ಹೊಳೆಮಕ್ಕಳು : ಅರಿವಿನ ಅಖಂಡತೆಗೆ ತೆಕ್ಕೆಹಾಯುವ ಕಥನ

Date: 03-06-2021

Location: ಬೆಂಗಳೂರು


'ಹೊಳೆಮಕ್ಕಳು' ಕಾದಂಬರಿಯ ಮೂಲಕ ಬಿದರಹಳ್ಳಿ ನರಸಿಂಹಮೂರ್ತಿಯವರು ನಾಗರೀಕತೆಯ ವಿಕಾಸ ಹಾಗೂ ಮನುಷ್ಯರ ಅಂತರಂಗದ ವಿಕಾಸಗಳೆರಡನ್ನೂ ಕಾಣಿಸಿದ್ದಾರೆ ಎನ್ನುವ ಲೇಖಕಿ ಗೀತಾ ವಸಂತ ಅವರು ತಮ್ಮ ‘ತೆರೆದಷ್ಟೂ ಅರಿವು’ ಅಂಕಣದಲ್ಲಿ ಮಿಸ್ಟಿಕಲ್ ಆದದ್ದರ ಕುರಿತು ಹಲವು ಒಳನೋಟಗಳು ಕಾದಂಬರಿಯ ಆತ್ಮ ಹಾಗೂ ಅನುಭಾವಿ ಸಂತರ ಕಥನಗಳು ಅಂತರಗಂಗೆಯಂತೆ ಇಲ್ಲಿ ಹರಿದಿವೆ ಎಂದು ವಿವರಿಸಿದ್ದಾರೆ.

