Story

ಅವಳು ಅಂಟಿಸಿಕೊಂಡ ಸುಖದ ನಗುವಿನ ವಿಳಾಸ ತಿಳಿಯಲು ಆ ಹಾಸು ಪರದಾಡಿತು

2022ನೇ ಸಾಲಿನ ಬುಕ್ ಬ್ರಹ್ಮ ಸ್ವಾತಂತ್ಯ್ರೋತ್ಸವ ಕಥಾಸ್ಪರ್ಧೆಯ ಸಮಾಧಾನಕರ ಬಹುಮಾನ ಪಡೆದ ನಂದಿನಿ ಹೆದ್ದುರ್ಗ ಅವರ ‘ಬಾಗಿದ ರೆಪ್ಪೆಯ ಅಡಗುತಾಣದಲ್ಲಿ’ ಕತೆ ನಿಮ್ಮ ಓದಿಗಾಗಿ..

'ಕಿಸ್ ಮಿ ಹಿಯರ್..!''
ಇನಶರ್ಟ್ ಮಾಡಿದ್ದ ನೇವೀಬ್ಲೂ ಬಣ್ಣದ ಸ್ವೆಟ್ ಟಾಪ್ ಅನ್ನು ಎಡಬದಿಯಲ್ಲಿ ತುಸುವೇ ಮೇಲಕ್ಕೆತ್ತಿ ತನ್ನ ಸುಂದರ ನಡುವಿನ ತಿರುವಿನೆಡೆಗೆ ಬೆರಳು ತೋರಿದಾಗ ಎದುರಿಗಿದ್ದ ಆ ಕತೆಗಾರರು ಒಮ್ಮೆಗೆ ದಿಗಿಲು ಬಿದ್ದರು.
ಆದೇಶದಂತೆ ಬಂದ ಅವಳ ಮಾತನ್ನು ಶಿರಸಾವಹಿಸಿ ಪಾಲಿಸುವ ವಿಧೇಯ ಜೀವದಂತೆ ಮೆಲ್ಲಗೆ ಕೆಳಕ್ಕೆ ಬಗ್ಗಿ  ತಕ್ಷಣ ಮತ್ತೆ ಕತ್ತೆತ್ತಿದರಾದರೂ ಅಚಾನಕ್ಕಾಗಿ ಸಿಕ್ಕ ಈ ಅಮೃತಘಳಿಗೆಗೆ ತಾನು ಹೇಗೆ ಸ್ಪಂದಿಸಿದೆನೋ ಎಂಬ ಗೊಂದಲದಲ್ಲಿತ್ತು ಅವರ ಜೀವ.

ಮುಂದಕ್ಕೆ ಬಾಗಿದಾಗ ಹಣೆಯ ಮೇಲೆ ಬಿದ್ದಿದ್ದ ತನ್ನ ಜೊಂಪೆಗೂದಲನ್ನು ಹಿಂದಕ್ಕೆ ತಳ್ಳುತ್ತಾ ಸಣ್ಣ ಧೈರ್ಯದಿಂದ ಅವಳತ್ತ ನೋಡಿದರೆ ಈಗಷ್ಟೇ ಸಿಕ್ಕಿದ ಮುತ್ತನ್ನು ಜೀವಕೋಶದಾಳಕ್ಕೆ ಇಳಿಸಿಕೊಳ್ಳುತ್ತಿರುವಳೋ ಎಂಬಂತೆ ಕಣ್ಣು ಮುಚ್ಚಿದ್ದಳು.
ಒಂದೆರಡು ಸೆಕೆಂಡ್ ಕಳೆದಿರಬಹುದು.
ಮೆಲ್ಲಗೆ ಅವಳಷ್ಟಕ್ಕೆ ಅವಳೇ ತೀರ ಸನಿಹ ನಿಂತ ಜೀವಕ್ಕೂ ಕೇಳದ ಸ್ವರದಲ್ಲಿ 'ಮೇಕ್ ಎ ಲವ್ ಬೈಟ್' ಎಂದಾಗ ಮಾತ್ರ ವಯಸ್ಸಿನ ಕಾರಣದಿಂದ  ಶ್ರವಣ ಸಾಮರ್ಥ್ಯ ಕುಗ್ಗಿದ ಕಥೆಗಾರರಿಗೆ ಏನು ಹೇಳಿದಳೆಂಬುದು ಸ್ಪಷ್ಟ ಅರಿವಾಗಲಿಲ್ಲ.
'ಏನಮ್ಮಾ' ಎನ್ನಬೇಕೆಂದು ತಯಾರಾಗಿದ್ದ ಅವರಿಗೆ ಧ್ವನಿಪೆಟ್ಟಿಗೆಯೂ ಯಾಕೋ ಸಹಕರಿಸಲಿಲ್ಲ.
ತಾನು ಕೇಳಿಸಿಕೊಂಡಿದ್ದೇ ಅವಳು ಹೇಳಿದಳಾ ಅಥವಾ ನಾನು ಬೇರೆ ಕೇಳಿಸಿಕೊಂಡೆನಾ ಎಂಬ ಗೊಂದಲ ಆವರಿಸಿತಾದರೂ ಮೊದಲಿನಷ್ಟು ಗಾಬರಿಯಾಗಲಿಲ್ಲ.
ಯಾವುದೋ ಮಾಯಕದಲ್ಲಿ ಅವಳ ಮಾತು ಅರ್ಥವಾದಂತೆ ಕೆಳಕ್ಕೆ ಬಗ್ಗಿ ಹೂಪಕಳೆಗಿಂತಲೂ ಮೃದುವಾದ‌ ಅವಳ ನಡುವನ್ನು ತುಸುವೇ ಜೋರಾಗಿ ಕಚ್ಚಿ‌ ಮತ್ತೆ ಅವಳನ್ನು ನೋಡಿದರು.ಅವಳ ಕೆನ್ನೆ ಹನ್ನೆರಡರ ನಡುಮದ್ಯಾಹ್ನದ ಸೂರ್ಯನಂತೆ ಹೊಳೆಯುತ್ತಿತ್ತು.
ಅವಳಿನ್ನೂ ಕಣ್ಣು ತೆರೆದಿರಲಿಲ್ಲ.

ನಾಚಿದ ಸಂಜೆಯೊಂದು  ನಡುಮದ್ಯಾಹ್ನಕ್ಕೆ ತೆಕ್ಕೆ ಬೀಳುವ ಹೊತ್ತು ಅದು.
ಹೊರಗೆ ರಸ್ತೆ ಬದಿಯಲ್ಲಿದ್ದ ಮುತ್ತುಗದ ಮರದಿಂದ  ಕೆಮ್ಮನೆ ಕೆಂಪು ಮುತ್ತುಗದ ದಳಗಳು ದಳದಳ ತೊಟ್ಟು ಕಳಚಿ ಉದುರುವಾಗೆಲ್ಲ ಒಂದು ಮೋಹದ ಗಾಳಿ ಬೀಸಿ ತಮ್ಮನ್ನು ಈ ಕರೀಕರೀ ಟಾರು ರಸ್ತೆಯಿಂದ ಇಷ್ಟೇ ಇಷ್ಟು ಪಕ್ಕಕ್ಕೆ ತಳ್ಳಿಹೋದರೆ ಸಾಕೆಂಬಂತೆ ಯಾರನ್ನೋ ಬೇಡಿಕೊಳ್ಳುತ್ತಿದ್ದವು.
ಮಹಾನಗರದ ಪ್ರತಿಷ್ಠಿತ ರೆಸಿಡೆನ್ಷಿಯಲ್ ಏರಿಯಾದ ಹೆಚ್ಚು ಗದ್ದಲಗಳಿಲ್ಲದ ಆ ರಸ್ತೆ ಆಗಿನ್ನೂ ಮದ್ಯಾಹ್ನದ ಸಣ್ಣ ನಿದ್ದೆಯಿಂದ ಬಿಡಿಸಿಕೊಂಡು ಹದಬೇಸರದಲ್ಲಿ ಆಕಳಿಸುತ್ತಿತ್ತು.
ಅವಳ ಮುಖದಲ್ಲೀಗ ಏನನ್ನೋ ಗೆದ್ದ ನಗುವೊಂದು ಕಂಡೂ ಕಾಣದಂತೆ ಮೆತ್ತಿಕೊಂಡಿತ್ತು. ಕತೆಗಾರರು ಈಗಷ್ಟೇ ಎರಡು ಆದೇಶಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಧೈರ್ಯದಿಂದಾಗಿ ತಮ್ಮ ಸುಕ್ಕುಗಟ್ಟಿದ್ದ ನಡುಗುವ ಕೈಗಳಿಂದ ಅವಳ ನಡುವನ್ನು ಮೆಲ್ಲಗೆ ಬಳಸುತ್ತ ತುಟಿಯನ್ನು ಮತ್ತೊಮ್ಮೆ ಹತ್ತಿರಕ್ಕೆ ತಂದರಾದರೂ ಅದಕ್ಕೆಲ್ಲ ಅವಳ ಬಳಿ ಸಮಯ, ಆಸಕ್ತಿ ಇಲ್ಲವೆನ್ನುವಂತೆ ನಡುವಿನರೆಗೂ ಇಳಿಬಿದ್ದಿದ್ದ ತನ್ನ ನೀಳ ಕಪ್ಪು ಹೆರಳನ್ನು ಅವಸರದಲ್ಲಿ ಸುತ್ತಿ ತುರುಬು ಬಿಗಿದುಕೊಂಡಳು.

'ನಿಮ್ಮನ್ನು ಭೆಟ್ಟಿಯಾಗಲು  ಈ ಮದ್ಯಾಹ್ನ ಮನೆಗೆ ಬರುವೆ' ಎಂಬ ಅವಳ ಸಂದೇಶ ಅವರ ಮೊಬೈಲಿನೊಳಗಿಳಿದು ನೋಟಿಫಿಕೇಶನ್ ಬಂದಾಗ ಅವರ ಪರಿಚಯಕ್ಕಿನ್ನೂ ಮೂರು ತಿಂಗಳು. ಯಾವುದೋ ಹಳೆಯ ಪತ್ರಿಕೆಯಲ್ಲಿ ಸಿಕ್ಕ ಇವರ ಕಥೆಯನ್ನು ಓದಿ ಯಾರಿಂದಲೋ ನಂಬರ್ ಪಡೆದ ಅವಳು ಮೊದಲ ದಿನ ಮಾತಾಡುವಾಗಲೇ ಅಲ್ಲಿನ ಪರಿಸರದಲ್ಲಿ ಯಾವುದೋ ಶುಭಸೂಚನೆ ಇದೆ ಅಂತ ಕತೆಗಾರರಿಗೆ ಅನಿಸಿದಾಗ ಸ್ವತಃ ಅವರಿಗೂ ಆತಂಕವಾಗಿತ್ತು.

