲ. ಇಲ್ಲ ಮುತ್ಯಾ ನಮಗೆ ನಾಟಕ ಮಾಡಿಸಿದ್ರಲ್ಲಾ ಅದರಲ್ಲಿ ಕಾಡಿನಲ್ಲಿ ಬರುವ ಹುಡುಗ ಕರೆದದ್ದಕ್ಕೆ ಕೃಷ್ಣ ಬಂದನಲ್ಲವಾ? ಅವನಿಲ್ಲ ಅಂದ್ರೆ ಹೇಗೆ ಬರ್ತಾ ಇದ್ದ?’ ಎನ್ನುವ ವಾದವನ್ನು ಮುಂದಿಟ್ಟೆ. ಅದಕ್ಕವಳು ಆಕಾಶದ ಕಡೆಯಿಂದ ನನ್ನ ಕಡೆಗೆ ತಿರುಗಿ, ‘ಪಾತ್ರ ಮಾಡಿದವ ಕೃಷ್ಣನಾ?’ ಎಂದಳು. ‘ಇಲ್ಲ ಅವನು ನನ್ನ ಸ್ನೇಹಿತ. ನಾನೂ ಅವನೂ ಒಂದನೇ ತರಗತಿಯಿಂದ  ಒಟ್ಟಿಗೆ ಕಲಿಯುತ್ತಿರುವೆವು’ ಎಂದೆ. ‘ಅಂದ ಮೇಲೆ ಕೃಷ್ಣ ಬರಲಿಲ್ಲ. ಕೃಷ್ಣನ ಹಾಗೆ ನಟಿಸಿದವ ನಿನ್ನ ಸ್ನೇಹಿತ. ಅವನಿಗೆ ವೇಷ ಹಾಕಿದವರು ಕೃಷ್ಣನನ್ನು ನೋಡಿದ್ದಾರಾ?’ ಎಂದಳು ನಗುತ್ತಾ. ‘ಮುತ್ಯಾ ನಿನ್ನ ಮಾತು ನನಗೆ ಅರ್ಥವಾಗುತ್ತಿಲ್ಲ’ ಎಂದೆ ಕಂಗಾಲಾಗಿ. ಮುತ್ಯಾ ಗಂಭೀರವಾಗಿ, ‘ದೇವರ ವಿಷಯದಲ್ಲಿ ನಾನೂ ನಿನ್ನಷ್ಟೇ ಕಂಗಾಲಾಗಿದ್ದೇನೆ. ನನ್ನ ಇಷ್ಟು ವರ್ಷಗಳಲ್ಲಿ ಎಲ್ಲರೂ ಹೇಳುವ ದೇವರು ನನ್ನ ಕಣ್ಣಿಗೆ ಬೀಳಲೇ ಇಲ್ಲ. ಅವನು ಹೇಗಿದ್ದಾನೆಂದು ನಾನು ಹೇಗೆ ಹೇಳಲಿ?’ ಎಂದಳು. ಮುತ್ಯಾನಿಗೆ ಕಾಣದ ದೇವರು ನನಗೆ ಹೇಗೆ ಕಾಣುತ್ತಾನೆ? ಅವತ್ತಿನಿಂದಲೇ ಜಿಜ್ಞಾಸೆ ಶುರುವಾಗಿದ್ದು. 

