ಮರೆವೆಯೇ ದಂಡೆಯನ್ನು ರೂಪಿಸುತ್ತಿರುತ್ತದೆ.

Date: 04-04-2023

Location: ಬೆಂಗಳೂರು


“ಆಡುವ ಗಾಳಿ, ತೇಲುವ ಮೋಡ, ಹರಿವ ನೀರು ಯಾವುದೂ ನಿದ್ದೆ ಮಾಡುವುದಿಲ್ಲ. ನಾನು ಮಾತ್ರ ಯಾಕೆ ಎಂದೆನ್ನಿಸಿಬಿಟ್ಟಿತ್ತಲ್ಲ ಆ ಕ್ಷಣ! ಅದು ನನ್ನೊಳಗನ್ನು ಜಾಗೃತಗೊಳಿಸಿಬಿಟ್ಟಿತ್ತು. ಮಾತ್ರೆಗಳು ತಂದೊಡ್ಡುತ್ತಿದ್ದ ನಿದ್ದೆಯನ್ನು ದೂರಕ್ಕೆ ತಳ್ಳುವ ಶಕ್ತಿ ನನ್ನಲ್ಲಿ ಹೇಗೆ ಬಂತು?,” ಎನ್ನುತ್ತಾರೆ ಲೇಖಕಿ ಪಿ. ಚಂದ್ರಿಕಾ. ಅವರು ತಮ್ಮ ನಡೆಯದ ಬಟ್ಟೆ ಅಂಕಣದಲ್ಲಿ ‘ಮರೆವೆಯೇ ದಂಡೆಯನ್ನು ರೂಪಿಸುತ್ತಿರುತ್ತದೆ’ ಎನ್ನುವ ವಿಚಾರವನ್ನು ಕಟ್ಟಿಕೊಟ್ಟಿದ್ದಾರೆ.

`ಸಾವು... ನೋವು... ಸಂಕಟ... ದಾಟಿಕೊಳ್ಳುತ್ತೇವೆ ಎಲ್ಲವನ್ನೂ. ಬದುಕಾಗಿರುವುದೇ ಹೀಗೆ ಅಲ್ಲವಾ! ದಾಟಿಕೊಳ್ಳುವುದು ಇಲ್ಲದೇ ಹೋದರೆ ಸಮಯದ ಅಗತ್ಯವಾದರೂ ಏನಿದೆ. ಹಳೆಯ ಗಾಯಗಳು ಮಾಯುತ್ತವೆ, ಮಾಯುತ್ತಾ ನವೆಯನ್ನುಂಟು ಮಾಡುತ್ತವೆ. ಆದರೆ ಉಳಿಸುವುದು ಶಾಶ್ವತವಾದ ಗುರುತುಗಳನ್ನು. ಆ ಗುರುತುಗಳು ನೆನಪುಗಳನ್ನು ಕೆದಕುತ್ತಾ, ಕೆದಕುತ್ತಾ ಹೋದಂತೆ ಅವು ಮಾಡುವ ಗಾಯಗಳು ಮಾತ್ರ ವ್ರಣಗಳೇ. ನಾನೂ ದಾಟಿಕೊಂಡೆ ಇದೆಲ್ಲವನ್ನೂ-ವ್ರಣವಾಗಬಲ್ಲದಾಗಿದ್ದ ಆ ಎಲ್ಲಾ ಗುರುತುಗಳನ್ನು, ಸಂಕೇತಗಳನ್ನು, ಗೊಂದಲಗಳನ್ನೂ. ನನ್ನೆದುರು ಬೃಹದಾಕಾರವಾಗಿದ್ದ ತೂಕಡಿಸುವ ನಿದ್ದೆಯನ್ನು ಹಿಡಿಮಾಡಿ ಮುಷ್ಟಿಯಲಿ ಹಿಡಿಯಲು ಯತ್ನಿಸಿದಾಗ ನನಗೆ ನಾನೇ ಅಂದುಕೊಂಡಿದ್ದೆ ಇದು ಅಸಧ್ಯ. ಸಮಯ ನೀಡುವ ಅತಿ ದೊಡ್ಡ ಮದ್ದು ಮರೆವು. ಆಹಾ! ಮರೆವೆಯದ್ದೇ ದಂಡೆೆ, ಹಾಸು ಹೊಕ್ಕಾಗಿ ನಮ್ಮೊಳಗೆ ಬಿದ್ದುಕೊಂಡಿದೆ. ಅದು ನಮ್ಮನ್ನು ಕಾಪಾಡುವಾಗ ನಮಗೆ ಇನ್ಯಾತರ ಭಯ ಹೇಳು?’ ಶ್ಯಾಮು ಹೇಳುತ್ತಿದ್ದರೆ ಅವಳೊಳಗೆ ಎಂಥಾ ಹಿಂಸೆಯನ್ನು ಅನುಭವಿಸಿರಬೇಕು. ಆದರೆ ಅದನ್ನು ಅವಳು ದಾಟಿಕೊಂಡ ಕ್ರಮ ಮಾತ್ರ ನನಗೆ ಈಗಲೂ ಅದ್ಭುತ ಅನ್ನಿಸುತ್ತೆ.

`ಆಡುವ ಗಾಳಿ, ತೇಲುವ ಮೋಡ, ಹರಿವ ನೀರು ಯಾವುದೂ ನಿದ್ದೆ ಮಾಡುವುದಿಲ್ಲ. ನಾನು ಮಾತ್ರ ಯಾಕೆ ಎಂದೆನ್ನಿಸಿಬಿಟ್ಟಿತ್ತಲ್ಲ ಆ ಕ್ಷಣ! ಅದು ನನ್ನೊಳಗನ್ನು ಜಾಗೃತಗೊಳಿಸಿಬಿಟ್ಟಿತ್ತು. ಮಾತ್ರೆಗಳು ತಂದೊಡ್ಡುತ್ತಿದ್ದ ನಿದ್ದೆಯನ್ನು ದೂರಕ್ಕೆ ತಳ್ಳುವ ಶಕ್ತಿ ನನ್ನಲ್ಲಿ ಹೇಗೆ ಬಂತು? ಅಸಾಧ್ಯ ಅಂದುಕೊಂಡಿದ್ದನ್ನು ಮಾಡಿಬಿಟ್ಟಾಗ ಜಗತ್ತು ಹೇಳುವ ಮಾತು ವಿಲ್ ಪವರ್. ಅಲ್ಲ ತೇಜೂ ಅದು ವಿಲ್ಲ್ ಪವರ್ ಅಲ್ಲ. ನನ್ನ ಕೈಗಳಿಗೆ ಬರೆವ ಹುಚ್ಚಿತ್ತಲ್ಲ,…ಅದು ಪುಟಿದು ಚಿಮ್ಮಿತ್ತಲ್ಲ ಅನಂತದೊಂದಿಗೆ ಸ್ಪರ್ಧಿಸುವ ಸಾಧ್ಯತೆಯಲ್ಲಿ! ಆಗ ನೋಡು ನಡೆದದ್ದು ಒಂದು ಅದ್ಭುತ. ದಳವನ್ನು ಮೂಡಿಸಿಕೊಳ್ಳುವ ಉಮೇದಿಗೆ ಬಿದ್ದ ಹೂವೊಂದು ಆಕಾರಾಕ್ಕಾಗಿ ಹಪಹಪಿಸುತ್ತಲ್ಲ! ಆಗಬಹುದಾದ ರಣಾಂಗಣದಲ್ಲಿ ಯುದ್ಧವಿಲ್ಲದ ಸ್ಥಿತಿಯ ಬೋಧನೆ ಮಾಡುವಾಗ ಜಗತ್ತು ಸುಕ್ಷೇಮವಾಗಿ ಧನ್ಯತೆಯೊಂದು ಹುಟ್ಟುತ್ತಲ್ಲ ... ಹೀಗೆ... ಹೀಗೆ... ಅದಕ್ಕೆ ಈಗಲೂ ನಾನು ವ್ಯಾಖ್ಯಾನವನ್ನು ಕೊಡುತ್ತಲೇ ಇದ್ದೇನೆ. ಊಹುಂ ವ್ಯಾಖ್ಯೆಗೆ ಸಿಗದ ಆ ಒಂದು ಘಟನೆಯನ್ನು ಮಾತ್ರ ವಿವರಿಸಲೇ ಆಗುತ್ತಿಲ್ಲ. ಎಲ್ಲಾ ಹೇಳಿದ ಮೇಲೂ ಒಳಗೇ ಬೇರೆಯದೇ ಏನೋ ಇದೆ. ಅದು ಹಾಗೇ ಉಳಿದೇ ಬಿಟ್ಟಿದೆ ಅನ್ನಿಸುತ್ತಲ್ಲ.

