ಜಾತಿ ಪದ್ಧತಿಯ ಮೈಮನಗಳು-ಐದನೆಯ ಕಂತು

Date: 12-09-2020

Location: ಬೆಂಗಳೂರು


ಭಾರತದ ಜಾತಿ ವ್ಯವಸ್ಥೆಯ ಪರ-ವಿರೋಧ ಹಾಗೂ ಅದರ ಸಂಕೀರ್ಣತೆಯ ಬಗ್ಗೆ ಚರ್ಚಿಸಿರುವ ಹಿರಿಯ ವಿದ್ವಾಂಸ ಡಾ. ಮನು ವಿ. ದೇವದೇವನ್‌ ಅವರು ಐತಿಹಾಸಿಕ ಪರಿಪ್ರೇಕ್ಷದಲ್ಲಿಟ್ಟು ಜಾತಿ ಪದ್ಧತಿಯ ಕುರಿತ ವಿಶಿಷ್ಟ ಒಳನೋಟಗಳನ್ನು ಈ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರತಿ ವಾರಕ್ಕೊಮ್ಮೆ ಪ್ರಕಟವಾಗುವ ಈ ಸರಣಿಯ ಐದನೆಯ ಬರೆಹ ಇಲ್ಲಿದೆ.

5

ಋಗ್ವೇದದಲ್ಲಿ ಸಾರ್ವತ್ರಿಕ ಸ್ವರೂಪದ ಶ್ರೇಣೀಕರಣಗಳು ಬಹುತೇಕ ನಾಪತ್ತೆಯಾಗಿವೆ ಎಂಬುದನ್ನು ಈ ಹಿಂದೆ ಗಮನಿಸಿದ್ದೇವೆ. ಕೃಷಿಯ ಅನೇಕ ಸೂಚನೆಗಳು ದೊರಕುತ್ತವೆಯಾದರೂ ವೈದಿಕರು ಬಹುತೇಕ ಪಶುಪಾಲನೆಯಲ್ಲಿ ತೊಡಗಿದ್ದ ವಲಸಿಗ ಜನಾಂಗಗಳಿಗೆ ಸೇರಿದ್ದರು. ಋಗ್ವೇದದ ಹಳೆಯ ಮಂಡಲಗಳಲ್ಲಿಯೇ ಕೃಷಿಯ ಸೂಚನೆಗಳು ಅಲ್ಲಲ್ಲಿ ಸಿಗುತ್ತವೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಇಂಥ ಸೂಚನೆಗಳನ್ನು ಇತ್ತೀಚಿನ ಮಂಡಲಗಳಲ್ಲಿ ನೋಡಬಹುದು.

ವೈದಿಕರು ಆಗಮಿಸುವ ಮುನ್ನವೇ ಭಾರತದಲ್ಲಿ ಕೃಷಿ ಚಟುವಟಿಗೆಗಳು ಭರದಿಂದ ಸಾಗಿದ್ದವು. ಹೊಸ ಶಿಲಾಯುಗ ಹಾಗೂ ತಾಮ್ರಶಿಲಾಯುಗದ ನೆಲೆಗಳಲ್ಲಿ ಆಹಾರ ಧಾನ್ಯಗಳ ಹೆಚ್ಚುವರಿ ಉತ್ಪಾದನೆ ನಡೆದಿತ್ತೆಂದು ಹೇಳಲು ಆಧಾರಗಳಿಲ್ಲ. ಹೆಚ್ಚುವರಿ ಉತ್ಪಾದನೆ ಹಡಪ್ಪಾ, ಮೊಹೆಂಜೊದಾರೋ ಇತ್ಯಾದಿ ಕಂಚಿನ ಯುಗದ ನೆಲೆಗಳಲ್ಲಿ ನಡೆದಿದ್ದವು ಎಂದು ಸಕಾರಣವಾಗಿ ಊಹಿಸತಕ್ಕದ್ದು. ಆದರೆ ಲಿಖಿತ ದಾಖಲೆಗಳು ಇಲ್ಲದ ಕಾರಣ ಈ ಉತ್ಪಾದನೆ ಹೇಗೆ ನಡೆದಿತ್ತೆಂಬುದನ್ನು ಸ್ಪಷ್ಟವಾಗಿ ಹೇಳಲಾರೆವು. ಹಾಗೆಯೇ, ಅಲ್ಲಿನ ಉತ್ಪಾದನಾ ಸಂಬಂಧಗಳ ಕುರಿತಾಗಿಯೂ ಊಹೆಗಳನ್ನು ಮಂಡಿಸಬಹುದಲ್ಲದೆ ನಿರ್ದಿಷ್ಟವಾದ ಚಿತ್ರವೊಂದನ್ನು ಕಟ್ಟಿಕೊಡಲು ನಮ್ಮಲ್ಲಿ ಆಧಾರಗಳಿಲ್ಲ. ಕ್ರಿಪೂ 1900ರ ಸುಮಾರಿಗೆ ಹಡಪ್ಪಾ, ಮೊಹೆಂಜೊದಾರೋ ಮೊದಲಾದ ನೆಲೆಗಳು ಅಸ್ತಂಗತಗೊಳ್ಳತೊಡಗಿದವು.

