ಬೇಂದ್ರೆ ಅನುವಾದಗಳ ಅನುಸಂಧಾನ

Date: 06-02-2021

Location: .


ತೀಕ್ಷ್ಣ ವಿಶ್ಲೇಷಣೆಯ ಮೂಲಕ ಸಾಹಿತ್ಯಲೋಕದಲ್ಲಿಯ ಭಾಷಾಂತರ ಇತಿಹಾಸವನ್ನು ಪರಿಚಯಿಸುವ ಲೇಖಕಿ ಆರ್. ತಾರಿಣಿ ಶುಭದಾಯಿನಿ ಅವರು ಈ ಬಾರಿಯ ತಮ್ಮ ಅಂಕಣ ‘ಅಕ್ಷರ ಸಖ್ಯ’ದಲ್ಲಿ ಪದಗಾರುಡಿಗ ದ.ರಾ. ಬೇಂದ್ರೆ ಅವರ ಭಾಷಾಂತರದ ಬಗೆಗಿನ ಧೋರಣೆ ಹಾಗೂ ಅನುವಾದಗಳ ಕುರಿತು ಬೆಳಕು ಚೆಲ್ಲಿದ್ದಾರೆ.

ಬೇಂದ್ರೆ ಅವರ ಹತ್ತಾರು ಸೃಜನಶೀಲ ಅವತಾರಗಳಲ್ಲಿ ಅನುವಾದಕನ ಪಾತ್ರವೂ ಒಂದು. ಬೇಂದ್ರೆಯವರು ಪ್ರತಿನಿಧಿಸಿದ ನವೋದಯ ಪಂಥದ ಲಕ್ಷಣವೆಂದರೆ ಸಾಹಿತ್ಯದ ವಿರಾಟ್ ಸ್ವರೂಪವನ್ನು ಆವಾಹಿಸಿಕೊಂಡು ಎಲ್ಲ ಪ್ರಕಾರಗಳಲ್ಲಿಯೂ ತೊಡಗಿಸಿಕೊಳ್ಳುವುದು. ಇದಕ್ಕೆ ಬೇಂದ್ರೆಯವರು ಕೂಡ ಹೊರತಾಗಿರಲಿಲ್ಲ. ತಮ್ಮ ಸಮಕಾಲೀನರಂತೆ ಬೇಂದ್ರೆ ಕೂಡ ಸಾಹಿತ್ಯದ ಹಲವು ಪ್ರಕಾರಗಳಾದ ನಾಟಕ, ಕಾದಂಬರಿ, ಕತೆ, ಸಂಶೋಧನೆ, ವಿಮರ್ಶೆ ಹೀಗೆ ಬಹುವಿಧವಾದ ಬರವಣಿಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಎಲ್ಲ ಪ್ರಕಾರಗಳಲ್ಲಿಯೂ ಬೇಂದ್ರೆ ಛಾಪು ಮೂಡಿದೆ ಎಂದು ಹೇಳಲಾಗದಿದ್ದರೂ ಬೇಂದ್ರೆಯವರ ಅನುವಾದದ ಪ್ರಯತ್ನಗಳು ಒಟ್ಟಂದದಲ್ಲಿ, ಬರಹಗಾರ ಬೇಂದ್ರೆಯ ವ್ಯಕ್ತಿತ್ವವನ್ನು ಕಟ್ಟಿಕೊಡುವುದರಲ್ಲಿ ಯಶಸ್ವಿಯಾದವು. ಬೇಂದ್ರೆಯವರ ಭಾಷಾಂತರದ ಬಗೆಗೆ ಹೇಳುವುದಾದರೆ ಬೇಂದ್ರೆಯವರಿಗಿದ್ದ ಹಲವು ಭಾಷೆಗಳ ಪರಿಚಯ ಹಾಗೂ ಅವರು ಸಾಹಿತಿಯಾಗಿ ಅನೇಕ ಭಾಷೆಗಳೊಡನೆ ಏರ್ಪಡಿಸಿಕೊಂಡ ಅನುಸಂಧಾನಗಳು ಅವರನ್ನು ಒಬ್ಬ ಅನುವಾದಕರನ್ನಾಗಿ ತಯಾರು ಮಾಡಿದವು. ಸ್ವತಃ ಬೇಂದ್ರೆ ಅವರಿಗಿದ್ದ ತಾತ್ವಿಕ ಆಸಕ್ತಿಗಳು ಅವರನ್ನು ಅನುವಾದಕರನ್ನಾಗಿಸುವುದಕ್ಕೆ ಪ್ರೇರೇಪಿಸಿದವು ಎಂದು ಊಹಿಸಬಹುದು.
ಭಾಷಾಂತರ ಎನ್ನುವುದು ವೈಯಕ್ತಿಕವಾದ ನೆಲೆಗಟ್ಟಿನಲ್ಲಿ ಭಾಷಾಂತರಕಾರನ ಆಸಕ್ತಿ, ಅಭಿರುಚಿಗಳನ್ನು ನೆಚ್ಚಿರುತ್ತದೆ ಎನ್ನುವುದು ಬಹುಮಟ್ಟಿಗೆ ನಿಜವಾದರೂ, ಅದರ ಹಿಂದೆ ಸಾಮುದಾಯಿಕವಾಗಿ ಕೆಲವು ಸಂಸ್ಕೃತಿಗಳನ್ನು ಎದುರುಗೊಳ್ಳುವ ಮೂಲಕ ಕಂಡುಕೊಳ್ಳಬಹುದಾದ ಒಳನೋಟಗಳನ್ನು ಪ್ರಸ್ತುತಪಡಿಸುವ ಜವಾಬ್ದಾರಿಯಿರುತ್ತದೆ. ಸಾಮಾನ್ಯವಾಗಿ ವೈಯಕ್ತಿಕ ಭಾಷಾಂತರಗಳು ತಾವು ಓದಿದ್ದನ್ನು ಇನ್ನೊಬ್ಬರಿಗೆ ತಲುಪಿಸಬೇಕೆನ್ನುವ ತಹತಹದಿಂದ ಕೂಡಿರುವಂತವು. ವೃತ್ತಿಪರವಾಗಿ ಮಾಡುವ ಭಾಷಾಂತರಗಳು ತಳೆಯುವ ಭಾಷಾಂತರದ ಧೋರಣೆಗಳು ಹೊಂದಿರುವ ಖಚಿತವಾದ ನಿಲುವನ್ನು ವೈಯಕ್ತಿಕ ಭಾಷಾಂತರಗಳಲ್ಲಿ ಕಾಣುವುದು ಸಾಧ್ಯವಾಗುವುದಿಲ್ಲ. ಬೇಂದ್ರೆಯವರು ಒಬ್ಬ ಭಾಷಾಂತರಕಾರರಾಗಿ ಹೊರಹೊಮ್ಮಿದ್ದರಲ್ಲಿ ಈ ಎರಡೂ ಬಗೆಯ ಪ್ರೇರಣೆಗಳು ಕಾರಣವಾಗಿವೆ. ಬೇಂದ್ರೆ ಮರಾಠಿ-ಕನ್ನಡ ಬಲ್ಲ ದ್ವಿಭಾಷಿಕರೂ ತಮ್ಮ ಹುಟ್ಟು, ಕೌಟುಂಬಿಕ ಹಿನ್ನೆಲೆಯ ಸಾಂಸ್ಕೃತಿಕ ಕಾರಣಗಳಿಂದ ಕಲಿತ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳ ಕಾರಣದಿಂದ ಆ ಎಲ್ಲ ಭಾಷೆಗಳ ಸಾಹಿತ್ಯದ ಒಡನಾಟ ಹೊಂದಿದ್ದರು. ಬರಹಗಾರರಾಗಿದ್ದ ಕಾರಣ ಅವರಿಗೆ ಈ ಎಲ್ಲ ಭಾಷೆಗಳ ಸಾಹಿತ್ಯಗಳನ್ನು ಓದುವುದು, ಅನುಸಂಧಾನ ಮಾಡುವುದು ಆಸಕ್ತಿದಾಯಕ ವಿಷಯವೇ ಆಗಿತ್ತು. ಈ ನಿಟ್ಟಿನಲ್ಲಿ ಬೇಂದ್ರೆ ತಮ್ಮ ಆಸಕ್ತಿಗಳನ್ನು ವಿಸ್ತರಿಸಿಕೊಳ್ಳುವುದಕ್ಕಾಗಿಯೇ ಭಾಷಾಂತರಗಳನ್ನು ಮಾಡಿದರು. ಇದರ ಫಲವಾಗಿ ಕಾಳಿದಾಸನ ಮೇಘದೂತ, ಜ್ಞಾನೇಶ್ವರರ ಜ್ಞಾನೇಶ್ಚರಿಯ ಕೆಲವು ಭಾಗಗಳು, ಚೀನಾದ ಸಣ್ಣಕತೆಗಳು, ಇಂಗ್ಲಿಷಿನ ಕವಿತೆಗಳು, ಅರವಿಂದರ ಸಾಹಿತ್ಯ ಮತ್ತು ಆಧ್ಯಾತ್ಮಿಕ ಬರವಣಿಗೆಗಳ ಬಹುಭಾಗವನ್ನು ತಮ್ಮ ಸಾಹಿತ್ಯೋದ್ಯೋಗದಂತೆಯೇ ಭಾವಿಸಿ ಭಾಷಾಂತರ ಮಾಡಿದ್ದಾರೆ. ಈ ಭಾಷಾಂತರಗಳ ವೈಖರಿ ಒಂದು ಬಗೆಯದಾದರೆ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಮಾಡಿದ ಭಾಷಾಂತರಗಳು, ಪತ್ರಿಕೆಗಳಿಗಾಗಿ/ಭಾಷಣಗಳಿಗಾಗಿ ಮಾಡಿದ ಭಾಷಾಂತರಗಳು ಬೇಂದ್ರೆಯವರ ಭಾಷಾಂತರದ ಇನ್ನೊಂದು ಬಗೆಯನ್ನು ತೆರೆದಿಡುತ್ತವೆ. ಸಾಂಸ್ಥಿಕವಾದ ಭಾಷಾಂತರಗಳ ಹಿಂದೆ ಒಂದು ಉದ್ದೇಶ, ಸಾಂಸ್ಕೃತಿಕ ನೀತಿಗಳು ಇರುವುದರಿಂದ ಅದಕ್ಕೆ ಅನುಗುಣವಾಗಿ ಭಾಷಾಂತರಕಾರರು ಕೆಲಸ ಮಾಡುವುದು ಸಹಜವಾದ ಅಪೇಕ್ಷೆ. ಇಲ್ಲಿ ಭಾಷಾಂತರಕಾರರೂ ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡುವುದರಿಂದ ಅವರ ಭಾಷಾಂತರಗಳು ನಿಯಂತ್ರಿತ ವಾತಾವರಣದಲ್ಲಿ ಮೂಡುತ್ತವೆ. ಬೇಂದ್ರೆ ಈ ಎರಡೂ ನೆಲೆಗಳಲ್ಲಿ ಕೆಲಸ ಮಾಡಿದ ಭಾಷಾಂತರಕಾರರು. ಹಾಗೆಂದೇ ಅವರ ಭಾಷಾಂತರಗಳಲ್ಲಿ ಅನೇಕ ಪ್ರವೃತ್ತಿಗಳನ್ನು ಗುರುತಿಸಬಹುದು.
