ಸಿಂಗಾಪುರ ಮತ್ತು ಸೂಪರ್ ಟ್ರೀಗಳು

Date: 24-03-2022

Location: ಬೆಂಗಳೂರು


'ಮಾನವ ನಿರ್ಮಿತ ಸೂಪರ್‌ಟ್ರೀಗಳು ಸೌರಶಕ್ತಿಯನ್ನು ಉತ್ಪಾದಿಸುತ್ತದೆ. ಒಟ್ಟು 7ಸೂಪರ್‌ಟ್ರೀ ಗಳಲ್ಲಿ ಸೌರ ದ್ಯುತಿವಿದ್ಯುಜ್ಜನಕ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಇದು ಸೂರ್ಯನ ಬೆಳಕನ್ನು ಶಕ್ತಿಯನ್ನಾಗಿ ಪರಿವರ್ತಿಸುವುದಲ್ಲದೆ, ಈ ಮರಗಳಿಗೆ ಅಗತ್ಯವಿರುವ ವಿದ್ಯುತ್ ಅನ್ನು ಪೂರೈಸುವಷ್ಟು ಸಾಮರ್ಥ್ಯವನ್ನು ಹೊಂದಿದೆ' ಎನ್ನುತ್ತಾರೆ ಶ್ರೀವಿದ್ಯಾ ಅವರು ತಮ್ಮ ಸಿಂಗಾಪುರ್ ಡೈರೀಸ್ ಅಂಕಣದಲ್ಲಿ ಸಿಂಗಾಪುರದ ಸೂಪರ್ ಟ್ರೀಗಳ ಕುರಿತು ವಿಶ್ಲೇಷಿಸಿದ್ದಾರೆ.

ನಾವಿದ್ದ ನಗರವನ್ನು ಬಿಡುವುದು ನಿಶ್ಚಯವಾಗಿತ್ತು. ಮುಂದಿನ ಪರಿಣಾಮಗಳ ಬಗ್ಗೆ ತಲೆಕೆಡಿಸಿಕೊಳ್ಳದಿದ್ದರೂ ನಿರ್ಧಾರವೇನೋ ಗಟ್ಟಿಯಾಗಿಯೇ ಮಾಡಿದ್ದೆವು. ಮಹತ್ವದ ತೀರ್ಮಾನವಾಗಿದ್ದ ಕಾರಣ ಕೆಲ ತಿಂಗಳ ಮೊದಲೇ ಮಾತುಕತೆಗಳನ್ನೂ ಮುಗಿಸಿದ್ದೆವು. ಹೊರಡಲು ಇನ್ನೂ ಬೇಕಾದಷ್ಟು ಸಮಯ ಇವೆ ಅಂದುಕೊಳ್ಳುತ್ತಿದ್ದಂತೆ ದಿನಗಳು ಸಮೀಪಿಸತೊಡಗಿದ್ದವು. ಅದುವರೆಗೆ ಏನೂ ತಲೆಕೆಡಿಸಿಕೊಳ್ಳದ ನಮಗೆ, ನಿಧಾನಕ್ಕೆ ಒಂದೊಂದೇ ವಿಚಾರಗಳು ಮನಸ್ಸು ತುಂಬಾ ಆವರಿಸತೊಡಗಿದವು. ಪ್ರವಾಸಿಗರಾಗಿ ಬಂದು ಹೋಗೋ ಸಂದರ್ಭವಾಗಿದ್ದರೆ ಅದೊಂದು ಲೆಕ್ಕ ಬೇರೆ. ಆದರೆ 9 ರಿಂದ 10 ವರ್ಷಗಳ ವಾಸ ಅಂದ್ರೆ ಸಣ್ಣ-ಪುಟ್ಟ ವಿಚಾರವಾವಾದೀತೇ..?

