ದಿ ಲೈಫ್ ಆಫ್ CB: ಅರ್ಥಾತ್, ಕ್ರಿಷ್ಚಿಯನ್ ಬೋಲ್ತನಸ್ಕಿ

Date: 20-07-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಫ್ರಾನ್ಸ್ ಮೂಲದ ಕಾನ್ಸೆಪ್ಚುವಲ್ ಆರ್ಟ್ ಕಲಾವಿದ ಕ್ರಿಷ್ಚಿಯನ್ ಬೋಲ್ತನಸ್ಕಿ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಕ್ರಿಷ್ಚಿಯನ್ ಬೋಲ್ತನಸ್ಕಿ (Christian Boltanski)
ಜನನ: 06 ಸೆಪ್ಟಂಬರ್, 1994
ಮರಣ: 14 ಜುಲೈ, 2021
ಶಿಕ್ಷಣ: ಇಲ್ಲ
ವಾಸ: ಪ್ಯಾರಿಸ್, ಫ್ರಾನ್ಸ್
ಕವಲು: ಕಾನ್ಸೆಪ್ಚುವಲ್ ಆರ್ಟ್
ವ್ಯವಸಾಯ: ಪೇಂಟಿಂಗ್, ಇನ್ಸ್ಟಾಲೇಷನ್, ಸ್ಕಲ್ಪ್‌ಚರ್, ಫೊಟೋಗ್ರಫಿ

ಕ್ರಿಷ್ಚಿಯನ್ ಬೋಲ್ತನಸ್ಕಿ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ: 

ಇಂದು (17-07-2021) ನಾನಿಲ್ಲಿ ಈ ಅಂಕಣವನ್ನು ಬರೆಯುತ್ತಿರುವಂತೆಯೇ, ಅಲ್ಲಿ ಆಸ್ಟ್ರೇಲಿಯಾದ ತಾಸ್ಮಾನಿಯಾ ನಗರಲ್ಲಿನ ಮ್ಯೂಸಿಯಂ ಆಫ್ ಒಲ್ಡ್ ಅಂಡ್ ನ್ಯೂ ಆರ್ಟ್ (MONA) ದಲ್ಲಿ ಅನನ್ಯವಾದ ಕಲಾಕೃತಿಯೊಂದು ಪೂರ್ಣಗೊಂಡಿದೆ! ಅದನ್ನು ರಚಿಸಿದ ಕಲಾವಿದ ಕ್ರಿಷ್ಚಿಯನ್ ಬೋಲ್ತನಸ್ಕಿ ಈಗಕ್ಕೆ ನಾಲ್ಕು ದಿನಗಳ ಹಿಂದೆ ಅಂದರೆ ಜುಲೈ 14ರಂದು ತೀರಿಕೊಂಡಿದ್ದಾರೆ. ಕಾನ್ಸೆಪ್ಚುವಲ್ ಆರ್ಟ್ ಜಗತ್ತಿನಲ್ಲಿ ಬಲುದೊಡ್ಡ ಹೆಸರು ಕ್ರಿಷ್ಚಿಯನ್ ಬೋಲ್ತನಸ್ಕಿ!

