ರಂಗದ ಮೇಲಿನ ಬಣ್ಣದ ಭಾವಗಳು

Date: 19-02-2021

Location: ಬೆಂಗಳೂರು


ಮಾತು ಮತ್ತು ಅದರಿಂದ ಆಗಬಹುದಾದ ಒಳಿತು- ಕೆಡಕುಗಳ ಕುರಿತು ಲೇಖಕ ಸಂತೋಷ ಅನಂತಪುರ ಅವರು ತಮ್ಮ ಅನಂತಯಾನ ಅಂಕಣದಲ್ಲಿ ಅತ್ಯಂತ ಸರಳವಾಗಿ ವಿಶ್ಲೇಷಿಸಿದ್ದಾರೆ.

ಬಹುಪಾಲು ನಮ್ಮ ಸೌಂದರ್ಯವು ಅಡಗಿರುವುದು ನಾಲಿಗೆಯಲ್ಲಿ. ಸೌಂದರ್ಯದ ಮೀಮಾಂಸೆಯಂತೂ ಇಲ್ಲಿ ನಡೆಯುತ್ತಲೇ ಇರುತ್ತದೆ. ಎಲ್ಲೆಲ್ಲಾ ಉರುಳಾಡಲು ಸಾಧ್ಯವೋ ಅಲ್ಲೆಲ್ಲಾ ಉರುಳಿ, ಹೊರಳಿ ಸಂದು- ಮುರುಕುಗಳನ್ನೂ ಬಿಡದೆ ಸೌಂದರ್ಯೋಪಾಸನೆಯನ್ನು ಪದೇಪದೆ ನಾಲಿಗೆಯು ಪ್ರದರ್ಶಿಸುತ್ತಿರುತ್ತದೆ. ಎಲುಬಿಲ್ಲದ ನಾಲಿಗೆಯ ಕೋಲಗಳು ಒಂದೆರಡಲ್ಲ.

ಸುಖಾ ಸುಮ್ಮನೆ ನಾಲಿಗೆಗೆ ರುಚಿಯನ್ನು ಉಣಿಸಬಾರದು. ಅದು ಬಹಳ ಕೆಟ್ಟದ್ದು. ರುಚಿ ಹತ್ತಿತೆಂದರೆ ಅಷ್ಟೇ. ರುಚಿಗಾಗಿ ಬೇಡದ್ದೆಲ್ಲವನ್ನೂ ಮಾಡಲು, ಆಡಲು ತೊಡಗುತ್ತದೆ. ಕತ್ತಿಯ ಮೇಲಿನ ನಡಿಗೆಯಂತೆ ನಾಲಿಗೆಯ ಬದುಕೂ. ಸೀಳಿ ಹೋಗಿಬಿಡುವ ಅಪಾಯ ಹೆಚ್ಛೇ ಇದ್ದರೂ, ಅದ್ಯಾವುದರ ಚಿಂತೆಯಿಲ್ಲದೆ ನುಸುಳುವಿಕೆಯನ್ನು ಮಾತ್ರ ನಿರಂತರವಾಗಿ ಮುಂದುವರಿಸುತ್ತಿರುತ್ತದೆ. ರುಚಿಯ ಮಹತ್ತಿನ ಕಹಾನಿಗಳದೆಷ್ಟೋ.

ಮಾತು..ಮಾತು...ಈ ಮಾತಿದೆ ನೋಡಿ ಅದಿರುವುದೇ ಹಾಗೆ. ಮತ್ತೆ ಮತ್ತೆ ಕೇಳಬೇಕೆನಿಸುವಂತಿರುವ ಹಿತವಾಗಿ ನುಲಿಯುವ ಮಾತುಗಳು. ಇನ್ನು ಕೆಲವನ್ನು ಕೇಳಲಾಗದಂತೆ, ಇನ್ನುಳಿದವುಗಳನ್ನು ಯಾಕಾದರೂ ಕೇಳುತ್ತೇವೆಂಬಂತೆ. ಮಿಕ್ಕವೇನಿದ್ದರೂ ಕಾಟಾಚಾರಕ್ಕೆ ಕಿವಿಯನ್ನು ಕೊಟ್ಟು ಬಿಡುವಷ್ಟು... ಹೀಗೆ ಮಾತುಗಳು ನಮ್ಮನ್ನು ವಿವಿಧ ನೆಲೆಯಲ್ಲಿ, ಬಗೆಯಲ್ಲಿ ಕೇಳುವಂತೆ ಪ್ರೇರೇಪಿಸುತ್ತಿರುತ್ತವೆ. ಮಾತಿರುವುದೇ ಭೂತದಲ್ಲಿ. ವರ್ತಮಾನ ಹಾಗೂ ಭವಿಷ್ಯದಲ್ಲಿ ಮಾತನಾಡುವಂತಹ ಮಾತುಗಳೇ ಇರುವುದಿಲ್ಲವಲ್ಲ!