ನೆನಪುಗಳು ಅವೆಷ್ಟು ಕಾಡಿದವು ಅಂದ್ರೆ…ನಗರಕ್ಕೆ ಕಾಲಿಟ್ಟ ದಿನಗಳಿಂದ ಆರಂಭವಾಗಿ ಒಂದೊಂದೇ ಸಂಗತಿಗಳು ಕಣ್ಣ ಮುಂದೆ ಬರತೊಡಗಿದವು. ಸಂತಸದ ಕ್ಷಣಗಳು, ಕೆಟ್ಟ ಘಟನೆಗಳು ಒಂದೆಡೆಯಾದರೆ, ಹೊಸ ಜನರು, ಹೊಸ ಗೆಳೆತನಗಳು, ಭಿನ್ನ ಸಂಸ್ಕೃತಿ, ಆಚಾರ ವಿಚಾರಗಳಿಗೆ ಒಗ್ಗಿಕೊಂಡಿದ್ದ ಬದುಕು ಮತ್ತೊಂದೆಡೆ. ಇವೆಲ್ಲವನ್ನೂ ಒಂದೇ ಕ್ಷಣಕ್ಕೆ ಅಲ್ಲಿಯೇ ಬಿಟ್ಟು ಹೊರ ನಡೆಯುವುದೆಂದರೆ..? ಆದರೆ ಎಲ್ಲವೂ ಅನಿವಾರ್ಯವಾಗಿತ್ತು.

ಇರಲಿ..! ಕಾಲು ಹೊರಗಿಡುವ ಮುಂಚೆ ಏನೆಲ್ಲಾ ಬಾಕಿಯಾಗಿತ್ತು. ಮತ್ತೆ ಯಾವತ್ತಾದರೂ ಮಾಡಿದರಾಯಿತು, ನೋಡಿದರಾಯಿತು ಎಂದು ಮುಂದೂಡಿದ್ಡ ಸಂಗತಿಗಳ ಬಗ್ಗೆ ಪಟ್ಟಿ ಆರಂಭಿಸಿದೆವು. ಕಡೇ ಪಕ್ಷ ಅವುಗಳನ್ನಾದರೂ ನೋಡಬೇಕೆನ್ನುವ ಹಂಬಲಕ್ಕೆ ಬಿದ್ದುಬಿಟ್ಟೆವು. ಹಾಗೆ ಯೋಚನೆ ಮಾಡುತ್ತಿದ್ದಂತೆ ಮೊದಲು ನಮಗೆ ಹೊಳೆದಿದ್ದೇ ಈ ಮರಗಳು. ಹಾಗೆಂತ ಇವು ರಸ್ತೆ ಬದಿಯ ಸಾಮಾನ್ಯ ಮರಗಳಾಗಿದ್ದುವಾ ..? ಖಂಡಿತಾ ಇಲ್ಲ. ಇನ್ನೂ ಹಲವು ವರ್ಷಗಳಿಂದ ಬಾಳಿ ಬದುಕಿ ತನ್ನ ಕದಂಬ ಬಾಹುಗಳನ್ನು ಎಲ್ಲೆಡೆ ಚಾಚಿದ್ದ ಮರಗಳಾ.? ಅದು ಕೂಡ ಅಲ್ಲ. ಕಾಡಿನೊಳಗೆ ಹಾಗೆ ಬೆಳೆದು ಸುದ್ದಿ ಮಾಡಿದ ಮರಗಳಾ.? ಇದು ಕೂಡ ಅಲ್ವೇ ..!! ಹಾಗಾದ್ರೆ ಏನಿದು..?

ಇದರ ಹೆಸರು ಸೂಪರ್ ಟ್ರೀಸ್. ಇದನ್ನು ನೋಡಲು ಎಲ್ಲೋ ಹೋಗಬೇಕಾಗಿಲ್ಲ. ಸಿಂಗಾಪುರದ ಮಧ್ಯ ಭಾಗಕ್ಕೆ ಬಂದರೆ ಸಾಕು. ಈ ವಿಶೇಷ ಮರಗಳು ಕಾಣಸಿಗುತ್ತವೆ. ನಗರಕ್ಕೆ ಬರುವ ಪ್ರವಾಸಿಗರಿಗೆ ಇದೊಂದು ಆಕರ್ಷಣೆಯ ಕೇಂದ್ರ. ಈ ಮರಗಳೇ ಹಾಗೆ..! ಎಲ್ಲರನ್ನೂ ತನ್ನತ್ತ ಸೆಳೆಯುವ ಶಕ್ತಿ. ಸೌಂದರ್ಯದಲ್ಲೂ ಅಷ್ಟೇ. ಎಲ್ಲರನ್ನೂ ಒಂದೇ ನೋಟಕ್ಕೆ ಬೆರಗುಗೊಳಿಸುವಂತದ್ದು. ಇಷ್ಟು ವರ್ಷಗಳಲ್ಲಿ ನಾವು ಇದನ್ನು ನೋಡೇ ಇಲ್ಲ ಅಂತಲ್ಲ. ಹಲವು ಬಾರಿ ಈ ಜಾಗಕ್ಕೆ ಭೇಟಿ ಕೊಟ್ಟಿದ್ದು ಇದೆ. ಇದರ ಸಮೀಪದಿಂದಲೇ ವಾಹನಗಳಲ್ಲಿ ಓಡಾಡಿದ್ದು ಇವೆ. ಆದರೆ ಈ ಮರಗಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡಿರಲಿಲ್ಲ. ಹೊರಡುವ ಸಮಯಕ್ಕಾದರೂ ಈ ಮರಗಳನ್ನು ಅರಿಯುವ ಮನಸ್ಥಿತಿ ದಕ್ಕಿತು ಅನ್ನೋದೇ ಸಂತಸದ ವಿಚಾರ.

