Poem

ಅವನೊಬ್ಬನೆ.... 

ಮೌನದೊಳಗಿನ ಶಬ್ಧಗರ್ಭಿತ ನಾದ
ಮನದಂಧಕಾರದ ದಿವ್ಯಪ್ರಭೆ
ನೋಡಿದರು ಮುಟ್ಟದ
ಮುಟ್ಟಿದರು ತಾಗದ
ಸುಪ್ತ ಚೇತನ
ಅನುಭವದಿ ನಿತ್ಯ ನೂತನ
ಕಲ್ಮಶ ಶೂನ್ಯ
ರೆಪ್ಪೆಚಿಪ್ಪು ಮುಚ್ಚಿದ ಧ್ಯಾನ
ಆದರೂ.....
ವಿಶ್ವವೆ ತನ್ನೊಳಗೆ
"ನಾನು ಎಂಬುದೆ ಸುಳ್ಳು"
ಎಂದು ನಂಬಿ ನಡೆದ
ಎಲ್ಲರೊಳಗೂ ತನ್ನನ್ನೆ ಕಂಡು ಮುಗುಳ್ನಕ್ಕ
ಜಗವೆಲ್ಲ ಮಲಗಿರಲು
ಅವನೊಬ್ಬ ಎದ್ದ
ಬುದ್ಧ.. ಬುದ್ಧ... ಬುದ್ಧ...

ಒಡಲಲಿ ಕಡಲು ಉಕ್ಕಿ ಹರಿಯುತಿರಲು
ಶಾಂತಿಯ ಆಗಸದಂತಿದ್ದ
ಜಗದ ನೊವ್ವಿಗೆ ನಲಿವಿನ --
ಮೂಲಾಮು ಸವರುತ್ತ ಬಂದ
ಇರುವುದನ್ನೆಲ್ಲವನ್ನು ತೊರೆದು
ಉಟ್ಟುಡುಗೆಯಲ್ಲೇ ಬಯಲಲ್ಲಿ ನಿಂದ
ಆಗಸವೆ ಚಾದರ, ಭೂಮಿಯೇ ಹಾಸಿಗೆ
ಎಂಬಂತೆ ಬದುಕಿದ
ಅಹಿಂಸೆಯ ಗೀತೆಗಳ ಗುನುಗುತ
ಶಾಂತಿಯ ಚಾಮರ ಬೀಸುತ
ಏಕತಾನತೆಯ ಮೀರಿ ಅವಿರ್ಭವಿಸಿದ
ಮನಸುಗಳ ಕತ್ತಲಕೋಣೆಯೊಳಗೆ
ಬೆಳಕಿನ ಹಣತೆ ಹಚ್ಚಿದ -- ಅವನೇ
ಬುದ್ಧ.. ಬುದ್ಧ... ಬುದ್ಧ....

ಎಂದೂ ದೇವರ ಗೊಡವೆಗೆ ಹೋಗದವನು
ಮನುಜನ ಮನ ಮಂದಿರಗಳಲ್ಲಿ
"ದೇವರು" ಎನಿಸಿಕೊಂಡವನು
ನಿಂತ ನೀರಾಗದೆ ಹರಿಯುತ್ತಿರುವನು
ಇಂದಿಗೂ, ಈ ಚಣಕೂ...
ಕೋಟಿ ಕೋಟಿ ಬರಡು ಹೃದಯಗಳಲ್ಲಿ
ತುಂಬಿ ಜಗದದ್ಯಾಂತ
ಸಂದೇಶ ಶೃತಿಯ ಮಾತಾಗಿಸಿಕೊಂಡವನು
ನಗುವಿನಿಂದಲೇ ಮನಸುಗಳ ಜಯಿಸಿದವನು
ಆಸೆಯೇ ದುಃಖಕ್ಕೆ ಮೂಲವೆಂಬ
ಜ್ಞಾನವ, ಲೋಕಕೆ ಧಾರೆಯೆರೆದವನು
ಅವನೊಬ್ಬನೆ, ಅವನೊಬ್ಬನೇ
ಬುದ್ಧ.. ಬುದ್ಧ... ಬುದ್ಧ...

- ಜಬೀವುಲ್ಲಾ ಎಮ್.

 

