Poem

ಅಜ್ಞಾತವಾಸಿ ಕವಿಯ ಏಕಾಂತ

ಬರುವ ಯಾವುದೋ ಅತಿಥಿಗಳಿಗಾಗಿ
ಕಾಯುತ್ತಾ ಕುಳಿತಂತೆ
ಕವಿಯ ಏಕಾಂತ
ಬರುತ್ತಾರೋ ಬರುವುದಿಲ್ಲವೋ
ಮಾತು ಕೊಟ್ಟವರು
ಈ ಹೊತ್ತು
ಯಾರಿಗೆ ಗೊತ್ತು?
ಬಾಯಿ ಕಳೆವುದೊಂದನು ಬಿಟ್ಟು
ಬೇರೇನೂ ಗೊತ್ತಿರದ
ಇನ್ನೂ ಕಣ್ಣೊಡೆಯದ ಗುಬ್ಬಿಮರಿಗಳು
ತಾಯ ಗುಟಕಿಗೆ ಕಾಯುತ್ತಾ ಕುಳಿತಂತೆ...
ಈ ಹೊತ್ತು
ಕೋರೆ ಬೀಡಿ ಸೇದುತ್ತಾ
ಕಫದ ಬಟ್ಟಲಿಗೆ ಉಗಿಯುತ್ತಾ
ತನ್ನದೇ ರೂಪಕ ಪ್ರತಿಮೆಗಳ ಹೀಯಾಳಿಸುತ್ತಾ
ಬೆನ್ನ ಹಿಂದಿನ ಭಯ
ಕಣ್ಣ ಮುಂದೆ ಬಾರಲೊಲ್ಲದು!
ಪ್ರವಾಹಕ್ಕೆದುರು ಈಸುಬಿದ್ದ
ಸಾಲ್ ಮನ್ ಮೀನಾಗಿದೆ
ಅಜ್ಞಾತವಾಸಿ ಕವಿಯ ಏಕಾಂತ
ಅವನ ಕತ್ತಲ ಮೂಲೆಯ
ಅದೆಷ್ಟೋ ಹಸ್ತಮೈಥುನಗಳು
ತಪ್ಪಿಹೋದ ಅಮಾಯಕರ ಮೇಲಿನ ಅತ್ಯಾಚಾರಗಳೋ?
ಬೇಕೆಂದೇ ಲೋಕದ ಕಣ್ಣಿಗೆ ಮರೆಮಾಚಿದ
ಮುಖೇಡಿ ಅಹಂಕಾರಿಯೊಬ್ಬನ ಆಕ್ರಂದನಗಳೋ?
ತಿಳಿಯುತ್ತಿಲ್ಲ
ಇಷ್ಟು ಮಾತ್ರ ಗೊತ್ತು
ಕದಿಯಲಾರರು ಯಾರೂ ಏನನ್ನೂಕವಿಯಿಂದ
ಕವಿತೆಯನ್ನೂ ಕೂಡ!
ಅವನ ಗ್ರಹಿಕೆ
ಭಯ ಬಯಕೆ
ನರಕ ಪುಳಕ
ತ್ರಿಶಂಕು ಸ್ವರ್ಗ
ಕಾಯಿಲೆ ಕನಸು ಕಲ್ಪನೆ
ಎಲ್ಲವೂ ಅವನದೇ ಸ್ವಂತ
ನಮ್ಮದು
ಕೆಲವೊಮ್ಮೆ ಮಾತ್ರ !
ಕವಿಗೋಷ್ಠಿ ಕವನವಾಚನ
ಆಟೊಗ್ರಾಫ್ ಅಭಿಮಾನಿಗಳ ಪತ್ರ
ಎಲ್ಲಾ ಮುಗಿದ ಈ ಹೊತ್ತು
ಮಾತು ಕೊಟ್ಟವರು
ಬರುತ್ತಾರೋ ಬರುವುದಿಲ್ಲವೋ
ಯಾರಿಗೆ ಗೊತ್ತು
ಬಾರದ ಯಾವುದೋ ಅತಿಥಿಗಳಿಗಾಗಿ
ಕಾಯುತ್ತಾ ಕುಳಿತಂತೆ
ಕವಿಯ ಏಕಾಂತ
ಅಭಿಜಾತ ಚಿತ್ರವೊಂದರ
ನಕಲು ಪ್ರತಿ ತೆಗೆಯುವ
ಅಭ್ಯಾಸಿಕ ಕಲಾವಿದನಂತೆ
ಸಾವಿನ ಬಟ್ಟಲಿಗೆ ಕುಂಚವನದ್ದಿ
ಅಜ್ಞಾತವಾಸಿ ಕವಿಯ ರೂಹು ಬರೆಯುತಿದೆ
ಅವನ ದೇಹದೊಳಗೆ
ಸರಪಳಿ ಕಟ್ಟಿ ಮಲಗಿಸಿದ
ಭಯಾನಕ ನಾಯಿಯಿದೆ
ಆಗಾಗ ಬೊಗಳುತ್ತದೆ
ಏನನ್ನು ಕಂಡು? ಏತಕ್ಕಾಗಿ?
ಅವನೊಳಗೊಂದು ಮಗುವಿದೆ
ಮಧ್ಯರಾತ್ರಿಯಲಿ ಎದ್ದು ಅಳುತ್ತದೆ
ಯಾರ ಸಲುವಾಗಿ?