ಸಿಂಗಾಪುರದಲ್ಲಿರುವ ಸೂಪರ್ ಟ್ರೀಗಳು ಹೇಗಿದ್ದಾವೆ ಅಂದರೆ….
ಉಕ್ಕು ಮತ್ತು ಕಾಂಕ್ರೀಟ್ ನಿಂದ ನಿರ್ಮಾಣಗೊಂಡ ಕಾಂಡಗಳು, ಕಬ್ಬಿಣದ ಸರಳುಗಳೇ ಇವುಗಳ ಬಳ್ಳಿಗಳು, ಮೈ ತುಂಬಾ ಹೊದ್ದಿರುವ ಹೂವು – ಎಲೆಗೊಂಚಲುಗಳು, ರಾತ್ರಿಯಲ್ಲಿ ಬಣ್ಣ ಬಣ್ಣದ ದೀಪಗಳಿಂದ ಬೆಳಗುವ ಈ ವೃಕ್ಷಗಳು ನೋಡಲು ಮಾತ್ರ ಪಕ್ಕಾ ಕಾಕ್‌ಟೇಲ್ ಗ್ಲಾಸ್ ಗಳು.

ಸುಮಾರು 250 ಎಕರೆಯ ಗಾರ್ಡನ್ಸ್ ಬೈ ದಿ ಬೇ ಉದ್ಯಾನವನದಲ್ಲಿ ಈ ಮರಗಳದ್ದು ಒಂದು ಸಣ್ಣ ಭಾಗ. ಈ ಪ್ರದೇಶದಲ್ಲಿ 25, 30, 37, 42, ಮತ್ತು 50 ಮೀಟರ್ ಗಳಷ್ಟು ಎತ್ತರದ ಒಟ್ಟು 18 ಸೂಪರ್ ಟ್ರೀಸ್ ಗಳು ನಿರ್ಮಿಸಲಾಗಿದೆ. ಇವುಗಳಲ್ಲಿ ಆರು ಮರಗಳು ನಗರದ ಗೋಲ್ಡನ್ ಮತ್ತು ಸಿಲ್ವರ್ ಗಾರ್ಡನ್‌ಗಳಲ್ಲಿ ಕಾಣಬಹುದಾಗಿದೆ. ಇವು ಸಂಪೂರ್ಣ ಮಾನವ ನಿರ್ಮಿತ ಮರಗಳು.

19960 ರಲ್ಲಿ ಸಿಂಗಾಪುರಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಆಗಿನ ಪ್ರಧಾನಮಂತ್ರಿಯಾಗಿದ್ದ ಲಿ ಕ್ವಾನ್ ಯೂ ಅವರ ಮೊದಲ ಆದ್ಯತೆ ನಗರವನ್ನು "ಗಾರ್ಡನ್ ಸಿಟಿ" ಯನ್ನಾಗಿ ಪರಿವರ್ತನೆಗೊಳಿಸುವಂತದ್ದು. ತಾನು ಹೇಳಿದ್ದನ್ನು ಛಲ ಬಿಡದೆ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ ಅನ್ನುವುದಕ್ಕೆ ಈಗಿನ ಸಿಂಗಾಪುರವೇ ಸಾಕ್ಷಿ. ನೈಸರ್ಗಿಕ ಸಂಪನ್ಮೂಲಗಳ ಕೊರತೆಯ ಬಗ್ಗೆ ತಲೆಕೆಡಿಸಿಕೊಳ್ಳದ ಸಿಂಗಾಪುರ, ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಯ ಜೊತೆಜೊತೆಗೆ ಹಸಿರಿಗೂ ಪ್ರಾಮುಖ್ಯತೆಯನ್ನು ನೀಡುತ್ತಾ ಸಾಗುತ್ತಿರುವುದು ಗಮನಾರ್ಹ ಸಂಗತಿ.

