ಹೊಸ ರಚನೆಗೆ ಪ್ರೇರಕವಾಗುವ ಪತ್ರಗಳು

Date: 11-11-2021

Location: ಬೆಂಗಳೂರು


‘ಪತ್ರಿಕೆಗಳಿಂದ ಹೋಗುವ ಪತ್ರಗಳು ಹೊಸ ರಚನೆಗಳಿಗೆ ಪ್ರೇರಕಶಕ್ತಿಯಾಗುತ್ತವೆ. ಇದಕ್ಕೆ ಕನ್ನಡದ ನವೋದಯ/ ಪ್ರಗತಿಶೀಲ/ ನವ್ಯ/ ದಲಿತಬಂಡಾಯ ಸಾಹಿತ್ಯದಲ್ಲಿ ಸಾಕಷ್ಟು ನಿದರ್ಶನಗಳು ಸಿಗುತ್ತವೆ’ ಎನ್ನುತ್ತಾರೆ ಹಿರಿಯ ಪತ್ರಕರ್ತ, ಲೇಖಕ ಜಿ.ಎನ್.ರಂಗನಾಥರಾವ್. ಅವರ ಪತ್ರತಂತು ಮಾಲಾ ಅಂಕಣದಲ್ಲಿ ಪತ್ರಿಕೆಗಳು ಮತ್ತು ಲೇಖಕರ ನಡುವಿನ ಪತ್ರಸಂಭಾಷಣೆಗಳ ಕುರಿತು ವಿಶ್ಲೇಷಿಸಿದ್ದಾರೆ. 

ಪತ್ರಕರ್ತರಾದವರು ಹೊಸ ಸಾಹಿತ್ಯ ರಚನೆಯಲ್ಲಿ, ಹಿರಿಯ ಪತ್ರಕರ್ತ ಟಿ.ಎಸ್.ರಾಮಚಂದ್ರ ರಾವ್ ಒಮ್ಮೆ ಹೇಳಿದಂತೆ, ಲೇಖಕರಿಗೆ ಮೋಟಿವೇಟ್ ಮಾಡುತ್ತಲೇ ಇರಬೇಕಾಗುತ್ತದೆ. ಪತ್ರಿಕೆಗಳಿಂದ ಹೋಗುವ ಪತ್ರಗಳು ಹೊಸ ರಚನೆಗಳಿಗೆ ಪ್ರೇರಕಶಕ್ತಿಯಾಗುತ್ತವೆ. ಇದಕ್ಕೆ ಕನ್ನಡದ ನವೋದಯ/ ಪ್ರಗತಿಶೀಲ/ ನವ್ಯ/ ದಲಿತಬಂಡಾಯ ಸಾಹಿತ್ಯದಲ್ಲಿ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಈ ನಿಟ್ಟಿನಲ್ಲಿ ನಾನು ಕರ್ನಾಟಕದ ಬಹುತೇಕ ಲೇಖಕರ ಜೊತೆ ಸತತ ಸಂಪರ್ಕಹೊಂದಿದ್ದೆ. ನಾನು ಪತ್ರ ಬರೆದಾಗಲೆಲ್ಲ ತಮ್ಮ ಕೃತಿಗಳನ್ನಿತ್ತು ಸಂಚಿಕೆಗಳನ್ನು ಶ್ರೀಮಂತಗೊಳಿಸಿದ್ದಕ್ಕೆ ನಾನು ಅವರಿಗೆಲ್ಲ ಕೃತಜ್ಞನಾಗಿದ್ದೇನೆ. ಆದರೆ ಸದಾಕಾಲವೂ ಇಂಥ ಪ್ರಯತ್ನಗಳು ಸಫಲವಾಗುತ್ತವೆ ಎಂದು ಹೇಳಲಾಗದು. ಈ ಕೆಳಗಿನ ಪತ್ರಗಳನ್ನು ನೋಡಿ: 

ಎಂ.ಗೋಪಾಲಕೃಷ್ಣ ಅಡಿಗ
4-4-91.