‘ಉತ್ತರ ಹುಡುಕುವುದು ಸುಲಭದ ಕೆಲಸ- ನಾನು ಇನ್ನೊಬ್ಬರ ಮಾತನ್ನು ನಂಬಿದಾಗ. ನಂಬುಗೆ ಎನ್ನುವುದು ಹೇಳುವ ಮತ್ತು ಕೇಳುವ ವ್ಯಕ್ತಿಗಳ ನಡುವೆ ಇರುವ ವಿಶ್ವಾಸಕ್ಕೆ ಸಂಬಂಧಿಸಿದ್ದು. ನನಗೆ ದೇವರು ಎಂದರೆ ಹೊಂದಿಕೊಳ್ಳುವ ಕನಸು ಮಾತ್ರ. ಧ್ಯಾನವೆಂದರೆ ಒಳಿತಿಗಾಗಿ ಮಾಡುವ ಪ್ರಾರ್ಥನೆ. ಪ್ರಾರ್ಥನೆ ನಿಜವಾಗುತ್ತೋ ಇಲ್ಲವೋ ಅದೂ ನನಗೆ ಗೊತ್ತಿಲ್ಲ. ಆದರೆ ಒಳಿತಿಗಾಗಿ ಪ್ರಾರ್ಥಿಸುವುದು ನನ್ನ ಒಳಗನ್ನು ಸಹಜ ಸುಂದರವಾಗಿಸುತ್ತದೆ. ಎಂದೋ ನೋಡಿದ ನಾಯಿ ಮರಿ ಇವತ್ತಿಗೂ ನಿನ್ನ ಕಾಡಿಸುತ್ತಲ್ಲ! ಅದರ ಕಾಲಿನಲ್ಲಿ ಆದ ಗಾಯ ನಿನ್ನ ಒಳಗೆ ಕರುಣೆಯನ್ನು ಹೊಮ್ಮುವಂತೆ ಮಾಡುತ್ತಲ್ಲ? ಆ ನಾಯಿಮರಿಗೆ ಏನೂ ಆಗದಿರಲಿ, ಅದು ಚೆನ್ನಾಗಿ ಓಡಾಡಿಕೊಂಡಿರಲಿ ಎಂದುಕೊಳ್ಳುವಿಯಲ್ಲ. ಅದನ್ನು ಹೇಳುವಾಗ ನಿನಗೆ ನಾಯಿ ಮರಿಯಲ್ಲದೆ ಬೇರೆ ಏನೂ ಕಾಣಿಸುವುದಿಲ್ಲವಲ್ಲ ಅದೇ ಧ್ಯಾನ’. ಮುತ್ಯಾನಿಗೆ ನನಗೆ ಹೇಗೆ ಹೇಳಬೇಕು ಅರ್ಥ ಮಾಡಿಸಬೇಕು ಎನ್ನುವುದು ಚೆನ್ನಾಗೇ ಗೊತ್ತಿತ್ತು. ನಾನು ಅವಳ ಸೆರಗನ್ನು ನನ್ನ ಬೆರಳಿಗೆ ಸುತ್ತಿಕೊಂಡು ಯೋಚಿಸುತ್ತಿದ್ದರೆ, ಅವಳು ಪ್ರೀತಿಯಿಂದ ನನ್ನನ್ನು ತನ್ನ ಎದೆಗೆ ಒತ್ತಿಕೊಂಡಿದ್ದಳು. ಮುತ್ಯಾ ಎಂದೂ ಕುಪ್ಪಸವನ್ನು ಹಾಕುತ್ತಿರಲಿಲ್ಲ. ಕಾರಣ ನಾನೂ ಕೇಳಲಿಲ್ಲ. ವಯೋ ಸಹಜವಾಗಿ ಅವಳ ಸೋತು ಸೊರಗಿದ ಎದೆ ಅತ್ಯಂತ ಮೃದುವಾಗಿ ನನ್ನ ಮುಖಕ್ಕೆ ತಗುಲಿ ಎಂಥದ್ದೋ ಸುಖದ ಭಾವವನ್ನು ಹುಟ್ಟುಹಾಕಿತ್ತು.

ಬೆಳಗುಗಳಲ್ಲಿ ಮುತ್ಯಾ ಹೇಗೆ ಹೇಗೋ ಕೆಲಸಗಳಲ್ಲಿ ತೊಡಗಿಸಿಕೊಂಡು ಬಿಡುತ್ತಿದ್ದಳು. ನನಗೆ ಈಗಲೂ ಅವಳು ತುಂಬಾ ಶ್ರದ್ಧೆಯಿಂದ ಮಾಡುತ್ತಿದ್ದ ಅಡುಗೆಯ ಜೊತೆಗೆ ನೆನಪಾಗುವುದು ಬೆರಣಿ ತಟ್ಟುತ್ತಿದ್ದುದು. ತಟ್ಟುವ ಬೆರಣಿಗೆ ಹೊಟ್ಟನ್ನು ಸೇರಿಸಿಕೊಂಡು ನಡುಗುವ ತನ್ನ ಕೈಗಳಲ್ಲಿ ಕಲೆಸುತ್ತಿದ್ದರೆ ಮುತ್ಯಾಗೆ ಅಸಹ್ಯವೇ ಇಲ್ಲವ ಎಂದು ನೋಡುತ್ತಿದ್ದೆ. ‘ಎಷ್ಟು ಮಕ್ಕಳ, ಮೊಮ್ಮಕ್ಕಳ, ಮರಿಮಕ್ಕಳನ್ನು ಎತ್ತಿ ಆಡಿಸಿದ ಈ ಕೈಗೆ ಅಂಟಿಕೊಂಡಿರುವುದು ಪ್ರೀತಿಮಾತ್ರ’ ಎನ್ನುತ್ತಿದ್ದಳು. ಕಲೆಸಿದ ಸೆಗಣಿಯನ್ನು ಮುದ್ದೆಗಟ್ಟಿ ಕೊಟ್ಟಿಗೆಯ ಹೊರಗಿನ, ಬಿಸಿಲು ಚೆನ್ನಾಗಿ ಬೀಳುವ ಗೋಡೆಗೆ ತಟ್ಟುತ್ತಿದ್ದರೆ ಅದು ಹೇಗೆ ಬೀಳುತ್ತಿಲ್ಲ ಎಂದು ನೋಡುತ್ತಿದ್ದೆ. ತೊಳೆದ ಮೇಲೂ ಉಳಿಯುವ ಸೆಗಣಿಯ ವಾಸನೆ ಹೋಗಲಿಕ್ಕೆ ಹಿತ್ತಲಿನಲ್ಲಿ ಬೆಳೆದಿದ್ದ ಯಾವ ಯಾವ ಸೊಪ್ಪುಗಳಿಂದ ಕೈಗಳನ್ನು ಉಜ್ಜುತ್ತಿದ್ದಳು. ವಯಸ್ಸು ಮೂಡಿಸಿದ ಅಂಗೈಯ್ಯ ಆಳವಾದ ಗೆರೆಗಳಲ್ಲಿ ಅಂಟಿಕೊಂಡಿದ್ದ ಸೆಗಣಿಯ ಉಳಿಕೆಗಳನ್ನು ಹೋಗಿಸಲಿಕ್ಕೆ ಪಾತ್ರೆಗಳನ್ನು ತೊಳೆಯುತ್ತಿದ್ದಳು. 