ಬೇಂದ್ರೆ ಬರವಣಿಗೆಯ ಕಾಲದಲ್ಲಿ ನವೋದಯ ಪಂಥವು ಇತ್ತು ನವೋದಯಕ್ಕೂ ಭಾಷಾಂತರಕ್ಕೂ ಒಂದು ಒಸಗೆಯಿದೆ. ಭಾಷೆಯ ಬೆಳವಣಿಗೆ ಸಾಂಸ್ಕೃತಿಕವಾಗಿ ನುಡಿಯೊಂದನ್ನು ಕಟ್ಟಿಕೊಳ್ಳಬೇಕಾದ ಅಗತ್ಯ, ಕನ್ನಡನಾಡಿನ ಏಕೀಕರಣಗಳು ಭಾಷಾಂತರ ಚಟುವಟಿಕೆಗಳನ್ನು ಮಾಡಲು ಪ್ರೇರೇಪಿಸುತ್ತಿದ್ದವು. ಕನ್ನಡ ಮಾತು ತಲೆಯೆತ್ತಲು ಬೇಕಾದ ಪರಿಕರಗಳನ್ನು ಅಗತ್ಯ ಬಿದ್ದರೆ ಇತರೆ ಭಾಷೆಗಳಿಂದ ಪಡೆದುಕೊಂಡಾದರೂ ನಮ್ಮ ನುಡಿಯನ್ನು ಕಟ್ಟಿಕೊಳ್ಳಬೇಕೆಂಬ ಧೋರಣೆಯು ಭಾಷಾಂತರಕ್ಕೆ ಪ್ರೋತ್ಸಾಹವನ್ನೇ ನೀಡಿತು. ಆಗ ಭಾಷಾಂತರ ಎಂದರೆ ಮೇಲ್ನೋಟಕ್ಕೆ ಇರುವ ಅರ್ಥಕ್ಕಿಂತ ವಿಸ್ತಾರವಾದ ವ್ಯಾಪ್ತಿ ಇತ್ತು. ಭಾಷಾಂತರ ಎನ್ನುವುದು ಪದಶಃ ಎನ್ನುವುದರಿಂದ ಹಿಡಿದು ರೂಪಾಂತರ, ಭಾವಪ್ರೇರಣೆಯ ತನಕ ವಿಸ್ತರಿಸಿಕೊಂಡಿದ್ದ ಚಟುವಟಿಕೆಯಾಗಿತ್ತು (ಬೇಂದ್ರೆಯವರೂ ಸೇರಿದಂತೆ ಅನೇಕ ಕವಿಗಳು ತಾವು ಪಡೆದ ಪ್ರೇರಣೆಗಳನ್ನು ಪದ್ಯ ಅಡಿ ಟಿಪ್ಪಣಿಯಲ್ಲಿ ಉಲ್ಲೇಖಿಸುತ್ತಿದ್ದರು ಅಥವಾ ತಾವು ಮಾಡಿರುವುದು ಮೂಲಕವಿತೆಯ ಭಾವಾನುವಾದ ಎನ್ನುವ ನಿವೇದನೆಯನ್ನು ಮಾಡಿರುತ್ತಿದ್ದರು). ಹೀಗೆ ಭಾಷಾಂತರದ ವ್ಯಾಪ್ತಿಯು ವಿಸ್ತೃತವಾಗಿದ್ದುದರಿಂದ ಭಾಷಾಂತರದ ಸಾಂಪ್ರದಾಯಿಕ ಅರ್ಥದಲ್ಲಿ ವಿವರಿಸಿಕೊಳ್ಳುವುದು ಭಾಷಾಂತರದ ಕ್ರಿಯಾಶೀಲತೆಯನ್ನು ಮೊಟಕುಗೊಳಿಸಿದಂತೆ. ಕನ್ನಡದ ಸಂದರ್ಭದಲ್ಲಂತೂ ಭಾಷಾಂತರ ಎನ್ನುವುದು ನವೋದಯ ಕಾಲದ ಮೌಲ್ಯವಿವೇಚನೆಯ ಕ್ರಿಯಾಶೀಲ ಚಟುವಟಿಕೆಯಾಗಿತ್ತು. ಮುಖ್ಯವಾಗಿ ತನ್ನ ತಾ ತಿಳಿವ ಸಂಶೋಧನೆಯ ಕೆಲಸವಾಗಿತ್ತು. ಈ ಹಿನ್ನೆಲೆಯಲ್ಲಿ ಬೇಂದ್ರೆಯವರ ಭಾಷಾಂತರಗಳನ್ನು ಗಮನಿಸಬೇಕು.
ಬೇಂದ್ರೆಯವರು ಅನುವಾದದತ್ತ ಹೊರಳುವುದಕ್ಕೆ ಅವರಿಗಿದ್ದ ಜ್ಞಾನಾಸಕ್ತಿ ಮುಖ್ಯ ಕಾರಣ. ಅಲ್ಲದೆ ಇತರೆ ಭಾಷಿಕ ಸಾಹಿತ್ಯಾನುಸಂಧಾನದಿಂದ ದೊರೆಯುವ ತಿಳಿವಳಿಕೆ ತಮ್ಮ ಸೃಜನಶೀಲ ಸಾಹಿತ್ಯದ ಜಿನುಗುಹಳ್ಳಗಳು ಎಂದು ಬೇಂದ್ರೆ ನಂಬಿದ್ದರು. ಬೇಂದ್ರೆಯವರಿಗಿದ್ದ ತತ್ವಶಾಸ್ತ್ರೀಯ ಆಸಕ್ತಿ ತತ್ಸಂಬಂಧವಾದ ಜ್ಞಾನಧಾರೆಗಳನ್ನು ಶೋಧಿಸಿಕೊಳ್ಳುವುದಕ್ಕೆ ಪ್ರೇರೇಪಿಸಿದಂತೆ ತೋರುತ್ತದೆ. ಆದಕಾರಣ ಅವರು ಉಪನಿಷತ್, ದತ್ತ ಹಾಗೂ ಅವಧೂತ ಪರಂಪರೆಯ ಧಾರೆಗಳು, ಭಕ್ತಿ ಪರಂಪರೆ, ಭಾರತೀಯ ತತ್ವಗಳಾಧಾರಿತವಾದ ಅರವಿಂದ, ಶ್ರೀಮಾತಾ(ಮದರ್) ಅವರ ತತ್ವಗಳು/ದರ್ಶನಗಳು ಬೇಂದ್ರೆಯವರನ್ನು ತೀವ್ರವಾಗಿ ಪ್ರಭಾವಿಸಿವೆ. ಅವುಗಳನ್ನು ಕನ್ನಡಿಸಿಕೊಳ್ಳುವ ಮೂಲಕ ಒಂದು ಆಲೋಚನಾ ಕ್ರಮವನ್ನು ರೂಢಿಸಿಕೊಳ್ಳುವ ಆಶಯವಿತ್ತೆಂದು ಊಹಿಸಬಹುದು. ಈ ತತ್ವಗಳನ್ನು ಬೇಂದ್ರೆ ಭಾಷಾಂತರ ಮಾಡಿಕೊಳ್ಳುವುದು ಅನೇಕ ರೀತಿಗಳಲ್ಲಿ. ನೇರವಾದ ಭಾಷಾಂತರ, ಭಾವಾನುವಾದ, ಮರುಸೃಷ್ಟಿ ಹಾಗೂ ಸೃಜನಶೀಲ ಸೃಷ್ಟಿಗಳ ನೆಲೆಗಳಲ್ಲಿ ಅವರು ಭಾಷಾಂತರವನ್ನು ಮಾಡುತ್ತಾರೆ. ಹೀಗಾಗಿ ಭಾಷಾಂತರ ಎನ್ನುವುದು ಬೇಂದ್ರೆಯವರಲ್ಲಿ ನಿಷ್ಠುರವಾದ ವೃತ್ತಿಪರತೆಯಿಂದ ಕೂಡಿರುವಂತದ್ದಲ್ಲ. ಆದರೆ ಬೇಂದ್ರೆಯವರ ಸೃಜನೇತರ ಆಸಕ್ತಿಗಳಾದ ಪತ್ರಿಕಾ ಬರವಣಿಗೆ, ಭಾಷಣ. ಸಂಶೋಧನೆ ಇತ್ಯಾದಿ ಚಟುವಟಿಕೆಗಳು ಅವರನ್ನು ಅನೇಕ ಸಂದರ್ಭಗಳಲ್ಲಿ ಭಾಷಾಂತರಕಾರರನ್ನಾಗಿಸಿವೆ. ಅಲ್ಲದೆ, ಸ್ವತ: ಬರಹಗಾರರಾದ ಕಾರಣ ಜೀವನ ಮತ್ತು ಕಲೆಗಳ ಆಸಕ್ತಿ, ಸಮಗ್ರ ಮಾನವಾನುಭವದತ್ತ ತುಡಿತ ಇವು ಅವರನ್ನು ಭಾಷಾಂತರಕಾರರಾಗಲು ಪ್ರೇರೇಪಿಸಿದ ಇನ್ನಿತರ ಅಂಶಗಳು.
ಬೇಂದ್ರೆಯವರು ಬಹುಭಾಷಿಕ ಸಂಸ್ಕೃತಿಗೆ ತೆರೆದುಕೊಂಡವರು. ಬೇಂದ್ರೆಯವರ ಜೀವನದ ವಿವರಗಳನ್ನು ನೋಡಿದರೆ ಅವರ ಮನೆತನ ಮರಾಠಿ ಸೀಮೆಯಿಂದ ಹಿಡಿದು ಅಚ್ಚಗನ್ನಡದ ಪ್ರದೇಶಗಳಾದ ಗದಗ, ಧಾರವಾಡಗಳಲ್ಲಿ ಸಂಚರಿಸಿರುವುದು ಕಾಣುತ್ತದೆ. ಬೇಂದ್ರೆಯವರು ಮುಗುದ ಸೀಮೆ, ಧಾರವಾಡದ ಕಾಮನಕಟ್ಟೆ, ಸಾಧನಕೇರಿಗಳಲ್ಲಿದ್ದವರು. ಓದು ವಿದ್ಯಾಭ್ಯಾಸದ ಸಲುವಾಗಿ ಪೂನಾಗೆ ಹೋಗಿದ್ದವರು. ಹೀಗಾಗಿ, ಅವರಿಗೆ ಮರಾಠಿ ಮನೆತನದ ಮಾತಾಗಿ, ದೈವಿಕ ಶ್ರದ್ಧೆಗೆ ಕೀಲಿಕೈಯಾದ ಸಂಸ್ಕೃತಿ ಭಾಷೆಯಾಗಿ ಒದಗಿ ಬಂದಿದೆ. ವೈದಿಕ ಮನೆತನವಾದ ಕಾರಣ ಅವರಿಗೆ ಸಂಸ್ಕೃತದ ಪರಿಚಯವು ಬಾಲ್ಯದಿಂದಲೇ ಇತ್ತು. ಬೇಂದ್ರೆಯವರು ತಮ್ಮ ಬಿ.ಎ ಪದವಿಗಾಗಿ ಅಭ್ಯಾಸ ಮಾಡಿದ್ದು ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳನ್ನು. ಹೀಗೆ ಬಹುಭಾಷಿಕ ಸಾಹಿತ್ಯ, ಸಂಸ್ಕೃತಿಗಳಿಗೆ ತೆರೆದುಕೊಳ್ಳುವ ಅವಕಾಶ ಬೇಂದ್ರೆಯವರಿಗೆ ಒದಗಿ ಬಂದ ಕಾರಣದಿಂದ ಎಲ್ಲ ಭಾಷೆಗಳ ಅಂಗಳದಲ್ಲಿ ಕಾಲಿಡುವುದು ಸಾಧ್ಯವಾಯಿತು. ಮುಂದೆ ಭಾಷಾಂತರಕ್ಕೆ ಮುಖ್ಯವಾಗಿ ಬೇಕಾದ ಭಾಷಾವ್ಯುತ್ಪತ್ತಿಯು ದೊರಕಿತು. ಬೇಂದ್ರೆಯವರ ಭಾಷಾಂತರಕ್ಕೆ ಈ ಅಂಶವು ಮೂಲಸೆಲೆಯಾಗಿದೆ. ಇನ್ನೊಂದು ಮುಖ್ಯ ಅಂಶವೆಂದರೆ, ಬೇಂದ್ರೆ ತಮಗೆ ತಿಳಿದಿದ್ದ ಭಾಷೆಗಳಲ್ಲಿ ಸಹ ಬರವಣಿಗೆಯನ್ನು ಮಾಡಿದ್ದಾರೆ. ಎಷ್ಟೋ ಬಾರಿ ತಮ್ಮದೇ ಬರಹಗಳನ್ನು ಬೇರೊಂದು ಭಾಷೆಯಿಂದ ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ತಮ್ಮ ಮರಾಠಿ ಬರಹಗಳನ್ನು ಭಾಷಣದ ಸಲುವಾಗಿ ಭಾಷಾಂತರ ಮಾಡಿಕೊಂಡಿದ್ದಾರೆ. ಅವರು ಮರಾಠಿಯಲ್ಲಿ ಬರೆದ ಕವಿತೆಗಳು ಹೃದಯ ಗೀತ ಎಂಬ ಹೆಸರಿನಲ್ಲಿ ಭಾಷಾಂತರಗೊಂಡಿವೆ. ಕೆಲವನ್ನು ಸ್ವತ: ಕವಿಯೇ ಮಾಡಿದ್ದಾರೆ. ಎಲ್ಲೊ ಲಹರಿ ಬಂದಾಗ ಯಾವುದಾದರೂ ಕವಿತೆಯನ್ನು ತಮ್ಮ ಸಂವೇದನೆಗೆ ಒಗ್ಗಿಸಿಕೊಂಡು ಭಾವಾನುವಾದವನ್ನು ಸಹ ಮಾಡುತ್ತಾರೆ. ಈ ಎಲ್ಲ ಚಲನೆಗಳನ್ನು ಬೇಂದ್ರೆಯವರ ಭಾಷಾಂತರದ ಅನುಸಂಧಾನವೆಂದು ಗುರುತಿಸಬಹುದು.