ನಿತ್ಯದ ಸುಖ-ದುಃಖಗಳ ಹಂಚುವಿಕೆಯಲ್ಲಿ ಅತಿಯಾಗಿ ಕಂಡು ಬರುವ ಮಾತುಗಳು ಭೂತಕಾಲದ್ದೇ. ಹಾಗಾಗಿ ವರ್ತಮಾನ ಮತ್ತು ಭವಿಷ್ಯದ ಮಾತುಗಳಿಂದ ಹೆಚ್ಚಿನ ಸುಖ-ದುಃಖಗಳನ್ನು ಹಂಚಿಕೊಳ್ಳಲು ಬರುವುದಿಲ್ಲ. ಕಳೆದು ಹೋದದ್ದನ್ನು ಮರೆತೆವೆಂದರೆ ವರ್ತಮಾನ ಹಾಗೂ ಭವಿಷ್ಯಕ್ಕೆ ಅರ್ಥವಿರುವುದಿಲ್ಲವಷ್ಟೆ. ಒಟ್ಟಿನಲ್ಲಿ ಮಾತು ಹುಟ್ಟಿಸುವ ರೇಜಿಗೆಯನ್ನು ಮತ್ತದು ಬರಿಸುವ ಕೋಪವನ್ನು ಕಂಡರೆ ಮಾತು ಬಲು ಅಪಾಯಕಾರಿ ಅಂತೆನಿಸಿದರೂ ಮನುಷ್ಯ ಪ್ರಾಣಿಗೆ ಮಾತೇ ಬಂಡವಾಳ. ಹಾಗಾಗಿ ಮಾತಿಲ್ಲದೆ ನಾವಿಲ್ಲ.

***

ನಮ್ಮದೇ ಮಾತುಗಳಲ್ಲಿ ಅಂತಹ ವಿಶೇಷತೆಯನ್ನೇನನ್ನೂ ಕಾಣುವುದಿಲ್ಲ. ಆದರೆ ನಮ್ಮದಲ್ಲದ ಮಾತುಗಳೇನಾದರು ಸಿಕ್ಕಿತೆನ್ನಿ ಅಷ್ಟೇ. ಮತ್ತೆ ಕೇಳಬೇಡಿ. ಹೊಟ್ಟೆ ಕೂಗಿದರೂ ಅತ್ತ ತಿರುಗದೆ, ಹೆತ್ತವರತ್ತರೂ, ಹೆತ್ತಿದ್ದು ಅರಚಿದರೂ ಆ ಕಡೆ ಗಮನ ಕೊಡದೆ ನಮ್ಮದಲ್ಲದ ಮಾತುಗಳಿಗೆ ವಿಶೇಷಣಗಳನ್ನು ಬೆರೆಸಿ, ಕಲಸಿ ಮತ್ತೆಮತ್ತೆ ಜಗಿಯುತ್ತಲೂ, ಮೆಲ್ಲುತ್ತಲೂ ಇರುತ್ತೇವೆ. ಈ ನಿಟ್ಟಿನಲ್ಲಿ, ಕಿವಿಗೆ ತುಸು ಹೆಚ್ಚೇ ತ್ರಾಸದಾಯಕ ಕೆಲಸ. ಹೀಗಿರಲು ಒಂದೊಮ್ಮೆ ಕಷ್ಟವಾಯಿತೆಂದರೆ ಕೇಳುವ ಕಿವಿಯೊಳಗೆ ಬೆರಳನ್ನಿರಿಸಿ ಫಟ ಫಟನೆಂದು ತುರಿಸಿಕೊಂಡುಬಿಟ್ಟರೆ ಸ್ವಲ್ಪ ಸಮಾಧಾನ. ನಮ್ಮದಲ್ಲದವುಗಳನ್ನು ಆಡುವುದರಲ್ಲಿರುವ ಸುಖ ಇನ್ಯಾವುದರಲ್ಲಿಯೂ ಇಲ್ಲವೆಂಬಷ್ಟು ಮತ್ತೆ ಮತ್ತೆ ಆಡಿ-ಹಾಡಿ ಅಮಿತ ಸುಖವನ್ನು ಹೊಂದುತ್ತಿರುತ್ತೇವೆ.