ಈ ಮೂಲಕ ಜಗತ್ತಿಗೆ ವಿಶಿಷ್ಟ ಸಂದೇಶವನ್ನು ಸಾರುವ ಈ ನಗರದ ಮಹತ್ವದ ಯೋಜನೆಗಳಲ್ಲಿ ಸೂಪರ್ ಟ್ರೀಸ್ ಕೂಡ ಒಂದು. ಬ್ರಿಟಿಷ್ ಲ್ಯಾಂಡ್‌ಸ್ಕೇಪ್-ಆರ್ಕಿಟೆಕ್ಚರ್ ಫರ್ಮ್ ಗ್ರಾಂಟ್ ಅಸೋಸಿಯೇಟ್ಸ್‌ನಿಂದ ಇದನ್ನು ವಿನ್ಯಾಸಗೊಳಿಸಲಾಗಿದೆ. ಪ್ರಕೃತಿ ವಿಕೋಪಗಳಿಂದ ಯಾವುದೇ ಹಾನಿಯಾಗದಂತೆ ಈ ಮರಗಳು ನೂತನ ತಂತ್ರಜ್ಞಾನದೊಂದಿಗೆ ರಚನೆಗೊಂಡಿದೆ. ಪ್ರತೀ ಸೂಪರ್‌ ಟ್ರೀಯು ಬಲವರ್ಧಿತ ಕಾಂಕ್ರೀಟ್‌ನಿಂದ ಮಾಡಲ್ಪಟ್ಟ ಕಾಂಡದ ಭಾಗವನ್ನು ಹೊಂದಿದ್ದು, ಅದನ್ನು ಉಕ್ಕಿನ ಚೌಕಟ್ಟಿನಿಂದ ನಿರ್ಮಿಸಲಾಗಿದೆ. ಗಿಡಗಳ ನೆಡುವಿಕೆಗಾಗಿ ಕಾಂಡಗಳ ಮೇಲ್ಮೈ ಸುತ್ತಾ ಫಲಕಗಳನ್ನು ಅಳವಡಿಸಲಾಗಿದೆ. ಪರಿಸರಕ್ಕೆ ಹೊಂದಿಕೊಳ್ಳುವಂತ ರೀತಿಯಲ್ಲಿ ಕಾರ್ಯನಿರ್ವಹಿಸುವ ಇದರ ಮೇಲಿನ ಆವರಣವನ್ನು ಹೈಡ್ರಾಲಿಕ್ ಜ್ಯಾಕ್ ವ್ಯವಸ್ಥೆಯ ಮೂಲಕ ಎತ್ತರಿಸಲಾಗುತ್ತದೆ.

ಸೂಪರ್ ಟ್ರೀ ಪ್ರಮುಖವಾಗಿ ನಾಲ್ಕು ಅಗತ್ಯ ಭಾಗಗಳಿಂದ ಮಾಡಲ್ಪಟ್ಟಿದೆ.

The Concrete Core: ಸೂಪರ್ ಟ್ರೀ ಅನ್ನು ಹಿಡಿದಿಟ್ಟುಕೊಳ್ಳುವ ಬಲವರ್ಧಿತ ಉದ್ದನೆಯ ಕಾಂಕ್ರೀಟ್ ವ್ಯವಸ್ಥೆ.
Trunk: ರಕ್ಷಣೆ ಮತ್ತು ಬೆಂಬಲಕ್ಕಾಗಿ ಬಲವರ್ಧಿತ ಕಾಂಕ್ರೀಟ್ ವ್ಯವಸ್ಥೆಯ ಸುತ್ತಲೂ ಸುತ್ತುವ ಉಕ್ಕಿನ ಚೌಕಟ್ಟು.
Planting Panels: ಸಸ್ಯಗಳ ನೆಡುವಿಕೆ ಹಾಗೂ ಬೆಳವಣಿಗೆ ಸಕ್ರಿಯಗೊಳಿಸಲು ಕಾಂಡದ ಮೇಲ್ಪದರದಲ್ಲಿನ ವ್ಯವಸ್ಥೆ.
Canopy: ಮರದಂತಹ ರಚನೆಯನ್ನು ಒಳಗೊಳ್ಳುವ ಛತ್ರಿಯಂತಹ ಆಕಾರ.

ಮಾನವ ನಿರ್ಮಿತ ಸೂಪರ್‌ಟ್ರೀಗಳು ಸೌರಶಕ್ತಿಯನ್ನು ಉತ್ಪಾದಿಸುತ್ತದೆ. ಒಟ್ಟು 7ಸೂಪರ್‌ಟ್ರೀ ಗಳಲ್ಲಿ ಸೌರ ದ್ಯುತಿವಿದ್ಯುಜ್ಜನಕ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಇದು ಸೂರ್ಯನ ಬೆಳಕನ್ನು ಶಕ್ತಿಯನ್ನಾಗಿ ಪರಿವರ್ತಿಸುವುದಲ್ಲದೆ, ಈ ಮರಗಳಿಗೆ ಅಗತ್ಯವಿರುವ ವಿದ್ಯುತ್ ಅನ್ನು ಪೂರೈಸುವಷ್ಟು ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಸಿಂಗಾಪುರದಲ್ಲಿ ಆಗಾಗ್ಗೆ ಸುರಿಯುವ ಮಳೆಯ ನೀರನ್ನು ಈ ಮರಗಳ ಮೂಲಕ ಸಂಗ್ರಹಿಸಲಾಗುತ್ತದೆ. ನೀರಾವರಿ, ಕಾರಂಜಿಗಳು ಅಥವಾ ಅಗತ್ಯವಿರುವ ಸ್ಥಳಗಳಿಗೆ ಇವುಗಳು ಬಳಕೆಯಾಗುತ್ತವೆ. ನೆಲದಡಿಯಲ್ಲಿ ನಿರ್ಮಿಸಲ್ಪಟ್ಟಿರುವ ಬಯೋಮಾಸ್ ಬಾಯ್ಲರ್‌ಗಳಿಗೆ ಎಕ್ಸಾಸ್ಟ್ ನಳಿಕೆಗಳಾಗಿಯೂ ಕೆಲ ಸೂಪರ್ ಟ್ರೀಸ್ ಗಳನ್ನು ಉಪಯೋಗಿಸಲಾಗುತ್ತದೆ. ಇದರಿಂದ ಮರಗಳನ್ನು ಸುತ್ತುವರಿದಿರುವ ಪ್ರಪಂಚದ ಸುಮಾರು 250,000 ಅಪರೂಪದ ಸಸ್ಯಗಳಿಗೆ ಹವಾಮಾನವನ್ನು ತನಗೆ ಬೇಕಾದ ರೀತಿಯಲ್ಲಿ ಪರಿವರ್ತಿಸಿಕೊಳ್ಳಲು ಹಾಗೂ ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಮರಗಳ ಕೊನೆಯ ಮೇಲ್ತುದಿಯ ಭಾಗವು ತಾಪಮಾನ ಮಾಡರೇಟರ್ ಗಳಾಗಿ ಕಾರ್ಯನಿರ್ವಹಿಸುತ್ತವೆ. ಶಾಖವನ್ನು ಹೀರಿಕೊಳ್ಳುವ ಜೊತೆಗೆ ಚದುರಿಸುವ ಕೆಲಸವನ್ನು ನಡೆಸುತ್ತದೆ. ಇದರಿಂದಾಗಿ ಮರದ ಬುಡದಲ್ಲಿ ಓಡಾಡುವ ಹಾಗೂ ಆಶ್ರಯ ಪಡೆಯುವ ಸಂದರ್ಶಕರಿಗೆ ಹವಾಮಾನದ ಬಿಸಿಯಿಂದ ತಾತ್ಕಾಲಿಕವಾಗಿ ನೆರವು ಒದಗಿಸುತ್ತದೆ.

ಸೂಪರ್‌ಟ್ರೀಗಳು ಸುಸ್ಥಿರವಾದ ವರ್ಟಿಕಲ್ ಗಾರ್ಡನ್‌ಗಳಾಗಿವೆ. ಈಕ್ವೆಡಾರ್‌ನಿಂದ ಆರ್ಕಿಡ್‌ಗಳು, ಕೋಸ್ಟರಿಕಾದಿಂದ ಪಾಪಾಸುಕಳ್ಳಿ ಮತ್ತು ಫ್ಲೋರಿಡಾ ಮತ್ತು ಆಗ್ನೇಯ ಏಷ್ಯಾದಿಂದ ಉಷ್ಣವಲಯದಲ್ಲಿ ಬಳ್ಳಿಗಳಾಗಿ ಹರಡುವ ಸಸ್ಯಗಳು ಹೀಗೆ ಒಟ್ಟು 200ಕ್ಕೂ ಹೆಚ್ಚು ಜಾತಿಗಳ 1,62,900 ಸಸ್ಯಗಳು ಈ ಮರಗಳನ್ನು ಸುತ್ತುವರಿದಿವೆ.

ಗಾರ್ಡನ್ಸ್ ಬೈ ದ ಬೇ ಉದ್ಯಾನದ ಸುತ್ತಲಿನ ದೃಶ್ಯವನ್ನು ಆನಂದಿಸಲು 42 ಮೀಟರ್ ಎತ್ತರದ ಎರಡು ಸೂಪರ್‌ ಟ್ರೀಗಳ ಮಧ್ಯಭಾಗದಲ್ಲಿ 128 ಮೀಟರ್ ಉದ್ದದ ಸೇತುವೆಯ ವ್ಯವಸ್ಥೆಯನ್ನು ಮಾಡಲಾಗಿದೆ. ಇದನ್ನು ಓಸಿಬಿಸಿ ಸ್ಕೈ ವೇ ಅಂತಲೂ ಕರೆಯಲಾಗುತ್ತದೆ. ಇದನ್ನು ನೆಲದಿಂದ 22 ಮೀಟರ್ ಎತ್ತರದಲ್ಲಿ ನಿರ್ಮಿಸಲಾಗಿದೆ.

ಈ ಸೂಪರ್ ಟ್ರೀಸ್ ನ ಮತ್ತೊಂದು ಆಕರ್ಷಣೆ ಗಾರ್ಡನ್ ರಾಪ್ಸೋಡಿ. ಇದನ್ನು ವೀಕ್ಷಿಸಲು ಈ ಸ್ಥಳಕ್ಕೆ ರಾತ್ರಿಯ ವೇಳೆ ಭೇಟಿ ನೀಡಬೇಕು. ಅದು ನಿಖರವಾಗಿ ಪ್ರತಿ ರಾತ್ರಿ, 7:45 ಕ್ಕೆ. ಅದು ತಪ್ಪಿದರೆ ಮತ್ತೆ 8:45ಕ್ಕೆ. ಒಟ್ಟು15 ನಿಮಿಷಗಳ ಕಾಲ ಈ ಮರಗಳು ಬಣ್ಣ ಬಣ್ಣದ ದೀಪಗಳಿಂದ ಕಂಗೊಳಿಸುತ್ತವೆ. ಸೂಪರ್‌ಟ್ರೀ ಗ್ರೋವ್ ಗಾರ್ಡನ್ ರಾಪ್ಸೋಡಿ ಎಂದು ಕರೆಯಲ್ಪಡುವ ಒಂದು ಸಂಘಟಿತ ಬೆಳಕು ಮತ್ತು ಸಂಗೀತ ಕಾರ್ಯಕ್ರಮ ಈ ಮಾನವ ನಿರ್ಮಿತ ಮರಗಳನ್ನು ಮತ್ತಷ್ಟು ಜೀವಂತವಾಗಿಸುವಲ್ಲಿ ಸಹಕರಿಸುತ್ತವೆ. ಇಂಪಾದ ಸಂಗೀತವನ್ನು ಆಲಿಸಲೆಂದೇ ಈ ಮರಗಳ ಸುತ್ತಾ ಸುಮಾರು 68ಕ್ಕೂ ಅಧಿಕ ಸ್ವತಂತ್ರ ಆಡಿಯೋ ಸ್ಪೀಕರ್ ಗಳನ್ನು ಅಳವಡಿಸಲಾಗಿದೆ. ಈ ಮೋಡಿಮಾಡುವ ಪ್ರದರ್ಶನವನ್ನು ಮುನ್ನಡೆಸುವಲ್ಲಿ ಪ್ರಶಸ್ತಿ-ವಿಜೇತ ಲೈಟಿಂಗ್ ಡಿಸೈನರ್ ಆಡ್ರಿಯನ್ ಟ್ಯಾನ್ ಮತ್ತು ಬ್ಯಾಂಗ್ ವೆನ್ಫು ಅವರದ್ದು ಪ್ರಮುಖ ಪಾತ್ರ. ವಿಭಿನ್ನ ಶೈಲಿಗಳ ಸಂಗೀತದ ಜೊತೆಗೆ ಮರಗಳ ತುಂಬಾ ಬೆಳಕಿನ ವೈಭವವನ್ನು ವೀಕ್ಷಿಸುತ್ತಿದ್ದಂತೆ ಯಾವುದೋ ಲೋಕದಲ್ಲಿ ತೇಲಾಡಿದ ಅನುಭವ ನಮ್ಮದಾಗುತ್ತವೆ. ದಿನನಿತ್ಯ ಸಿಂಗಾಪುರಕ್ಕೆ ಭೇಟಿ ನೀಡುವ ಲಕ್ಷಾಂತರ ಪ್ರವಾಸಿಗರನ್ನು ಈ ಪ್ರದರ್ಶನ ಮಂತ್ರಮುಗ್ಧಗೊಳಿಸುತ್ತಿರುವುದಂತೂ ನಿಜ.