ಜಬೀವುಲ್ಲಾ ಎಂ. ಅಸದ್

ಕವಿ ಜಬೀವುಲ್ಲಾ ಎಂ. ಅಸದ್ ರವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರಿನವರು. ತಂದೆ ಮಹಮ್ಮದ್ ಬಾಷ,ತಾಯಿ ಪ್ಯಾರಿ ಜಾನ್. ಪದವಿಪೂರ್ವವರೆಗಿನ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ಮುಗಿಸಿ, ನಂತರ ಪದವಿ ಶಿಕ್ಷಣವನ್ನು ಜಿಲ್ಲಾಕೇಂದ್ರವಾದ ಚಿತ್ರದುರ್ಗ ದಲ್ಲಿ ಆಂಗ್ಲ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಅಧ್ಯಾನಿಸಿ ನಂತರ ಹೊಸ ವೈದ್ಯಕೀಯ ವಿಷಯಗಳೆಡೆಗೆ ಆಸಕ್ತಿ ಹರಿದು, ಬಳ್ಳಾರಿಯಲ್ಲಿ ಡಿಪ್ಲೊಮಾ ಇನ್ ಜನರಲ್ ನರ್ಸಿಂಗ್ ಮಿಡ್ವೈಫ್ರಿ ಮುಗಿಸಿ, ಅಲ್ಲಿಯೇ ಕೆಲವು ವರ್ಷಗಳ ಕಾಲ ಸಹಾಯಕ ಶಸ್ತ್ರಚಿಕಿತ್ಸಕನಾಗಿ ಕಾರ್ಯನಿರ್ವಹಿಸಿ ರಾಜಧಾನಿ ಬೆಂಗಳೂರಿನಲ್ಲಿ ಕರುಣಾ ಟ್ರಸ್ಟ್ ಎಂಬ ವೈದ್ಯಕೀಯ NGO ನಲ್ಲಿ ಕಳೆದ ಆರು ವರುಷಗಳಿಂದ ತಮ್ಮ ನೆಲೆಯನ್ನು ಕಂಡುಕೊಂಡಿದ್ದಾರೆ.

ಚೊಚ್ಚಲ ಕೃತಿ: ‘ಏಕಾಂಗಿಯ ಕನವರಿಕೆಗಳು’- ಕವನ ಸಂಕಲನ. ಈ ಸಂಕಲನಕ್ಕೆ 2020 ರಲ್ಲಿ ಪ್ರಸ್ತುತ ಕೃತಿಗೆ, ಕರುನಾಡ ಕವಿ ಹಣತೆ ಬಳಗ(ರಿ)ದ ವಾರ್ಷಿಕ ಸಮ್ಮೇಳನದಲ್ಲಿ ವಿಮರ್ಶಕರರಿಂದ ಆಯ್ಕೆಯಾಗಿ ಉತ್ತಮ ಕೃತಿಯೆಂದು ಸಾಹಿತ್ಯ ಸಿರಿ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಗಿದೆ.

ಇತರೆ ಪುರಸ್ಕಾರಗಳು:2020ರಲ್ಲಿ ಡಾ. ಅಶೋಕ್ ಪೈ ಸ್ಮರಣಾರ್ಥ ಆಯೋಜಿಸಲಾಗಿದ್ದ ಮನೋವೈಜ್ಞಾನಿಕ ಕಥಾ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಗುರುಕುಲ ಕಲಾ ಕುಸುಮ ಪ್ರಶಸ್ತಿ, ಮೈಸೂರಿನ ಫಿನಿಕ್ಸ್ ಬುಕ್ ಹೌಸ್ ನ ವತಿಯಿಂದ ಏರ್ಪಡಿಸಲಾದ, ರಾಜ್ಯಮಟ್ಟದ ನ್ಯಾನೋ ಕಥಾ ಸ್ಪರ್ಧೆಯಲ್ಲಿ, ತಮ್ಮ ಖಾಲಿ ಜೋಳಿಗೆ ಎಂಬ ಕಥೆಗಾಗಿ, ಫಿನಿಕ್ಸ್ ಪುರಸ್ಕಾರ ಕ್ಕೆ ಭಾಜನರಾಗಿದ್ದಾರೆ. ತಮ್ಮ ಚೊಚ್ಚಲ ಕವನ ಸಂಕಲವಾದ ಏಕಾಂಗಿಯ ಕನವರಿಕೆಗಳು ಕೃತಿಗೆ 2021 ರ ಸಾಹಿತ್ಯ ಸಿರಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಗುರುಕುಲ ಕಲಾ ಪ್ರತಿಷ್ಠಾನದವತಿಯಿಂದ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಗುರುಕುಲ ಶಿರೋಮಣಿ ಪ್ರಶಸ್ತಿ ಯನ್ನು ಪಡೆದಿರುತ್ತಾರೆ.2021 ರ ಕನ್ನಡ ಸಾಹಿತ್ಯ ಪರಿಚಾರಿಕೆ ಹಾಗೂ ಸೇವೆಯನ್ನು ಗಮನಿಸಿ, ಕನ್ನಡ ನಗರ ಸಾಹಿತ್ಯ ಪರಿಷತ್, ಬೆಂಗಳೂರು ಇವರು ಕನ್ನಡ ಸೇವಾ ರತ್ನ ಪುರಸ್ಕಾರ ಪಡೆದಿದ್ದಾರೆ. ಈ ತನಕ ತತ್ವಜ್ಞಾನ ಎಂಬ ಅಪ್ರಕಟಿತ ತಾತ್ವಿಕ ಚಿಂತನೆಯ ಕವನ ಸಂಕಲನದ ಹಸ್ತಪ್ರತಿಗೆ 2021 ನೇ ಸಾಲಿನ, ಗುರುಕುಲ ಸಾಹಿತ್ಯ ಕೇಸರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

More About Author