ನಮ್ಮ ನಿರ್ಧಾರಗಳ ಮೇಲೆ ನಮಗೇ ನಂಬಿಕೆ ಇಲ್ಲದಾದಾಗ ನಮ್ಮದಲ್ಲದ ಮಾತುಗಳನ್ನು ಎರವಲು ಪಡೆಯುತ್ತೇವೆ. ಅಂತಹ ಮಾತುಗಳಿಗೊಂದಿಷ್ಟು ಆಯಾ ಕಾಲದ, ಸ್ಥಿತಿಯ ಭಾವ ತೀವ್ರತೆಯನ್ನು ಲೇಪಿಸಿ ಹೊರಸೂಸಿ ಬಿಡುತ್ತೇವೆ. ಈ ತರದ ಮಾತುಗಳು ನಮ್ಮನ್ನು ನಾವಾಗಿರಲು ಬಿಡದೆ ಇನ್ಯಾರನ್ನಾಗಿಯೋ ಮಾಡಿ ಬಿಡುವ ಅಪಾಯವನ್ನು ತಂದಿಟ್ಟರೂ ನಮಗೆ ಅಂತಹ ಮಾತುಗಳೇ ಬಲು ಅಪ್ಯಾಯಮಾನ. ಮಾತು ಒಲೆಯನ್ನು ಉರಿಸಲೂಬಹುದು ಹಾಗೆಯೇ ಮನೆ-ಮನವನ್ನು ಸುಡಲೂಬಹುದು. ಮಾತಿನ ಶಕ್ತಿ ಅಂತಹದ್ದು. ಮಾತುಗಳನ್ನೂ ಮೀರಿ ನಾವು ನಾವಾಗಿರಬೇಕಾದರೆ ನಮ್ಮೊಳಗೆ ಕೇಳುವ ಕಿವಿಗಳಿರಬೇಕು.

ಮಾತಿಗೂ ಭಾವಕ್ಕೂ ಅನ್ಯೋನ್ಯ ಬಂಧವಿದೆ. ಭಾವವಿಲ್ಲದ ಮಾತು ಏನನ್ನೂ ವ್ಯಕ್ತಪಡಿಸದು. ಅಂತೇ ಭಾವವಿಲ್ಲದ ಮಾತುಗಳೂ ಏನನ್ನೂ ಉದ್ದೀಪಿಸಲಾರದು. ಹೇಳಬೇಕಾದದ್ದನ್ನು ಹೇಳಲಾಗದಂತಹ ಸ್ಥಿತಿಯೊಂದನ್ನು ನಿರ್ಭಾವವು ನಿರ್ಮಿಸಿ ಬಿಡುವುದಿದೆ. ತಾದ್ಯಾತ್ಮತೆ ಇಲ್ಲದೆ ಮನದಲ್ಲಿ ಜರುಗುವ ಕ್ರಿಯೆಗಳು ರಂಗದ ಮೇಲಿನ ನಾಟಕದಂತೆ. ಮನಸ್ಸಿಗೆ ಸೇರದ ಕಾರ್ಯಗಳನ್ನು ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಆದರೆ ಮನಸ್ಸೇ ಅರಿತು ತೊಡಗಿಸಿಕೊಳ್ಳುವ ಕಾರ್ಯಗಳು ಗಟ್ಟಿ ಆಯಶಸ್ಸಿನ ಪುಣ್ಯಫಲ.