ಈಗಲೂ ಆಂದುಕೊಳ್ಳುತ್ತೇನೆ ಅದೊಂದು ಜಗತ್ತಿನ ಅತ್ಯಂತಿಕ ಸ್ಥಿತಿಯೇ. ಆತ್ಯಂತಿಕವಾದ್ದು ಇಷ್ಟು ಸಣ್ಣದರಲ್ಲಿ ಇರುತ್ತದೆಯೇ?! ಮೀನಿಗೆ ನೀರಲ್ಲಿ ಈಜುವುದು ಆಸೆಯೇ ಅಥವಾ... ಅದು ಅದರ ಜೀವನವೇ? ಎರಡು ಅಂಗೈಗಳನ್ನು ಒಂದರ ಮೇಲೊಂದು ಇಟ್ಟು ಮೀನಿನ ಹಾಗೆ ಈಜಿಸುತ್ತಾ ಆಡುತ್ತಿದ್ದುದು ಆಟವೇ ಅಥವಾ ನಾವೇ ಮೀನಾಗುವ ಒಳಗಿನ ಆಪೇಕ್ಷೆಯೇ? ನೆನಪುಗಳ ಸರಣಿ ಬಿಚ್ಚಿಕೊಳ್ಳುವಾಗ ಅದರಲ್ಲಿ ಉಳಿಯುವುದು ಬಿಡುಗಡೆ ಆಗಿರಲಿ. ತಾಯ ಗರ್ಭದಿಂದ ಮಗುವೊಂದು ಹೊರಗೆ ಬರುವುದು ಬಿಡುಗಡೆಯೇ? ಅಲ್ಲ ಅದು ಜಗದ ಎದೆಯಲ್ಲಿ ಮೊಳೆತ ಪ್ರಾರ್ಥನೆ. ನಮ್ಮ ಶಕ್ತಿಯನ್ನು ಅಡಗಿಸುತ್ತಾ ಮೊಳಕಾಲೂರಿದಾಗ ಮಂಡಿಯಲ್ಲಾದ ಗಾಯ ಒತ್ತುತ್ತದೆ ಅಲ್ಲವೆ. ಆಗಲೇ ನಾವು ಮೀನಾಗಬೇಕು ಅಂದುಕೊಂಡಿದ್ದು ಆಕಾಶದಲ್ಲಿ ಹಾರುವ ಹಕ್ಕಿಯನ್ನು ನೋಡಿ ಅದರಂತೆ ಆಗಬೇಕೆಂದುಕೊಂಡಿದ್ದು. ನೀರ ಎದೆ ಮೇಲೆ ಹಾರುವ ಹಕ್ಕಿಯ ಬಿಂಬ ನೋಡಿದಾಗಲೆಲ್ಲಾ ಮೀನಿನ ಕಣ್ಣೊಳಗೆ ಹಾರಾಡುವ ಹಕ್ಕಿ ಕಾಣುತ್ತದೆಯೇ ಎಂದು ಕುತೂಹಲಿಸಿದ್ದು. ತೇಜೂ ನಾನೂ ನೀನು ಕೆರೆಯ ಅಂಚಲ್ಲಿ ಕೂತು ಮಾತಾಡಿಕೊಳ್ಳುತ್ತಿದ್ದ ಮಾತುಗಳ ನೆನಪಿದೆಯೇ? ಬರೆಯದ ಹೋಂವರ್ಕ್ಗಳು ನಮ್ಮನ್ನು ಸ್ಕೂಲಲ್ಲಿ ಹೊಡೆತ ತಿನ್ನುವಂತೆ ಮಾಡುವಾಗೆಲ್ಲಾ ನಮ್ಮ ಕಣ್ಣಲ್ಲಿ ನೀರಿನ ಬದಲು ಹಠ ಹುಟ್ಟು ಹಾಕುತ್ತಿದ್ದವು. ಮಾತಾಡು ಎನ್ನುವ ಟೀಚರ್‌ನ ಮಾತುಗಳು ನಮ್ಮನ್ನು ಇನ್ನಷ್ಟು ಕಠೋರ ಮಾಡುತ್ತಿದ್ದವು! ಆಗ ತಾನೆ ನಾನೂ ನೀನು ಕೆರೆಯ ಏರಿಯ ಮೇಲೆ ಕೂತು ನಾವೂ ಮೀನಾಗಿಬಿಟ್ಟಿದ್ದರೆ ಎಷ್ಟು ಹಾಯಾಗಿ ನೀರಲ್ಲಿ ಆಡುತ್ತಾ ಇರಬಹುದಿತ್ತು ಎಂದುಕೊಂಡಿದ್ದು. ಆಗ ನನ್ನಲ್ಲಿ ಹುಟ್ಟಿದ್ದ ಪ್ರಶ್ನೆ ಈ ಮೀನಿಗೆ ನೀರಲ್ಲಿ ಚಳಿ ಅನ್ನಿಸುವುದಿಲ್ಲವೇ ಎಂದು. ನೀನು ಪಕ್ಕೆಂದು ನಕ್ಕಿದ್ದೆ ನಾನು ಗಂಭೀರವಾಗಿದ್ದೆ. ತೇಜು ಈಗಲೂ ನನ್ನ ಆ ಪ್ರಶ್ನೆ ಕಾಡುತ್ತಲೇ ಇದೆ. ನೀರಲ್ಲಿ ಮೀನಿಗೆ ಚಳಿಗೆ ನಡುಗಲ್ಲವಾ? ಬೇಸಿಗೆಯಲ್ಲಿ ಹಿತ ಆದರೆ ಚಳಿಗಾಲದಲ್ಲಿ ಮಳೆಗಾಲದಲ್ಲಿ! ಆಗಲೇ ನೀರು ನನ್ನ ಸುತ್ತಾ ತುಂಬಿಕೊಂಡಿದ್ದು. ವಿಚಿತ್ರ ಏನು ಗೊತ್ತಾ ಮೊನ್ನೆ ಚಂದ್ರನನ್ನೂ ಈ ಪ್ರಶ್ನೆ ಕೇಳಿದೆ. ಆಗಲೂ ನನ್ನ ಮನೆ ಕೊಳವಾಗಿಬಿಟ್ಟಿತ್ತು. ನೋಡು ಎಂದು ತೋರಿಸಿದ್ದಕ್ಕೆ, ಹುಡುಕಾಡಿದ ಅವನು ಎಲ್ಲಿ ಎಂದುಹುಡುಕಿ, ನನ್ನ ಸಪ್ಪಗಿನ ಮುಖವನ್ನು ನೋಡಿ `ಈ ಹ್ಯಾಲೊಸಿನೇಷನ್ ಬಿಡು ಮಾರಾಯ್ತಿ’ ಎಂದಿದ್ದ.