ಈಗಿನ ಹಾಗೆ ಆಗೆಲ್ಲಾ ಸೀಮೆ ಎಣ್ಣೆ ಸ್ಟೌವ್ ಆಗಲೀ, ಗ್ಯಾಸ್ ಆಗಲಿ ಇಲ್ಲದಿದ್ದುದರಿಂದ ಸೌದೆ ಒಲೆಗಳೆ. ನೈವೇದ್ಯಕ್ಕೆ ಆಗಬೇಕಾದರೆ ಇದ್ದಿಲೊಲೆಯೇ ಆಗಬೇಕು. ಬೆಂಕಿ ಹೊತ್ತಿಕೊಳ್ಳಲು ಬೆರಣಿಯನ್ನು ಇಡುತ್ತಿದ್ದುದು ನೆನಪಿದೆ. ಸ್ನಾನ ಮುಗಿಸಿದ ತಾತ ಮಂತ್ರಗಳನ್ನು ಹೇಳಿಕೊಳ್ಳಲು ಶುರು ಮಾಡಿದಾಗ ಮುತ್ಯಾ ಒಲೆಯನ್ನು ಕೆದಕಿ ಕೆಂಡವನ್ನು ಒಂದೊಂದನ್ನೆ ಪಕ್ಕಕ್ಕೆ ಇಟ್ಟು ಸೌಟಿಂದ ಇದ್ದಿಲೊಲೆಗೆ ಹಾಕಿ ಅದರ ಮೇಲೆ ಅನ್ನವನು ಮಾಡಲಿಕ್ಕೆ ಇಡುತ್ತಿದ್ದಳು. ಅದು ಇದ್ದಿಲೊಲೆಯ ಶಾಖಕ್ಕೆ ಬೇಯುತ್ತಿತ್ತೋ? ಪಕ್ಕದಲ್ಲಿ ಉರಿಯುವ ಸೌದೆ ಒಲೆಯ ಶಾಖಕ್ಕೆ ಅನ್ನವಾಗುತ್ತಿತ್ತೋ? ಹೇಳುವುದು ಕಷ್ಟ. ಇಷ್ಟು ಬೆಂಕಿಯಿರುವಾಗ ಇದ್ದಿಲೊಲೆ ಯಾಕೆ? ಎನ್ನುವ ಪ್ರಶ್ನೆಗೆ ಮುತ್ಯಾ ಭ್ರಮೆ ಎಂದು ನಗುತ್ತಿದ್ದಳು. ನಾನು ಕಂಡ ಹಾಗೆ ಅವಳು ದೇವರಿಗೆ ದೀಪ ಹಚ್ಚಲಿಲ್ಲ, ಕುಳಿತು ಧ್ಯಾನ ಮಾಡಲಿಲ್ಲ, ಇನ್ನೊಬ್ಬರನ್ನು ಬೈಯ್ಯಲಿಲ್ಲ, ಕರ್ಮಠತನವನ್ನು ಖಂಡಿಸಲಿಲ್ಲ- ಆದರೆ ತಾನು ಎಂದೂ ಅನುಸರಿಸಲಿಲ್ಲ. ಇಂಥಾ ಮುತ್ಯಾನ ಗಾಢವಾದ ಪ್ರಭಾವ ನನ್ನ ಮೇಲೆ ಆಗಿದ್ದು, ಅದರಿಂದ ಬಿಡಿಸಿಕೊಳ್ಳುವುದು ಇಂದಿಗೂ ಸಾಧ್ಯವಾಗುತ್ತಿಲ್ಲ. 