***

ತಿಳಿಯಾಗಿರುವುದು ಎಂದರೆ ಸಹಜವಾಗಿರುವುದೆಂದರ್ಥ. ಹಾಗಾದರೆ ನಿಜದ ಬದುಕು ಸಹಜವಾದದ್ದೇನು? ಎಷ್ಟೇ ಸಹಜತೆಯಿಂದ ಇರುತ್ತೇವೆಂದರೂ ಮನಸ್ಸಿನ ಮೂಲೆಯಲ್ಲಿ ನಟನೆಯು ಅದಾಗಲೇ ರಂಗಪ್ರವೇಶ ಮಾಡಿಬಿಟ್ಟಿರುತ್ತದಲ್ಲಾ? ಅಲ್ಲಾಗಲೇ ಪ್ರತಿಷ್ಠಾಪಿತಗೊಂಡ ಭಾವನೆಗಳೆಲ್ಲವೂ ಒಂದೊಂದಾಗಿ ಮುಖವರ್ಣಿಕೆಯಲ್ಲಿ ತೊಡಗಿ ರಂಗಿನ ಹಂಗಿಗೆ ಒಳಗಾಗುತ್ತವೆ. ಬಣ್ಣ ಚೆಲ್ಲಿದ ಓಕುಳಿಯಲ್ಲಿ ನೆನೆಯುತ್ತಲೂ, ಕುಣಿಯುತ್ತಲೂ ಇರುತ್ತವೆ.

ನಟನೆಯು ಜೀವನದೊಂದಿಗೆ ಸದಾ ಜೊತೆಯಲ್ಲೇ ಇರುತ್ತದೆ. ಅದನ್ನು ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ನಾವು ವ್ಯಕ್ತಪಡಿಸುವ ಭಾವಗಳು ಸಹಜವೋ, ಕೃತಕವೋ ಎನ್ನುವುದನ್ನು ಕಣ್ಣುಗಳೇ ಅಳೆದು ತೂಗಿ ಹೇಳಿಬಿಡುತ್ತವೆ. ಆದರದು ಏನೆಂಬುದು ಅಭಿವ್ಯಕ್ತಿಸಿದ ನಮಗಷ್ಟೇ ತಿಳಿದಿರುತ್ತದಲ್ಲವೇ? ಸ್ವಲ್ಪ ಹೆಚ್ಛೇ ಪ್ರತಿಕ್ರಿಯಿಸಿದೆನೋ? ಅಭಿವ್ಯಕ್ತಿಸಿದೆನೋ? ಅಥವಾ ಕಡಿಮೆಯಾಯಿತೇ? ಎನ್ನುವ ಪ್ರಶ್ನೆಗಳು ಹಲವಾರು ಸನ್ನಿವೇಶಗಳಲ್ಲಿ ನಮ್ಮನ್ನು ಕಾಡುವುದುಂಟು.

ಆಶ್ರುತೋರಣವನ್ನೆಬ್ಬಿಸುವ ಭಾವನೆಯನ್ನು ವಾಸ್ತವವು ಆಗಾಗ ನೋಡಿ ನಗುವುದಿದೆ. ಅನಾವಶ್ಯಕವಾಗಿ ಕೊರಗಿ, ಕರಗುವ ಭಾವವು ಮೂರ್ಖತನದ್ದೆಂದು ಹಂಗಿಸುವುದೂ ಇದೆ. ಆದರೆ ವಾಸ್ತವಕ್ಕೇನು ಗೊತ್ತು ಭಾವ ಜಗತ್ತು? ಅತ್ತು ಹಗುರಾಗುವ, ನಕ್ಕು ನಲಿದಾಡುವ ಸ್ಪರ್ಶ ಸುಖಗಳು ವಾಸ್ತವದತ್ತ ಯಾವತ್ತೂ ಸುಳಿದಾಡಲಾರವು. ಅಲ್ಲೇನಿದ್ದರೂ ಲೆಕ್ಕಾಚಾರಗಳು ಮಾತ್ರ. ಆದರೆ ಭಾವ ಹಾಗಲ್ಲ. ಅಲ್ಲಿ ಮೂಡುವ ಕೆಮೆಸ್ಟ್ರಿಯೇ ಬೇರೆ. ಬದುಕು ನಡೆಯುವುದು ಕೇವಲ ಕೆಮೆಸ್ಟ್ರಿಯಿಂದ.