ಬಲತೊಡೆ ಅದುರಿದ್ದಕ್ಕೋ ಎಡ ಭುಜ ಕುಣಿದಿದ್ದಕ್ಕೋ ಅವಳಿಂದ ಆ ಸಂದೇಶ ಬಂದ ನಾಲ್ಕನೇ ದಿನ ಕತೆಗಾರರು'ಇದು ನಿನಗಿಷ್ಟವಾಗಬಹುದು' ಎನ್ನುತ್ತಾ ತಮ್ಮ ಸಿಗ್ನೇಚರ್ ಸ್ಟೈಲಿನ ಪ್ರೇಮಕಾಮದ ಹಸೀಬಿಸಿ ವಿವರವಿರುವ ಕಥೆಯನ್ನು ಕಳಿಸಿದ್ದರು.
ಅದೇನೋ ಗೊತ್ತಿಲ್ಲ. 
ಆ ದಿವಸ ಕಥೆಗಾರರಿಗೆ ತಮ್ಮ ಹೆಂಡತಿಯ ಮೇಲೆ ವಿಪರೀತ ಪ್ರೇಮ.
ಛೇ .ಹಾಗಂತಲ್ಲ.
ಕಥೆಗಾರರು ಮೊದಲಿಂದಲೂ ತಮ್ಮ ಹೆಂಡತಿಯನ್ನು ಬಹಳ ಪ್ರೀತಿಸುತ್ತಿದ್ದರು. ಕನ್ಫೆಷನ್ನನ್ನೋ, ನಿರೀಕ್ಷಣಾ ಜಾಮೀನನ್ನೋ ಬೇಡುವವರಂತಿದ್ದ ಆ ದಿನದ ಅವರ ಪ್ರೀತಿಗೆ ವಿಶಿಷ್ಟವಾದ ವೇದನೆಯಿತ್ತು.
ಬಹಳ ದಿನಗಳ ನಂತರ ..,
ಅಲ್ಲಲ್ಲ.,ವರ್ಷಗಳ ನಂತರ ಆ ಕೋಣೆಯ ಕಿಟಿಕಿಯ ಪರದೆಯನ್ನು ಮುಚ್ಚಲಾಯಿತು, ಕನ್ನಡಿ ಯಾಕೋ ಸುಮ್ಮಸುಮ್ಮನೇ ನಾಚಿಕೊಂಡಿತ್ತು. ಕ್ರಿಯೆಯ ನಡುವೆಯೂ ಕಥೆಗಾರರು ಆಗಾಗ ತಮ್ಮ ಮೊಬೈಲ್ ನೋಡಿ ಮತ್ತೆ ಮುಚ್ಚುತ್ತಿದ್ದರು.

'ಕಥೆ ಚೆನ್ನಾಗಿದೆ. ಅಡಗಿಸಿಕೊಂಡಿರುವ ಅವಳ ಇನ್ನೊಂದು ಮುಖ ಕತೆಯಲ್ಲಿ ಕೊನೆಯವರೆಗೂ ಕಾವುಳಿಸಿಕೊಂಡು ಕಥೆಯನ್ನು ಚಂದಗಾಣಿಸಿದೆ.ನಡುನಡುವೆ ನೀವು ನೀಡಿರುವ ಪುಟ್ಟದಟ್ಟ ವಿವರಗಳು ನನಗಿಷ್ಟವಾಯಿತು'
ಕಥೆಗಾರರಿಗೆ ಕಥೆ ಬರೆದದ್ದೂ ಸಾರ್ಥಕವೆನಿಸಿತು.
ಪ್ರಸನ್ನ ಭಾವದಲ್ಲಿ 'ಮಕ್ಕಳು ,ಮನೆಯವರು ಫೋನ್ ನೋಡುವುದಿಲ್ಲ ತಾನೇ?' ಎಂದರು.
'ಇಲ್ಲ ಇಲ್ಲ.. ಈ ನನ್ನ ಕೋಣೆ ಹಾಸಿಗೆ ದಿಂಬು ಕಂಬಳಿ ಎಲ್ಲವೂ ಮಡಿಯಲ್ಲಿವೆ.ಬಹಳ ವರ್ಷಗಳಿಂದ' ಸ್ವತಃ ಕಥೆಗಾರರಿಗೂ ಅವಳು ಹೇಳಿದ್ದು ಏನೆಂದು ಒಂದು ಕ್ಷಣ ಅರ್ಥವಾಗಲಿಲ್ಲ.
'ಅಲಾ., ಮಕ್ಕಳು..?'
'ಚಿಂತಿಸುವ ಅಗತ್ಯವಿಲ್ಲ'
ಕೆಲವೊಮ್ಮೆ ವಿಪರೀತ ಕಠಿಣ ಎನಿಸುತ್ತವೆ ಅವಳ ಮಾತುಗಳು.

ಆಗೆಲ್ಲಾ‌ ಅವರಿಗೆ ಅವಳು ತನ್ನ ಹೃದಯದೊಳಗೆ  ನೋವು ತುಂಬಿ ಬಾಯಿ ಬಿಗಿದ ಘನಗಾತ್ರದ ಚೀಲವೊಂದನ್ನು ಉಳಿಸಿಕೊಂಡಿರಬೇಕು ಎಂಬ ಊಹೆಯಾಗುತ್ತದೆ.
ಏನನ್ನಾದರೂ ಕೇಳುವ ಎಂದುಕೊಂಡು ಬಾಯ್ತೆರೆದವರು ಮತ್ತೆ ಸುಮ್ಮನಾಗುತ್ತಾರೆ. ಒಂದು ಹತ್ತು ವರ್ಷ ಮೊದಲು ಇವಳು ಸಿಕ್ಕಬೇಕಿತ್ತು ಅಂತ ಕೆಲವೊಮ್ಮೆ ಬಹಳ ತೀವ್ರವಾಗಿ ಅನಿಸುವುದಿದೆ ಅವರಿಗೆ.
ಅವಳ ನೆನಪಿನಲ್ಲಿ ಬಟ್ಟೆ ನೇಯುತ್ತಾ ಇತ್ತೀಚೆಗೆ ‌ತಾನೇನೂ ಘನವಾದದ್ದು ಬರೆಯುತ್ತಿಲ್ಲ ಎನಿಸಿದರೂ ಅವಳ ಸಖ್ಯ ,ಅವಳ ನೆನಪುಗಳು,ಅತೀ ಅಪರೂಪಕ್ಕೆ ಹೃದಯ ತೆರೆದುಕೊಂಡು ಗಂಟೆಗಟ್ಟಲೆ ಮಾತಾಡುವಾಗ ಅವಳ ಅಚ್ಚರಿ, ಪ್ರಶ್ನೆ ಆತಂಕಗಳನ್ನೆಲ್ಲ ಒಂದಿಷ್ಟೂ ಬಿಡದೆ ಕಥೆಗಾರರು ತಮ್ಮ ಜೀವಕ್ಕಿಳಿಸಿಕೊಳ್ಳುತ್ತಾ  ಪ್ರತಿಘಳಿಗೆಯನ್ನೂ ಅದಮ್ಯವಾಗಿ ಬದುಕುತ್ತಿದ್ದಾರೆ. ಅವಳೊಡನೆ ಮಾತು ಆರಂಬಿಸಿ ಈ ಬೇಸಿಗೆಗೆ ಮೂರು ಚೈತ್ರ ಕಳೆದಿದ್ದವು. ಅವಳ ಫೋನಿನಲ್ಲಿ 'ಕಥೆಗಾರರು' ಕರೆ ಮಾಡಿದ ಸಮಯದ ವಿವರ ದಿನೇದಿನೇ ದೀರ್ಘವಾಗುತ್ತಿತ್ತು. ಮಾಗಿಗೆ ಎಲೆಯುದುರಿದಾಗ  ಮರ ಚಿಗುರಿದಾಗ ಹೂ ಅರಳಿದಾಗ ಮಾತುಗಳ ವ್ಯಾಪ್ತಿ ಬದಲಾಗುತ್ತಿತ್ತು.

ಹುಚ್ಚು ಮಳೆ ಸುರಿವ ದಿನಗಳಲ್ಲಿ ನೀರಿನಲ್ಲಿ ಅದ್ದಿದ ಇಡ್ಲಿ ತುಂಡಿನಂತಹ ಭೂಮಿಯನ್ನು ಕೆಟ್ಟ ಅಸೂಯೆಯಿಂದ ನೋಡಿ ಅವಳಿಟ್ಟ ನಿಟ್ಟುಸಿರು  ಏರಿಏರಿ ತಾನೊಂದು ಮುಗಿಲಿನ ಸಖ್ಯ ಬೆಳೆಸಿಕೊಂಡು ಇಳಿದು ಮತ್ತೆ ಭೂಮಿ ಕೂಡಿಕೊಳ್ಳುತ್ತಿತ್ತು.

'ಮರಿಸ್ವಾಮಿಯವರ ಹೊಸ ಕಥೆ ಬಂದಿದೆ ಕಳಿಸಿಕೊಡ್ತಿನಿ.ಓದಿ ಹೇಳು'ಅಂತಲೋ
'ಏನಮ್ಮ..ಈ ಸಂಜೆ ಅವಳು ಸಮಾಜಕ್ಕೆ ಹೋಗ್ತಾಳೆ ಒಬ್ಬನೇ ಇರ್ತೀನಿ. ಮಾತಾಡಬಹುದೋ'ಅಂತಲೋ
'ಇವತ್ತು ವಸುಧಾ ಮನೆಗೆ ಬಂದಿದ್ದಳು ಕಣೋ'ಅಂತಲೋ ಹೇಳುತ್ತಾ ಒಟ್ಟಾರೆ ಅವಳೊಂದಿಗಿನ ಸಖ್ಯದ ಬೆಂಕಿಗೆ ಇದ್ದಿಲು ಆರದಂತೆ  ಕಥೆಗಾರರು ನೋಡಿಕೊಳ್ಳುತ್ತಿದ್ದರು.

ಒಂದು ಕೆಟ್ಟ ಹಗಲಿನಲ್ಲಿ ಒಬ್ಬ ವೃದ್ಧ ಗಂಡಸಿನ ಬೆತ್ತಲನ್ನು ನೋಡುವ ಅವಕಾಶ ಸಿಕ್ಕಿ ಅದರಿಂದಾಗಿ ಕರುಳು ಕಲೆಸಿ ಹೊರಬಂದ   ಅನುಭವವಾಯಿತಾದರೂ ಅದರ ಕಡೆಗೆ ಗಮನ ಕೊಡಬೇಕೂಂತೇನೂ ಅವಳಿಗೆ ಅನಿಸಲಿಲ್ಲ.
ಬದಲಿಗೆ  ಒಂದಿಷ್ಟೂ ಕೊಳೆಯಾಗದ ಅವಳ ಹಾಸಿಗೆಯ ಮೇಲು ಹಾಸನ್ನು  ತೆಗೆದು ಒಗೆದು ಸುಡುಬಿಸಿಲಿನಲ್ಲಿ ಒಣಗಿಸಿ ಹುನ್ನಾರದ ನಗೆ ನಕ್ಕಾಗ ಅವಳ ಮುಖದಲ್ಲಿದ್ದ ಭಾವ ಯಾವುದೆಂಬುದು ಸ್ವತಃ ಅವಳಿಗೂ ತಿಳಿಯಲಿಲ್ಲ.

ಕಥೆಗಾರರಿಗೆ ಈ ಎಲ್ಲ ವಿಚಾರಗಳ ಕಿಂಚಿತ್ ಸೂಚನೆಯೂ ಸಿಗದೆ ತನಗೆ ಈ ವಯಸ್ಸಿನಲ್ಲಿ ದಕ್ಕಿದ ಅಪರೂಪದ ಅವಕಾಶಕ್ಕೂ ಅದರಿಂದಾಗಿ  ಮತ್ತೆ ಚಿಗುರುತ್ತಿರುವ ತನ್ನ ಯೌವನದಿಂದಲೂ ಸಡಗರದ ಕೊನೆ ತುದಿಯಲ್ಲಿದ್ದರು.
ಅವಳ ಸಂಜೆಗಳು ಅವಳಿಗೆ ವಿಪರೀತ ಬಿಡುವು ಕೊಟ್ಟಿರುವ ವಿಚಾರ ತಿಳಿದ ಮೇಲಂತೂ ಕಥೆಗಾರರು ಮಾತು ಮತ್ತಷ್ಟು ಹೆಚ್ಚಾಯಿತು. 
ಆ ಬಿಡುವು ಕೆಲದಿನಗಳವರೆಗೆ ಮುಂದುವರೆಯಿತು ಎಂಬ ಆಗೀಗಿನ ಅವಳ ಮಾತುಗಳು ಅವರ ಕಣ್ಣಲ್ಲೂ ನೀರು ತರಿಸುತ್ತಿತ್ತು.