ಸಂಜೆ ಕಟ್ಟಿ ರಾತ್ರಿಯಿಡೀ ಬಿಟ್ಟು ಬೆಳಗಿಗೆ ತೆಗೆದ ಬಲೆಯಲ್ಲಿ ಬಿದ್ದು ಇನ್ನೂ ಜೀವಾಂತವಾಗಿ ಒದ್ದಾಡುತ್ತಿದ್ದ ಮೀನುಗಳ ಬಿಡಿಸುತ್ತಿದ್ದ ಶಿವೂಗೆ `ನೀರಲ್ಲಿನ ಮೀನಿಗೆ ಚಳಿ ನಡುಕ ಇರುತ್ತಾ ಅಂತ ನಿನಗೆ ಗೊತ್ತಿದ್ರೆ ಇವಳಿಗೆ ಹೇಳೋ ಶಿವು’ ಎಂದಾಗ ಹೀ ಎಂದು ನಕ್ಕಿದ್ದ. `ನಾಲ್ಕು ಮೀನು ಕೊಡೋ ತಿನ್ನಬೇಕು, ಅಮ್ಮನಿಗೆ ಹೇಳಿ ದುಡ್ಡು ಕೊಡಿಸುವೆ’ ಎಂದು ತೆಗೆದುಕೊಂಡು ಓಡುತ್ತಾ ನನ್ನ ಕಡೆ ವಿಚಿತ್ರವಾಗಿ ನೋಡಿದ್ದೆ. ಆ ನೋಟ ನನಗಿನ್ನೂ ನೆನಪಿದೆ ನಿಜ ಹೇಳು ತೇಜೂ, ನನ್ನ ಪ್ರಶ್ನೆ ನಿನಗೆ ಯಾಕೆ ವಿಚಿತ್ರ ಅನ್ನಿಸಿತ್ತು?’

ನಿಜ ಶ್ಯಾಮುವಿನ ಪ್ರಶ್ನೆ ನನಗೆ ಈಗ ಗಂಭೀರ ಅನ್ನಿಸುತ್ತಿದೆ. ಚಂದ್ರ ಹೇಳಿದ ಹಾಗೆ ಅದು ಬರಿಯ ಹ್ಯಾಲೊಸಿನೇಷನ್ನಾ! ಇಲ್ಲ ಅನ್ನಿಸುತ್ತೆ. ಆದರೂ ಕೆರೆಯ ನೀರನ್ನು ತನ್ನ ಕಲ್ಪನೆಯಿಂದ ಕುದಿಸಬಲ್ಲ ಅವಳಿಗೆ ಇಂಥಾ ಪ್ರಶ್ನೆಗೆ ಉತ್ತರ ಯಾಕೆ ಕಂಡುಕೊಳ್ಳಲಾಗಲಿಲ್ಲ. ಹಾಗೆಂದು ಅವಳೆಂದೂ ಸೋಲನ್ನು ಒಪ್ಪಿಕೊಳ್ಳಲಿಲ್ಲ. ಅಲ್ಲಾ ಅದು ಸೋಲೆಂತಲೂ ಅಲ್ಲ, ಪ್ರಯತ್ನ ಅಷ್ಟೇ. ಸಾಧಿಸುವ ಅವಳ ಗುರಿ ದೂರವೆ ಇತ್ತು. ಮಿತಿಗಳನ್ನು ಮೀರಬಲ್ಲ ವಿಸ್ತರಿಸಬಲ್ಲ ಅವಳ ಓಟ ಎಲ್ಲಿ ನಿಲ್ಲುತ್ತದೆ? ಮೀನನ್ನು ಫ್ರೈ ಮಾಡಿಕೊಂಡು ನಾನು ತಿನ್ನುತ್ತಿದ್ದರೆ ಮೀನನ್ನು ತಿನ್ನದ ಅವಳು ನೀರ ಒಳಗಿನ ಮೀನಿನ ಚಳಿಯನ್ನು ನೆನೆಸಿಕೊಳ್ಳುತ್ತಾ ನಡುಗಿದ್ದಳು.

ನನಗೆ ಗೋಜಲೆನ್ನಿಸಿದ್ದು ಅವಳಿಗೆ ಸರಳ, ನನಗೆ ಸರಳ ಅನ್ನಿಸಿದ್ದು ಅವಳಿಗೆ ಗೋಜಲು. ಯಾವ ಲೋಕದಿಂದ ಬರುವ ಸಂದೇಶಗಳು ಅವಳನ್ನು ಹೀಗೆ ಮತ್ತಳಾಗಿಸುತ್ತಿದ್ದವು?! `ಕಂಡ ಚಿತ್ರವೊಂದು ಎದೆಯಲ್ಲಿ ಮೊಳೆತು ವಿವೇಕದ ಹಾಗೆ ನನಗೆ ಏನೆಲ್ಲವನ್ನೂ ಹೇಳುತ್ತಿದ್ದುವಲ್ಲ? ಆಗ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತ್ತು’ ಎಂದವಳನ್ನು ಅಚ್ಚರಿಯಿಂದ ನೋಡಿದೆ.

`ಹಾ ತೇಜೂ ನೀನವತ್ತು ಮೀನಿನ ಸೂಪ್ ಮಾಡಿಕ್ಕೊಂಡು ಕುಡೀತೀನಿ, ಫ್ರೈ ಮಾಡಿಕೊಂಡು ತಿಂತೀನಿ ಅಂತ ಹೊರಟೆಯಲ್ಲ, ಅವತ್ತು ಮನೆಗೆ ಬಂದು ಹೆಬ್ಬೆರಳನ್ನು ಬಣ್ಣದಲ್ಲಿ ಆದ್ದಿ ಪೇಜಿನ ಮೂಲೆಯಲ್ಲಿ ಒತ್ತಿ ನಾನೊಂದು ಮೀನಿನ ಚಿತ್ರ ಬರೆದೆ ಪುಟ್ಟದಾಗಿ. ನೀನು ಕೈಲಿ ಹಿಡಿದು ಹೋದೆಯಲ್ಲಾ ಆಗ ಅವುಗಳ ಕಣ್ಣಲ್ಲಿ ನನಗೆ ದೀನವಾದ ಭಾವವೊಂದು ಕಂಡಿತ್ತು. ಕಣ್ಣು ಪಿಳುಕಿಸದ ಅವು ಬದುಕಿದ್ದಾಗ ಬಿಟ್ಟಂತೆ ಸತ್ತಮೇಲೂ ಕಣ್ಣನ್ನು ಅಗಲಿಸಿಕೊಂಡೇ ಇದ್ದವು. ಮತ್ತೂ ಮೂರೂ ಮೀನುಗಳನ್ನೂ ಬರೆದೆ. ಬರೆದ ಮೀನುಗಳ ಚಿತ್ರದ ಸುತ್ತಾ ನೀರು ಬರೆದೆ. ಆಗಲೂ ಮೀನುಗಳು ಸುಮ್ಮನೆ ಇದ್ದವು. ಇದು ಆಡಲಿಕ್ಕೆ ಏನು ಮಾಡಲಿ? ಎಂದು ಅದರೆದುರು ಜೀವ ತುಂಬುವ ಯಾವುದೋ ಗಾರುಡಿಯಂತೆ ಅಂಗೈಗಳನ್ನು ಒಂದರ ಮೇಲೊಂದರಂತೆ ಇರಿಸಿಕೊಂಡು ಮೀನು ನೀರಲ್ಲಿ ತೇಲುವ ಹಾಗೆ ಹೆಬ್ಬೆರಳುಗಳನ್ನು ಆಡಿಸಿ ಜಾರಿಸಿದೆ. ಅಚ್ಚರಿ ನನ್ನ ಕೈಯ್ಯ ಜೊತೆ ಪೇಪರ್ ಮೇಲೆ ನಾನು ಬರೆದ ಒಂದು ಮೀನೂ ಜಾರಿ, ಬುಳ ಬುಳ ಎಂದು ನೀರ ಗುಳ್ಳೆಗಳನ್ನೇಳಿಸಿತ್ತು. ನನ್ನನ್ನು ನಾನು ನಂಬಲಿಲ್ಲ. ನನಗೆ ಆ ಮೀನು ಮೀನಾಗಿ ಅಲ್ಲ ಅದೊಂದು ದೇವತೆಯಾಗಿ ಕಂಡಿತ್ತು.