ಎಲ್ಲಿಂದಲೋ ಸರಬರಾಜಾಗುವ ವಾಟರ್ ಬಾಟಲ್ ಗಳಿಗೆ ಅಡಿಕ್ಟ್ ಆದ ಶಹರಗಳಿಗೆ ಜೀವನದಿಯೇ ಸತ್ತಹೋಗುವ ಮೂಕಸಂಕಟ ಅರ್ಥವಾಗುವುದಿಲ್ಲ.... ಕಾದಂಬರಿಯಲ್ಲಿ ಬರುವ ಈ ಮಾತು ಆಧುನಿಕ ಯಂತ್ರನಾಗರಿಕತೆಗೆ ಹೇಳಿದ ಕಿವಿಮಾತಿನಂತಿದೆ. ನದಿಯ ದಡದಲ್ಲಿ ತಮ್ಮ ಬದುಕನ್ನೂ ಜೀವನ ಶ್ರದ್ಧೆಯನ್ನೂ ವಿಕಾಸಗೊಳಿಸಿಕೊಂಡ ಹೊಳೆಮಕ್ಕಳಿಗೆ ಈ ಜೀವನದಿ ಭಾವನದಿಯೂ ಹೌದು. ಬಿದರಹಳ್ಳಿ ನರಸಿಂಹಮೂರ್ತಿಯವರ ಕಾದಂಬರಿ ’ಹೊಳೆಮಕ್ಕಳು’ ಬದುಕಿನ ಚಲನಶೀಲತೆಯ ಮಹಾರೂಪಕದಂತೆ ಕಾಣುತ್ತದೆ. ನದಿಯೆಂಬುದು ಆದಿಮವಾದುದು, ಅನಂತವಾದುದು ಹಾಗೂ ಏಕಕಾಲಕ್ಕೆ ಚಲನಶೀಲವಾದುದು. ಮಡುವಲ್ಲಿ ಬಗ್ಗಡವಾಗದೇ ಶುದ್ಧಾಂತಃಕರಣಕ್ಕೆ ಸೂಚಕವಾದ ಈ ಜೀವನದಿಯ ಕಥನ ತನ್ನ ಒಡಲಲ್ಲಿ ಮನುಷ್ಯನ ನಾಗರೀಕತೆ, ಸಂಸ್ಕೃತಿ ಹಾಗೂ ದರ್ಶನಗಳ ಒಳಸೆಲೆಗಳನ್ನು ತೆರೆದು ತೋರಿಸುವ ಮಹತ್ವಾಕಾಂಕ್ಷೆಯದು. ತನ್ನ ದಡದಲ್ಲಿ ಬೇರೂರಿದ ಜೀವಗಳನ್ನು ಪೋಷಿಸುತ್ತ ಹೊಸದನ್ನು ಒಡಲುಗೊಳ್ಳುತ್ತ ತನ್ನ ಪಾತ್ರಗಳನ್ನು ವಿಸ್ತರಿಸಿಕೊಳ್ಳುತ್ತಲೇ ತಾನು ಮಾತ್ರ ನಿರ್ವಿಕಾರವಾಗಿ ಹರಿವ ಈ ನದಿ ಕಾದಂಬರಿಯ ಸಾಕ್ಷಿಪ್ರಜ್ಞೆಯೂ ಹೌದು. ಆಧುನಿಕ ಬದುಕಿನ ಛಿದ್ರತೆಗೆ ಆಧ್ಯಾತ್ಮಿಕ ಅಖಂಡಾನುಭೂತಿಯ ಸ್ಪರ್ಷ ನೀಡಲು ಲೇಖಕರ ಪ್ರಜ್ಞೆ ಇಲ್ಲಿ ತುಡಿದಿದೆ.
ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬವೊಂದರ ಕಾಶಿಯಾತ್ರೆಯೊಂದಿಗೆ ಬಿಚ್ಚಿಕೊಳ್ಳುವ ಈ ಕಥನ ಗಂಗಾನದಿಯಿಂದ ತುಂಗಾನದಿಯವರೆಗೆ ಹರಿಯುತ್ತ ದಕ್ಷಿಣೋತ್ತರಗಳನ್ನು ಬೆಸೆಯುತ್ತದೆ. ಅನೇಕವನ್ನು ಅಖಂಡ ಅರಿವಿನಲ್ಲಿ ಏಕವಾಗಿ ಬೆಸೆಯುವ ಅರಿವಿನ ಮೂಲವೊಂದು ಕಾದಂಬರಿಯ ಜೀವಕೇಂದ್ರವಾಗಿದೆ. ಶಾಂತಾಚಾರ್ಯರು ಹಾಗೂ ತುಂಗಾಬಾಯಿಯರ ದಾಂಪತ್ಯದ ಅಖಂಡತೆ ಹಾಗೂ ಸಖ-ಸಖೀಭಾವದ ಆಳವನ್ನು ಆರಂಭದಲ್ಲಿ ದರ್ಶಿಸುವ ಕತೆ ಅವರಿಬ್ಬರೂ ದುರ್ಘಟನೆಯೊಂದರಲ್ಲಿ ಬೇರ್ಪಡುವ ವಿರಹದ ಸುದೀರ್ಘ ತಪನೆಯನ್ನು ಸಾಕ್ಷೀಕರಿಸುತ್ತ ಹೆಣ್ಣುಗಂಡಿನ ಆದಿಮ ಸೆಳೆತ ಹಾಗೂ ಲೌಕಿಕ ಪಾಡುಗಳೆರಡನ್ನೂ ಸಮನಾಗಿ ಧ್ಯಾನಿಸುತ್ತದೆ. ಶಾಂತಾಚಾರ್ಯರು ಹಾಗೂ ತುಂಗಾಬಾಯಿಯರ ಸಂತಾನವಾದ ಮೂರು ತಲೆಮಾರುಗಳು ಬದುಕಿಬಾಳಿದ ಕಥನವನ್ನು ಕಟ್ಟಿಕೊಡುತ್ತಲೇ ಒಂದಿಡೀ ಶತಮಾನದ ಬದುಕಿನ ವಿಕಾಸವನ್ನು ತಣ್ಣಗೆ ದಾಖಲಿಸುವುದು ಕಾದಂಬರಿಯ ತಂತ್ರ.
ಸ್ಥಳೀಯ ಜಗತ್ತು ವಿಶ್ವಾತ್ಮಕ ಅನುಭವಗಳೊಂದಿಗೆ ತೆಕ್ಕೆಹಾಯುವ ವಿಶಿಷ್ಟ ಕ್ರಮವೊಂದು ಕಾದಂಬರಿಯಲ್ಲಿ ಸಾಧಿತವಾಗಿದೆ. ಕತೆಯಲ್ಲಿ ಬರುವ ಮನುಷ್ಯಲೋಕವು ಲೌಕಿಕ ವಿವರಗಳಾಚೆಯೂ ಚಾಚಿಕೊಂಡಿದೆ. ಇಡೀ ಯುಗಧರ್ಮ, ಪ್ರಕೃತಿಧರ್ಮ, ಮನೋಧರ್ಮಗಳು ಸಂಗಮಿಸುತ್ತ ಕಾಲಗರ್ಭದಲ್ಲಿ ಸುಳಿಯುವ ಯಾವುದೋ ಅನೂಹ್ಯ ಸನ್ನಾಹಗಳ ಸುಳಿಗೆ ಸಿಕ್ಕು ಮುಳುಗುತ್ತ, ಏಳುತ್ತ ಸಾಗುವ ಕಥನವು ಬದುಕಿನ ರೌದ್ರ ಹಾಗೂ ಶಾಂತ ಚೆಲುವನ್ನು ಕಾಣಿಸುತ್ತ ಹೋಗುತ್ತದೆ. ಮನುಷ್ಯ ಕೇಂದ್ರಿತ ತರ್ಕವನ್ನು ಮೀರಿ ಹರಿವ ಬದುಕು, ಅದನ್ನು ತಿರುಗಿಸುವ ಸೆಳವುಗಳು, ಚಕ್ರಸುಳಿಗಳ ನಿಗೂಢತೆ ಮಾನವ ಬದುಕಿನ ಹಿಂದಿದೆ. ನೆಲದ ಬದುಕಿನ ಮುಗ್ಧ ಚೆಲುವು ಈ ಎಲ್ಲ ಸಂಕೀರ್ಣತೆಗಳ ನಡುವೆಯೇ ಅರಳುತ್ತಹೋಗುತ್ತದೆ. ಹೊಳೆಗಂಟಿದ ಸಾಂಪ್ರದಾಯಿಕ ಜೀವನಕ್ರಮವು ಕ್ರಮೇಣ ಆಧುನಿಕತೆಯ ಸುಳಿಗೆ ಸಿಕ್ಕು ಬದಲಾಗುತ್ತ ಹೊಸ ಕನಸುಗಳಿಗೆ ತರುಣ ಪೀಳಿಗೆಯನ್ನು ಅಣಿಗೊಳಿಸುತ್ತ, ಅವರಲ್ಲಿ ಮಹತ್ವಾಕಾಂಕ್ಷೆಗಳನ್ನು ಮೊಳೆಸುತ್ತ ಅವರನ್ನು ಹುಡುಕಾಟಕ್ಕೆಳೆಸುತ್ತ ಮತ್ತೆ ಮರಳಿ ಹೊಳೆಯ ತಟಕ್ಕೇ ತಂದುನಿಲ್ಲಿಸುವ ಚಕ್ರಗತಿಯಲ್ಲಿ ಕಥನವು ಕೊನೆಯಾಗುತ್ತದೆ.
