ಸಾಹಿತ್ಯ ಸರಸ್ವತಿ ಬದುಕಿನ ‘ಮುಂತಾದ ಕೆಲ ಪುಟಗಳು’...

Date: 01-03-2021

Location: ಬೆಂಗಳೂರು


ಸಾಹಿತ್ಯ ಸರಸ್ವತಿ ಸರಸ್ವತಿ ಬಾಯಿ ರಾಜವಾಡೆ ಅವರ ಬದುಕಿನ ಪುಟಗಳನ್ನು ತೆರೆದಿಟ್ಟ ಕೃತಿ ಮುಂತಾದ ಕೆಲ ಪುಟಗಳು’. ಖ್ಯಾತ ಲೇಖಕಿ ವೈದೇಹಿ ಅವರು ನಿರೂಪಿಸಿದ ಈ ಆತ್ಮಕಥನ, ಕನ್ನಡ ಸಾಹಿತ್ಯ ಲೋಕದಲ್ಲಿ ವಿಭಿನ್ನತೆಯನ್ನು ಕಾಯ್ದುಕೊಂಡಿದೆ. ಈ ಕೃತಿಯ ಮುಖ್ಯ ಪುಟಗಳನ್ನು ಲೇಖಕಿ ಡಾ. ಗೀತಾ ವಸಂತ ಅವರು ತಮ್ಮ ‘ತೆರೆದಷ್ಟೂ ಅರಿವು’ ಅಂಕಣದಲ್ಲಿ ಪರಿಚಯಿಸಿದ್ದಾರೆ.

ಚರಿತ್ರೆಯಲ್ಲಿ ಅವಳಿಲ್ಲ. ಇರುವುದೇನಿದ್ದರೂ ಅದು ‘ಅವನ ಚರಿತ್ರೆ’. ಅವನು ಗೆದ್ದ ಯುದ್ದಗಳು, ಕಟ್ಟಿದ ಕೆಡವಿದ ಸಾಮ್ರಾಜ್ಯಗಳು, ಬರೆಸಿದ ಶಾಸನಗಳು, ನಾಯಕನಾಗಿ ವಿಜೃಂಭಿಸಿದ ಕಾವ್ಯಗಳು… ಎಲ್ಲೆಡೆ ಅವನೇ ಅವನು. ಅಕ್ಷರ ಜಗತ್ತೂ ಅವನದೇ ಆಗಿತ್ತು. ಆತ ಕಟ್ಟಿದ ಜ್ಞಾನವೂ ಒಕ್ಕಣ್ಣಿನದೇ. ಆದರೆ ಜ್ಞಾನದ ಅಧಿದೇವತೆ ಸರಸ್ವತಿ!. ಎಂಥ ವಿಪರ್ಯಾಸ ಅಲ್ಲವೇ?. ಅವಳು ಸೃಜಿಸಿದ ಅರಿವನ್ನು ಒಪ್ಪಿಕೊಳ್ಳಲು ಎಷ್ಟುಕಾಲ ಕಾಯಬೇಕಾಯಿತು!. ನಾನು ಬದುಕಿದ್ದೇನೆ ಎಂದು ಅವಳು ಮತ್ತೆ ಮತ್ತೆ ಸಾಬೀತುಪಡಿಸುತ್ತಲೇ ಇರಬೇಕು. ಯಾಕೆಂದರೆ ಅವಳ ಬದುಕು ಅಧೀನ ನೆಲೆಯದು. ಕನ್ನಡ ನವೋದಯ ಸಾಹಿತ್ಯ ಸಂದರ್ಭದಲ್ಲಿ ತನ್ನ ದಿಟ್ಟ ಹೆಜ್ಜೆಗಳನ್ನು ಮೂಡಿಸಿ ಕೊನೆಗೆ ಅವೆಲ್ಲವನ್ನೂ ನಿರಚಿಸುತ್ತ ಬದುಕಿದವರು ಸಾಹಿತ್ಯ ಸರಸ್ವತಿ ಸರಸ್ವತಿಬಾಯಿ ರಾಜವಾಡೆಯವರು. ತನ್ನ ಪ್ರತಿಮೆಯನ್ನು ತಾನೇ ಭಂಜಿಸಿ ಹೊರನಡೆಯುವ ಈ ನಡೆ, ಅತ್ಯಂತ ದಿಟ್ಟವಾಗಿರಬೇಕಾಗುತ್ತದೆ. ಅದಕ್ಕಾಗಿಯೇ ಮಹಿಳಾ ಆತ್ಮಕಥನಗಳ ಸಂಖ್ಯೆ ಯಾವಾಗಲೂ ಬೆರಳೆಣಿಕೆಯದ್ದಾಗಿರುತ್ತದೆ. ಅದರಲ್ಲೂ ಬರೆಯದ ಎಷ್ಟೋ ಉಮ್ಮಳಗಳು, ಪ್ರಶ್ನೆಗಳು, ಕನವರಿಕೆಗಳು ಸಾಲುಗಳ ಮೌನದಲ್ಲಿ ಅವಿತುಕೊಂಡಿರುತ್ತವೆ. ಎಷ್ಟು ಕಷ್ಟ ಹೆಣ್ಣು ತನ್ನನ್ನು ತಾನು ತೆರೆದುಕೊಳ್ಳುವುದು!.

