Poem

ಅವತರಿಸು 

ಸಂಯೋಗದ ಶುಭ ಘಳಿಗೆ
ಬಂದಿಲ್ಲವೇ ಇನ್ನೂ
ಝಳಪ ಜಳಕಕ್ಕೆ ಇಳಿಸು.

ಕರಿಯ ಬಿಳಿಯರನು ಸರಸ
ಸಂಗರಕೆ ಸಜ್ಜಾಗಿಸು
ಸಮ ಬಂಟರನು ಕಣಕ್ಕಿಳಿಸು.

ಗ್ರೀವ ಬಳಲಿದೆ, ಅಣಕಿಸಬೇಡ
ಒಮ್ಮೆ ನಿನ್ನ ಶೀತಲ
ಮೈ ಸೋಕಿಸು.

ಬರೆ ಸಪ್ಪಳ, ನೀ ಕನಸು
ಚಪ್ಪರದ ತೆರೆ ಸರಿಸಿ
ನಿಜ ರೂಪ ನೀ ತೋರಿಸು.

ಕುದಿ ಗುಳ್ಳೆ ಏಳುತಿದೆ
ರೋಮ ರೋಮದ ಕುಳಿಗಳಲಿ
ಉರಿ ತಾಪ ಒಮ್ಮೆ ತಣಿಸು.

ಬಂಜರಾಗಿದೆ ಎಲ್ಲಾ
ಧಿಗ್ಭಂದನವ ಬಿಡಿಸು
ನೀರಕ್ಕಿ ಸೇಸೆ ಸುರಿದೆಬ್ಬಿಸು.

ಬಿಸಿ ಹರಳು ಹೊರಳುತಿದೆ
ನೆತ್ತರು ಬತ್ತಿದ ನೀಳ ನರವು
ಪ್ರವಹಿಸಿ ಜೀವ ಸಂಚಯಿಸು.

ಮಣ್ಣು ಒಮ್ಮೆ ಮದುಮಗಳಾಗಲಿ
ಹಂಬಲಿಪ ಮಿಲನಕೆ
ಮೂಹೂರ್ತ ನಿಗದಿಪಡಿಸು.

ತುಳು ಮೂಲ ಮತ್ತು ಕನ್ನಡ ಅನುವಾದ:ರಾಜಶ್ರೀ ಪೆರ್ಲ

ವಿಡಿಯೋ
ವಿಡಿಯೋ

ರಾಜಶ್ರೀ ಟಿ ರೈ ಪೆರ್ಲ

ಗಡಿನಾಡು ಕಾಸರಗೋಡಿನ ತುಳು, ಕನ್ನಡ, ಹವ್ಯಕ ಭಾಷೆಯ ಯುವ ಲೇಖಕಿ. ಇತ್ತೀಚೆಗಷ್ಟೇ ತುಳುನಾಡಿನ ಮೂರಿಗಳ ಆರಾಧನೆ ಎಂಬ ಸಂಶೋಧನಾ ಕೃತಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದಿಂದ ಬಿಡುಗಡೆ ಕಂಡಿದೆ. ತುಳು ಸಾಹಿತ್ಯ ಕ್ಷೇತ್ರಕ್ಕೆ ಕಾದಂಬರಿಗಾರ್ತಿಯಾಗಿ ಚಿರಪರಿಚಿತೆ. ತುಳುವಿನಲ್ಲಿ ನಾಲ್ಕು ಕಾದಂಬರಿಗಳು(ಪನಿಯಾರ, ಬಜಿಲಜ್ಜೆ, ಕೊಂಬು,ಚೌಕಿ) ,ಒಂದು ಕಥಾಸಂಕಲನ(ಚವಳೊ) ಮತ್ತು ಒಂದು ಕವನ ಸಂಕಲನ(ಮಮಿನದೊ-ಆಕೃತಿ ಆಶಯ ಪ್ರಕಾಶನ ಮಂಗಳೂರು ) ಪ್ರಕಟಿತ.

ಕನ್ನಡದಲ್ಲಿ ಪಾರಂಪರಿಕ ವೈದ್ಯ ಪದ್ಧತಿಯ ಬಗ್ಗೆ ಪ್ರಾದೇಶಿಕ ಅಧ್ಯಯನ ಕೃತಿ(ಕಲ್ಪತರು) ಪ್ರಕಟಿತ. ಕನ್ನಡದ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕಥೆಗಳ ಸಂಕಲನ ಅಗ್ಗಿಷ್ಟಿಕೆ(ಕಲ್ಪವೃಕ್ಷ ಪ್ರಕಾಶನ ಬೆಂಗಳೂರು) ಚೊಚ್ಚಲ ಕನ್ನಡ ಕಥಾಸಂಕಲನವಾಗಿದೆ. ಮಿನ್ಕ ಎನ್ನುವ ಕಥೆ ಮಂಗಳೂರು ವಿಶ್ವವಿದ್ಯಾಲಯದ ತುಳು ಎಂ.ಎ. ದ್ವಿತೀಯ ಪದವಿಗೆ ಪಠ್ಯವಾಗಿದೆ. ಇದಲ್ಲದೇ ಹಲವಾರು ಕಥೆಗಳು ಕನ್ನಡ, ಇಂಗ್ಲಿಷ್, ಮಲೆಯಾಳಂ ಭಾಷೆಗೆ ಅನುವಾದಗೊಂಡಿವೆ.ಕಥೆ, ಭಾಷಣ, ರೂಪಕಗಳು ಆಕಾಶವಾಣಿ ಮಂಗಳೂರು ಮತ್ತು ಮೈಸೂರು ಕೇಂದ್ರದಿಂದ ಪ್ರಸಾರ ಕಂಡಿವೆ. ಉತ್ಥಾನ, ಕರ್ಮವೀರ ಮುಂತಾದ ಪತ್ರಿಕೆಗಳ ವಾರ್ಷಿಕ ಕಥಾಸ್ಪರ್ಧೆಗಳ ಬಹುಮಾನ ವಿಜೇತೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಕೃತಿ ಗೌರವ ಪ್ರಶಸ್ತಿ, ಪಣಿಯಾಡಿ ಕಾದಂಬರಿ ಪ್ರಶಸ್ತಿ, ರತ್ನವರ್ಮ ಹೆಗ್ಗಡೆ ನಾಟಕ ಪ್ರಶಸ್ತಿ (ಸತತ ಎರಡು ಬಾರಿ) ವಿಜೇತೆ.

More About Author