ಮಮತೆ ಉಕ್ಕಿ ಮುದ್ದಿಸುವಂತೆ ಆಗೆಲ್ಲ ಅವರು ಅವಳ ಚಂದವನ್ನೂ ಆತ್ಮವಿಶ್ವಾಸವನ್ನೂ ಹೊಗಳಿ 'ನೀನೊಂದು ಅದ್ಭುತ ಹೆಣ್ಣು ಚಿನ್ನು' ಎನ್ನುತ್ತಿದ್ದರು.

'ಹಾಗಿದ್ದರೆ ಇವರೇಕೆ ನನ್ನ ಪ್ರೀತಿಸುವುದಿಲ್ಲ'

ಪ್ರತೀ ದೀರ್ಘ ಮತ್ತು ಹೃಸ್ವ ಸಂಭಾಷಣೆಯ ನಂತರವೂ ನಡುಗುವ ಸ್ವರದೊಂದಿಗೆ ಅವಳು ಕೇಳುತ್ತಿದ್ದ ಈ ಕೊನೆಯ ಪ್ರಶ್ನೆಗೆ ಅವರ ಬಳಿ ಉತ್ತರವಿರುತ್ತಿರಲಿಲ್ಲ.
ಈ ಪ್ರಶ್ನೆಯ ನಂತರ ಅವಳನ್ನು ಮಾತಾನಾಡಿಸಲೋ ಸಮಾಧಾನಿಸಲೋ ಯತ್ನಿಸಿದಾಗ ಆ ಬದಿಯಿಂದ ಕೇಳುತ್ತಿದ್ದ ಕೊರಳ ಬಿಗಿದ ಸದ್ದಿನಿಂದಾಗಿ ಕಥೆಗಾರರ ಜೀವ  ಅಸಹಾಯಕತೆಯಿಂದ ಚಡಪಡಿಸುತ್ತಿತ್ತು.

ಎರಡು ದಿನ ಅತ್ಯುತ್ತಮವಾಗಿ ನಡೆದ ಆ ಅದ್ದೂರಿ ಕಾರ್ಯಕ್ರಮ ಇನ್ನೇನು ಸಮಾರೋಪಗೊಳ್ಳಲಿತ್ತು. ಕಥೆಗಾರರು ತಮ್ಮ ವರ್ಚಸ್ಸಿನಿಂದಾಗಿ ನಗರದ ಪ್ರತಿಷ್ಠಿತ ಹೋಟೆಲಿನಲ್ಲಿ  ರೂಮು ಗಿಟ್ಟಿಸಿಕೊಂಡಿದ್ದರು. ರೆಪ್ರೆಸೆಂಟರ್ಸ್ ಕೋಟಾದಲ್ಲಿ ಅದೇ ಹೋಟೆಲಿನ ಮತ್ತೊಂದು ಅಂತಸ್ತಿನಲ್ಲಿ ಅವಳಿಗೂ ರೂಮು ಕೊಡಿಸುವಲ್ಲಿ ಕಥೆಗಾರರು ಯಶಸ್ವಿಯಾಗಿದ್ದರು.

ಅವರ ಉದ್ದೇಶ ಏನೇ ಇದ್ದರೂ ಕೇವಲ ಅವಳ ಕೋಣೆಯ ಹೊರ ತುದಿಯಲ್ಲಿ ನಿಂತು 'ರೆಡಿನೇನಮ್ಮಾ' ಅನ್ನುವ ಅವಕಾಶ ಮತ್ತು ಸಾಧ್ಯತೆಗಳನ್ನಷ್ಟೇ ಅವಳು ಎಚ್ಚರಿಕೆಯಿಂದ ಸಂಭಾಳಿಸಿದ್ದಳು.ಕಥೆಗಾರರಿಗೆ ಕೊಂಚ ನಿರಾಶೆಯಾದರೂ ಕಾರ್ಯಕ್ರಮದಲ್ಲಿ ಅವಳ ಜೊತೆಜೊತೆಗೆ ಕೂರುವ ನಿಲ್ಲುವ ನಡೆಯುವ ಎಲ್ಲಾ ಸಂದರ್ಭಗಳನ್ನೂ ಸಂಪೂರ್ಣವಾಗಿ ಬಳಸಿಕೊಂಡರು.ಅವಳಿಗೂ  ಆ ಹೊಸಜಗತ್ತು ಬಹಳವೇ ಇಷ್ಟವಾಗಿದ್ದರಿಂದ ಉಳಿದ ಸಂಗತಿಗಳೆಡೆಗೆ ಗಮನ ಹೆಚ್ಚಿಗೇನೂ ಹೋಗಲಿಲ್ಲ. 
'ಎಲ್ಲಿದ್ದೀಯಾ.ಊಟ ಆಯ್ತಾ.ಜೋಪಾನ'ಎನ್ನುವ ಕರೆಗಳು ಅಕ್ಕಪಕ್ಕದ ಹೆಂಗಸರುಗಳಿಗೆ ಬಂದಾಗ ಬೆರಗುಗಣ್ಣುಗಳಲ್ಲಿ ಇವಳು ಅವರೆಲ್ಲರನ್ನೂ ನೋಡಿ ಅವರ ಕಣ್ಣು ಕೂದಲು ದೇಹಸೌಷ್ಟವವನ್ನು ಸ್ಯ್ಕಾನ್ ಮಾಡುತ್ತಲೇ ತನ್ನ ಫೋನನ್ನು ಮತ್ತೆಮತ್ತೆ ತೆರೆದು ಸಣ್ಣ ನಿರಾಸೆಯಿಂದ ವಾಪಸು ಮುಚ್ಚುತ್ತಿದ್ದಳು.
ವಿಚಿತ್ರವೆಂದರೆ ಕಾರ್ಯಕ್ರಮ ಆರಂಭವಾದಾಗಿನಿಂದಲೂ ಇವಳು ನಿಂತರೆ ನಡೆದರೆ ನುಡಿದರೆ ನಕ್ಕರೆ ಆ ಬಣ್ಣ ಮಾಸಿದ ಆ ಶಾಮಿಯಾನಕ್ಕೆ ಗುಲಾಬಿ ರಂಗು!

ಕೆಲವರು  'ಅವಳೇ'ಅಂತಂದರು.
ಕೆಲವರು ಪರಿಚಯದ ಪ್ರವರ ವಿವರಗಳನ್ನು ಪಡೆದುಕೊಂಡರು.

ಅದು ಎರಡನೆಯ ದಿನದ ಮಧ್ಯಾಹ್ನ.
ಆಗಷ್ಟೇ ಯೋಗ ಮತ್ತು ಅಹಾರ ಸಂಬಂಧ ಬರಹಗಾರರು ಮತ್ತು ಸಾಧಕರ ಸೆಷನ್ ಮುಗಿದಿತ್ತು. ಮುಂದಿನ ಕಾರ್ಯಕ್ರಮ ಸ್ವಲ್ಪ ದೀರ್ಘವಾದುದು. ಸಮಾರೋಪ ‌ಮತ್ತು  ಭಾಗವಹಿಸಿದವರಿಗೆ ಗೌರವ ಸಮರ್ಪಣೆ.
ಕಥೆಗಾರರು ಮುಖ್ಯ ಸಮಾರೋಪ ಭಾಷಣಕಾರರಾದ್ದರಿಂದ ವೇದಿಕೆ ಹತ್ತುವ ಸಿದ್ದತೆಯಲ್ಲಿದ್ದರು. ಯಾರನ್ನೋ ನೋಡಿದವರು ಏನೋ ನೆನಪಾದವರಂತೆ ತಕ್ಷಣ ಇವಳನ್ನು ‌ಕರೆದು 'ನೋಡಮ್ಮಾ. ಇವರು ವಾಸುದೇವನ್ ಅಂತ. ಯೋಗ ಮತ್ತು ಫುಡ್ ಸೈನ್ಸ್ ಸ್ಪೆಷಲಿಸ್ಟ್. ಇವರ ವಿಜ್ಞಾನದ ಬರಹಗಳು ಜಾಗತಿಕವಾಗಿ ಸುದ್ದಿಯಲ್ಲಿವೆ. ಪತ್ರಿಕೆಗಳಲ್ಲಿ ನೀನೂ ಓದಿರಬಹುದು. ನಿನ್ನ ಆಸಕ್ತಿಯ ವಿಷಯ ಅಲ್ವೆ ಅದು.
ಮಾತಾಡ್ತಿರು. ನಾನೀಗ ವೇದಿಕೆಗೆ ಹೋಗ್ತಿನಿ. ಎಲ್ಲಿ. ವಿಶ್ ಮಿ' ತಮ್ಮ ಕೈಚಾಚಿದರು.
ಅವರಿಗೆ ವಿಶ್ ಮಾಡಿದವಳು ಕೂರಲೆಂದು ಚೇರು ನೋಡುವಾಗ ವಾಸುದೇವನ್ ಆಗಲೇ ಅಲ್ಲೊಂದು ಚೇರಿನಲ್ಲಿ ಕುಳಿತು ಕೈ ಬೀಸುತ್ತಿದ್ದರು.
ಮತ್ತು ಆನಂತರದಲ್ಲಿ ನಡೆದ ಎರಡೂವರೆ ಗಂಟೆಗಳಷ್ಟು ಸುದೀರ್ಘ ಸಮಾರೋಪ ಕಾರ್ಯಕ್ರಮವನ್ನು ಅವರಿಬ್ಬರು ಒಟ್ಟಿಗೇ ಕುಳಿತು ನೋಡಿದರಾದರೂ ಏನು ಮಾತನಾಡಿದರೆಂದು ಕೇಳಿಸಿಕೊಳ್ಳಲಿಲ್ಲ..

________

'ವಾಸು'
'ಹು'
'ಇಷ್ಟೇಕೇ ಪ್ರೀತಿಸಬೇಕು ನೀನು ನನ್ನ'

ವಾಸುದೇವನ್  ತಮ್ಮ ದಂತದ ಬಣ್ಣದ ಸೆಡಾನ್ ಕಾರನ್ನು ಮುಖ್ಯರಸ್ತೆಯ  ಬಲಬದಿಗಿರುವ ಹಳ್ಳಿಯ ಕಡೆಗೆ  ತಿರುಗಿಸುವ ಸಲುವಾಗಿ ಆ ಬದಿಗೆ ನೋಡಿದರು.
'ವಾಸು'
'ಹು'
'ಈ ದಾರಿ ಎಲ್ಲಿಯವರೆಗೆ ಹೋಗ್ತದೋ ಅಲ್ಲಿಯವರೆಗೂ ನನ್ನ ಕರ್ಕೊಂಡು ಹೋಗ್ತೀಯಾ ತಾನೇ ಇವತ್ತು?'
ವಾಸುದೇವ್ ರಿಂಗಾಗ್ತಿದ್ದ ಮೊಬೈಲನ್ನು ತೆಗೆದುಕೊಂಡು ಕರೆ ಸ್ವೀಕರಿಸಿ "ಹೌದು..ಅದು 1962. ಕರೆಕ್ಟ್..ಎರ್ನಾಕುಲಂ...ಮಿಸ್ಟೇಕ್ಸ್ ಮಾಡಬೇಡಿ' ಎಂದುತ್ತರಿಸಿ ಫೋನ್ ಕೆಳಗಿಟ್ಟರು.