‘ನಿನ್ನ ಮುತ್ಯಾ ನಾನು ನೋಡಿದ ಹಾಗೆ ದೇವರ ದೀಪ ಹಚ್ಚುತ್ತಿದ್ದಳು, ಈಗೇನೋ ತಾನೇನೂ ಮಾಡೆ ಇಲ್ಲ ಎನ್ನುವ ಹಾಗೆ ನಡೆದುಕೊಳ್ಳುತ್ತಾಳೆ’ ಎಂದಿದ್ದಳು ಅಮ್ಮ. ‘ದೇವರಿಗೆ ಕೈ ಮುಗಿ, ನಾವು ಹೀಗಿದ್ದೇವೆ ಅಂದರೆ ಅದಕ್ಕೆ ಅವನೇ ಕಾರಣ, ಅವನಿಲ್ಲದೆ ಏನೂ ಆಗಲ್ಲ’ ಎನ್ನುತ್ತಿದ್ದಳು ಅಮ್ಮ. ಅವಳಿಗೆ ನಿಜಕ್ಕೂ ಒಂದು ದೊಡ್ಡ ಭಯ ಕಾಡುತ್ತಿತ್ತು. ನಾನು ದೇವರನ್ನು ನಿರಾಕರಿಸಿಬಿಟ್ಟರೆ, ನಾಳೆ ನನ್ನನ್ನು ಮದುವೆಯಾದವನು ‘ಇದೇನಾ ನಿಮ್ಮ ತವರಿನಲ್ಲಿ ಹೇಳಿಕೊಟ್ಟಿರುವುದು?’ ಎಂದುಬಿಟ್ಟರೆ ಎಂದು. ಎಂದೋ ಯಾರೋ ಅನ್ನಬಹುದಾದ ಮಾತುಗಳನ್ನು ಇಂದೇ ಊಹಿಸಿಕೊಂಡು ಅದಕ್ಕೆ ತಕ್ಕದಾಗಿ ಇರು ಎಂದು ಹೇಳುವ ಅಮ್ಮ ಮಾತ್ರ ಮುತ್ಯಾನಿಂದ ಸ್ವಲ್ಪವೂ ಪ್ರಭಾವಿತವಾಗಿರಲಿಲ್ಲ. ಅವಳ ಸ್ವಭಾವಗಳೆಲ್ಲವೂ ಹೆಚ್ಚೂ ಕಡಿಮೆ ಅಮ್ಮಮ್ಮನನ್ನೇ ಹೋಲುತ್ತಿದ್ದವು. ಅವಳು ಮಾತ್ರವಲ್ಲ ಆ ಮನೆಯಲ್ಲಿದ್ದವರೆಲ್ಲರೂ ಒಂದು ತೆರನಾದರೆ ಮುತ್ಯಾನೇ ಇನ್ನೊಂದು ತೆರೆವಾಗಿದ್ದಳು.

ಮುತ್ಯಾ ತನ್ನ ಗಂಡ ಕೃಷ್ಣಪ್ಪ ಬದುಕಿರುವವರೆಗೂ ಎಲ್ಲಾ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದಳಂತೆ. ಅತ್ತೆಗೆ ನೋವಾಗಬಾರದು ಎಂದಿದ್ದರೂ ಇರಬಹುದು. ಅವಳು ಪೂಜೆ ಮಾಡುವುದನ್ನು ನಿಲ್ಲಿಸಿದ್ದೂ ಆ ಒಂದು ಘಟನೆಯಿಂದ. ಇಳಿ ವಯಸ್ಸಿನಲ್ಲೂ ಚೆನ್ನಾಗಿದ್ದ ಗಂಡ ಇದ್ದಕ್ಕಿದ್ದ ಹಾಗೆ ಸತ್ತು ಮಲಗಿದ ಮಾರನೆಯ ದಿನವೇ ಆಕೆ ಆ ಹೆಣವನ್ನು ನೋಡಿದ್ದು. ಅದನ್ನ ನೋಡಿ ಸುಮ್ಮನೆ ಮೂಲೆಯಲ್ಲಿ ಕೂತುಬಿಟ್ಟಿದ್ದಳಂತೆ. 