‘ಮುಂತಾದ ಕೆಲ ಪುಟಗಳು’ ಇದು ವೈದೇಹಿಯವರಿಂದ ನಿರೂಪಣೆಗೊಂಡ ಸರಸ್ವತಿಬಾಯಿ ರಾಜವಾಡೆಯವರ ಆತ್ಮಕಥನ. ತಮ್ಮ ಬದುಕನ್ನು ದಂತಕಥೆಯೆಂಬಂತೆ ಬದುಕಿದ್ದ ಸರಸ್ವತಿಬಾಯಿಯವರು ಬದುಕಿನ ಇಳಿಸಂಜೆಯಲ್ಲಿ ಆತ್ಮಪ್ರತ್ಯಯವನ್ನೇ ಕಳಚಿಟ್ಟ ವಿರಾಗಿಣಿಯಂತೆ ಹೇಳುತ್ತ ಹೋದ ಕತೆಯಿದು. ಕತೆಯೆಂದು ಏಕೆ ಹೇಳುತ್ತೇನೆಂದರೆ, ಹಿಂದಿನ ತಮ್ಮನ್ನು ದೂರದಲ್ಲಿಟ್ಟು ಅನ್ಯರ ಕತೆಯನ್ನು ಒರೆಯುವಂತೆ ಅವರು ತಮ್ಮ ಕುರಿತು ಹೇಳಿಕೊಂಡಿದ್ದಾರೆ. ವ್ಯಕ್ತಿತ್ವವೊಂದು ಕಾಲದೊಂದಿಗೆ ಮಾಗುತ್ತಾ ತನ್ನ ಪರಿವರ್ತನೆಯನ್ನು ತಾನೇ ಗುರುತಿಸಿಕೊಳ್ಳುವಲ್ಲಿ ಅವರ ಅನನ್ಯತೆಯಿದೆ. ಕಡುಬಡತನವನ್ನೂ, ಅಪಾರ ಶ್ರೀಮಂತಿಕೆಯನ್ನೂ ಕಂಡುಂಡ ಅವರು ಬದುಕಿನ ಕೊನೆಯಲ್ಲಿ ಎಲ್ಲವನ್ನೂ ದೈವಕ್ಕೆ ಅರ್ಪಿಸಿ ಮತ್ತೆ ಬರಿಗೈಯಲ್ಲಿ ವಿರಮಿಸುತ್ತಾರೆ. ಯಾವುದನ್ನು ಎಳವೆಯಲ್ಲಿ ತೀವ್ರವಾಗಿ ಬಯಸಿದ್ದರೋ ಅದೆಲ್ಲವನ್ನೂ ಪಡೆದ ಮೇಲೆ ಅದರಿಂದ ಕಳಚಿಕೊಳ್ಳಬೇಕೆಂಬ ಭಾವವನ್ನೂ ಅಷ್ಟೇ ತೀವ್ರವಾಗಿ ಅನುಭವಿಸುತ್ತಾರೆ. ಅವರ ಬದುಕು ವೈಚಾರಿಕ ವಿಕಾಸ ಹಾಗೂ ಆಧ್ಯಾತ್ಮಿಕ ವಿಕಾಸಗಳ ಸಂಗಮದಂತಿದೆ. ಸ್ರೀತ್ವದ ಸಿದ್ದಮಾದರಿಗಳನ್ನು ಎಂದೂ ಲೆಕ್ಕಿಸದೇ ಬದುಕಿದ್ದ ರಾಜವಾಡೆಯವರು, ಆ ಕಾಲಕ್ಕೆ ಅತ್ಯಂತ ಕ್ರಾಂತಿಕಾರಿಯಾಗಿದ್ದರು. ತಮ್ಮ ಅನುಭವಗಳನ್ನು ಗ್ರಹಿಸಲು ಸಮಾಜ ಇನ್ನೂ ಪಕ್ವವಾಗಿಲ್ಲವೆಂದೇ ಅವರಿಗೆ ತಮ್ಮ ಜೀವಿತದ ಕೊನೆಗಾಲದವರೆಗೂ ಅನಿಸಿರಬೇಕೆಂದು ವೈದೇಹಿಯವರು ಒಂದೆಡೆ ಹೇಳುತ್ತಾರೆ. ತಮ್ಮ ಕಾಲಕ್ಕಿಂತ ಮುಂದೆ ನಡೆಯುವ ಎಲ್ಲ ಮನಸ್ಸುಗಳ ತುಯ್ದಾಟವಿದು.

ಕನ್ನಡ ನವೋದಯದ ಸಂದರ್ಭದಲ್ಲಿ ಮಹಿಳೆಯರಿಗೆ ಒಲಿದದ್ದು ಕಥನ. ತಮ್ಮ ಒಡಲ ಸಂಕಟವನ್ನು, ಉರಿಪ್ರಶ್ನೆಗಳನ್ನು ಯಾವುದೋ ಪಾತ್ರದಲ್ಲಿರಿಸಿ ಹೇಳುವ ಒಂದು ಮಾಯಾದಂಡದಂತೆ ಕತೆಗಳು ಆವರಿಸಿದ್ದ ಕಾಲ. ಆ ಕಥೆಗಾರ್ತಿಯರ ಬದುಕು ಹೇಗಿತ್ತು ಎಂಬುದು ದಾಖಲಾಗದೇ ಉಳಿದು ಹೋಗಿರುವಾಗ ಲೇಖಕಿ ವೈದೇಹಿಯವರು ಸರಸ್ವತಿಬಾಯಿ ರಾಜವಾಡೆಯವರ ಇಳಿಗಾಲದಲ್ಲಿ ಅವರನ್ನು ಭೇಟಿಯಾಗಿ ಬೆರೆತು ಅರಿತು ಕಟ್ಟಿದ ಕಥನ ಮಹಿಳಾ ಆತ್ಮಕಥನಗಳ ಮಟ್ಟಿಗೆ ಒಂದು ಮೈಲುಗಲ್ಲಿನಂತೆ ಭಾಸವಾಗುತ್ತದೆ.

ಪುರುಷರದೇ ಪಾರಮ್ಯವಿದ್ದ ಅಂದಿನ ಸಾಹಿತ್ಯ ಲೋಕವು ಹೆಣ್ಣುಮಕ್ಕಳನ್ನು ಬರೆಯಲು ಪ್ರೋತ್ಸಾಹಿಸಿತಾದರೂ ಅವರ ಸ್ವತಂತ್ರ, ಪ್ರಗಲ್ಭ ವ್ಯಕ್ತಿತ್ವವನ್ನು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಸರಸ್ವತಿಬಾಯಿ ರಾಜವಾಡೆಯಾದರೋ ಬೆಂಕಿಯಲ್ಲಿ ಅರಳಿದ ಹೂವು. ಕಸದಲ್ಲಿ ಕಸುವುಗೊಂಡ ಚಿನ್ನ. ಸ್ವಂತಿಕೆಯೇ ತಾನಾದ ಸಹಜ ಗಾಂಭೀರ್ಯದ ವ್ಯಕ್ತಿತ್ವ. ಅವಳನ್ನು ಕುರಿತು ಆ ಕಾಲದ ಪ್ರಮುಖ ಸಾಹಿತಿಗಳೊಬ್ಬರು. “ ಆ ಹೆಂಗಸು ಇನ್ನೂ ಇದೆಯೇ”? ಎಂದು ಕೇಳಿದ ಪ್ರಶ್ನೆ ಈ ಅಸಹನೆಗೆ ಮಾತು ಬಂದಂತಿದೆ. “ಆ ಗಂಡಸು ಇನ್ನೂ ಇದೆಯೇ”? ಎಂದು ನಾವು ಕೇಳಲು ಸಾಧ್ಯವೇ? ಎಂದು ತಪ್ತಧ್ವನಿಯಲ್ಲಿ ‘ಗಿರಿಬಾಲೆ’ (ಕಾವ್ಯನಾಮ) ಪ್ರಶ್ನಿಸುತ್ತಾರೆ. ಆ ಕಾಲದ ಪ್ರಸಿದ್ಧ ಲೇಖಕರು, ವಿಮರ್ಶಕರೆನಿಸಿಕೊಂಡವರು ಮಹಿಳೆಯರ ಬರಹಗಳನ್ನು ಸಮಗ್ರಸಾಹಿತ್ಯ ನಿರ್ಮಿತಿಯ ಭಾಗವೆಂಬಂತೆ ಗ್ರಹಿಸಿ ಒಪ್ಪಿಕೊಳ್ಳಲಿಲ್ಲ. ಅಲ್ಲೊಂದು ಇಲ್ಲೊಂದು ಸಹಾನುಭೂತಿಯ ಮಾತಿಗೇ ಅವರ ಬೆಂಬಲ ಪರಿಮಿತವಿತ್ತು.