'ನೀನೇನೂ ತಿನ್ನಲಿಲ್ವಲ್ಲಾ ಪುಟ್ಟಾ.ಹಸಿವಾಗ್ತಿಲ್ವಾ'

'ವಾಸು'
'ಹು.'
"ಹಾಗಿದ್ರೆ ನೀನು ನನಗಿಂತ ಹದಿನಾಲ್ಕು ವರ್ಷ ದೊಡ್ಡವನು'
ವೃದ್ಧ ದೇಹದ ಬೆತ್ತಲು ಅವಳ ಚಿತ್ತದಲ್ಲೊಮ್ಮೆ ಹಾದುಹೋಗಿ ಕಣ್ಣಿನಲ್ಲಿ ಅಸಹನೆ ಮೂಡಿತಾದರೂ ಯೋಗ ಮತ್ತು ಆಹಾರ ಎನ್ನುವ ಎರಡು ಪದಗಳು ಅವಳಿಗೆ ಸಮಾಧಾನ ನೀಡಿದ್ದವು.

ವಾಸುದೇವನ್ ಅವಳ ಉಳಿದ ಮಾತನ್ನು ಗಮನಿಸದವರಂತೆ

'ಇಷ್ಟೊಂದು ಚಿಂತಿಸುವ ಅಗತ್ಯ ಇಲ್ಲ ಪುಟ್ಟಾ. ನಿನ್ನ ಬಳಿ ಪ್ರತಿಭೆಯಿದೆ,ಸಾಮರ್ಥ್ಯವಿದೆ, ಆತ್ಮವಿಶ್ವಾಸವಿದೆ.ಹಣವಿದೆ,ಯೌವನವಿದೆ.ಪ್ರೀತಿಸುವ ಸಮಾಜವಿದೆ..'

ಅವರ ಮಾತು ಮುಗಿಯುವ ಮೊದಲೇ ಅವಳು ಅವರ ಎಡತೋಳಿಗೆ ಬಾಯಿ ಹಾಕಿ  ಜೋರಾಗಿ ಕಚ್ಚಿದಳು.

"ಅಮ್ಮಾ.'

ಎಂಜಲಾದ ಶರ್ಟನ್ನು ತನ್ನ ಮಣ್ಣಿನ ಬಣ್ಣದ ದುಪ್ಪಾಟ್ಟದಿಂದ ಮೆಲ್ಲಗೆ ಒರೆಸುತ್ತಿದ್ದವಳ ಬಾಯಿನ್ನೂ ಭುಜದ ಬಳಿಯೇ ಇದ್ದಿತಾದ್ದರಿಂದ ಯಾವ ಕ್ಷಣದಲ್ಲಾದರೂ ಮತ್ತೊಮ್ಮೆ ಅವಳ ಪ್ರೇಮಬಿಂದಿಗೆ ತುಂಬಿಕೊಂಡು ತನ್ನ ಭುಜದ ಮೇಲೆ ಪ್ರಹಾರವಾಗಬಹುದೆಂಬ ಹುಸಿ ಗಾಬರಿಯಲ್ಲಿ ವಾಸುದೇವನ್ ರಸ್ತೆಯ ಗುಂಡಿ ಎವಾಯ್ಡ್ ಮಾಡುತ್ತಾ ಅವಳೆಡೆಗೆ ನೋಡಿದರು.
ಕಣ್ಣಿನಲ್ಲಿ ಸುಖವೂ,ಮುಖದಲ್ಲಿ ತುಂಟತನವೂ ಕನ್ನಡಿಯಲ್ಲಿ ಕಂಡಷ್ಟು ಸ್ಪಷ್ಟವಾಗಿ ಕಾಣುತ್ತಿದ್ದವು. 'ಮಾರ್ಕು ಬೀಳ್ತದೋ ಪುಟ್ಟಾ...ಮನೆಯಲ್ಲಿ ಏನು ಹೇಳಲಿ ಹೇಳು' ಎಂದವರ ಮಾತಿನಲ್ಲಿದ್ದ ಹುಸಿ ಅಸಮಾಧಾನ ಮತ್ತೊಮ್ಮೆ ಅವಳಿಗೆ ಭುಜಕ್ಕೆ ಬಾಯಿಡಲು ಉತ್ಸಾಹ ತುಂಬಿತು.
'ವಾಸು'
'ಹು'
'ಹೇಳು ಹೀಗಂತ'
'ಏನಂತ'
'ಹೇಳು.ಹೀಗೆ ನಿನಗೊಬ್ಬ ಮುದ್ದಾದ ತಂಗಿ ತರ್ತಿದ್ದೀನಿ ಅಂತ.,ಅವಳಿಗೆ ಈ ಲೋಕ ಪ್ರೀತಿಸುವುದರ ಹೊರತು ಮತ್ತೇನೂ ಗೊತ್ತಿಲ್ಲ ಅಂತ.
ಭಯನಾ ನಿಂಗೆ?'
ಅವಳು ಅತೀ ಅಪರೂಪಕ್ಕೆ ಅಷ್ಟು ಸದ್ದು ಮಾಡಿ ನಗುವುದು.
ವಾಸುದೇವನ್ ಒಂದು ಕ್ಷಣ ಅವಳತ್ತ ತಿರುಗಿದವರು  'ದೀರ್ಘ ಹುಡುಕಾಟದ ನಂತರವಷ್ಟೇ ದೇವತೆ ಸಿಕ್ಕುವುದು' ಎಂದುಕೊಂಡರು.
'ವಾಸು'
'ಹು'
"ಇಷ್ಟೇಕೆ ಪ್ರೀತಿಸುತ್ತಿ ನೀನು ನನ್ನ?'
ಹಳ್ಳಿಯ ಆ ಸಣ್ಣ ರಸ್ತೆಯಲ್ಲಿ ವಾಸುದೇವನ್ ತಮ್ಮ ಕಾರನ್ನು  ಸ್ವಲ್ಪ ಎಡಕ್ಕೆ ನಿಲ್ಲಿಸಿ ಎಡಕೈಯಿಂದ ಅವಳ ತಲೆನೇವರಿಸಿ ಹತ್ತಿರಕ್ಕೆಳೆದು ಹಣೆಗೊಂದು‌ ಮುತ್ತಿಟ್ಟರು.

'ನೀನು ಬಹಳವೆಂದರೆ ಬಹಳ ಬಹಳ ಒಳ್ಳೆಯವಳು ಗುಡ್ಡಿ. ನಿನ್ನ ಸಾನ್ನಿಧ್ಯಕ್ಕೆ ಬಂದ ಯಾರಾದರೂ ನಿನ್ನ ಪ್ರೀತಿಸುವವರೇ.ನಿನ್ನ ಪ್ರೀತಿಸುವುದರ ಹೊರತಾಗಿ ನಾನು ಮತ್ತೇನೂ ಮಾಡಬಹುದು ಹೇಳು' ಕತ್ತಲನ್ನು ಹೊದ್ದುಕೊಳ್ಳುವ ಮುನ್ನ ಆ ರಸ್ತೆಯ ಎಡಬಲಗಳಲ್ಲಿ ಅರಳಿದ್ದ ಕಾಡು ಗುಲಾಬಿ ಹೂವುಗಳು ಮೆಲ್ಲಗೆ ಹೊಯ್ದಾಡಿ ತಮ್ಮ ಗೊಂಚಲಲ್ಲಿದ್ದ ನಾಕಾರು ಹಿರಿಯ ಹೂವುಗಳನ್ನು ಕೆಡವಿಕೊಂಡವು.
ಹಾಲಿನಿಂದ ಭಾರವಾಗಿದ್ದ ಕೆಚ್ಚಲಿನ ಜೊತೆಗೆ ತನ್ನ ತುಂಬಿದ ಹೊಟ್ಟೆಯನ್ನೂ ಹೊತ್ತ ಬಂಗಾರ ಬಣ್ಣದ ಕುಳ್ಳು ಹಸುವೊಂದು  ಕರು ತನ್ನ ಮೊಲೆಗೆ ಬಾಯಿಕ್ಕಿ ಗುದ್ದುವ ಸಡಗರದ ನೆನಪಿಗೆ ಬೇಗಬೇಗ ಹೆಜ್ಕೆ ಹಾಕುವ ಯತ್ನದಲ್ಲಿತ್ತು.
ಮೆಲ್ಲಗೆ ಸಾಗುತ್ತಿದ್ದ ಕಾರಿನ ತೆರೆದ ಕಿಟಿಕಿಯಿಂದ ಅಗೋಚರ ಪರಿಮಳವೊಂದು ಅವರಿಬ್ಬರನ್ನೂ ಒಟ್ಟಿಗೆ ನೇವರಿಸಿ ಮುಂದೆ ಹೋಯಿತು.

ವಾಸುದೇವನ್ ಒಂದು ಕ್ಷಣ ಏನನ್ನೋ ಯೋಚಿಸಿದರು. ಜೀವದಲ್ಲಿ ನೋವಿನ ಛಳುಕೊಂದು ಹಾದು ಹೊರಹೋಗಲು  ದಾರಿ ಸಿಗದೆ ಸೋತು ಹೃದಯದೊಳಗೆ ನೆಲೆ ಕಂಡುಕೊಂಡಿತು.

'ವಾಸು'
'ಹು'
'ನಿನಗೆ  ಸಾಕಷ್ಟು ಹೆಣ್ಣುಗಳ ಸಖ್ಯ ಇದೆ ಅಂತಾರಲ್ಲ ನಿಜವಾ'
ಹೌದು ಇತ್ತು ಎಂದರೆ ಇವಳ ಜೀವ ನೋಯುವ ಪ್ರಮಾಣವನ್ನು ಊಹಿಸಬಲ್ಲೆನೆ ನಾನು?
'ನಿನ್ನ ಸಾಂಗತ್ಯದಿಂದ ನನ್ನ ಹುಡುಕಾಟ ಮುಗಿದಿದೆ ಪುಟ್ಟಾ' ಊಹಿಸಿದಂತೆ ಮುಂದಿನ ಪರಿಣಾಮಗಳೆಲ್ಲವೂ ಘಟಿಸಿದವು.ಅವರ ಎಡಭುಜದ ಮತ್ತೆರಡು ಕಡೆ ಅವಳ ಎರಡು ಚೂಪು ಹಲ್ಲುಗಳು ಗುರುತು ಮೂಡಿಸಿದವು.
ಬೆಚ್ಚನೆಯ ಕಣ್ಣೀರು ಅವರ ಕಪ್ಪು ಬಣ್ಣದ ರೇಮಂಡ್ ಪ್ಯಾಂಟ್ ನಿಂದ ಆಳಕ್ಕಿಳಿದು ತೇವ ಹರವಿಕೊಂಡಿತು.
'ದೇವತೆಗಳ ಜೊತೆಗೆ ಸುಳ್ಳು ತಟವಟ ಮಾಡಬಾರದು ಪುಟ್ಟಾ' 'ಮನೆಯಲ್ಲಿ ಮಡದಿಯ ಮುಖ ನೋಡುವಾಗಲೂ ನಿನ್ನ ಕಣ್ಣು  ನೆನಪಾಗಿ ನನ್ನ ಕಂಗೆಡಿಸುತ್ತದೆ.
ಕೆಲವೊಮ್ಮೆ  ಭಯವಾಗುತ್ತದೆ ಈ‌ ಪಯಣ ಮುಟ್ಟುವುದಾದರೂ ಎಲ್ಲಿಗೆ' ಅವಳು ತೊಡೆಯ ಮೇಲಿಂದ ಎದ್ದು ಭುಜಕ್ಕೊರಗಿದಳು.
'ವಾಸು'
'ಹು'
'ನಾನು ಚಂದ ಇದ್ದೀನಲ್ವಾ'
'ನೀನು ಏಂಜಲ್ ಅಲ್ವೇನೋ'
ವಾಸುದೇವನ್ ಅವಳ ತುಟಿಯ ಮೇಲೆ ಬೆರಳಿಟ್ಟು ತಮ್ಮ ತುಟಿಗೊತ್ತಿಕೊಂಡರು.
'ವಾಸು'
ಸ್ವರದ ಭಾರದಿಂದ ಮುಂದಿನ ಪ್ರಶ್ನೆ ಗೊತ್ತಾಯಿತು ವಾಸುದೇವನ್‌ಗೆ.
'ನೀನೇಕೆ ಮುಂದುವರಿಯುತ್ತಿಲ್ಲ ಮತ್ತೆ' ಅವಳ ದೇಹವೀಗ ಕಾದು ಗರುಗಾದ ನೆಲವಾಗಿದೆ ಎನ್ನುವುದು ವಾಸುದೇವನ್‌ಗೆ ಗೊತ್ತಿದೆ. 
ಬಯಸುತ್ತಿರುವುದು ಏನೂಂತಲೂ.
'ಅದರಲ್ಲಿ ತಪ್ಪಿಲ್ಲ ವಾಸು' ವಾಸುದೇವನ್ ಕಾರನ್ನು ನಿಧಾನ‌ಮಾಡಿ ರಸ್ತೆಯ ಎಡಪಕ್ಕದಲ್ಲಿದ್ದ ಸಣ್ಣ ಖಾಲಿ ಜಾಗಕ್ಕೆ ನಿಲ್ಲಿಸಿ ಅವಳತ್ತ ಬಾಗಿದರು.
ಕತ್ತಲು ಆ ಹೊತ್ತಿಗಾಗಲೇ ರಾತ್ರಿರಾಣಿ ಹೂವುಗಳನ್ನು ಎಬ್ಬಿಸುತ್ತಿತ್ತು.