ಅಪರೂಪಕ್ಕೆ ಉಡಿಯಕ್ಕಿ ಇಡ್ತೇವೆ ಎಂದು ಕರೆಸಿಕೊಂಡಿದ್ದ ತವರಿನವರು ನಾಕು ದಿನ ಉಳಿದು ಹೋಗು ಎಂದು ಬಲವಂತ ಮಾಡಿದರಂತೆ. ವಯಸ್ಸಾದ ಗಂಡನನ್ನು ನೆನೆಸಿಕೊಂಡು ಹೋಗಿಬಿಡಬೇಕು ಎಂದು ಮುತ್ಯಾಗೆ ಅನ್ನಿಸಿದರೂ, ಸೆಳೆತ ಎರಡು ಕಡೆಯಿಂದ ಆದದ್ದರಿಂದ ಅಪರೂಪಕ್ಕೆ ಬಂದಿದ್ದಲ್ಲವಾ ನೋಡೋಣ ಅಂತ ಉಳಿದುಕೊಂಡುಬಿಟ್ಟಿದ್ದಾಳೆ. ಪಕ್ಕದ ಮನೆಯವರು ಯಾರೋ ಆಕೆಯ ಗಂಡನಿಗೆ ಹುಷಾರಿಲ್ಲ ಎಂದು ಏನೋ ಪೂಜೆಮಾಡಿ, ಮುತ್ತೈದೆಗೆ ಬಾಗಿನ ಕೊಡಬೇಕು ಬಾ’ ಅಂತ ಮುತ್ಯಾಳನ್ನ ಕರೆದಿದ್ದಾರೆ. ಮುತ್ಯಾಗೆ ಇದನ್ನ ನಾನು ತೆಗೆದುಕೊಳ್ಳುವುದು ಬೇಡ ಅನ್ನಿಸಿದೆ, ಆದರೂ ತೆಗೆದುಕೊಂಡಿದ್ದಾಳೆ. 

ಅದೇ ಹೊತ್ತಿಗೆ ದಿನಾ ಓದಿದ ಹಾಗೆ ಅಂದೂ ಭಗವದ್ಗೀತೆಯನ್ನು ಓದಿದ ಕೃಷ್ಣಪ್ಪ ಮುತ್ಯಾನ ಎದೆಯಲ್ಲಿ ಚಳುಕು ಕಾಣಿಸಿಕೊಂಡಿದೆ. ನಾನಾಗ ಅಮ್ಮನ ಹೊಟ್ಟೆಯಲ್ಲಿದ್ದೆನಂತೆ. ಅಮ್ಮ ಹೆರಿಗೆಗೆಂದು ತವರಿಗೆ ಬಂದಿದ್ದಳಂತೆ. ಕೆಲಸ ಮಾಡಿದರೆ ಹೆರಿಗೆ ಸಲೀಸಾಗುತ್ತೆ ಅಂದಿದ್ದಕ್ಕೆ ಅಮ್ಮ ನೀರು ಸೇದುವುದು ಇತ್ಯಾದಿ ಕಷ್ಟದ ಕೆಲಸಗಳನ್ನು ಮಾಡುತ್ತಿದ್ದಳಂತೆ. ಬಾವಿಯ ಇನ್ನೊಂದು ಬದಿಗೆ ಆತುಕೊಂಡು ಕುಳಿತ ಕೃಷ್ಣಪ್ಪ ಮುತ್ಯಾ ನೋಡ ನೋಡತ್ತಿದ್ದಂತೆ ‘ಹಾ’ ಎಂದು ಪಕ್ಕಕ್ಕೆ ವಾಲಿಬಿಟ್ಟನಂತೆ. ಅಮ್ಮಾ ಇದ್ಯಾಕೆ ತಾತ ಹೀಗೆ ಬಿದ್ದು ಬಿಟ್ಟರು? ಎಂದು ಓಡಿ ಬಂದು ನೋಡುವಾಗ ಕೃಷ್ಣಪ್ಪ ಮುತ್ಯಾ ಜೀವ ಬಿಟ್ಟಿದ್ದನಂತೆ. ಭಗವದ್ಗೀತೆಯ ಪುಸ್ತಕದಲ್ಲಿ ನಿಲ್ಲಿಸಿದ ಕಡೆಗೆ ಹಾಳೆಯನ್ನು ಮಡಚಿಟ್ಟು ಅದರ ಮೇಲೆ ನಾನಿನ್ನು ಓದಲಾರೆ ಎಂದು ಸೊಟ್ಟ ಸೊಟ್ಟಗೆ ಬರೆದಿಟ್ಟಿದ್ದನಂತೆ. ಪೋಣಿಸಿಟ್ಟ ಮುತ್ತಿನ ಹಾಗೆ ಇದ್ದ ಅಕ್ಷರ ಸೊಟ್ಟಗಾದದ್ದು ಬಹುಶಃ ಹಾರ್ಟ್ ಅಟ್ಯಾಕ್ ಆಗಿದ್ದರಿಂದಲೇ ಇರಬೇಕು. ಆ ಪುಸ್ತಕವನ್ನೇ ತಾತ ಬದುಕಿರುವ ವರೆಗೂ ಓದುತ್ತಿದ್ದುದು.  

ಆಗೆಲ್ಲಾ ಹಳ್ಳಿಗಳಿಗೆ ಬಸ್ಸಿಲ್ಲ, ಗಾಡಿ ಓಡಾಟವೇ ಓಡಾಟ. ತಂದೆಯ ಶವವನ್ನು ಎದುರಿಟ್ಟುಕೊಂಡ ತಾತನಿಗೆ ತನ್ನ ಅಮ್ಮನನ್ನು ಕರೆಸಿಕೊಳ್ಳಬೇಕು, ಯಾರನ್ನಾದರೂ ಕಳಿಸಿ ಕರೆಸಿಕೊಳ್ಳಲು ನಾಳೆ ಸಂಜೆಯೇ ಆದೀತು ಎನ್ನುವುದು ಗೊತ್ತು. ಅಲ್ಲಿಯ ವರೆಗೂ ಹೆಣವನ್ನು ಏನೂ ಮಾಡುವಂತಿಲ್ಲ. ತಕ್ಷಣವೇ ರಾಮುಡೂವನ್ನು ಕರೆಸಿ ಗಾಡಿ ಕಟ್ಟಿಕೊಂಡು ಹೋಗಿ ಅಮ್ಮನನ್ನು ಕರೆದುಕೊಂಡು ಬಾ. ಯಾವುದೇ ಕಾರಣಕ್ಕೂ ಹೀಗಾಗಿದೆ ಎಂದು ಹೇಳಬೇಡ, ತುಂಬಾ ಹುಷಾರಿಲ್ಲ ಎಂದು ಮಾತ್ರ ಹೇಳು ಎಂದೆಲ್ಲಾ ಹೇಳಿ ಕಳಿಸಿದರಂತೆ. 

ಇದ್ದಕ್ಕಿದ್ದ ಹಾಗೆ ಬಂದ ರಾಮುಡೂವನ್ನು ನೋಡಿ ಮುತ್ತ್ಯಾಳಿಗೆ ಗಾಬರಿಯಾದರೂ, ಅಯ್ಯನಿಗೆ ಹುಷಾರಿಲ್ಲ ಬರಬೇಕಂತೆ ಎಂದ ಅವನ ಸಮಾಧಾನದ ಮಾತುಗಳನ್ನು ಕೇಳಿ ಏನೂ ಆಗಿರಲಿಕ್ಕಿಲ್ಲ ಎಂದು ಹೊರಟಳಂತೆ. ರಾಮುಡೂವಿನ ಮಾತಿನಲ್ಲಿ ಅವಳಿಗೆ ಅಂಥಾ ನಂಬಿಕೆ. ವಯಸ್ಸಾದ ತುಂಬು ಮುತ್ತೈದೆಯನ್ನು ತವರಿನವರು ಸಂಭ್ರಮದಲ್ಲಿ ಕಳಿಸಿಕೊಡುವಾಗ, ಅವರಲ್ಲಿ ಒಬ್ಬರನ್ನು ಪಕ್ಕಕ್ಕೆ ಕರೆದ ರಾಮುಡು ಹೀಗಾಗಿದೆ ಹಿಂದೇ ನೀವುಗಳು ಬಂದುಬಿಡಿ ಎಂದು ಹೇಳಿದ್ದನಂತೆ. ಎಲ್ಲರಿಗೂ ಏನು ಮಾಡಬೇಕು ಎಂದು ತೋಚದ ಸ್ಥಿತಿ. 

ಕೈಲಿ ಬಾಗಿನ ಹಿಡಿದೇ ಗಾಡಿಯಿಂದ ಇಳಿದ ಮುತ್ಯಾಗೆ ಮನೆಯ ಮುಂದೆ ಅಷ್ಟು ಜನ ಇರುವುದು ನೋಡಿ ಸಾವಿನ ಸೂಚನೆ ಸಿಕ್ಕಿಬಿಟ್ಟಿದೆ. ಗಾಡಿಯಿಳಿದು ತಲಬಾಗಿಲನ್ನು ದಾಟಿ ಸೀದಾ ಒಳಗೆ ಬಂದವಳಿಗೆ ಅಂಗಳದ ಮಲ್ಲಿಗೆಯ ಗಿಡದ ಕೆಳಗೆ ಮಲಗಿದ್ದ ಗಂಡ ಕಂಡಿದ್ದಾನೆ. ಮುಖವನ್ನು ನೊಣ ಮುತ್ತುತ್ತದೆ ಎಂದು ಮುಚ್ಚಿದ್ದ ಬಟ್ಟೆಯನ್ನು ಸರಿಸಿ ನೋಡಿದಾಗ ಕಪ್ಪಿಟ್ಟು, ವಾಸನೆ ಬರುತ್ತಿದ್ದ ಆ ದೇಹವನ್ನು ನೋಡಿ ಆಘಾತವಾಗಿದೆ. 

