Poem

ಅಮ್ಮ ಜೋರಿರಬೇಕಿತ್ತು!!

ಹಳಿ ತಪ್ಪುವ
ಮಕ್ಕಳ ನೆನೆದು ಕಣ್ಣೀರಾಗುವ
ಅಮ್ಮ
ಕಿವಿ ಹಿಂಡುವಷ್ಟಾದರೂ
ಜೋರಿರಬೇಕಿತ್ತು!
ಪ್ರೀತಿ ಸಲಹಿದ ಮನ
ನೋಯಲು
ಗದರುವಷ್ಟಾದರೂ
ಜೋರಿರಬೇಕು!

ಗಾಳಿ ಸುದ್ದಿಗೆ
ಕಣ್ಣೀರಾಗುವ ಆಕೆ
ಮಾತಿಗೆ
ಮರುಮಾತಾಗುವಷ್ಟಾದರೂ
ಜೋರಿರಬೇಕಿತ್ತು!
ಮಾಡದ ತಪ್ಪಿಗೆ
ಬೊಟ್ಟು ಮಾಡುವ ಲೋಕದ
ಬೆರಳು ಕೆಳಗಾಗುವಷ್ಟಾದರೂ
ಜೋರಿರಬೇಕು!!

ಅಪ್ಪನ ಮಾತಿಗೆ
ಸಿಡಿಯುವ ಮಕ್ಕಳ
ಕೆನ್ನೆ ನೋಯುವಷ್ಟಾದರೂ
ಜೋರಿರಬೇಕಿತ್ತು!
ಮಡದಿಯ ಮಾತಿಗೆ
ಅಲ್ಲಾಡಿಸುವ ತಲೆಗೆ
ಕುಟ್ಟೀಸ್ ಹಾಕುವಷ್ಟಾದರೂ
ಜೋರಿರಬೇಕು!!

ಸೊಸೆಯಂದಿರ
ಸಿಡುಕಿಗೆ
ಮೂಲೆಸೇರುವ ಅಮ್ಮ
"ಸರಿತಪ್ಪು"
ತಿಳಿಸುವಷ್ಟಾದರೂ
ಜೋರಿರಬೇಕಿತ್ತು!
ಬಂಧಗಳ ನಂಜಿಗೆ
ಅಂಜುವ ಆಕೆ
ಶುಂಠಿಯಷ್ಟಾದರೂ
ಖಾರವಿರಬೇಕಿತ್ತು!!

ವಾತ್ಯಲ್ಯವುಣಿಸಿದ ಮೊಗದ
ನಗು ಕಸಿಯುವ ಮಾತಿಗೆ
ಮರುಮಾತಾಗುವಷ್ಟಾದರೂ
ಜೋರಿರಬೇಕು!
ಮುತ್ತನ್ನಷ್ಟೇ ಕೊಟ್ಟ
ಅಮ್ಮ
ಒಂದೆರಡೇಟು
ಕೊಡುವಷ್ಟಾದರೂ
ಜೋರಿರಬೇಕಿತ್ತು;
ಕನಿಷ್ಟ ತಮಾಷೆಗಾದರೂ
ಒಂದೆರಡು ಬಾರಿಸಬೇಕಿತ್ತು!!!

ಅಸಪ ಗೇರುಕಟ್ಟೆ

ವಿಡಿಯೋ
ವಿಡಿಯೋ

ಅಸಪ ಗೇರುಕಟ್ಟೆ

ಅಸಪ ಗೇರುಕಟ್ಟೆ ಅವರು ಮೂಲತಃ ದಕ್ಷಿಣಕನ್ನಡದ ಬೆಳ್ತಂಗಡಿಯವರು. 1995 ಮೇ 1ರಂದು ಜನನ. ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯ. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಅವರು ತಮ್ಮನ್ನು ಬರವಣಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಾಹಿತ್ಯ ಪ್ರಕಾರ ಕವನ.

More About Author