'ಪುಟ್ಟಾ'
'ಹು'
ಸ್ವರಗಳು ಕ್ರಮಕ್ರಮೇಣ ನಿಧಾನವಾದವು.
ಬಂದ ವೇಗದಲ್ಲೇ ಕಾರು ಹಿಂದೆ ಹೊರಟಿತು. ಅವಳ ಕಣ್ಣುಗಳು ತೇವಗೊಂಡಿದ್ದು ವಾಸುದೇವನ್‌ಗೆ ಕತ್ತಲಲ್ಲಿ ಕಾಣಲಿಲ್ಲ. ಭುಜದ ಮೇಲಿದ್ದ ಅವಳ ಮುಖವನ್ನು ಮೆಲ್ಲಗೆ ಒಂದು ಕೈಯಲ್ಲಿ ಬಳಸಿ ನೆತ್ತಿ ಮುದ್ದಿಸುತ್ತ 'ನೀನೊಂದು ಪರಿಪೂರ್ಣ ಹೆಣ್ಣು' ಪಿಸುಗುಟ್ಟರು. 

'ವಾಸು'
'ಹು'

'ಹಾಗಿದ್ದರೆ ಇವರೇಕೆ ನನ್ನನ್ನು ಪ್ರೀತಿಸುವುದಿಲ್ಲ'

ಅವಳ ಬಟ್ಟಲು ಕಣ್ಣುಗಳಲ್ಲಿ ವಿಷಾದವೋ ಸಂಕಟವೋ ತುಂಬಿಕೊಂಡಿದೆ.
ಒಳಗಿನ ಯಾತನೆಯನ್ನೂ ನಿರಾಸೆಯನ್ನೂ ಅಡಗಿಸಿಡಲು ಯತ್ನಿಸಿದ ಅವಳ ಪ್ರಯತ್ನಗಳೆಲ್ಲವೂ ನಿಷ್ಫಲವಾಗುತ್ತಿವೆ.ತೆರೆದ ಗಾಜಿನಿಂದ ಹೊರ ನೋಡುತ್ತಿದ್ದವಳ ಕೆನ್ನೆ ಮೇಲಿಳಿದ ಹನಿಗಳು ಬೀಸುವ ಗಾಳಿಗೆ ಇವರ ಮುಖಕ್ಕೆ ತಾಗುತ್ತಿವೆ. ಅವಳ ಹೃದಯದ ನೋವನ್ನು ಇಳುಕಿಕೊಳ್ಳುವ ಬಗೆ ಕಾಣದೆ ವಾಸುದೇವನ್ ಕಂಗಾಲಾಗುತ್ತಾರೆ.

'ವಾಸು'
ಕರೆಗಟ್ಟಿದ ಕೆನ್ನೆಯನ್ನು ಒರೆಸಿಕೊಂಡಿಲ್ಲ ಅವಳಿನ್ನೂ.
'ಹು'
'ಅಲ್ಲಿ ನೋಡು' ಬೆರಳು ಮುಂದೆ ತೋರಿದವು.
ದೂರದಲ್ಲಿ ಕಾಣುತ್ತಿದ್ದ ಇವರು ತಲುಪಬೇಕಿದ್ದ ನಗರ ಕತ್ತಲಲ್ಲಿ ಓಡಿಹೋಗಲು  ಅಲಂಕರಿಸಿಕೊಂಡ ಮದುವಣಗಿತ್ತಿಯಂತೆ ಹೊಳೆಯುತಿತ್ತು.ಅವಳಿಟ್ಟ ನಿಟ್ಟುಸಿರು ಇವರ ಮೈ ಸವರಿಕೊಂಡು ಗಾಳಿಯಲ್ಲಿ ಹರವಿಕೊಂಡಿತು.

ಹಗೂರವೂ ಆಗದ ಭಾರವೂ ಇಲ್ಲದ ಎರಡು ಹೃದಯಗಳು ಆ ರಾತ್ರಿ ಆಕಾಶದ ತುಂಬ ಚೆಲ್ಲಿಹೋಗಿದ್ದ ಚುಕ್ಕೆಗಳನ್ನು ಗೆರೆ ಎಳೆದು ಕೂಡಿಸುವ ಆಟ ಆಡದೆ ಒಲವ ಕನವರಿಕೆಯಲ್ಲಿ ನಿದ್ದೆ ಹೋದವು.
ಆ ರಾತ್ರಿ ಕನಸಿನಲ್ಲಿ ಭಾರಿಮಳೆಗೆ ನೆಂದು ಇಡ್ಲಿ ತುಂಡಿನಂತಿದ್ದ ಭೂಮಿಯನ್ನು ಚಚ್ಚ್ವೌಕಟ್ಟು  ಬದುಮಾಡಿ ಚೆನ್ನಾಗಿ ತುಳಿದು ಹದಗೊಂಡ ಕೆಸರಿಗೆ ನೆನೆಸಿಟ್ಟ ಭತ್ತ ಬಿತ್ತನೆ ಮಾಡುತ್ತಿದ್ದಳು ಅವಳು.
ನಡುರಾತ್ರಿಯಲ್ಲಿ ಪಕ್ಕದ ಕೋಣೆಯಿಂದ ಕೇಳಿದ  ಗೊರಕೆ ಸದ್ದಿಗೆ ಎಚ್ಚರಾದಾಗ ಕಥೆಗಾರರು ಮೊನ್ನೆ ಫೋನ್ ಮಾಡಿದ್ದನ್ನು ವಾಸುಗೆ ಹೇಳಬೇಕು ಅಂದುಕೊಂಡಳು.

'ಪುಟ್ಟಾ,
  ಈ ಸಂಜೆ ನನ್ನ ಅಸಿಸ್ಟೆಂಟ್  ಅರುಣಿಮ ತಲುಪಿಸ್ತಾನೆ ಆ ಪುಸ್ತಕ ನಿನಗೆ.
  ಇವತ್ತು ಬರೊಬ್ಬರಿ ನಾಲ್ಕು ಮೀಟಿಂಗ್ ಗಳು.ರಾತ್ರಿ ಹನ್ನೆರಡಕ್ಕೆ ಜೈಪುರಕ್ಕೆ ಫ್ಲೈಟು.ನಾಳಿನ ಸೆಷನ್‌ಗೆ  ಇನ್ನೂ ಒಂದಿಷ್ಟು ಟಿಪ್ಪಣಿ ಮಾಡಿಕೊಳ್ಳುವುದು ಬಾಕಿ ಇದೆ.ಎಂಟು ರಾಷ್ಟಗಳ ವಿಚಾರ ಸಂಕಿರಣ ಅದು.ಭಾರತದ ಆಹಾರ ಸಂಸ್ಕೃತಿಯ ಮಹತ್ತನ್ನು ಈ ಬಾರಿ ಎತ್ತಿಹಿಡಿಯಲೇ ಬೇಕಾಗಿದೆ. 
ಪುಟ್ಟಾ..

ನಾಳೆ ನನ್ನ ಮೆಸೇಜ್ ತಡವಾದರೆ ನೋಯಬಾರದು. ಮತ್ತು ತಲೆಯಲ್ಲಿ ಈಚೀಚೆಗೆ ನೀನು ತುಂಬಿಕೊಳ್ಳುತ್ತಿರುವ ಸಂದೇಹಗಳನ್ನು ಕೊಡವಿಹಾಕು. ನಿರಾಳವಾಗಿ ನಾನು ಕಳಿಸಿದ ಪುಸ್ತಕ ಓದು.
ಬರೀ ಓದುವುದಲ್ಲ.ಓದಿನ ಟಿಪ್ಪಣಿ ತಯಾರಿಸು.
ಖಾಲಿ ಕೂರಬಾರದು ಯೂ ಆರ್ ಮೈ ಏಂಜೆಲ್. ಲವ್ ಯೂ'

'ವಾಸು'
'…..'

________

'ಯೂ ಆರ್ ವೆರಿ ಬ್ಯೂಟಿಫುಲ್ ರೀ. ಚಂದ ಇದ್ದೀರಾ‌ ನೀವು'
'ಅ್ಯಂಡ್ ನಾಟ್ ಓನ್ಲಿ ಬ್ಯೂಟಿಫುಲ್..'
ಅತಿ ಸಲುಗೆಗೆ ಕಿರಿಕಿರಿಯಾದರೂ ಅರುಣಿಮನ ಕಣ್ಣುಗಳು ಅವಳ ಕಣ್ಣಿನಾಳಕ್ಕೆ ಇಳಿದೂ ಇಳಿದೂ ತಳ ಕೆದಕುವಾಗ ಭಯದ ಛಾಯೆಯಿರುವ ಸುಖವೊಂದು ಆವರಿಸಿಕೊಳ್ಳುತ್ತಿತ್ತು.
ಅವರು ಊರಲ್ಲಿ ಇಲ್ಲದ ಆ ಎರಡು ದಿನ ಅಕ್ಕರೆಯಿಂದ ಅವರು ಹೊರಡಿಸಿದ್ದ ಆದೇಶದಂತೆ ಪುಸ್ತಕದ ಓದು ಮತ್ತು ಟಿಪ್ಪಣಿ ತಯಾರಾಯಿತು.
ಓದುವ ಪ್ರತಿಕ್ಷಣವೂ ಅವರು ಅದನ್ನು ಅಲ್ಲಿ ಹೇಗೆ ಪ್ರೆಸೆಂಟ್ ಮಾಡ್ತಿರಬಹುದೆಂಬ ಕಲ್ಪ‌ನೆ ಹೃದಯವನ್ನು ವ್ಯಾಪಿಸಿ  ಇವಳ ವಿರಹದ ವ್ಯಾಪಾರವನ್ನು ಹೆಚ್ಚಿಸಿದ್ದವು. ಜೈಪುರದಿಂದ ಬಂದ ನಂತರವೂ ಅವರಿಗೆ ಕೆಲಸದ ಒತ್ತಡ ಕಡಿಮೆಯಾಗಿರಲಿಲ್ಲ.
ಇವಳ ಓದಿನ ಟಿಪ್ಪಣಿಗೆ ಅವರಿಂದ ಮೆಚ್ಚುಗೆ ಮುತ್ತು ಎರಡೂ ಸಿಕ್ಕಿದ ಮೇಲೆ ಇವಳಿಗೆ ತಾನೂ ಬರೆಯಬಹುದು ಎನ್ನುವ ವಿಶ್ವಾಸ ಮೂಡಿದೆ.