ವಾಸ್ತವಕ್ಕೆ ಭವದ ಭಾವಸಾರದ ಹಂಗಿರುವುದಿಲ್ಲ. ಅದಕ್ಕೆ ನಿನ್ನೆಯೂ ಇಲ್ಲ, ನಾಳೆಯೂ ಇರುವುದಿಲ್ಲ. ಅದಕ್ಕಿರುವುದು ಕೇವಲ ಇಂದು ಮತ್ತು ಈ ಕ್ಷಣ ಮಾತ್ರ. ಆದರೆ ಭಾವದೊಳಗೆ ಹಾಗಲ್ಲ ಅಲ್ಲಿ ನಿನ್ನೆ, ಇಂದು ಹಾಗೂ ನಾಳೆಗಳೆಲ್ಲವೂ ಸೇರಿ ಬಾಳನ್ನು ಅರಳಿಸಿಬಿಡುವ ಚಮತ್ಕಾರವಿದೆ. ಭಾವದೊಲುಮೆಯ ಜೊತೆಗೆ ವಾಸ್ತವದ ಸಣ್ಣ ಎಳೆಯ ಸ್ಪರ್ಶವೊಂದು ಬೆಸೆದು ಬಿಟ್ಟರೆ ಬದುಕನ್ನು ಸ್ಪಷ್ಟವಾಗಿ ನೋಡಲು, ವ್ಯಕ್ತವಾಗಿ ಅನುಭವಿಸಲು ಮತ್ತದರ ಪರಿಮಳವನ್ನು ಆಘ್ರಾಣಿಸಲು ಸಾಧ್ಯ. ಅತೀ ವಾಸ್ತವ ಮತ್ತು ಏರುಗತಿಯ ಭಾವತೀವ್ರತೆ ಎರಡೂ ಹಾನಿಯೆಸಗುವುದೇ ಹೆಚ್ಚು. ಸಮತೋಲಿತ ನಡೆ ಬೆಳಕಿನೆಡೆ. ಅಷ್ಟಕ್ಕೂ ನಿತ್ಯವೂ ಹುಟ್ಟಿ ಹೋರಾಡಿ ಸಾಯುತ್ತಿರುವ ನಮಗೆ ಸಾವಿನ ಹಾಗೂ ಸಾಯುವ ಬಗ್ಗೆ ಭಯವಿರಬಾರದು.

***

ಬದುಕುವುದು ಒಂದು ಪ್ರಕ್ರಿಯೆ. ಅದು ಮರುಕಳಿಸುವುದಿಲ್ಲ. ಅದನ್ನು ಬಂದ ಹಾಗೆ ಸ್ವೀಕರಿಸಬೇಕು ಮತ್ತು ಸ್ವೀಕರಿಸುವ ಮನಸ್ಸಿರಬೇಕು. ನೆಪ ಮಾತ್ರಕ್ಕೆ ಭೇಟಿಯಾಗುವ ಭೇಟಿಗಳು ಭಾವರಹಿತ ನಟನೆಗಳಾಗಿರುತ್ತವೆ. ಕಾಣಬೇಕು ಕಂಡೆವು. ಭೇಟಿಯಾಗಬೇಕು ಭೇಟಿಯಾದೆವು ಅಷ್ಟೇ. ಹೊರತು ಆ ಭೇಟಿಯು ಬಂಧವನ್ನು ಬೆಸೆಯುವ, ಒಲವನ್ನು ಹರಿಸುವ ಪರಿಕರಗಳಾಗಿ ಹೊಮ್ಮುವುದಿಲ್ಲ. ಮಾತಿಗಾಗಿ ಮಾತು, ಕಾಟಾಚಾರದ ಮಾತುಗಳಲ್ಲಿ ವಿನಿಮಯವಾಗುವುದು ಬಿಟ್ಟರೆ ಉಳಿದಂತೆ ಎಲ್ಲವೂ ರಂಗನ್ನು ಮೆತ್ತಿಕೊಂಡ ಯಾಂತ್ರಿಕ ನಟನೆ ಮಾತ್ರ. ನೀರಲ್ಲಿ ಅದ್ದಿದ ಬಟ್ಟೆಯು ಹೇಗೆ ಬಣ್ಣವನ್ನು ಬಿಡುತ್ತದೋ, ಅದೇ ರೀತಿ ಬಂಧಗಳೂ ತಮ್ಮ ನಿಜದ ಬಣ್ಣವನ್ನು ಕಾಲಾನುಕಾಲದಲ್ಲಿ ಬಿಟ್ಟುಕೊಳ್ಳುತ್ತಾ, ಮೆತ್ತಿಕೊಳ್ಳುತ್ತಾ, ಮಾರ್ಪಡಿಸಿಕೊಳ್ಳುತ್ತಾ ಹರಿಯುತ್ತಿರುತ್ತವೆ. ಅಪರೂಪಕ್ಕೆನ್ನುವಂತೆ ಅಲ್ಲೋ ಇಲ್ಲೋ ಅದೃಷ್ಟಕ್ಕೆ ಬಣ್ಣ ಬಿಡದ ಕೆಲವೊಂದು ಬಂಧಗಳಿರುವುದುಂಟು.