ಆ ವೇಳೆಗಾಗಲೇ ಉತ್ತರಭಾರತದ ವಿವಿಧ ಭಾಗಗಳಲ್ಲಿ ಹೊಸ ಶಿಲಾಯುಗದ ನೆಲೆಗಳಲ್ಲಿ ಕೃಷಿ ಚಟುವಟಿಕೆಗಳು ಬೇರೂರಿಕೊಂಡು ಅನೇಕ ಶತಮಾನಗಳು ಕಳೆದಿದ್ದವು. ಉದಾಹರಣೆಗೆ, ಗಂಗಾನದಿ ದಂಡೆಯ ಮೇಲಿರುವ ಚಿರಾಂದ್ ಎಂಬಲ್ಲಿ ಕ್ರಿಪೂ 3000ದಿಂದಲೇ ವರ್ಷಕ್ಕೆ ಎರಡು ಬೆಳೆಗಳನ್ನು ಬೆಳೆಯುವ ಪದ್ಧತಿ ರೂಢಿಗೆ ಬಂದಿತ್ತೆಂದು ಪ್ರಾಕ್ತನ ತಜ್ಞರ ಉತ್ಖನನಗಳು ತಿಳಿಸಿವೆ. ಮುಂದೆ ಖಾರಿಫ್ ಹಾಗೂ ರಾಬೀ ಎಂದು ಗುರುತಿಸಲಾದ ಬೆಳೆಗಳ ಮೂಲ ಬಹುಶಃ ಚಿರಾಂದ್‌ನ ಕಾಲದಷ್ಟು ಹಳೆಯದು. ಆದರೆ ಇಂಥ ನೆಲೆಗಟ್ಟುಗಳು ತಮ್ಮ ಅಗತ್ಯಕ್ಕೆ ಬೇಕಾಗುವಷ್ಟನ್ನು ಮಾತ್ರ ಬೆಳೆಯುತ್ತಿದ್ದರೇ ಹೊರತು ಮಾರಾಟಕ್ಕಾಗಲಿ ತೆರಿಗೆ ಸಲ್ಲಿಸಲಿಕ್ಕಾಗಲಿ ಬೇಕಾಗುವ ಪ್ರಮಾಣದಲ್ಲಿ ಆಹಾರಧಾನ್ಯಗಳನ್ನು ಉತ್ಪಾದಿಸುತ್ತಿರಲಿಲ್ಲ. ಕ್ರಿಪೂ ಆರನೆಯ ಶತಮಾನದ ವೇಳೆಗೆ ಅಂಥ ಹೆಚ್ಚುವರಿ ಧಾನ್ಯೋತ್ಪಾದನೆ ಉತ್ತರಭಾರತದ ವಿವಿಧೆಡೆಗಳಲ್ಲಿ ಜಾರಿಗೆ ಬಂದಿತ್ತು. ವೈದಿಕರ ಆಗಮನವು ಈ ಹಿಂದೆ ಗಮನಿಸಿದಂತೆ ಕ್ರಿಪೂ 800ರ ಆಸುಪಾಸಲ್ಲಿ ನಡೆದಿದ್ದರೆ ಈ ಹೆಚ್ಚುವರಿ ಉತ್ಪಾದನೆ ಸಾಧ್ಯವಾಗುವಷ್ಟು ಬೃಹತ್ ಪ್ರಮಾಣದಲ್ಲಿ ಕೃಷಿಯ ವಿಸ್ತರಣೆ ನಡೆದದ್ದು ಕ್ರಿಪೂ ಏಳು ಹಾಗೂ ಎಂಟನೆಯ ಶತಮಾನಗಳಲ್ಲಿ ಎಂದು ಖಾತ್ರಿಯಾಗುತ್ತದೆ. ಪುರುಷಸೂಕ್ತದ ಕಾಲವೂ ಇದೇ ಆಗಿದೆ.

ಈ ಕಾಲದ ಭೌತಿಕ ಪರಿಸರದ ಸ್ಥೂಲ ಚಿತ್ರವೊಂದನ್ನು ಕಟ್ಟಿಕೊಳ್ಳಲು ನಮ್ಮಲ್ಲಿರುವ ಎರಡು ಉತ್ತಮ ಆಕರಗಳೆಂದರೆ ಮಹಾಭಾರತ ಹಾಗೂ ರಾಮಾಯಣ. ಈ ಎರಡೂ ಕೃತಿಗಳ ಈಗಿನ ಪಾಠವು ಕ್ರಿಪೂ 200ರ ನಂತರ ರೂಪುಗೊಂಡದ್ದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಅಲ್ಲಿ ಉಲ್ಲೇಖ ಪಡೆದಿರುವ ಪ್ರಸಂಗಗಳು ಕ್ರಿಪೂ 800-600 ಅವಧಿಗೆ ಸೇರಿದ್ದು. ಅಲ್ಲಿನ ವಿವರಣೆಗಳನ್ನು ಐತಿಹಾಸಿಕ ಘಟನೆಗಳ ನಿರೂಪಣೆ ಎಂದು ಹೇಳುವುದು ಅನಗತ್ಯ. ಬದಲಾಗುತ್ತಿದ್ದ ಭೌತಿಕ ಪರಿಸರವೊಂದನ್ನು ರೂಪಕದ ನೆಲೆಯಿಂದ ಚಿತ್ರಿಸುವ ಕ್ರಮವೇ ಮಹಾಭಾರತ ಹಾಗೂ ರಾಮಾಯಣ ಎನ್ನುವುದು ಹೆಚ್ಚು ಸಮಂಜಸವಾಗಿ ತೋರುತ್ತದೆ. ಇದನ್ನು 2015ರಲ್ಲಿ ನಾನು ಬೆಂಗಳೂರಿನಲ್ಲಿ ನೀಡಿದ ಆರ್ಕೈವ್ ಇಂಡಿಯಾ ಇನ್ಸ್‌ಟಿಟ್ಯೂಟ್ ವಾರ್ಷಿಕ ಉಪನ್ಯಾಸದಲ್ಲಿ ಚರ್ಚಿಸಿದ್ದೇನೆ. ಅದರ ಸಂಕ್ಷಿಪ್ತ ರೂಪ ಈ ಕೆಳಕಂಡಂತಿದೆ.

ಮಹಾಭಾರತದಲ್ಲಿ ಯುದ್ಧ ಮುಗಿದ ಮೇಲೆ ಯುಧಿಷ್ಠಿರನ ಆಳ್ವಿಕೆ ಪ್ರಾರಂಭವಾಗುತ್ತದೆ. ಐದು ಜನ ಪಾಂಡವರಲ್ಲಿ ಯುಧಿಷ್ಠಿರ ಹಿರಿಯ. ಹೀಗಾಗಿ ಅವನಿಗೆ ಪಟ್ಟವಾಗುತ್ತದೆ. ಶೌರ್ಯ ಸಾಹಸಗಳಿಗೆ ಅನಿತರ ಮಹತ್ವ ನೀಡುವ ಮಹಾಭಾರತದಲ್ಲಿ ಯುಧಿಷ್ಠಿರನ್ನು ದೊಡ್ಡ ಯೋಧನಾಗಿದ್ದಾನೆ. ಆದರೂ ಭೀಮಾರ್ಜುನರ ವಿಕ್ರಮಗಳ ಮುಂದೆ ಅವನ ಸಾಹಸಗಳು ನಮಗೆ ನಗಣ್ಯವಾಗಿ ತೋರುತ್ತವೆ. ಪಟ್ಟವೇರಲು ಅವನಿಗಿಂತ ಭೀಮ ಅಥವಾ ಅರ್ಜುನರೇ ಯೋಗ್ಯರು ಎನ್ನಬಹುದು. ನೀತಿಯ ದೃಷ್ಟಿಯಿಂದಲೂ ಭಗವದ್ಗೀತೆಯ ಮೊದಲನೆಯ ಅಧ್ಯಾಯದಲ್ಲಿ ಕಾಣುವ ಅರ್ಜುನನಿಗಿಂತ ಯುಧಿಷ್ಠಿರ ಹೆಚ್ಚು ನೀತಿವಂತ ಎನ್ನಲಾಗದು. ಯಕ್ಷಪ್ರಶ್ನದ ಪ್ರಸಂಗವನ್ನು ಮುಂದಿಟ್ಟು ವಿಚಾರವಂತಿಕೆಯ ದೃಷ್ಟಿಯಿಂದ ಅವನು ಇತರ ಪಾಂಡವರಿಗಿಂತ ಶ್ರೇಷ್ಟ ಎಂದು ಹೇಳಬಹುದು. ಇಲ್ಲಿನ ವಾದಸರಣಿಯನ್ನು ನಾವು ಹೇಗೆ ಮುಂದುವರಿಸಿದರೂ ಯುದ್ಧದ ನಂತರ ಯುಧಿಷ್ಠಿರ ರಾಜನಾಗಬೇಕು ಎಂಬ ಕುರಿತು ಮಹಾಭಾರತದಲ್ಲಿ ಯಾವುದೇ ತರ್ಕವಿಲ್ಲ ಎಂಬುದು ಬಹುದೊಡ್ಡ ಸಂಗತಿಯಾಗಿದೆ. ಅವನ ಆಳ್ವಿಕೆ ನಡೆಯಬೇಕೆಂಬುದು ನಿರ್ವಿವಾದಿತ. ಅವನೇ ಯಾಕೆ ರಾಜನಾಗಬೇಕು ಎಂಬುದಕ್ಕೆ ಅಲ್ಲಿರುವ ಏಕೈಕ ಉತ್ತರ ಅವನು ಹಿರಿಯ ಮಗ ಎಂಬುದು. ಹಿರಿಯ ಮಗನಿಗೇ ಪಟ್ಟವಾಗಬೇಕು ಎಂಬ ಈ ತತ್ವವನ್ನು ಪ್ರೈಮೋಜೆನೀಚರ್ ಎನ್ನುತ್ತಾರೆ.