ತಮ್ಮ ಕಾಲದ ಸಂಗತಿಗಳ ಬಗೆಗೆ ವಸ್ತುನಿಷ್ಠವಾಗಿ, ನಿರ್ಭಯವಾಗಿ ಬರೆದ ರಾಜವಾಡೆ ಮಠದ ಸ್ವಾಮಿಗಳ ಕುರಿತೂ ವಿಡಂಬಿಸುತ್ತಾರೆ. ಆ ಕಾಲದಲ್ಲಿ ಇದು ಸಾಂಪ್ರದಾಯಿಕ ಆವರಣದಲ್ಲಿ ಬದುಕುವ ಸ್ತ್ರೀ ಎತ್ತಿಟ್ಟ ಅಪ್ಪಟ ಕ್ರಾಂತಿಕಾರಕ ಹೆಜ್ಜೆ. ಸಮಾಜದ ‘ಸಂಕುಚಿತ ನಡೆ’ಗಳನ್ನು ಅಂಜಿಕೆ ಹಿಂಜರಿಕೆಗಳ ಎಗ್ಗಿಲ್ಲದೆ ಅನಾವರಣಗೊಳಿಸಿದರು. ಆ ಅರ್ಥದಲ್ಲಿ ಅವರೊಬ್ಬ ಪ್ರಗತಿಶೀಲ ಮಹಿಳೆ. “ಎರಡು ದಶಕಗಳ ಕಾಲ ಕನ್ನಡ ಸಾಹಿತ್ಯಕ್ಕೆ ಸ್ತ್ರೀ ಧ್ವನಿ ಕೂಡಿಸಿದಾಕೆ. ಸ್ತ್ರೀಯರ ಪ್ರಗತಿಗಾಗಿಯೇ ಒಂದು ಪತ್ರಿಕೆಯನ್ನು ಹೊರಡಿಸಿದಾಕೆ, ಆಶು ರಚನೆಕಾರ್ತಿ, ಮಕ್ಕಳಿಗಾಗಿ ಬರೆದರು, ಕಾಲಂ ಬರೆದರು, ಹರಿಕಥೆ ಮಾಡಿ, ಹಾಡಿ, ಹಾಡಿಸಿ, ವೀಣೆ ನುಡಿಸಿ, ನಾಟಕ ರಚಿಸಿ, ಆಡಿಸಿ, ನಟಿಸಿ ಒಟ್ಟಿನಲ್ಲಿ ಕಲೆ ಹಾಗೂ ಸಾಹಿತ್ಯ ಲೋಕದಲ್ಲಿ ಮಿಂಚಿದಾಕೆ” (ಪು. 13 ಮುಂತಾದ ಕೆಲಪುಟಗಳು) ಎಂಬ ಮಾತುಗಳು ಅವರ ವ್ಯಕ್ತಿತ್ವದ ಬಹುಸಾಧ್ಯತೆಗಳನ್ನು ವಿಸ್ಮಯದಿಂದ ಕಟ್ಟಿಕೊಡುತ್ತವೆ.

ಅನ್ನದ ಹಸಿವು ಹಾಗೂ ಪ್ರೀತಿಯ ಹಸಿವುಗಳೆರಡನ್ನೂ ಸಮಾನವಾಗಿ ಅನುಭವಿಸಿದವರು ಸರಸ್ವತಿಬಾಯಿ ರಾಜವಾಡೆ. ತಂದೆಯೆಂಬಾತನನ್ನು ಒಮ್ಮೆಯೂ ಕಾಣದೇ ಬೆಳೆದ ಈ ಪರಿತ್ಯಕ್ತ ಕೂಸು, ಅಕಾರಣ ಅನಾದರವನ್ನೇ ಹೊದ್ದು ಬಾಲ್ಯ ಕಳೆಯುತ್ತಾಳೆ. ಅವಳ ಬದುಕು ದಾರಿದ್ರ್ಯವನ್ನೇ ಹೊತ್ತು ಬಂದು ಹಸಿವು, ಅವಮಾನಗಳಲ್ಲಿ ತಾಯಿಯ ಹೊಡೆತ ತಿರಸ್ಕಾರಗಳಲ್ಲಿ ಕಳೆದರೂ, ಒಳಗಿನ ಆದಮ್ಯ ಹೊಳಪನ್ನು ಕಳೆದುಕೊಳ್ಳದ ಹೆಣ್ಣು ಚೈತನ್ಯವೊಂದರ ಕಥನವಾಗಿ ‘ಮುಂತಾದ ಕೆಲಪುಟಗಳು’ ತೆರೆದುಕೊಳ್ಳುತ್ತದೆ. ಬಡತನದ ಅವಮಾನವು ಒಂಟಿತನವೊಂದನ್ನು ಅನಿವಾರ್ಯವಾಗಿಸುತ್ತದೆ. ಆ ಒಂಟಿತನವೇ ಒಳಗೊಳಗೇ ಗಟ್ಟಿಯಾಗುವ ಛಲವನ್ನೂ, ಅಪಾರವಾದ ಆಂತರಿಕ ಕಲ್ಪನಾ ಶಕ್ತಿಯನ್ನು, ಚಿವುಟಿದಷ್ಟೂ ಚಿಗುರುವ ಧೈರ್ಯವನ್ನೂ ಕೊಟ್ಟುಬಿಡುತ್ತದೆ. ಇದು ಅನೇಕ ಆತ್ಮಕಥನಗಳಲ್ಲಿ ಕಾಣುವ ಸಾಮಾನ್ಯ ಅಂಶ. ಅಜ್ಜಿ, ತಾಯಿಯ ಜೊತೆ ಬೆಳೆದ ಗಿರಿಬಾಲೆ, ಎಳವೆಯಲ್ಲಿ ಹೊಟ್ಟೆಪಾಡಿಗಾಗಿ ನಾಟಕ ಕಂಪನಿಗಳಲ್ಲಿ ನಟಿಸುತ್ತಾ ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಾ, ಮೂಕಿ ಸಿನಿಮಾಗಳಲ್ಲಿ ನಟಿಸುತ್ತಾ ಪುನಃ ಬರಿಗೈಯಾಗಿಯೇ ಹಿಂದಿರುಗುತ್ತಾರೆ. ಶಾಲೆಯ ಸಾಂಪ್ರದಾಯಿಕ ವಿದ್ಯಾಭ್ಯಾಸ ಅವಳೊಳಗಿನ ಸ್ವೋಪಜ್ಞತೆಯನ್ನು ಗುರುತಿಸದಾಗುತ್ತದೆ. ಗುರಿಯಿಲ್ಲದ ಬದುಕು ಹಾಗೂ ಬಡತನಗಳು ತನಗಿಂತ ಮೂವತ್ತೇಳು ವರ್ಷ ದೊಡ್ಡವನಾದ ಪುರುಷನನ್ನು ಮದುವೆಯಾಗುವುದನ್ನು ಅನಿವಾರ್ಯವಾಗಿಸುತ್ತದೆ. ಡೆಪ್ಯೂಟಿ ಕಲೆಕ್ಟರ್ ಆಗಿದ್ದ ಅಂಬಿಕಾಪತಿ ರಾಯ್‍ಶಾಸ್ತ್ರೀ ರಾಜವಾಡೆ, ಅಪ್ಪ ಅನ್ನುವುದಕ್ಕಿಂತ ಅಜ್ಜ ಅನಿಸುತ್ತಿದ್ದರು!. ಈ ಮುದುಕನಿಗೆ ಯಾರೂ ಸಿಗಲಿಲ್ಲವೆಂದು ನನ್ನನ್ನು ಬಲಿಕೊಟ್ಟರು ಎಂಬ ಮಾತುಗಳು ಹಲವು ಧ್ವನಿಗಳನ್ನು ತಾವೇ ಹೊರಸೂಸುತ್ತವೆ ‘ಗಂಡ ಎಂದರೆ ಹೂವು ಚಿನ್ನ ತಂದು ಕೊಡವವನು’ ಎಂದು ತಿಳಿದಿದ್ದ ಎಳೆ ಹುಡುಗಿ ‘ದಾಂಪತ್ಯ’ ವೆಂಬ ಮಧುರ ಭಾವವನ್ನು ಮುಂದೆಂದೂ ಕಾಣುವುದು ಸಾಧ್ಯವಾಗುವುದಿಲ್ಲ. ಕರ್ತವ್ಯಕ್ಕೆ ಹೋಗುವಾಗ ಮನೆಯ ಹೊರಗಿನಿಂದ ಬೀಗ ಹಾಕಿ ‘ನಾಟ್ ಎಟ್ ಹೋಮ್’ ಎಂದು ಬೋರ್ಡು ಹಾಕುತ್ತಿದ್ದ ಗಂಡ ಹತ್ತಿರ ಬಂದರೇ ಅಸಹ್ಯವೆನಿಸುತ್ತಿತ್ತು’ . ಮನೆಯೆಂಬ ಶ್ರೀಮಂತ ಜೈಲಿನಲ್ಲಿ ಬಂಧಿಯಾದ ಸರಸ್ವತಿ, ಗಂಡನ ಸಂಗ್ರಹದಲ್ಲಿದ್ದ ಪುಸ್ತಕಗಳಲ್ಲಿ ಬಿಡುಗಡೆ ಅರಸಿದ್ದೇ ಅವರ ಜೀವನದ ತಿರುವಿಗೆ ಕಾರಣವಾಯ್ತು. ಸಾಹಿತ್ಯ ಸರಸ್ವತಿಯ ಹುಟ್ಟು ಅಲ್ಲಿ ಕಾದಿತ್ತು.