ಅಧ್ಯಾತ್ಮದ ತುರೀಯಾ ಘಟ್ಟದಲ್ಲೂ ಬೊಟ್ಟಿನಷ್ಟು ಕಾಮದ ವಾಸನೆ ಇರುವಂತೆ; ಪ್ರತೀ ಭಾವನೆಗಳನ್ನು ವ್ಯಕ್ತಪಡಿಸುವುದರ ಹಿಂದೆಯೂ ಚಿಟಿಕೆಯಷ್ಟು ನಟನೆಯು ಇದ್ದೇ ಇರುತ್ತದೆ. ನಮಗದು ತಿಳಿದಿರುವುದಿಲ್ಲವಷ್ಟೆ. ನಟನೆಯಿಲ್ಲದೆ ಜೀವನವನ್ನು ನಡೆಸಲು ಸಾಧ್ಯವಿಲ್ಲವಲ್ಲ. ನಮಗೆ ತೋಚಿ ನಾವು ಜೀವಿಸುವ ಸಹಜ ಜೀವನ ಮತ್ತು ನಮ್ಮ ನಡವಳಿಕೆ, ವ್ಯವಹಾರಗಳು ಇನ್ನೊಬ್ಬನಿಗದು ನಟನೆಯ ಜೀವನವಾಗಿರುತ್ತದೆ. ಹೇಗೆಂದು ವಿಂಗಡಿಸುತ್ತೀರಿ? ಅಭಿವ್ಯಕ್ತಿಸುವ ಹಾವ-ಭಾವಗಳೆಲ್ಲವೂ ನಟನೆಯೇನು? ಭಾವಕೋಶದಲ್ಲಿ ನಟನೆಯಿರದ ಯಾವುದೇ ಅಂಶಗಳು ಇಲ್ಲವೇನು? ನಾವಷ್ಟು ಸಹಜತೆಯಿಂದ ಇರುತ್ತೇವೆಯೇ? ಸಹಜವಾಗಿರುವುದು ಕೂಡ ನಟನೆಯಲ್ಲವೆ?

