Poem

ಅಳತೆಗೋಲು

ಒಲವೆಂದರೆ ಹಾಗೇ ಮಾಪನವಿರದ
ಅಳತೆಗೋಲು
ಅಳೆಯಬಾರದು ಏನನ್ನೂ.
ಸಂಖ್ಯೆಗಳ ಬರೆದು ಪ್ರಮಾಣಗಳ
ಹೇಳಬಾರದು.
ಅಡ್ಡ ಉದ್ದ ಚೌಕ ಆಯತ
ಏನು ಬೇಕಾದರೂ ಆಗಬಹು
ಕಣ್ಣಳತೆಗೆಲ್ಲ ಅದು ಖಾತ್ರಿ ಆಗಿಬಿಡಬೇಕು.

ಸುತ್ತುವರಿದಿದ್ದರೆ ಅದು ಗೆರೆಯೇ ಅಲ್ಲ
ನೀನೆಷ್ಟೇ ಎಳೆದರೂ
ಒಳಗಿನ ಗೆರೆ ಬೆಳೆಯುವುದೇ ಇಲ್ಲ
ದಾಟಿ ಬೆಳೆದರೆ ಅಲ್ಲೊಂದು ಊನ
ನಾನಷ್ಟು ನೀನಷ್ಟು ಅವರಷ್ಟು ಇವರಿಷ್ಟು
ಎಂದು ಭಾಗ ಮಾಡಿಕೊಂಡರೆ
ಅಳತೆ ತಪ್ಪಿ ಅಯೋಮಯ.

ಅಳೆತೆಗೋಲಿಲ್ಲದೇ ಎಳೆವ ಗೆರೆ
ಬೆಳೆಸಬಹುದು ಎಷ್ಟು ಬೇಕಾದರೂ
ಅದಕ್ಕೊಂದು ಸಾಧನ ಹಿಡಿದರೆ
ಮುಯಗಿಯಲೇ ಬೇಕು
ಹಿಂದಿನದನ್ನೇ ಎತ್ತಿ ಮತ್ತೆ
ಮುಂದಿಡಬೇಕು.

ಒಂದರ ಜೊತೆ ಇನ್ನೊಂದು
ನೇರ ಎಳೆದರೆ ಬೆಳೆಯಬಹುದು
ಆದರೆ ಕೂಡುವದಿಲ್ಲ
ಅಳತೆಗೋಲ ಮರೆತು
ಸುಮ್ಮನೇ ಎಳೆಯುತ್ತಿರು
ಎಲ್ಲಾದರೂ ಒಮ್ಮೆ ಕೈ ಸೋತು
ಕೂಡಬಹುದು.

- ಸ್ಮಿತಾ ರಾಘವೇಂದ್ರ

ವಿಡಿಯೋ
ವಿಡಿಯೋ

ಸ್ಮಿತಾ ರಾಘವೇಂದ್ರ ಭಟ್

ಲೇಖಕಿ ಸ್ಮಿತಾ ರಾಘವೇಂದ್ರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಕಲ್ಲೇಶ್ವರ ಗ್ರಾಮದವರು.ಕಥೆ,ಕವನ, ಗಜಲ್, ಭಾವಗೀತೆ, ಚುಟುಕು, ಲೇಖನ ಹಾಯ್ಕು ಹೀಗೆ ಸಾಹಿತ್ಯ ಹಲವು ಪ್ರಕಾರದ ಬರವಣಿಗೆ ಇವರ ಹವ್ಯಾಸಗಳು. ನಾಡಿನ ವಿವಿಧ ಪತ್ವಿರಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ. ಕಾರವಾರ ಆಕಾಶವಾಣಿ, ಧಾರವಾಡ ಆಕಾಶವಾಣಿಯಲ್ಲಿ ಕಥೆ ಕವನಗಳ ವಾಚನ ಹಾಗೂ  ಮೈಸೂರು ದಸರಾ ಕವಿಗೋಷ್ಠಿ ಸೇರಿದಂತೆ ಹಲವು ವೇದಿಕೆಗಳಲ್ಲಿ ಕವನಗಳನ್ನು ಪ್ರಸ್ತುತಪಡಿಸಿದ್ದಾರೆ. ’ಕನಸು ಕನ್ನಡಿ’ ಎಂಬುದು ಇವರ ಮೊದಲ ಗಜಲ್ ಸಂಕಲನ.

More About Author