ಪ್ರಿಯ ರಂಗನಾಥ ರಾವ್,
ನೀವು ಮೊನ್ನೆ ಫೋನ್ ಮಾಡಿದಾಗ ಹೆಚ್ಚು ಯೋಚಿಸದೆ ಮಾಸ್ತಿಯವರ ಮೇಲೆ ಒಂದು ಲೇಖನ ಬರೆದು ಕಳಿಸಲು ಒಪ್ಪಿಕೊಂಡೆ. ಅನಂತರ ಯೋಚಿಸಿದಾಗ ತಲೆಯೆಲ್ಲ ಖಾಲಿ. ಈಗ ನನಗೆ ಹಿಂದಿನದು ಬಹಳ ಮಟ್ಟಿಗೆ ನೆನಪಾಗುವುದಿಲ್ಲ. ಓದಿದರೆ ರೆಫರ್ ಮಾಡಿ ಬರೆಯಲು ದೈಹಿಕವಾಗಿ, ಹಾಗೆಯೇ ಮಾನಸಿಕವಾಗಿ ಆಗದು. ದಯವಿಟ್ಟು ಕ್ಷಮಿಸಿ. ನೀವು ಬರೆದಿದ್ದ ಕಾಗದವೂ ಸಿಕ್ಕಿತು. ಅದಕ್ಕೆ ಉತ್ತರ ಬರೆಯದ ಅಪಚಾರವನ್ನೂ ಮನ್ನಿಸಿ. ನೀವು ಬೇಕಾದರೆ ನನ್ನ ‘ಸಮಗ್ರ ಗದ್ಯ’ದಲ್ಲಿ ಇರುವ ಮಾಸ್ತಿಯವರ ಕವಿತೆ ಎಂಬ ಲೇಖನವನ್ನು ಗ್ರಾಹ್ಯವೆನ್ನಿಸಿದರೆ ಉಪಯೋಗಮಾಡಿಕೊಳ್ಳಬಹುದು. ಒಂದು ಸಲ ಬಂದು ಹೋಗಿ.

ಇಂತಿ ನಿಮ್ಮ
ಗೋಪಾಲಕೃಷ್ಣ ಅಡಿಗರು

ಎಸ್. ದಿವಾಕರ್
ಮದರಾಸು
ಏಪ್ರಿಲ್ 30,1992
ಪ್ರಿಯ ರಂಗನಾಥ ರಾವ್,

ನನ್ನ ಕತೆಯ ಬಗೆಗೆ ನೀವು ಬರೆದ ಒಳ್ಳೆಯ ಮಾತಿಗಾಗಿ ಕೃತಜ್ಞ. ಸುಧಾ/ಮಯೂರಕ್ಕೆ ಕತೆ ಕಳಿಸಬೇಕು. ಒಂದೆರಡು ಕತೆ ಬರೆಯುತ್ತಿದ್ದರೂ ಅವು ಸದ್ಯಕ್ಕೆ ಮುಗಿಯುವ ಸಂಭವ ಕಡಿಮೆ. ಬರೆದಾದ ಮೇಲೆ ಕಳಿಸುವೆ. ಹಿಂದೆ ನೀವು ತಿಳಿಸಿದೆಂತೆ ಹಾಗೂ ನೀವು ಕೇಳಿದಂತೆ ಲ್ಯಾಟಿನ್ ಅಮೆರಿಕದ 8 ಕತೆಗಳನ್ನು ತರ್ಜುಮೆ ಮಾಡಿ, ಅವುಗಳ ಜೆರಾಕ್ಸ್ ಪ್ರತಿ ಕೂಡಾ ತೆಗೆದಿರಿಸಿದ್ದೇನೆ. ಒಂದು ಕತೆಯ ಅನುವಾದ ಹಾಗೂ ಲ್ಯಾಟಿನ್ ಅಮೆರಿಕನ್ ಕಥಾ ಸಾಹಿತ್ಯದ ಬಗೆಗೆ ಒಂದು ಪರಿಚಯಾತ್ಮಕ ಲೇಖನ ಬರೆದು ಕಳಿಸಬೇಕಷ್ಟೆ(ಮಯೂರಕ್ಕೆ). ಈ ಮಧ್ಯೆ ಏನೇನೋ ಕೆಲಸಗಳು. ದಯವಿಟ್ಟು ಸ್ವಲ್ಪ ಕಾಲಾವಕಾಶ ಕೊಡುವಿರಾ?

ಒಂದು ವರ್ಷದ ಹಿಂದೆ ವೈಯೆನ್ಕೆಯವರ ಒತ್ತಾಯಕ್ಕೆ ಮಣಿದು ‘ಕನ್ನಡ ಪ್ರಭ'ಕ್ಕೆ ಜಗತ್ತನ ಅತಿ ಸಣ್ಣ ಕತೆಗಳನ್ನು ಅನುವಾದಿಸಿ ಕೊಡುವುದಾಗಿ ಹೇಳಿದ್ದೆ. ಈಗ, ಒಂದು ವರ್ಷದ ನಂತರ, ವಾರಕ್ಕೊಂದರಂತೆ ಪ್ರಕಟಿಸಲು ಅವರಿಗೆ ಕಳಿಸುತ್ತಿದ್ದೇನೆ-ಬರುವ ಸೋಮವಾರ. ಬೇರೆಬೇರೆ ದೇಶಗಳ ಕತೆಗಳಿವೆ.