ಭಾವವನ್ನು ಕಳಚಿಟ್ಟ ಮಾತುಗಳು ಏನನ್ನು ಹೇಳುತ್ತವೆ ಎನ್ನುವುದನ್ನೊಮ್ಮೆ ಯೋಚಿಸಿ ನೋಡಿ. ಮಾತಿಗೆ ಭಾವ, ಭಾವಕ್ಕೆ ಮಾತು ಪರಸ್ಪರ ಪೂರಕವಾಗಿ ಬೆಸೆದುಕೊಂಡಿರುವುದನ್ನು ಕಾಣುತ್ತೀರಿ. ಇನ್ನೊಬ್ಬರನ್ನು ನಾವು ತಟ್ಟುವ ಬಗಯು ಕೂಡ ಭಾವದ ಮೂಲಕವೇ ಆಗಿರುತ್ತದೆ. ನಿರ್ಭಾವುಕನಾಗಿ ಏನನ್ನು ಹೇಳಲು ಹಾಗೂ ಮಾಡಿ ತೋರಿಸಲು ಸಾಧ್ಯವಿಲ್ಲ. ಭಾವುಕತೆ ಇದ್ದಲ್ಲಿ ಅಲ್ಲೊಂದಿಷ್ಟು ನಟನೆ ಹುಟ್ಟುವುದು ಸಾಮಾನ್ಯ. ಅದನ್ನು ಸಹಜವೆಂದೇ ಪರಿಭಾವಿಸಬೇಕು.ನಾವು ಆಡುವುದು ನಟನೆಯ ಬದುಕೋ ಅಥವಾ ನಮ್ಮ ಬದುಕೇ ಒಂದು ನಟನೆಯೋ? ನಟನೆಯೇ ಇಲ್ಲದ ಜೀವನವಿದೆಯೇ? ಬದುಕಲ್ಲಿ ನಟನೆಯನ್ನೇ ಮಾಡದವರಿದ್ದಾರೆಯೇ? ಗೊತ್ತಿಲ್ಲ. ಬಾಳಿನ ಹೊರೆಯನ್ನು ಕಡಿಮೆ ಮಾಡುವ ಒಂದಷ್ಟು ಪಾತ್ರಗಳು ಬದುಕಲ್ಲಿರಲಿ. ಮಾತು ಭಾವ ನಟನೆಗಳು ಸಂಕೀರ್ಣತೆಯಿಂದ ಬೆಸೆದುಕೊಂಡಿವೆಯಾದರೂ ಭಾವ ಲೇಪನವೊಡ್ಡಿದ ಬದುಕು ನಟನೆಯದ್ದಾಗಿರುವುದಿಲ್ಲ.

***

ದೀಪವು ಆರುವ ಮುನ್ನ ಹೆಚ್ಚೆಚ್ಚು ಉರಿದು ಪ್ರಕಾಶಿಸುವಂತೆ ಬದುಕಿನ ರಂಗ ಮಂಚದಲ್ಲಿ ಬೆಳಕು ಕಡಿಮೆಯಾಗುವ ಸ್ಥಿತಿಯಲ್ಲಿ ಇನ್ನೊಬ್ಬರ ಹೇವರಿಕೆಯಿಂದ ತಪ್ಪಿಸಿಕೊಳ್ಳಲೋಸುಗ ಹೆಚ್ಚೆಚ್ಚು ಮಾತನಾಡಲು ತೊಡಗುತ್ತೇವೆ. ಸತ್ವವಿಲ್ಲದ ಮಾತುಗಳಿಂದ ಯಾವುದೇ ಪ್ರಯೋಜನಗಳಿಲ್ಲವಲ್ಲ. ಇರುಳು ಕೊಡುವ ಸುಖದ ಕನಸಲ್ಲೇ ಬದುಕಿನ ಮುಕ್ಕಾಲು ಪಾಲನ್ನು ನೂಕುವ ನಮ್ಮೊಳಗೆ ಜನಿಸಿ ಸಾಯುವ ಆಸೆಯಂತೂ ಸತ್ತಿರುವುದಿಲ್ಲವಷ್ಟೆ.

ಹೀಗಿರಲು ನಾವು ನಾವಾಗಿರದೆ ಮನಸ್ಸು ತಳೆಯುವ ಹಲವು ಪಾತ್ರಗಳಾಗಿ, ಪಾತ್ರಗಳಾಡುವ ಮಾತುಗಳಾಗಿ, ಆ ಮಾತುಗಳು ಹೊಮ್ಮಿಸುವ ಭಾವನೆಗಳಾಗಿ ಹಂಚಿ ಹೋಗಿರುತ್ತೇವೆ. ಚೆಲ್ಲಿದ ಹನಿಯೊಂದು ಮನಸ್ಸಲ್ಲಿ ಅದಾಗಲೇ ಮೂಡಿದ ಆಕಾರವನ್ನು ತಾಳದೆ, ಹರಡಿ ಹೋಗಿ ಇನ್ನ್ಯಾವುದೋ ಆಕಾರವನ್ನು ಪಡೆಯುತ್ತದಲ್ಲಾ, ಅದೇರೀತಿ, ಸಂಪೂರ್ಣಗೊಳ್ಳಲಾಗದ ಅಪೂರ್ಣಗಳು ಯಾವತ್ತೂ ಜೊತೆಯಲ್ಲೇ ಇರುತ್ತವೆ. ಬಾಳು ಮುಂದಕ್ಕೆ ಸಾಗಿದಂತೆ, ನಾವು ಮಾಗಿದಂತೆ, ಅಪಕ್ವವಾದುವುಗಳು ಪಕ್ವಾವಾಗದೇ ಇದ್ದಾಗ, ಮುಂದುವರಿದು ನಮ್ಮದೇ ಸರಿ ಎನ್ನುವ ದಾಹ ಹೆಚ್ಚಿದಾಗಲೆಲ್ಲಾ ಬರಡು ಭೂಮಿಯಲ್ಲಿ ನೀರು ಓಯಸಿಸ್ ನಂತಾಗಿ ಬಿಡುವುದಿದೆ.