ಭಾಷಾಂತರಗಳ ಬಗೆಗೆ ಬೇಂದ್ರೆಯವರಿಗೆ ಕೆಲವು ಸ್ಪಷ್ಟ ಅಭಿಪ್ರಾಯಗಳಿದ್ದವು. ತಾವೇನು ಮಾಡುತ್ತಿದ್ದೇವೆ ಎನ್ನುವುದು ಅವರಿಗೆ ಅರಿವಿದೆ. ಭಾಷಾಂತರದ ಬಗೆಗೆ ಅವರು ವ್ಯಕ್ತಪಡಿಸುವ ಕೆಲವು ಅಭಿಪ್ರಾಯಗಳನ್ನು ನೋಡಿದರೆ ಭಾಷಾಂತರದ ಬಗೆಗಿನ ಅವರ ಧೋರಣೆಯನ್ನು ತಿಳಿಯಬಹುದಾಗಿದೆ. ಅರವಿಂದರಿಗೆ ಸಂಬಂಧಿಸಿದಂತೆ ಬಂದ ಸಂಗ್ರಹ ಚೈತ್ಯಾಲಯ(1957). ಈ ಸಂಗ್ರಹಕ್ಕೆ ಮುನ್ನುಡಿ ಬರೆಯುತ್ತಾ ಬೇಂದ್ರೆ ಅನುವಾದದ ಬಗ್ಗೆ ವ್ಯಕ್ತ ಪಡಿಸುವ ಅಭಿಪ್ರಾಯಗಳು ಹೀಗಿವೆ; ಈ ಸಂಗ್ರಹದೊಳಗಿನ ಕವನಗಳು ಹೆಚ್ಚಾಗಿ ಭಾವಾನುವಾದಗಳು. ಅಂಥ ಭಾಷಾಂತರಗಳಲ್ಲ. ಈ ಅನುವಾದ ಎಷ್ಟೋ ಸಲ ಭಾಷಾಂತರ ಎನ್ನುವಷ್ಟು ನಿಕಟವಾಗಿದೆ. ಒಮ್ಮೊಮ್ಮೆ ಸ್ವತಂತ್ರ ಎನ್ನುವಂತೆ ಸ್ವಚ್ಛಂದಾನುವರ್ತಿಯಾಗಿದೆ. ಆದರೆ ಮೂಲದ ಪ್ರೇರಣೆಗೆ, ಸ್ವರೂಪಕ್ಕೆ ಚ್ಯುತಿ ಬರದಂತೆ ಇಲ್ಲಿಯ ಸಾಹಿತ್ಯ ರೂಪುಗೊಂಡಿದೆ ಎಂದು ನಾನು ಭಾವಿಸಿದ್ದೇನೆ. . ಕೃತಿಯು ರಸವತ್ತಾಗಬೇಕಾದರೆ ಭಾಷಾಂತರಕ್ಕಿಂತ ಭಾವಾನುವಾದವೇ ಲೇಸು. ಪ್ರೇರಣೆಯಿಂದುಂಟಾಗುವ ಪ್ರಾತಿಭ ನಿರ್ಮಿತಿಯೇ ಲೇಸು ಎಂದು ಶ್ರೀ ಅರವಿಂದರೇ ಪ್ರತಿಪಾದಿಸಿದ್ದಾರೆ. ಆ ಧೈರ್ಯದಿಂದಲೇ ನಾನು ಅಲ್ಲಲ್ಲಿ ಸ್ವಾಭಾವಿಕವಾಗಿ ಸ್ವಾತಂತ್ರ್ಯ ವಹಿಸಿದ್ದೇನೆ ಎಂದಿದ್ದಾರೆ (ಚೈತ್ಯಾಲಯ, ಪು.4). ಮುಂದುವರೆದಂತೆ, ಬೇಂದ್ರೆಯವರು ತಮ್ಮ ಅನುವಾದಗಳ ಏರಿಳಿತಗಳನ್ನು ಅರವಿಂದರ ಕೃತಿಗಳನ್ನು ಕನ್ನಡಕ್ಕೆ ತರುವಾಗ ಆಗಿವೆ ಎನ್ನುವುದನ್ನು ನಿವೇದಿಸಿಕೊಳ್ಳುತ್ತಾರೆ. ಶ್ರೀ ಅರವಿಂದರ ಸುನೀತಗಳನ್ನು ಕನ್ನಡಕ್ಕೆ ತರುವಾಗ ನಾನನುಭವಿಸಿದ ಸಹಜತೆ ಅವರ ಸಾವಿತ್ರಿಯ ಭಾಗಗಳನ್ನು ಮಾಡುವಾಗ ಅನುಭವಿಸುವುದು ಕಷ್ಟವಾಯಿತು. ವಿಫಲತೆಯ ಅನುಭವವೂ ಬಂದಿತು. ಆ ವಿಫಲತೆಯೂ ಕೃತಿ ನಿರ್ಮಾಣ ಸಮರ್ಥವಿದ್ದಿತು. ಆಗ ಬಂದ ಕೆಲ ಕೃತಿಗಳನ್ನು ನನ್ನ ಹೃದಯ ಸಮುದ್ರ ಸಂಗ್ರಹದಲ್ಲಿ ಸೇರಿಸಿದ್ದೇನೆ. ವಚನಗಳು ಎಂಬ ವಿಭಾಗದಲ್ಲಿ ಶ್ರೀ ಅರವಿಂದರ ಮತ್ತು ಮಾತೆಯವರ ಉಕ್ತಿಗಳನ್ನು ಸುಭಾಷಿತಗಳನ್ನಾಗಿ ಶ್ಲೋಕಗಳನ್ನಾಗಿ ವಿರಚಿಸಿದ್ದೇನೆ. ಅವುಗಳಿಂದ ಬುದ್ಧಿಗೂ ಭಾವಕ್ಕೂ ಒಂದು ಪುಷ್ಟಿ ಬಂದೀತೆಂದು ನಾನು ಎಣಿಸುತ್ತೇನೆ( ಚೈತ್ಯಾಲಯಕ್ಕೆ ಮುನ್ನುಡಿ, ಪು.4-5). ಬೇಂದ್ರೆಯವರೇ ಹೇಳಿಕೊಂಡಂತೆ ಸಾವಿತ್ರಿಯ ಅನುವಾದವು ಹಿಡಿಹಿಡಿದು ಸಾಗಿದಂತೆ ಕಂಡರೆ ಇನ್ನಿತರ ಕವಿತೆಗಳು ತಮ್ಮದೇ ಆದ ಕನ್ನಡದ ಓಘವನ್ನು ಪಡೆದುಕೊಂಡಿವೆ. ಬೇಂದ್ರೆಯವರಿಗೆ ಭಾಷಾಂತರದ ಅಡುಗೆ ಎಂದರೆ ಏನೆಂದು ತಿಳಿದಿತ್ತು ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಡ.
ಭಾಷಾಂತರದಲ್ಲಿ ವಹಿಸುವ ಸ್ವಾತಂತ್ರ್ಯದ ಬಗ್ಗೆ ಬೇಂದ್ರೆ ಖಚಿತವಾಗಿದ್ದರು. ರವೀಂದ್ರನಾಥ ಠಾಕೂರ್-ನೂರೊಂದು ಕವನ ಸಂಕಲನದ ಅರಿಕೆಯಲ್ಲಿ ಬೇಂದ್ರೆ ಹೀಗೆ ಬರೆಯುತ್ತಾರೆ; ಶ್ರೀ ರವೀಂದ್ರರು ಬಂಗಾಲಿಯಲ್ಲಿ ಬಳಸಿದ ಸ್ವಾತಂತ್ರ್ಯವನ್ನೇ ಕನ್ನಡದಲ್ಲಿಯೂ ಬಳಸಿದ್ದಾಗಿದೆ. ಈ ಅನುವಾದಗಳಲ್ಲಿ ಇದು ಮಖ್ಖಿಕಾಮಖ್ಖಿ ಪ್ರಾಮಾಣಿಕತೆ ಅಲ್ಲವೇ ಅಲ್ಲ. ಭಾವದಲ್ಲಿ ಜೀವಕಳೆ ಬರಬೇಕಾದರೆ ಸಂಗೀತದ ಸ್ವಚ್ಛಂದತೆ ಬೇಕು: ಪ್ರಾಣಾಯಮದ ಆಸನ ಬದ್ಧತೆ ಸರಿಹೋಗಲಾರದು. ಕಾಲಿದಾಸ, ಶೇಕ್ಸ್‌ಪಿಯರ್, ವಾಲ್ಮೀಕಿ ಇವರ ಕೃತಿಗಳ ಅನುವಾದಗಳಲ್ಲಿ ವೈವಿಧ್ಯ ಇದ್ದೇ ಇರುತ್ತದೆ. ರವೀಂದ್ರರ ಕೃತಿಗಳಿಗೂ ಅದು ತಪ್ಪಿದ್ದಲ್ಲ. ರವೀಂದ್ರರು ಅರ್ಧ ಶತಮಾನಕ್ಕೂ ಹೆಚ್ಚಿನ ಕಾಲದಲ್ಲಿ ಮಾಡಿದ ಪ್ರಯೋಗ ಪರಿಣಿತಿಯನ್ನು ಸರಾಸರಿಮನದ ಪಾಕಕ್ಕಿಳಿಸುವುದಕ್ಕಿಂತ, ಸಹೃದಯ ವಿದ್ಯಾರ್ಥಿಯು ಕೃತಿಗಳಿಗೆ ಪುನರ್ಜನ್ಮ ನೀಡುವುದು ಯಾವ ಗುರುವಿಗೂ ಸಮ್ಮತವೇ ಆದೀತು. ರವೀಂದ್ರ ಕಾವ್ಯರೀತಿಯ ಔಚಿತ್ಯವು ಚರ್ಚೆ ವಿಮರ್ಶೆಗೆ ಎಡೆಗೊಡುವಂತೆ ಕನ್ನಡ ಅನುವಾದ ಶೈಲಿಯೂ ಆದೀತು. ಆದರೆ ಎಲ್ಲಿಯೂ ಸಹೃದಯತೆ, ರಸಿಕತೆ, ತಾರತಮ್ಯದೃಷ್ಟಿ-ಬೇಕೇಬೇಕು. ಪದಾರ್ಥ ಭಾಷಾಂತರಗಳು ನಡೆದಾಗ ಅವುಗಳ ಅರ್ಥ ಸ್ವಾರಸ್ಯ ಕಡಿಮೆಯಾಗುತ್ತದೆಂದು ಬೇಂದ್ರೆಯವರು ಭಾವಿಸಿದ್ದರು. ಚೀನಾದ ಜನಪ್ರಿಯ ಕತೆಗಾರ ಪಾ-ಚಿನ್‌ನ ಕತೆ ನಾಯಿ ಜಗತ್ತಿನ ಅನೇಕ ಭಾಷೆಗಳಲ್ಲಿ ಭಾಷಾಂತರಗೊಂಡ ಕತೆ. ಇದನ್ನು ಕನ್ನಡದಲ್ಲಿ ಬೇಂದ್ರೆಯವರು ಅನುವಾದಿಸಿದ್ದಾರೆ. ಆಗ ಟಿಪ್ಪಣಿ ಬರೆಯುತ್ತಾ, ಈ ನಾಯಿ ಕತೆ ಅತ್ಯುತ್ತಮವಾದ ಕತೆ ಎಂದು ಚೀನೀಯರಿಂದ ಪರಿಗಣಿಸಲಾಗಿದೆ. ದುರ್ದೈವದಿಂದ ಈ ಭಾಷಾಂತರದಲ್ಲಿ ಅದಕ್ಕಿರುವ ಮೂಲದ ಒಗರು, ಶಕ್ತಿ, ರೂಪಕ ಚಮತ್ಕೃತಿ, ತಂತ್ರದ ಬಿಗುವು ಎಷ್ಟೋ ಕಡಿಮೆಯಾಗಿ, ಮೂಲ ಅರ್ಥದ ನೆರಳಾಗಿ ಬಂದಿರಬಹುದೇ ಹೊರತು, ಅದರ ಜೀವ ಜೀವಾಳದಲ್ಲಿರುವ ಭಾವಸಂಪತ್ತು, ಕಟು-ಮಧುರ-ವ್ಯಂಗ್ಯ ಹಾಸ್ಯ ಬಂದಿರಲಾರದು(ದ.ರಾ.ಬೇಂದ್ರೆ ಗದ್ಯಸಾಹಿತ್ಯ ಸಂಪುಟ-13, ಪು.283) ಎಂದು ಹೇಳುತ್ತಾರೆ.
ಬೇಂದ್ರೆಯವರ ಭಾಷಾಂತರಗಳಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಅವರು ಭಾಷಾಂತರಕ್ಕೆಂದು ಆಯ್ಕೆ ಮಾಡಿಕೊಳ್ಳುವ ಪಠ್ಯಗಳು ಜನಪ್ರಿಯವಾದ ಜಾಡಿಗೆ ಸೇರಿದುವಲ್ಲ. ಸಾಮಾನ್ಯವಾಗಿ ಭಾಷಾಂತರಗೊಳ್ಳುವ ಪಠ್ಯಗಳು ಪದೇ ಪದೆ ಆವರ್ತನಗೊಳ್ಳುತ್ತಾ ಇರುತ್ತವೆ. ಇದಕ್ಕೆ ಮುಖ್ಯವಾದ ಕಾರಣ ಅವುಗಳು ಭಾಷಾಂತರಕ್ಕೆ ಸುಲಭಗ್ರಾಹ್ಯವಾಗುವ ಪಠ್ಯಗಳಾಗಿರುತ್ತವೆ. ಭಾಷೆ ಮತ್ತು ಸಂಸ್ಕೃತಿಗಳು ಸಹ ಒಟ್ಟಾರೆ ಮಾನವಾನುಭವಗಳನ್ನು ಬಿಂಬಿಸುವಂತಿರುತ್ತವೆ. ಆದರೆ ಬೇಂದ್ರೆಯವರು ಈ ತರದ ಸಾಂಪ್ರದಾಯಿಕ ಆಯ್ಕೆಗಳತ್ತ ಆಸಕ್ತಿ ತೋರುವುದಿಲ್ಲ. ಅವರು ಮಾಡಿದ ಅನುವಾದಗಳನ್ನು ಗಮನಿಸಿದರೆ ಈ ಸಂಗತಿ ತಿಳಿಯುತ್ತದೆ. ಬೇಂದ್ರೆಯವರು ತಮಗೆ ಆಸಕ್ತಿಯಿರುವ ಲೇಖಕರನ್ನು ಭಾಷಾಂತರಕ್ಕೆ ಎತ್ತಿಕೊಳ್ಳುತ್ತಾರೆಯೇ ಹೊರತು ಭಾಷಾಂತರದ ಪ್ರಚಲಿತ ಯಾದಿಯಲ್ಲಿರುವ ಲೇಖಕರನ್ನಾಗಲೀ ಪಠ್ಯಗಳನ್ನಾಗಲೀ ಅಲ್ಲ. ಅವರು ಚೀನಾದ ಕತೆಗಳನ್ನೂ ಐರಿಷ್ ಕವಿ ಎ.ಇ ಅವರನ್ನು ಆಯ್ಕೆ ಮಾಡಿಕೊಂಡಿದ್ದೂ ತಕ್ಕ ಉದಾಹರಣೆಗಳು.
