ಎರಡು ಉದಾತ್ತ ಜೀವಗಳೊಡನಾಟ

Date: 14-10-2022

Location: ಬೆಂಗಳೂರು


ಪ್ರತಿಯೊಂದು ಬದುಕಿಗೂ ಒಂದು ಕಥನವಿರುತ್ತದಾದರೂ ಎಲ್ಲರೂ ಬರೆಯಲು ಸಮರ್ಥರಾಗುವುದಿಲ್ಲ, ಇನ್ನು ಕೆಲವು ಹೇಳಿಕೊಳ್ಳುವ ಬದುಕೂ ಇರುವುದಿಲ್ಲ. ಹೀಗಾಗಿ ಆತ್ಮಕಥನಗಳ ರಚನೆಗೆ ಮಿತಿಗಳಿವೆ ಎನ್ನುತ್ತಾರೆ ಲೇಖಕ ಶ್ರಿಧರ ಹೆಗಡೆ ಭದ್ರನ್. ಅವರು ತಮ್ಮ ಸಮಕಾಲೀನ ಪುಸ್ತಕ ಲೋಕ ಅಂಕಣದಲ್ಲಿ ಎರಡು ಆತ್ಮಕಥನಗಳ ಬಗ್ಗೆ ಬರೆದಿದ್ದಾರೆ.

ಆತ್ಮಕಥನ ಹಾಗೂ ಜೀವನಚರಿತ್ರೆಗಳು ನನಗೆ ತುಂಬಾ ಇಷ್ಟದ ಸಾಹಿತ್ಯ ಪ್ರಕಾರಗಳು. ಕಲ್ಪನಾ ಪ್ರಧಾನ ಸೃಜನಶೀಲ ಕೃತಿಗಳಿಗಿಂತ ಇವು ನೈಜ ಬದುಕನ್ನು ಆಧರಿಸಿರುವುದರಿಂದ ನಮ್ಮ ಬಾಳಿಗೆ ಮಾರ್ಗದರ್ಶನ ಹಾಗೂ ಹೆಚ್ಚು ಕಸುವು ಕೊಡುತ್ತವೆ ಎಂಬ ಅನುಭವವೂ ಈ ಪ್ರೀತಿಗೆ ಕಾರಣ. ಇಂತಹ ಆತ್ಮಕಥನಗಳ ಓದಿನಿಂದ ಜೀವನವನ್ನೇ ಬದಲಿಸಿಕೊಂಡವರ, ಸನ್ಮಾರ್ಗಕ್ಕೆ ಸಂದವರ ಹಲವು ಉದಾಹರಣೆಗಳನ್ನೂ ಕಂಡಿದ್ದೇವೆ. ಯುರೋಪ್ ಖಂಡದಲ್ಲಿ ಆತ್ಮಕಥನದ ಬೆಳವಣಿಗೆಗೆ ಕ್ರೈಸ್ತಮತದ ಮುಖ್ಯ ಅಂಶಗಳಲ್ಲಿ ಒಂದಾದ ಪಾಪನಿವೇದನೆ ಅಥವಾ ಕನ್ಫೆಷನ್. ಇದರಿಂದ ಆತ್ಮಪರಿಶೋಧನೆಯ ಸ್ವಭಾವ ಬೆಳೆದು ಆತ್ಮಕಥನಾತ್ಮಕ ಸಾಹಿತ್ಯದ ಬೆಳವಣಿಗೆ ಹೆಚ್ಚಾಗಿ ಆಯಿತು. ಆದರೆ ಭಾರತದಲ್ಲಿ ತಮ್ಮ ಬದುಕಿನ ಸಾಧನೆ, ಆದರ್ಶ ಅಥವಾ ಜೀವನದ ಸ್ವಾರಸ್ಯವನ್ನು ಇತರರೊಂದಿಗೆ ಹಂಚಿಕೊಳ್ಳುವ ಉತ್ಸಾಹ ಆತ್ಮಕಥನ ಹಾಗೂ ಜೀವನಚರಿತ್ರೆಗಳ ರಚನೆಯ ಹಿಂದೆ ಕಾಣಿಸುತ್ತದೆ. ಈ ಬಾರಿ (2022) ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಭಾಜನರಾದ ಫ್ರೆಂಚ್ ಲೇಖಕಿ ಆ್ಯನಿ ಎರ್ನಾಕ್ಸ್ ಈ ಪ್ರಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡಿದವರು. ಆ್ಯನಿ ಎರ್ನಾಕ್ಸ್ 20 ಕೃತಿಗಳನ್ನು ರಚಿಸಿದ್ದು, ಇವುಗಳಲ್ಲಿ ಬಹುತೇಕ ಆತ್ಮ ಚರಿತ್ರೆಯದ್ದಾಗಿವೆ. ತಮ್ಮ ಜೀವನದಲ್ಲಿನ ಪ್ರಮುಖ ಘಟನೆಗಳು, ತಮ್ಮ ಸುತ್ತಲಿನ ಜನರ ಬದುಕು, ಅನಾರೋಗ್ಯ ಮತ್ತು ತಮ್ಮ ಪೋಷಕರ ಸಾವಿನ ಬಗ್ಗೆ ಅವರು ಕೃತಿಗಳಲ್ಲಿ ದಾಖಲಿಸಿದ್ದಾರೆ. ಸರಳ ಭಾಷೆಯಲ್ಲಿ ಕೃತಿ ರಚನೆಗೆ ಎರ್ನಾಕ್ಸ್ ಹೆಸರುವಾಸಿ.