ಹೆಂಡತಿಯನ್ನು ಯಾರೊಂದಿಗೂ ಮಾತನಾಡಗೊಡದ ಗಂಡನ ಕ್ರೌರ್ಯದ ಹಿಂದಿನ ಅಸಹಾಯಕತೆಯನ್ನು ಅವರು ಸೂಕ್ಷ್ಮವಾಗಿ ವಿವರಿಸುತ್ತಾರೆ. “ನಿನ್ನ ಗಂಡ ಮುದುಕ” ಎಂದು ಅವರು ಅಂದರೆ? ಎಂದು ಕೇಳುವಲ್ಲಿ “ಪಾಪಕ್ಕೆ ಬಲಿಯಾಗಬೇಡ” ಎಂದು ಅಂಗಲಾಚುವಲ್ಲಿ ಸುಂದರಿಯಾದ ಉಜ್ವಲ ವ್ಯಕ್ತಿತ್ವದ ಹೆಂಡತಿಯನ್ನು ಗೆರೆದಾಟದಂತೆ ಕಟ್ಟಿಹಾಕುವ ಗಂಡಸಿನ ಅಸಹಾಯ ತಳಮಳ ವ್ಯಕ್ತವಾಗುತ್ತದೆ. ಸಿಂಗಾಪುರದಲ್ಲಿ ಡೆಪ್ಯುಟಿ ಕಮಿಷನರ್ ಆಗಿ ಅತ್ಯುನ್ನತ ಹುದ್ದೆಯಲ್ಲಿದ್ದು, ಪತ್ನಿಯ ವಿಷಯದಲ್ಲಿ ವಿಚಿತ್ರ ಹಾಗೂ ವಿಕ್ಷಿಪ್ತ ನಡವಳಿಕೆಯನ್ನು ತೋರುತ್ತಿದ್ದ ಪತಿಯನ್ನು ಅವರು ಎದುರಿಸಿದ ಪರಿಯಲ್ಲೇ ದಿಟ್ಟ ವ್ಯಕ್ತಿತ್ವದ ಹೊರಳುವಿಕೆ ಗೋಚರವಾಗುತ್ತದೆ. ಕುಲ ಪತ್ನಿಯಾದವಳು ಸೂರ್ಯನನ್ನು ನೋಡಬಾರದು ಪಾತಿವ್ರತ್ಯ ಕೆಡುತ್ತದೆ ಎನ್ನುತ್ತಿದ್ದ ಗಂಡ, ಕಿಟಕಿಯ ಬಳಿ ನಿಂತು ರಸ್ತೆ ನೋಡುವುದನ್ನೂ ಸಹಿಸದಷ್ಟು ಸಿನಿಕ. ಪತ್ನಿ ಮನೆಯ ಹಿಂದಿರುವ ಬಾಳೆತೋಟಕ್ಕೆ ಹೋದದ್ದನ್ನು ಅಚಾನಕ್ಕಾಗಿ ಕಂಡ ಆತ ರೌದ್ರಾವತಾರ ತಾಳಿ ಗೊನೆತುಂಬಿದ ಬಾಳೆತೋಟವನ್ನೇ ನಿರ್ದಯವಾಗಿ ಕೊಚ್ಚಿಹಾಕುತ್ತಾನೆ. ಈ ಘಟನೆಯ ಹಿಂದಿರುವ ಅಧಿಕಾರ ಮತ್ತು ಹಿಂಸೆಯ ಸ್ವರೂಪ ಹಾಗೂ ಅದಕ್ಕೆ ಸರಸ್ವತಿಬಾಯಿ ತೋರಿದ ಪ್ರತಿರೋಧ ಎರಡೂ ಇಲ್ಲಿ ನಮ್ಮನ್ನು ಕಲಕುತ್ತದೆ. “ನೀವು ಎಂಥ ಗಂಡು? ದತ್ತು ತೆಗೆದುಕೊಂಡು ಮದುವೆ ಮಾಡಬೇಕಾದಂಹ ಹುಡುಗಿಯ ಹತ್ತಿರ ಹೀಗೆ ಮಾಡುತ್ತೀರಲ್ಲ ಇಷ್ಟು ಕಲಿತು! ನಿಮ್ಮ ವಿದ್ಯೆಗೆ ಧಿಕ್ಕಾರ” ಎಂದು ಕರಿಮಣಿ ಕಡಿದು ಬಿಸಾಡುತ್ತಾರೆ. ತಕ್ಷಣದ ಈ ಪ್ರತಿಕ್ರಿಯೆಯ ಆಚೆಗೂ ಗಂಡನ ಅಸಹಾಯಕತೆಯನ್ನು ಅರಿತು ಮನ್ನಿಸುವ ಅವರು, ಗಂಡನ ಕೊನೆಗಾಲದಲ್ಲಿ ತಾಯಿಯಂತೆ ನೋಡಿಕೊಳ್ಳುತ್ತಾರೆ. ಇದನ್ನೆಲ್ಲ ಹೇಳುವಾಗ ಒಂದು ತಣ್ಣನೆಯ ಆತ್ಮವಿಮರ್ಶೆಯ ಧ್ವನಿ ಅವರಲ್ಲಿದೆ.