ಬೇಂದ್ರೆಯವರ ಭಾಷಾಂತರಗಳು ಮರಾಠಿ, ಸಂಸ್ಕೃತ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಂದ ಆಗಿವೆ. ಕಾವ್ಯ, ಕತೆ, ಲೇಖನಗಳು ಮುಂತಾದವು ಅವರು ಆಯ್ದುಕೊಂಡ ಪ್ರಕಾರಗಳು. ಬೇಂದ್ರೆಯವರು ಸ್ವತ: ಕವಿಯಾದುದರಿಂದ ಸಂಸ್ಕೃತ, ಇಂಗ್ಲಿಷ್ ಮತ್ತು ಮರಾಠಿ ಕಾವ್ಯಗಳನ್ನು ಅನುಸಂಧಾನ ಮಾಡಿದ್ದಾರೆ. ಈಗಾಗಲೇ ಹೇಳಿದಂತೆ ಈ ಕಾವ್ಯಗಳ ಭಾಷಾಂತರ/ಭಾವಾನುವಾದ/ಸೃಜನಸೃಷ್ಟಿಗಳನ್ನು ಮಾಡಿದ್ದಾರೆ. ಅಂತೆಯೇ ಗದ್ಯಲೇಖನಗಳು ಅವರ ಸಾಹಿತ್ಯಾಸಕ್ತಿ ಹಾಗೂ ಆಧ್ಯಾತ್ಮಿಕ ಆಸಕ್ತಿಗಳಿಗೆ ಪೂರಕವಾಗಿ ಭಾಷಾಂತರಗೊಂಡಿವೆ. ಇದರಲ್ಲಿ ಮುಖ್ಯವಾಗಿ ಉಪನಿಷತ್ ಕುರಿತ ಲೇಖನಗಳು, ಅರವಿಂದರ ಸಾಹಿತ್ಯ ಮತ್ತು ತತ್ವಗಳನ್ನಾಧರಿಸಿದ ಲೇಖ ಮತ್ತು ಪುನರ್ಲೇಖಗಳಿವೆ.
ಬೇಂದ್ರೆಯವರ ಅನುವಾದಿತ ಕೃತಿಗಳು(ಅಧಿಕೃತವಾಗಿ)ಇದರಲ್ಲಿ ಎರಡು ಭಾಗಗಳನ್ನಾಗಿ ಮಾಡಿಕೊಳ್ಳಬಹುದು-ಒಂದು, ಬೇಂದ್ರೆ ಸ್ವತ: ಅನುವಾದ ಮಾಡಿದ್ದು; ಇನ್ನೊಂದು, ಇತರರ ಜೊತೆಗೂಡಿ ಮಾಡಿದ್ದು. ಇದರಲ್ಲಿ ಮೊದಲನೆಯದು ಬೇಂದ್ರೆಯವರು ತಮ್ಮ ಆಸಕ್ತಿಗೆ ಬಂದ ಕೃತಿಗಳನ್ನು/ಪಠ್ಯಗಳನ್ನು ತಮ್ಮ ಅಭಿರುಚಿಗಾಗಿ ಮಾಡಿದ್ದು; ಎರಡನೆಯದು ಒಂದು ಸಾಹಿತ್ಯ ಮತ್ತು ನಾಡು-ನುಡಿಯ ಪರಂಪರೆಯ ತೇರನ್ನು ಎಳೆಯುವುದಕ್ಕಾಗಿ ಇತರರೊಡನೆ ಕೈಹಾಕಿದಂತದ್ದು. ಅವರ ಅನುವಾದಗಳನ್ನು ವಿಶ್ಲೇಷಿಸಬೇಕೆಂದರೆ ಈ ಎರಡೂ ಬಗೆಯ ಅನುವಾದಗಳನ್ನು ಬೇರೆ ಬೇರೆ ಆಯಾಮಗಳಲ್ಲಿ ಗ್ರಹಿಸಬೇಕಾಗುತ್ತದೆ.
ಬೇಂದ್ರೆಯವರು ಸಂಸ್ಕೃತ, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಹಾಗೆಯೇ ಕನ್ನಡದಿಂದ ಮರಾಠಿಗೆ ಅನುವಾದ ಮಾಡಿದ್ದಾರೆ. ಇವುಗಳಲ್ಲಿ ಬೇಂದ್ರೆಯವರೊಬ್ಬರೇ ಮಾಡಿದ ಅನುವಾದಗಳಲ್ಲಿ ಶ್ರೀ ಅರವಿಂದರು ಇಂಗ್ಲಿಷಿನಲ್ಲಿ ಬರೆದ The Indian Renaissance ಎನ್ನುವ ಕೃತಿ ಭಾರತೀಯ ನವಜನ್ಮ(1936) ಎಂಬುದಾಗಿ ಭಾಷಾಂತರಗೊಂಡಿದೆ. ಶ್ರೀ ಅರವಿಂದರ ಯೋಗ, ಆಶ್ರಮ ಮತ್ತು ತತ್ವೋಪದೇಶ(1947)ರಲ್ಲಿ ಪ್ರಕಟಗೊಂಡ ಸಣ್ಣ ಪುಸ್ತಿಕೆ. ಮರಾಠಿ ಕವಿ ಅನಿಲ ಅವರ ಕವನ ಸಂಗ್ರಹದ ಅನುವಾದ-ಭಗ್ನಮೂರ್ತಿ(1972)ವನ್ನು ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಮಾಡಿದ್ದಾರೆ. ಇವು ಕನ್ನಡಕ್ಕೆ ಮಾಡಿದ ಅನುವಾದಗಳಾದರೆ ಕನ್ನಡದಿಂದ ಮರಾಠಿಗೆ ಕೆ.ವಿ.ಅಯ್ಯರ್ ಅವರ ಶಾಂತಲಾ(1972) ಕೃತಿಯನ್ನು ಅನುವಾದಿಸಿದ್ದಾರೆ. ಇದಲ್ಲದೆ ಅರವಿಂದರ ಸಾವಿತ್ರಿಯ ಕೆಲಭಾಗಗಳು, ಅವರ ಸುನೀತಗಳು, ಜ್ಞಾನೇಶ್ವರಿಯ ಕೆಲ ಭಾಗಗಳು, ಕಾಳಿದಾಸನ ಮೇಘದೂತ, ಮರಾಠಿ ಸಂತ ಕವಿಗಳ ಕವಿತೆಗಳ ಭಾವಾನುವಾದಗಳೂ ಸೇರಿದಂತೆ ಹಲವಾರು ಅನುವಾದಗಳನ್ನು ಅವರು ಮಾಡಿದ್ದಾರೆ. ಇಂಗ್ಲಿಷಿನಿಂದ ಎಡ್ಗರ್ ಸ್ನೋ ಸಂಪಾದಿಸಿದ ಚೀನೀ ಕತೆಗಳಲ್ಲಿ ಕೆಲವನ್ನು ಆಯ್ದು ಚೀನಾದ ಬಾಳು ಬದುಕು(1996) ಎಂಬುದಾಗಿ ಭಾಷಾಂತರ ಮಾಡಿದ್ದಾರೆ.
ಬೇಂದ್ರೆಯವರು ಇತರರ ಜೊತೆಗೂಡಿ ಮಾಡಿದ ಅನುವಾದಗಳಲ್ಲಿ ಮುಖ್ಯವಾದವುಗಳೆಂದರೆ; ಉಪನಿಷತ್ ರಹಸ್ಯವು ಅಥವಾ ಭಾರತೀಯ ಅಧ್ಯಾತ್ಮ ಶಾಸ್ತ್ರ ಪೀಠಿಕೆಯು(1928). ಈ ಕೃತಿಯು ಆರ್.ಡಿ.ರಾನಡೆಯವರು ಇಂಗ್ಲಿಷಿನಲ್ಲಿ ಬರೆದ Constructive Survey of Upnishadic Philosophy ಕೃತಿಯ ಅನುವಾದ. ಇದನ್ನು ರಂ.ರಾ ದಿವಾಕರ, ಶಂಬಾ ಜೋಶಿಯವರ ಜೊತೆಗೂಡಿ ಬೇಂದ್ರೆಯವರು ಅನುವಾದಿಸಿದ್ದಾರೆ. ಹರಬನ್‌ಸಿಂಗ್ ಅವರ ಗುರುಗೋವಿಂದ ಸಿಂಗ್(1966) ಕೃತಿಯನ್ನು ವಾಮನ ಬೇಂದ್ರೆ, ಕೆ.ಎಸ್.ಶರ್ಮ ಅವರ ಜೊತೆಗೂಡಿ ಬೇಂದ್ರೆ ಅನುವಾದಿಸಿದ್ದಾರೆ. ಹುಮಾಯೂನ್ ಕಬೀರ್ ಹಿಂದಿಯಲ್ಲಿ ಮಾಡಿದ ರವೀಂದ್ರನಾಥ ಠಾಗೂರರ ನೂರೊಂದು ಕವನಗಳನ್ನು ಕನ್ನಡದಲ್ಲಿ ನಾರಾಯಣ ಸಂಗಮ ಅವರೊಂದಿಗೆ ಸೇರಿ ನೂರೊಂದು ಕವನ(1967)ಎಂಬುದಾಗಿ ಬೇಂದ್ರೆ ಅನುವಾದ ಮಾಡಿದ್ದಾರೆ. ಕಬೀರ ವಚನಾವಲಿ(1968) ಇದು ಗುರುನಾಥ ಜೋಶಿಯವರ ಜೊತೆಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಮಾಡಿದ ಅನುವಾದ.

ಕಾವ್ಯಾನುವಾದ
ಬೇಂದ್ರೆಯವರ ಕಾವ್ಯಾನುವಾದವು ಬೇರೆ ಬೇರೆ ಭಾಷೆಗಳ ಕಾವ್ಯಗಳ ಜೊತೆಗಿನ ಅನುಸಂಧಾನದ ಮಾಡಿದ ಫಲ. ಬೇಂದ್ರೆ ತಮ್ಮ ಕಾವ್ಯದ ಜಿನುಗುಹಳ್ಳಗಳಾಗಿ ಇವನ್ನು ನೋಡಿದ್ದರು. ಸಂಸ್ಕೃತ, ಮರಾಠಿ ಹಾಗೂ ಇಂಗ್ಲಿಷ್ ಕಾವ್ಯಗಳನ್ನು ವ್ಯಾಪಕವಾಗಿ ಅಭ್ಯಾಸ ಮಾಡಿದ್ದ ಬೇಂದ್ರೆಯವರು ಅನುವಾದವನ್ನು ಒಂದು ಸೃಜನಶೀಲ ನೆಲೆಗೆ ಒಯ್ದಿದ್ದು ಅವರ ಕಾವ್ಯದ ಅನುವಾದಗಳಲ್ಲಿಯೇ. ಅವರ ಕಾವ್ಯಾನುವಾದಗಳಲ್ಲಿ ಕಾಳಿದಾಸನ ಮೇಘದೂತವು ಗಮನಾರ್ಹ ಕೃತಿ. ಬೇಂದ್ರೆಯವರಲ್ಲಿ ಅದು ಕನ್ನಡದ ಮೇಘದೂತ. ದೂತಕಾವ್ಯಗಳನ್ನು ವಿಫುಲವಾಗಿ ಅಭ್ಯಾಸ ಮಾಡಿದ ಬೇಂದ್ರೆ ಕನ್ನಡದಲ್ಲಿ ಕಾಳಿದಾಸನ ಕಾವ್ಯವನ್ನು ಕಟ್ಟಿದರು. ಅದಕ್ಕೆ ಬೇಕಾದ ಛಂದಸ್ಸು ಮತ್ತು ಲಯಗಳನ್ನು ಕಟ್ಟಿಕೊಂಡರು. ಆದುದರಿಂದ ಅದು ಕನ್ನಡದ ಮೇಘದೂತವೆ. ಅದೊಂದು ಭಾಷಾಂತರದ ಉತ್ಕೃಷ್ಟ ಕೃತಿ ಎಂದು ಕರೆದರೂ ಅದನ್ನು ಮೇಘದೂತ ಭಾಷಾಂತರವಲ್ಲ; ಭಾವಗ್ರಹಣ ಎಂದು ಹೇಳಿಕೊಳ್ಳಲಾಗಿದೆ. ಆಮೂರರು ಗುರುತಿಸುವಂತೆ, ಮೇಘದೂತವೊಂದನ್ನೇ ಕನ್ನಡಕ್ಕೆ ಕೊಟ್ಟಿದ್ದರೂ ಭಾಷಾಂತರಕಾರರೆಂದು ಬೇಂದ್ರೆ ಹೆಸರು ಚಿರಸ್ಥಾಯಿಯಾಗುತ್ತಿತ್ತೆಂದು ಧಾರಾಳವಾಗಿ ಹೇಳಬಹುದು(ದತ್ತಾತ್ರೇಯ ರಾಮಚಂದ್ರ ಬೇಂದ್ರೆ, ಪು.109).