ಮಾಡಬಾರದೆಂದು ಮನಸ್ಸು ಹೇಳಿದಾಗಲೆಲ್ಲ ನಮ್ಮ ಕ್ರಿಯೆ ನಟನೆಯೇ ಆಗಿರುತ್ತದೆ. ಅಂತೆಯೇ ಮಾಡು ಎಂದು ಹೇಳುವಾಗಲೂ. ಸುಳ್ಳಲ್ಲೊಂದು ನಟನೆ, ನಿಜದಲ್ಲೊಂದು ನಟನೆಯನ್ನು ನಟಿಸುತ್ತಿರುತ್ತೇವೆ. ನಾವು ನೋಡುವ, ಅನುಭವಿಸುವ ಪ್ರತಿಯೊಂದು ಪಾತ್ರಗಳೂ ನಟಿಸುತ್ತವೆ. ಹೆಗಲಿಗೇರಿದ ಹೊರೆಯನ್ನಿಳಿಸಲು ನಾವೂ ಒಂದೊಂದು ಪಾತ್ರಗಳಾಗಿ ನಟಿಸುತ್ತಲಿರುತ್ತೇವೆ. ಅಂದಮೇಲೆ ಬದುಕೇ ಒಂದು ನಾಟಕ. ನಾವೆಲ್ಲರೂ ಅದರ ಪಾತ್ರಧಾರಿಗಳಾಗಿ ಆಯಾ ಪಾತ್ರಕ್ಕೆ ಮೀಸಲಾಗಿರುವ ನಟನೆಯನ್ನು ನಟಿಸುತ್ತಿರುತ್ತೇವೆ. ಕಾಲಾನುಕಾಲಕ್ಕೆ ನಮ್ಮದೇ ಪೊರೆಯನ್ನು ಕಳಚಿ, ಧರಿಸಿದ ವೇಷವನ್ನು ಬದಿಗಿರಿಸಿ ಭಾವವು ಮೊಗೆಯುವ ಬಣ್ಣಗಳಲ್ಲಿ ಮಿಂದೇಳಬೇಕು. ಬದುಕಲ್ಲಿ ನಟನೆಯಿರಬಾರದೆಂದರೆ ಅಂತರಂಗದಲ್ಲಿ ನಿಸ್ಸಂಗರಾಗುತ್ತಾ ಮನಸ್ಸು ಯೋಚಿಸುವ ಕಾರ್ಯವನ್ನು ಇಚ್ಚಾಪೂರ್ವಕವಾಗಿ ಪೂರೈಸಿ ಆಂತರ್ಯದಿಂದಲೇ ವಿರಕ್ತರಾಗಿಬಿಡಬೇಕು. ಏಕಕಾಲದಲ್ಲಿ ವ್ಯಾಮೋಹಿಯೂ, ನಿರ್ಮೋಹಿಯೂ ಆಗಿ ಬರುವ ಮನಸ್ಥಿತಿಯನ್ನು ಪಡೆಯಲು ಸಾಧ್ಯವಾಗಬೇಕು. ನಮಗದು ಸಾಧ್ಯವೇ ?

ಈ ಸರಣಿಯ ಹಿಂದಿನ ಬರೆಹಗಳು

ಅಗೆದಷ್ಟೂ ಆಳ ಅಳೆದಷ್ಟೂ ನೀಳ

ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...

ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ

ಸಖನೂ ಸುಖವೂ ಒಂದೇ ಆಗುವ ಕ್ಷಣ

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...