ವಿಷಯ ಏನಪ್ಪಾ ಅಂದ್ರೆ, ಆಸ್ಟ್ರೇಲಿಯನ್ ಕಲಾ ಸಂಗ್ರಾಹಕ, ಜೂಜುಗಾರ ಡೇವಿಡ್ ವಾಲ್ಷ್ ಅವರು ಕಲಾವಿದ ಕ್ರಿಷ್ಚಿಯನ್ ಬೋಲ್ತನಸ್ಕಿ ಅವರ ಜೊತೆ 2010ರಲ್ಲಿ ಭೋಜನಕೂಟವೊಂದರಲ್ಲಿ ಜೊತೆಯಾಗಿ ಊಟ ಮಾಡ್ತಾ ಮಾತನಾಡುತ್ತಾ, ಅವರಿಗೆ ಒಂದು ಕಲಾಕೃತಿ ರಚಿಸಲು ಕಮಿಷನ್ ಮಾಡುತ್ತಾರೆ. ಅದೇನೆಂದರೆ ಪ್ಯಾರಿಸ್‌ನ ಬೋಲ್ತನಸ್ಕಿ ಸ್ಟುಡಿಯೊದಲ್ಲಿ ಒಂಭತ್ತು ವೀಡಿಯೊ ಕ್ಯಾಮರಗಳು 24x7 ಸ್ಟುಡಿಯೊದ ಚಟುವಟಿಕೆಗಳನ್ನು ರೆಕಾರ್ಡ್ ಮಾಡಿಕೊಂಡು, ಆ ರೆಕಾರ್ಡ್ ತಾಸ್ಮಾನಿಯಾದ ಮೋನಾ ಗ್ಯಾಲರಿಯಲ್ಲಿ ನೇರ ಪ್ರಸಾರ ಆಗುತ್ತಿರಬೇಕು. ಇದಕ್ಕೆ ಪ್ರತಿಯಾಗಿ, ವಾಲ್ಷ್ ಒಂದು ದೊಡ್ಡ ಮೊತ್ತವನ್ನು ಕಲಾವಿದ ಬೋಲ್ತನಸ್ಕಿಗೆನೀಡಬೇಕು. ಆ ಮೊತ್ತವನ್ನು ಬೋಲ್ತನಸ್ಕಿ ಅಂತ್ಯದ ತನಕ ಪ್ರತೀ ತಿಂಗಳು ಕಂತು ಕಂತಾಗಿ ನೀಡಬೇಕು. ಎಂಟು ವರ್ಷಗಳ ಕಾಲ ನೀಡಿದರೆ, ಬೋಲ್ತನಸ್ಕಿಗೆ ಅಸಲು ಸಂದಂತೆ, ಎಂಟುವರ್ಷಗಳ ಮೇಲಿನದು ಬೋಲ್ತನಸ್ಕಿಗೆ ಲಾಭ. ಅದಕ್ಕೆ ಮೊದಲೇ ಬೋಲ್ತನಸ್ಕಿ ತೀರಿಕೊಂಡರೆ ವಾಲ್ಷ್‌ಗೆ ಲಾಭ! – ಇದು ಒಪ್ಪಂದ. ಬೋಲ್ತನಸ್ಕಿ ಎಂಟು ವರ್ಷಗಳನ್ನು ದಾಟಿ ಮತ್ತೂ ಮೂರು ವರ್ಷ ಬದುಕಿ, ಮೊನ್ನೆ ಮೃತಪಟ್ಟರು. ಇಂದು ಮೋನಾ ಗ್ಯಾಲರಿಯಲ್ಲಿ ಅವರ ಬದುಕಿನ ಲೈವ್ ಪ್ರಸಾರ ಅಂತ್ಯಗೊಳ್ಳಲಿದೆ. ಈ The Life of C.B. ಎಂಬ ಮಹತ್ವದ ಕಲಾಕೃತಿ, ಮೋನಾ ಗ್ಯಾಲರಿಯ ಆಸ್ತಿಯಾಗಿ ಉಳಿಯಲಿದೆ ಎಂದು ವಾಲ್ಷ್ ಹೇಳಿದ್ದಾರೆ. ಈ ಕಲಾಕೃತಿಯ ಬಗ್ಗೆ ಸ್ವತಃ ಕಲಾವಿದ ಬೋಲ್ತನಸ್ಕಿ ಹೀಗೆ ಹೇಳಿದ್ದಾರೆ: “I hope that when I shall be dead, somebody that I don’t know in Australia is going to be sad for two minutes,” he said. “It would be something marvelous because it means you’ve touched people you’ve never seen, and that is something incredible.” (ದಿ ಟೈಮ್ಸ್ ಸಂದರ್ಶನ, 2017)