ಬೇಂದ್ರೆಯವರಿಗೆ ಕಾಳಿದಾಸ ಮೆಚ್ಚಿನ ಕವಿ. ಸಂಸ್ಕೃತ ಭಾಷೆಯ ಲಾಲಿತ್ಯವನ್ನು ಮೈದಳೆದ ಕಾಳಿದಾಸನ ಕಾವ್ಯವನ್ನು ಬೇಂದ್ರೆ ಅಭ್ಯಾಸ ಮಾಡಿದ್ದರು. ಕಾಳಿದಾಸನ ಮೇಘದೂತವನ್ನು ಕನ್ನಡಕ್ಕೆ ಅನುವಾದಿಸಲು ಆ ಕವಿಯ ಮನೋಧರ್ಮದ ಬಗೆಗೆ ಇರುವ ಸಮಾನತ್ವದ ಮನೋಧರ್ಮವೇ ಕಾರಣ. ಋತುಗಳ ಚಲನೆಯನ್ನು ಕಾವ್ಯದಲ್ಲಿ ಹಿಡಿದ ಕಾಳಿದಾಸನಿಗೆ ಸಾಟಿಯಾಗುವಂತೆ ಶ್ರಾವಣದಲ್ಲಿ ಮನಸಿಟ್ಟ ಈ ಕವಿ ಶ್ರಾವಣ ಮಾಸದಲ್ಲಿಯೇ ಈ ಕಾವ್ಯವನ್ನು ಆರಂಭಿಸಿದರು. ಬೇಂದ್ರೆಯವರ ಕಾವ್ಯದ ವೈಖರಿ ಹೀಗಿದೆ:
ಮಾತು ಜ್ಯೋತಿ, ಆ ಹುರುಳು-ಧೂಮ, ರಸ ಸಲಿಲ, ಭಾವ ಗಾಳಿ/
ಕವಿಯೊಳಾಗಿ ಕಟ್ಟಿತ್ತು ಕಾವ್ಯ ನವಮೇಘರೂಪ ತಾಳಿ//
ಸ್ಥಾಯಿ ಅಲ್ಲಿ ಸಂಚಾರದಲ್ಲಿ ರಸಪಾಕವಾಗಿ ಬಂತು
ಮೆರೆವ ಹಾಗೆ ಆ ಸುಟ್ಟ ಕಾಮ ಪ್ರದ್ಯುಮ್ನನಾಗಿ ನಿಂತು//
(ಕವಿಯ ಮೇಘ)
ಮೇಘದೂತದ ಈ ಅನುವಾದವನ್ನು ಕನ್ನಡ ಮೇಘದೂತ ಎಂಬುದಾಗಿ ಬೇಂದ್ರೆಯವರು ಕರೆದಿದ್ದಾರೆ. ಮೂಲ ಪಲುಕುಗಳು, ಕಾಳಿದಾಸನ ಮಾಧುರ್‍ಯವನ್ನೆಲ್ಲ ಕನ್ನಡದ ರಸದಲ್ಲಿ ಅದ್ದಿ ತೆಗೆದಂತಿದೆ ಬೇಂದ್ರೆಯವರ ಅನುವಾದ. ಪ್ರಕೃತಿ ಮತ್ತು ಪ್ರಣಯದ ಮಿಳಿತವನ್ನು ಹದಗೊಳಿಸಿ ಪುನರ್ಲೇಖ ಮಾಡುವುದು ಬೇಂದ್ರೆಯವರಿಗೆ ಸಾಧ್ಯವಾಗಿದೆ. ಕನ್ನಡ ಪೂರ್ವ ಮೇಘದೂತ ಮತ್ತು ಕನ್ನಡ ಉತ್ತರ ಮೇಘದೂತ ಎಂಬ ಭಾಗಗಳಲ್ಲಿ ಅನುವಾದವು ನಡೆದಿದೆ.
ಮರಾಠಿ ಕಾವ್ಯ ಬೇಂದ್ರೆಯವರಿಗೆ ಅನೇಕ ಬಗೆಯ ಪ್ರೇರಣೆಯನ್ನು ಒದಗಿಸಿತು. ಮರಾಠಿಯ ಭಕ್ತಿ ಸಾಹಿತ್ಯವು ಬೇಂದ್ರೆಯವರ ಮೇಲೆ ಬೀರಿದ ಪ್ರಭಾವ ಅಗಾಧವಾದುದು. ಭಕ್ತಿ ಮತ್ತು ಅನುಭಾವ ಸಾಹಿತ್ಯಗಳು ಬೇಂದ್ರೆಯವರು ಮೈಗೂಡಿಸಿಕೊಳ್ಳುತ್ತಿದ್ದ ತತ್ವಗಳಿಗೆ ಬೆಂಬಲ ನೀಡುತ್ತಿದ್ದವು. ಅಕ್ಕಲಕೋಟೆ ರಾಮದಾಸರು, ಗೊಂದಾವಲಿ ಬ್ರಹ್ಮಚೈತನ್ಯರು, ಹೆಬ್ಬಳ್ಳಿಯ ಬ್ರಹ್ಮಾನಂದರು, ಮೋರಾಪಂತರು, ಸಮರ್ಥ ರಾಮದಾಸರು ಅವಧೂತ ಪರಂಪರೆಯ ತಾತ್ವಿಕತೆಗಳ ದರ್ಶನಗಳನ್ನು ಬೇಂದ್ರೆ ಕಂಡುಕೊಂಡಿದ್ದರು. ಬೇಂದ್ರೆಯವರು ತಮ್ಮ ದರ್ಶನಗಳನ್ನು ವೈದಿಕ ಮೂಲಗಳಿಂದ ಹೇಗೆ ತೆಗೆದುಕೊಳ್ಳುತ್ತಿದ್ದರೋ ಹಾಗೆ ತಾವು ಮಿಡಿಯುತ್ತಿರುವ ಪರಂಪರೆಗೆ ಸಾಟಿಯಾಗಬಲ್ಲ ದರ್ಶನಧಾರೆಗಳನ್ನೆಲ್ಲ ಅವರು ಅನುಸಂಧಾನ ಮಾಡುತ್ತಿದ್ದರು. ದತ್ತ ಪರಂಪರೆ ಅಂತದ್ದರಲ್ಲಿ ಒಂದು-ಅವರು ವೈದಿಕ ಮಾರ್ಗದ ಮೂಲಕ ದತ್ತದರ್ಶನವನ್ನು ಅನುಸರಿಸುತ್ತಿದ್ದರು. ಶಂಕರ ಪರಂಪರೆಯ ಶಕ್ತಿ ಆರಾಧನೆಯನ್ನು ನೆಚ್ಚಿದ್ದರು.
ಮರಾಠಿ ಸಂತಕವಿ ಸಮರ್ಥ ರಾಮದಾಸರ ದಾಸಬೋಧ ಗ್ರಂಥವು ಬೇಂದ್ರೆಯವರಿಗೆ ಪ್ರಿಯವಾದ ಪುಸ್ತಕವಾಗಿದ್ದು ಅದನ್ನು ಅವರು ಮತ್ತೆ ಮತ್ತೆ ಓದುತ್ತಿದ್ದರೆನ್ನಲಾಗಿದೆ. ಕನ್ನಡ ಮತ್ತು ಮರಾಠಿಗಳೆರಡರಲ್ಲಿಯೂ ರಾಮದಾಸರ ಈ ಗ್ರಂಥ ಪಾರಾಯಣ ಗ್ರಂಥವಾಗಿದ್ದು ಈ ಜನಪ್ರಿಯ ಕೃತಿಯ ಆರಂಭದ ಸರಸ್ವತಿ ಸ್ತುತಿಯನ್ನು ಬೇಂದ್ರೆಯವರು ಶಬ್ದ ಶಕ್ತಿ ಸರಸ್ವತಿ ಎಂಬ ಹೆಸರಿನಲ್ಲಿ ಭಾವಾನುವಾದ ಮಾಡಿದ್ದಾರೆ (ಉದಾಹರಣೆಗೆ ಈ ಸಾಲುಗಳನ್ನು ನೋಡಬಹುದು: ಯಾವುದು ಸೂಕ್ಷ್ಮ ವಸ್ತುವಿನ ಶುದ್ಧಿ/ನೆಪಮಾತ್ರದ ನೆನಪಾಗಿ ಇರುವುದೊ-ಶಬ್ದಶಕ್ತಿ-ಸರಸ್ವತೀ!).
ಮೋರೋಪಂತರ(1729-1794) ಸಂಶಯ ರತ್ನಮಾಲೆ ಕಾವ್ಯದಲ್ಲಿಯ ಕೆಲವು ನುಡಿಗಳನ್ನು ಬೇಂದ್ರೆಯವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ಮಾಡುವ ಸಲುವಾಗಿ ಮಾಡಿಕೊಂಡ ಭಾವಾನುವಾದ ಇದು. ಭಕ್ತನೊಬ್ಬ ತನ್ನನ್ನು ಸಂಸಾರದಿಂದ ಕಾಪಾಡು ಎಂದು ಕೇಳಿಕೊಳ್ಳುವ ಪದ್ಯಗಳಿವು. ಇವನ್ನು ಬೇಂದ್ರೆ ಸಮರ್ಥವಾಗಿ ಅನುವಾದಿಸಿದ್ದಾರೆ. ಹಾಗೆಯೇ ಮೋರೋಪಂತರ ಕೇಕಾವಲಿಯನ್ನು ಬೇಂದ್ರೆ ಕನ್ನಡದಲ್ಲಿ ಪುನ: ಸೃಷ್ಟಿ ಮಾಡುತ್ತಾರೆ. ಇದು ಕೃಷ್ಣಸ್ತುತಿಯಾಗಿದ್ದು ಇದರಲ್ಲಿಯೂ ಸಂಸಾರದಿಂದ ದಾಟಿಸುವ ಕರುಣಾಮಯಿ ದೇವನ ಕುರಿತ ರಚನೆಗಳಿವೆ.
ಬೇಂದ್ರೆಯವರಿಗಿದ್ದ ಮರಾಠಿ ಸಂತ/ಭಕ್ತರ ತಿಳಿವಳಿಕೆಯ ಪರಿಣಾಮವಾಗಿ ಅವರು ಅನೇಕರನ್ನು ಕುರಿತು ಪದ್ಯ ಬರೆಯುತ್ತಾರೆ; ಅನೇಕ ಬಾರಿ ಅವರ ಕವಿತೆಗಳನ್ನು ಭಾವಾನುವಾದ ಮಾಡುತ್ತಾರೆ. ಇದನ್ನು ಅವರು ಅನುವಾದ ಎನ್ನುವುದಕ್ಕಿಂತ ತಾವು ಅರಗಿಸಿಕೊಂಡ ಸತ್ವದ ಸೃಷ್ಟಿ; ಕಾವ್ಯಸೃಷ್ಟಿಯ ಇನ್ನೊಂದು ಆಯಾಮ ಎಂದು ಭಾವಿಸಿದ್ದರು ಎನ್ನಿಸುತ್ತದೆ. ಮರಾಠಿಯ ಓವಿಯನ್ನು ಕನ್ನಡದಲ್ಲಿ ಪುರ್ನಸೃಷ್ಟಿ ಮಾಡುವುದಕ್ಕೆ ಅವರಿಗೆ ತೊಡಕೆನಿಸುವುದಿಲ್ಲ. ಚಾಂಗದೇವ ಎಂಬ ಮರಾಠಿ ಸಂತ ಜ್ಞಾನದೇವನಿಗೆ ನಮಸ್ಕಾರ ಮಾಡುವುದೊ ಆಶೀರ್ವಾದ ಮಾಡುವುದೊ ಎಂದು ತಿಳಿಯದೆ ಬಿಳಿಹಾಳೆಯನ್ನು ಕಳುಹಿಸಿಕೊಟ್ಟಿದ್ದರಂತೆ. ಅದಕ್ಕೆ ಮಿಡಿದ ಜ್ಞಾನದೇವ ಉತ್ತರರೂಪವಾಗಿ ಅರವತ್ತೈದು ಪಾಸಪ್ಟಿಗಳನ್ನು ಬರೆದು ಕಳುಹಿಸಿದನಂತೆ. ಈ ಅರವತ್ತೈದು ಪಾಸಪ್ಟಿಗಳು ಓವಿ ಛಂದಸ್ಸಿನಲ್ಲಿದ್ದು ಅವನ್ನು ಬೇಂದ್ರೆ ಕನ್ನಡಕ್ಕೆ ಚಾಂಗದೇವ ಪಾಸಪ್ಪಿ ಎಂದು ಅನುವಾದಿಸಿದ್ದಾರೆ. ಇದೊಂದು ಸ್ವಸ್ತಿ ಕವಿತೆಗಳು. ಸರ್ವಜ್ಞ ಕವಿಯ ತ್ರಿಪದಿಗಳಂತೆ ಇರುವಂತಹ ಪಾರಮಾರ್ಥಿಕ ಪದ್ಯಗಳು. ಇವನ್ನು ಬೇಂದ್ರೆಯವರು ಅನುವಾದಕ್ಕೆ ಆಯ್ಕೆ ಮಾಡಿಕೊಂಡಿರುವುದು ವಿಶೇಷ.