ಕ್ಷಣ ದಿಕ್ಕು ತೋಚದೆ ಕುಳಿತ ಮುತ್ಯಾಗೆ ಎಲ್ಲರೂ ಅಳುವಂತೆ ಹೇಳಿದರಂತೆ. ಮುತ್ಯಾ ಅಳಲಿಲ್ಲ, ತನ್ನನ್ನು ಕಾಡಿಸುತ್ತಾ, ಹೆದರಿಸುತ್ತಾ, ಸಂಸಾರ ಮಾಡುವಾಗ ಆದರಿಸಿ, ಮಕ್ಕಳನ್ನು ಹಡೆದಾಗ ಸಂಭ್ರಮಿಸಿ, ಸತ್ತ ಮಕ್ಕಳನ್ನು ತೆಗೆದುಕೊಂಡು ಹೋಗಿ ಸಂಸ್ಕಾರ ಮಾಡಿ, ತನ್ನ ಜೊತೆಜೊತೆಗೆ ನಡೆದ ವ್ಯಕ್ತಿಯ ದೇಹ ಎದುರಿಗಿದೆ. ಏನು ಮಾಡಬೇಕು? ತಾನೀಗ ಅಳುತ್ತಾ ಕೂತರೆ ಮತ್ತೆ ಎಲ್ಲರೂ ಅಳುತ್ತಾರೆ. ಅಲ್ಲ ತನ್ನ ಕರ್ತವ್ಯ ಬೇರೆ ಇದೆ.  ಸುತ್ತಾ ಜನ ಮನೇಲಿರುವ ಮಕ್ಕಳು ಮರಿ, ಹಸಿವು. ಸಂಕಟ ಕಳೆದ ದಿನ ಎಲ್ಲವೂ ಅರ್ಥವಾಗಿದೆ. ತನ್ನ ದುಃಖಕ್ಕಿಂತ ಬೇರೆಯವರಿಗೆ ತೊಂದರೆಯಾಗದಿರುವುದೇ ಮುಖ್ಯ. ಇನ್ನೂ ಸ್ವಲ್ಪ ಹೊತ್ತು ಇರಲಿ ಎಂದು ಅನ್ನಿಸಿತ್ತೋ ಏನೋ? ಆದರೆ ತಾತನನ್ನು ಕರೆದು ಸೂರ್ಯಾಸ್ತಮಾನಕ್ಕೆ ಇನ್ನೆರಡು ಗಂಟೆಗಳಿವೆ ಎಲ್ಲವನ್ನೂ ಮುಗಿಸಿಬಿಡು ಎಂದಳಂತೆ. ತಾಯಿಯಿಂದ ಆ ಮಾತನ್ನು ಮಾತ್ರಾ ನಿರೀಕ್ಷಿಸುತ್ತಿದ್ದ ತಾತ ಅಷ್ಟು ಹೊತ್ತಿಗಾಗಲೇ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡು ಬಿಟ್ಟಿದ್ದನಂತೆ. ‘ನನಗೆ ಗೊತ್ತಿದ್ದ ಹಾಗೆ ಅಂದು ದೀಪ ಹಚ್ಚುವುದನ್ನು ನಿಮ್ಮ ಮುತ್ಯಾ ನಿಲ್ಲಿಸಿದ್ದು’ ಎಂದು ಅಮ್ಮ ಹೇಳಿದ್ದಳು.