ಅವಳ ಏಕಾಗ್ರ ಓದಿನ ಬೇರಿಗೆ ನೀರು ಗೊಬ್ಬರ ಒದಗಿಸುವ ಪಣ ತೊಟ್ಟವರಂತೆ ಅವರು ಬೆಸ್ಟ್ ಅಫ್ ದಿ ಬೆಸ್ಟ್ ಪುಸ್ತಕಗಳನ್ನು ತರಿಸಿ ಕಳಿಸುತ್ತಿದ್ದಾರೆ. ಒಲವೆಂದರೆ,ಬಲವೆಂದರೆ,ಗೆಲುವೆಂದರೆ,ಅಕ್ಕರೆಯೆಂದರೆ,ಮಮಕಾರವೆಂದರೆ ಎಂಬೆಲ್ಲ ಪದಗಳಿಗೂ‌ ಅವಳಿಗೆ ಅವರಿಂದ ಉತ್ತರ ಸಿಕ್ಕಿದೆ.

ಆದರೆ..

ಆ..ದ..ರೆ…

'ಇವನು.. ಇವನು ನನ್ನ ನಿಜವಾದ ಪ್ರಶ್ನೆ'
  ಮನೋಲೋಕದ ಪಯಣವೇ ವಿಚಿತ್ರ.. ಇವನನ್ನು ನೋಡಿದ ಮೇಲೆ ಅವಳಿಗೆ ಹೀಗನಿಸುತ್ತಿದೆ.

ವಾಸುದೇವನ್ ಒಟ್ಟಿಗೆ ಕೊಡುತ್ತಿದ್ದ ನಾಲ್ಕೈದು ಪುಸ್ತಕಗಳನ್ನು ವಿಂಗಡಿಸಿ ಒಂದೊಂದನ್ನೇ ಸಂಜೆ ತರುವಾಗೆಲ್ಲ ಅದಕ್ಕೆ ಸೂಕ್ತ ಕಾರಣವನ್ನು ಹೊಲೆದು ಜೋಡಿಸಿರುತ್ತಾನೆ ಅರುಣಿಮ.
'ನಿಮ್ಮ ಕಣ್ಣುಗಳು ಹಕ್ಕಿಗೂಡಿನಂತಿವೆ.ಗೊತ್ತಾ‌ ನಿಮಗದು?'
ಆ ಸಂಜೆ ‌ಪುಸ್ತಕ ತಂದವನು ಬಾಗಿಲಾಚೆ ನಿಂತು ಗೇಣು ಒಳಗೆ ಹಣಕಿಸಿ ನೋಡುತ್ತಾ ಹೀಗಂದ.

ಆ ಸಂಜೆ ಅವನು ಹೋದ ಎಷ್ಟೋ ಹೊತ್ತಿನವರೆಗೂ ಆ ಮೆಟ್ಟಿಲುಗಳಲ್ಲಿ ಅತ್ತರಿನ ಪರಿಮಳ ಮೆತ್ತಿಕೊಂಡಿತ್ತು.
ಕನ್ನಡಿ ಹೇಳುತ್ತಿದ್ದ ಹಾಡನ್ನೇ ತದೇಕ ಕೇಳುತ್ತಾ ಮೈಮರೆತಿದ್ದವಳಿಗೆ ತನ್ನ ಕಣ್ಣುಗಳ ಬಗ್ಗೆ ವಿಪರೀತ ಮುದ್ದು ಬಂದು ಮತ್ತೊಮ್ಮೆ ಕನ್ನಡಿಯ ಹತ್ತಿರಕ್ಕೆ ಬಗ್ಗಿ ತನ್ನ ‌ಕಣ್ಣನ್ನೇ ತಾನು ನೋಡಿಕೊಂಡಳು.

'ಅವರು ಮನೆಯಲ್ಲಿ ಇರುವುದೇ ಇಲ್ಲ. ಅಲ್ವಾ ಮೇಡಮ್?'
ಹೊಸಿಲಿನಿಂದ ಮುಂದೆ ಬಾರದೆ ಹಣಕಿದ ಆ ಸಂಜೆ ಅರುಣಿಮ ಕೈಯಲ್ಲಿ ಅವರು ಕಳಿಸಿದ ಪುಟ್ಟ ಪುಸ್ತಕವಿತ್ತು. ಅವನ ಪ್ರಶ್ನೆಗೆ ಉತ್ತರಿಸುವ ಅಗತ್ಯವಿಲ್ಲವೆನ್ನುವಂತೆ ಒಮ್ಮೆ ಅವನ ಕುರುಚಲು ಗಡ್ಡ ನೋಡಿದವಳಿಗೆ  ಅವನು ಮತ್ತೂ ಏನೋ ಕೇಳಬೇಕಿತ್ತು ಅನಿಸಿತು. 
ತಡರಾತ್ರಿವರೆಗೂ ಅಂದು ಬಂದ ಪುಸ್ತಕ ತಿರುವಿ ಹಾಕುತ್ತಿದ್ದವಳು 'ಇಟ್ಸ್ ರಿಯಲಿ ನೈಸ್ ವಾಸು.ಲವ್ ಯೂ'' ಎಂಬ ಸಂದೇಶ ಹಾಕಿದಳು.

ಬಿಡುವಿಲ್ಲದ ಅವರ ಕೆಲಸದ ನಡುವೆಯೂ ಹುಡುಕಿ ಹುಡುಕಿ  ಪುಸ್ತಕ ಕಳಿಸುವ ಅವರ ಪ್ರೇಮಕ್ಕೆ ಪ್ರತಿಯಾಗಿ ಇವಳ ಜೀವ ನೆಂದು ಮೆದುವಾಗುತ್ತಿತ್ತು.
'ವಿಚ್ ಬುಕ್ ಪುಟ್ಟಾ'
'ನಾನಿವತ್ತು ಪುಸ್ತಕ ಕಳಿಸಿಲ್ಲ!'

ಆ ಕ್ಷಣ…
ಆ ಕ್ಷಣ
ಸುಖವಾದ ಆತಂಕವೊಂದು ಛಿಲ್ಲನೆ ಹಾದು ಹೋದ ರಭಸಕ್ಕೆ ಕಳಚಿ ಬಿದ್ದಿದೆ ಅವಳ ಹೃದಯ!!

____

'ವಾಟ್ಸ್ ಯುವರ್ ಟುಮಾರೋಸ್ ಪ್ರೋಗ್ರಾಂ' ಅರುಣಿಮಗೆ ಸಂದೇಶ ಕಳಿಸಿ ಅರೆಗಣ್ಣಾದವಳನ್ನು ಹುರುಪೊಂದು ತಲ್ಲೀನವಾಗಿ ಆವರಿಸುತ್ತಿದೆ.
ಮುಟ್ಟಿನ ಸ್ನಾನ ಮುಗಿದು ನಾಲ್ಕನೇ ದಿನ ಇದು.

'ಬರಬೇಕಾ'
'ಹು'
'ಎಷ್ಟೊತ್ತಿಗೆ'
'ಗೊತ್ತಿಲ್ಲ'
'......'
"ಮಹಾರಾಣಿಯ ಆದೇಶಕ್ಕಾಗಿ ಕಾಯುತ್ತಿದ್ದೇನೆ'
'ಏಕವಚನ ಕೂಡದು'
'ಕ್ಷಮಿಸಿ'
'ಸರಿಯಾಗಿ ಹನ್ನೊಂದು. ಸಂಜೆಯವರೆಗೂ ಸಮಯವಿದೆ'
'ರಾತ್ರಿ?'
'ಶಟ್ಅಪ್'
ಆ ಬೆಳಗು ಎಂದಿನಂತೆ ಪೂರ್ವದಲ್ಲಿ ಮುಗಿಲು ಕಲರವಿಸಿತು.ಅವಳ ಸಿಟ್ ಔಟಿನಲ್ಲಿದ್ದ ಗಿಡದಲ್ಲಿ ಹರೆಯದ ಪಿಕಳಾರಗಳೆರಡು ಸಂಸಾರ ಹೂಡಲು ಜಾಗ ಪರಿಶೀಲನೆ ನಡೆಸಿದ್ದವು.
ಹೊಸಿಲ ಹಸೆ, ಮೆಟ್ಟಿಲನಲ್ಲಿದ್ದ ಇರುವೆ, ಜಗುಲಿಯಲ್ಲಿದ್ದ ಹೂದಾನಿ ಎಲ್ಲವೂ  ಈ ದಿನ ತಾವು ಕೇಳಬಹುದಾದ ಹೊಸ  ಸದ್ದುಗಳ ಆಲಿಸಲು ಕಿವಿ ತೊಳೆದುಕೊಳ್ಳುತ್ತಿವೆ.

ಹೊರಗೆ ನೀರಿನ ತೊಟ್ಟಿಯ ಮೇಲೆ ಕೂತಿರುವ ಭೂಮಿ ತೂಗುವ ಹಕ್ಕಿ ಇನ್ನೇನು ವಾಲಾಡಿ ಭೂಮಿ ಬಿದ್ದೇ ಹೋಗಬಹುದೆಂಬಂತೆ ಹಿಂದಕ್ಕೂ ಮುಂದಕ್ಕೂ ಹೊಯ್ದಾಡಿಸಿ ತನ್ನನ್ನು ತಾನು ಸಂಭಾಳಿಸಿಕೊಳ್ಳುತ್ತಿದೆ.
 'ಟುಯ್ ಟೂಯ್ ಟುಯ್' ಎನ್ನುವ ಅದರ ಹಳೆಯ ಹಾಡಿಗೆ ಹೊಸ ಮಾಧುರ್ಯ ಸೇರಿಕೊಂಡಿದೆ.