ಮರಾಠಿಯ ಜ್ಞಾನೇಶ್ವರಿಯು ಬೇಂದ್ರೆಯವರಿಗೆ ತಮ್ಮ ಅರಿವಿನ ಹಾದಿಗೆ ಒದಗಿದ ಕೈದೀವಿಗೆ ಎಂದೇ ಅನ್ನಿಸಿರಬೇಕು. ಜ್ಞಾನೇಶ್ವರರು ಬರೆದ ಜ್ಞಾನೇಶ್ವರಿ ಬಗೆಗೆ ಮರಾಠಿ ಭಾಷಿಕರಿಗೆ ಇರುವ ಅತೀವವಾದ ಶ್ರದ್ಧೆ, ವಾರಕರಿ ಸಂಪ್ರದಾಯದ ಬಗೆಗೆ ಇರುವ ಸಾಂಪ್ರದಾಯಿಕ ಭಾವನೆಗಳು ಬೇಂದ್ರೆಯವರಲ್ಲೂ ಇವೆ. ಭಗವದ್ಗೀತೆಯ ಬಗ್ಗೆ ಮಾಡಿರುವ ತಾತ್ವಿಕ ಟೀಕಿನ ದರ್ಶನವನ್ನು ಕನ್ನಡದಲ್ಲಿ ಬೇಂದ್ರೆ ಕಾಣಿಸಲೆತ್ನಿಸಿದ್ದಾರೆ. ಜ್ಞಾನೇಶ್ವರರು ಭಗವದ್ಗೀತೆಗೆ ಬರೆದ ಭಾಷ್ಯದ ಜ್ಞಾನೇಶ್ವರಿಯ ಹದಿನೆಂಟನೇ ಅಧ್ಯಾಯದ ಕೊನೆಗೆ ಪರಮಾತ್ಮನಲ್ಲಿ ಬೇಡಿಕೊಂಡ ಪ್ರಸಾದದಾನದ 72ರಿಂದ 78ಓವಿಗಳನ್ನು ಬೇಂದ್ರೆ ಭಾವಾನುವಾದ ಮಾಡಿದ್ದಾರೆ. ಈ ಪದ್ಯಗಳು ಮರಾಠಿ ಸಂಪ್ರದಾಯದಲ್ಲಿ ಪ್ರತಿಮನೆಯಲ್ಲೂ ಹೇಳಿಕೊಡುವ ಆರಂಭಿಕಗಳು. ಇದರಿಂದ ಜ್ಞಾನೇಶ್ವರರ ಸಂಪ್ರದಾಯ ನೆಲೆನಿಲ್ಲುತ್ತದೆ ಎಂಬ ನಂಬುಗೆ. ಶ್ರೀ ಜ್ಞಾನೇಶ್ವರರ ಪಸಾಯದಾನ ಎಂದು ಬೇಂದ್ರೆ ಅದರ ಭಾವಾನುವಾದವನ್ನು ಮಾಡಿದ್ದಾರೆ. ಇದಲ್ಲದೆ ಬಿಡಿಬಿಡಿಯಾಗಿ ಬೇಂದ್ರೆ ಜ್ಞಾನದೇವನ ಅನೇಕ ಕಾವ್ಯಸಾಲುಗಳನ್ನು ಭಾವಾನುವಾದ ಮಾಡುತ್ತಾರೆ. ಉದಾಹರಣೆಗೆ ಸಂಭೂ-ಶಂಭೂ ಎನ್ನುವ ಜ್ಞಾನದೇವನ ಉಕ್ತಿಯ ಭಾವಾನುವಾದವನ್ನು ನೋಡಬಹುದು. ಜ್ಞಾನೇಶ್ವರನ ಅಮೃತಾನುಭವದ ಸಾಲುಗಳನ್ನೂ ಬೇಂದ್ರೆ ಅನುವಾದ ಮಾಡುತ್ತಾರೆ. ಹೀಗೆ ತಮ್ಮ ಅನುವಾದಗಳ ಮೂಲಕ ಸಂತಕವಿ ಪರಂಪರೆಯ ಅನುಸಂಧಾನವನ್ನು ಮಾಡಿದ್ದಾರೆ.
ಬಿಡಿಬಿಡಿಯಾಗಿ ನೋಡಿದರೆ ಬೇಂದ್ರೆ ಕಾವ್ಯ ಸಂಗ್ರಹಗಳಲ್ಲಿ ಅನೇಕ ಭಾಷಿಕ ಕವಿಗಳ ಭಾವಾನುವಾದಗಳಿವೆ. ಬೇಂದ್ರೆ ಷೇಕ್ಸ್‌ಪಿಯರಿನಂತೆ; ಮೂಲದ್ದನ್ನು ತೆಗೆದುಕೊಂಡು ತಮ್ಮ ದೇಶಕಾಲದ ಹದಕ್ಕೆ ತಿದ್ದಿ ಹದಗೊಳಿಸಿಕೊಳ್ಳುವವರು. ಆದುದರಿಂದ ಇದರಲ್ಲಿ ಸ್ವಂತದ್ದು ಹೊರಗಿನದ್ದು ಎನ್ನುವುದು ಒಂದು ಪಾಕದಲ್ಲಿ ಹದಗೊಂಡಿರುತ್ತದೆ. ಬೇಂದ್ರೆಯವರ ಬೇರೆ ಭಾಷಿಕ ಕಾವ್ಯಗಳ ಜೊತೆಗಿನ ಅನುಸಂಧಾನ ಅಪರೂಪವಾದುದು. ಸಂಚಯ ಕವನ ಸಂಗ್ರಹದಲ್ಲಿ ಅವರು ವಿವಿಧ ರಾಷ್ಟ್ರಗಳ ರಾಷ್ಟ್ರಗೀತೆಗಳನ್ನು ಅನುವಾದ ಮಾಡಿದ್ದಾರೆ. ನಾರ್ವೆ(ಎಬ್ಜೇರ್ ಗಾರ್ಡ್ ವಿರಚಿತ), ಗ್ರೀಸ್(ಎಸ್.ಜಿ.ಕಾನೂಟ್ಸ್ ಅವರು ಮಾಡಿದ ಇಂಗ್ಲಿಷ್ ಅನುವಾದದ ಮೂಲಕ), ಜಪಾನ್(ಇದರ ಕರ್ತೃ ಯಾರೆಂದು ಉಲ್ಲೇಖವಿಲ್ಲ), ಫಿನ್‌ಲ್ಯಾಂಡ್ (ರುನೆಬರ್ಗ್), ಪೋಲ್ಯಾಂಡ್( ಇದರ ಕರ್ತೃವಿನ ಉಲ್ಲೇಖವಿಲ್ಲ). ಇಂತಹ ರಾಷ್ಟ್ರಗೀತೆಗಳ ಅನುವಾದವು ವಿಶಿಷ್ಟವಾಗಿದೆ. ಹೃದಯ ಸಮುದ್ರ ಸಂಕಲನದಲ್ಲಿ ಸ್ವಾಮಿ ವಿವೇಕಾನಂದರ ಕವನವೊಂದನ್ನು ಅನುವಾದಿಸಿದ್ದಾರೆ. ಅದರ ಹೆಸರು ರೌದ್ರಿ. ಇದೇ ಸಂಗ್ರಹದಲ್ಲಿ ಬೇಂದ್ರೆಯವರಿಗೆ ಪ್ರಿಯವಾದ ಜ್ಞಾನೇಶ್ವರಿಯ ಅಮೃತಾನುಭವದ ಭಾಗದ ಭಾವಾನುವಾದ ಇದೆ. ಇದರ ಪೂರ್ಣಪಾಠವನ್ನು ಬೇಂದ್ರೆ ತಮ್ಮ ಭಕ್ತಿಗೆ ತಮ್ಮ ತಾತ್ವಿಕ ಗ್ರಹಿಕೆಗೆ ತಕ್ಕಂತೆ ಮರುಸೃಷ್ಟಿಸಿಕೊಳ್ಳುತ್ತಾರೆ. ಇದರಂತೆ ಶಂಕರಾಚಾರ್ಯರ ಆನಂದ ಲಹರಿ ಅಥವಾ ಸೌಂದರ್ಯ ಲಹರಿಯ ದರ್ಶನವುಳ್ಳ ಕೆಲವು ಶ್ಲೋಕಗಳನ್ನು ಕನ್ನಡದಲ್ಲಿ ಕಾಣಿಸಿದೆ. ಮತ್ತೆ ಸಂಕಲನದ ಕೊನೆಯಲ್ಲಿ ಆನಂದ ಲಹರಿ ಮತ್ತು ಜ್ಞಾನೇಶ್ವರರ ಅಮೃತಾನುಭವದಿಂದ ಆರಿಸಿದ ಕೆಲವು ನುಡಿಗಳ ಭಾವಾನುವಾದ ಇದೆ. ಈಶಾವಾಸ್ಯ ಉಪನಿಷತ್ತಿನ ಮಂತ್ರವನ್ನು ಬೇಂದ್ರೆ ಮತ್ತೆ ಸೃಷ್ಟಿಸಿಕೊಳ್ಳುತ್ತಾರೆ. ಅವರಿಗೆ ಈ ಮರುಸೃಷ್ಟಿಸಿಕೊಳ್ಳುವಿಕೆ ಪ್ರಜ್ಞಾಪೂರ್ವಕ ಕ್ರಿಯೆಯಲ್ಲ. ಅದು ಅವರ ಭಾವ ಮತ್ತು ತತ್ವಚಿಂತನೆಯ ಗ್ರಹಿಕೆ; ಕನ್ನಡದಲ್ಲಿ ಅದನ್ನು ಗ್ರಹಿಸಿಕೊಂಡ ರೀತಿಯನ್ನು ಅವರು ಕಾಣಿಸುತ್ತಿದ್ದಾರಷ್ಟೆ. ಹೀಗಾಗಿ ಅವರು ಭಾವಾನುವಾದವೆಂದು ಕರೆಯುವ ಸಾಹಿತ್ಯಗಳು ಸ್ವಂತದ್ದೂ ಹೌದು, ಅನ್ಯರದ್ದೂ ಹೌದು. ಇದೇ ಸಂಕಲನದಲ್ಲಿ ಇಂಗ್ಲಿಷಿನ ಉಮರನ ಪದ್ಯಗಳಲ್ಲಿ ಆಯ್ದ ಕೆಲವನ್ನು ಓಮರನ ಉಕ್ತಿಗಳು ಎಂದು ಅನುವಾದಿಸಲಾಗಿದೆ. ಇವು ಹಾಗೆ ನೋಡಿದರೆ ಭಿನ್ನರುಚಿಯ ಪದ್ಯಗಳು. ಆದರೆ ಬೇಂದ್ರೆಯವರ ಸೃಜನಶೀಲ ಮನಸ್ಸು ಕಣ್ಣು ಹಾಕುವುದು uncommon ಅನ್ನಿಸಿದ ಅಥವಾ ಉಳಿದವರ ಕಣ್ಣಿಗೆ ಬಿದ್ದಿರಲಾರದ ಸಾಹಿತ್ಯ ಪಠ್ಯಗಳತ್ತ. ಜೀವ ಲಹರಿ ಸಂಕಲನದಲ್ಲಿ ಕೆಲವು ಸಂಸ್ಕೃತ ಸುಭಾಷಿತಗಳ ಛಾಯಾನುವಾದ ಮಾಡಲಾಗಿದೆ. ಇವಕ್ಕೆ ಛಾಯಾ ಎಂದೇ ಹೆಸರು ಕೊಟ್ಟಿದೆ. ಇವು ವಿರಹೋಕ್ತಿಗಳು. ಇವನ್ನು ಕನ್ನಡಿಸಲಾಗಿದೆ.
