Poem

ರಾಮಕೃಷ್ಣರಲಿ ಶಾರದೆಯಾಗಿ, ಬಂಕಿಮರಲಿ ‘ಭಾರತಿಯಾಗಿ’!...

ರವಿಗಾಣದ ತುದಿಯ ಕವಿಕಂಡ,
ಕವಿಗಾಣದ ಪಥದಲಿ ತತ್ಪುರುಷ ನಡೆದ,
ತತ್ಪುರುಷಗಾಣದ ನಭೋಪುರದಲಿ,
ನಿತ್ಯನಿರ್ವಾಣದಲಿ ಲೀನವಾದವಳಾರು?

ಗಂಗೆಯಮುನೆಯರ ಕೂಟದ ಸರಸ್ವತಿಯು,
ರಾಮಕೃಷ್ಣರಲಿ ಶಾರದೆಯಾಗಿ,
ಸ್ವರಾಜ್ಯ ನಿರ್ಮಾತೃ ಕ್ಷತ್ರೀಯಕುಲಾವಸಂತನ ಭವಾನಿಯು,
ಬಂಕಿಮರಲಿ 'ಭಾರತಿಯಾಗಿ',

ವೇದಸಾರಂಗಳ ಪೂರ್ಣದಲಿ ಧರಿಸಿ,
ಭರತಭೂಮಿಯಮೃತಪುತ್ರರಿಗೆ ಧಾರೆಗೈಯುತ,
ಬ್ರಹ್ಮಾಂಡಪಿಂಡಾಂಡಗಳಾದಿಯಾಗಿ ಕಣಕಣದಲೂ,
ಬ್ರಹ್ಮಚೈತನ್ಯಿಯಾಗಿ ಮಾಯೆಯಲಿ ನರ್ತನಂಗೈಯುತ,

ಲೋಕದನವ ಅತಿಥಿಗೆ ಮಾತೃವಾತ್ಸಲ್ಯಿಯಾಗಿ,
ಸಂಸಾರನೊಗಹೊರುವಲಿ ಸಹಧರ್ಮಿಣಿಯಾಗಿ,
ಸ್ಥಿರಚರವಾದ ಅನಂತಸೃಷ್ಟಿಯನದಿಯಲಿ,
ಪುರುಷನಿಗೆ ಪ್ರಕೃತಿಯಾಗಿ,

ವಿಶ್ವದಾದಿಯಾಗಿ ಆಕೆಯ ಪಯಣವೆನಿತು ಅನನ್ಯದೆಡೆ ಸಾಗುತಲಿ,
ಅರಿವಹುರಿಯೊಳು ಮಿಂದಮಡಿಲು ಅಪೂರ್ವತೆಯ ಬಯಸುತಲಿ,
ಸ್ವಧರ್ಮದ ಸ್ವಭಾವದಲಿ ಸ್ತ್ರೀಯಾಗಿ,
ಆರಂಭವಿಪ ನಡೆಯು, ಹೊರಟಿದೆ ಬಾಳರಹಸ್ಯವ್ಯಾಪ್ತಿಯಾಚೆಯಲಿ!

ಭೌತಿಕತೆಯನೆಲೆಗತೀತವಾಗಿ, ಭುವಿಯಹೊತ್ತ ನಿಸರ್ಗದೇವಿಯೇ,
ಚಾಲುಕ್ಯರಿಗೆ ಬನಶಂಕರಿಯಾಗಿ, ಒಡೆಯರಿಗೆ ಚಾಮುಂಡಿಯಾಗಿ,
ಕನ್ನಡಕುಲಕೋಟಿಪುತ್ರರಿಗೆ ಭುವನೇಶ್ವರಿಯಾಗಿ,
ಎನಿತುಕಾವ್ಯದ ಸ್ಪೂರ್ತಿಯಾಗಿ ಭಾವಾಕ್ಷರಗಳಲಿ ಸಂದಿಹಳು.

- ಶ್ರೀ ಸೋಮೇಶ್ವರ ಆರ್ ಗುರುಮಠ

ಸೋಮೇಶ್ವರ ಗುರುಮಠ

ಸೋಮೇಶ್ವರ ಗುರುಮಠ ಅವರು ಲೇಖಕ, ಕಿರುಚಿತ್ರ ನಿರ್ದೇಶಕ, ಹಾಡುಗಾರ, ಕವಿ, ನಿರೂಪಕ, ಅಂಕಣಗಾರ ಹಾಗೂ ನಟನಾಗಿ ಗುರುತಿಸಿಕೊಂಡವರು. ಈಗಾಗಲೇ 'ನಾನು ನನ್ನ ಜಗತ್ತು', 'ಪಯಣಿಗನ ಕಾವ್ಯಗಳು' ಮತ್ತು 'ಅನನ್ಯ ನಮನಗಳು' ಎಂಬ ಮೂರು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ತಮ್ಮ ಬರವಣಿಗೆಯ ಮೂಲಕ ವಿಭಿನ್ನ ಛಾಪನ್ನು ಸಾಹಿತ್ಯ ಲೋಕದಲ್ಲಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.

More About Author