Poem

ಆಸ್ಮಾಳಿಗೆ....

ನಿನ್ನ ಅಮಲಿನಲ್ಲಿ ಕಳೆದು ಹೋದ ಎಷ್ಟೋ ಕವಿತೆಗಳು ಹಿಂತಿರುಗಲೇ ಇಲ್ಲ,
ಬಹುಶಃ ನನ್ನದೆಯ ವಿಳಾಸ ಮರೆತಿರಬಹುದು.
ನನ್ನೂರಿಗೆ ಒಂದಿಷ್ಟು ಬಿಸಿಲಾದರೂ ಕಳಿಸಿ ಕೊಡು,
ಚಳಿಗಾಲದ ನಿನ್ನ ನೆನಪಿಗೆ ಬಿಸಿಯಾದರೂ ತಾಕಲಿ
ಹೂ ಬಿಟ್ಟ ಮಳೆ ಹನಿಗೆ ನಿನ್ನ ಘಮಲಿನ ತೇವವಾದರೂ ಸೋಕಲಿ!

ಸುಟ್ಟು ಕರಕಲಾದ ವಿರಹದ ಅಂಗಾಲಿಗೆ ಒಂದು ಮುತ್ತಾದರೂ ಕೊಡಬೇಕಿತ್ತು.
ಕಂದೀಲು ಕಟ್ಟಿಕೊಂಡು ಓಡಾಡುವ ಬೆಳಕಿಗೂ ಬೇಸರವಾಗುತ್ತಿದೆ, ನಿನ್ನ ಕಣ್ಣೊಳಗಿನ ಕತ್ತಲೆಯ ಸುರಿದು ಬಿಡು.
ಬೆಳದಿಂಗಳ ಹೆರುವ ಚಂದ್ರನಿಗೂ ವಿರಾಮವಿರಲಿ
ನಕ್ಷತ್ರಗಳ ನಗರಕ್ಕೆ ರಜೆ ಸಿಗಲಿ!

ಆಕಾಶದ ಅಂಚಿನಲ್ಲಿ ಮಿಂಚೊಂದು ಮೀನು ಹಿಡಿಯುವಾಗ,
ಗಾಳಕ್ಕೆ ಸಿಕ್ಕ ನಿನ್ನ ನಗು ಕಡಲ ಮುತ್ತಿಗೆ ಇರಿವ ಚೂರಿಯಾಗಿದೆಯಂತೆ.
ಪಾಪ ಆ ಮುತ್ತಿಗೂ ಬದುಕಲು ಅವಕಾಶ ಕೊಡು,
ಕಾರ್ಮೋಡದ ಮಿಂಚಿನೆದೆಗೂ ಒಂದಿಷ್ಟು ಬೆಳಕನಿಡು!

ಕಾಡಹಾದಿಯಲ್ಲಿ ಬಿತ್ತಿದ ನವಿಲ ಹೆಜ್ಜೆಗಳೊಡನೆ ಸ್ಪರ್ಧೆಗಿಳಿಯಬೇಡ
ಪಾಪ ಬಡಪಾಯಿ ನವಿಲು ಒಮ್ಮೆಯಾದರೂ ವಿಶ್ವಸುಂದರಿಯ ಕಿರೀಟ ತೊಡಲಿ!
ನೀ ತೊಟ್ಟು ಬಿಟ್ಟ ಕಿರೀಟಗಳೆಲ್ಲ ವಿಶ್ವದಾಖಲೆಯಲ್ಲಿ ದಾಂಧಲೆ ಮಾಡುತ್ತಿವೆ.
ನಿನ್ನ ಮುಂಗುರುಳಿನ ಮೌನವನ್ನು ಬರೆದಿಡಲು ಅನುಮತಿ ಕೊಡು,
ನಿನ್ನ ಹೊಗಳುವ ಕವಿಯೊಬ್ಬನ ಕವಿತ್ವಕ್ಕೂ ಜೀವ ಬರಲಿ!

- ಚಾಂದ್ ಪಾಷ ಎನ್ ಎಸ್

ಚಾಂದ್ ಪಾಷ

ಸೂಕ್ಷ್ಮಪ್ರಜ್ಞೆಯುಳ್ಳ ಸಮಕಾಲೀನ ಯುವಕವಿ ಚಾಂದ್ ಪಾಷ ಅವರು ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಂದೇವಾಲ ಗ್ರಾಮದವರು. 1994 ಮೇ 05ರಂದು ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಎಂ.ಎ. ಪದವಿ ಪಡೆದಿದ್ದು, ಈಗ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ‘ಮೌನದ ಮಳೆ’ ಕವನ ಸಂಕಲನ(2015), ಧೂಳಿಡಿದ ನಕ್ಷತ್ರ ಎಂಬ ನಾಟಕ ಪ್ರಕಟವಾಗಿವೆ. ಇಟಲಿಯ ಪಿಯಾಸೆಂಜಾದಲ್ಲಿರುವ ಪಿಕ್ಕೋಲೋ ಮ್ಯುೂಸಿಯೊ ಡೆಲ್ಲಾ ಪೊಸಿಯಾ ದಲ್ಲಿ ಇವರ ಕವಿತೆಯೊಂದು ಪ್ರದರ್ಶನವಾಗಿದೆ. 

ಸಂಗಾತ ಪುಸ್ತಕ ಪ್ರಕಾಶನದ 2020ರ ಸಾಲಿನ ಚಿ.ಶ್ರೀನಿವಾಸರಾಜು ಕಾವ್ಯ ಪುರಸ್ಕಾರ, ಕುವೆಂಪು ಯುವ ಕವಿ ಪ್ರಶಸ್ತಿ, ಕಾವ್ಯ ಮನೆ ಕಾವ್ಯ ಪುರಸ್ಕಾರ, ಎನ್ಕೆ ಕಾವ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 2021ನೇ ಸಾಲಿನ ಅವ್ವ ಪ್ರಶಸ್ತಿ ಲಭಿಸಿದೆ. 

More About Author