ನಾಝಿ ಆಕ್ರಮಿತ ಫ್ರಾನ್ಸ್‌ನಲ್ಲಿ ಜನಿಸಿದ ಅವರ ಬಾಲ್ಯ ಕೂಡ ವಿಕ್ಷಿಪ್ತ. ಅವರ ತಂದೆ ಉಕ್ರೇನಿನ ಯಹೂದಿ ಸಮುದಾಯದವರಾಗಿದ್ದರೆ, ತಾಯಿ ಕ್ರೋಸಿಕನ್ ರೋಮನ್ ಕ್ಯಾಥೋಲಿಕ್. ಎರಡನೇ ಮಹಾಯುದ್ಧ ಕಾಲದಲ್ಲಿ, ದೇಶಾಂತರಗೊಳ್ಳುವುದರಿಂದ ತಪ್ಪಿಸಿಕೊಂಡು ನಾಝಿಗಳ ಕೈಗೆ ಸಿಗದಂತೆ ಅಟ್ಟದ ಮೇಲೆ ಅಡಗಿ ಕುಳಿತೇ ಬದುಕಿದ ತಂದೆ ರಾತ್ರಿ ಮಲಗುವ ವೇಳೆಯಲ್ಲಿ ಮಾತ್ರ ಮನೆಯಲ್ಲಿರುತ್ತಿದ್ದರು. ಹೊರಗೆ ಯಾರೇ ಕೇಳಿದರೂ ತಂದೆ ದೇಶಾಂತರ ಹೋಗಿದ್ದಾರೆಂದೇ ಉತ್ತರ. ಆದರೆ ಅಕಸ್ಮಾತ್, ತಾಯಿ ಗರ್ಭಿಣಿ ಆದಾಗ ಮನೆಯಲ್ಲಿ ಅದು ನಾಝಿಗಳಿಗೆ ಗೊತ್ತಾದೀತೆಂಬ ಆತಂಕ ಮಡುಗಟ್ಟಿತ್ತು. ಅಂತೂ ಯುದ್ಧ ಮುಗಿದು ಕೆಲವೇ ದಿನಗಳಲ್ಲಿ ಬೋಲ್ತನಸ್ಕಿ ಜನಿಸಿದ್ದು.

ಶಿಕ್ಷಣವೇ ಇಲ್ಲದ ಬಾಲ್ಯದಲ್ಲಿ ಈ ಯುದ್ಧದ ಆತಂಕದ ಕತೆಗಳ ನಡುವೆಯೇ ಬೆಳೆದ ಬೋಲ್ತನಸ್ಕಿ 12ನೇ ವಯಸ್ಸಿನಲ್ಲಿ ಶಾಲೆಯಿಂದ ಅರ್ಧದಲ್ಲೇ ಹೊರಬಿದ್ದ ಬಳಿಕ, ಕಲೆಯಲ್ಲಿ ಆಸಕ್ತಿ ಮೂಡಿಸಿಕೊಂಡದ್ದು. ಅವರ ಕಾನ್ಸೆಪ್ಚುವಲ್ ಕಲಾಕೃತಿಗಳು ಮೂಡತೊಡಗಿದ್ದು 1970ರ ಬಳಿಕ. ಬಿಸ್ಕಿಟ್ ಟಿನ್‌ಗಳ ಮೇಲೆ ಮೂತ್ರ ಮಾಡಿ, ಅವಕ್ಕೆ ತುಕ್ಕು ಬರಿಸಿ ಕಲಾಕೃತಿಗಳಲ್ಲಿ ಬಳಸುತ್ತಿದ್ದುದಾಗಿ ಅವರು ಹೇಳಿಕೊಂಡದ್ದಿದೆ. ಮುಂದೆ ದೊಡ್ಡ ಪ್ರಮಾಣದಲ್ಲಿ ಅವು ಬೇಕಾದಾಗ ಕೊಕೊಕೋಲಾ ಎರಚಿ ಡಬ್ಬಗಳಿಗೆ ತುಕ್ಕು ಹಿಡಿಸುತ್ತಿದ್ದರಂತೆ.

1968ರಲ್ಲಿ ತನ್ನ ಮೊದಲ ಕಲಾಪ್ರದರ್ಶನ La vie impossible de Christian Boltanski (The Impossible Life of Christian Boltanski), ಏರ್ಪಡಿಸಿದ ಬಳಿಕ,  ಅವರು ಹಲವು ಮಹತ್ವದ ಕಲಾ ಪ್ರದರ್ಶನಗಳ ಭಾಗ ಆಗಿದ್ದರು. ನಷ್ಟ, ನೆನಪುಗಳು, ಬಾಲ್ಯ ಮತ್ತು ಸಾವು – ಹೀಗೆ ಹಾಲೊಕಾಸ್ಟ್‌ನ ನೆನಪುಗಳನ್ನು ವೈಯಕ್ತಿಕ ಮತ್ತು ಸಾಮಾಜಿಕ ತಂತುಗಳ ಮೂಲಕ ಕಟ್ಟಿಕೊಡುವ ಬೋಲ್ತನಸ್ಕಿ ಅವರ ಕಲಾಕೃತಿಗಳು ಗಾಢವಾದ ನೆನಪುಗಳನ್ನು ಮೀಟುತ್ತವೆ. ನ್ಯೂಯಾರ್ಕಿನಲ್ಲಿ 30ಟನ್ ಹಳೆಯ ಬಟ್ಟೆಗಳನ್ನು ರಾಶಿ ಹಾಕಿ  “No Man’s Land.” ಎಂದು ಹೆಸರಿಟ್ಟ ಕಲಾಕೃತಿ, ಇಟಲಿಯಲ್ಲಿ ವಿಮಾನ ದುರಂತವೊಂದರ ಉಳಿಕೆ ಭಾಗಗಳನ್ನು ಬಳಸಿ ರಚಿಸಿದ ಕಲಾಕೃತಿ, ಹೀಗೆ ಕಣ್ಣುಗಳಿಗೂ, ಮನಸ್ಸಿಗೂ ಪ್ರಭಾವಿಸ ಬಲ್ಲ ಓಪನ್ ಎಂಡೆಡ್ ಆದ, ಪ್ರೇಕ್ಷಕರನ್ನು ಪಾಲ್ಗೊಳ್ಳಲು ಆಹ್ವಾನಿಸುವ ಕಾನ್ಸೆಪ್ಚುವಲ್ ಕಲಾಕೃತಿಗಳಿಗೆ ಅವರು ಹೆಸರಾಗಿದ್ದಾರೆ. ಓರಣವಾಗಿದ್ದೂ ಇಡುಕಿರಿದಿರುವ ಅನುಭವ ಕೊಡುವ ಅವರ ಕಲಾಕೃತಿಗಳ ಬಗ್ಗೆ ವಿಮರ್ಶಕ ಮೈಕಲ್ ಬ್ರೆನ್ಸನ್ ಹೇಳಿದ್ದು ಹೀಗೆ (1988): “His works are both meticulously ordered and claustrophobic. His recent installations sweep us in, sometimes entertain, then ask us to step back and consider images and feelings that seem too full, too immediate, to consider.” 