ಗಂಡನ ಮರಣಾ ನಂತರ ಅವರೊಳಗಿನ ಅದಮ್ಯ ಚೈತನ್ಯವು ವಿಕಾಸವಾದ ಬಗೆಯೇ ಕುತೂಹಲಕರ. ಗಿರಿಬಾಲೆ ಎಂಬ ಕಾವ್ಯನಾಮದಲ್ಲಿ ಬರೆಯತೊಡಗಿದ ಅವರಿಗೆ, ಅನೇಕ ಸಮಕಾಲೀನ ಸಾಹಿತಿಗಳ ಬೆಂಬಲವೂ ಸಿಗುತ್ತದೆ. ‘ಸಣ್ಣಕತೆಗಳ ಅನಭಿಷಿಕ್ತ ರಾಣಿ’ ಎಂದು ‘ದಿ ಹಿಂದೂ’ ಪತ್ರಿಕೆಯಲ್ಲಿ ವಿಮರ್ಶಕರೊಬ್ಬರು ಬರೆಯುವ ಮಟ್ಟಿಗೆ ಸರಸ್ವತಿಬಾಯಿಯವರು ಪ್ರಭಾವಶಾಲಿ ಲೇಖಕಿಯಾಗಿದ್ದರು. ಯಾವ ಭಯವಿಲ್ಲದೆ ಬರೆಯುವ ಹೆಂಗಸನ್ನು ಆ ಕಾಲವು ಬೆರಗಗಣ್ಣಿನಲ್ಲಿ ಕಂಡಿತು. ‘ಗಂಡಾಗಿ ಹುಟ್ಟಬೇಕಿತ್ತು, ತಪ್ಪಿ ಹೆಣ್ಣಾಗಿ ಹುಟ್ಟಿದ್ದಾಳೆ’ ಅಂತಲೂ ಹೇಳುತ್ತಿದ್ದರು ಜನ. “ಹೇಗುಂಟು ನೋಡಿ! ಕೇಳಿ ನನಗೆ ಜೋರು ನಗೆ ಬರುವುದು. ನಾನು ನಿರ್ಭಯಳಂತೂ ಹೌದು. ಅನ್ಯಾಯವನ್ನು ಪ್ರತಿಭಟಿಸುವವಳೂ. ಆಗದ್ದನ್ನು ಕಂಡರೆ ಯಾವ ದಾಕ್ಷಿಣ್ಯ ಗೀಕ್ಷಿಣ್ಯವಿಲ್ದೇ ಹೇಳುವವಳೇ. ಯಾರ ಇಚ್ಛೆಗೂ ಬಗ್ಗುವವಳಲ್ಲ, ಹಠವಾದಿ ಹೆಂಗಸು ಅಂತಲೂ ಜನ ಹೇಳುತ್ತಿದರು.” (ಪು. 51). ಕತೆಗಳ ಹೊರತಾಗಿಯೂ ಹೆಣ್ಣುಮಕ್ಕಳನ್ನು ಸಶಕ್ತಗೊಳಿಸಬೇಕೆಂಬ ಸಂಕಲ್ಪದಲ್ಲಿ ಅವರು ಬರೆಯುತ್ತಿದ್ದ ಅಂಕಣಗಳು ಹಾಗೂ ಲೇಖನಗಳು ವಿಶೇಷ. ಆ ಕಾಲದ ಎಲ್ಲ ಪ್ರಮುಖ ಪತ್ರಿಕೆಗಳಿಗೆ ಅವರು ಬರೆದರು. ‘ಕಥಾವಳಿ’ ಯಲ್ಲಿ ಏಳು ವರ್ಷಗಳ ಕಾಲ ‘ಅಕ್ಕನ ಓಲೆ, ಎಂಬ ಕಾಲಂ ಬರೆದರು. ಸ್ತ್ರೀ ಸ್ವಾತಂತ್ರ್ಯ, ಅವರ ಆರ್ಥಿಕ ಸ್ಥಿತಿ, ಅವರ ಬೌದ್ಧಿಕ ಬೆಳವಣಿಗೆ.. ಹೀಗೆ ಅವರ ಸ್ತ್ರೀ ಕೇಂದ್ರಿತ ಬರವಣಿಗೆಗಳು ಪ್ರಖರವಾಗಿದ್ದವು. ತಮ್ಮ ಪ್ರಭಾವವನ್ನು ಆ ಕಾಲದ ಮೇಲೆ ಛಾಪಿಸಿ ‘ಸುಪ್ರಭಾತ’ ಎಂಬ ಮಹಿಳಾ ಪ್ರಧಾನ ಪತ್ರಿಕೆಯನ್ನೂ ನಡೆಸಿ ಮೈಲುಗಲ್ಲು ಸ್ಥಾಪಿಸಿದರು. ಮಹಿಳೆಯರ ಕುರಿತಾದ ಸಾಮೂಹಿಕ ನೆಲೆಯ ಜವಾಬ್ದಾರಿಯನ್ನು ಈ ಮೂಲಕ ನಿಭಾಯಿಸಿದರು. ಮಹಿಳಾ ಚಳವಳಿಗಳಿನ್ನೂ ಮುನ್ನೆಲೆಗೆ ಬಂದಿರದ ಕಾಲದಲ್ಲಿ ಅವರ ಕ್ರಿಯಾಶಕ್ತಿ ದೊಡ್ಡದು. ‘ಅಕ್ಕನ ಓಲೆ’ ಗೆ ಮಹಿಳೆಯರಿಂದ ಬರುತ್ತಿದ್ದ ಪ್ರತಿಕ್ರಿಯೆಗಳು ಅವರಿಗೆ ಮಹಿಳೆಯರಿಗೇ ಪ್ರತ್ಯೇಕ ಪತ್ರಿಕೆಯನ್ನು ಹೊರಡಿಸುವ ಉತ್ಸಾಹವನ್ನು ಮೂಡಿಸಿತು. “ ಹೆಂಗಸರು ಜ್ಞಾನವಂತರಾಗಬೇಕು. ಬರೀ ಪುಸ್ತಕ ಜ್ಞಾನವಷ್ಟೇ ಅಲ್ಲ ಲೌಕಿಕ ಜ್ಞಾನವೂ ಇರಬೇಕೆಂಬ ಎಚ್ಚರದಲ್ಲಿ ಬರಹಗಳನ್ನು ರೂಪಿಸಿದರು. ತಮ್ಮ ಜ್ಞಾನವನ್ನೂ ಒರೆಗೆ ಹಚ್ಚಿದರು. ಲೋಕಜ್ಞಾನ ಹಾಗೂ ಪರಿಪಕ್ವ ನೋಟವು ಸಂಗಮಿಸಿದಂತೆ ಬದುಕಿದರು. ಅದನ್ನೇ ಬರೆದರು. ‘ನಮ್ಮ ಸಾಹಿತ್ಯವೆಂದರೆ ಕೊತ್ತಂಬರಿ ಜೀರಿಗೆ’ ಎಂದ ಹೆಂಗಸರನ್ನೂ, ಗೇಲಿಮಾಡಿ ನಕ್ಕ ಗಂಡಸರನ್ನೂ ‘ಖೇರೇ ಮಾಡಲಿಲ್ಲ’ ಎನ್ನುವ ಸರಸ್ವತಿಯವರು ಸಕಾರಾತ್ಮಕವಾದ ಹಠವೊಂದನ್ನು ಕೊನೆಯವರೆಗೂ ಸಾಕಿಕೊಂಡಿದ್ದರು.