ಅಷ್ಟೂ ಮರಗಳಲ್ಲಿ ಅತ್ಯಂತ ಆಕರ್ಷಣೆ 16 ಅಂತಸ್ತಿನ ಕಟ್ಟಡದಷ್ಟು ಅಂದರೆ 50 ಮೀಟರ್ ಎತ್ತರದ ಸೂಪರ್ ಟ್ರೀ. ಇದು 2019 ರ ಡಿಸೆಂಬರ್ ನಿಂದ ಸಾರ್ವಜನಿಕರಿಗೆ ಮುಕ್ತವಾಗಿದೆ. ಈ ಮರವು ಪ್ರಮುಖವಾಗಿ 3 ಹಂತಗಳಲ್ಲಿ ರಚನೆಗೊಂಡಿದೆ. ನೆಲಮಹಡಿ, ವೀಕ್ಷಣಾಲಯದ ಸ್ಥಳ ಮತ್ತು ತೆರೆದ ಛಾವಣಿಯ ಡೆಕ್. ವೀಕ್ಷಣಾಲಯ ಸ್ಥಳದಲ್ಲಿ ನಡಿಗೆಗೆಂದೇ ಮರಕ್ಕೆ ಸುತ್ತು ಬರುವ ರೀತಿಯಲ್ಲಿ ಸೇತುವೆ ನಿರ್ಮಿಸಲಾಗಿದೆ. ಇದು ಗಾಜಿನ ಕಿಟಕಿಗಳಿಂದ ಆವೃತವಾಗಿದೆ. ಮರದ ಮೇಲಿನ ಆವರಣ ಹಾಗೂ ಅಲ್ಲಿ ನಿರ್ಮಿಸಿರುವ ಸೌರಶಕ್ತಿಯ ಫಲಕಗಳ ಜೋಡಣೆಯನ್ನು ಬಲು ಹತ್ತಿರದಿಂದ ನೋಡಬಹುದಾಗಿದೆ.

ಇನ್ನೂ ಇದಕ್ಕೂ ಮೇಲಿನ ಭಾಗ - ತೆರದ ಛಾವಣಿಯಂತೂ ಸ್ವರ್ಗವೇ ಧರೆಗಿಳಿದ ಭಾವ. 360-ಡಿಗ್ರಿಯಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಮುಕ್ತವಾಗಿ ಇಡೀ ಸಿಂಗಾಪುರವನ್ನು ನೋಡುವ ಒಂದು ಅದ್ಭುತ ಅವಕಾಶ ಇಲ್ಲಿದೆ. ಮರೀನಾ ಬೇ ಸ್ಯಾಂಡ್ಸ್ ನಿಂದ ಮೊದಲ್ಗೊಂಡು, ಹಾರ್ಬರ್ ಫ್ರಂಟ್, ಫ್ಲವರ್ ಡೋಮ್, ಕ್ಲೌಡ್ ಫಾರೆಸ್ಟ್, ಸಿಂಗಾಪುರ ಫ್ಲೈಯರ್, ಸುತ್ತಲಿನ ಸಮುದ್ರ, ಹಡಗುಗಳು, ಸಣ್ಣ ಪುಟ್ಟ ದೋಣಿಗಳ ಓಡಾಟಗಳು ನಿಜಕ್ಕೂ ಅತ್ಯಾಕರ್ಷಕ. ಅಷ್ಟು ಎತ್ತರದಲ್ಲಿ ಬೀಸುವ ತಂಪಾದ ಗಾಳಿಯ ಜೊತೆಗೆ ಈ ವಿಹಂಗಮ ನೋಟ ನಮ್ಮ ಮನಸ್ಸನ್ನು ಮತ್ತಷ್ಟು ಪುಳಕಿತಗೊಳಿಸುತ್ತದೆ. ಈ ಮರದ ಮೇಲ್ಭಾಗಕ್ಕೆ ತೆರಳಲು ಸ್ವತ; ವೃಕ್ಷದ ಮಧ್ಯಭಾಗದಲ್ಲೇ ಲಿಫ್ಟ್ ನ್ನು ಅಳವಡಿಸಲಾಗಿದೆ. ಈ ಲಿಫ್ಟ್ ನ ಮೇಲ್ಛಾವಣಿಯು ಪಾರದರ್ಶಕ ಗಾಜುಗಳಿಂದ ಹೊಂದಿರುವುದು ಮತ್ತೊಂದು ವಿಶೇಷ. ಗಿಡಗಳು, ಬಳ್ಳಿಗಳು, ಹೂವುಗಳು, ಎಲೆಗಳನ್ನು ಸೀಳಿಕೊಂಡು ನಮ್ಮನ್ನು ಮರದ ತುತ್ತ ತುದಿಗೆ ತಲುಪಿಸುವ ನೇರ ದೃಶ್ಯವನ್ನು ಸೆರೆಹಿಡಿಯುವುದೇ ಒಂದು ಖುಷಿಯ ಕ್ಷಣಗಳು.