ಸಾವಿನಿಂದ ಬದುಕಿನ ಕಡೆಗೆ, ಕತ್ತಲಿಂದ ಬೆಳಕಿನ ಕಡೆಗೆ ಹರಿವ ಅಗಾಧ ಜೀವನ ಶ್ರದ್ಧೆ ಹಾಗೂ ನಂಬಿಕೆಗಳು ಕಥನದ ಮಂದ್ರಶೃತಿಯಾಗಿ ನಿನದಿಸುತ್ತವೆ. ಸಿದ್ದಿಗೆ ಸಾವಿಲ್ಲ ಮಗೂ ಅದು ವಿಶ್ವಸಂಪತ್ತು ಎಂಬ ಮಾತನ್ನು ಸಂಗೀತ ಸಾಧಕ ಗೋಪೀವಲ್ಲಭದಾಸರ ಬಾಯಲ್ಲಿ ಲೇಖಕರು ಆಡಿಸಿದ್ದಾರೆ. ಬಾರತದ ಉಪನಿಷತ್ ಪರಂಪರೆ, ಯೌಗಿಕ ಸಾಧನಾ ಧಾರೆಗಳು ಹಾಗೂ ಅಲ್ಲಮನ ಅರಿವಿನ ಸುಳಿಮಿಂಚುಗಳಲ್ಲಿ ಕಥನದ ಬೇರುಗಳಿವೆಯೆನಿಸುತ್ತದೆ. ಅನುಭಾವದ ಸ್ಪಂದನಗಳು ಕಥನಕ್ಕೆ ಗಹನತೆಯನ್ನು ಒದಗಿಸುತ್ತ ಸರಳ ತರ್ಕಕ್ಕೆ ಮೀರಿದ ಓದನ್ನು ಆಪೇಕ್ಷಿಸುತ್ತದೆ.
ಸಾವಿನ ಕುರಿತ ಭಯ ಹಾಗೂ ಆಕರ್ಷಣೆಗಳ ಕರ್ಷಣದಲ್ಲಿ ಕಾದಂಬರಿಯ ಬೀಜಾಂಕುರವಾಗಿದೆ. ಕಾಶಿಯಲ್ಲಿ ಗಂಗೆಯ ಗುಂಟ ತೆಪ್ಪದಲ್ಲಿ ಹೊರಟ ಶಾಂತಾಚಾರ್ಯರ ಕುಟುಂಬದ ಮುಗ್ಧ ಸಂತೋಷವು ತುಂಗಾಬಾಯಿಯ ದುರ್ಮರಣದಿಂದ ಭಗ್ನಗೊಳ್ಳುತ್ತದೆ. ವಿಧಿನದಿಯ ದಾರುಣವೂ ನಿಗೂಢವು ಸಹಜವೂ ಆದ ಸೆಳೆತದಿಂದ ಎಡಗೈಯನ್ನು ಲೀಲೆಯಿಂದ ನೀರಿಗೆ ಚಾಚಿದ ತುಂಗಾಬಾಯಿ ’ಅವ್ವಾ ನೀನೆ ಕಾಯೋಕಿ; ನೀನೇ ಕೊಲ್ಲೋಕಿ, ಎಂದು ಗಂಗೆಗೆ ಮೊರೆಯಿಡುತ್ತಾಳೆ. ಅವಳಿಗೆ ಆ ನೀರಿನೊಡಲು ನಿರಾಳಗರ್ಭದಂತೆ ಕಂಗೊಳಿಸುತ್ತದೆ. ಗರ್ಭಸ್ಥಶಿಶುವಿನ ಬೆಚ್ಚನೆ ಅನುಭೂತಿ ಸಾವಿನ ಸೂಚನೆ ನೀಡುತ್ತದೆ. ಸಾವೆಂದರೆ ಜೀವಮೂಲವಾದ ವಿಶ್ವಗರ್ಭಕ್ಕೆ ಮರಳುವದು. ತನ್ನನ್ನು ತಾನೇ ನುಂಗಿದ ಸ್ಥಿತಿ. ಹುಟ್ಟು ಸಾವೆಂಬ ಎರಡು ದಡಗಳ ನಡುವೆ ಹರಿವ ಬದುಕಿನ ಕ್ಷಣಭಂಗುರತೆಯನ್ನು ತುಂಗಾಬಾಯಿಯ ಸಾವು ಅರಿವಾಗಿ ಚಿತ್ತಭಿತ್ತಿಯಲ್ಲಿ ಮೂಡಿಸುತ್ತದೆ. ಶಾಂತಾಚಾರ್ಯರಿಗೆ ಪ್ರೀತಿಯ ಜೋಡಿ ತೀರ್ಥಗಳಂತಿದ್ದ ಹೆಂಡತಿಯ ಕಣ್ಣುಗಳು ಹಾಗೂ ಅವ್ಯಕ್ತ ಪ್ರೀತಿಯ ಪ್ರಳಯಜಲದಂತೆ ಮೊರೆಯುತ್ತಿದ್ದ ಗಂಗಾಪ್ರವಾಹಗಳು ಒಂದನ್ನೊಂದು ನುಂಗಿ ಇಲ್ಲವಾಗಿಸಲು ಹೊಂಚುವ ಕೃಷ್ಣರಂಧ್ರಗಳಂತೆ ತೋರುತ್ತವೆ. ಲೀಲೆಯಿಂದ ಚಾಚಿದ ತುಂಗಾಬಾಯಿಯ ಕೈಯನ್ನು ಮೊಸಳೆಯೊಂದು ಕಚ್ಚಿ ಹಿಡಿದಾಗ ಉಳಿದವರನ್ನು ಬದುಕಿಸಲು ಅವಳನ್ನು ಬಲಿಕೊಡಬೇಕಾದ ಧರ್ಮಸಂಕಟವೇಳುತ್ತದೆ. ತುಂಗಾಬಾಯಿ ಗಂಗೆಯಲ್ಲಿ ಆತ್ಮಾರ್ಪಣ ಮಾಡಿಕೊಂಡು ತನ್ನ ಸಂತಾನವನ್ನುಳಿಸುತ್ತಾಳೆ. ಆದರೆ ಈ ಸತ್ಯವನ್ನು ಒಪ್ಪಿಕೊಳ್ಳಲಾಗದ ಆಚಾರ್ಯರು ಭ್ರಮಿತ ಸ್ಥಿತಿ ತಲುಪುತ್ತಾರೆ. ಊರಿಗೆ ವಾಪಸಾದಮೇಲೂ ತಮ್ಮ ಒಳಲಹರಿಯಲ್ಲೇ ಉಳಿಯುತ್ತಾರೆ.
ತುಂಗಾನದಿಯ ನೀರು ಯೋಗಮಾಯಾಮಡುವಿನಂತೆ ಅವರನ್ನು ಸೆಳೆಯುತ್ತದೆ. ಸುಷುಪ್ತಿಯ ಆಳಕ್ಕಿಳಿದಂತೆ ಹೊಳೆನೀರಿಗೆ ಮಗುಚಿಕೊಳ್ಳುತ್ತಾರೆ. ಸಾವಿನ ಅನುಭವ ಪಡೆದು ಮೇಲಕ್ಕೆ ಬರುತ್ತಾರೆ. ಎಲ್ಲವನ್ನೂ ಕಳಚಿಕೊಂಡ ದಿಗಂಬರ ಸ್ಥಿತಿಯ ದರ್ಶನ ಪಡೆಯುತ್ತಾರೆ. ನೀರಿನಲ್ಲಿ ಮುಳುಗುತ್ತಿದ್ದಂತೆ ಜುಟ್ಟು ಜನಿವಾರಗಳೆಲ್ಲ ಕಳಚಿಹೋಗುತ್ತವೆ. ಯೋಗಮಾಯಾಜಲ ಒಳಗೆಲ್ಲ ತುಂಬಿ ಜೀವಯಂತ್ರಗಳೆಲ್ಲ ಇಲ್ಲವಾಗಿ ಮೆದುಳೂ ಮುಕ್ತವಾಗುತ್ತದೆ. ಭಾವೋದ್ವೇಗ ಚಿಂತೆಗಳೆಲ್ಲ ಅಳಿದುಹೋಗುತ್ತವೆ. ಯಾವುದೋ ಬ್ರಹತ್ ಕಪ್ಪುಜೀವಿ ಇವರ ದೇಹವನ್ನು ತಿಂದು ಆತ್ಮವನ್ನು ಗೊರಟಿನಂತೆ ಬಿಸಾಡುತ್ತದೆ. ಹೇರಿಕೊಂಡ ಬ್ರಾಹ್ಮಣ್ಯವನ್ನು ಕಳಚಿ ಅವಧೂತರಂತಾಗುವ ಆಚಾರ್ಯರ ಪರಿವರ್ತನೆ ನಿಗೂಢ ಸತ್ಯವಾಗಿ ತೋರುತ್ತದೆ. ಹೆಂಡತಿಯ ಸಾವಿನ ಸಂಕಟದ ಸ್ಮೃತಿಯಿಂದ ನಿಧಾನವಾಗಿ ಹೊರಬಂದ ಆಚಾರ್ಯರು ಭವದಲ್ಲಿ ತೊಡಗಿಯೂ ತೊಡಗದಂತೆ ಬದುಕುತ್ತಾರೆ. ಅವರ ಅಂತ್ಯ ಕೂಡ ವಿಲಕ್ಷಣವಾಗಿಯೇ ಸಂಭವಿಸುತ್ತದೆ. ಕೊನೆಯಬಾರಿ ಹೊಳೆಸ್ನಾನಮಾಡಿದ ಆಚಾರ್ಯರು ತಮ್ಮ ಯೋಗಬಲದಿಂದ ಅಂತರ್ದಹನ ಮಾಡಿಕೊಳ್ಳುತ್ತಾರೆ. ಪುರಾಣದ ದಾಕ್ಷಾಯಣಿಯ ಸ್ಮೃತಿ ಇಲ್ಲಿ ಸರಿದುಹೋಗುತ್ತದೆ. ರೇಚಕ, ಕುಂಭಕಗಳಿಂದ ಪ್ರಾಣಶಕ್ತಿಯನ್ನು ಪುಟಗೊಳಿಸಿ ಗುದದಿಂದ ಹಣೆಗಣ್ಣವರೆಗೆ ಆರೂ ಚಕ್ರಗಳ ದೀಪಹಚ್ಚುವ ಯೌಗಿಕ ಕ್ರಿಯೆಯ ವಿವರ ಕಾದಂಬರಿಯಲ್ಲಿ ಕಣ್ಣಿಗೆ ಕಟ್ಟುವಂತೆ ಮೂಡಿದೆ. ಒಂದೊಂದೂ ಚಕ್ರಗಳು ಉದ್ದೀಪನಗೊಂಡು ದೀಪಶಿಖೆಯಾಗಿ, ಕೊನೆಗೆ ಅಖಂಡ ದೀಪಸ್ಥಂಭವೇ ಆಗಿ ಒಳಗೆದ್ದ ಸುಂಟರಗಾಳಿ ಮೂತ್ರಪಿಂಡ ಜಠರ ಹೃದಯ ಶ್ವಾಸಕೋಶ ಗಂಟಲನಾಳ ಮಿದುಳುಗಳನ್ನು ದಹಿಸಿ ನೆತ್ತಿಗೆಬಂದಾಗ ಬ್ರಹ್ಮರಂಧ್ರ ಬಾಯ್ಬಿಡುತ್ತದೆ. ಅಂತರಾಗ್ನಿ ಹೊರಬಂದು ಕ್ಷಣಮಾತ್ರದಲ್ಲಿ ಇಡೀ ಶರೀರ ಭಸ್ಮವಾಗಿ ಅಸ್ಥಿಪಂಜರ ಮಾತ್ರವುಳಿಯುತ್ತದೆ. ದೇಹ ಪ್ರಾಣಗಳ ಸಾವಯವ ಸಂಬಂಧವನ್ನು ಸೂಕ್ಷ್ಮವಾಗಿ ಕಾಣಿಸುವ ಇಂಥ ತರ್ಕಾತೀತ ಘಟನೆಗಳು ಕಾದಂಬರಿಯುದ್ದಕ್ಕೂ ಧ್ವನಿಪೂರ್ಣವಾಗಿವೆ. ಮತ್ತೆ ಮರಿಮೊಮ್ಮಗನಾಗಿ ಬರುವ ಆಚಾರ್ಯರ ಜೀವದ ಸಂಕಲ್ಪ ಬೆರಗು ಮೂಡಿಸುತ್ತದೆ. ಸಾವೆಂಬುದು ನಾಶವಲ್ಲ, ಅದು ಹೊಸಹುಟ್ಟಿನ ಸನ್ನಾಹ ಎಂಬುದು ರೂಪಕಾತ್ಮಕವಾಗಿ ಹಲವೆಡೆ ಕಥನದಲ್ಲಿ ಅನುರಣಿಸಿದೆ.
ಹೊಳೆಮಕ್ಕಳು ಕಾದಂಬರಿಯ ಮೂಲಕ ಬಿದರಹಳ್ಳಿ ನರಸಿಂಹಮೂರ್ತಿಯವರು ನಾಗರೀಕತೆಯ ವಿಕಾಸ ಹಾಗೂ ಮನುಷ್ಯರ ಅಂತರಂಗದ ವಿಕಾಸಗಳೆರಡನ್ನೂ ಕಾಣಿಸುತ್ತಹೋಗಿದ್ದಾರೆ. ಹೊಳೆತೀರದ ಹೊನ್ನಾಳಿಗ ಸೇತುವೆ ನಿರ್ಮಾಣವಾಗುವ ಮೂಲಕ ಆಧುನಿಕತೆಯ ಪ್ರವೇಶವಾಗುತ್ತದೆ. 1922ರಲ್ಲಿ ಪೂರ್ಣಗೊಂಡ ಸೇತುವೆ ಹೊಸ ಯುಗಧರ್ಮವನ್ನೇ ತೆರೆಯುತ್ತದೆ. ಮಲೆನಾಡಿನ ಆ ಪ್ರದೇಶವು ಬಯಲುಸೀಮೆ ಹಾಗೂ ಕರಾವಳಿ ಭಾಗಗಳಿಗೆ ತೆರೆದುಕೊಳ್ಳುವ ಮೂಲಕ ಕಂನಾಡ ಸಂಸ್ಕೃತಿಯ ಸಮನ್ವಯಕ್ಕೂ ಕಾರಣವಾಗುತ್ತದೆ. ಪ್ರಾದೇಶಿಕ ಪ್ರತ್ಯೇಕತೆ ಮರೆತು ದೂರದ ಗಾಂಧಿಯ ಕೂಗು ಹೊನ್ನಾಳಿಯ ಮಂದಕಿವಿಗೂ ಕೇಳುವಂತಾಗುತ್ತದೆ. ವಿಶ್ವೇಶ್ವರಯ್ಯನವರ ಎಂಜನಿಯರಿಂಗ್ ಕೌಶಲ ಹಾಗೂ ಗಾಂಧೀಜಿಯವರ ಆಧ್ಯಾತ್ಮಿಕ ಶಕ್ತಿಗಳು ಸಂಗಮಿಸಲು ಸೇತುವೆ ಕಾರಣವಾಗುತ್ತದೆ. ಕಾದಂಬರಿಯು ಆಧುನಿಕತೆ, ಆಭಿವೃದ್ಧಿಯ ಕುರಿತು ತಳೆವ ನಿಲುವುಗಳು ಸೂಕ್ಷ್ಮವಾಗಿವೆ. ಯಂತ್ರಸಂಸ್ಕೃತಿಯು ಮನುಷ್ಯನ ಭಾವಕೋಶವನ್ನು ನಾಶಮಾಡುತ್ತ ವಿಕೃತಿಗೆ ನೂಕುವುದನ್ನು ಅದು ಶಾಂತಾಚಾರ್ಯರ ಮಗ ಸುಬ್ಬನ ಮೂಲಕ ತೋರಿಸುತ್ತದೆ. ಭಕ್ತಿ ಜ್ಞಾನ ವೈರಾಗ್ಯಗಳ ಸಂಗಮವಾದ ಶಾಂತಾಚಾರ್ಯರು ದೇಸಿ ವಿವೇಕದ ಪರಿಕಲ್ಪನೆಗೆ ಸಾಧಾರವಾಗಿ ನಿಂತರೆ ಅವರದೇ ಸಂತಾನವಾದ ಸುಬ್ಬ ಆಧುನಿಕತೆಯ ದ್ವಂದ್ವಗಳಿಗೆ ಹಾಗೂ ದಿಕ್ಕೇಡಿತನಕ್ಕೆ ಬಲಿಯಾಗುತ್ತಾನೆ. ಆಧುನಿಕತೆಯ ಸೌಲಭ್ಯಗಳನ್ನು ಸಂಸ್ಕೃತಿಯ ವಿಕಾಸಕ್ಕೆ ಬಳಸಿಕೊಳ್ಳುವ ಸಂಗಮ ಹಾಗೂ ಅಲ್ಲಾಮ ರಂಥ ನವಪೀಳಿಗೆಯನ್ನೂ ಕಥನವು ಕಟ್ಟಿನಿಲ್ಲಿಸಿದೆ.
