
ಲೇಖಕ ಸಂತೆಬೆನ್ನೂರು ಫೈಜ್ನಟ್ರಾಜ್ ಅವರು ಬರೆದ 'ಅದೇನಾಯ್ತು ಅಂದ್ರೆ..' ಕವಿತೆಯ ಸಾಲುಗಳು ಹೀಗಿವೆ ....
೧
ಅವನು ಸಿಕ್ಕ ಇವನೂ ಸಿಕ್ಕ..ಯಾರ್ಯಾರೋ ಸಿಕ್ರು
ದೇವರಂಥವರಂತೂ ಬೇಕಾದಷ್ಟು ಜನ ಸಿಕ್ಕರು
ಮನುಷ್ಯನನ್ನು ಹುಡುಕ್ತಿದ್ದಿನಿ....ಸಿಕ್ರೆ ಚೂರ್ ಹೇಳಿ ಸಾ...
೨
ಹಲಸಿನ ಅಂಟಂತಿತ್ತು ಸಾ ನಮ್ ಬಂಧ
ಅದೇ ಕಷ್ಟ ಆಗಿದೆ...ಬಿಡಿಸಿಕೊಳ್ಳಲು ಇಬ್ಬರೂ
ಒದ್ದಾಡ್ತಿದ್ದಿವಿ ಆಗ್ತಿಲ್ಲ...ಗೆಳೆಯರೇ ಎಣ್ಣಿ ಹಿಡಿದು ನಿಂತಿದ್ದಾರೆ!
೩
ಬಸ್ಸಲ್ಲಿ ಕೂತರೂ ಮನಸ್ಸು ಅದಕ್ಕಿಂತ
ಮುಂದೆ ಮುಂದೆ ಓಡ್ತಿದೆ ಸಾ....ಶೂನ್ಯದಲ್ಲಿ ಏನೋ ಸೃಷ್ಟಿಸಲು
ಹವಣಿಸೋ ಜಗದ ಎದುರು ನಾ ಒಂಟಿ
೪
ಎದೆಯ ಮಾತುಗಳು ಹಾಡಾಗಲು ಅವಳೇ ಬೇಕು ಸಾ...
ಮಾತೇ ಆಡದ ಮೂಗ ನಾನು
ವಾಕಿಟಾಕಿಯ ಅವಳಿಗೆ ನಾನೊಂದು ಪ್ರಶ್ನೆ
೫
ಜಾತಿಯ ಟೇಪು, ಧರ್ಮದ ತಕ್ಕಡಿ ಹಿಡಿದುಕೊಂಡು
ನಿಂತ ಗೆಳೆಯರ ಎದುರು ಅನ್ನ ಉಣ್ಣಿಸಿ ಎಲ್ಲರೊಂದೆ ಅಂದ
ಅವ್ವನ ಮಾತು ಇವರಿಗೆ ಹೆಂಗ್ ಹೇಳ್ಳಿ...ಸಾ..ಹೇಳಿ ಸಾ...!
ಸಂತೆಬೆನ್ನೂರು ಫೈಜ್ನಟ್ರಾಜ್
ಗೆಳೆಯ ನಟರಾಜ್ ಅವರ ಅಕಾಲಿಕ ಮರಣ ಸೈಯದ್ ಫೈಜುಲ್ಲಾ ಅವರಿಗೆ ಅರಗಿಸಿಕೊಳ್ಳಲಾಗಲೇ ಇಲ್ಲ. ಮಿತ್ರ ತನ್ನೊಂದಿಗೆ ಸದಾ ಇರಬೇಕೆಂಬ ಹಂಬಲ. ಪರಿಣಾಮ ತನ್ನ ಹೆಸರಿಗೆ ಗೆಳೆಯನ ಹೆಸರನ್ನು ಸೇರಿಸಿಕೊಂಡರು. ಸಂತೆಬೆನ್ನೂರು ಫೈಜ್ನಟ್ರಾಜ್ ಎಂದು ಬದಲಾದರು.
ಬಹುಶಃ ನಾಡಿನ ಪತ್ರಿಕೆಗಳನ್ನು ನಿಯತಕಾಲಿಕಗಳನ್ನು ನಿರಂತರ ಓದುವವರಿಗೆ ಫೈಜ್ನಟ್ರಾಜ್ ಹೆಸರು ಚಿರಪರಿಚಿತ. ಅವರ ಹೆಸರು ನಾಡಿನ ಯಾವುದಾದರೂ ಪತ್ರಿಕೆಯಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಹಾಗೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಲೇ ಇರುವ ನಿರಂತರತೆ ಯನ್ನು ಅವರು ಕಾಯ್ದುಕೊಂಡಿದ್ದಾರೆ.
ದಾವಣಗೆರೆ ಜಿಲ್ಲೆ ಚನ್ನಗಿರಿಯ ಸಂತೆಬೆನ್ನೂರು ಗ್ರಾಮದಲ್ಲಿ ಜನನ. ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕರು. ’ಎದೆಯೊಳಗಣ ತಲ್ಲಣ’, ’ಬುದ್ಧನಾಗ ಹೊರಟು’ ಕವನ ಸಂಕಲನಗಳಾದರೆ ’ಮಂತ್ರದಂಡ, ಸ್ನೇಹದ ಕಡಲಲ್ಲ’ ಮಕ್ಕಳ ಕೃತಿಗಳು. ರೇಷು ಪ್ರಕಾಶನದ ಮೂಲಕ ಪುಸ್ತಕಗಳನ್ನು ಪ್ರಕಾಶಿಸುತ್ತಲೂ ಇದ್ದಾರೆ.
More About Author