ನೀವು ತಪ್ಪು ತಿಳಿಯದಿದ್ದರೆ ಒಂದು ಮಾತು: ನೀವು ಯುಗಾದಿ/ದೀಪಾವಳಿ ವಿಶೇಷಾಂಕಗಳನ್ನು ಹೊರತರುತ್ತೀರಲ್ಲ ಆಗ ಯಾಕೆ ನನ್ನ ಹೆಸರೇ ನೆನಪಾಗುವುದಿಲ್ಲ ಎಂದು ನನಗೊಂದಿಷ್ಟು ಅಸಮಾಧಾನ. ವಿಶೇಷಾಂಕಗಳ ಮಟ್ಟದ ಲೇಖಕ ನಾನಲ್ಲವೆ? ಅಥವಾ ಮಾಜಿ ಲೇಖಕನೆಂಬ ಅಸಡ್ಡೆಯೆ? ಬೆಂಗಳೂರಿನಲ್ಲಿದ್ದಾಗ ಈ ಬಗ್ಗೆ ಏನೂ ಅನ್ನಿಸುತ್ತಿರಲಿಲಲ್ಲ. ಇಲ್ಲಿಗೆ ಬಂದ ಮೇಲೆ ಈರೀತಿ ಅನ್ನಿಸಿ ನಿರಾಶೆಯಾಗುತ್ತಿದೆ. ನೀವು ನನ್ನ ಹಿತೈಷಿಗಳಲ್ಲೊಬ್ಬರಾದ್ದರಿಂದ ಹೀಗೆ ಬರೆದೆ. ಬೇಸರವಾದರೆ ಮನ್ನಿಸಿ.

ನನ್ನ ಹೆಂಡತಿಗೆ ನೀವು ಬರೆದ ಪತ್ರ ಬಂತು. ಸದ್ಯ ಅವಳು ರಜೆ ಇರುವ ಕಾರಣ ಊರಿಗೆ ಹೋಗಿದ್ದಾಳೆ. ಜುಲೈ ಹೊತ್ತಿಗೆ ನಿಮಗೆ ಕತೆ ಕಳಿಸುತ್ತಾಳಂತೆ. ನನ್ನ ಹಾಗೆ ಅವಳೂ ಒತ್ತಾಯವಿಲ್ಲದಿದ್ದರೆ ಏನೂ ಬರೆಯಳು. ಮತ್ತೇನು?ನಿಮ್ಮ ಪತ್ರ ನಿರೀಕ್ಷಿಸಲೆ?

ಪ್ರೀತಿಯಿಂದ,
ನಿಮ್ಮ ದಿವಾಕರ

ಈ ಎರಡು ಪತ್ರಗಳೂ ಸ್ವಯಂವೇದ್ಯವಾದವು. ಸಂಪಾದಕನಾದವನು ಇಂಥ ಪರಿಸ್ಥಿತಿಯನ್ನು ನಿಭಾಯಿಸುತ್ತಾ ನವನವನವೋನ್ಮೇಷಶಾಲಿನಿ ಬರಹಗಳಿಗಾಗಿ ಮರಳಿಯತ್ನವಮಾಡು/ಮರಳಿ ಯತ್ನವಮಾಡು ಎಂದು ಆಶಾವಾದಿಯಾಗಿ ಕೆಲಸ ಮಾಡುತ್ತಿರಬೇಕಾಗುತ್ತದೆ.

ಈ ಅಂಕಣದ ಹಿಂದಿನ ಬರಹಗಳು:
ಸಂಪಾದಕತ್ವದ ಹೊಣೆ ಮತ್ತು ಆಪ್ತರ ಕಾತರಗಳು

ಆಪ್ತರ ಚರ್ಚೆ ಮತ್ತು ಅನುಸಂಧಾನ:
ಸಂಬಂಧಗಳ ಪೋಣಿಸುವ ಕಥನ ತಂತುಗಳ ಮಾಲೆ:
ಹೊಸ ಸಂವೇದನೆಗಳ ಸಂದರ್ಭದಲ್ಲಿ ಸಂಪಾದಕನಾದವನು ಧೈರ್ಯಮಾಡಬೇಕಾಗುತ್ತದೆ: ಜಿ.ಎನ್. ರಂಗನಾಥರಾವ್

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...