ಕಥನದಲ್ಲಿ ಒಳ ಅರಿವು ಹಾಗೂ ಹೊರಹರಿವಿನ ಹದವಾದ ಬೆರಕೆಯಿದೆ. ಸಮಾಜವೊಂದರ ಅಂತರಂಗ ಹಾಗೂ ಬಾಹ್ಯವಿಕಾಸಗಳ ದೃಷ್ಟಿಯಿಂದಲೂ ಈ ಕಾದಂಬರಿ ಮಹತ್ವದ್ದು. ಇಲ್ಲಿ ಹಲವು ಬಗೆಯ ಸೀಮೋಲ್ಲಂಘನಗಳಿವೆ. ಸಾಂಪ್ರದಾಯಿಕ ಜೀವನದೃಷ್ಟಿಯಿಂದ ಜೀವಪರತೆಯ ಸೀಮೋಲ್ಲಂಘನಗಳೆಡೆ ಲೇಖಕರ ಒಲವು ನಿಚ್ಚಳವಾಗಿದೆ. ಆಚಾರ್ಯರ ಮೊಮ್ಮಗಳು ಗಂಗಾ ತನ್ನ ವೈಧವ್ಯದ ಸ್ಥಿತಿಯನ್ನು ದಾಟುವುದು, ಕರ್ಮಠತೆಗಿಂತ ಹೃದಯವಂತಿಕೆ ಮೇಲುಗೈ ಪಡೆದು ಕೇಶಮುಂಡನದಕ್ಕೊತ್ತಾಯ ದುರ್ಬಲವಾಗುವುದು, ಅವಳು ತನ್ನ ದೇಹ ಮನಸ್ಸುಗಳ ನೈಸರ್ಗಿಕ ಕರೆಗೆ ಓಗೊಟ್ಟು ಕುರುಬರ ಹಳದನನ್ನು ವರಿಸುವುದು.. ಇಲ್ಲೆಲ್ಲ ಪ್ರತಿರೋಧದ ಹಲವು ಸ್ತರಗಳಿವೆ. ಈ ಅಂತರ್ಜಾತೀಯ ವಿವಾಹವು ಸಮಾಜದಲ್ಲಿ ಸಂಚಲನವನ್ನೇ ಸೃಷ್ಟಿಸಿ ಹಲವರ ಸಂಕಟಕ್ಕೆ ಕಾರಣವಾದರೂ ಕಾಲಕ್ರಮದಲ್ಲಿ ಅದು ಒಪ್ಪಿತವಾಗುತ್ತದೆ. ಮುಂದೆ ಅವರ ಮಗಳಾದ ಭಾರತಿ ಅಲ್ಲಾಮನನ್ನು ವರಿಸುವುದು ಅಂತರ್ಧರ್ಮೀಯ ಸಂಬಂಧ ಸೇತುವಾಗಿ ಒಪ್ಪಿತವೂ ಆಗುತ್ತದೆ. ಮನುಷ್ಯರ ಭಾವದ್ರವ್ಯ ಮುಖ್ಯವೇ ಹೊರತೂ ಅಂಟಿಸಿಕೊಂಡ ಜಾತಿಮತಗಳಲ್ಲ ಎಂಬುದನ್ನು ಇಲ್ಲಿನ ಗಂಡುಹೆಣ್ಣುಗಳು ಸಾಬೀತುಪಡಿಸುತ್ತಾರೆ. ಹಳದ ಹಾಗೂ ಗಂಗಾರ ಮಗ ಕೂಡಲಸಂಗಮ ಹೊಸ ಸಂಸ್ಕೃತಿಯ ಸಾಧ್ಯತೆಯ ಹರಿಕಾರನಾಗುತ್ತಾನೆ. ಜಾತಿಮುಕ್ತ ಭಾರತದ ಕನಸೊಂದು ಅರಳಲು ಕಾರಣವಾಗುತ್ತಾನೆ. ಸಂಗಮ ಅಲ್ಲಾಮನೊಡಗೂಡಿ ಸ್ಥಳೀಯ ಶೂದ್ರ, ಹರಿಜನ, ಸಾಬರ ಹುಡುಗರು ನೀರಿನ ಹಕ್ಕು ಊರಿನ ಹಕ್ಕು.. ಹೊಳೆಯಲ್ಲಿ ಹರಿಯೋದು ಯಾವಜಾತಿಯ ನೀರೂ ಅಲ್ಲಾ.. ಮುಂತಾಗಿ ಘೋಷಣೆ ಕೂಗುತ್ತ ಜಾತ್ಯಾತೀತ ಸಂತರ ಸ್ಮೃತಿಗಳನ್ನು ಒಗ್ಗೂಡಿಸುತ್ತಾರೆ. ಜಾತಿಮೀರುವ ಲೋಕಕಲ್ಯಾಣದ ಕನಸಿಗೆ ಗಾಂಧಿವಾದಿ ಬಸವರಾಜ ಬೆಂಬಲವಾಗುತ್ತಾನೆ. ಸಾಮಾಜಿಕ ಜಾಗೃತಿ, ಸಾಂಸ್ಕೃತಿಕ ಕಸುವು ಹಾಗೂ ರಾಜಕೀಯ ಪ್ರಜ್ಞೆಯ ವಿಕಾಸವನ್ನು ಕಾದಂಬರಿ ಕಟ್ಟಿಕೊಟ್ಟಿದೆ. ಗಾಂಧೀ ಸಾವಿನ ನಂತರ ನೈತಿಕ ವಿಕಾಸದಿಂದ ಕಟ್ಟಿದ ರಾಜಕೀಯ ಪ್ರಜ್ಞೆಯೊಂದು ಅಳಿದುಹೋಗುವ ಸುಳಿವನ್ನು ಕಾದಂಬರಿ ನೀಡುತ್ತದೆ. ಈ ಕಥನವು ತಾನು ಚಲಿಸುವ ಕಾಲದಲ್ಲಿ ನಡೆದ ಗಾಂಧಿ ಹತ್ಯೆ ಹಾಗೂ ದೇಶವಿಭಜನೆಯ ಘಟನೆಗಳಿಗೆ ಮಿಡಿಯುತ್ತದೆ. ಒಂದು ಶತಮಾನದ ಸಾಂಸ್ಕೃತಿಕ ವಿಕಾಸದ ಕಥನವನ್ನೂ ಕಾದಂಬರಿ ಒಡಲಲ್ಲಿರಿಸಿಕೊಂಡಿದೆ. ಒಳಗಿನ ಸಂಸ್ಕೃತಿಯ ಆತ್ಮದಿಂದಲೇ ಹೊರಗಿನ ನಾಗರೀಕತೆಯ ಸೌಂದರ್ಯಕ್ಕೆ ಬೆಲೆ ಎಂಬ ಮಾತು ತಂತ್ರಜ್ಞರಾದ ವಿಶ್ವೇಶ್ವರಯ್ಯ ಅವರಿಂದಲೇ ಹೊಮ್ಮುವುದು ಕಾದಂಬರಿಗೆ ಹೊಸನೆಲೆಯೊಂದನ್ನು ಒದಗಿಸಿದೆ.
ದೇಸೀ ದರ್ಶನಗಳು ಒಳಸುಳಿಯಂತೆ ಕಥನದ ಉದ್ದಕ್ಕೂ ಕಾಣಿಸಿಕೊಂಡಿವೆ. ಸೇತುವೆ ಕಟ್ಟುವಾಗ ಹೊಳೆದಡದಲ್ಲಿದ್ದ ಅನಾದಿ ಲಿಂಗವು ವಿಶ್ವೇಶ್ವರಯ್ಯನವರನ್ನೂ ಧ್ಯಾನಸ್ಥಗೊಳಿಸುತ್ತದೆ. ಅದು ಉಳಿಮುಟ್ಟಿದ ಲಿಂಗವಲ್ಲ, ಹೊಳೆಗಲ್ಲು ನೀರಿನ ಸೆಳವಿಗೆ ಸಿಕ್ಕು ಪ್ರಕೃತಿಯೇ ನಿರ್ಮಿಸಿದ ಲಿಂಗವಾಗಿ ತೋರುತ್ತದೆ. ಅದರ ಹಣೆಯಲ್ಲಿದ್ದ ಗಂಧಾಕ್ಷತೆ, ತುಳಸಿಮಾಲೆಗಳನ್ನು ನೋಡಿ ಅವರಿಗೆ ತಮಾಷೆಯೆನಿಸುತ್ತದೆ. ಅದರ ಬೆನ್ನಲ್ಲೇ ಶೈವ, ವೈಷ್ಣವ ಇತ್ಯಾದಿ ಬೇಧಗಳಿಂದ ಉಂಟಾದ ಅಸಹಿಷ್ಣುತೆ ಕ್ಷುಲ್ಲಕವೆನಿಸುತ್ತದೆ. ಲೋಕಕಲ್ಯಾಣಕ್ಕೆಂದೇ ಹುಟ್ಟಿಕೊಂಡ ಧರ್ಮಗಳು ಅಖಂಡ ಆಧ್ಯಾತ್ಮಿಕ ಅನುಭೂತಿಯನ್ನರಿಯದೇ ಸಂಘರ್ಷಕ್ಕೆ ಕಾರಣವಾಗುವ ದುರಂತಕ್ಕೆ ಅವರು ಮರುಗುತ್ತಾರೆ. ಏಕೋನಿಷ್ಠವಾದ ವೈಜ್ಞಾನಿಕ ಸಾಧನೆ ಹಾಗೂ ತಾಂತ್ರಿಕ ಸಿದ್ದಿಗಳ ದಾರಿ ಕೂಡ ಅನುಭಾವಕ್ಕೆ ಸನಿಹವಾದುದೆಂದು ಅವರಿಗನಿಸುತ್ತದೆ. ಆಳವಾದ ಸತ್ಯಶೋಧನೆ ಹಾಗೂ ಸೃಜನಶೀಲವಾದ ಕಟ್ಟುವಿಕೆಯಲ್ಲಿ ಭವಿಷ್ಯದ ಬೀಜಗಳಿರಬೇಕೆಂಬ ಕನಸನ್ನು ಕಥನವು ಹೀಗೆ ಮೊಳೆಯಿಸುತ್ತದೆ. ಕತೆಯಲ್ಲಿ ಹೊಳೆ ಕಾಲದ ಮಹಾನದಿಯಾಗಿ ತೋರುತ್ತ, ಆ ಕಾಲವು ಮನುಷ್ಯನ ಮನಸ್ಸಿನೊಳಗೂ ಪ್ರವಹಿಸುವುದನ್ನು ಕಾಣಿಸುತ್ತದೆ. ಹೊಳೆಯ ಹರಿವಿನೊಂದಿಗೆ ಮನಸು ಧ್ಯಾನಸ್ಥವಾದಾಗ ಈ ಅನುಭವಕ್ಕೆ ಕಥನದ ಪಾತ್ರಗಳು ಪಕ್ಕಾಗುತ್ತವೆ. ಒಮ್ಮೆ ಸಂಗಮದಲ್ಲಿ ಸ್ನಾನ ಮಾಡುವಾಗ ಶ್ರೀನಿಧಿ ಅನುಭಾವಿಕ ಸ್ಪಂದನವನ್ನು ಪಡೆಯುತ್ತಾನೆ. ಅದರ ಕಣ್ಣಿಗೆ ಕಟ್ಟುವ ವಿವರ ಹೀಗಿದೆ. ನೋಡನೋಡುತ್ತಿದ್ದಂತೆ ಆ ನೀರಗುಮ್ಮಟ ಲಂಬವಾಗಿ ಬೆಳೆಯುತ್ತ ಉದ್ದಾನುದ್ದ ನೀರಲಿಂಗವಾಗಿ ಮೋಡಗಳಾಚೆ ತಲೆಚಾಚಿತು. ಭವಿಷ್ಯಾಕಾಶದ ನೆತ್ತಿ ತೂತಾಗಿ ಹರಿದ ಚೂರುಗಳ ಇಳಿಬಿಟ್ಟ ಶಾಮಿಯಾನದಂತೆ ಬಾಯ್ತೆರೆದಾಗ ಅದರೊಳಕ್ಕೆ ಕಗ್ಗತ್ತಲ ಚೆಂಡನ್ನೆಸೆಯಿತು ನೀರಲಿಂಗ. ಆಕಾಶ ನೀರಲಿಂಗದಮೇಲೆ ಬೆಳಕಿನ ಹಾಲು ಎರೆಯತೊಡಗಿತು. ಮನದಣಿಯೆ ಹೀರಿದ ನೀರಲಿಂಗತೃಪ್ತಿಯಿಂದ ತೊನೆದಾಡಿತು. ಥಟ್ಟನೆ ನೀರಲಿಂಗ ಆಕಾರವಳಿದು ನಿರಾಕಾರವಾಯಿತು. ಹೊಳೆಮೇಲೆ ನೀರಗುಮ್ಮಟವಷ್ಟೆ ಕಾಣತೊಡಗಿತು. ಅದರ ಮೇಲಿದ್ದವರೆಲ್ಲ ಯಾವುದೋ ಯೋಗನಿದ್ರೆಯಿಂದ ಎಚ್ಚೆತ್ತವರಂತೆ ಕಣ್ಣುಕಣ್ಣುಬಿಡುತ್ತಿದ್ದರು (ಪು. 169) ಇಂಥದೇ ಅನುಭವ ಗೆಳೆಯರಾದ ಸಂಗಮ ಮತ್ತು ಅಲ್ಲಾಮರಿಗೂ ಆಗುತ್ತಿರುತ್ತದೆ. ಅವರ ಜೀವ ಜೀವನ ಎರಡೂ ಆದ ಹೊಳೆ ಅವರ ಪ್ರಜ್ಞೆಯಲ್ಲಿ ಬೆರೆತುಹೋಗಿದೆ. ನೀರಿಂಜೀವ ಎಂದು ಕರೆಯುವ ಅನುಭವಕ್ಕೆ ಮಾತ್ರನಿಲುಕುವ ಸ್ಪಂದನೆಯನ್ನು ಅವರು ಸದಾ ತಬ್ಬಲು ಹಂಬಲಿಸುತ್ತಾರೆ. ಅದು ಅವರ ಗೊಂದಲಗಳನ್ನು ನಿವಾರಿಸುತ್ತ ಜೀವಸಂವಾದ ಮಾಡುವ ಭಾವ. ಅದು ಆ ಹೊಳೆಯ ಜೀವ. ಪಂಚಭೂತಗಳ ಮೂಲಕ ವ್ಯಕ್ತವಾಗುವ ವಿಶ್ವಚೈತನ್ಯ. ಅದನ್ನು ಪಡೆದು ತಮ್ಮ ಲೌಕಿಕವನ್ನು ಈ ಎಳೆಯರು ಚೈತನ್ಯಮಯಗೊಳಿಸಿಕೊಳ್ಳುತ್ತಾರೆ.
ಮಿಸ್ಟಿಕಲ್ ಆದದ್ದರ ಕುರಿತು ಹಲವು ಒಳನೋಟಗಳು ಕಾದಂಬರಿಯ ಆತ್ಮ. ಅನುಭಾವಿ ಸಂತರ ಕಥನಗಳು ಅಂತರಗಂಗೆಯಂತೆ ಇಲ್ಲಿ ಹರಿದಿವೆ. ನಾವು ಸಂವೇದಿಸಬಲ್ಲ ಅತಿ ಸುಂದರ ಭಾವನೆಯೆಂದರೆ ಅದು ಮಿಸ್ಟಿಕಲ್ ಆದುದೆಂಬುದು ಜಗತ್ತಿನ ಸಂತರ ಅನುಭವದ ಮಾತು. ಮಾರಿಕೊಪ್ಪದ ಮಾರವ್ವನನ್ನು ತಂಗಿಯಾಗಿ ಸ್ವೀಕರಿಸಿದ ಹೊನ್ನಾಳಿಯ ಅನುಭಾವಿ ಚೆನ್ನಪ್ಪಸ್ವಾಮಿ ಅವಳಿಗೆ ಹಳ್ಳದವ್ವನಾಗಿ ಮರುಹುಟ್ಟುಕೊಡುತ್ತಾನೆ. ತುಂಬಿ ಹರಿಯುವ ಹೊಳೆಯ ಮೇಲೆ ಬಿಳಿಕಂಬಳಿ ಹಾಸಿ ಕುಳಿತ ಜಡೇಸ್ವಾಮಿಗಳ ಪವಾಡದ ಸ್ಮೃತಿಗಳು ನಮ್ಮನ್ನು ಚಕಿತಗೊಳಿಸುತ್ತವೆ. ಮಣ್ಣನ್ನು ಹೊನ್ನು ಮಾಡಿದ ರಸಸಿದ್ದ ಚೆನ್ನಪ್ಪಸ್ವಾಮಿಯ ಕಥನ ನಿಗೂಢ ವಿದ್ಯೆಗಳ ಸಾಧಕರ ಅಪರಿಚಿತ ಲೋಕದೆಡೆ ಬೆರಳುಮಾಡುತ್ತದೆ. ಸೂಫಿ ಸಂತರ ಕುರಿತ ಇಂಥ ಕಥನವೂ ಇಲ್ಲಿ ಸಮನ್ವಯಗೊಂಡಿದೆ. ಸ್ಥಾಪಿತ ಧರ್ಮಗಳಾಚೆ ಚಾಚಿ ನಿಂತ ದೇಸೀ ದರ್ಶನಗಳ ಒಳಹರಿವು ಹೊಳೆಯೊಂದಿಗೆ ತೆರೆದುಕೊಳ್ಳತ್ತದೆ. ಈ ನೆಲದ ಅಂತಃಸತ್ವದ ದರ್ಶನ ಮಾಡಿಸುತ್ತದೆ.