ಹೀಗೆ ಈ ಸೂಪರ್ ಟ್ರೀ ಗಳು ತಮ್ಮ ವಿಶಿಷ್ಟ ಗುಣಗಳಿಂದ ನಮ್ಮನ್ನು ಒಂದೇ ಬಾರಿಗೆ ಇಷ್ಟಪಡುವಂತೆ ಮಾಡಿಬಿಡುತ್ತವೆ. ಅದೆಷ್ಟು ಬಾರಿ ತೆರಳಿದರೂ ಇವುಗಳ ಮಧ್ಯೆ ಕಳೆಯುವುದೆಂದರೆ ಪ್ರತೀ ಸಲವೂ ಅದೇನೋ ಹೊಸತನ. ವಾಸ್ತವದ ಜಗತ್ತಿನಲ್ಲಿ ವಿಹರಿಸುತ್ತಾ ನಮ್ಮ ಮುಂದೆ ಹೊಸದಾದ ಕಲ್ಪನಾ ಲೋಕವನ್ನೇ ಈ ಸೂಪರ್ ಟ್ರೀ ಗಳು ತೆರೆದಿಡುತ್ತವೆ. ಪ್ರಕೃತಿ ಮತ್ತು ನಿರ್ಮಿತ ಪರಿಸರದ ಮಿಶ್ರಣಗಳ ಒಂದು ಸಂಗಮ ಈ ಗಾರ್ಡನ್. ಕಲೆ, ಎಂಜಿನಿಯರಿಂಗ್ ಮತ್ತು ಪರಿಸರ ವಿಜ್ಞಾನದ ಸಂದೇಶವನ್ನು ಜಗತ್ತಿಗೆ ಸಾರುವ ಮೂಲಕ ತನ್ನದೇ ಆದ ವಿಭಿನ್ನ ವ್ಯಕ್ತಿತ್ವದೊಂದಿಗೆ ಸಿಂಗಾಪುರ ಕಂಗೊಳಿಸುತ್ತಿದೆ.

ಈ ಅಂಕಣದ ಹಿಂದಿನ ಬರಹಗಳು:
ಸೆಲಮತ್ ದತಾಂಗ್ ದಲಾಮ ಪೆಸವಾತ್ ಗರುಡಾ ಇಂಡೋನೇಷ್ಯಾ
ಅದೃಷ್ಟ-ಸಮೃದ್ಧಿಯನ್ನು ಸ್ವಾಗತಿಸುವ ಡ್ರ್ಯಾಗನ್ ನೃತ್ಯ ಮತ್ತು ಸಾಂಸ್ಕೃತಿಕ ಚರಿತ್ರೆ
ದಕ್ಷ ವ್ಯವಸ್ಥೆಯೊಂದಿಗೆ ಅಚ್ಚರಿಯ ಸಾಧನೆಯತ್ತ ಸದಾ ತುಡಿವ ‘ಗ್ರೀನೆಷ್ಟ್ ಸಿಟಿ’ ಸಿಂಗಾಪುರ್
ಅಚ್ಚರಿಯ ‘ಸಿಂಗಾಪುರ್’ ಮತ್ತು ಅದರ ಭೂವಿಸ್ತರಣಾ ಕಾರ್ಯ

MORE NEWS

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...