ಇದರ ಬೆಳಕಲ್ಲಿ ಪಾಂಡವರ ಪೂರ್ವಿಕರ ಕಥೆಗಳನ್ನು ಗಮನಿಸಿದಾಗ ಅಲ್ಲಿ ಕಂಡುಬರುವುದೇನು? ಹಿಂದಿನ ತಲೆಮಾರಿನಲ್ಲಿ ಹಿರಿಯನಾದ ಧೃತರಾಷ್ಟ್ರ ಅರಸನಾಗಬೇಕಿತ್ತು, ಆದರೆ ಪಟ್ಟವೇರುವವನು ಕಿರಿಯನಾದ ಪಾಂಡು. ಕಾರಣವೇನು? ಧೃತರಾಷ್ಟ್ರನಿಗೆ ಕಣ್ಣು ಕಾಣದು, ಹೀಗಾಗಿ ಅವನು ಆಳ್ವಿಕೆ ನಡೆಸಲಾರನಂತೆ. ಆತ ಅಂಧನೆಂದು ವೈದಿಕ ಮೂಲಗಳಲ್ಲಿ ಹಾಗೂ ಬೌದ್ಧರ ಸೂತ್ರಗಳಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ. ಅದನ್ನು ಮಹಾಭಾರತದಲ್ಲಿ ಕಾಣುತ್ತೇವೆ. ಆದರೆ ಕಡೆಗೂ ಆಳ್ವಿಕೆ ನಡೆಸುವುದು ಆತನೇ ಹೊರತು ಪಾಂಡುವಲ್ಲ. ಯಾಕೆ? ಯಾಕೆಂದರೆ, ಪಾಂಡು ತನ್ನ ಇಬ್ಬರು ಮಡದಿಯರ ಜೊತೆ ಬೇಟೆಗೆ ಹೋಗಿದ್ದಾನೆ. ಆತ ಮರಳಿ ಬರುವ ತನಕ ರಾಜ್ಯಭಾರ ನಡೆಸುವ ಹೊಣೆಗಾರಿಕೆ ಈಗ ಧೃತರಾಷ್ಟ್ರನದು. ಎಂಥದ್ದು ಈ ಮುಗಿಯದ ಬೇಟೆ ಎಂಬ ಪ್ರಶ್ನೆ ಸಹಜವಾಗಿಯೇ ಏಳಬಹುದು. ಎಂ.ಟಿ. ವಾಸುದೇವನ್ ನಾಯರ್ ಅವರು ಮಹಾಭಾರತವನ್ನು ಆಧರಿಸಿ ರಚಿಸಿದ 'ರಂಡಾಮೂೞಂ' ಎಂಬ ಮಲಯಾಳಂ ಕಾದಂಬರಿಯಲ್ಲಿ ಭೀಮ ಹೇಳುವ ಮಾತೊಂದಿದೆ: ಆರು ವರ್ಷಗಳ ಕಾಲ ನಡೆದ ಬೇಟೆ ಏನೆಂದು ನನಗೆ ಹೊಳೆಯುತ್ತಲೇ ಇಲ್ಲ! ಅಣ್ಣತಮ್ಮಂದಿರ ನಡುವೆ ಅಧಿಕಾರಕ್ಕೆಂದು ನಡೆದ ಸಂಘರ್ಷವೊಂದರ ವೃತ್ತಾಂತ ಇದಾಗಿದೆ. ಪಾಂಡವ-ಕೌರವರ ನಡುವೆ ನಡೆದದ್ದೂ ಇದೇ ರೀತಿಯ ಸಂಘರ್ಷ.