ಬೇಂದ್ರೆ ಇಂಗ್ಲಿಷ್‌ನಿಂದ ಕವಿತೆಗಳನ್ನು ಅನುವಾದಿಸಿದ್ದಾರೆ. ಬೇಂದ್ರೆಯವರು ಷೇಕ್ಸ್‌ಪಿಯರ್‌ನ ಕೆಲವು ನಾಟಕಗಳ ಭಾಗಗಳನ್ನು ಅನುವಾದಿಸಿದ್ದಾರೆ. ಈಗಾಗಲೇ ಹೇಳಿದಂತೆ ಬೇಂದ್ರೆಯವರಲ್ಲಿ ಅನುವಾದ ಎನ್ನುವುದು ಮರಸೃಷ್ಟಿಯ (ಟ್ರಾನ್ಸ್‌ಕ್ರಿಯೇಶನ್) ಸಂಗತಿ ಆಗಿತ್ತೇ ಹೊರತು ಅದು ಅನುವಾದದ ಚಹರೆಯನ್ನು ಎತ್ತಿ ತೋರಿಸುವಂತದ್ದಾಗಿರಲಿಲ್ಲ. ಇದಕ್ಕಿಂತ ಪೂರ್ವದಲ್ಲಿ ಬೇಂದ್ರೆಯವರು ತಮ್ಮ ಗುರುಗಳೆಂದು ಕರೆದುಕೊಳ್ಳುತ್ತಿದ್ದ ಎ.ಇ(ಜಾರ್ಜ್ ರಸೆಲ್?) ಅವರು ಬರೆದ ಕ್ಯಾಂಡಲ್ ಆಫ್ ಲೈಟ್(ಇದು ಸುಮಾರಿಗೆ 1922ರಲ್ಲಿ ಬಂದಿದ್ದು) ಅನ್ನು ಓದಿ ಅಲ್ಲಿಂದ ಕೆಲವು ಪದ್ಯಗಳನ್ನು ಅನುವಾದಿಸಿದ್ದಾರೆ ಎನ್ನಲಾಗುತ್ತದೆ. ಗೆಳೆಯರ ಗುಂಪು ಈ ಐರಿಷ್ ಮೆಟಫಿಸಿಕಲ್ ಕವಿಯನ್ನು ಆಗಾಗ್ಗೆ ಓದಿ ಅನುಸಂಧಾನ ಮಾಡುತ್ತಿದ್ದರಿಂದ ಬೇಂದ್ರೆಯವರಿಗೆ ಅನುವಾದಿಸುವ ಪ್ರೀತಿ ಹಾಗು ಅವಕಾಶ ದೊರೆತಿರಬಹುದು. ಬೇಂದ್ರೆಯವರ ಉತ್ತರಾಯಣ ಸಂಕಲನದಲ್ಲಿ ಹುತಾತ್ಮನೊಬ್ಬನ ಲಾವಣಿಯನ್ನು ಅನುವಾದಿಸಲಾಗಿದೆ. ಈ ಮೊದಲೇ ಹೇಳಿದಂತೆ ಬೇಂದ್ರೆ ಅವರ ಅನುವಾದವು ಸಂಪೂರ್ಣವಾಗಿ ಅವರ ಕಾವ್ಯಪ್ರತಿಭೆಯನ್ನು ಮತ್ತೊಂದು ರೀತಿಯಲ್ಲಿ ಪ್ರಸ್ತುತಗೊಳಿಸಿಕೊಳ್ಳುವ ಬಗೆಯದಾಗಿತ್ತು. ಅಲ್ಲಿ ಮೂಲ ಎನ್ನುವುದನ್ನು ಪ್ರೇರಣೆಯ ಸಂಗತಿ ಎಂದು ಭಾವಿಸಿರುವುದು ಕಂಡು ಬರುತ್ತದೆ. ಕೀಟ್ಸ್‌ನಂತೆ ಬರೆಯುತ್ತಾರೆ ಎನ್ನುವ ಬೇಂದ್ರೆಗೆ ಯೇಟ್ಸ್ ಕವಿ ಹಾಗೆ ನೋಡಿದರೆ ಸ್ಫೂರ್ತಿಯಾಗಿದ್ದ ಎಂದು ಕೀರ್ತಿನಾಥ ಕುರ್ತಕೋಟಿ ಗುರುತಿಸುತ್ತಾರೆ.
ಚೈತ್ಯಾಲಯ ಬೇಂದ್ರೆಯವರು ಮಾಡಿದ ಅರವಿಂದರ ಕಾವ್ಯ ಹಾಗು ತತ್ವಗಳ ಅನುವಾದ ಅಥವಾ ಮರುಸೃಷ್ಟಿ. ಇಲ್ಲಿನ ಕವಿತೆಗಳನ್ನು ಬೇಂದ್ರೆ ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ ಅನುವಾದಿಸಿದ್ದಾರೆ. ಅನುವಾದದಲ್ಲಿ ತಮ್ಮ ಸಫಲತೆ ಹಾಗು ವಿಫಲತೆಗಳನ್ನು ಇಲ್ಲಿ ನಿವೇದಿಸಿಕೊಳ್ಳಲಾಗಿದೆ.
ಅರವಿಂದರ ಅನುವಾದಗಳು
ಅರವಿಂದರ ಪ್ರಭಾವ ನವೋದಯದ ಮಹತ್ವದ ಲೇಖಕರೆಲ್ಲರ ಮೇಲೆ ಆಗಿತ್ತು. ಕನ್ನಡದಲ್ಲಿ ಹಾಗೆ ನೋಡಿದರೆ ಬಂಗಾಳಿ ಪ್ರಣೀತ ತತ್ವಗಳೇ ಹೆಚ್ಚಿನ ಪ್ರಭಾವ ಬೀರಿದಂತವು. ಬೇಂದ್ರೆಯವರ ಮೇಲೆ ಗೆಳೆಯರ ಗುಂಪಿನ ಮೇಲೆ ಅರವಿಂದರ ಪ್ರಭಾವ ದೊಡ್ಡ ಮಟ್ಟದ್ದು. ಆಗಿನ ಸಂದರ್ಭದಲ್ಲಿ ಅರವಿಂದರ ಸಾಹಿತ್ಯ ಮತ್ತು ತತ್ವ ಕೃತಿಗಳ ಅನುಸಂಧಾನ ಮಾಡುವುದು ಸಾಮಾನ್ಯವಾಗಿತ್ತು. ಆ ನಿಟ್ಟಿನಲ್ಲಿ ಅರವಿಂದರ ಭಾಷಾಂತರವು ಅವರನ್ನು ಅರ್ಥ ಮಾಡಿಕೊಳ್ಳಲು ಬೇಕಾದ ಉಪಕರಣವಾಗಿತ್ತು. ಅರವಿಂದರ ಸಾವಿತ್ರಿ ಹಾಗು ಅವರ ಕಾವ್ಯದ ಅನೇಕ ಭಾಗಗಳನ್ನು ಬೇಂದ್ರೆ ಆಸಕ್ತಿಯಿಂದ ಅನುವಾದಕ್ಕೆ ಎತ್ತಿಕೊಂಡಿದ್ದಾರೆ. ಅರವಿಂದರ ಗದ್ಯ ಬರವಣಿಗೆಗಳನ್ನೂ ಅದೇ ಪ್ರಕಾರದಲ್ಲಿ ಅನುವಾದ ಮಾಡಿದ್ದಾರೆ. ಅವುಗಳಲ್ಲಿ ಭಾರತೀಯ ನವಜನ್ಮ(1936) ಹಾಗು ಶ್ರೀ ಅರವಿಂದರ ಯೋಗ, ಆಶ್ರಮ ಮತ್ತು ತತ್ವೋಪದೇಶ(1947) ಮುಖ್ಯವಾದವು. ಭಾರತೀಯ ನವಜನ್ಮವು ಭಾರತದ ಸಾಂಸ್ಕೃತಿಕ ವಿಚಾರಗಳ ಹಿರಿಮೆಯನ್ನು ಕಂಡುಕೊಳ್ಳುವ ಪುನರುಜ್ಜೀವನದ ಉದ್ದೇಶವನ್ನು ಅರವಿಂದರು ಈ ಪುಸ್ತಕದಲ್ಲಿ ಚರ್ಚಿಸಿದ್ದಾರೆ. ದಾರ್ಶನಿಕತೆಯಿಂದ ಮೈಗೂಡಿಸಿಕೊಳ್ಳಬೇಕಾದ ಹೊಸಜನ್ಮದ ಪರಿಕಲ್ಪನೆಯು ಹೊಸ ತಲೆಮಾರಿಗೆ ಅವಶ್ಯವಾಗಿದೆ ಎಂಬ ಆಲೋಚನೆಯಿಂದ ಈ ಕೃತಿಯನ್ನು ಹಲಸಂಗಿ ಗೆಳೆಯರ ಬಳಗದ ಬೆಂಬಲದಿಂದ ಬೇಂದ್ರೆ ಭಾಷಾಂತರ ಮಾಡಿದ್ದಾರೆ. ಶ್ರೀ ಅರವಿಂದರ ಯೋಗ, ಆಶ್ರಮ ಮತ್ತು ತತ್ವೋಪದೇಶ ಕೃತಿಯು ಅರವಿಂದರ ಕಲ್ಪನೆಯಲ್ಲಿ ಯೋಗದ ಕಲ್ಪನೆ ಮತ್ತು ಅದರ ಸಾಧನೆಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಈ ಕೃತಿ ಪ್ರಾಯಶ: ಅನುವಾದಿಸಲ್ಪಟ್ಟಿದೆ. ಅರವಿಂದರ ದರ್ಶನವು ಬೇಂದ್ರೆಯವರ ಮಾನಸಿಕ ಔನ್ನತ್ಯಕ್ಕೆ ಕಾರಣವಾಯಿತು ಎಂದು ಅವರೇ ವಿವರಿಸಿಕೊಂಡಿದ್ದಾರೆ. ಕುವೆಂಪು ಅವರಿಗೆ ಅರವಿಂದರ ಕಾಣ್ಕೆಯು ವಿಶ್ವಮಾನವ ಪ್ರಜ್ಞೆಯ ವಿಕಾಸವನ್ನು ಕಾಣಿಸಿದರೆ ಬೇಂದ್ರೆಯವರಿಗೆ ಆತ್ಮೋನ್ನತಿಯ ಬೆಳಕಿಂಡಿಯಂತೆ ಅದು ಕಾಣಿಸಿತು. ಅರವಿಂದರ ಕೃತಿಯು ಇಪ್ಪತ್ತನೇ ಶತಮಾನಕ್ಕೆ ಅಗತ್ಯವಾಗಿ ಬೇಕಾದ ಕೈಪಿಡಿಯಾಗಿ ಬೇಂದ್ರೆಯವರಿಗೆ ಕಾಣಿಸಿತು. ಆದುದರಿಂದ ಅರವಿಂದರನ್ನು ಅನುವಾದ ಮಾಡುವ ಹೊಣೆಗಾರಿಕೆಯನ್ನು ಅವರು ಹೊತ್ತುಕೊಂಡರು.