ಇಷ್ಟೆಲ್ಲ ಸಾಧಿಸುವಲ್ಲಿ ಅನೇಕ ಸಹೃದಯರ ನೆರವೂ ಅವರಿಗೆ ದೊರೆಯಿತು. ಗೋವಿಂದ ಪೈಯವರು ತೋರಿಸಿದ ಪಿತೃವಾತ್ಸಲ್ಯವನ್ನು ಮನದುಂಬಿ ನೆನೆಯುವ ಸರಸ್ವತಿಬಾಯಿ, ಅವರನ್ನು ‘ಗುರುದೇವ’ ಎಂದೇ ಕರೆದುಕೊಂಡಿದ್ದಾರೆ. ಈ ಆಪ್ತ ನಂಟು ಅವರಿಗೆ ಧೈರ್ಯ ಸಮಾಧಾನಗಳ ಒರತೆಯೂ ಆಗಿತ್ತು. ಅವರ ಬರವಣಿಗೆ, ವರ್ಚಸ್ಸು ಹಾಗೂ ವ್ಯಕ್ತಿತ್ವಗಳನ್ನು ಆರಾಧಿಸುತ್ತ ಮಾನಸಿಕ ಗುರುವಿನಂತೆ ಆರಾಧಿಸಿದ್ದ ಅವರು, ನಿಜ ಜೀವನದಲ್ಲೂ ಗುರುವಾಗಿ ಮಾರ್ಗದರ್ಶನ ಮಾಡಿದ್ದು ತನ್ನ ಭಾಗ್ಯವೆಂದು ಸ್ಮರಿಸುತ್ತಾರೆ. ಸಾಹಿತ್ಯ ರಚನಾ ಶಕ್ತಿಯಿದ್ದವರು ಪತ್ರಿಕೋದ್ಯಮಕ್ಕೆ ಕೈ ಹಾಕಬಾರದು, ಈ ಎರಡು ದೋಣಿಗಳ ಪಯಣ ಸಂಕಟಕರ ಎಂಬ ಅವರ ಸಲಹೆ ಅಥವಾ ಆಗ್ರಹದಂತೆ ಸರಸ್ವತಿಬಾಯಿಯವರು ಸುಪ್ರಭಾತ ಪತ್ರಿಕೆಯನ್ನು ನಿಲ್ಲಿಸುತ್ತಾರೆ. ಆದರೆ ಪತ್ರಿಕೋದ್ಯಮದಲ್ಲಿ ಅವರು ಮಾಡಿದ ಪ್ರಯೋಗಗಳು ಅವರನ್ನು ವಿಸ್ತರಿಸಿದ್ದು ಸುಳ್ಳಲ್ಲ. ಅದರಿಂದಾಗಿ ಹೊಸ ಲೇಖಕಿಯರ ಹಾಗೂ ಮಹಿಳಾ ಓದುಗರ ಉದಯವೂ ಆಯಿತು. ಈ ಮಟ್ಟಿಗೆ ಚಿಕ್ಕ ಸಾಹಿತ್ಯ ಸೇವೆಯನ್ನು ಮಾಡಿದೆನೆಂಬ ತೃಪ್ತಿ ಅವರಲ್ಲಿತ್ತು.

