
ಅಕ್ಷರಗಳಿಗೂ ಆಯಾಸವಾಗಿದೆ…
ಅರ್ಧ ಶತಮಾನಕ್ಕಿಂತಲೂ ಅಧಿಕ
ನನ್ನ ಬೆರಳಿನ ಹೊರಳುವಿಕೆಯಲ್ಲಿ
ನಾಲಿಗೆಯ ಚಲನೆಯಲ್ಲಿ
ಬೇಕು ಬೇಕಾದಂತೆ ಅಕ್ಷರಗಳು
ಬಿಡಿಯಾಗಿ – ಹೊಂದಿಕೊಂಡು ಪರಸ್ಪರ
ಶಬ್ದ-ವಾಕ್ಯಗಳಾಗಿ-ಉದ್ಗಾರಗಳೂ ಬಂದು
ಇನ್ನಿಲ್ಲದಷ್ಟು ಬಳಕೆ ಎಚ್ಚರದಲ್ಲಿ
ಎಚ್ಚರಿಕೆಯ ಬಳಕೆ ಖಂಡಿತಾ ಅಲ್ಲ.
ಕಾರಣಗಳಿದ್ದು-ಕಾರಣಗಳಿರದೆ ಲಿಪಿಗಳಲ್ಲಿ
ಅವುಗಳ ತರಹೆವಾರಿ ಧ್ವನಿಗಳಲ್ಲಿ
ಕಾಲ ಕಳೆದಂತೆ – ಅವೇ ಸರ್ವಸ್ವವಾಗಿ
ಅಕ್ಷರವೇ ಅನ್ನವಾಗಿ
ಅರುವತ್ತಾದಾಗ – ಥಟ್ಟನೆ ವೃತ್ತಿಯಿಂದ ನಿವೃತ್ತಿ
ನಿಧಾನವಾಗಿ ಅಕ್ಷರಗಳ ಬಳಕೆ
ನನಗರಿವಿಲ್ಲದಂತೆ – ಜೋಡಿಸಲಾಗದಂತೆ
ಚಲ್ಲಾಪಿಲ್ಲಿಯಾಗಿ ನೆಲಕ್ಕೊರಗಿದ್ದು ಕಂಡಾಗ
ಅನ್ನಿಸಿದ್ದು – ಅಕ್ಷರಗಳಿಗೂ ಆಯಾಸವಾಗಿದೆ.
ಒಂದಿಷ್ಟು ಕಾಲ ಒರಗಿ – ಕಳೆದುಕೊಂಡರೆ ಸುಸ್ತು
ಮತ್ತೆ ಕೈಗೆ – ಬಾಯಿಗೆ ಬರಬಹುದು
ಯಾವುದಕ್ಕೂ ಕಾಯುತ್ತಿದ್ದೇನೆ – ಅಂಥ ಕಾಲಕ್ಕೆ!
- ರವೀಂದ್ರ ಭಟ್ಟ ಕುಳಿಬೀಡು
ರವೀಂದ್ರ ಭಟ್ಟ ಕುಳಿಬೀಡು
ರವೀಂದ್ರ ಭಟ್ಟ ಕುಳಿಬೀಡು ಅವರು ಮೂಲತಃ ಸಾಗರದ ಅಗ್ರಹಾರದವರು. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಆಸಕ್ತಿ. ಅವರ ಹಲವಾರು ವಿಮರ್ಶಾ ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಯಾವುದೇ ಕೃತಿಯನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಬಲ್ಲ, ಹೊಸ ಹೊಳಹನ್ನು ಕೊಡಬಲ್ಲ ನೋಟ ಅವರದು. ಕವಿತೆಗಳ ರಚನೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.
More About Author