ಬಹಳ ದಿನಗಳಿಂದ ಬೀರುವಿನಲ್ಲೇ ಉಳಿದು ಬೇಸರಿಸಿಕೊಂಡಿದ್ದ ಆ ಕಸೂತಿಯ ದಿಂಬಿನ ಕವರ್ ಹೊರಬಂದು ಹಾಸಿಗೆಯ ಮೇಲಿದ್ದ ದಿಂಬನ್ನು ಮೆಲ್ಲಗೆ ಒಳಗಿಳಿಸಿಕೊಂಡಿತು.
ಮಧ್ಯಾಹ್ನಕ್ಕೆ ಏನಾದರೂ ಹೆಲ್ದಿಯಾಗಿರುವ ಅಡುಗೆ ಮಾಡಬೇಕಾ ,ಜ್ಯೂಸ್ ಅಷ್ಟೇ ಸಾಕಾ ಎಂದು ನಿರ್ಧರಿಸಲಾಗದೆ ಮೂರು ನಿಮಿಷ  ಕಿಚನ್ನಿನ ಶೆಲ್ಫಿನಲ್ಲಿ ಏನೇನೋ ತಡಕಾಡಿದಳು.
ಬೆಳಗಿನ ಮಾಮೂಲಿ ಕೆಲಸವಾಗಿ ಮನೆಯ ಕಾರು ಹೋಗಿ ಗೇಟು ಮುಚ್ಚಿದೊಡನೆ ಇವಳ ಹೊಟ್ಟೆಯಲ್ಲಿ ಚಿಟ್ಟೆ ರೆಕ್ಕೆ ಬಡಿಯುತ್ತಿದೆ.
ಬಾದಾಮಿ ಬಣ್ಣದ ವೆಸ್ಟರ್ನ್ ಸ್ಟೈಲಿನ ಟಾಪ್ ಧರಿಸಿ ತೆಳುನೀಲಿ ಬಣ್ಣದ ಪ್ಯಲ್ಯಾಜೊ ತೊಟ್ಟವಳನ್ನು ತೋರಿಸಿ ತೋರಿಸಿ ಕನ್ನಡಿಗೆ ಆ ಬೆಳಿಗ್ಗೆ ನಿಜಕ್ಕೂ ಸಿಟ್ಟು ಬಂದಿದೆ.

'ಹೊರಟೆಯಾ?'
'ಅರುಣಿಮ?'

'ಆರ್ ಯೂ ದೇರ್?'
'ಅರುಣಿಮ?'
'ನಾನಸೆನ್ಸ್'
ಆ ಬದಿಯಿಂದ ಬಾರದ ಉತ್ತರಕ್ಕೆ ಇನ್ನೇನು  ಎದೆಕಟ್ಟೆ ಒಡೆದು ಕೊಚ್ಚಿಯೇ ಹೋಗಬಹುದು ಎನ್ನುವಾಗ 'ಟೂ ಮಿನಿಟ್ಸ್' ಎನ್ನುವ ಸಂದೇಶ.
'ನೋ ನೋ ನೋ...ವೇಯ್ಟ್ ಫಾರ್ ಟೆನ್ ಮಿನಿಟ್ಸ್.ಮನೆಗೆ ಗೆಸ್ಟ್ ಬಂದ್ರು'

ಡ್ರಾಯಿಂಗ್ ರೂಮಿನಲ್ಲಿ ಕೊಳಲು ಹಿಡಿದು ಬಾಗಿ ನಿಂತಿದ್ದ ಕೃಷ್ಣನ ವಿಗ್ರಹ ಸುಳ್ಳು ಹೇಳಿದ್ದು ಯಾಕೆ ಎಂಬಂತೆ ಹುಬ್ಬು ಏರಿಸಿತು.
ಅವಳು‌ ಮತ್ತೆ ಕನ್ನಡಿ ನೋಡಿ ,ಕಸೂತಿ ಎದೂರಿಗೇ ಕಾಣುವಂತೆ ದಿಂಬು ಸರಿಪಡಿಸಿ ,ದೇವರ ಮನೆಗೆ ಓಡಿ  ಬೊಗಸೆ ಶಂಖಪುಷ್ಪವನ್ನು ದೇವರಿಗೆ ಏರಿಸಿದವಳು ಒಂದು ನೀಲಿ ಶಂಖಪುಷ್ಪವನ್ನು ತೆಗೆದುಕೊಂಡು ಅದರ ಒಳಕುಳಿಯನ್ನು ಮೆಲ್ಲಗೆ ನೇವರಿಸಿ ಮುಗುಳ್ನಕ್ಕಳು.
'ಪ್ಲೀಸ್‌. ಕಮ್ ನೌ'
ಒಂದೂವರೆ ನಿಮಿಷದಲ್ಲೇ‌ ಮತ್ತೊಂದು ಹೊಸ ಪುಸ್ತಕ ಅವಳ ಡ್ರಾಯಿಂಗ್ ರೂಮಿನ ಟೀಫಾಯಿಯ ಮೇಲೆ ಕೂತು ಸುತ್ತಲೂ ನೋಡಿತು.
'ಕಾಫಿ?'
'ಹಾಲು ಸೇರುತ್ತೆ ನನಗೆ'
ಈ ಕ್ಷಣ ಇವನನ್ನು ಒದ್ದು ಆಚೆ ಅಟ್ಟಬೇಕು ಎನ್ನುವಷ್ಟರಲ್ಲಿ ಅವನ ಬೆಚ್ಚನೆಯ ಹಸ್ತ ಅವಳ ಕೊರಳ ಸರವನ್ನು ಮೆಲ್ಲಗೆ ಬಿಡಿಸಿ ಅವಳ ಕೈಗಿಟ್ಟು ಯಾಚನೆಯಲ್ಲಿ ನೇವರಿಸಿತು.

ಆ ಕಡುಬೆಳಗಿನ ಹೊತ್ತಿನಲ್ಲಿ ಅಕಾಲದ ಮೋಡ ಕಟ್ಟಿಕೊಳ್ಳುತ್ತಾ ಹೊರಗೆ ನಸುಮಬ್ಬು ಆವರಿಸುತ್ತಿದೆ.
ಮಹಾನಗರದ ಅಗಲ ಹಾದಿ ಕಿರಿದಾದ ಓಣಿ ಏರು ರಸ್ತೆ ಹೂಬಿಡುವ ,ಬಿಡದ ಮರಗಳು,ಅಟದ ಮೈದಾನ ಎಲ್ಲವೂ ಮುಂದೆ ಸುರಿಯಲಿರುವ ಮಹಾಮಳೆಯ ನೆನಪಿಗೆ ಮೆಲ್ಲಗೆ ಉನ್ಮಾದವೇರಿಸಿಕೊಳ್ಳತೊಡಗಿದವು.

ಎಂದೋ ಬತ್ತಿ ಹೋಗಿದ್ದ ಅಂತರ್ಜಲದ ಸೆಲೆಯೊಂದು ಇನ್ನೇನು ತನ್ನ ತಲುಪಬಹುದಾದ ಮಹಾಪ್ರವಾಹದ ನೆನಪಿಗೇ ಸುಖವಾಗಿ ನಡುಗುತ್ತಿದೆ.
ಹೊರಕೋಣೆಯ ಗಾಜಿನ ಕಿಟಿಕಿಯನ್ನು ಮತ್ತೆಮತ್ತೆ ಕುಕ್ಕುತ್ತಿರುವ ಹಕ್ಕಿಯೊಂದರ ಆತಂಕ ಭಯದ್ದೋ ಬಯಕೆಯದ್ದೋ ಅವಳಿಗೆ ತಿಳಿಯಲಿಲ್ಲ.
ಒದ್ದೆಯಾಗಿದ್ದೀನಿ ನಾನು'
'ನಾನೂ'
'ಹಾಲು ಕಾಯಿಸ್ತೇನೆ'
'ಕಾಯುತ್ತೇನೆ'

'ಮಳೆ ಜೋರಾಗಬಹುದು'
'ಹು'
'ಹಕ್ಕಿ ನೋಡು'
'ಇನ್ನೂ ನೋಡಬೇಕಷ್ಟೆ'
ಹೊರಗೆ ಆರಂಭವಾದ ಸಣ್ಣನೆ ಸೋನೆ ತಣ್ಣಗಿ‌ನ ಗಾಳಿಯನ್ನು ಹೊತ್ತು ತಂದು ಒಳಸುರಿದರೂ ಇವಳು ಮೈ ಮುಖವೆಲ್ಲ ಬೆವರುತ್ತಿದೆ.
'ಹಣೆ ಒರೆಸಲಾ ನಿನ್ನದು'
'ಓಯ್ ಬಹುವಚನ'
"ನೀವು ಸುಂದರಿ'
'ನೀನು ನನಗಿಂತ ಚಿಕ್ಕವ'
'ಒಣಗಿದ್ದೇನೆ'
'ಇನ್ನು ನಳನಳಿಸ್ತಿರಿ'
ಕಸೂತಿ ಹಾಕಿದ್ದ ಆ ದಿಂಬು ಆ ನಾಲ್ಕು ಗಂಟೆಯಲ್ಲಿ ತನ್ನ ಬದಲಾದ ಜಾಗಗಳ ಲೆಕ್ಕ ಇಡಲು ಯತ್ನಿಸಿ ಸೋತು ನಕ್ಕಿತು. ಆಗಷ್ಟೇ ದೇವರಿಗೆ ಅರ್ಪಿಸಿಕೊಂಡ ಶಂಖಪುಷ್ಪ ಹೂವುಗಳು ಹೊಸಿಲು ದಾಟಿ ಒಳಬಂದ ಹುರಿಮೀಸೆಯ ಕರಿ ದುಂಬಿ ನೋಡಿ ಅರೆಗಣ್ಣಾದವು. ಹಾರಿ ಬಂದ ಜೇನು ,ಹೂವಿನ ಒಳಕುಳಿಯೊಳಕ್ಕೆ ತನ್ನ ಮೂತಿ ತೂರಿಸಿ ಹೊರಬಂದಾಗೆಲ್ಲ ದೇವರಿಗೆ ಹುಸಿಕೋಪ.
ಕಟ್ಟಿಸಿಕೊಂಡಾಗಿನಿಂದ ಹೊಸತೇನೂ ನೋಡದ ಆ ಮನೆಯ ಗೋಡೆಗಳು  ಇಂದಿನ ಶುಭಕಾರ್ಯಕ್ಕೆ ಮಂಗಳದ ಹಾಡು ಗುನುಗಿದವು.

ವೀಣೆ ನುಡಿಸುವುದಕ್ಕೆ ಬೆರಳ ತುದಿಯಲ್ಲಿ ಪರ್ಜನ್ಯ ಮಂತ್ರವಿರಬೇಕು.

ಸೆಟೆಯುವುದು ಹೇಗೆಂದೇ ತಿಳಿದಿಲ್ಲದ ಆ ನೆಲದ ಏರು ದಿಬ್ಬಗಳು ಆ ಹಗಲು ಕಳೆಯುವವರೆಗೂ ಬಾಗಲಿಲ್ಲ.
ಅದು
ನಾದಕ್ಕೆ ನಾದ
ಹಾದಿಗೆ ಹಾದಿ
ಶೋಧಕ್ಕೆ ಶೋಧ

ಬೆಳೆ ಮೊಳೆಯಲು ಈ ಲೋಕದಲ್ಲಿ ಬೆವರು ಚೆಲ್ಲಬೇಕು.

'ನೀವೇಕೆ ಇಷ್ಟು ಚಂದ ಇದ್ದೀರಾ'
'ನಿಮ್ಮ ರೆಪ್ಪೆಯ ಬಾಗಿನಲ್ಲಿ ಅಡಗಿಕೊಳ್ಳಬಹುದೇ?'
'...?'
ಅವನ ಯಾವ ಪ್ರಶ್ನೆಗೂ ಅವಳು ಉತ್ತರಿಸಲಾರಳು.