ಗೋವಿಂದ ಪೈಗಳೊಂದಿಗಿನ ಈ ಆತ್ಮಸಂಗಾತವು ಅವರ ಜೀವಭಾವಗಳನ್ನು ಕಟ್ಟುವಲ್ಲಿ ಪ್ರೇರಣೆಯಾಗಿದ್ದುದು ಅವರ ಮಾತುಗಳಲ್ಲಿ ಹೊಳೆಯುತ್ತದೆ. ಪತ್ರಗಳ ಮೂಲಕ ವಿಸ್ತರಿಸಿದ ಈ ಬಂಧ ದಾಖಲೆಯಾಗಿ ಇಂದೂ ಉಳಿದುಕೊಂಡಿದೆ. ಕೊನೆಯ ದಿನಗಳಲ್ಲಿ ತಮ್ಮ ಇರುವಿಕೆಯನ್ನೇ ಜಗತ್ತಿನಿಂದ ಮರೆಮಾಚಿದಂತೆ ಇದ್ದರು ಅವರು. ವೈದೇಹಿಯವರು ರಾಜವಾಡೆಯವರನು ಹುಡುಕಿ ಹೊರಟಾಗ ಅವರು ಬದುಕಿದ್ದರೆಂಬುದೇ ಅನೇಕರಿಗೆ ತಿಳಿದಿರಲಿಲ್ಲ. ತಮ್ಮೊಳಗಿನ ಲೇಖಕಿಯ ಪುರಾವೆಗಳನ್ನು ಉಳಿಸುವುದು ಅವರಿಗೆ ಬೇಕಿಲ್ಲವೆಂಬಂತೆ ಅವರು ಬದುಕಿದ್ದರು. ಉಡುಪಿಯ ಒಂದು ತಲೆಮಾರಿನವರಿಗೆ ಅವರು ದಂತಕತೆ. ಅಪ್ರತಿಮ ಸೌಂದರ್ಯ, ಘನತೆ ಹಾಗೂ ಗಾಂಭೀರ್ಯದ ಮಾದರಿಯಂತೆ ಇದ್ದವರು. ಜರತಾರಿ ಸೀರೆಯುಟ್ಟು ಆಭರಣಗಳನ್ನು ತೊಟ್ಟು ರಥಬೀದಿಯಲ್ಲಿ ನಡೆದು ಬರುತ್ತಿದ್ದರೆ ಅವರು ಪ್ರತ್ಯಕ್ಷ ಮಹಾರಾಣಿಯೇ ನಡೆದು ಬರುವಂತೆ ಕಾಣುತ್ತಿದ್ದರಂತೆ. ತಮ್ಮ ಬೌದ್ಧಿಕ ಪ್ರಖರತೆಯಿಂದ ಅವರು ಕಟ್ಟಿಕೊಂಡ ಬದುಕು ಆ ಕಾಲಕ್ಕೆಅಪರೂಪದ್ದಾಗಿತ್ತು. ಇದೆಲ್ಲವನ್ನು ತಾವೇ ದೂರದಿಂದ ನೋಡುತ್ತಾ, ಇವೆಲ್ಲ ಒಂದು ಹುಡುಗಾಟದಂತೆ ತೋರುತ್ತದೆ ಎಂದೋ, ಅದೆಲ್ಲ ಒಂದು ಹುಚ್ಚಲ್ಲವೇ ಎಂದೋ ಮಾತು ತೇಲಿಸುತ್ತಿದ್ದರು. ರಾಗದ್ವೇಷ, ದುಃಖ, ಉದ್ವೇಗಗಳನ್ನೆಲ್ಲ ದಾಟಿನಿಂತ ಜೀವನ್ಮುಕ್ತ ಭಾವ ಅವರನ್ನು ಆವರಿಸಿತ್ತು. ಹಾಗಂತ ಬದುಕಿನ ಮುಗ್ಧತೆ, ಸಂಭ್ರಮ, ಕಲ್ಪಕಶಕ್ತಿ, ಕನಸುಗಾರಿಕೆ, ಕ್ರಿಯಾಶೀಲತೆ, ಕತೆಗಾರಿಕೆಯಲ್ಲಿ ಮೈಮರೆಸುವ ಕಲೆ ಚೂರೂ ಮಾಸಿರಲಿಲ್ಲ. ತಮ್ಮ ಕೊನೆಯ ದಿನಗಳಲ್ಲಿ ಅವರಿಗಾದ ಅಂತರಂಗ ಪರಿವರ್ತನೆ ಅಗಾಧವಾದುದು. ತಮ್ಮ ಹಣ ಒಡವೆಗಳನ್ನೆಲ್ಲ ತಮ್ಮದಲ್ಲವೆಂಬ ನಿರ್ಮೋಹದಲ್ಲಿ ದೈವಕ್ಕೆ ಅರ್ಪಿಸುತ್ತಾರೆ. ದೇವಸ್ಥಾನವೊಂದನ್ನು ನಿರ್ಮಿಸಿ ತಮ್ಮ ಮನೆತನಕ್ಕೆ ಕೊಡುಗೆಯಾಗಿ ಬಂದಿದ್ದ ಶಾರದಾ ವಿಗ್ರಹವನ್ನು ಸ್ಥಾಪಿಸಿ, ಆ ತಾಯಿಯ ಹೃದಯದಲ್ಲಿ ತಾದಾತ್ಮ್ಯಗೊಂಡಂತೆ ಬದುಕಿ ತೆರಳುತ್ತಾರೆ. ಅವರ ಈ ರೂಪಾಂತರ, ಅಧ್ಯಾತ್ಮಿಕ ಮನೋಧರ್ಮದ ಪ್ರಕಾಶ ಎಲ್ಲವನ್ನೂ ವೈದೇಹಿಯವರು ‘ಮುಂತಾದ ಕೆಲ ಪುಟಗಳಲ್ಲಿ ’ ನಿರೂಪಿಸಿದ ರೀತಿ ಗಹನವಾದುದು. ಪತಿಯ ಮೂಲಕ ಅವರ ಮಡಿಲಿಗೆ ಬಂದ ಸಾವಿರ ವರ್ಷಗಳಷ್ಟು ಹಿಂದಿನ ಶಾರದಾ ವಿಗ್ರಹ ಅವರ ಬದುಕಲ್ಲಿ ಬೆರೆತು ಬದಲಿಸಿದ ರೀತಿ ವಿಸ್ಮಯವೆನಿಸುತ್ತದೆ. ಭಕ್ತಿಯಲ್ಲಿ ಮಾಗುವ ಹೆಣ್ಣು ಜೀವವೊಂದರ ಈ ಒಳಕಥನ ಹೊರಗಿನ ಸಿದ್ಧಾಂತಗಳಿಗೆ ನಿಲುಕುವಂತಹುದಲ್ಲ. ‘ಸ್ತ್ರೀಪರ ದೃಷ್ಟಿ’ ಗೆ ಇರಬಹುದಾದ ಹಲವು ಆಯಾಮಗಳನ್ನು ‘ಕಾಣಿಸು’ವಲ್ಲಿ ಈ ನಿರೂಪಣೆ ಯಶಸ್ವಿಯಾಗಿದೆ.