ಪ್ರತಿಯೊಂದು ಬದುಕಿಗೂ ಒಂದು ಕಥನವಿರುತ್ತದಾದರೂ ಎಲ್ಲರೂ ಬರೆಯಲು ಸಮರ್ಥರಾಗುವುದಿಲ್ಲ, ಇನ್ನು ಕೆಲವು ಹೇಳಿಕೊಳ್ಳುವ ಬದುಕೂ ಇರುವುದಿಲ್ಲ. ಹೀಗಾಗಿ ಆತ್ಮಕಥನಗಳ ರಚನೆಗೆ ಮಿತಿಗಳಿವೆ. ಜೀವನಚರಿತ್ರೆಗಳು ಶಕ್ತ ಲೇಖಕ ತಾನು ಕಂಡ ಉದಾತ್ತ ಜೀವನವನ್ನು ಚಿತ್ರಿಸುವ ಉದ್ದೇಶವನ್ನು ಹೊಂದಿ, ಅದಕ್ಕೆ ಸಲ್ಲುತ್ತವೆ. ಅಂತಹ ಎರಡು ಉದಾತ್ತ ಜೀವನಗಳ ಸಹವಾಸದಲ್ಲಿ, ಸಂಗದಲ್ಲಿ ಇರುವ ಅವಕಾಶ ಈ ಎರಡು ಹೊಸ ಪುಸ್ತಕಗಳಿಂದ ಲಭಿಸಿತು.

ಹರಿವ ನದಿ-ಮೀನಾಕ್ಷಿ ಭಟ್ಟರ ಆತ್ಮಕಥನ; ನಿರೂಪಣೆ- ಭಾರತಿ ಹೆಗಡೆ
ಪ್ರ: ವಿಕಾಸ ಪ್ರಕಾಶನ, ಬೆಂಗಳೂರು
ಪುಟಗಳು: 236; ಬೆಲೆ: 200ರೂ.

ಸಾಮಾನ್ಯರಲ್ಲಿ ಅಸಾಮಾನ್ಯವಾಗಿ ಬದುಕಿದ, ಹೋರಾಟದಿಂದಲೇ ಬದುಕನ್ನು ಕಟ್ಟಿಕೊಂಡ ಮೀನಾಕ್ಷಿ ಭಟ್ಟ ಎಂಬ ಹೆಣ್ಣುಮಗಳ ಆತ್ಮಕಥನ- ಹರಿವ ನದಿ. ಅವರ ಮಗಳು ಭಾರತಿ ಹೆಗಡೆಯವರ ನಿರೂಪಣೆಯಲ್ಲಿ ಮೂಡಿಬಂದಿದೆ.

ಹೀಗೆ ಬೇರೆಯವರ ಆತ್ಮಕಥನವನ್ನು ಹತ್ತಿರದವರು ನಿರೂಪಿಸುವ ಉತ್ತಮ ಪುರುಷ ನಿರೂಪಣೆಯ ಪುಸ್ತಕಗಳ ಚರಿತ್ರೆ ಕನ್ನಡದಲ್ಲಿ ಆರಂಭವಾದುದೇ ಖ್ಯಾತ ಯಕ್ಷಗಾನ ನಟ ಕೆರೆಮನೆ ಶಿವರಾಮ ಹೆಗಡೆಯವರ ಜೀವನ ಸಾಧನೆಯ ನಿರೂಪಣೆ ನೆನಪಿನ ರಂಗಸ್ಥಳ ಪ್ರಕಟಣೆಯ ಮೂಲಕ. ಪ್ರಾಧ್ಯಾಪಕ ಡಾ. ಜಿ. ಎಸ್. ಭಟ್ಟರು ಇದನ್ನು ನಿರೂಪಿಸಿದ್ದರು. ಪ್ರಸ್ತುತ ಕೃತಿ ಆ ಪರಂಪರೆಯ ಘನ ಮುಂದುವರಿಕೆಯಾಗುವುದರೊಂದಿಗೆ, ಅಲ್ಲಿಯ ನಿರೂಪಣೆಯ ಸೌಕರ್ಯಗಳನ್ನು ಮೀರಿಸುವಂತೆ ಮೂಡಿಬಂದಿದೆ ಎಂದರೆ ಅತಿಶಯೋಕ್ತಿಯಲ್ಲ.

“ಈಸಬೇಕು ಇದ್ದು ಜೈಸಬೇಕು” ಎಂಬ ನಾಣ್ಣುಡಿಗೆ ಇಲ್ಲಿಯ ಬದುಕು-ಬರವಣಿಗೆ ಸಾಕ್ಷಾತ್ತಾಗಿ ಸ್ಪಂದಿಸುತ್ತದೆ. ‘ಹದವರಿತು ಬರೆದ ಸಾಕ್ಷ್ಯಚಿತ್ರದಂತಿದೆ’- ಎಂಬ ಹಿರಿಯ ಲೇಖಕ ನಾಗೇಶ ಹೆಗಡೆಯವರ ಮುನ್ನುಡಿಯ ಮಾತುಗಳು ಎಲ್ಲರಿಗೂ ಒಪ್ಪಿತವಾಗುವಂತೆ ನಿರೂಪಣೆಯಿದೆ. ಬಾಳಿನ ಎಪ್ಪತ್ತೆರಡರ ಇಳಿವಯಸ್ಸಿನಲ್ಲಿ ಮೀನಾಕ್ಷಿ ಭಟ್ಟರು ತಮ್ಮ ಬದುಕಿನ ಪುಟಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ. “ಬದುಕು ಎಲ್ಲಿಂದ ಎಲ್ಲಿಗೆ ನನ್ನನ್ನು ಕರೆತಂದಿದೆಯಲ್ಲ, ಗತಿಸಿದ ಪತಿ ಹೇಳಿದಂತೆ ದೇವರೇ ನಮ್ಮನ್ನು ಮುನ್ನಡೆಸಿದ್ದಾ?” ಎಂಬ ವಿಸ್ಮಯದ ಪ್ರಶ್ನೆಗೆ ಮುಖಾಮುಖಿಯಾಗುತ್ತಾರೆ. ಹಾಗೂ ತಮ್ಮ ಬದುಕಿನ ನೋವು-ನಲಿವುಗಳನ್ನು ನಿರುಮ್ಮಳವಾಗಿ ಹೇಳುತ್ತಾ ಹೋಗುತ್ತಾರೆ.

