Poem

ಅಮ್ಮ ಮತ್ತು ಪುಟ್ಟಿ

ಎಲ್ಲಿದ್ದೀಯೇ ಪುಟ್ಟೀ
ಓ ಎನ್ನಲಾಗದೇನೇ...

ಇಲ್ಲೇ ಇದೀನಿ ಅಮ್ಮಾ ಮಾಷಾ-ಬೇರ್ ನೋಡ್ತಾ
ಅಂತು ಮುದ್ದು ಕೋಗಿಲೆ

"ಅದೆಂಥದೇ ಚಡ್ಡಿ ತಿರುಗಿದೆ" ಕೇಳಿದೆ
"ಇಪಾಪಲ್ಟಿನಾ?" ಕೇಳಿತು ಕೋಗಿಲೆ

ತೀಟೆ ಮಾಡ್ಬೇಡ್ವೆ ಸುಂದ್ರಿ ಎಂದರೆ
ನೀನೆ ಸುಂದ್ರಿ ನಾನಲ್ಲ ಅಂತು ಕೋಗಿಲೆ

ಇನ್ನೂ ಏನೇನೋ... ಕೇಳುತ್ತಲಿದ್ದೆ
"ನಿಂದು ಒಳ್ಳೆ ಕತೆ ಆಯ್ತು ಅಮ್ಮ...
ಕಾಟ ಕೊಡ್ತಿದೀಯ ಅಮ್ಮ..." ಅಂದು
ಬಿಡೋದೇ ಕೋಗಿಲೆ?!
ಬೆಸ್ತು ಬಿದ್ದು ಕೂತೆ

ಸುಸ್ತಾಯ್ತು ಕೋಗಿಲೆಗೆ
ಅಮ್ಮನ ತೊಡೆ ಮೇಲೆ
ಸಕ್ಕರೆ ನಿದ್ದೆ

ಹತ್ತು ನಿಮಿಷ ಸುಮ್ಮನಿದ್ದರೆ ಸಾಕು
ಹಣೆ ಮೇಲೆ ಮುತ್ತೊಂದನಿತ್ತು
ಮುದ್ದುಗರೆದು
ಸುಮ್ಮನೆದ್ದು ಬರಲು
ಆದರೆ ಈ ತುಂಟಪೋರಿಯರು
ಹಾಗೆಲ್ಲ ಕೈಗೆ ಸಿಗುವವರಲ್ಲ
ಅವರು ಮಲಗಿ ನಿದ್ರಿಸುವವರೆಗೂ
ನಾವು ಕಾಯಬೇಕು
ದೇವರಂತೆ ಮಲಗಿದ ಮೇಲೆ
ಮನಸೋ ಇಚ್ಛೆ ಮುದ್ದಿಸಬೇಕು

ಅವಳ ಕೆನ್ನೆಗಳು ಹೊಳೆಯುತ್ತಿವೆ
ಗಲ್ಲದ ಗುಳಿ ಆಳಕ್ಕೆ ಕುಸಿದಿದೆ
ಅರೆ ತೆರೆದ ಕಣ್ಣುಗಳು
ಗಸ್ತು ತಿರುಗುತ್ತಿವೆ
ಶ್ ಸದ್ದು!
ಎದ್ದರೆ ಮುಗೀತಲ್ಲಾ
ಕೇರಿಯೇ ಎದ್ದು ಕೂರಬೇಕು
ಬಜಾರಿ...

ಪುಟ್ಟಿಯರ ಧ್ವನಿಯೇ ಹೀಗೆ
ಎಷ್ಟೊಂದು ಜೋರು
ಹುಟ್ಟಿನಿಂದಲೇ...
ಈಗಂತೂ ನನ್ನ ಧ್ವನಿ
ಯಾರಿಗೂ ಕೇಳಿಸುವುದೇ ಇಲ್ಲ
ಸಣ್ಣವಳಿದ್ದಾಗ ನನ್ನಮ್ಮ ಬಯ್ಯುತ್ತಿದ್ದ ನೆನಪು
ಅದೆಂಥ ಬೊಂಬಾಯಿಯೇ ನಿನದು ಎಂದು
ಪುಟ್ಟಿಯ ಧ್ವನಿ ಕೇಳಿದಾಗೆಲ್ಲ ಕಣ್ಣೀರು
ಒಮ್ಮೊಮ್ಮೆ ಖುಷಿಗೆ
ಒಮ್ಮೊಮ್ಮೆ ಸಂಕಟಕ್ಕೆ

"ಅಮ್ಮಾ" ಚಿಟಾರನೆ ಚೀರಿದಳು ಪುಟ್ಟಿ
ನಾಲ್ಕು ಮನೆಗೆ ಕೇಳುವಂತೆ
ಮೆಲ್ಲಗೆ ಅವಳ ಬಾಯಿ ಮುಚ್ಚಿ
ತಬ್ಬಿ ಮಲಗಿಸುವಾಗ ನನಗೆ
ಅವಳ ಧ್ವನಿಯದೇ ಚಿಂತೆ

-ಆಶಾ ಜಗದೀಶ್

ಆಶಾ ಜಗದೀಶ್

ಕವಯತ್ರಿ ಆಶಾ ಜಗದೀಶ್ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಲವಾರು ಕತೆ, ಲೇಖನ, ಕವಿತೆ, ಪ್ರಬಂಧಗಳು ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ. ‘ಮೌನ ತಂಬೂರಿ’ ಅವರ ಚೊಚ್ಚಲ ಕವನ ಸಂಕಲನ.

More About Author