ಮುತ್ಯಾ ತುಂಬಾ ಸೂಕ್ಷ್ಮವಾಗಿದ್ದಳು. ಅದನ್ನು ಅವಳ ಕಣ್ಣುಗಳು ಹೇಳುತ್ತಿದ್ದವು. ಕೃಷ್ಣಪ್ಪ ಮುತ್ಯಾ ಸತ್ತು ಹದಿನೈದನೇ ದಿನ ನಾನು ಹುಟ್ಟಿದೆನಂತೆ. ಆಗ ರಾತ್ರಿ ಹತ್ತೂವರೆಯ ಸಮಯ; ಸೂಲಗಿತ್ತಿಯನ್ನು ಕರೆಸಿ ಹೆರಿಗೆಗೆ ಸಿದ್ಧ ಮಾಡಿಕೊಳ್ಳುವಾಗ ಆ ನೋವಲ್ಲೂ ಹೊಸ ಜೀವವನ್ನು ಸ್ವಾಗತಿಸುವ ಉತ್ಸಾಹ ತಂದುಕೊಂಡು ತಾನೇ ನೀರು ಕಾಯಿಸಿ ಹೆರಿಗೆ ಕೋಣೆಯೊಳಗೆ ತಂದಿರಿಸಿದ್ದಳಂತೆ. ಆ ಸೂಲಗಿತ್ತಿಗೆ ಕಣ್ಣು ಕಾಣದೇ ಇದ್ದಿದ್ದರಿಂದ ಹೊರಬರುತ್ತಿದ್ದ ನನ್ನ ಹಿಡಿದುಕೊಳ್ಳಲು ಕಣ್ಣಿನ ಮೇಲೆ ಕೈ ಇಡುತ್ತಿದ್ದರೆ ಮುತ್ಯಾ ಅದನ್ನು ಗಮನಿಸಿ ಅವಳ ಕೈಗಳನ್ನು ಸರಿಸಿ, ತಾನೆ ನನ್ನನ್ನು ನಿಧಾನಕ್ಕೆ ಹಿಡಿದು ಹೊರಗೆ ತೆಗೆದಳಂತೆ. ‘ಇಲ್ಲದಿದ್ದರೆ ನಿನಗೆ ಸಮಸ್ಯೆಯಾಗಿ ಬಿಡುತ್ತಿತ್ತು’ ಮುತ್ಯಾನೆ ನನಗೆ ಇದನ್ನು ಹೇಳಿದ್ದಳು. ಬುದ್ಧಿ ಬಲಿಯಲಿಕ್ಕೆ ಆರಂಭವಾದ ಮೇಲೆ ನಾನು, ‘ಸರಿ ಬಿಡು ನೀನು ನನಗೆ ಕಣ್ಣು ಕೊಟ್ಟವಳಲ್ಲವಾ?’ ಎಂದು ಅವಳನ್ನು ರೇಗಿಸುತ್ತಿದ್ದೆ. ನಿಜ ಅವಳ ಅಸಂಖ್ಯ ಮರಿಮೊಮ್ಮಕ್ಕಳಲ್ಲಿ ನಾನು ಮೊದಲ ಮರಿಮೊಮ್ಮಗಳು. ಆದರೆ ನನಗೆ ಅವಳೊಬ್ಬಳೇ ಮುತ್ಯಾ.     

ಯಾಕೋ ಗೊತ್ತಿಲ್ಲ ಮುತ್ಯಾ ನನ್ನಲ್ಲಿ ಅವಳನ್ನು ಕಾಣಲು ಬಯಸುತ್ತಿದ್ದ ಹಾಗೇ ನಾನೂ ಅವಳಲ್ಲಿ ನನ್ನನ್ನು ಕಂಡುಕೊಳ್ಳಲು ಪ್ರಯ್ಯತ್ನಿಸುತ್ತಿದ್ದೆ. ಹಾಗಾಗೇ ಕೃಷ್ಣಪ್ಪ ಮುತ್ಯಾ ಸಾಯುವುದಕ್ಕೂ ಮುಂಚೆ ಅವಳಿಗೆ ದೀಪ ಹಚ್ಚುವುದರಲ್ಲಿ ಶ್ರದ್ಧೆ ಇತ್ತಾ? ಎಂದರೆ ನನಗೆ ಈಗಲೂ ಇರಲಿಲ್ಲ ಎಂತಲೇ ಅನ್ನಿಸುತ್ತದೆ. ನನಗೆ ಬಲವಾಗಿ ಗೊತ್ತು ಮಕ್ಕಳು ಮರಿಗಳ ಹೊಟ್ಟೆಯೇ ಅವಳ ಆಧ್ಯಾತ್ಮ. ಅದಕ್ಕಾಗೇ ಅವಳಿಗೆ ಧ್ಯಾನದಲ್ಲಿ ಗಾಢವಾಗಿ ನಂಬಿಕೆ. ತನ್ನ ಕೊನೆಯ ಉಸಿರಿನ ತನಕ ಪ್ರಾರ್ಥಿಸುತ್ತಲೇ ಇದ್ದಳು, ತನಗಾಗಿ ಅಲ್ಲ, ‘ಈ ಜಗತ್ತಿಗೆ ಒಳಿತಾಗಲಿ’ ಎಂದು. ಆಚರಣೆಗಳಿಲ್ಲದ ಅವಳ ಧ್ಯಾನದಲ್ಲಿನ ಕಾರುಣ್ಯ ಈಗಲೂ ಕೆನೆಗಟ್ಟಿ ತೇಲುತ್ತಲೇ ಇದೆ.         
ಈ ಅಂಕಣದ ಹಿಂದಿನ ಬರೆಹಗಳು:
ಅನುಬಂಧಗಳ ಲೀಲೆ

ಕನಸಿನೊಳಗಿನ ನನಸು
ನೀಲಿ ಕಣ್ಣುಗಳ ಮುತ್ತಜ್ಜಿ ಮತ್ತು ನಾನು                                 


 

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...