ಇನ್ನು ಧೃತರಾಷ್ಟ್ರ ಪಾಂಡುಗಳ ಹಿಂದಿನ ತಲೆಮಾರಿಗೆ ಹೋದರೆ ಅಲ್ಲಿ ಕಿರಿಯ ಮಗನಾದ ವಿಚಿತ್ರವೀರ್ಯನು ರಾಜನಾಗಿದ್ದಾನೆ. ಅದಕ್ಕೂ ಒಂದು ಕಾರಣವನ್ನು ಹೇಳಲಾಗಿದೆ. ಚಿತ್ರಾಂಗದನ ಕೊಲೆಯಾಯ್ತು. ದೇವವ್ರತನು ಪಟ್ಟವೇರುವುದಿಲ್ಲ ಎಂಬ ಪ್ರತಿಜ್ಞೆ ನಡೆಸಿ ಭೀಷ್ಮನಾದನು. ಹೀಗಾಗಿ ವಿಚಿತ್ರವೀರ್ಯನ ಆಳ್ವಿಕೆ ಅನಿವಾರ್ಯವಾಯ್ತು. ಈ ಮೂರೂ ಮಂದಿಯ ತಂದೆ ಶಂತನು ತನ್ನ ತಂದೆಯ ಕಿರಿಯ ಮಗ. ಹಿರಿಯ ಮಗನಾದ ದೇವಾಪಿ ಪಟ್ಟವೇರುವುದಿಲ್ಲ. ರಾಜ್ಯಭಾರ ನಡೆಸುವವ ಶಂತನು. ಅದಕ್ಕೂ ಒಂದು ಕಾರಣವನ್ನು ನೀಡಲಾಗಿದೆ. ದೇವಾಪಿ ರೋಗಿಯಾಗಿದ್ದನಂತೆ. ಹಿರಿಯನಾದ ಯತಿಯು ಸಣ್ಣಂದಿನಲ್ಲೇ ಸನ್ಯಾಸಿಯಾದ ಕಾರಣ ಕಿರಿಯ ಮಗ ಯಯಾತಿಗೆ ಪಟ್ಟವಾಯ್ತು. ಈ ಯಯಾತಿಯ ಐದನೆಯ ಮಗ ಪುರು ತನ್ನ ಯೌವನವನ್ನು ತಂದೆಗೆ ಒಪ್ಪಿಸಲು ಮುಂದಾದ, ಆದರೆ ಅವನ ನಾಲ್ಕು ಮಂದಿ ಹಿರಿಯ ಮಕ್ಕಳು ಹಾಗೆ ಮಾಡಲಿಲ್ಲ. ಆದ್ದರಿಂದ ಯಯಾತಿಯು ಪುರುವಿಗೆ ಅಧಿಕಾರವನ್ನು ವಹಿಸಿಕೊಡಲು ನಿರ್ಧರಿಸಿದ. ದುಷ್ಯಂತನ ಮಗ ಭರತನಿಗೆ ಅನೇಕ ಜನ ಪುತ್ರರಿದ್ದರೂ ಅವರಾರೂ ಆಳ್ವಿಕೆ ನಡೆಸುವ ಸಾಮರ್ಥ್ಯ ಹೊಂದಿಲ್ಲ ಎಂಬ ಕಾರಣಕ್ಕೆ ಭೂಮನ್ಯು ಎಂಬಾತ ಸಿಂಹಾಸನವೇರಿದ.

ಪ್ರೈಮೋಜೆನೀಚರ್, ಅಂದರೆ ಹಿರಿಯಮಗನಿಗೆ ಪಟ್ಟವಾಗಬೇಕು ಎಂಬ ತತ್ವವು ಇನ್ನೂ ಏಳಿಗೆ ಪಡೆಯದಿದ್ದ ಯುಗವೊಂದನ್ನು ಇಲ್ಲಿ ಚಿತ್ರಿಸಲಾಗಿದೆ. ಆದರೆ ಅದನ್ನು ಚಿತ್ರಿಸುತ್ತಿರುವ ಕಾಲಕ್ಕಾಗಲೇ ಈ ತತ್ವವು ಅಪಾರ ಮಹತ್ವ ಹೊಂದಿತ್ತು. ತಮ್ಮ ಭೂತಕಾಲವನ್ನು ಅವಲೋಕಿಸುವಾಗ ಅಲ್ಲಿ ಈ ತತ್ವವನ್ನು ಅನುಸರಿಸಿದ ನಿದರ್ಶನಗಳು ಕೆಲವೇ ಕೆಲವು ಎಂದು ಗೊತ್ತಾಗಿ ಮಹಾಭಾರತದ ಕರ್ತೃಗಳು ಅದಕ್ಕೆ ಒಂದಲ್ಲ ಒಂದು ಕಾರಣವನ್ನು ಆರೋಪಿಸತೊಡಗಿದರೆಂದು ಹೇಳಬಹುದು: ಒಬ್ಬ ಅಂಧ, ಇನ್ನೊಬ್ಬ ರೋಗಿ, ಮತ್ತೊಬ್ಬ ಶಪತ ಮಾಡಿಬಿಟ್ಟ, ಮಗುದೊಬ್ಬ ಸನ್ಯಾಸಿಯಾದ, ಹೀಗೆ.

ಕೃಷಿಯ ವಿಸ್ತರಣೆಯಿಂದಾಗೆ ಭೂಮಿಯನ್ನು ಸಂಪತ್ತು (ವೆಲ್ತ್) ಹಾಗೂ ಸ್ವತ್ತು (ಪ್ರಾಪರ್ಟಿ) ಎಂದು ಗುರುತಿಸುವ ಕ್ರಮವೊಂದು ಜಾರಿಗೆ ಬಂತು. ಇದರ ಮೊದಲ ಸೂಚನೆ ಅಥರ್ವ ವೇದದ ಭೂಸೂಕ್ತದಲ್ಲಿದೆ. ಅಲ್ಲಿ ಭೂಮಿಯನ್ನು ದೇವತೆಯಾಗಿ ಬಿಂಬಿಸಲಾಗಿದೆ. ಭೂಮಿಯನ್ನು ಸಂಪತ್ತೆಂದು ಗುರುತಿಸುವ ಪ್ರಪ್ರಥಮ ದಾಖಲೆ ಈ ಭೂಸೂಕ್ತ. ಭೂಸ್ವತ್ತು ಹೊಂದಿ ಭೂಮಾಲೀಕತ್ವ ವ್ಯವಸ್ಥೆ ಏಳಿಗೆ ಪಡೆಯುವ ಸಂದರ್ಭದಲ್ಲಿ ದಾಯಕ್ರಮದ ಪ್ರಶ್ನೆ ತಲೆದೋರುತ್ತದೆ. ತನ್ನ ನಂತರ ಸ್ವತ್ತು ಯಾರಿಗೆ ಸೇರಬೇಕು ಎಂಬುದು ಇಲ್ಲಿ ಬಹುದೊಡ್ಡ ಸವಾಲು. ಅಂಥ ಸ್ವತ್ತು ಇಲ್ಲದ ಕಾಲದಲ್ಲಿ ದಾಯಕ್ರಮದ ಸಮಸ್ಯೆ ಇರುವುದಿಲ್ಲ. ಹೀಗಾಗಿ ಹಿರಿಯ ಪುತ್ರನಿಗೇ ಮುಂಗಣನೆ ಸಿಗಬೇಕೆಂಬ ವಾದವು ಅಲ್ಲಿ ಅನವಶ್ಯಕವಾಗುತ್ತದೆ. ಆದ್ದರಿಂದಲೇ ಧೃತರಾಷ್ಟ್ರ, ಪಾಂಡುಗಳ ಪೂರ್ವಿಕರ ಕಾಲದಲ್ಲಿ ಪ್ರೈಮೋಜೆನೀಚರ್ ಅಭಿವ್ಯಕ್ತಿ ಪಡೆದುಕೊಳ್ಳದೆ ಉಳಿದಿದೆ.