ಶರಾವತಿ ಮತ್ತು ಅಘನಾಶಿನಿ ಎಂಬ ಎರಡು ನದಿಗಳ ನಡುವಿನ ಈ ಬದುಕು ಹಲವು ಬೆಟ್ಟಗಳನ್ನು ಹಾದು, ಜಲಪಾತಗಳಲ್ಲಿ ಧುಮ್ಮಿಕ್ಕಿ, ಕೊರಕಲುಗಳಲ್ಲಿ ಹರಿದು ಕಡಲತ್ತ ಧಾವಿಸುವ ರೀತಿ ಬೆರಗು ಹುಟ್ಟಿಸುವಂಥದ್ದು. ಇದು ಕೇವಲ ಹರಿವ ನದಿ ಮಾತ್ರವಲ್ಲ, ಹರಿಯುತ್ತಲೇ ಇರುವ ನದಿ. ಇಲ್ಲಿಯ ಬದುಕೇ ಹೇಳುವಂತೆ; “ಹುಟ್ಟಿನಿಂದ ನೋಡುತ್ತ ಬಂದ ಈ ಶರಾವತಿ ನದಿ ಹೇಗೆ ಹರಿಯುತ್ತ ಹರಿಯುತ್ತಲೇ ಹೋಯಿತೋ ಹಾಗೆಯೇ ನನ್ನ ಬದುಕು ಹರಿಯುತ್ತಲೇ ಹೋಯಿತು. ಅದು ಕೊಳಚಗಾರಿನಿಂದ ಬ್ಯಾಡರಕೊಪ್ಪ, ಬ್ಯಾಡರಕೊಪ್ಪದಿಂದ ಇಟಗಿ, ನಂತರ ಬಂಜಗಾರು, ಅಲ್ಲಿಂದ ತಾರಗೋಡು, ಸಿದ್ದಾಪುರ, ನಂತರ ಬೆಂಗಳೂರು, ದಾವಣಗೆರೆ, ಮೈಸೂರು ಈಗ ಮತ್ತೆ ಬೆಂಗಳೂರು ಹೀಗೆ ನದಿಯಂತೆಯೇ ಹರಿಯುತ್ತಲೇ ಇದ್ದೇನೆ. ಅದಕ್ಕೆ ಈ ಶರಾವತಿ ನದಿಯನ್ನು ನೋಡಿದಾಗಲೆಲ್ಲ ಇದರಂತೆಯೇ ನನ್ನ ಬದುಕು ಎಂದು ಎಷ್ಟೋ ಸಲ ಅನಿಸಿದ್ದಿದೆ”.

ಆಣೆಕಟ್ಟೆ ನಿರ್ಮಾಣ ಸಂದರ್ಭದಲ್ಲಿ ಊರು ಮುಳುಗುವುದು, ನಿರಾಶ್ರಿತರ ಬವಣೆಗಳು ಹಲವು ಸೃಜನಶೀಲ ಕೃತಿಗಳಿಗೆ ವಸ್ತುವಾಗಿದೆ. ನಾ. ಡಿಸೋಜ, ಗಜಾನನ ಶರ್ಮರ ಕಾದಂಬರಿಗಳು, ಶ್ರೀಧರ ಬಳಗಾರರ ಕತೆಗಳು ಮುಂತಾದವುಗಳಲ್ಲಿ ಇದನ್ನು ಕಾಣುತ್ತೇವೆ. ಆದರೆ ‘ಊರು ಮುಳುಗಿತು’ ಅಧ್ಯಾಯದಲ್ಲಿ ಬರುವ ಚಿತ್ರಣ ಜೀವಂತವಾದದ್ದು, ನೈಜವಾದದ್ದು; “ಅದು ಕೊಡೆಮಾಸದ ಸಮಯವಿರಬಹುದು. ರಾತ್ರಿಯ ಸಮಯ. ಮಳೆ, ಗಾಳಿ ಬೀಸಿ ಬೀಸಿ ಹೊಡೆಯುತ್ತಿತ್ತು. ಥಂಡಿ ಥಂಡಿ ವಾತಾವರಣ...ಮುರುಟಿಕೊಂಡೇ ಮಲಗಿದ್ದೆವು...ಏನೋ ಶಬ್ದ. ಮನೆಯ ಹಿಂಭಾಗದಲ್ಲಿದ್ದ ಗುಡ್ಡವೊಂದು ಅನಾಮತ್ತಾಗಿ ಕುಸಿದು ಬಿತ್ತು. ಗುರಣ್ಣ, ದೊಡ್ಡಣ್ಣಯ್ಯ ಎಲ್ಲ ಧಡಕ್ಕನೆ ಓಡಿ ಹೋದರು. ಅಡುಗೆ ಮನೆಗೇ ಯಾಗಿಕೊಂಡಿದ್ದ ಗುಡ್ಡವದು. ಕುಸಿದು ಅಡುಗೆಮನೆ, ಬಚ್ಚಲು, ಬಾವಿಯ ಮೇಲೆ ಬಿದ್ದು ಎಲ್ಲ ಮುಚ್ಚಿಕೊಂಡುಬಿಟ್ಟಿತು. ಕೋಣೆ ತುಂಬ ನೀರು, ಮಣ್ಣು. ಮನೆಯೊಳಗೇ ನೀರಿನ ಒರತೆಯೆದ್ದಿತು.ಮಣ್ಣಿನ ನೆಲ ಬೇರೆ. ಕಾಲಿಡಲೂ ಆಗುತ್ತಿರಲಿಲ್ಲ. ಧರೆ ಕುಸಿತ, ಮನೆ ಕುಸಿತ, ಎಲ್ಲಿ ನೋಡಿದರೂ ನೀರೋ ನೀರು, ಮಣ್ಣು. ಎಲ್ಲಿ ಹೇಗೆ ಎತ್ತಿ ಹಾಕುವುದು? ನೀರನ್ನು ಏನು ಮಾಡುವುದು? ಎಲ್ಲಿ ನಿಲ್ಲುವುದು, ಎಲ್ಲಿ ಉಳಿಯುವುದು ಹೀಗೆ ನಾನಾ ಪ್ರಶ್ನೆಗಳು ಹರಿದಾಡಿದವು”. ಸಣ್ಣ ಮಕ್ಕಳು, ಮುದುಕರು ಇದ್ದ ಮನೆಗಳಲ್ಲಿ ರಾತ್ರೋ ರಾತ್ರಿ ಇಂತಹ ಪರಿಸ್ಥಿತಿ ನಿರ್ಮಾಣವಾದರೆ ಏನಾದೀತು? ಎಂಬ ಮುಳುಗಡೆಯ ದಾರುಣ ಚಿತ್ರಣ ಸಜೀವವಾಗಿ ಮೂಡಿಬಂದಿದೆ. ಇಂತಹ ಸಂದರ್ಭದಲ್ಲಿ ಆ ಜಾಗ ಬಿಡುವುದೊಂದೇ ದಾರಿ ಎಂದುಕೊಂಡ ಅಪ್ಪ; “ಇನ್ನಿಲ್ಲಿ ಇಪ್ಲಾಗ್ತಿಲ್ಲೆ, ಎಲ್ಲ ಸಾಮಾನು ಸಾಗಿಸಿ, ದೇವಸ್ಥಾನಕ್ಕೆ ಹೋಗಿ ಉಳಕಂಬನ” ಎನ್ನುತ್ತಾರೆ. ಮುಂದೆ ಸರ್ಕಾರದಿಂದ ಪರಿಹಾರ ಪಡೆದು ಬ್ಯಾಡರಕೊಪ್ಪದಲ್ಲಿ ಜಮೀನು ಖರೀದಿಸಿ ಅಲ್ಲಿಗೆ ವರ್ಗಾಂತರವಾಗುತ್ತಾರೆ.

ಬಾಲ್ಯದ ಬದುಕು ಕಷ್ಟ ಸುಖಗಳ ಸಮ್ಮಿಶ್ರಣವಾದರೆ, ಪ್ರೀತಿಸಿ ಮದುವೆಯಾದ ನಂತರದ ಬದುಕಿನದು ಬೇರೆಯದೇ ಅನುಭವಗಳು. ಸ್ವತಃ ಮಾವನಿಂದಲೇ ಮಗ ಸೊಸೆ ತಿರಸ್ಕಾರಕ್ಕೆ ಗುರಿಯಾಗುವುದು, ಅದೂ ಯಾವ ಕಾರಣವೆಂಬುದೂ ತಿಳಿಯದೇ ಅತ್ಯಂತ ಹಿಂಸಾತ್ಮಕ ಸಂಗತಿಯಾಗಿ ಕಾಡುತ್ತದೆ. ಮದುವೆಯಾಗಿ ಬಂದ ಹೆಣ್ಣಿಗೆ ಮನೆಯ ಈ ಪರಿಯ ಅಸಹಕಾರ ಉಂಟುಮಾಡುವ ಮುಜುಗರಗಳ ಚಿತ್ರಣ ಸಜೀವವಾಗಿದೆ. ಕೊನೆಗೂ ಇವರನ್ನಷ್ಟೇ ಬಿಟ್ಟು ಮಾವ ಹಾಗೂ ಮನೆಯವರೆಲ್ಲಾ ಗೃಹತ್ಯಾಗ ಮಾಡುವಲ್ಲಿಗೆ ಈ ಪ್ರಕರಣ ಮುಕ್ತಾಯವಾಗುತ್ತದೆ. ಪತಿಗೆ ಕಾಡಿದ ಹೃದ್ರೋಗದಿಂದ ನಡೆದ ಬದುಕಿನ ಹೋರಾಟ ‘ಎದೆಯೊಳಗೆ ಗೂಡುಗಟ್ಟಿದ ಸಾವು’ ಇವೆಲ್ಲ ಆಗಿ ಬಂಜಗಾರಿನಲ್ಲಿ ಮೀನಾಕ್ಷಿಯವರ ಪತಿ ಐನಕೈ ಗಜಾನನ ಶಾಸ್ತ್ರಿಯವರಿಗೆ ಪಾಠಶಾಲೆಯ ಉಪಾಧ್ಯಾಯ ವೃತ್ತಿ ಸಿಕ್ಕು ಅಲ್ಲಿಯ ಜೀವನವನ್ನು ‘ಬಂಜಗಾರಿನ ಬಂಗಾರದ ಬದುಕು’ ಎಂದೇ ಕರೆದಿದ್ದಾರೆ. ಬ್ಯಾಡರಕೊಪ್ಪದ ತವರು ಮನೆಯಲ್ಲಿ ನಡೆದ ದುರಂತದ ಸರಣಿಯಂತೂ ಎಂತಹ ಜೀವಕ್ಕೂ ತಲ್ಲಣವನ್ನುಂಟು ಮಾಡುವಂಥದ್ದು. ಮೊದಲು ಸಾವಿನ ಸರಣಿ ದುರಂತಕ್ಕೆ ನಾಂದಿ ಹಾಡಿದ್ದು ಗಾಡಿ ಎತ್ತು. ಬಳಿಕ ಗಪ್ಪತಣ್ಣಯ್ಯ, ಅನಂತರ ಅತ್ತಿಗೆ, ಚಿಕ್ಕಪ್ಪನ ಮಗ ರಾಜು, ಮೀನಾಕ್ಷಿ ಅಮ್ಮನ ಮೂರನೆಯ ಹಾಗೂ ಇನ್ನೂ ಹೆಸರಿಡದ ಗಂಡು ಮಗು, ಕೊಳಚಗಾರಿನಲ್ಲಿದ್ದ ಅಣ್ಣಯ್ಯ ಹೀಗೆ ಸಾವಿನ ಸರಮಾಲೆಯಿಂದ ಬದುಕು ತತ್ತರಗೊಳ್ಳುತ್ತದೆ.

