Poem

ಆಕಾಶ ಬುಟ್ಟಿ

ತೂಗಿ ಬಿಡುವೆನು ದೂರ ನಡೆದವರಿಗೆಂದು
ಬಣ್ಣ ಬಣ್ಣದ ಮುಗಿಲ ಬುಟ್ಟಿಯಿದನಿಂದು

ಹಸಿರು ಕನಸನು ಹೊದ್ದ ನೆಲದ ಕಿವಿಯಲ್ಲಿಂದು
ಗಾಳಿ ಹಾಡಿದೆ ಹಾಲು ತೆನೆಯ ಹಾಡು
ರತ್ನದೀಪದ ಸಾಲು ನಕ್ಷತ್ರ ಮಾಲೆಗಳ
ಕಂಡು ತಲೆಯೆತ್ತಿಹುದು ಮುಗಿಲ ಗೂಡು

ಕಾಲವೆ ಕತ್ತಲೆಯ ಕೋಲೂರಿ ನಿಲ್ಲಿಸಿದೆ
ಹಲವು ಹಂಬಲ ಹಾಳೆಗಳನು ಹಚ್ಚಿ
ಬದುಕಿನೆಣ್ಣೆಯ ಹೊಯ್ದ ಹಣತೆಯಲಿ ಬೆಳಗುತಿದೆ
ಜೀವ ಬೆಳಕಿನ ಗತಿಯ ಗರಿಯ ಬಿಚ್ಚಿ

ದೂರ ದಾರಿಯ ನಡೆದ ಹಿರಿಯರೆ ನಿಮಗಲ್ಲಿ
ದಾರಿ ತೋರಲಿ ನನ್ನ ಪುಟ್ಟ ಬೆಳಕು
ದುಃಖ ಚೀಲವ ಹೊತ್ತು ಸಾಗಿರುವ ಪಯಣಿಗರೆ
ಹಿಡಿ ಬೆಳಕು ನೀಡಿರಲಿ ಹೊಳೆವ ಬದುಕು

- ಸು. ರಂ. ಎಕ್ಕುಂಡಿ

ಸು.ರಂ. ಎಕ್ಕುಂಡಿ

ಸು.ರಂ. ಎಕ್ಕುಂಡಿಯವರು ಕನ್ನಡದ ಅತ್ಯಂತ ಶ್ರೇಷ್ಠ ಕಥನ ಕವನಗಳ ಕವಿ ಮತ್ತು ಸಾಹಿತಿ. ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗಣ್ಣ ಎಕ್ಕುಂಡಿ. ಇವರು ಹುಟ್ಟಿದ್ದು  20-01-1923ರಂದು, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ . 1944 ರಲ್ಲಿ ಬಿ.ಎ.(ಆನರ್ಸ್) ಪದವಿ ಪಡೆದ ಎಕ್ಕುಂಡಿಯವರು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲದಲ್ಲಿ ಪ್ರೌಢಶಾಲೆಯ ಅಧ್ಯಾಪಕರಾದರು. 35 ವರ್ಷಗಳ ಸೇವೆಯ ನಂತರ ಅಲ್ಲಿಯೆ ಮುಖ್ಯಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಅವರ ಕೃತಿಗಳು ಕಾವ್ಯ- ಶ್ರೀ ಆನಂದತೀರ್ಥರು, ಸಂತಾನ, ಹಾವಾಡಿಗರ ಹುಡುಗ, ಮತ್ಸ್ಯಗಂಧಿ, ಬೆಳ್ಳಕ್ಕಿಗಳು. 

ಕಥಾಸಂಕಲನ- ನೆರಳು. ಕಾದಂಬರಿ-ಪ್ರತಿಬಿಂಬಗಳು. ಪರಿಚಯ- ಶ್ರೀ ಪು.ತಿ.ನರಸಿಂಹಾಚಾರ್ಯರು. ಅನುವಾದ- ಎರಡು ರಶಿಯನ್ ಕಾದಂಬರಿಗಳು

ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಸಂದ ಪ್ರಶಸ್ತಿ ಪುರಸ್ಕಾರಗಳು- ಲೆನಿನ್ನರ ನೆನಪಿಗೆ ಎನ್ನುವ ಕೃತಿಗೆ 1970ರಲ್ಲಿ ಸೋವಿಯತ್ ಲ್ಯಾಂಡಿನ ನೆಹರು ಪುರಸ್ಕಾರ ದೊರೆತಿದೆ. "ಮತ್ಸ್ಯಗಂಧಿ" ಕವನ ಸಂಕಲನಕ್ಕೆ 1975 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ. ಬೆಳ್ಳಕ್ಕಿಗಳು ಹಸ್ತಪ್ರತಿಗೆ 1982 ರಲ್ಲಿ ಮುದ್ದಣ ಸ್ಮಾರಕ ಕಾವ್ಯ ಬಹುಮಾನ ದೊರೆತಿದೆ. ಬಕುಲದ ಹೂವುಗಳು" ಎಂಬ ಕೃತಿಗೆ 1992ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ. ಸಾಹಿತ್ಯಕ್ಕೆ ತಮ್ಮದೇ ಕೊಡುಗೆಗಳನ್ನು ನೀಡಿದ ಸು.ರಂ. ಎಕ್ಕುಡಿಯವರು 20-08-1995ರಂದು ನಿಧನರಾದರು

More About Author