ದಾಯಕ್ರಮವು ಮುಖ್ಯವಾಗುವ ಸಂದರ್ಭದಲ್ಲಿ ನ್ಯಾಯಸಮ್ಮತನಾದ ಪುತ್ರ ಎಂಬ ಮತ್ತೊಂದು ವಿಚಾರವೂ ಹುಟ್ಟಿಕೊಳ್ಳುತ್ತದೆ. ಕ್ಷತ್ರಿಯಳಾದ ಮಡದಿಯಲ್ಲಿ ಜನಿಸಿದ ಪುತ್ರನಿಗೆ ಮಾತ್ರ ಇಲ್ಲಿ ಮಾನ್ಯತೆ. ವಸ್ತುಸ್ಥಿತಿ ಇದಕ್ಕಿಂತ ಭಿನ್ನವಾಗಿತ್ತು. ಆದರೂ ಇಂಥ ವಿಚಾರವೊಂದು ಪ್ರಚಾರ ಪಡೆದುಕೊಂಡಿತ್ತು ಎಂಬುದು ಇಲ್ಲಿ ಮುಖ್ಯ. ಹೀಗಾಗಿ ದ್ರೌಪದಿ, ಸುಭದ್ರಾ, ಕುಂತಿ, ಮಾದ್ರಿ, ಗಾಂಧಾರಿ ಮುಂತಾದ ಕ್ಷತ್ರಿಯರೆಂದು ಹೇಳಲಾಗಿರುವ ಮಹಿಳೆಯರು ಇಲ್ಲಿ ಪ್ರಮುಖರಾಗುತ್ತಾರೆ. ಉಲೂಪಿ, ಹಿಡಿಂಬಿ ಮೊದಲಾದ ಇತರರು ಬದಿಗೆ ತಳ್ಳಪಡುತ್ತಾರೆ. ಶಂತನುವಿನ ಕಾಲದಲ್ಲಿ ಅಂಥ ನಿರ್ಬಂಧಗಳಿರಲಿಲ್ಲ. ಆತನ ಮೊದಲ ಹೆಂಡತಿ ಗಂಗಾ. ಎರಡನೆಯವಳು ಸತ್ಯವತಿ. ಇಬ್ಬರಿಗೂ ಇರುವ ನದಿಯೊಂದಿಗಿನ ಸಂಬಂಧದಿಂದಾಗಿ ಅವರು ಮೀನುಗಾರಿಕೆ, ಅಂಬಿಗವೃತ್ತಿ ಮೊದಲಾದ ಹಿನ್ನೆಲೆಗೆ ಸೇರಿದ್ದರೆಂದು ಹೇಳಬಹುದು. ಇನ್ನೂ ಹಿಂದಕ್ಕೆ ಹೋದಾಗ ರಾಜ್ಯಭಾರ ನಡೆಸುವವನ ತಾಯಿ ಕ್ಷತ್ರಿಯವರ್ಣಕ್ಕೆ ಸೇರಿದವಳಾಗಬೇಕು ಎಂಬ ವಿಚಾರವು ಇರಲೇ ಇಲ್ಲ ಎಂಬ ಚಿತ್ರವೇ ನಮ್ಮನ್ನು ಇದಿರುಗೊಳ್ಳುತ್ತದೆ. ಕೃಷಿ ವಿಸ್ತರಣೆ ಹಾಗೂ ಭೂಸ್ವಾಮ್ಯ ರೂಪುಪಡೆಯತೊಡಗಿದ ಸಂದರ್ಭದಲ್ಲಿ ದಾಯಕ್ರಮದ ಪ್ರಶ್ನೆ ತಲೆದೋರಿದಾಗ ನ್ಯಾಯಸಮ್ಮತ ಪುತ್ರ, ಪ್ರೈಮೋಜೆನೀಚರ್ ಮೊದಲಾದ ವಿಚಾರಗಳು ಜಾರಿಗೆ ಬಂದವು. ವರ್ಣವ್ಯವಸ್ಥೆಯೂ ಅದೇ ಸಂದರ್ಭದಲ್ಲಿ ಹುಟ್ಟಿಕೊಂಡಿತು.

ಅಣ್ಣತಮ್ಮಂದಿರಾದ ಧೃತರಾಷ್ಟ್ರ, ಪಾಂಡುಗಳ ಪುತ್ರರು ಅಧಿಕಾರಕ್ಕೆ ನಡೆಸಿದ ಹೋರಾಟದ ಕಥೆ ಮಹಾಭಾರತದಲ್ಲಿ ನಿರೂಪಣೆ ಪಡೆದಿದ್ದರೆ ರಾಮಾಯಣದಲ್ಲಿ ಇಂಥದ್ದೇ ಹೋರಾಟವು ಭಿನ್ನರೂಪ ಪಡೆದಿದೆ. ದಶರಥನ ಮೂರು ಪತ್ನಿಯರಲ್ಲಿ ಓರ್ವಳಾದ ಕೇಕಯಕುಮಾರಿಯು ತನ್ನ ಮಗ ಭರತನಿಗೆ ಪಟ್ಟವಾಗಬೇಕೆಂದು ಹಿರಿಯ ಸವತಿಯಾದ ಕೋಸಲಸುತೆಯ ಮಗ ರಾಮನನ್ನು ಕಾಡಿಗಟ್ಟಿದ ಕಥೆ ಅಲ್ಲಿದೆ. ಮಹಾಭಾರತಕ್ಕಿಂತ ಭಿನ್ನವಾದ ರೀತಿಯಲ್ಲಿ ರಾಮಾಯಣದ ಕಥೆಯು ತನ್ನಲ್ಲಿಯೇ ಕೆಲವು ಸೂಚನೆಗಳನ್ನು ಅಡಗಿಸಿಕೊಂಡಿದೆ.

ರಾಮಾಯಣಕ್ಕೆ ಆಧಾರವಾದ ಕಥೆಯು ಕ್ರಿಪೂ ಐದನೆಯ ಶತಮಾನದಿಂದಲಾದರೂ ಒಂದಲ್ಲ ಒಂದು ರೀತಿಯಲ್ಲಿ ಪ್ರಚಾರದಲ್ಲಿತ್ತು. ಈ ಕಥೆ ಓರ್ವ ರಾಜ, ಒಡೆಯ ಅಥವಾ ಆತನ ಪೂರ್ವಿಕರ ಕುರಿತು ಮೌಖಿಕ ಪರಂಪರೆಯ ಗಾಥಾ ಹಾಗೂ ನಾರಶಂಸಿಗಳ ಭಾಗವಾಗಿತ್ತು ಎಂದು ಊಹಿಸಬಹುದಾಗಿದೆ. ಅಂಥ ಗಾಥಾ, ನಾರಶಂಸಿಗಳನ್ನು ಆಳ್ವಿಕೆ ನಡೆಸುತ್ತಿದ್ದವರು ಕಾಲಕಾಲಕ್ಕೆ ಕೈಗೊಳ್ಳುತ್ತಿದ್ದ ಯಜ್ಞಯಾಗಾದಿಗಳಲ್ಲಿ ಹಾಡಲಾಗುತ್ತಿತ್ತು. ರಾಮಾಯಣವೂ ಇದೇ ಜಾಯಮಾನಕ್ಕೆ ಸೇರಿದ್ದೆಂದು ತೋರುತ್ತದೆ. ಅದರ ಸೂಚನೆ ರಾಮಾಯಣದಲ್ಲಿಯೇ ಇದೆ. ರಾಮಾಯಣವನ್ನು ರಾಮನು ಕೈಗೊಂಡ ಅಶ್ವಮೇಧದಲ್ಲಿ ಅವನ ಮಕ್ಕಳಾದ ಲವಕುಶರು ಹಾಡಿದ್ದರೆಂದು ಹೇಳಲಾಗಿದೆ. ರೊಮೀಲಾ ಥಾಪರ್ ಹೇಳುವಂತೆ ಈ ಕಥೆಯ ಚೌಕಟ್ಟು ಆಚರಣೆಯೊಂದರ ಸಂದರ್ಭಕ್ಕೆ ಹೊಂದಿಕೊಳ್ಳುತ್ತದೆ ಮತ್ತು ಹಿಂದೆ ಅಶ್ವಮೇಧದ ಸಂದರ್ಭದಲ್ಲಿ ಜರುಗುತ್ತಿದ್ದ ಆಖ್ಯಾನಗಳ ಗಾಯನವನ್ನು ಹೋಲುತ್ತದೆ. ಲವ, ಕುಶ ಎಂಬ ಹೆಸರುಗಳು ಗಮನಾರ್ಹವಾಗಿವೆ. ಏಕೆಂದರೆ ಈ ರೀತಿ ಗಾಥಾ, ನಾರಶಂಸಿ ಮುಂತಾದವುಗಳನ್ನು ಹಾಡುವ ಕಬ್ಬಿಗರನ್ನು ಕುಶೀಲವರು ಎನ್ನುತ್ತಿದ್ದರು. ಹೀಗಾಗಿ ರಾಮಾಯಣವು ಇಂಥದ್ದೇ ಮೂಲಗಳಿಂದ ಬಂದಿದೆ ಎಂಬುದರಲ್ಲಿ ಸಂಶಯವಿಲ್ಲ.

ಕುಶೀಲವರು ಹಾಡುತ್ತಿದ್ದ ರಾಮಾಯಣದಲ್ಲಿ ಏನಿತ್ತು ಎಂಬುದು ನಮಗೆ ತಿಳಿದಿಲ್ಲ. ಆದರೆ ವಾಲ್ಮೀಕಿಯ ರಾಮಾಯಣದ ಕಥೆಯಲ್ಲಿ ಬರುವ ಕೆಲವು ಪಾತ್ರಗಳ ಹೆಸರುಗಳನ್ನು ವಿಶ್ಲೇಷಿಸಿದಾಗ ಆಶ್ಚರ್ಯಕರವಾದ ಚಿತ್ರವೊಂದು ಅನಾವರಣಗೊಳ್ಳತೊಡಗುತ್ತದೆ. ದಶರಥನಿಗೆ ನಾಲ್ಕು ಜನ ಮಕ್ಕಳು: ರಾಮ, ಲಕ್ಷ್ಮಣ, ಭರತ ಹಾಗೂ ಶತ್ರುಘ್ನ. ಈ ನಾಲ್ವರು ವಿವಾಹವಾದದ್ದು ಕ್ರಮವಾಗಿ ಸೀತೆ, ಊರ್ಮಿಲೆ, ಮಾಂಡವಿ, ಶೃತಕೀತ್ರಿ ಎಂಬುವವರನ್ನು. ಸೀತಾ ಎಂದರೆ ಕೃಷಿನೆಲದಲ್ಲಿ ನೇಗಿಲಿನಿಂದ ಕೊರೆಯಲಾದ ಸಾಲು ಗೆರೆಗಳು. ಈ ಸಾಲುಗಳಲ್ಲಿ ಬೀಜವನ್ನು ಬಿತ್ತಲಾಗುತ್ತದೆ. ಊರ್ಮಿಲಾ ಶಬ್ದಕ್ಕೆ ಮೂಲವಾದ ಊರ್ಮಿ ಎಂದರೆ ಗೆರೆ ಎಂದರ್ಥ. ಊರ್ಮಿಯನ್ನು ಹಿಂದ ಸೀತಾ ಶಬ್ದಕ್ಕೆ ಪರ್ಯಾಯವಾಗಿ ಬಳಸುತ್ತಿದ್ದರೇ ಎಂಬುದು ಸ್ಪಷ್ಟವಲ್ಲ. ಅಂಥ ಉದಾಹರಣೆಗಳು ಸಿಗುವುದಿಲ್ಲ. ಮಾಂಡವಿಗೆ ಮಂಡಾ ಶಬ್ದವೇ ಮೂಲ. ಮಂಡಾ ಎಂದರೆ ಗಂಜಿ ಅಥವಾ ಅಂಬಲಿ. ಶೃತಕೀರ್ತಿ ಎಂಬುದರ ಅರ್ಥ ಸ್ಪಷ್ಟವಾಗಿದೆ. ಆದರೆ ಇಲ್ಲಿ ಶೃತ ಶಬ್ದಕ್ಕೆ ಪಾಕಮಾಡಿದ ಆಹಾರ ಎಂಬ ಅರ್ಥವೂ ಉಂಟು. ಸೀತೆ ಮತ್ತು ಊರ್ಮಿಲೆ ಜನಕರಾಜನ ಪುತ್ರಿಯರು, ಮಾಂಡವಿ ಶೃತಕೀರ್ತಿಯರು ಕುಶಧ್ವಜನ ಸುತೆಯರು. ತಂದೆ ಎಂಬ ಅರ್ಥದಲ್ಲಿ ಬಳಕೆಯಾಗುವ ಜನಕ ಶಬ್ದದ ಮೂಲ ಅರ್ಥ ಹುಟ್ಟಿಸುವವ ಅಥವಾ ಉತ್ಪಾದಕ ಎಂದಾಗಿದೆ. ರೈತ ಶಬ್ದಕ್ಕೆ ಪರ್ಯಾಯವಾಗಿ ಇದನ್ನು ಬಳಸಬಹುದು. ಈ ಮಾತು ತುಸು ಅಧಿಕಪ್ರಸಂಗವಾಗಿ ತೋರುವುದು ನಿಜ. ಕುಶಧ್ವಜನ ಹೆಸರಲ್ಲಿ ಅಂಥ ಅಧಿಕಪ್ರಸಂಗವನ್ನು ಆಶ್ರಯಿಸಿ ತರ್ಕ ಮಂಡಿಸುವ ಅಗತ್ಯವಿಲ್ಲ. ಕುಶ ಎಂಬುದು ನೇಗಿಲಿನ ಪರ್ಯಾಯ. ಈ ಎಲ್ಲ ನಾಮಾಂಕಿತಗಳೂ ಏನನ್ನು ಸೂಚಿಸುತ್ತಿವೆ? ಬಹುಶಃ ದಶರಥನ ಮಕ್ಕಳು ವಿವಾಹವಾದ ರಾಜಕುಮಾರಿಯರು ಕೃಷಿಯ ಹಿನ್ನೆಲೆಯಿಂದ ಬಂದವರು.