ಇಡೀ ಆತ್ಮಕಥನದಲ್ಲಿ ನೆರಳಿನಂತೆ ಹಿಂಬಾಲಿಸುವ ವಿಶಿಷ್ಟ ಜೀವ ಪತಿ ಐನಕೈ ಗಜಾನನ ಶಾಸ್ತ್ರಿಗಳು. ವಿದ್ಯೆ, ಪ್ರತಿಭೆಗಳು ತುಂಬಿತುಳುಕುವ ಜೀವ ಬದುಕಿನಲ್ಲಿ ಬಂದ ತಿರುವುಗಳಿಗೆ ಸ್ಪಂದಿಸಿದ ಬಗೆ ಭಿನ್ನವಾದುದು. ತನ್ನ ವ್ಯಕ್ತಿತ್ವವನ್ನೇ ಆಧರಿಸಿ ಬದುಕು ಕಟ್ಟಿಕೊಳ್ಳುವ ಹೋರಾಟ, ಅವರ ಮೇಲಿನ ಗೌರವಕ್ಕೆ ಆಪರೇಷನ್ ಸಂದರ್ಭದಲ್ಲಿ ಹಾಗೂ ಶಾಸ್ತ್ರಿಯವರ ಮರಣದ ನಂತರ ಈ ಕುಟುಂಬದ ಬಗ್ಗೆ ಸಮಾಜ ಸ್ಪಂದಿಸಿದ ರೀತಿ ಅನ್ಯಾದೃಶವಾದುದು. ಗಜಾನನ ಶಾಸ್ತ್ರಿಯವರ ಅಕ್ಕ, ಮೀನಾಕ್ಷಿ ಅಮ್ಮನವರ ಜೈರಾಮಣ್ಣ ಹಾಗೂ ಇನ್ನೂ ಹಲವು ವ್ಯಕ್ತಿತ್ವಗಳು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ.

ಬಳೆ ತೊಡುವುದನ್ನು ಪ್ರೀತಿಸುವ ಮೀನಾಕ್ಷಿಯ ಬದುಕಿನಲ್ಲಿ ಆ ಅವಕಾಶವನ್ನೇ ಕಿತ್ತುಕೊಳ್ಳುವ ವೈಧವ್ಯ, ಅದೂ ಹೊಸದಾಗಿ ಪೇಟೆಯಿಂದ ಬಳೆಗಳನ್ನು ತಂದ ದಿನವೇ ವೈಧವ್ಯ ಒದಗುವುದು; ಮೊದಲನೆಯ ಬಾರಿಗೆ ಉಸಿರು ನಿಂತು ಸತ್ತೇ ಹೋದರು ಎನ್ನಿಸಿದ್ದ ಶಾಸ್ತ್ರಿಗಳು ಐದಾರು ತಾಸಿನ ನಂತರ ಎದ್ದೇಳುವುದು, ಸಿದ್ದಾಪುರದ ಗುಡ್ಡದ ತುದಿಯ ಮೇಲಿರುವ ಟೀಚರ್ ಮನೆಯಲ್ಲಿ ನಡೆಯುವ ಮಳೆಗಾಲದ ರಾತ್ರಿ ಹೀಗೆ ಹಲವು ಸಿನಿಮೀಯ ಘಟನೆಗಳೆನಿಸುತ್ತವೆ. ಒಂದು ಬದುಕಿನಲ್ಲಿ ನಡೆಯಬಹುದಾದ ಅನೇಕ ಅಘಟಿತಗಳು ನಡೆದು ಬದುಕಿನ ಬಗ್ಗೆ ನಕಾರಾತ್ಮಕ ದೃಷ್ಟಿಕೋನ ಬೆಳೆದು ಇದು ಸಾಕು ಎನ್ನಿಸುವ ಹಂತಗಳಲ್ಲಿ ಬದುಕು ಪಾರಾಗುವ ರೀತಿ ಹೃದಯಸ್ಪರ್ಶಿಯಾದುದು. ಒಂದು ಹೆಣ್ಣು ಜೀವವಾಗಿ ಮಕ್ಕಳನ್ನು ಸಮಾಜದಲ್ಲಿ ಸುದೃಢವಾಗಿ ನಿಲ್ಲಿಸುವ ಮೀನಾಕ್ಷಿ ಅಮ್ಮನವರ ಮನೋಧರ್ಮ ಹಲವು ನೊಂದ ಜೀವಗಳಿಗೆ ಮಾದರಿಯಾಗುವಂಥದ್ದು.

ಹೀಗೆ ಕೇವಲ ಸಾಧಕರ, ಹೆಸರಾಂತವರ ಆತ್ಮಕಥನಗಳು ಮಾತ್ರ ಬದುಕಿಗೆ ಕಸುವು ಕೊಡುತ್ತವೆ ಎಂಬ ಸಾಮಾನ್ಯ ನಿರೀಕ್ಷೆಯನ್ನು ಹುಸಿಗೊಳಿಸುವಂತೆ; ಒಂದು ಅಪರಿಚಿತ ಜೀವದ ಬದುಕಿನ ಕಥನವೂ ತನ್ನ ಹೋರಾಟದ ಬದುಕಿನಿಂದ ಹಲವರಿಗೆ ಸಾಂತ್ವನ ನೀಡಬಲ್ಲದು ಎಂಬುದರ ಅನುಭವ ಪ್ರಸ್ತುತ ‘ಹರಿವ ನದಿ’ ಆತ್ಮಕಥನದಿಂದ ಉಂಟಾಗುತ್ತದೆ. ನಿರೂಪಣೆಯೂ ತನ್ನ ಲವಲವಿಕೆ ಹಾಗೂ ಪಾರದರ್ಶಕತೆಯಿಂದಾಗಿ ಆಪ್ತವಾಗುತ್ತದೆ.

*ಅಂತಃಕರಣದ ಪುತಿನ-ಡಾ. ಎಚ್. ಎಸ್. ವೆಂಕಟೇಶಮೂರ್ತಿ
ಪ್ರಕಾಶಕರು: ಪುತಿನ ಟ್ರಸ್ಟ್ (ರಿ), ಬೆಂಗಳೂರು
ಪುಟಗಳು: 200 (ಕ್ರೌನ್); ಬೆಲೆ 200ರೂ.

ಕನ್ನಡ ನವೋದಯ ಕಾವ್ಯ ಪರಂಪರೆಯ ಆದ್ಯರಾದ ಪುತಿನ ಕಾವ್ಯನಾಮದ ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್ ಅವರ ಸಾಹಿತ್ಯ ಕುರಿತು ಈವರೆಗೆ ಹಲವು ಅಧ್ಯಯನಗಳು ನಡೆದಿವೆ. ಹಲವು ಕೃತಿಗಳು ಪ್ರಕಟವಾಗಿವೆ. ಆದರೆ ಎಚ್ಚೆಸ್ವಿಯವರ ಪ್ರಸ್ತುತ ಪುಸ್ತಕ ಅವೆಲ್ಲವುಗಳಿಗಿಂತ ಭಿನ್ನವಾದುದು. ಪುತಿನ ಜೀವನ ಪಥ ಅಧ್ಯಾಯದಿಂದ ಆರಂಭಿಸಿ; ಒಟ್ಟೂ 18 ಪುಟ್ಟ ಪುಟ್ಟ ಅಧ್ಯಾಯಗಳಲ್ಲಿ ಅವರ ಬದುಕು-ಬರೆಹಗಳ ಸಮಗ್ರ ಚಿತ್ರಣವನ್ನು ಸ್ವಾರಸ್ಯಕರವಾಗಿ ಕೃತಿ ಕಟ್ಟಿಕೊಟ್ಟಿದೆ.

ಈ ಮೊದಲೇ ಹಲವು ಸಂದರ್ಭಗಳಲ್ಲಿ, ಲೇಖನಗಳಲ್ಲಿ; ಪುತಿನ, ಕೆ.ಎಸ್.ನ ಅವರಂತಹ ಹಿರಿಯ ಕವಿಗಳೊಂದಿಗಿನ ತಮ್ಮ ಒಡನಾಟವನ್ನು ಎಚ್ಚೆಸ್ವಿ ದಾಖಲಿಸಿದ್ದಾರೆ. ಇದೀಗ ಪುತಿನ ಕುರಿತು ಒಂದು ಪೂರ್ಣ ಪ್ರಮಾಣದ ಪುಸ್ತಕವನ್ನೇ ಪ್ರಕಟಿಸಿ; ‘ಸರ್ವಗ್ರಾಹಿ ಅಡಕವನ್ನು ಬರೆಯಬೇಕೆಂಬ’ ಬಹುದಿನಗಳ ಅಪೇಕ್ಷೆಯನ್ನು ಈಡೇರಿಸಿಕೊಂಡಿದ್ದಾರೆ. ಜೀವನಪಥದ ಅನಂತರದ ಅಧ್ಯಾಯದಲ್ಲಿ ಪುತಿನ ಸರೀಕರಾದ ಪ್ರೊ. ಎಂ. ಹಿರಿಯಣ್ಣನವರಿಂದ ತೊಡಗಿ ಮಾಸ್ತಿ, ಬೇಂದ್ರೆ, ತೀನಂಶ್ರೀ, ಅಡಿಗ, ಕುರ್ತಕೋಟಿ, ಜಿ.ಎಸ್.ಎಸ್, ಡಿ.ಎಲ್.ಎನ್, ಕಣವಿ, ಆಲನಹಳ್ಳಿ, ಎಚ್ಚೆಸ್ವಿ ಮುಂತಾದವರ ಅಭಿಪ್ರಾಯ ಹಾಗೂ ಕವಿತೆಗಳ ಮೂಲಕ ಪುತಿನ ಅವರೆಡೆಗಿನ ಅಭಿಪ್ರಾಯ ಸಂಪದವನ್ನು ಕಟ್ಟಿಕೊಟ್ಟಿದ್ದಾರೆ. ತೀನಂಶ್ರೀ ಹಾಗೂ ಪ್ರಭುಶಂಕರರ ಜೊತೆಗಿನ ಪುತಿನ ಬಾಂಧವ್ಯವನ್ನು ವರ್ಣಿಸಲು ಎರಡು ಪ್ರತ್ಯೇಕ ಅಧ್ಯಾಯಗಳು ಮೀಸಲಾಗಿವೆ. ಅವರ ಪತ್ರ ವ್ಯವಹಾರವೇ ಈ ಚಿತ್ರಣದ ಮೂಲ ಸಾಮಗ್ರಿ. ಪುತಿನ ಕಥಾಪ್ರಸಂಗವೆಂಬ ಅಧ್ಯಾಯ ಹಲವು ಸ್ವಾರಸ್ಯಕರ ಸಂಗತಿಗಳಿಂದ ತುಂಬಿಕೊಂಡಿದೆ. ಅವುಗಳಲ್ಲಿ ಕೊನೆಯ ಪ್ರಸಂಗ ಪುತಿನ ಘಟನೆಗಳನ್ನು ಕಥನ ಮಾಡುವ ಕಲೆಗಾರಿಕೆಗೆ ಕುಂದಣವಿಟ್ಟಂತಿದೆ. ಒಮ್ಮೆ ನೆಹರು ಭಾಷಣಕ್ಕೆ ಆಹ್ವಾನಿತರಾಗಿ ಹೋಗಿ ಮುಂದಿನ ಸಾಲಿನಲ್ಲಿ ಕುಳಿತಿದ್ದ ಪುತಿನ ಕಾದು ಸುಸ್ತಾದ ಮೆಲೆ ಬಂದ ನೆಹರು ಅವರು ಅತ್ಯಾಕರ್ಷಕವಾಗಿ ಭಾಷಣಕ್ಕೆ ತೊಡಗುತ್ತಾರೆ. ಆದರೆ ಪುತಿನ ಅವರಿಗೆ ಎದ್ದು ಹೋಗಲೇಬೇಕಾದ ಒತ್ತಡ. ಅದನ್ನು ಅವರದೇ ನಿರೂಪಣೆಯಲ್ಲೇ ಕೇಳಬೇಕು; “...ಪ್ರಕೃತಿಯ ಒತ್ತಡದ ಮುಂದೆ ನಾಗರಿಕ ನಡಾವಳಿಗಳು ಮರೆತೇ ಹೋದವು. ನಾನು ಎದ್ದು ಜನಗಳ ನಡುವೆ ದಾರಿ ಮಾಡಿಕೊಂಡು ಮಂಟಪದ ಹೊರಗೆ ಬಂದೆ. ಹೊರಗೂ ಜನ ಕಿಕ್ಕಿರಿದಿದ್ದಾರೆ. ಮೂತ್ರ ವಿಸರ್ಜನೆಗೆ ತಕ್ಕ ಮರೆ ಎಲ್ಲೂ ಕಾಣುತ್ತಿಲ್ಲ. ನನಗಾದರೋ ವಿಸರ್ಜನೆ ಬಿಟ್ಟರೆ ಜಗತ್ತಿನಲ್ಲಿ ಅದಕ್ಕಿಂತ ಮುಖ್ಯವಾದ ಜರೂರು ಕರ್ತವ್ಯವೇ ಇಲ್ಲ ಅನ್ನಿಸುತ್ತಿದೆ...ಸದ್ಯಕ್ಕೆ ನನ್ನ ಜೀವ ಇರೋದೇ ಮೂತ್ರ ವಿಸರ್ಜನೆಗಾಗಿ ಅನ್ನಿಸತೊಡಗಿತು. ಒಂದು ಮರೆಗಾಗಿ ಎಷ್ಟು ಅಲೆದಿದ್ದೇನೆ ಗೊತ್ತಾ? ...ಸುಮಾರು ದೂರ ನಡೆದದ್ದಾಯಿತು. ಕೊನೆಗೆ ಕಂಡಿತು ನೋಡಿ ಒಂದು ದೊಡ್ಡ ಮರ! ಪಕ್ಕದಲ್ಲಿ ಲಂಟಾನ ಪೊದೆ. ಅಲ್ಲಿಗೆ ನುಗ್ಗಿದೆ. ಹುಳು ಹುಪ್ಪಟದ ಭಯವೂ ನನಗಿರಲಿಲ್ಲ. ನಿಧಾನವಾಗಿ ವಿಸರ್ಜನಾ ಕಾರ್ಯದಲ್ಲಿ ತೊಡಗಿದೆ. ಮಾಡಿದೆ...ಮಾಡಿದೆ...ಮಾಡಿದೆ...ಅನಂತಕಾಲದವರೆಗೂ ವಿಸರ್ಜನೆ ಮಾಡಿಯೇ ಮಾಡಿದೆ! ಅದಕ್ಕೆ ಕೊನೆ ಎಂಬುದೇ ಇಲ್ಲ...ಮುಗಿಯಿತು ಕೊನೆಗೊಮ್ಮೆ ಈ ವಿಧ್ಯುಕ್ತ ಕಾರ್ಯಾಚರಣೆ ಮುಗಿತಾಯಕ್ಕೆ ಬಂತು...ಎಷ್ಟು ಹಗುರ ಆಯಿತು ಗೊತ್ತ ನನ್ನ ಮೈಯಿ, ಮನಸ್ಸು, ಆತ್ಮ!” ಇದನ್ನೊಂದು ದೈವಿಕ ಅನುಭವವೆಂಬಂತೆ ಎಚ್ಚೆಸ್ವಿ ಕಂಡಿದ್ದಾರೆ.