ಸ್ವತಃ ತಾಯಿಯಾಗದ ಸರಸ್ವತಿಯವರು ತಾಯ್ತನದ ಅಖಂಡಾನುಭೂತಿಯನ್ನು ತಾಯಿ ಶಾರದೆಯಲ್ಲಿ ಅನುಭವಿಸುತ್ತ ಅದನ್ನು ಸುತ್ತಲಿನವರಿಗೂ ಹಂಚಿದ ಪರಿ ಹೃದ್ಯವಾದುದು. ಜೀವ ಹೊರಗಿನ ಕಣ್ಕಟ್ಟುಗಳನ್ನು ಕಳಚಿಕೊಳ್ಳತ್ತ ನಿರುಮ್ಮಳಗೊಳ್ಳುವ ಬಗೆಯೇ ವೈಚಾರಿಕ ಆಕೃತಿಗಳಿಗೆ ನಿಲುಕದ್ದು. ಭಕ್ತಿಗೀತೆ ಕಟ್ಟಿ ಹಾಡುವ, ಪೌಳಿಯಲ್ಲಿ ಕೂತು ಬತ್ತಿಹೊಸೆಯುವ ಧ್ಯಾನಸ್ಥ ಐಕ್ಯದಲ್ಲಿ ಕರಗುತ್ತ ತಮ್ಮ ಐಡೆಂಟಿಟಿಯನ್ನು ಕಳೆದುಕೊಳ್ಳಬಯಸುವ ರಾಜವಾಡೆ, ಕೊನೆಯಲ್ಲಿ ನಮಗೆ ಕಾಣಿಸುತ್ತಾರೆ. ಏನಿದೆ ಈ ಮೌನದಲ್ಲಿ? ಎಂದು ನಿರೂಪಕಿ ವೈದೇಹಿಯವರು ಪ್ರಶ್ನೆಯಾಗುತ್ತಾರೆ. ತನ್ನ ಪ್ರೀತಿಯ ಹಸಿವನ್ನು ಶಾರದಾಂಬೆಯೇ ಇಂಗಿಸಿಬಿಟ್ಟಳು ಎಂದವಳಲ್ಲಿ ಮನುಷ್ಯಸಹಜ ನರಳಿಕೆ ಇರಲಿಲ್ಲವೆ? ಕಟ್ಟೇಕಾಂತದಲ್ಲಿಯೂ? ಎಂದು ಸ್ವಗತಕ್ಕಿಳಿಯುತ್ತಾರೆ. ಒಬ್ಬ ಹೆಣ್ಣಿನ ಮನದಲ್ಲಿ ಇನ್ನೊಬ್ಬಳು ಇಳಿಯುತ್ತಾ ಆ ಕಳವಳದಲ್ಲಿ ಕರಗುತ್ತಾ ಎಚ್ಚೆತ್ತುಕೊಳ್ಳುತ್ತಾ ಹೋಗುವ ಹೃದ್ಯ ನಿರೂಪಣೆಯಿಂದ ಈ ಆತ್ಮಕಥನವು ಕಾಡುತ್ತದೆ. ವೈದೇಹಿಯವರಿಗೆ ಕೊನೆಗೂ ಅನಿಸುವುದು ಹೀಗೆ. “ಆಕೆ ಸ್ಥಾಪಿಸಿಕೊಂಡ ಘನ ಮೌನದ ಗುರುತು ಅಲ್ಲಲ್ಲಿ ಹತ್ತಿದಂತಾಗಿತ್ತು.. ತಪ್ಪಿದಂತಾಗುತ್ತಿತ್ತು. ಗಟ್ಟಿಕೇಳಿದರೆ ಲೇಖಕಿ ಗಿರಿಬಾಲೆ ಅವರ ಮನೋಕೇಂದ್ರದಲ್ಲಿ ಇದ್ದೇ ಇದ್ದಳು. ನನ್ನ ಪ್ರಯತ್ನಕ್ಕೆ ಹಠಕ್ಕೆ ಎಲ್ಲೋ ಒಂಚೂರು ಕದಲಿ ಮರುಕ್ಷಣ ಮೌನಶಿಲೆಗೆ ಆತುಕೊಂಡು ಎಂದಿನ ಮಾತಿನ ಪರದೆ ಇಳಿಬಿಡುತ್ತಿದ್ದಳು” (ಪು 23) ಮಾತು ಬರಹ ಯಾವುದರಲ್ಲೂ ಪೂರ್ತಿ ತೆರೆದುಕೊಳ್ಳಲಾರದ್ದು ಕೊನೆಗೂ ಏನೋ ಉಳಿದೇ ಹೋಗುತ್ತದೆ. ಆದ್ದರಿಂದಲೇ ಇವು ‘ಮುಂತಾದ ಕೆಲಪುಟಗಳು’ ಮಾತ್ರ. ಮಾತು ಮತ್ತು ಮೌನಗಳ ಚರಿತ್ರೆ ನೆರಳು ಬೆಳಕಿನಂತೆ ನಮ್ಮನ್ನು ಕಾಡುತ್ತದೆ. “ಅದು ಇನ್ನೂ ಇದೆಯಾ?” ಎಂಬ ಪೊಗರಿನ ಪ್ರಶ್ನೆಗೆ ಉತ್ತರ ನೀಡದೆಯೂ ಉತ್ತರವಾಗುತ್ತದೆ.

ಈ ಹಿಂದಿನ ಅಂಕಣ ಬರಹಗಳು:

ಹೋದವರು ಹಿಂದಿರುಗಿ ಬರಲು ಹಾದಿಗಳಿಲ್ಲ

ನಿಗೂಢ ಮನುಷ್ಯರು: ತೇಜಸ್ವಿಯವರ ವಿಶ್ವರೂಪ ದರ್ಶನ

ಕನಕನ ಕಿಂಡಿಯಲ್ಲಿ ಮೂಡಿದ ಲೋಕದೃಷ್ಟಿ

ವಿಶ್ವಮೈತ್ರಿಯ ಅನುಭೂತಿ : ಬೇಂದ್ರೆ ಕಾವ್ಯ

ಕಾರ್ನಾಡರ ಯಯಾತಿ- ಕಾಲನದಿಯ ತಳದಲ್ಲಿ ಅಸ್ತಿತ್ವದ ಬಿಂಬಗಳ ಹುಡುಕಾಟ

ಹರಿವ ನದಿಯಂಥ ಅರಿವು : ಚಂದ್ರಿಕಾರ ಚಿಟ್ಟಿ

ಕಾಲುದಾರಿಯ ಕವಿಯ ಅ_ರಾಜಕೀಯ ಕಾವ್ಯ

MORE NEWS

"ನಿಶ್ಯಬ್ಧ ಜಾತ್ರೆ" ಎಂದೆನಿಸುವ ವಿ...

17-10-2021 ಬೆಂಗಳೂರು

‘ಭಾರತ ದೇಶದಲ್ಲಿ ಜನಸಾಮಾನ್ಯರು ಕ್ಯಾಲೆಂಡರ್ ನ ವಾರಗಳು ಮತ್ತು ದಿನಾಂಕವನ್ನು ಅನುಸರಿಸಿ ಕೆಲಸ ಮತ್ತು ಜೀವನವನ್ನು...

ಬಿಡುಗಡೆಯ ಹಾದಿಯ ಪಿಸುಮಾತು It's O...

15-10-2021 ಬೆಂಗಳೂರು

‘ಬದುಕಿನ ತಿರುವುಗಳಿಗೆ ನಾವು ಹೇಗೆ ಪ್ರತಿಸ್ಪಂದಿಸುತ್ತೇವೆ ಎನ್ನುವುದು ಬಹುತೇಕ ಸಂದರ್ಭಗಳಲ್ಲಿ ನಿರ್ಧರಿಸಲ್ಪಡುವ...

ಮಹಿಳೆಯರ ಹಕ್ಕುಗಳು ಮತ್ತು ಸಂವಿಧಾನ...

15-10-2021 ಬೆಂಗಳೂರು

‘ಇಂದು ಮಹಿಳಾ ಹಕ್ಕುಗಳ ಗುರುತಿಸುವಿಕೆಗೆ ಮೂಲ ಶಕ್ತಿ ಎಂದೇ ಹೇಳಬಹುದಾದ ಅನುಚ್ಛೇದ 15 (3)[ii] ರ ಚರ್ಚೆ ಸೋಜಿಗ ...