ರಾವಣನಿಗೆ ಸಂಬಂಧಪಟ್ಟವರ ಹೆಸರುಗಳಲ್ಲಿ ಇದನ್ನು ಇನ್ನಷ್ಟು ಸುವ್ಯಕ್ತವಾಗಿ ಕಾಣಬಹುದು. ರಾವಣ ಶಬ್ದದ ಮೂಲವಾದ ರವ ಶಬ್ದವು ಧ್ವನಿಯನ್ನು ಸೂಚಿಸುತ್ತಿದ್ದು ಮಳೆ ತರುವ ಗುಡುಗಿನ ಪರ್ಯಾಯವಾಗಿದೆ. ಅವನ ತಂದೆ ವಿಶ್ರವಸನ ಹೆಸರಲ್ಲಿ ಅಡಗಿರುವ ಶ್ರವವೂ ಧ್ವನಿಯತ್ತ ಬೆರಳೊಡ್ಡುತ್ತದೆ. ರಾವಣನ ಮಗನ ಹೆಸರು ಮೇಘನಾದ, ಅಂದರೆ ಮಳೆತರುವ ಮೋಡಗಳ ಗುಡುಗು. ಮೇಘನಾದನ ಇನ್ನೊಂದು ಹೆಸರು ಇಂದ್ರಜಿತ್. ಅಂದರೆ ಮಳೆಯ ದೇವತೆಯಾದ ಇಂದ್ರನನ್ನು ಗೆದ್ದವನು. ರಾವಣನ ಅಜ್ಜನ ಹೆಸರು ಪುಲಸ್ತ್ಯ. ಈ ಪದಕ್ಕೆ ಹೊಲ ಎಂಬ ಅರ್ಥ ನೀಡುವ ಪುಲಂ ಎನ್ನುವ ದ್ರಾವಿಡ ಶಬ್ದದೊಂದಿಗೆ ಏನಾದರೂ ಸಂಬಂಧವಿದೆಯೇ ತಿಳಿಯದು. ಇನ್ನಿತರ ಹೆಸರುಗಳು ಈ ಬಗೆಯ ಸಂಶಯವನ್ನು ಹುಟ್ಟಿಸುವುದೇ ಇಲ್ಲ. ರಾವಣನ ಪತ್ನಿ ಮಂಡೋದರಿ, ಅಂದರೆ ಉದರದಲ್ಲಿ ಅಂಬಲಿ ತುಂಬಿಕೊಂಡವಳು. ಅವನ ತಂಗಿ ಶೂರ್ಪಣಕಾ. ಶೂರ್ಪ ಎಂದರೆ ಮೊರ. ರಾವಣನ ತಾಯಿ ಕೈಕಸಿ. ಆಕೆಯ ಇನ್ನೊಂದು ಹೆಸರು ನಿಕಾಷ, ಹಾಗೆಂದರೆ ಒಂದು ತರಹದ ಸಣ್ಣ ನೇಗಿಲು. ಅವನ ಮಲತಾಯಿ ಇಲಾವಿಡಾ. ಇದಕ್ಕೆ ಮೂಲವಾದ ಇಲವ ಶಬ್ದವು ನೇಗಿಲನ್ನು ಹಿಡಿದವನು ಎಂಬ ಅರ್ಥ ಹೊರಡಿಸುತ್ತದೆ. ರಾವಣ ಆಳ್ವಿಕೆ ನಡೆಸಿದ ದೇಶದ ಹೆಸರು ಲಂಕಾ. ಈ ಲಂಕಾ ಎಂಬುದು ಧಾನ್ಯವೊಂದರ ಹೆಸರು. ಅವನ ಒಬ್ಬ ತಮ್ಮ ಕುಂಭಕರ್ಣ, ಅಂದರೆ ಹಂಡೆಯ ಕೈ. ರಾವಣನ ಸಂಬಂಧಿಕರಲ್ಲಿ ಒಬ್ಬ ಖರ, ಇನ್ನೊಬ್ಬ ಮಾರೀಚ. ಖರ ಎಂದರೆ ಅನ್ನ ಪಾಕಮಾಡುವ ಮಡಕೆಯನ್ನು ಇಡತಕ್ಕಂತ ಸ್ಥಳ. ಮಾರಿ ಎಂದರೆ ಮಳೆ.

ರಾಮನು ನಿಗ್ರಹಿಸಿದವರಲ್ಲಿ ಓರ್ವನೆಂದರೆ ಸುಗ್ರೀವನ ಅಣ್ಣನಾದ ವಾಲಿ. ವಲ ಶಬ್ದವು ವಾಲಿ ಎಂಬ ನಾಮಕ್ಕರಕ್ಕೆ ಮೂಲವಾಗಿದೆ. ವಲ ಎಂದರೆ ಮೋಡ. ರಾಮನ ಕೃಪೆಗೆ ಪಾತ್ರರಾದವಲ್ಲಿ ಒಬ್ಬಳು ಅಹಲ್ಯಾ. ಈ ನಾಮಪದವು ಅ-ಹಲ್ಯ ಎಂಬ ಕ್ರಿಯಾಪದವನ್ನು ನೆನಪಿಗೆ ತರುತ್ತದೆ. ಅಹಲ್ಯ ಎಂದರೆ ಉಳುಮೆ ನಡೆಯಲಾರದ ನೆಲ. ಕಥೆಯ ಕೊನೆಯಲ್ಲಿ ಸೀತೆ ಇಬ್ಬರು ಅವಳಿ ಮಕ್ಕಳನ್ನು ಹಡೆಯುತ್ತಾಳೆ. ಅವರಲ್ಲಿ ಒಬ್ಬ ಲವ, ಇನ್ನೊಬ್ಬ ಕುಶ. ಲವ ಎಂದರೆ ಕುಯ್ಲು, ಕುಶ ಎಂದರೆ ಈಗಾಗಲೇ ಹೇಳಿದಂತೆ ನೇಗಿಲು.
ಇವೆಲ್ಲವೂ ರೂಪಕಗಳು. ಅವು ರಾಜನೋರ್ವನು ಯುದ್ಧ ಹಾಗೂ ವಿವಾಹಸಂಬಂಧಗಳ ಮೂಲಕ ಇತರ ಪ್ರದೇಶಗಳ ಹೆಚ್ಚುವರಿ ಉತ್ಪಾದನೆಯ ಮೇಲೆ ನಿಯಂತ್ರಣವನ್ನು ಸಾಧಿಸಿದ್ದನ್ನು ಹೇಳುತ್ತದೆ. ಹಾಗೆಯೇ ಈ ಹಿಂದೆ ಕೃಷಿ ನಡೆದಿರದ ಕನ್ನೆನೆಲಗಳನ್ನು ಕೃಷಿಗೆ ಯೋಗ್ಯವಾಗಿಸಿದ್ದನ್ನೂ ಸೂಚಿಸುತ್ತದೆ.