ಕ್ರಿಷ್ಚಿಯನ್ ಬೋಲ್ತನಸ್ಕಿ  ಅವರ ಜೊತೆ ವಿಮರ್ಶಕ ಮಾರ್ಕ್ ಸ್ಟೀವನ್ಸ್ ಮಾತುಕತೆ:

ಕ್ರಿಷ್ಚಿಯನ್ ಬೋಲ್ತನಸ್ಕಿ ಕಲಾಕೃತಿಗಳ  ಕುರಿತ ಕಾರ್ಯಕ್ರಮ: 

ಚಿತ್ರ ಶೀರ್ಷಿಕೆಗಳು :

ಕ್ರಿಷ್ಚಿಯನ್ ಬೋಲ್ತನಸ್ಕಿ ಅವರ “Odessa’s Ghosts,” at an architecture museum in Moscow (2005)

ಕ್ರಿಷ್ಚಿಯನ್ ಬೋಲ್ತನಸ್ಕಿ ಅವರ Animitas Chili, 2014

ಕ್ರಿಷ್ಚಿಯನ್ ಬೋಲ್ತನಸ್ಕಿ ಅವರ Chance at the Sydney festival, (2014)

ಕ್ರಿಷ್ಚಿಯನ್ ಬೋಲ್ತನಸ್ಕಿ ಅವರ Humans (1994)

ಕ್ರಿಷ್ಚಿಯನ್ ಬೋಲ್ತನಸ್ಕಿ ಅವರ Les Ombres- LAnge (Shadows- Angel) 1986

ಕ್ರಿಷ್ಚಿಯನ್ ಬೋಲ್ತನಸ್ಕಿ ಅವರ Personnes at the Monumenta 2010 event at the Grand Palais in Paris

ಕ್ರಿಷ್ಚಿಯನ್ ಬೋಲ್ತನಸ್ಕಿ ಅವರ Reserve of Dead Swiss (One's Not Dead), 1991

ಕ್ರಿಷ್ಚಿಯನ್ ಬೋಲ್ತನಸ್ಕಿ ಅವರ Scratch, 2014

ಕ್ರಿಷ್ಚಿಯನ್ ಬೋಲ್ತನಸ್ಕಿ ಅವರ The Reserve of Dead Swiss on display at the Pompidou Centre, Paris (1990)

ಕ್ರಿಷ್ಚಿಯನ್ ಬೋಲ್ತನಸ್ಕಿ ಅವರ The Life of CB. (2009-2021)

ಈ ಅಂಕಣದ ಹಿಂದಿನ ಬರೆಹಗಳು:
ಪ್ರಾಮಾಣಿಕತೆಯೇ ಸೌಂದರ್ಯ- ಜೊರ್ಗ್ ಇಮ್ಮೆಂದ್ರಾಫ್
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

 

 

MORE NEWS

ಅನಂತಮೂರ್ತಿಯವರ ‘ಸಂಸ್ಕಾರ’ : ಬದುಕ...

31-07-2021 ಬೆಂಗಳೂರು

ಸನಾತನ ಧರ್ಮದ ನಂಬಿಕೆಗಳೊಂದಿಗೆ ಘರ್ಷಣೆಗಳಿಗೆ ಇಳಿಯುತ್ತಲೇ ಸಂಕೀರ್ಣ ವ್ಯವಸ್ಥೆಯ ಚಿತ್ರಣ ನೀಡುವ ಕಾದಂಬರಿ-ಸಂಸ್ಕಾರ. ಸಿ...

‘ಹಾರುವ ಹಕ್ಕಿ ಮತ್ತು ಇರುವೆ...’ ಅ...

30-07-2021 ಬೆಂಗಳೂರು

‘ಹಾರುವ ಹಕ್ಕಿ ಮತ್ತು ಇರುವೆ’ ಸಂಕಲನದ ಕತೆಗಳ ಸಾಮಾಜಿಕ ಆವರಣ ಪಿಂಜಾರ ಸಮುದಾಯದ ಅನುಭವ ಲೋಕದಿಂದ ಮೂಡಿದ್ದ...

ಅಸೆಂಬ್ಲಿಗಳಲ್ಲಿ “ಬಾಕತನ” ತೋರಿಸಿದ...

27-07-2021 ಬೆಂಗಳೂರು

ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ...