Poem

ಅಪೂರ್ವ ಬೆಳಕು

ಸೀತೆಯ ಸೆರಗು ಹರಡಿದೆ
ಸುರಗಿರಿಯ ಸುರ ಶೃಂಗದಲಿ
ರಾಮಬಾಣ ಬಿಟ್ಟರೇ ಅದು
ಎಂದಿಗೂ ತಪ್ಪದು ಕನಕವೇ !

ಸೀತೆಯ ಬೆಟ್ಟ ಅದು ಜನಕನ
ಪ್ರೀತಿ ಪುತ್ರಿಯ ಆಡುಂಬೋಲ
ರಾಮನು ಹಾದು ಹೋದಾ ಈ
ನೆಲ ಕ್ಷಾತ್ರ ತೇಜಸ್ಸಿನ ರಣದುಂಧುಬಿ

ನೆಲದ ಋಣಕಾಗಿ ಮಡಿದವರ ನೆನೆ
ಭಾವೈಕ್ಯದ ಭಾವನೆಗಳನು ಸ್ಮರಿಸು
ಜೈಮಿನಿ ಭಾರತದ ದೇವಪುರದಲಿ
ಇರುವ ಲಕ್ಷ್ಮೀಶನೇ ಸಾಕ್ಷಿ ನೋಡಿದಕೆ

ದಾಸಿಮಾರ್ಯರು ವಚನ ಜನಕರು
ಸೀತಾಫಲಗಳ ಮೆಚ್ಚಿದಳು ವೈದೇಹಿ
ಸಾಕ್ಷಿ ಇದಕೆ ನೋಡಿ ವೇಣುಲೋಲ
ಸುರಗಿರಿ ರಾಮಾಯಣವಿದಲ್ಲವೆ ?

ವೈದೇಹಿ ರಾಮ ಲಕ್ಷ್ಮಣ ಹನುಮರು
ಹಾದು ಹೋಗಿರುವ ಶಿಬಾರ ಬಂಡಿ
ಬಾಣದ ಮೋಹಕೆ ಜನ ಮರುಳಾಗಿ
ಸಂಭ್ರಮಿಸಿದರು ಲಾವಣಿ ಹಾಡಿ!

ಹೊಸ ಇತಿಹಾಸ ನಿರ್ಮಿಸಿತಿಂದು
ವೆಂಕಟಾಪುರದ ಸೀತಾ ಸೆರಗು
ರಾಮನೇ ಸಾಕ್ಷಿ ಬಾಣದ ಭಾರಕೆ
ಯುಗಧಮ೯ದ ಅಪೂರ್ವ ಬೆಳಕು

- ಶ್ರೀನಿವಾಸ ಜಾಲವಾದಿ

ಶ್ರೀನಿವಾಸ ಜಾಲವಾದಿ

ಲೇಖಕ  ಶ್ರೀನಿವಾಸ ಜಾಲವಾದಿ ಅವರು ಜನಿಸಿದ್ದು ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿಯಲ್ಲಿ. ಇವರ ಸ್ವಂತ ಊರು ಜಾಲವಾದಿ. 1988 ರಿಂದ ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ವಾಸವಿದ್ದಾರೆ. ಬಿ.ಎ. ಬಿ.ಈಡಿ ಪದವೀಧರರು. ಸದ್ಯ, ಸುರಪುರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಉಪಪ್ರಾಂಶುಪಾಲರಾಗಿ ನಿವೃತ್ತರು. .ಉತ್ತರ ಕರ್ನಾಟಕ ಯುವ ಲೇಖಕರ ವೇದಿಕೆಯ ಸಂಚಾಲಕರು. ಸುರಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು. ‘ಕಲಾ ಮಾಧ್ಯಮ ವಿಜಾಪುರದಿಂದ ‘ತಿರುಗುಪ್ಪ’ ನಾಟಕವನ್ನು ದೆಹಲಿ, ಮುಂಬಯಿ ಸೇರಿದಂತೆ ರಾಜ್ಯದ ವಿವಿಧೆಡೆ ಪ್ರದರ್ಶನ ಹಾಗೂ ಬೆಂಗಳೂರು ದೂರದರ್ಶನದಿಂದ ನಾಟಕ ಪ್ರಸಾರ. ಖ್ಯಾತ ನಿರ್ದೇಶಕ ಟಿ.ಎಸ್.ರಂಗಾ ಅವರ ನಿರ್ದೇಶನದ ‘ಮೌನಕ್ರಾಂತಿ’ ಗೆ ಸಂಭಾಷಣೆ, ನಟ ಹಾಗೂ ಸಹಾಯಕ ನಿರ್ದೇಶಕರು. ವಿವಿಧ ಧಾರಾವಾಹಿಗಳ ಹಾಗೂ ನಾಟಕಗಳ ವಿಮರ್ಶಕರು, ಆಕಾಶವಾಣಿ ಕಲಾವಿದರು ಕೂಡ. 

 ಕೃತಿಗಳು : ಕರ್ನಾಟಕದ ಕವಿತೆಗಳು, ಕನಸುಗಳು ಸಾಯುತ್ತಾವೆ., (ಕವನ ಸಂಕಲನಗಳು) , ಮೀಸೆ ಮಾವ (ವಿಡಂಬನೆ-ಹಾಸ್ಯ ಸಂಕಲನ), ಸರಪಳಿ  (ಕಥಾಸಂಕಲನ) : ಸಂತಸ ಅರಳುವ ಸಮಯ (56 ಲೇಖಕರನ್ನೊಳಗೊಂಡ ಲಲಿತ ಪ್ರಬಂಧ ಸಂಕಲನದ ಸಂಪಾದನೆ) ಹಾಗೂ ಕರ್ನಾಟಕದ ಶೇಕ್ಸ್ ಪಿಯರ್ ‘ಕಂದಗಲ್ ಹಣಮಂತರಾಯ (ಪ್ರಜಾವಾಣಿ), ದಕ್ಷಿಣ ಭಾರತದ ಮೆಹಂಜದಾರೋ ಹರಪ್ಪ-ಬೂದಿಹಾಳ (ಸುಧಾ), ತುಷಾರ ಬೆಳ್ಳಿ ಮಹೋತ್ಸವದಲ್ಲಿ ಲಲಿತ ಪ್ರಬಂಧಕ್ಕೆ ಪ್ರಥಮ ಬಹುಮಾನ ಲಭಿಸಿದೆ.

ಪ್ರಶಸ್ತಿ-ಗೌರವಗಳು: ಜಿಲ್ಲಾ ಅತ್ಯತ್ತಮ ಶಿಕ್ಷಕ ಪ್ರಶಸ್ತಿ (1997),  ಕಡಕೋಳ ಮಡಿವಾಳೇಶ್ವರ ಪ್ರಶಸ್ತಿ (1995), ಡಾ. ಪುಟ್ಟರಾಜ ಗವಾಯಿಗಳ ಪ್ರಶಸ್ತಿ (ಜೀವಮಾನ ಸಾಧನೆ), ಶ್ರೇಷ್ಠ ಸಂಘಟಕ ಪ್ರಶಸ್ತಿ(.2012), ಚಂದನ (ದೂರದರ್ಶನ) ‘ಬೆಳಗು’ ಕಾರ್ಯಕ್ರಮದಲ್ಲಿ ಸಂದರ್ಶನ,  77ನೇ ಅಖಿಲಭಾರತ ಸಾಹಿತ್ಯ ಸಮ್ಮೇಳನ ಬೆಂಗಳೂರು-ಗೌರವ ಸನ್ಮಾನ., ಯಾದಗಿರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ( 2012), ಕಲಾಮಾಧ್ಯದಿಂದ ‘ರಂಗಗೌರವ’ ಪ್ರಶಸ್ತಿ (2014), ‘ಮೀಸೆ ಮಾವ’ ಕ್ಕಾಗಿ ಗೋವಾ ಕನ್ನಡಿಗರ ಪ್ರಶಸ್ತಿ, ತರೀಕೆರೆಯ ಕೀರ್ತಿ ಪ್ರಕಾಶನದಿಂದ ಕನ್ನಡ ಶ್ರೀ ಪ್ರಶಸ್ತಿ, ಉದಯ ವಾಹಿನಿಯ ಬಾಳಿಗೊಂದು ಬೆಳಕು ಕಾರ್ಯಕ್ರಮದಲ್ಲಿ ಜಾಲವಾದಿ ಸಾಹಿತ್ಯದ ವಿಶ್ಲೇಷಣೆ, 

 

 

More About Author