ಕಥನವು ಕೊನೆಯಾಗುವುದು ಸಂಗಮ ಹಾಗೂ ಅಲ್ಲಾಮರ ಮೈತ್ರಿಯ ಉತ್ಕಟಾನುಭವದಲ್ಲಿ ಹಾಗೂ ಅವರು ಶೋಧಿಸುವ ಹೊಸ ಬದುಕಿನ ವಿನ್ಯಾಸಗಳಲ್ಲಿ. ಮುಸ್ಲಿಮನಾದ ಅಲ್ಲಮ ಹಾಗೂ ಜಾತಿಯ ಹಂಗು ಹರಿದುಹೋದ ಸಂಗಮ ಇಬ್ಬರೂ ಭವಿಷ್ಯದ ಕನಸುಗಳು. ಅವರು ಹೊನ್ನಾಳಿಯ ಸೇತುವೆ ದಾಟಿ ಭರತದ ಬೇರೆಬೇರೆ ಭಾಗಗಳಲ್ಲಿ ತಮ್ಮ ಭವಿಷ್ಯವನ್ನು ಶೋಧಿಸ ಹೊರಡುತ್ತಾರೆ. ಇಬ್ಬರೂ ವಿಜ್ಞಾನದ ವಿದ್ಯಾರ್ಥಿಗಳು. ಆದರೆ ಕಲೆಗೆ ಒಲಿಯುತ್ತಾರೆ. ಇಂಥದೊಂದು ಅಪೂರ್ವ ಸಂಗಮ ಹೊಸ ದೃಷ್ಟಿಕೋನವನ್ನು ತೆರೆಯುತ್ತದೆ. ಫಿಸಿಕ್ಸ ಹಾಗೂ ಸ್ಪಿರಿಚ್ಯುಯಾಲಿಟಿಗಳು ಅಲ್ಲಮನಲ್ಲಿ ಬೆರೆತಂತೆ ಲೋಕಕಲ್ಯಾಣದ ಕನಸು ಹಾಗೂ ಸೃಜನಶೀಲತೆಗಳು ಸಂಗಮನಲ್ಲಿ ಬೆರೆಯುತ್ತವೆ. ಇವು ಎಂದಿಗೂ ವಿರುದ್ದವಲ್ಲ ಎಂಬ ಅಖಂಡ ದೃಷ್ಟಿಯೊಂದು ಮೂಡುತ್ತದೆ. ಸಂಗಮ ಅಲ್ಲಾಮರಲ್ಲಿ ಬಸವಣ್ಣ ಹಾಗೂ ಅಲ್ಲಮರ ಛಾಯೆ ಕಂಡೂಕಾಣದಂತೆ ಸುಳಿದುಹೋಗುತ್ತದೆ. ಅಂಥದೊಂದು ಸಾಮರಸ್ಯವು ಈ ನೆಲದ ಬದುಕನ್ನು ಅರಳಿಸುವ ಕನಸನ್ನು ಕಥನವು ಕಟ್ಟಿಕೊಟ್ಟಿದೆ. ಪತ್ರಿಕೋದ್ಯಮದ ನೆಪದಲ್ಲಿ ಸಂಗಮನಿಗಾಗುವ ಸಮಾಜದ ಬಹಿರ್ ದರ್ಶವು ಕಟುವಾಸ್ತವವನ್ನು ತೆರೆದಿಡುತ್ತದೆ. ತೆಲಂಗಾಣದ ಕುರುಚಲು ಕಾಡುಗಳಲ್ಲಿನ ನಕ್ಸಲೈಟ್ಗಳು, ವೇಶ್ಯಾವಾಟಿಕೆಯ ಕತ್ತಲಕೂಪದಲ್ಲಿ ದೊರೆತ ಆ ಹೆಣ್ಣು.. ಎಲ್ಲವೂ ಸಮಾಜದ ವಿಕೃತಿಯ ಫಲಗಳೇ. ಮಾರ್ಕ್ಸಿಸಂ ಸೋಷಿಯಲಿಸಂಗಳ ಮೂಲಕ ಇದನ್ನು ಅರಿಯುವ ದಾರಿಗಳಲ್ಲೂ ಆತ ಚಲಿಸುತ್ತಾನೆ. ಅಂತರಂಗ ವಿಕಾಸಗೊಳ್ಳದೇ ಬರೀ ಹೊರಗಿನಿಂದ ಹೇರಿಕೊಂಡ ವಿಚಾರಗಳು ಬದುಕನ್ನು ಬದಲಿಸಲಾರವೆಂದು ಮನಗಾಣುತ್ತಾನೆ. ಭೌತಿಕ ಸುಖಗಳ ಲೋಲುಪತೆ ಸೃಷ್ಟಿಸುವ ಕಂದಕಗಳನ್ನು ಮುಚ್ಚಲು ಆಧ್ಯಾತ್ಮಿಕ ಅಖಂಡಾನುಭೂತಿಯೇ ಬೇಕೆಂಬ ದಡಕ್ಕೆ ಕೊನೆಯಲ್ಲಿ ಆತನೂ ತಲುಪುತ್ತಾನೆ. ನಿರಂತರವಾಗಿ ಚಲಿಸುತ್ತಲೇ ಇರುವ ಭೂಮಂಡಲಕ್ಕೆ ಹಾಗೂ ವಿಕಸಿತವಾಗುತ್ತಲೇ ಇರುವ ಮನುಕುಲಕ್ಕೆ ಯಾವುದೇ ಒಂದು ಸಿದ್ಧಾಂತದ ಹಚ್ಚಡ ಹೊದೆಸುವುದು ಸಾಧ್ಯವಿಲ್ಲವೆಂಬ ಅರಿವಿನಲ್ಲಿ ಕಥನವು ವಿರಮಿಸುತ್ತದೆ. ಸದಾ ವಿಕಸನದೆಡೆ ತುಡಿವ ಅಖಂಡ ಆನಂದದ ಅನುಭೂತಿಯನ್ನು ಅಲ್ಲಾಮನ ಕೊಳಲಗಾನ ಅವರೆಲ್ಲರಲ್ಲಿ ತುಂಬುತ್ತದೆ. ಸಂಗಮ-ಸುರೇಖಾ, ಅಲ್ಲಾಮ-ಭಾರತಿಯರ ದಾಂಪತ್ಯದಲ್ಲೂ ಈ ವಿಕಾಸಭಾವ ಕಾಣಿಸುತ್ತದೆ. ಅಂದು ರಾತ್ರಿ ಹೊಳೆಯ ದಡದಲ್ಲಿ ಅಲ್ಲಾಮನು ಕೊಳಲ ಕೊರಳಲ್ಲಿ ನುಡಿಸಿದ ಮಾಲಕಂಸ ರಾಗಕ್ಕೆ ನದಿ ನವಿರೇಳುತ್ತದೆ. ಸದಾ ಅಖಂಡ ಸೃಷ್ಟಿಗೆ, ಬದುಕಿನ ಅಗಾಧ ಅನುಭವ ಭಂಡಾರಕ್ಕೆ, ಅಂತರಂಗದ ಧ್ವನಿಗೆ ಬದ್ಧವಾಗಿರುವಂತೆ ಮನಸಿಗೆ ಮೋಡಿಹಾಕುತ್ತದೆ (255) ನಡುರಾತ್ರಿ ದಾಟಿ ಸಾಮರಸ್ಯದ ಹೊಸಬೆಳಗು ಉದಿಸುತ್ತದೆ. ಒಂದೆಡೆ ಮೂಳುಗುವ ಚಂದ್ರ ಇನ್ನೊಂದೆಡೆ ಮೂಡುವ ಸೂರ್ಯ ಮುಂಜಾವಿನ ಈಸಂಧಿಸಮಯದಲ್ಲಿ ನಾದದ ಅಖಂಡಾನುಭೂತಿಯಲ್ಲಿ ಮಿಂದ ವಿಶ್ವ ಹಾಗೂ ಆ ವಿಶ್ವಪ್ರಜ್ಞೆಯಲ್ಲಿ ಒಂದಾದ ಈ ಎಳೆತರುಣರ ಬದುಕಿನ ನವೋದಯವು ಕಥನದ ಒಂದು ಸಾಧ್ಯತೆಯಾಗಿ ತೋರುತ್ತದೆ. ಸಾಕ್ಷಿಪ್ರಜ್ಞೆಯಂತೆ ಹೊಳೆಮಾತ್ರ ಕಾಲಾತೀತವಾಗಿ ಹರಿಯುತ್ತಲೇ ಇರುತ್ತದೆ.

ಈ ಅಂಕಣದ ಹಿಂದಿನ ಬರೆಹಗಳು

ಕನ್ನಡ ಚಿಂತನೆಯ ಸ್ವರೂಪ ಹಾಗೂ ಮಹಿಳಾ ಸಂವೇದನೆಗಳು

ಸಾಹಿತ್ಯ ಸರಸ್ವತಿ ಬದುಕಿನ ‘ಮುಂತಾದ ಕೆಲ ಪುಟಗಳು’...

ಹೋದವರು ಹಿಂದಿರುಗಿ ಬರಲು ಹಾದಿಗಳಿಲ್ಲ

ನಿಗೂಢ ಮನುಷ್ಯರು: ತೇಜಸ್ವಿಯವರ ವಿಶ್ವರೂಪ ದರ್ಶನ

ಕನಕನ ಕಿಂಡಿಯಲ್ಲಿ ಮೂಡಿದ ಲೋಕದೃಷ್ಟಿ

ವಿಶ್ವಮೈತ್ರಿಯ ಅನುಭೂತಿ : ಬೇಂದ್ರೆ ಕಾವ್ಯ

ಕಾರ್ನಾಡರ ಯಯಾತಿ- ಕಾಲನದಿಯ ತಳದಲ್ಲಿ ಅಸ್ತಿತ್ವದ ಬಿಂಬಗಳ ಹುಡುಕಾಟ

ಹರಿವ ನದಿಯಂಥ ಅರಿವು : ಚಂದ್ರಿಕಾರ ಚಿಟ್ಟಿ

ಕಾಲುದಾರಿಯ ಕವಿಯ ಅ_ರಾಜಕೀಯ ಕಾವ್ಯ

MORE NEWS

ಯಕ್ಷಗಾನ ಮತ್ತು ನಾವು ...

25-10-2021 ಬೆಂಗಳೂರು

'ಯಕ್ಷಗಾನ ಮತ್ತು ನಾವು' ಎಂಬ ಈ ಲೇಖನದ ಮೂಲಕ ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ನಿತ್ಯಾನಂದ ಬಿ ಶೆ...

ಅಚ್ಚರಿಯ ‘ಸಿಂಗಾಪುರ್’ ಮತ್ತು ಅದರ ...

23-10-2021 ಬೆಂಗಳೂರು

'ಬೆಂಗಳೂರಿನಿಂದ ಗಂಟುಮೂಟೆ ಹೊತ್ತು 2013ರಲ್ಲಿ ಸಿಂಗಾಪುರಕ್ಕೆ ಬಂದಿಳಿದಿದ್ದ ನಮಗೆ ಸಮಯ ಕಳೆದಂತೆ ಒಂದೊಂದೇ ಅಚ್ಚರಿ...

ಮಾಸ್ತಿ ಪುರಸ್ಕಾರದ ಗೌರವ: ಎಚ್.ಎಸ್...

23-10-2021 ಬೆಂಗಳೂರು

‘ಆಧುನಿಕ ಕನ್ನಡ ಸಾಹಿತ್ಯ ಕಂಡ ಮಹಾ ಚೇತನಗಳಲ್ಲೊಬ್ಬರೆನಿಸಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೆ ವಿಶೇಷವಾಗಿ ಕ...