ಪುತಿನ ಮಲೆದೇಗುಲ, ರಸಚಿಂತನೆ ಅಧ್ಯಾಯಗಳ ಬಳಿಕ ಕೃತಿ ಅವರ ಸಾಹಿತ್ಯದ ಪರಿಚಯಕ್ಕೆ ತೊಡಗುತ್ತದೆ. ಕಾವ್ಯಪಥ, ಗೇಯ ಕಾವ್ಯ ನಾಟಕಗಳು, ಪ್ರಬಂಧಲೋಕ, ಕವಿತಾ ಸಂಗ್ರಹ, ಮಹಾಕಾವ್ಯ ಶ್ರೀಹರಿಚರಿತೆಯವರೆಗೆ ಪುತಿನ ಸಾಹಿತ್ಯದ ಹಾಸುಬೀಸುಗಳನ್ನು ತೆಕ್ಕೆಯಲ್ಲಿ ಹಿಡಿಯುವ ಪ್ರಯತ್ನವನ್ನು ಎಚ್ಚೆಸ್ವಿ ಮಾಡಿದ್ದಾರೆ. ಪುತಿನ ಮತ್ತು ಯದುಗಿರಿ ಹಾಗೂ ಯದುಗಿರಿಯ ಮೌನ ವಿಕಾಸ ಪ್ರತ್ಯೇಕ ಚರ್ಚೆಯ ವಸ್ತುಗಳಾಗಿವೆ. ಪುತಿನ ಕಥನ ವೃತ್ತಿ, ಅವರೊಂದಿಗಿನ ಮುಖಾಮುಖಿ, ಆಧುನಿಕರ ದೃಷ್ಟಿಯಲ್ಲಿ ಪುತಿನ, ಪುತಿನ ಕಾವ್ಯದ ಮುಖ್ಯ ಉಕ್ತಿ ವಿಶೇಷಗಳು ಇವುಗಳನ್ನು ಮುಂದಿನ ಅಧ್ಯಾಯಗಳು ಒಳಗೊಂಡಿವೆ. ಇಹ - ಪರಗಳನ್ನು ತಮ್ಮ ರೂಪಕ ಭಾಷೆಯ ಮೂಲಕ ಬೆಸೆಯುತ್ತಾ ಸಾಗುವ ಪುತಿನ ಸಾಹಿತ್ಯದ ಆಸ್ತಿಕ ಮನೋಧರ್ಮದ ಜೊತೆಗೆ ಎಚ್ಚೆಸ್ವಿ ಸಹಾನುಭೂತಿಯಿಂದ ಹೆಜ್ಜೆ ಹಾಕಿದ್ದಾರೆ. ಸಮಕಾಲೀನ ಸಂದರ್ಭಕ್ಕೆ ಹಿರಿಯ ಕವಿಯೊಬ್ಬರನ್ನು ಹಿಡಿದುಕೊಡುವ ಪ್ರಾಮಾಣಿಕ ಹಾಗೂ ಮಾದರಿ ಎನ್ನಬಹುದಾದ ರಚನೆ ಪ್ರಸ್ತುತ ಕೃತಿ ಎಂದರೆ ಅತಿಶಯದ ಮಾತೆಂದು ಯಾರೂ ಭಾವಿಸಬೇಕಿಲ್ಲ. ಸಹಜವಾಗಿ ಈ ಕಾರ್ಯ ಗೌರವಕ್ಕಾಗಿ ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳು ಎಚ್ಚೆಸ್ವಿಯವರಿಗೆ ಕೃತಜ್ಞರು.

ಈ ಅಂಕಣದ ಹಿಂದಿನ ಬರಹಗಳು:
ಅಪ್ಪ ಮತ್ತು ಮುಪ್ಪು: ಸಮಕಾಲೀನ ಹಾಗೂ ಸಾರ್ವಕಾಲಿಕ ಎರಡು ಸಂಗತಿಗಳು
ಸಮಕಾಲೀನ ಪುಸ್ತಕಲೋಕದ ಅಘಟಿತ ಘಟನೆ
ಮರಾಠಿಯನ್ನು ಮೀರಿ ಕನ್ನಡ ಪತ್ರಿಕೋದ್ಯಮದ ’ಚಂದ್ರೋದಯ’

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...