ಬೆಳ್ಳಾನೆ ಬಿಳಿ ಶಿಖರ ಅದು.
ಏರಿದಂತೆಲ್ಲ ಜಾರಿ ಹೂತುಹೋಗುತ್ತಾನೆ ಆರೋಹಿ.
ಇನ್ನೇನು ಧ್ಜಜ ನೆಟ್ಟು ವಿಜಯೋತ್ಸವ ಎಂದುಕೊಂಡಾಗೆಲ್ಲ ಹುಡುಗುಬುದ್ದಿಯ ಹುಡುಗ ಮತ್ತೆ ಬುಡಕ್ಕೆ ಜಾರಿಕೊಳ್ಳುತ್ತಾನೆ.
ಮತ್ತೆಮತ್ತೆ ಮರಳುವ ಹೊರಳುವ ಅರಳುವ ಬಳಲುವ ಬಯಸುವ ಮಾಯಕಾರನ ಆಟ ಅದು‌. ಬೆಟ್ಟ ಹತ್ತುವುದು.
ಆ ಹಗಲು ಅವಳು ಅಂಟಿಸಿಕೊಂಡ ಸುಖದ ನಗುವಿನ ವಿಳಾಸ ತಿಳಿಯಲು ಆ ಹಾಸು ಪರದಾಡಿತು.
ಕೋಲ್ಮಿಂಚು ಥಣಾರನೆ ಕಿಟಿಕಿಗೆ ಬಡಿದ ಹಿಂದೆಯೇ ಗುಡುಗು ಘರ್ಜಿಸಿ ಲೋಕಕ್ಕೆ ಒಬ್ಬರೊಬ್ಬರ ಪ್ರೇಮ ಸಾರಿ ಕೊಂಡಿತು. ಮಹಾನಗರದ ದುಃಖ ಯಾತನೆ ಹಸಿವುಗಳನ್ನೆಲ್ಲ ಈ ದಿನವೇ ತೊಳೆದು ಹಾಕುವಂತೆ ಮುಗಿಲು ಸುರಿಯುತ್ತಿದೆ.

ಅಲ್ಲಾ..ಮೋಡ ಖಾಲಿಯಾಗುವುದಿಲ್ಲವಾ.
ಹೀಗೆ ನಿರಂತರ ‌ನಾಲ್ಕು ತಾಸು ಧೋ‌ ಎನ್ನಬಹುದೇ?
ಹೊರಗೆ ಎಲ್ಲವೂ ಹೊಳೆಯುತ್ತಿರಬೇಕು.

'ಸಾಕೋ ಇನ್ನು'
ಮೆಲ್ಲಗೆ ಚೀತ್ಕರಿಸಿದವಳ ಎದೆಯೊಳಗೆ ಆಸೆಯ ಬುಗ್ಗೆ ಚಿಮ್ಮುತ್ತಲೇ ಇದೆ.

ಆ ಪುಟ್ಟ ಹಕ್ಕಿ ತನ್ನ ಕೊಕ್ಕನ್ನು ಇನ್ನಷ್ಟು ಗಟ್ಟಿಯಾಗಿ ಗಾಜಿಗೆ ಕುಕ್ಕುತ್ತಿದೆ.
'ನಿಜವಾ' ಸಣ್ಣಗೆ ಕೇಳಿದ.
`ಮಳೆ ನಿಲ್ಲಬಹುದು'
'ಇಲ್ಲ. ರಾತ್ರಿಯೂ  ಬರುತ್ತದೆ'
'ಹೊರಡು'
ನೀಲಿಹೂವಿನ ಮಕರಂದ ಕುಡಿದ ಜೇನು ಹಾರಿಹೋಯಿತು ಆ ಬಾಗಿಲಾಚೆ.
'ಇನ್ನಾರು ಘಳಿಗೆ'
'ಬೇಡ'
'ಬೇಕು'
'ಹಕ್ಕಿ ನೋಡು'
'ನೋಡಿದೆ'
ಹೂವು ಮಾಗಿ ನೆಲಕ್ಕುದುರಿದ ಎಷ್ಟೋ ಹೊತ್ತಿನ ನಂತರವೂ ಅವನ ತುಟಿಯ ಜವಾಬ್ದಾರಿ ಮುಗಿದಿರಲಿಲ್ಲ. ಸೋಲೇ ಇಲ್ಲವೆಂಬಂತೆ  ಸೋಕುತ್ತಿದ್ದಾನೆ.
ಕಿವಿಯ ಬಳಿ ಬಂದವನು ಮೆಲುವಾಗೇನೋ ಪಿಸುಗುಟ್ಟ. ಅವಳಿಗೆ ಕೇಳಲಿಲ್ಲ.
ಕೇಳಬೇಕಂತಲೂ ಅನಿಸಲಿಲ್ಲ. ಮುಗುಳ್ನಕ್ಕಳು. ಮುಗಿಲು ಕೊನೆಗೂ ಬೆಳ್ಳಗಾಯಿತು.
ಒಂದಿಷ್ಟೂ ಸುಕ್ಕಾಗದ ತನ್ನ ಬಾದಾಮಿ ಬಣ್ಣದ  ಟಾಪ್ ಧರಿಸುತ್ತಿದ್ದಾಗ ಅವಳ ಕಣ್ಣು ಯಾಕೋ ಮಂಜುಮಂಜಾಯಿತು.

'ರೀ'
'ಹು'
'ಥ್ಯಾಂಕ್ಯೂ'

'ಅರುಣಿಮ?'
'ಮ್'

'ಹಾಗಿದ್ರೆ ಇವರೇಕೆ ನನ್ನನ್ನು ಪ್ರೀತಿಸುವುದಿಲ್ಲ'

'ವಾಸುದೇವನ್ ನಿಮಗೆ ಹೇಗೆ ಪರಿಚಯ?'

'.....'

______

'ವಾಸು'
'ಹು'
ಬಹಳ ದಿನಗಳ ನಂತರ ಅವರು ಕಡಲ ಕಿನಾರೆಗೆ ಹೊರಟಿದ್ದರು.

ಜೈಪುರದಿಂದ ತನಗೊಂದು ಗುಲಾಬಿ ಬಣ್ಣದ ದುಪ್ಪಾಟ್ಟಾ ತಂದಿದ್ದು, ಅರುಣಿಮ ಪ್ರಾಜೆಕ್ಟ್ ಕೆಲಸದ ನಿಮಿತ್ತ ಅಮೆರಿಕಗೆ ತೆರಳಿರುವುದು. ಬೆಳಿಗ್ಗೆ ಎದ್ದ ಕೂಡಲೇ ಅವಳು ವಿಪರೀತ ನೆನಪಾಗುವುದು, ಕಥೆಗಾರರು ಅಕ್ಕರೆ ಹೆಚ್ಚಾದಾಗೆಲ್ಲ ಪುಟ್ಟಿ ಎನ್ನುವುದು..
ಓಹ್.
ಎಷ್ಟೆಲ್ಲ ಮಾತುಗಳು ಬಾಕಿಯುಳಿದಿವೆ ಅವರಿಬ್ಬರಿಗೆ.
ತನ್ನ ದೇವತೆಯ ಮೊಗದಲ್ಲಿ ಹಿಂದೆಂದೂ ಕಾಣದ ನಿರಾಳತೆ ನೋಡಿದ ವಾಸುದೇವನ್ ಸಣ್ಣಗೆ ನಕ್ಕು ಕಾರಿನ ವೇಗ ಹೆಚ್ಚಿಸುತ್ತ ಸಿಳ್ಳು ಹೊಡೆದರು.
`ವಾಸು'
'ಹು'
'ಸಿಳ್ಳು ಹೊಡೆಯೋದಿಕ್ಕೆ ನೀನೇನು ಸಣ್ಣ ಹುಡುಗನೇನೋ'
ಅವಳು ನಕ್ಕ ಸದ್ದಿಗೆ ಕಿನಾರೆಗೆ  ವೇಗವಾಗಿ ಬರುತ್ತಿದ್ದ ಅಲೆ ಕ್ಷಣ ತಡೆದು ತೊನೆಯುತ್ತಾ ಮುಂದುವರೆಯಿತು.
ಬಹಳ ಹೊತ್ತಿನವರೆಗೂ ಮೊರೆದು ಶಾಂತವಾದ ಆ ಕಡಲು,ಬೆಚ್ಚನೆಯ ಮರಳು,ಅರೆಬರೆ‌ ಮಡಿಯಾಗಿದ್ದ ಮುಗಿಲು ಅವರಿಬ್ಬರನ್ನೂ ನೋಡಿ ಸುಖದ ನಿಟ್ಟುಸಿರಿಟ್ಟವು.

'ವಾಸು'
'ಹು'
'ಈ ರಾತ್ರಿ ಹೀಗೇ ಇಲ್ಲೇ ಕೂತು ಕಳೆಯೋಣಾ'
`ಕೂಡೋಣಾ ಮುದ್ದು'
'ವಾಸೂಊಊಉ'
ಪ್ರೇಮದ ಭಾರಕ್ಕೆ ಅವಳ ಧ್ವನಿ ಸಣ್ಣಗೆ ನಡುಗಿದೆ.

'''ಮಧುವನ ಕರೆದರೆ
ತನುಮನ ಸೆಳೆದರೆ
ಶರಣಾಗು ನೀನು ಆದರೆ…'
ಅವಳಿಷ್ಟದ ಅವಳ ಫೋನಿನ ರಿಂಗ್ ಟೋನ್. ಸದ್ದಾದೊಡನೆ ಫೋನು ತೆರೆದಳು.

'ಕಥೆಗಾರರು ಕಾಲಿಂಗ್'

ಲಗುಬಗೆಯಿಂದ ಕರೆ ಸ್ವೀಕರಿಸಿದವಳು ವಾಸುವಿನ ಅಪ್ಪುಗೆಯಿಂದ ಮೆಲ್ಲಗೆ ಬಿಡಿಸಿಕೊಂಡು ಒದ್ದೆ ಮರಳ ಮೇಲೆ ಹೆಜ್ಜೆಯಿಡುತ್ತಾ ಆ ಬದಿಗೆ ನಡೆದಳು.
ಶಾಂತವಾಗುತ್ತಿದ್ದ ಕಡಲಿನ ಆ ರೇವೆಯಲ್ಲಿ ಒಂಟಿ ಹೆಜ್ಜೆ ಗುರುತುಗಳು ಮುದ್ದಾಗಿ ಮೂಡುತ್ತಿದ್ದವು.

ನಂದಿನಿ ವಿಶ್ವನಾಥ ಹೆದ್ದುರ್ಗ

ಸಕಲೇಶಪುರದ ಹೆದ್ದುರ್ಗದ ಕಾಫೀ ಬೆಳೆಗಾರ್ತಿ ನಂದಿನಿ ಹೆದ್ದುರ್ಗ ಅವರು ಕೃಷಿಕ ಮಹಿಳೆ. ತಮ್ಮ 16 ನೇ ವಯಸ್ಸಿನಲ್ಲಿಯೇ ಮದುವೆಯಾಗಿ ಬದುಕಿನ ಸುಖ ದುಃಖಗಳನ್ನು ಕಂಡುಂಡವರು. ಕಳೆದ ಕೆಲವು ವರ್ಷಗಳಿಂದ ಕಾವ್ಯ ರಚನೆಯ ಮೂಲಕ ಕಾವ್ಯ ಲೋಕ ಪ್ರವೇಶಿಸಿದ್ದಾರೆ. ಅವರ ಎರಡು ಸಂಕಲನಗಳು ಪ್ರಕಟವಾಗಿವೆ.

ಪ್ರೀತಿ ಪ್ರೇಮಗಳೇ ಇವರ ಕಾವ್ಯದ ಪ್ರಮುಖ ವಸ್ತು. ನಿರ್ಭಿಡೆಯಿಂದ ಹೆಣ್ಣಿನ ಅಂತರಂಗದ ಭಾವನೆಗಳನ್ನು ತಮ್ಮ ಕವಿತೆಗಳಲ್ಲಿ ಹೊರ ಹಾಕುವ ನಂದಿನಿ ಅವರು ಯಾವುದೇ ಮುಲಾಜಿಲ್ಲದೇ ಅಭಿವ್ಯಕ್ತಿಸುವುದು ವಿಶೇಷ.

 

More About Author