ಸಣ್ಣಕತೆಗಳ ಅನುವಾದ: ಚೀನಾದ ಬಾಳು ಬದುಕು ಎಂಬ ಸಂಕಲನವು ಬೇಂದ್ರೆಯವರು ಮಾಡಿದ ಚೀನೀ ಸಣ್ಣಕತೆಗಳ ಅನುವಾದ. ಇದರಲ್ಲಿ ಅನೇಕ ಜನಪ್ರಿಯ ಚೀನೀ ಸಾಹಿತಿಗಳ ಕತೆಗಳು ಸೇರಿವೆ. ಬೇಂದ್ರೆಯವರ ಆಸಕ್ತಿ ವಿಚಿತ್ರವಾಗಿದೆ. ಎಡ್ಗರ್ ಸ್ನೋ ಅವರು 1937ರಲ್ಲಿ ಚೀನೀ ಸಾಹಿತ್ಯ ಸಂಗ್ರಹವನ್ನು ಇಂಗ್ಲಿಷಿನಲ್ಲಿ ಅನುವಾದಿಸಿ ಪ್ರಕಟಿಸಿದರು. ಇಪ್ಪತ್ತನೇ ಶತಮಾನದಲ್ಲಿ ಸಣ್ಣಕತೆ ಯುರೋಪಿನಲ್ಲಿ ಕಾವ್ಯದಷ್ಟೆ ಪ್ರಭಾವಶಾಲಿಯಾಗಿ ಬೆಳೆಯುತ್ತಿದ್ದ ಪ್ರಕಾರ. ಜಗತ್ತಿನ ಬೇರೆ ಬೇರೆ ಭಾಷೆಗಳಲ್ಲಿ ಸಣ್ಣಕತೆಗಳನ್ನು ಓದುವ ಆಸಕ್ತಿಯ ಕಾರಣದಿಂದಾಗಿ ಈ ಸಂಕಲನವು ಇಂಗ್ಲಿಷಿನಲ್ಲಿ ತಯಾರಾದಂತೆ ತೋರುತ್ತದೆ. ಆ ಬಗೆಗೆ ಬೇಂದ್ರೆಯವರಿಗೆ ಹುಟ್ಟಿದ ಆಸಕ್ತಿ ಹೇಗೊ! ಕಮ್ಯುನಿಸ್ಟ್ ಸಿದ್ಧಾಂತದಲ್ಲಿ ಉಗ್ರಪ್ರೀತಿಯನ್ನಿಟ್ಟುಕೊಂಡ ಲೇಖಕರು, ಜನಸಮುದಾಯಗಳ ಬಗೆಗೆ ಆಸ್ಥೆಯಿಂದ ಬರೆದ ಕತೆಗಳನ್ನು ಬೇಂದ್ರೆಯವರು ಆರಿಸಿಕೊಂಡಿದ್ದಾರೆ. ಮುಖ್ಯವಾಗಿ ಲು-ಷನ್, ಪಾ-ಚಿನ್ಲಿನ್-ಯು-ಟಿಯಾಂಗ್ ಮುಂತಾದವರ ಕತೆಗಳನ್ನು ಇಲ್ಲಿ ಅನುವಾದಕ್ಕೆ ತೆಗೆದುಕೊಳ್ಳಲಾಗಿದೆ. ಇವು ಚೀನೀಕತೆಗಳಾದರೂ ಅವುಗಳನ್ನು ಅನುವಾದದಲ್ಲಿ ಓದುವಾಗ ಅವು ಯಾವುದೋ ಧಾರವಾಡ ಸೀಮೆಯ ಕತೆಗಳೆಂಬಂತೆ ಭಾಸವಾಗುತ್ತದೆ. ಇದರಲ್ಲಿ ಲು-ಷನ್‌ನ ಒಂದು ಕುತೂಹಲಕಾರೀ ಪ್ರಬಂಧ ಇದೆ. ಅದರ ಹೆಸರು ಚೀನೀಭಾಷೆಯಲ್ಲಿ ತ್ಸ್-ಆ-ಓ-ಮಾ-ತಿ-ಪಿ ಎಂದು.ಅದನ್ನು ಕನ್ನಡದಲ್ಲಿ ಅವ್ವನs.. ಎಂದು ಬೇಂದ್ರೆ ಅನುವಾದಿಸಿದ್ದಾರೆ. ವಾಸ್ತವವಾಗಿ ಈ ಪದ ಉತ್ತರ ಕರ್ನಾಟಕದ ಆಡುನುಡಿಯಲ್ಲಿ ಹಾಸುಹೊಕ್ಕಾದ ಬಳಕೆಯ ಪದವಾಗಿದೆ. ಬೇಂದ್ರೆಯವರು ಸಾಮಾನ್ಯವಾಗಿ ಇದರರ್ಥ ಸೂಳೇಮಗ(ಹಾದರಕ್ಕೆ ಹುಟ್ಟಿದವನು)ಎಂದಾಗುವುದು.. ..ಲು-ಷನ್‌ರ ಮತ್ತು ಅನೇಕ ಬರಹಗಾರರ ಕತೆ ಕಾದಂಬರಿಗಳ ಪಾತ್ರಗಳ ಬಾಯಲ್ಲಿ ಈ ಮಾತು ತುಂಬ ಬರುತ್ತದೆ(ದ.ರಾ.ಬೇಂದ್ರೆ ಗದ್ಯಸಾಹಿತ್ಯ ಸಂಪುಟ, ಪು.274). ಇದರ ಮೂಲಾರ್ಥವೇನೇ ಇರಲಿ, ಜನರ ಆಡುಬಳಕೆಯಲ್ಲಿ ಈ ಪದ ಸಂಭಾಷಣೆಯನ್ನು ಎತ್ತಿಕೊಳ್ಳುವ ಪದವಾಗಿಬಿಟ್ಟಿದೆ. ಇದಕ್ಕೆ ಧಾರವಾಡ ಸೀಮೆಯಾದರೇನು? ಚೀನಾದ ಹಳ್ಳಿಯಾದರೇನು? ಲು-ಷನ್ ಈ ಪದದ ಅಕ್ಷರಮೂಲ ಹುಡುಕುತ್ತಾ ಅದರ ಸಾಂಸ್ಕೃತಿಕ ಹಿನ್ನೆಲೆಯನ್ನು ಕೆದಕಿದ್ದಾನೆ. ರಾಜಮನೆಗಳಿಂದ ಹಿಡಿದು ಮಧ್ಯಮವರ್ಗದವರ ಮಧ್ಯದಲ್ಲಿ ಈ ಪದ ಹೇಗೆಲ್ಲ ಓಡಾಡಿರಬಹುದು ಎಂಬುದನ್ನು ವಿವರಿಸಿಕೊಂಡಿದ್ದಾನೆ. ಪದಾರ್ಥದ ಬಗೆಗೆ ಒಲವುಳ್ಳ ಬೇಂದ್ರೆಯವರಿಗೆ ಲು-ಷನ್ನನ ಈ ಪ್ರಬಂಧ ಆಸಕ್ತಿ ಮೂಡಿಸಿರಬಹುದು. ಈ ಕತೆಗಳ ಅನುವಾದದ ಬಗೆಗೆ ಹೇಳಬೇಕೆಂದರೆ ಬೇಂದ್ರೆಯವರು ಮಾಡಿದ ಈ ಕತೆಗಳ ಅನುವಾದಗಳು ಉತ್ತಮ ಗದ್ಯದ ಕುರುಹುಗಳಾಗಿ ತೋರುವುದಿಲ್ಲ. ಬೇಂದ್ರೆಯವರ ಆಸಕ್ತಿ, ಶ್ರದ್ಧೆಗಳಿಗೆ ಒತ್ತು ಕೊಟ್ಟು ಇವನ್ನು ಓದಬೇಕಷ್ಟೆ.

ಇನ್ನಿತರ ಅನುವಾದಗಳು
ಬೇಂದ್ರೆಯವರು ತಮ್ಮ ಸಹವರ್ತಿಗಳ ಜೊತೆ ಸೇರಿ ಅನೇಕ ಅನುವಾದಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಉಪನಿಷತ್ ರಹಸ್ಯ(ರಂ.ರಾ.ದಿವಾಕರ, ಶಂಬಾ ಜೊತೆಗೂಡಿ), ರವೀಂದ್ರನಾಥ ಠಾಗೂರರ ನೂರೊಂದು ಕವನಗಳು(ನಾರಾಯಣ ಸಂಗಂ ಜೊತೆ ಸೇರಿ), ಗುರು ಗೋವಿಂದ ಸಿಂಗ್( ವಾಮನಬೇಂದ್ರೆ ಹಾಗು ಶರ್ಮಾ ಅವರ ಜೊತೆಗೂಡಿ), ಕಬೀರ ವಚನಾವಲಿ(ಗುರುನಾಥ ಜೋಶಿಯವರ ಜೊತೆಗೂಡಿ) ಇವು ಪ್ರಮುಖವಾದವು.
ಉಪನಿಷತ್ ರಹಸ್ಯ ಕೃತಿಯು ಉಪನಿಷತ್ತುಗಳ ವಿಸ್ತೃತವಾದ ಸ್ವರೂಪ, ವರ್ಗೀಕರಣ, ದರ್ಶನಗಳನ್ನು ಈ ಕೃತಿ ಅಡಕಗೊಂಡಿದೆ. ಇದು ಬೇಂದ್ರೆಯವರ ಆಸಕ್ತಿಯ ಕ್ಷೇತ್ರವಾದ ಕಾರಣ ಅವರು ಈ ಅನುವಾದ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ರವೀಂದ್ರರ ಕಾವ್ಯದ ಅನುವಾದವನ್ನು ಬೇಂದ್ರೆ ನಾರಾಯಣ ಸಂಗಂ ಅವರ ಜೊತೆಗೂಡಿ ಮಾಡಿದ್ದಾರೆ. ಆದರೆ ಬೇಂದ್ರೆ ಸ್ಪರ್ಶ ಹೊಂದಿದ ಅನುವಾದಗಳನ್ನು ಇಲ್ಲಿ ಕಾಣಲಾಗದು. ರವೀಂದ್ರರ ಅನುವಾದಗಳಲ್ಲಿ ಬೇಂದ್ರೆಯವರ ಪಾಲೆಷ್ಟು? ಇನ್ನಿತರ ಅನುವಾದಕರ ಪಾಲೆಷ್ಟು ಎಂದು ಅಲ್ಲಿ ದಾಖಲೆಯಾಗಿಲ್ಲ. ಬೇಂದ್ರೆಯವರು ಮಾಡಿದ ಅನುವಾದಗಳೆಂದು ಸ್ಪಷ್ಟವಾಗಿ ದಾಖಲಾಗದ ಕಾರಣ ಅವರ ಮಾಂತ್ರಿಕ ಸ್ಪರ್ಶವನ್ನಾಗಲೀ ಅವರು ಅನುವಾದದಲ್ಲಿ ವಹಿಸಿದ ಸೃಜನಶೀಲ ಸ್ವಾತಂತ್ರ್ಯವನ್ನಾಗಲೀ ಸ್ಪಷ್ಟವಾಗಿ ಕಾಣುವುದಕ್ಕೆ ಸಾಧ್ಯವಾಗಿಲ್ಲ. ಇದೇ ಮಾತನ್ನು ಕಬೀರ ವಚನಾವಲಿಯ ಬಗೆಗೂ ಹೇಳಬಹುದು. ಗುರುಗೋವಿಂದ ಸಿಂಗ್ ಕೃತಿಯು ಹರಬನ್ ಸಿಂಗ್ ಅವರು ಬರೆದ ಜೀವನ ಚರಿತ್ರೆ. ಅದನ್ನು ವಾಮನ ಬೇಂದ್ರೆ, ಶರ್ಮಾ ಅವರ ಜೊತೆಗೂಡಿ ಬೇಂದ್ರೆ ಅನುವಾದಿಸಿದ್ದಾರೆ. ಇವೆಲ್ಲವೂ ಸಾಂಸ್ಥಿಕ ಅನುವಾದಗಳಾಗಿರುವುದರಿಂದ ಬೇಂದ್ರೆಯವರ ಪಾತ್ರ ಔಪಚಾರಿಕವಾಗಿದೆ. ಅವರು ಸ್ವತಂತ್ರವಾಗಿ ಕೈಗೊಂಡ ಅನುವಾದಗಳು ಪ್ರಕಟಿಸುವ ಕ್ರಿಯಾಶೀಲತೆ ಈ ಬಗೆಯ ಅನುವಾದಗಳಲ್ಲಿ ಹಿನ್ನೆಲೆಗೆ ಸರಿದಂತಿದೆ.
.
ಆಕರಗಳು:
ಬೇಂದ್ರೆ, ದತ್ತಾತ್ರೇಯ ರಾಮಚಂದ್ರ. ಉಪನಿಷತ್ ರಹಸ್ಯವು ಅಥವಾ ಭಾರತೀಯ ಅಧ್ಯಾತ್ಮಶಾಸ್ತ್ರ ಪೀಠಿಕೆಯು. ಧಾರವಾಡ: ಅಧ್ಯಾತ್ಮ ಕಾರ್‍ಯಾಲಯ, 1928
ಬೇಂದ್ರೆ, ದತ್ತಾತ್ರೇಯ ರಾಮಚಂದ್ರ. ಭಾರತೀಯ ನವಜನ್ಮ. ಶ್ರೀಅರವಿಂದ ಗ್ರಂಥಾಲಯ. ಚಡಚಣ: 1936
ಬೇಂದ್ರೆ, ದತ್ತಾತ್ರೇಯ ರಾಮಚಂದ್ರ ಮತ್ತು ಗುರುನಾಥ ಜೋಶಿ. ಕಬೀರ ವಚನಾವಲಿ. ದೆಹಲಿ: ಸಾಹಿತ್ಯ ಅಕಾಡೆಮಿ, 1968
ಬೇಂದ್ರೆ, ದತ್ತಾತ್ರೇಯ ರಾಮಚಂದ್ರ. ಭಗ್ನಮೂರ್ತಿ. ದೆಹಲಿ: ಸಾಹಿತ್ಯ ಅಕಾಡೆಮಿ, 1972
ಬೇಂದ್ರೆ, ದತ್ತಾತ್ರೇಯ ರಾಮಚಂದ್ರ. ಶ್ರೀ ಅರವಿಂದರ ಯೋಗ, ಆಶ್ರಮ ಮತ್ತು ತತ್ವೋಪದೇಶ. ಧಾರವಾಡ: ಮನೋಹರ ಗ್ರಂಥಮಾಲೆ, 1947
ಬೇಂದ್ರೆ, ದತ್ತಾತ್ರೇಯ ರಾಮಚಂದ್ರ ಮತ್ತಿತರರು. ಗುರುಗೋವಿಂದ ಸಿಂಗ. ನವದೆಹಲಿ: ಅಸ್ತಿಭಾರ ಸಂಸ್ಥೆ, 1966
ಬೇಂದ್ರೆ, ದತ್ತಾತ್ರೇಯ ರಾಮಚಂದ್ರ ಮತ್ತು ನಾರಾಯಣ ಸಂಗಂ. ನೂರೊಂದು ಕವನ. ನವದೆಹಲಿ: ಸಾಹಿತ್ಯ ಅಕಾಡೆಮಿ, 1967
ಆಮೂರ. ದತ್ತಾತ್ರೇಯ ರಾಮಚಂದ್ರ ಬೇಂದ್ರೆ. ದೆಹಲಿ: ಸಾಹಿತ್ಯ ಅಕಾಡೆಮಿ, 2000

ಈ ಅಂಕಣದ ಹಿಂದಿನ ಬರಹಗಳು

ಕನ್ನಡ ಭಾಷಾಂತರ ಮತ್ತು ಪ್ರದೇಶಗಳು

‘ಕನ್ನಡ ಶಾಕುಂತಲ’ಗಳು: ಒಂದು ವಿಶ್ಲೇಷಣೆ

ಕನ್ನಡ ಭಾಷಾಂತರ ಮತ್ತು ಪ್ರದೇಶಗಳು

ಗಾಂಧಿ, ಅನುವಾದ ಮತ್ತು ಕನ್ನಡಾನುವಾದದೊಳಗೆ ಗಾಂಧಿ

ಇಂಗ್ಲಿಷ್ ಗೀತಗಳ ಪಯಣ

ಷೇಕ್ಸ್‌ಪಿಯರ್‌ ಮೊದಲ ಅನುವಾದಗಳು: ಕನ್ನಡಕ್ಕೆ ಹೊಲಿದುಕೊಂಡ ದಿರಿಸುಗಳು

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...