ಆರಿಫ್ ರಾಜಾ

2012ರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ  ಆರಿಫ್‌ ರಾಜ ಅವರು ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಆರಕೆರಾ ಗ್ರಾಮದವರಾದರು. 1983 ಡಿಸೆಂಬರ್‌ 6ರಂದು ಜನಿಸಿದ ಅವರು ರಾಯಚೂರಿನ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಪಡೆದಿರುವ ಇವರು ಪ್ರಸ್ತುತ ಬಾಗಲಕೋಟೆಯ ಗವರ್ನಮೆಂಟ್ ಫಸ್ಟ್ ಗ್ರೇಡ್ ಡಿಗ್ರಿ ಕಾಲೇಜ್, ಇಳಕಲ್ ನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಇವರು ಬರೆದಿರುವ ಹಲವು ಕವಿತೆಗಳು ವಿವಿಧ ಭಾಷೆಗಳಿಗೆ ಅನುವಾದಗೊಂಡಿದೆ. ದಿನಕರ ದೇಸಾಯಿ ಪ್ರಶಸ್ತಿ, ಬೇಂದ್ರೆ ಪುಸ್ತಕ ಬಹುಮಾನ, ಗುಲ್ಬರ್ಗ ವಿಶ್ವವಿದ್ಯಾಲಯದ ಪುಸ್ತಕ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ದೊರೆತಿವೆ. ಇವರು ಅನುವಾದಿತ ಕವಿತೆಗಳು ಪರ್ಷಿಯನ್ ಭಾಷೆಯಲ್ಲಿ ರಚಿತವಾದ ಭಾರತದ ಸಮಕಾಲೀನ ಕವಿತೆಗಳು ಸಂಕಲನದಲ್ಲಿ ಪ್ರಕಟಗೊಂಡಿವೆ.

ಸೈತಾನನ ಪ್ರವಾದಿ (2006), ಜಂಗಮ ಫಕೀರನ ಜೋಳಿಗೆ (2009), ಬೆಂಕಿಗೆ ತೊಡಿಸಿದ ಬಟ್ಟೆ (2012), ನಕ್ಷತ್ರ ಮೋಹ(2017) ಎಂಬ ಹೆಸರಿನ ನಾಲ್ಕು ಕವನ ಸಂಕಲನಗಳು ಪ್ರಕಟವಾಗಿವೆ. ಭಾವನಾತ್ಮಕ ತಾಕಲಾಟವನ್ನು ಬಹುಸಂಸ್ಕೃತಿಯ ನೆಲೆಯಲ್ಲಿ ಪುನರ್‌ಸಂಘಟಿಸುವ ಇವರ ರಚನೆಗಳಲ್ಲಿ ಹೊಸ ನುಡಿಗಟ್ಟಿದೆ ಎಂದು ವಿಮರ್ಶಕರು ಗುರುತಿಸಿದ್ದಾರೆ.

More About Author