ಹಾಗೆ ಬಂದ ಮೀನು ಸುಮ್ಮನೆಯೂ ಇರದೆ ಕಾಡತೊಡಗಿತು, `ಹೇಳು ನನ್ನನ್ನು ಯಾಕೆ ಕರೆದೆ’ ಎಂದು. ನಾನು ನಡುಗಿದೆ- ಸಣ್ಣದಾಗಿ ನೀರು ನನ್ನ ಸುತ್ತಾ ಸುತ್ತಿಕೊಳ್ಳತೊಡಗಿತು. ಮಣ್ಣ ಘಮಲೊಂದಿಗೆ ಬೆರೆತ ಯಾವುದೋ ವಾಸನೆ ನನ್ನ ಮೂಗನ್ನು ಕೆಣಕುತ್ತಿದ್ದರೆ, ಆ ಮೀನು ಸಣ್ಣದಾಗಿ ತನ್ನ ಬಾಯನ್ನು ತೆರೆದು ತೆರೆದು ಆಡಿಸುತ್ತಾ ನನ್ನ ಸುತ್ತಾ ಸುತ್ತುವಾಗ ನನಗೆ ಮಾತುಗಳು ಗಂಟಲಾಳದಲ್ಲಿ ಹುದುಗುತ್ತಿದೆ ಎನ್ನಿಸುತ್ತಿತ್ತು. ಹೊಳೆವ ಅದರ ಕಣ್ಣು ಗಾಲುಗೋಲದ ಹಾಗೆ ಬೆಳಕನ್ನು ಪ್ರತಿಫಲಿಸುತ್ತಾ, ಫಲಿಸಿದ ಬೆಳಕನ್ನು ನೀರಿಗೆ ಬಿಡುತ್ತಾ ನೀರನ್ನೂ ಗಾಜುಗೊಳಿಸುತ್ತಿತ್ತು. ನಾನು ನೋಡುತ್ತಲೇ ಇದ್ದೆ ನಾನು ಬರೆದದ್ದು ಹೀಗೆ ನನ್ನ ಸುತ್ತಾ ಆಡುತ್ತಾ ಸುತ್ತುವಾಗ ಅದನ್ನು ನನ್ನ ಬೊಗಸೆಗೆ ತೆಗೆದುಕೊಂಡು ಕೇಳಿದೆ, `ಮೀನೇ ಮೀನೇ ನೀರಿನ ಬಗ್ಗೆ ಏನು ಹೇಳುತ್ತೀಯಾ?’ ನನ್ನ ಕೈಗಳಿಗೆ ಕಚಗುಳಿ ಇಟ್ಟ ಮೀನು ಬೊಗಸೆಯಿಂದ ಜಿಗಿಯಿತು. ಜಿಗಿಯುತ್ತಾ ಕೇಳಿತೇ! `ಈಗ ಬರೆಯ ಬಲ್ಲೆಯಾ ಇನ್ನಷ್ಟು ಮೀನುಗಳ ಚಿತ್ರಗಳನ್ನು?’ ಪ್ರಯತ್ನಿಸಿದೆ, ನೀರು ಅಲೆಯೊಡೆದು ಬಂದು ನಾನು ಬರೆದದ್ದನ್ನು ಅಳಿಸಿ ಹಾಕುತ್ತಿತ್ತು- ನನ್ನ ಹೆಬ್ಬೆರಳಿಗೆ ಅಂಟಿದ ಬಣ್ಣಗಳನ್ನೂ ಕೂಡಾ. ಹೀಗೆ ಅಳಿಸಿಕೊಳ್ಳುವ ಆಟವೂ ಕೂಡಾ ಚೆನ್ನವೇ ಎನ್ನಿಸಿಬಿಟ್ಟಿತ್ತು. ನೀರು ತಾಕಿ ಬಣ್ಣದ ಬಿಸುಪನ್ನು ಆರಿಸಿವಾಗ ಯಾವ ನಿರಾಳತೆ ಇತ್ತು? ಯೋಚಿಸಿದೆ. `ಊಹುಂ ಆಗಲಿಕ್ಕಿಲ್ಲ ಅಲ್ಲವಾ? ಶೂನ್ಯದಲ್ಲಿ ಏನು ಬೇಕಾದರೂ ಸೃಷ್ಟಿಸಬಹುದು. ಸೃಷ್ಟಿಯಾದದ್ದರ ನಡುವೆ ಅಸ್ತಿತ್ವ ಹುಡುಕುವುದು ಬಲು ಕಷ್ಟ. ಮತ್ತಲ್ಲಿ ಸೃಷ್ಟಿಸುವುದು ಇನ್ನೂ ಕಷ್ಟ’ ಮಾತಾಡಿದ್ದು ಮೀನೇ? ಕುದಿವ ನೀರಿನ ನೊರೆಯಲೆಯ ಮೇಲೆ ಮೀನು ಹಾರಿ ಮತ್ತೆ ನೀರಿಗೆ ಬೀಳುತ್ತಿದೆ. ಅರೆ ನನ್ನ ಸುತ್ತಾ ಸೃಷ್ಟಿಯಾದ ಈ ಕೆರೆಯನ್ನು ನಾನೆಲ್ಲೂ ನೋಡೇ ಇಲ್ಲವಲ್ಲ! ಹೇಗೆ ಬದಲಾಯಿತು ಇದು ನನ್ನ ಅರಿವಿಗೇ ಬಾರದೆ? ಲಿಟ್ಮಸ್ ಕಾಗದ ಸೋಪಿನ ನೊರೆಯನ್ನು ಹೀರಿವಾಗ ತನ್ನ ಒಳ ಮೈ ಬಣ್ಣವನ್ನು ಬದಲಿಸಿಕೊಳ್ಳುವ ಹಾಗೆ ಎಲ್ಲವೂ ಬದಲಾಗುತ್ತಿದೆ. ನನ್ನ ಸುತ್ತಾ ನೀರು ಹೆಚ್ಚುತ್ತಲೇ ಇದೆ!

ಅಷ್ಟರಲ್ಲಿ ಮೀನುಗಳ ದಂಡೆ ಬಂದವು. ಅರೆ ನಾನು ಬರೆದದ್ದು ನಾಲ್ಕೇ, ಉಳಿದವನ್ನು ನೀರು ಅಳಿಸಿಬಿಟ್ಟಿತು. ಇದು ಹೇಗೆ ಸಾಧ್ಯ, ಎಲ್ಲಿದ್ದವು ಇವು? ಎಂದು ಬೆರಗಿಂದ ನೋಡುವಾಗ ನಾ ಬರೆದ ಮೀನು ಅಲ್ಲಿ ಬಂದು, `ಇವೆಲ್ಲಾ ನೀನು ಬರೆದವಲ್ಲ ನನ್ನ ಮರಿಗಳು’ ಎಂದಿತು ಹೆಮ್ಮೆಯಿಂದ. ಎಲ್ಲಾ ಮೀನುಗಳೂ ಗಾಳಿಗೆದುರಾಗಿ ಹಾರಿ ಹಾರಿ ನಲಿಯುತ್ತಿವೆ! ಹಾಗೆ ಹಾರಿ ಹಾರಿ ಬೀಳುವಾಗ ಕೆರೆಯ ನೀರೂ ಖುಷಿಯಲ್ಲಿ ಉಕ್ಕುತ್ತಿತ್ತು. ಆಗ ನನಗೆ ನೆನಪಾಗಿದ್ದೇ ನನಗೆ ಈಜು ಬರೊಲ್ಲ ಅಂತ.

ಅರೆ ಈಜು ಬಾರದ ನಾನು ಮುಳುಗುವುದು ಖಚಿತ! ಮೀನೇ ಮೀನೆ ಯಾಕೆ ಹೀಗೆ ಮಾಡಿದೆ? ಬರೆದವಳನ್ನು ಮುಳುಗಿಸುವುದು ನ್ಯಾಯವೇ? ಕಣ್ಣ ಸುಳಿಗೆ ಬಣ್ಣ ಬಳೆದಂತೆ ಕೇಳಿತು, `ನೀರೊಳಗೆ ಈಜದೇ ಅನುಭವ ಹೇಗಾಗುತ್ತದೆ?’ ಎಂದು ಪುಳಕ್ಕನೆ ತಿರುಗಿ. ನನ್ನೊಳಗೆ ಭಯ ಆವರಿಸಿತು. ನನ್ನ ಕೈಗಳನ್ನು ಮುಂದೆ ಚಾಚಿ, `ನಿನ್ನ ಮರಿಗಳಿಗೆಲ್ಲಾ ಹೇಳು ಆಡಬೇಡಿ ಎಂದು. ಅವುಗಳ ಖುಷಿ ನೋಡೆ ನೀರು ಉಕ್ಕುತ್ತಿದೆ’ ಎಂದೆ. ಮೀನು ಕಣ್ಣ ತಿರುಗಿಸಿತು. ಮೀನಾಕ್ಷಿ, ಮೀನಕೇತು ಕಡೆಗೆ ಮ್ಮತ್ಯ್ರ ಮುದ್ರೆ-ಎಂದಿತು `ಯಾವುದನ್ನು ನಿಯಂತ್ರಿಸುವೆ? ಸುಮ್ಮನೆ ನೋಡುತ್ತಾ ನಿಲ್ಲು. ಸಿಗಬಹುದು ನನ್ನ ಹಾಗೆ ನಿನಗೂ ಜಲಬಂಧ’. `ಅರೆ ಮೀನೇ ನಾನು ಬರೆಯದೇ ಇದ್ದಿದ್ದರೆ ನೀನು ಇರುತ್ತಿರಲಿಲ್ಲ...’ ನನ್ನ ಮಾತನ್ನು ಕೇಳಿಸಿಕೊಳ್ಳಲು ಮೀನಲ್ಲಿ ಇರಲೇ ಇಲ್ಲ.

ಹುಡುಕಿದೆ ಭ್ರಮೆ ಕಳೆಯುವಂತೆ ಚೌಕಟ್ಟುಗಳನ್ನು ಮೀರಿದ ಯಾವ ಯಾವ ಸಂಗತಿಗಳೋ ವಿಷಯಾಂತರ ಮಾಡುವಂತೆ ನನ್ನ ನೋಡಿ ಗೇಲಿ ಮಾಡತೊಡಗಿದವು. ಡಾಕ್ಟರ್ ಹೇಳಿದರು, `ನೀನು ಶ್ಯಾಮು’, ಅಪ್ಪ `ಮಗಳೇ’ ಎಂದ... ನನ್ನ ಪ್ರಶ್ನೆ ಇನ್ನೂ ಗಾಢವಾಯಿತು `ನಾನು ಯಾರು?’

ಮೀನು ಕೋಪಗೊಂಡಿತ್ತು, `ಎಂದಾದರೂ ಸಂತೋಷದಲ್ಲಿದ್ದಾಗ ಕೇಳಿಕೊಂಡಿದ್ದೆಯಾ ನೀನ್ಯಾರೆಂದು? ಸಾಕು ನಿಲ್ಲಿಸು ನಿನ್ನ ಈ ಪ್ರಲಾಪ. ನಿನ್ನ ಮೂಗಲ್ಲಿ ಬಾಯಲ್ಲಿ ನೀರು ತುಂಬಿ ಪುಪ್ಪಸ ಗಾಳಿ ತಿದಿಯೊತ್ತಲಿಕ್ಕಾದಾಗ ಉಳಿಯಬೇಕು ಉಳಿದು ಬಾಳಬೇಕು ಎಂದು ಗೋಗರೆಯುತ್ತೀಯಲ್ಲ, ಅದು ಪ್ರಾರ್ಥನೆ’ ಎನ್ನುತ್ತಾ ಶ್ರದ್ಧೆಯ ಬಾಲದಲ್ಲಿ ನೀರ ತೂಗುತ್ತಾ ಬಂದು ಮಂತ್ರದಂಡದಂತೆ ನನ್ನ ಮುಟ್ಟಿತು ತೇಜೂ ನನ್ನ ಮೈತುಂಬಾ ಹೊಪ್ಪೆ ಹುರಿಯಂಥಾ ಪದ ಪದರ ಕಿವಿರುಗಳು, ಮೈತುಂಬಾ ರೆಕ್ಕೆ ಮತ್ಸ್ಯಬಂಧನ. ಆಗ ಅದು ಉಸಿರಿತು `ನೀನೀಗ ಮೀನು ನೀನೇ ಮೀನು’.

ಆ ಶ್ರದ್ಧೆ ನನ್ನ ಈಗಲೂ ಕಾಡುತ್ತದೆ. ದಡಕ್ಕೆ ಏರುವ ಮೀನನ್ನು ನೀರು ಮತ್ತೆ ತನ್ನ ಕೈಗಳನ್ನು ಚಾಚಿ ಎಳೆದುಕೊಂಡು ಜೀವಧಾರಣೆ ಮಾಡಿಬಿಡುತ್ತದೆಯಲ್ಲ ತೇಜೂ, ಇದನ್ನೆ ಚಂದ್ರನಿಗೆ ಹೇಳಿದ್ದೆ, `ಎಲ್ಲಾವೂ ಮರೆತು ಹೋಗುವುದು ಎಂದರೆ ಮೀನಾಗಬೇಕೆಂದು. ನನ್ನ÷ ವಿಚಿತ್ರವಾಗಿ ನೋಡಿದ್ದ, `ನಾನೂ ಒಬ್ಬ ಕಲಾವಿದ. ನನಗ್ಯಾಕೆ ಹೀಗೆ ಯಾಕೆ ಅನ್ನಿಸಿಲ್ಲ?’ ಅವನೆಂದಾಗ ಅವನ ಕಣ್ಣೂಗಳಲ್ಲಿ ನನ್ನ ಅಪರಾಧಗಳನ್ನು ಕ್ಷಮಿಸುವ ಕಾರುಣ್ಯವಿತ್ತು. ಪಯಣ ಎನ್ನುವುದು ಫಲಿತಾಂಶದಲ್ಲಿ ಇರೊಲ್ಲ. ಫಲಿತ ಎನ್ನುವುದು ಯಾವುದರ ಕೊನೆಯೂ ಅಲ್ಲ. ಚಂದ್ರನಿಗೆ ಮಾತ್ರವಲ್ಲ ಡಾಕ್ಟರರಿಗೆ, ಅಮ್ಮನಿಗೆ, ಅಪ್ಪನಿಗೆ ಎಲ್ಲರಿಗೂ ಹೇಳಬಯಸಿದ್ದೆ. ಡಾಕ್ಟರ್ ನನಗೆ ಸ್ಕಿಜೋಫ್ರೇನಿಯ ಅಂದರು, ಅಪ್ಪ ಅಮ್ಮ ಮರಳು ಎಂದರು, ಚಂದ್ರ ವಿಕ್ಷಿಪ್ತತೆ ಎಂದ. ಹೌದು ಯಾರು ಏನೆ ಹೆಸರಿಡಲಿ ನನ್ನೊಳಗೆ ಆಗುವ ಕ್ರಿಯೆಯನ್ನು ಹೇಳಿಕೊಟ್ಟಿದ್ದು ಮಾತ್ರ ಈ ಘಟನೆಯೇ. ಚಂದ್ರನನ್ನು ಒಮ್ಮೆ ಪ್ರಶ್ನಿಸಿದ್ದೆ `ನನ್ನ ಪ್ರೀತಿಸುವಾಗ ನನ್ನನ್ನು ಕೂಡುವಾಗ ಎಂದಾದರೂ ನಾನು ವಿಕ್ಷಿಪ್ತ ಎನ್ನುವುದು ನಿನ್ನ ತಲೆಯಲ್ಲಿ ಬಂದಿತ್ತೇ? ನಾವು ಪಯಣಿಸುವುದು ತೀವ್ರವಾದ ಭಾವದ ಜೊತೆ. ಹಾಗೆ ಭಾವ ತೀವ್ರವಾದಾಗ ನಾವಲ್ಲಿ ಇರೊಲ್ಲ. ಘನವಂತನೆಂಬ ನೀನು ಅದಕ್ಕೆ ಹೆಸರಿಸಬೇಡ. ಬರೀ ಅನುಭವಿಸು. ನಾನೆಂದರೂ, ನಿನ್ನ ಕೈಗಳಲ್ಲಿ ಆಕಾರ ಪಡೆವ ರೇಖೆಗಳೆಂದರೂ ಎರಡೂ ಒಂದೇ. ಆ ಕ್ಷಣದಲ್ಲಿ ಎಲ್ಲವೂ ಮರೆವೆಗೆ ಸಂದುಬಿಡಲಿ ಬಿಡು’. ಅವನು ಮುಚ್ಚಿದ ಕಣ್ಣುಗಳನ್ನು ಬಿಚ್ಚದೆ ಹೇಳಿದ್ದ, `ನಿನ್ನ ಹುಚ್ಚುತನವನ್ನು ಬಿಟ್ಟುಬಿಡು’.

ನಿಜ ಎಲ್ಲವೂ ಮರೆಯಬೇಕು, ಮರೆತು ಹೋಗುತ್ತದೆ. ಮೀನಾಗುವುದೆಂದರೆ ಮರೆತು ಹೋಗುವುದೆಂದೇ? ಗಾಳಿಗೆದುರಾಗಿ ಹಾರಿ ಉಸಿರು ತೆಗೆದುಕೊಳ್ಳುವುದರೊಳಗೆ ನೀರಲಿ ಮುಳುಗುವುದು ಎಂಥಾ ಚೆಂದ! ಬಣ್ಣದ ಸೀರೆಯನುಟ್ತ ಬೆಡಗಿಯಂತೆ ಹೊಪ್ಪೆ ಹುರಿಯು ಮೈತುಂಬಾ ಪುಳಕವ ತುಂಬುವಾಗ, ನಾನೊಬ್ಬ ಮತ್ಯಕನ್ಯೆ ಆಗಿದ್ದೆ. ಅವತಾರದಲ್ಲಿ ಹುರಿಗಟ್ಟಿ ಹೊಕ್ಕುಳಾಳದ ವಾಂಛೆಗಳು ನೀರ ಮೇಲೆ ವೃತ್ತಗಳ ಸೃಷ್ಟಿಸುವಾಗ ಎಲ್ಲವೂ ತರಂಗ ತರಂಗ. ನಾನು ಈಜಿಬಂದೆ ತೆರೆಯರೆಯ ಮೇಲೆ ತೇಲಿದ ಬೆಂಡಿನಂತೆ. ಭಾರವಾದ ಹಡಗಿನ ಮೈ ಅರ್ಧ ತೇಲಿ ಅರ್ಧ ಮುಳುಗಿದಂತೆ. ಹೊತ್ತು ಮೀರುವಾಗ ಮೀನು ಕೇಳಿತು, `ಈಗ ಹೇಳೆ ನೀರ ಬಗ್ಗೆ ಏನು ಹೇಳುವೆ’ ಎಂದು ಹಟದಿಂದ.

ಮತ್ಸ್ಯಕನ್ಯೆಯಾಗಿದ್ದ ನಾನು ಹೇಳಿದೆ `ಹಾಯಾಗಿ ನೀರ ಮೇಲೆ ತೇಲಿದೆ ಸೆಖೆಯಾಗುತ್ತಿಲ್ಲ, ಸೋರುತ್ತಿಲ್ಲ ಬೆವರು. ಸುಖವೆಂದರೆ ಇದೇ’. ನಕ್ಕಿತು ಮೀನು, `ನೀರೆಂದರೆ ಸುಖ ಎಂದುಕೊಳ್ಳುವಿಯಾದರೆ ನೀನು ಬೇರೆ ನೀರು ಬೇರೆ ಎಂತಲಲ್ಲವೇ?’ ಮೀನ ಕಡೆಗೆ ತೀಕ್ಷ್ಣವಾಗಿ ನೋಡಿದೆ, ಹುಚ್ಚು ಅದರ ಕಣ್ಣಲ್ಲಿ ತೇಲುತ್ತಿತ್ತು. ಅಪೂರ್ವ ಕ್ಷಣವೊಂದರ ಸಾಲು ದಕ್ಕಿಬಿಟ್ಟಿತ್ತು- ಸುಖಕ್ಕೆ ವ್ಯಾಖ್ಯಾನವಿಲ್ಲ.

`ಸುಖಕ್ಕೆ ವ್ಯಾಖ್ಯಾನವಿಲ್ಲ ಪ್ರಶ್ನಿಸುತ್ತಿಲ್ಲ ಈ ಚಿತ್ರ ಬರೆದ ಹೊತ್ತಿಂದ, ತೇಲುತಿರುವೆ ಕ್ಷಣಕ್ಕೊಂದು ಅನುಭವ. ಬರೆದದ್ದು ನಾನಾದರೂ ಬರೆದದ್ದರಲ್ಲಿ ಒಂದಾಗದೇ ಮೋಕ್ಷಗಾಮಿಯಲ್ಲ’ ಹೀಗನ್ನುತ್ತಲೇ ಮೀನು ಪ್ರಜ್ವಲಿಸುವ ಬಣ್ಣಗಳ ಮೋಹತುಂಬಿದ ನನ್ನ ಕಣ್ಣ ನೋಡಿತು, ಆಗ ಅರ್ಥವಾಗಿಬಿಟ್ಟಿತು- ನೀರೊಳಗಿನ ಮೀನಿಗೆ ಚಳಿ ನಡುಕ ಎರಡೂ ಇಲ್ಲ ಎಂದು.

ತೇಜೂ ಅವತ್ತು ಬರೆದ ಆ ಚಿತ್ರ ಎಲ್ಲಿ ಹೋಯಿತೇ ಹುಡುಕುತ್ತಿದ್ದೇನೆ. ನನಗೆ ಈಗಲೂ ಅನುಮಾನವಿದೆ ಬರೆದದ್ದು ನಾನಾ ಅಥವಾ ಮುಂಚೆಯಿಂದಲೂ ಅದು ಇತ್ತಾ ಎಂದು. ಇಲ್ಲದಿದ್ದರೆ ಆ ಮೀನು ಬರೆದದ್ದರಲ್ಲಿ ನಾನು ಒಂದಾಗಿದ್ದೇನೆ ಎಂದು ಹೇಗೆ ಹೇಳುತ್ತೆ? ಅದು ಮೀನಾ ಅಥವಾ ನನ್ನದೇ ಥರದಾ ಇನ್ನೊಬ್ಬ ಕಲಾವಿದನಾ? ಅಥವಾ ಇಡೀ ಘಟನೆ ಎಲ್ಲಿಂದಲೋ ಬಂದ ಸಂದೇಶವಾ? ಇನ್ನೂ ನನಗೆ ಸಿಕ್ಕಿಲ್ಲ ಆ ಚಿತ್ರ. ಎಲ್ಲೆಲ್ಲಿ ಜಾಲಿಸಿದ್ದೇನೆ ಗೊತ್ತಾ? ನನ್ನ ಮನೆಯಲ್ಲಿ ಮಾತ್ರವಲ್ಲ, ಗ್ಯಾಲರಿಗಳ ದೂಳು ಹಿಡಿದ ಮೂಲೆಯಲ್ಲಿ ಬಿದ್ದ ಚಿತ್ರಗಳನ್ನೂ ಬಿಟ್ಟಿಲ್ಲ. ಅದು ಮಾತ್ರ ಅದಕ್ಕದೇ ಸಾಟಿ ಎನ್ನುವಂತೆ ಅನುಭವವನ್ನು ಬಿಟ್ಟು ನಗುತ್ತಲೇ ಇದೆ.

ಮೀನಿನ ಜೊತೆ ನೀರಲ್ಲಿ ತೇಲಿ ಮಾತಾಡಿದೆನಲ್ಲಾ, ಅವತ್ತೇ ನಾನು ಆ ಡಾಕ್ಟರ್‌ಗೆ ಹೇಳಿದ್ದೆ, `ಯಾರೂ ನನ್ನ ಮುಗಿಸಲು ಸಾಧ್ಯವಿಲ್ಲ- ನೀವೂ ಕೂಡಾ’ ಎಂದು- ಟೇಬಲ್ ಮೇಲೆ ಅವರು ಕೊಟ್ಟ ಆ ಮಾತ್ರೆಗಳನ್ನು ಇಟ್ಟು. ಅವರಿಗೆ ಅಚ್ಚರಿಯಾಯಿತು. ನಾನವರ ಹಿಡಿತವನ್ನು ತಪ್ಪಿಸ್ಕೊಳ್ಳುವುದು ಅವರಿಗಿಷ್ಟವಿರಲಿಲ್ಲ. ನನ್ನನ್ನು ಅಷ್ಟು ಸುಲಭಕ್ಕೆ ಬಿಟ್ಟುಕೊಡಲೂ ಅವರು ಸಿದ್ಧವಿರಲಿಲ್ಲ. `ಮಾತ್ರೆಗಳನ್ನು ಇದ್ದಕ್ಕಿದ್ದ ಹಾಗೆ ನಿಲ್ಲಿಸಿಬಿಟ್ಟರೆ ನಿನ್ನ ನರ್ವ್ ಸಿಸ್ಟಮ್ ಮೇಲೆ ಎಫೆಕ್ಟ್ ಆಗುತ್ತೆ. ನನ್ನ ಮಾತು ಕೇಳು’ ಎಂದರು. ನಾನು ನಕ್ಕಿದ್ದೆ, ಮೊದಲ ಬಾರಿಗೆ ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ, `ನಿಮ್ಮ ಕಣ್ಣುಗಳು ಯಾಕೆ ಇಷ್ಟು ನಿರ್ಲಿಪ್ತವಾಗಿದೆ’ ಎಂದೆ. ಅವರು ಕಂಗಾಲಾಗಿ ನನ್ನ ಕಡೆ ನೋಡಿದ್ದರು. ನಾನು ಒಂದು ಯುದ್ಧ ಗೆದ್ದಾಗಿತ್ತು, ಅದೂ ಇನ್ನೊಬ್ಬರನ್ನು ಘಾಸಿಗೊಳಿಸದೆ. `ನಾವು ಎಮೋಷನಲ್ ಆಗಬಾರದು, ಇಲ್ಲದಿದ್ದರೆ ಯಾವುದೂ ಅರ್ಥವಾಗುವುದಿಲ್ಲ. ಮನಸ್ಸು ತುಂಬಾ ಕಾಂಪ್ಲೆಕ್ಸ್ ನೋಡು ಅದಕ್ಕೆ’ ಎಂದಿದ್ದರು. ಯಾಕೋ ಅವತ್ತಿನ ಅವರ ಮಾತು ಗಲಿಬಿಲಿಗೊಳಗಾಗಿ ತಡಬಡಾಯಿಸುವಂತಿತ್ತು. `ಮನಸ್ಸು ಮಗುವಿನ ಹಾಗೆ ಡಾಕ್ಟರ್. ಅದು ಕಾಂಪ್ಲೆಕ್ಸ್ ಅಲ್ಲ. ತಲೆ ಸವರಿ ಒಮ್ಮೆ ಪ್ರೀತಿಯಿಂದ ನೋಡಿ. ನಿಮ್ಮ ಕಣ್ಣುಗಳಲ್ಲಿನ ಕರುಣೆ ಅದಕ್ಕೆ ಅರ್ಥವಾಗುತ್ತೆ. ಆಗ ಅದು ನಿಮ್ಮ ಮಾತನ್ನು ಕೇಳಿಬಿಡುತ್ತೆ’ ಎಂದು ಅಲ್ಲಿಂದ ಹೊರಟೆ. ನಕ್ಷೆಯಲ್ಲೇ ಇಲ್ಲದ ಆದರೆ ಚಿತ್ರವೊಂದರಲ್ಲಿದ್ದ ಕೆರೆಯ ಮೀನು ಪುಳಕ್ಕನೆ ಜಾರಿ ಅಕ್ಷದಲಿ ಕೊರೆದ ಗೆರೆಯೊಂದು ತಟ್ಟೆಂದು ಚಲಿಸಿಹೋಯಿತು. ನಾನು ಮತ್ತೆಂದೂ ಆ ಡಾಕ್ಟರ್ ಅನ್ನು ನೋಡಲೇ ಇಲ್ಲ. ಮತ್ತೆಂದೂ ಮಾತ್ರೆಯನ್ನೂ ತೆಗೆದುಕೊಳ್ಳಲಿಲ್ಲ. ಮತ್ತೆಂದೂ ಸಾಯುವ ಯೋಚನೆಯನ್ನೂ ಮಾಡಲಿಲ್ಲ.

ತೂಗುವ ನಿದ್ದೆ ಮುನಿಸಿಕೊಂಡ ಸ್ನೇಹಿತನಂತೆ ಎದ್ದು ಹೋಗಿತ್ತು. ಅಷ್ಟು ದಿನ ರೌಡಿಯ ಹಾಗೆ ವರ್ತಿಸುತ್ತಿದ್ದ ಮನಸ್ಸು ಅದು ಬಂದರೆ ಬಾ ಎಂದು ಸ್ವೀಕರಿಸಲೂ ಸಿದ್ಧವಿತ್ತು. ಅದೆಷ್ಟು ಸೂಕ್ಷ್ಮವಾಗಿತ್ತು ಎಂದರೆ ಗಾಳಿಗೆ ಅಲುಗಾಡುವ ಎಲೆ ಇನ್ನು ಸ್ವಲ್ಪ ಹೊತ್ತಿಗೆ ಕಳಚಿಕೊಳ್ಳುತ್ತೆ ಎನ್ನುವಾಗ ತನ್ನ ಎದೆಯ ಹಾಡನ್ನು ಮರದ ಎದೆಗೆ ವರ್ಗಾಯಿಸಿ, ತನ್ನ ಗುರುತನ್ನು ಮರದೆದೆಯಲ್ಲಿ ಶಾಶ್ವತವಾಗಿರಿಸುತ್ತಲ್ಲ ಹಾಗಿತ್ತು.

ತುಂಬಾ ದಿನಗಳ ವರೆಗೆ ನನಗೊಂದು ಗೊಂದಲ ಇತ್ತು ನಾನು ಗೆದ್ದದ್ದು ನನ್ನನ್ನೋ ಡಾಕ್ಟರರನ್ನೋ ಎಂದು. ಈಗ ಆ ಗೊಂದಲವಿಲ್ಲ ತೇಜು ಗೆಲುವೆನ್ನುವುದು ಯಾರ ಮೇಲೋ ಅಥವಾ ನಮ್ಮ ಮೇಲೋ ಹಿಡಿತ ಸಾಧಿಸುವುದರಿಂದ ಸಿಗುತ್ತೆ ಅಂತ ಅಲ್ಲ. ಆಕಾಶದ ನೀಲಿ ಕಣ್ಣಲ್ಲಿ ಫಲಿಸಿ ಅಖಂಡವಾದ ಆಕಾಶವನ್ನು ಚೂರಾಗಿಸುತ್ತಲ್ಲ ಅದೇನೇನೋಪ್ಪ. ನಿರ್ಲಜ್ಜವಾಗಿ ಮನಸ್ಸು ದೇಹ ಎರಡನ್ನೂ ತೆರೆದು ಇಟ್ಟುಬಿಡಬೇಕು ಪಕ್ವತೆ ಸಿಗಬೇಕೆಂದರೆ. ಬೆತ್ತಲೆಂದರೆ ಬೋಳಲ್ಲ, ಅದು ಸಂಪೂರ್ಣವಾದ ಸ್ಥಿತಿ ಎಂದು ಅರಿವಿಗೆ ಬರುವವರೆಗೂ... ನಿನ್ನನ್ನು ಅಳೆಯುತ್ತೇನೆ ಎಂದು ಹೊರಟ ಆ ಡಾಕ್ಟರ್‌ಗೆ ನನ್ನ ಅವತ್ತಿನ ಮಾತಿನಿಂದ ಬುದ್ದಿ ಬಂದಿದ್ದಿರಬಹುದಲ್ಲವೇ ತೇಜೂ’ ಶ್ಯಾಮು ಭಾವತೀವ್ರತೆಯಿಂದ ನಡುಗುತ್ತಿದ್ದಳು. ನನಗೆ ಪಕ್ಕೆಂದು ನಗು ಬಂತು ನಿನಗೇ ಈಗ ಐವತ್ತು ದಾಟಿದೆ. ಆ ಡಾಕ್ಟರ್ ನಿನಗಿಂತ ಮೂವತ್ತು ವರ್ಷಕ್ಕಾಆದರೂ ದೊಡ್ಡವರು ಎಂದೆಯಲ್ಲವೇ? ಅಂದರೆ ಅವರಿಗೀಗ ಎಂಬತ್ತು. ಈಗವರು ಬದುಕಿರುತ್ತಾರಾ? ಬದುಕಿದ್ದರೂ ನಿನ್ನ ಜೊತೆ ನಡೆದ ಎಲ್ಲವೂ ನೆನಪಿರುತ್ತದಾ? ಸುಮ್ಮನೆ ಈ ತೀವ್ರತೆ ನಿನ್ನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಬೇಕೆಂದುಕೊಂಡೆ. ದೃಢ ಸಂಕಲ್ಪವನ್ನು ಎದೆಯಲ್ಲಿರಿಸಿಕೊಂಡವಳು ದುರ್ಬಲ ಹೇಗೆ ಆದಾಳು? ಎನ್ನಿಸಿ ಸುಮ್ಮನಾಗಿಬಿಟ್ಟೆ. ಪೇಪರ್ ಮೇಲೆ ಮನಸ್ಸೆಲ್ಲಾ ಇರಿಸಿದಂತೆ ಗೀಚುತ್ತಿದ್ದ ಶ್ಯಾಮುವನ್ನು ಏನು ಬರೆಯುತ್ತಿರಬಹುದೆಂದು ದಿಟ್ಟಿಸಿದೆ. ಪಟ್ತೆಂದು ಅನ್ನಿಸಿತು ಮತ್ಸಾವತಾರಿಯಾದವಳು ಇನ್ಯಾವ ಅವತಾರಕ್ಕೆ ಕಾಯುತ್ತಿದ್ದಾಳೋ?

ಈ ಅಂಕಣದ ಹಿಂದಿನ ಬರೆಹಗಳು:
ಅಂಕೆ ಮೀರುವ ನೆರಳುಗಳು ಕಾಯುವುದು ಬೆಳಕಿಗಾಗೇ
ಕೊಳದ ಮೇಲೆ ಬಿದ್ದ ಬೆಳಕು ಕೊಳವನೆಂದೂ ಕಲಕದು
ತೆರೆದುಹೋದ ಅರಿಯದ ಸಮ್ಮೋಹಕ ಲೋಕ
ತತ್ತಿಯೊಡೆದ ಪುಟ್ಟ ಕೀಟದ ಕಣ್ಣಲ್ಲಿ ಫಲಿಸಿದ ಬೆಳಕು
ಪದದೂಳಿಗೆ ಮುತ್ತಿಟ್ಟವನ ಜೀವದ ಗುರುತು ಎದೆ ಮೇಲೆ
ನೆತ್ತರಲೂ ರತ್ನವಾಗುವ ಗುಣ

ಅಘಟಿತ ಘಟನೆಗಳು
ಪ್ರಪಂಚ ಒಂದು ಸುಂದರ ಕನಸು

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...