2015ರ ನನ್ನ ಆರ್ಕೈವ್ ಇಂಡಿಯಾ ಇನ್ಸ್‌ಟಿಟ್ಯೂಟ್ ಉಪನ್ಯಾಸದಲ್ಲಿ ನಾನು ಈ ರೂಪಕಗಳ ವಿಚಾರವು ಬಹುಶಃ ವಾಲ್ಮೀಕಿಗೂ ತಿಳಿದಿರಲಿಕ್ಕಿಲ್ಲ, ಏಕೆಂದರೆ ರಾಮಾಯಣದ ಕಥೆ ಅಂಥ ಚಿತ್ರವೊಂದನ್ನು ಕಟ್ಟಿಕೊಡುವುದಿಲ್ಲ ಎಂದು ಹೇಳಿದ್ದೆ. ಬಹುಶಃ ಕುಶೀಲವರುಗಳ ಕಾಲದ ಮೌಖಿಕ ಕೃತಿಯಲ್ಲಿ ಕೃತಿಯ ಕರ್ತಾರರು ಈ ರೂಪಕಗಳನ್ನು ಅಡಗಿಸಿಟ್ಟಿರಬಹುದು, ಆ ಕಥೆಯನ್ನು ತನ್ನ ಕಾವ್ಯಕ್ಕೆ ವಸ್ತುವಾಗಿ ಸ್ವೀಕರಿಸಿದ ವಾಲ್ಮೀಕಿಗೆ ಅಲ್ಲಿ ಹುದುಗಿರುವ ಈ ರೂಪಕಗಳು ತಿಳಿದಿರಲಿಲ್ಲ ಎಂದಿದ್ದೆ. ನನ್ನ ಈ ಹಳೆಯ ನಿಲುವು ಈಗ ನನಗೆ ಸ್ವೀಕೃತವಲ್ಲ. ಮೇಲೆ ಹೇಳಿದ ಕೃಷಿಯ ರೂಪಕಗಳನ್ನು ಹಲವು ಮಂದಿ ಇತಿಹಾಸಕಾರರೊಂದಿಗೆ ದೀರ್ಘವಾಗಿ ಚರ್ಚಿಸಿದ್ದೇನೆ: ಉದಾಹರಣೆಗೆ ಜೆಸ್ಸೀ ರೋಸ್ ನಟ್ಸನ್, ರೊಮೀಲಾ ಥಾಪರ್, ಭೈರಬಿ ಪ್ರಸಾದ್ ಸಾಹೂ, ಕೇಶವನ್ ವೆಳುತ್ತಾಟ್, ಡೇವಿಡ್ ಶುಲ್ಮನ್, ಇತ್ಯಾದಿ. ಈ ಎಲ್ಲರೂ ಕಾವ್ಯವನ್ನು ರಚಿಸಿದ ವಾಲ್ಮೀಕಿಯೇ ಏಕೆ ಈ ಹತ್ತಾರು ಸೂಚನೆಗಳನ್ನು ರಾಮಾಯಣದಲ್ಲಿ ಅಡಗಿಸಿ ಇಟ್ಟಿರಬಾರದು ಎಂದು ನನ್ನನ್ನು ಕೇಳಿದರು. ಆ ಸಾಧ್ಯತೆಯನ್ನು ಅಲ್ಲಗಳೆಯಲು ಕಾರಣಗಳಿಲ್ಲ.

ವರ್ಣವಿವೇಚನೆ ಮೊಟ್ಟಮೊದಲು ತಲೆದೋರಿದ ಕಾಲವನ್ನು ಗುರುತಿಸಿದ್ದಾಯ್ತು. ಆ ಕಾಲದ ಭೌತಿಕ ಪಲ್ಲಟವನ್ನೂ ಈಗ ಸ್ಥೂಲವಾಗಿ ಸಮೀಕ್ಷಿಸಿದ್ದೇವೆ. ಹೆಚ್ಚೆಚ್ಚು ಕನ್ನೆನೆಲಗಳಲ್ಲಿ ಉಳುಮೆಯ ಕಾರ್ಯ ಆರಂಭಿಸುವ ಮೂಲಕ ಜರುಗಿದ ಕೃಷಿಯ ವಿಸ್ತರಣೆ, ಅದರಿಂದಾದ ಭೂಸ್ವಾಮ್ಯದ ಏಳಿಗೆ, ಈ ಭೂಸ್ವಾಮ್ಯವು ಹುಟ್ಟುಹಾಕಿದ ಹೊಸ ಸ್ವತ್ತಿನ ಮತ್ತು ಉತ್ಪಾದನೆಯ ಸಂಬಂಧಗಳು, ಅಂಥ ಸಂಬಂಧಗಳು ರೂಪು ನೀಡಿದ ಭೂಮಾಲೀಕ ವ್ಯವಸ್ಥೆ, ಈ ವ್ಯವಸ್ಥೆಯ ಕೂಸಾದ ಶ್ರೇಣೀಕರಣ, ಮತ್ತು ಕೊನೆಯದಾಗಿ ಭೂಸ್ವಾಮ್ಯದಿಂದ ತಲೆದೋರಿದ ದಾಯಕ್ರಮಗಳ ಕುರಿತಾದ ಆತಂಕಗಳು ಮತ್ತು ಸಿದ್ಧಾಂತಗಳು, ಈ ಅಂಶಗಳೆಲ್ಲವೂ ವೈದಿಕರು ವಲಸಿಗರಾದ ಪಶುಪಾಲಕರಾಗಿದ್ದ ಕಾಲಕ್ಕೆ ಇದ್ದಿರದ ನೂತನ ಭೌತಿಕ ಪರಿಸರವೊಂದಕ್ಕೆ ಜನ್ಮ ನೀಡಿತು. ಆ ಭೌತಿಕ ಪರಿಸರದಲ್ಲಿ ಅನಾವೃತವಾದ ಶ್ರೇಣೀಕರಣವೇ ಚಾತುರ್ವರ್ಣ್ಯ ಎಂಬ ವಿವೇಚನೆ.

 

ಜಾತಿ ಪದ್ಧತಿಯ ಮೈಮನಗಳು-1

ಜಾತಿ ಪದ್ಧತಿಯ ಮೈಮನಗಳು- ಎರಡನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ಮೂರನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ನಾಲ್ಕನೆಯ ಕಂತು

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...